Oct 22, 2014

ಚೆ - ಕ್ರಾಂತಿಯ ಸಹಜೀವನ - ಪ್ರಕಾಶಕರ ನುಡಿ

che guevera kannada book
ನಂ. 2ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ) "ಚೆ- ಕ್ರಾಂತಿಯ ಸಹಜೀವನ" ಪುಸ್ತಕಕ್ಕೆ ಲಡಾಯಿ ಪ್ರಕಾಶನದ ಬಸೂ ಬರೆದಿರುವ ಸಾಲುಗಳು.


ಅನ್ಯಾಯವನ್ನು ಪ್ರತಿಭಟಿಸಿದ್ದಕ್ಕಾಗಿ ಚೆ ನನ್ನ ಸಂಗಾತಿ..

ಜೀವಮಾನವಿಡೀ ದುಡಿಯುತ್ತ ಸವೆದರೂ ಕಣ್ಣಿಂದ ನೋಡಲಾಗದ, ಕನಸಿನಲ್ಲೂ ಊಹಿಸಲಾಗದ ಸಾವಿರ ಕೋಟಿ ಎಂಬ ಧನರಾಶಿಯ ಕುರಿತು ಜನಸಾಮಾನ್ಯ ದಿಗ್ಭ್ರಮೆಗೊಳ್ಳುವಾಗಲೇ ರಟ್ಟೆ ಕಸುವಿದ್ದರಷ್ಟೇ ಹೊಟ್ಟೆ ತುಂಬುವ, ಪ್ರತಿದಿನದ ಕೂಳೂ ಅವತ್ತಿನ ಸೂರ್ಯನೊಂದಿಗೇ ಮೂಡಿಬರುವ ಅನಿವಾರ್ಯ ವಾಸ್ತವ ಅವನನ್ನು ಕಂಗೆಡಿಸುತ್ತಿದೆ. ಜಾಗತಿಕ ಬಂಡವಾಳ ಹೂಡಿಕೆದಾರರು ಫಲವತ್ತಾದ ನೆಲೆ-ನೆಲ ಅರಸಿ ವಿಶ್ವದ ಬಡದೇಶಗಳನ್ನು ಸುತ್ತಿ ಪ್ರತಿವರ್ಷ ಸಮಾವೇಶ ನಡೆಸುತ್ತಾರೆ. ಸಾವಿರಾರು ಕೋಟಿ ಬಂಡವಾಳ `ಬಡದೇಶಗಳತ್ತ ಹರಿದುಬರುತ್ತದೆ. ಹಾಗೆ ಬಂದದ್ದು ಸ್ಥಳೀಯ ಹಳ್ಳ-ತೊರೆ-ಗುಂಡಿ-ಕೆರೆಗಳಲ್ಲಿರುವುದನ್ನೆಲ್ಲ ಬಾಚಿ ಬರಿದಾಗಿಸಿ ಭೋರ್ಗರೆದು ಸಮುದ್ರದತ್ತಲೇ ಹರಿಯುತ್ತದೆ. ಮರಳುಗಾಡು, ಬರದ ನಾಡುಗಳು ಹರಿವಿನ ದೂರದ ಕನಸಿನಲ್ಲೂ ಇರುವುದಿಲ್ಲ
Also Read


ಇದು ಇಲ್ಲಿಯ ವಿದ್ಯಮಾನವಲ್ಲ, ಇಂದು ನಿನ್ನೆ ಸಂಭವಿಸಿರುವಂಥದ್ದೂ ಅಲ್ಲ. `ಅಭಿವೃದ್ಧಿ ಹೊಂದದ ಬಹುಪಾಲು ತೃತೀಯ ಜಗತ್ತಿನ ರಾಷ್ಟ್ರಗಳೆಲ್ಲದರ ಪಾಡೂ ಇದೇ ಆಗಿದೆ. ವಸಾಹತುಶಾಹಿ, ಸಾಮ್ರಾಜ್ಯಶಾಹಿ ಶಕ್ತಿಗಳು ಜಗತ್ತನ್ನು ಆಳುತ್ತಿದ್ದ ಕಾಲದಲ್ಲಿ ಬಂಡವಾಳ ಹೂಡಿಕೆಯ ವೇಷ ಬೇರೆಯಾಗಿತ್ತು. ಈಗ ಸಮಾಜವಾದ, ಪ್ರಜಾಪ್ರಭುತ್ವ, ಸರ್ವಾಧಿಕಾರ, ರಾಜನ ಆಡಳಿತ ಹೀಗೆ ಯಾವುದೇ ಆಡಳಿತ ವ್ಯವಸ್ಥೆಯಿದ್ದರೂ ಒಳಹೊಕ್ಕು, ಅಸ್ತಿತ್ವ ಗಳಿಸಿಕೊಂಡು ಅದೇ ಶಕ್ತಿಗಳು ವಿಜೃಂಭಿಸುತ್ತಿವೆ. ಅದಕ್ಕೆ ಜಗತ್ತಿನ ಹಿರಿಯಣ್ಣನ ಬೆಂಬಲವಿದೆ, ಅದರ ಹಿತಾಸಕ್ತಿಯೂ ಅಡಗಿದೆ. ಸಂಪತ್ತಿನ ಅಸಮಾನ ಹಂಚಿಕೆಯ ವಿರುದ್ಧ ಪ್ರತಿರೋಧ ಹೊಮ್ಮಿಸುವ ಧ್ವನಿಗಳನ್ನು ರಾಷ್ಟ್ರೀಯತೆ, ಭದ್ರತೆ, ಗಡಿ, ಸುರಕ್ಷತೆ, ಅಭಿವೃದ್ಧಿ, ನ್ಯಾಯಾಂಗ ವ್ಯವಸ್ಥೆ, ಆಂತರಿಕ ಶಾಂತಿ, ಆಡಳಿತ ಸುವ್ಯವಸ್ಥೆ, ದೇಶಪ್ರೇಮ - ಹೀಗೇ ಹಲವಾರು ನೆಪ ಹೂಡಿ ಹತ್ತಿಕ್ಕಲಾಗುತ್ತಿದೆ. ಆಳುವವರು ಯಾವತ್ತೂ ಉಳ್ಳವರ ಪರ ಎಂಬ ಕಟುವಾಸ್ತವವನ್ನು ಜನಸಾಮಾನ್ಯನೂ ಅರಗಿಸಿಕೊಂಡು ತಾನೂ ರೇಸಿನಲ್ಲಿ ಒಬ್ಬನಾಗಲು ಸರತಿಯಲ್ಲಿ ನಿಲ್ಲಲೆತ್ನಿಸುತ್ತಿರುವುದು; ಜನವಿರೋಧಿ ನೀತಿಗಳನ್ನೇ ಸರ್ಕಾರಗಳು ಅಭಿವೃದ್ಧಿಗೆ ಅನಿವಾರ್ಯ ಎಂಬಂತೆ ಬಿಂಬಿಸುತ್ತಿರುವುದು; ಅದರ ನಡುವೆಯೇ ತೋರುಗಾಣಿಕೆಯ ಜನಪರ ಕ್ರಿಯೆಗಳಿಗಷ್ಟೇ ಒತ್ತು ನೀಡುತ್ತ ಎಲ್ಲವೂ ಸಾಂಕೇತಿಕವಾಗುತ್ತಿರುವುದು ಇಪ್ಪತ್ತೊಂದನೇ ಶತಮಾನದ ಆಧುನಿಕ ಸಮಾಜದ ಸಾಮಾನ್ಯ ಗುಣಲಕ್ಷಣವಾಗಿದೆ.

ಹೀಗಿರುವಾಗ ಸಾಮ್ರಾಜ್ಯಶಾಹಿ ಶಕ್ತಿಗಳ ಅನಂತ ವಿಸ್ತರಣಾ ದಾಹಕ್ಕೆ ತೀವ್ರವಾದ ಪ್ರತಿರೋಧ ಒಡ್ಡಿ ಮರೆಯಾದ ಎಷ್ಟೆಷ್ಟೋ ಚೇತನಗಳಿವೆ. ಇಂದಿಗೂ ಚೇತನಗಳ ನೆನಪು ಪ್ರತಿರೋಧದ ದನಿಗಳ ನಡುವೆ ಜೀವಂತವಾಗಿ ಸಾಕಾರಗೊಳ್ಳುತ್ತದೆ. ಭಾರತದ ಭಗತ್ಸಿಂಗ್ ಹಾಗೂ ಅರ್ನೆಸ್ಟೋ ಚೆಗೆವಾರ ಅಂಥವರಲ್ಲಿ ಇಬ್ಬರು. ಅವರೀರ್ವರ ನಡುವೆ ಮೂರ್ನಾಲ್ಕು ದಶಕಗಳ ಕಾಲಾವಧಿಯಿದ್ದರೂ, ಭೌಗೋಳಿಕವಾಗಿ ಭಿನ್ನ ಪ್ರದೇಶಗಳಿಗೆ ಸೇರಿದ್ದರೂ, ಪರಸ್ಪರ ಪ್ರಭಾವ-ಒಡನಾಟವಿಲ್ಲದಿದ್ದರೂ, ಅವರಿಬ್ಬರನ್ನು ಮತ್ತೆ ಒಟ್ಟೊಟ್ಟಿಗೇ ನೆನೆಯಲು ಇದು ಸಕಾಲವಾಗಿದೆ. ಭಾರತದ ಸ್ವಾತಂತ್ರ್ಯಸಂಗ್ರಾಮದ ಅವಧಿಯಲ್ಲಿ ಬದುಕಿದ್ದ ಭಗತ್ಸಿಂಗ್ ಬದುಕು-ಚಿಂತನೆ-ಸಾವು ಎಲ್ಲವೂ ಮಾಸ್ಕಿಂಗ್ ಎಫೆಕ್ಟ್ಗೆ ಒಳಗಾದವು. ನಾಸ್ತಿಕನಾದ, ಧರ್ಮ ಭಾಷೆ ಪ್ರದೇಶಗಳ ಹಂಗಿಲ್ಲದೇ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಎದೆ ಸೆಟೆಸಿ ನಿಂತು ನೇಣಿಗೇರುವಾಗಲೂ ತಲೆತಗ್ಗಿಸದ, ಆತ್ಮಾಭಿಮಾನಿ ತರುಣ ಭಗತ್ಸಿಂಗ್ನನ್ನು ಈಗ ಕಡು ದೇಶಪ್ರೇಮಿಯಾಗಷ್ಟೇ ಬಿಂಬಿಸಲಾಗುತ್ತಿದೆ. ಅವನ ನಿಜ ಮುಖ ಅನಾವರಣಗೊಳಿಸುವ, ಕೋಮುವಾದಿ-ರಾಷ್ಟ್ರೀಯವಾದಿ ಢೋಂಗಿ ದೇಶಪ್ರೇಮದ ರಾಜಕಾರಣದಿಂದ ಅವನನ್ನು ಬಿಡುಗಡೆಗೊಳಿಸುವ ಅಗತ್ಯವಿರುವಾಗಲೇ ಅಂತರರಾಷ್ಟ್ರೀಯವಾಗಿ ಪ್ರತಿಭಟಿಸುವ ದನಿಗಳಲ್ಲಿ ಮತ್ತೆಮತ್ತೆ ಕೇಳಿಬರುವ ಚೆಯ ಜಾಗೃತ ದನಿಯನ್ನೂ ನೆನಪಿಸಿಕೊಳ್ಳಬೇಕಿದೆ.

ವೈದ್ಯ ಶಿಕ್ಷಣ ಪಡೆದಿದ್ದ ಚೆ, ತನ್ನ ಏರುಹರೆಯದ ದಿನಗಳಲ್ಲಿ ಗೆಳೆಯ ಆಲ್ಬರ್ಟೋನೊಟ್ಟಿಗೆ ದಕ್ಷಿಣ ಅಮೆರಿಕಾದ ನಾಲ್ಕೂವರೆ ಸಾವಿರ ಕಿಮೀ ದಾರಿ ಕ್ರಮಿಸಿದ. ಮೋಟಾರು ಸೈಕಲ್, ಕಾಲ್ನಡಿಗೆ, ಲಾರಿ, ಹಡಗುಗಳಲ್ಲಿ ಸಂಚರಿಸಿದ ಚೆ ಪ್ರಯಾಣದುದ್ದಕ್ಕೂ ಭೇಟಿಯಾದ ಜನರು, ಅವರ ಸಂಕಟಗಳು ಯಾವ ಓದೂ, ಬೋಧನೆಯೂ ಮೂಡಿಸಲಾಗದ ಪರಿವರ್ತನೆಯ ಬೀಜವನ್ನು ಅವನಲ್ಲಿ ಬಿತ್ತಿದವು. ದೇಶಭಾಷೆಗಡಿಗಳ ಹಂಗಿಲ್ಲದೆ ಎಲ್ಲ ಕಡೆ ಶ್ರಮಿಕರ ಕಷ್ಟವೂ, ಸಿರಿವಂತರ ದಾಹವೂ ಒಂದೇ ಎಂದು ಕಂಡುಕೊಳ್ಳುವ ಚೆ ಪ್ರಕಾರ ಭೌಗೋಳಿಕ ಗಡಿಗಳೇ ಅಗತ್ಯವಿಲ್ಲ. ಜಗತ್ತಿನ ಯಾವ ಮೂಲೆಯಲ್ಲೇ ಆಗಲಿ ಶೋಷಣೆ, ಅನ್ಯಾಯದ ವಿರುದ್ಧ ಯಾರಾದರೂ ಕೈಯೆತ್ತಿದರೆ ತಾನು ಅವರ ಪರ ಎಂದು ಘೋಷಿಸಿಕೊಳ್ಳುವ ಚೆ ಅಕ್ಷರಶಃ ವಿಶ್ವಾತ್ಮ ಜಂಗಮ ಚೇತನ. ಹುಟ್ಟಿದ ದೇಶ ಅಜೆರ್ಂಟೀನಾ ತೊರೆದು ಗ್ವಾಟೆಮಾಲಾ ಕ್ರಾಂತಿಯನ್ನು ಕಣ್ಣಾರೆ ಕಂಡು, ಕ್ಯೂಬಾ ಕ್ರಾಂತಿಕಾರಿಗಳೊಡನೆ ಸೇರಿಕೊಳ್ಳುತ್ತಾನೆ. ಹಾಗೆ ಪರಿಚಯವಾದ ಫಿಡೆಲ್ ಕ್ಯಾಸ್ಟ್ರೋ ಜೊತೆಗೂಡಿ ಗೆರಿಲ್ಲಾ ಸೇನೆಯನ್ನು ಮುನ್ನಡೆಸಿ ಕ್ಯೂಬಾದ ಸರ್ವಾಧಿಕಾರಿ ಸರ್ಕಾರವನ್ನು ಪದಚ್ಯುತಗೊಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಫಿಡೆಲ್ ಕ್ಯಾಸ್ಟ್ರೋ ಕ್ಯೂಬಾದ ಮುಖ್ಯಸ್ಥನಾದ ಮೇಲೆ ಕೆಲ ವರುಷ ನಾನಾ ಹುದ್ದೆಗಳನ್ನಲಂಕರಿಸಿದ ಚೆ, ನಂತರ ಕಾಂಗೋ ಮತ್ತು ಬೊಲಿವಿಯಾ ದೇಶಗಳ ಕ್ರಾಂತಿಯಲ್ಲಿ ಭಾಗವಹಿಸಲು ಕ್ಯೂಬಾ ಬಿಟ್ಟು ತೆರಳುತ್ತಾನೆ. ಬೊಲಿವಿಯಾ ಹೋರಾಟ ಸಮಯದಲ್ಲಿ ಸಾವನ್ನಪ್ಪಿದ ಚೆಯ ಒರಟು ಉಣ್ಣೆಯ ಚೀಲದಲ್ಲಿ ಅಸ್ತ್ರಗಳ ಜೊತೆಯಲ್ಲಿದ್ದುದು ಒಂದು ಮ್ಯಾತ್ ಪುಸ್ತಕ ಹಾಗೂ ನೆರೂಡಾನ `ಕ್ಯಾಂಟೋ ಜನರಲ್ ಕಾವ್ಯದ ಪುಸ್ತಕ. ಶಸ್ತ್ರಾಸ್ತ್ರಗಳಷ್ಟೇ ಕಾವ್ಯವನ್ನೂ ಪ್ರೀತಿಸುತ್ತಿದ್ದ ಮೆಲುದನಿಯ ಮಾತುಗಾರ ಚೆ, ಅಪ್ರತಿಮ ಧೈರ್ಯಶಾಲಿ ಚೆ, ಸರಳವಾಗಿ ಎಲ್ಲರೊಡನೆ ಬೆರೆಯುತ್ತಿದ್ದ ಚೆ, ವಿಶ್ವಾದ್ಯಂತ ಇಂದಿಗೂ `ಆಂಗ್ರಿ ಯಂಗ್ ಮ್ಯಾನ್ ಇಮೇಜಿನಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅವರ ಸಾವು ಬಹಳಷ್ಟು ವಿಷಾದ, ವಿವಾದ, ಕುತೂಹಲಗಳನ್ನು ಸೃಷ್ಟಿಸಿತು. ಕ್ಯಾಸ್ಟ್ರೋ ಸಹಚರರ ಜೊತೆಯ ಭಿನ್ನಾಭಿಪ್ರಾಯದಿಂದ ದೇಶ ತೊರೆದರು ಎನ್ನುವುದರಿಂದ ಹಿಡಿದು ಬೊಲಿವಿಯಾ ಸೈನಿಕರ ಕೈಯಲ್ಲಿ ಅವರ ಮರಣದಲ್ಲಿ ಕ್ಯಾಸ್ಟ್ರೋ ಕೈವಾಡವಿದೆ ಎನ್ನುವತನಕ ಲೆಕ್ಕವಿಲ್ಲದಷ್ಟು ಊಹಾಪೋಹಗಳು ಹಬ್ಬಿದ್ದವು. ಅಂಥ ಎಲ್ಲ ಊಹೆಗಳಿಗೆ ತಾಳ್ಮೆಯಿಂದ ವಿವರಿಸಿದ ಫಿಡೆಲ್ ಕ್ಯಾಸ್ಟ್ರೋ ಚೆಯ ತಮ್ಮ ನೆನಪುಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದರು. ಅದರ ಕನ್ನಡ ಅನುವಾದ ನಿಮ್ಮ ಕೈಯಲ್ಲಿರುವ ಪುಸ್ತಕ. ಚೆ ವಿಚಾರಗಳನ್ನು ಮತ್ತೆ ಸ್ಮರಿಸುವುದು ಸಕಾಲಿಕವೂ, ಸಮಂಜಸವೂ ಆಗಿರುವ ಹೊತ್ತಿನಲ್ಲಿ ಅವರ ಗೆಳೆಯ ದಾಖಲಿಸಿರುವ ಚೆ ನೆನಪನ್ನು, ಇಡೀ ಪುಸ್ತಕದ ಪದಪದವನ್ನೂ ಶ್ರದ್ಧೆಯಿಂದ ಓದಿ, ಅನುವಾದಿಸಿರುವ ನಾ.ದಿವಾಕರ ಅವರಿಗೆ ಲಡಾಯಿ ಪ್ರಕಾಶನವಷ್ಟೇ ಅಲ್ಲ, ಸಮಾನತೆಯ ಹೋರಾಟದ ಎಲ್ಲ ಸಹವರ್ತಿಗಳೂ ಕೃತಜ್ಞರಾಗಿದ್ದಾರೆ. ಜೊತೆಗೆ ಮುಖಪುಟ ರಚಿಸಿದ ಅರುಣಕುಮಾರ್ ಅವರಿಗೂ; ಇಳಾ ಮುದ್ರಣದ ಸಿಬ್ಬಂದಿಗಳಿಗೂ; ಕೊಂಡು ಓದುವ ಪುಸ್ತಕ ಪ್ರೇಮಿಗಳಿಗೂ ನಮ್ಮ ನೆನಕೆಗಳು ಸಲ್ಲುತ್ತವೆ.
-              ಬಸೂ
 

No comments:

Post a Comment