ಕೆರೆಯ ಬಳಿ ಹೆಚ್ಚು ಸಮಯ ಕಳೆಯಬೇಕಿತ್ತು. ಸಂಜೆ ಮನೆಗೆ ಬರೋದು ತಡವಾಗ್ತದೆ ಎಂದು ಹೇಳಿಯೇ ಹೊರಟಿದ್ದೆ. ಸೂರ್ಯಾಸ್ತದ ಜೊತೆ ಹೆಜ್ಜಾರ್ಲೆಯ ಫೋಟೋ ತೆಗೆಯಬೇಕೆಂಬ ಆಸೆ. ಕೆರೆಯಲ್ಲಿ ಹೆಜ್ಜಾರ್ಲೆಗಳ ಸಂಖೈ ಹೆಚ್ಚಾಗಿತ್ತು. ಮರದ ಮೇಲಿದ್ದಷ್ಟೇ ಪಕ್ಷಿಗಳು ನೀರಿನಲ್ಲೂ ಇದ್ದವು.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಕೆರೆಯ ಉತ್ತರಭಾಗದಲ್ಲಿದ್ದ ಮತ್ತೊಂದು ಮರದ ಮೇಲೂ ಒಂದೆರಡು ಹೆಜ್ಜಾರ್ಲೆಗಳು ಕಂಡವು. ಆ ಮರದಲ್ಲಿ ಈ ಮುಂಚೆ ಬೆಳ್ಳಕ್ಕಿಗಳು ಹಾಗು ಒಂದೆರಡು ಬೂದು ಬಕಗಳಷ್ಟೇ ಕಾಣಿಸಿದ್ದವು. ಚಲುಕದ ಬಾತುಗಳ ಸಂಖೈ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಅನಿಸಿತು. ಅವುಗಳಿನ್ನೂ ಕ್ಯಾಮೆರಾದ ಲೆನ್ಸಿಗೆ ಸಿಲುಕದಷ್ಟು ದೂರದಲ್ಲಿಯೇ ಇದ್ದವು. ಅರ್ಧ ತಲೆಯನ್ನು ನೀರಿನಲ್ಲಿ ಮುಳುಗಿಸಿ ಸಲಿಕೆ ಆಕಾರದ ಕೊಕ್ಕನ್ನು ತೆರೆದು ಆಹಾರದ ಹುಡುಕಾಟದಲ್ಲಿ ಇರುತ್ತಿದ್ದವು. ಗಂಡು ಪಕ್ಷಿಯ ಹಸಿರು - ಹಳದಿ ಬಣ್ಣದ ಕಣ್ಣಿನ ಪ್ರತಿಬಿಂಬ ಚೆಂದವಾಗಿ ಕಾಣಿಸುತ್ತಿತ್ತು. ಶುದ್ಧವಲ್ಲದ ಕೆರೆಯ ನೀರನ್ನು ಶುದ್ಧೀಕರಿಸಲು ರಾಶಿ ರಾಶಿ ಪಾಚಿ ಬೆಳೆದಿದೆ ನೀರಿನಲ್ಲಿ. ಆ ಪಾಚಿ ಕೂಡ ಈ ಚಲುಕದ ಬಾತುಗಳಿಗೆ ಆಹಾರ. ಹಾಗಾಗಿ ಗಲೀಜು ನೀರಿನಲ್ಲೂ ಹೆಚ್ಚು ಪಕ್ಷಿಗಳಿವೆ. ಮನುಷ್ಯ ಏನೇ ಕುಲಗೆಡಿಸಿದರೂ ಪ್ರಕೃತಿ ತನ್ನದೇ ರೀತಿಯಲ್ಲಿ ಪರಿಹಾರ ಕಂಡುಕೊಂಡುಬಿಡುತ್ತದೆ. ಆ ಪರಿಹಾರದ ಅಂತ್ಯದಲ್ಲಿ ಮನುಷ್ಯಜೀವಿ ಅಸ್ತಿತ್ವದಲ್ಲಿರುತ್ತದೋ ಇಲ್ಲವೋ ಹೇಳಲಿಕ್ಕಾಗದು.
ಆಗಸದಲ್ಲಿ ಒಂದೆರಡು ಹಾವಕ್ಕಿಗಳು (ಓರಿಯೆಂಟಲ್ ಡಾರ್ಟರ್) ಹಾರಾಡುತ್ತಿದ್ದವು. ಬೋಗನ್‌ವಿಲ್ಲಾ ಹೂವುಗಳ ಹಿನ್ನಲೆಯಲ್ಲಿ ಬೆಳ್ಳಕ್ಕಿ ಮತ್ತು ನೀರ್ಕಾಗೆಗಳು ಕಂಡವು.
![]() |
ಬೋಗನ್‌ವಿಲ್ಲಾ, ಇಗ್ರೆಟ್ ಮತ್ತು ನೀರ್ಕಾಗೆ |
ಹೆಜ್ಜಾರ್ಲೆಗಳ ಹಾರಾಟದ ಚಿತ್ರಗಳನ್ನು ತೆಗೆದು ವೀಕ್ಷಣಾ ಕಟ್ಟೆಯ ಬಳಿ ಕುಳಿತೆ. ಹೆಜ್ಜಾರ್ಲೆಯ ನೀರಿಗಿಳಿಯುವ ಅಥವಾ ನೀರಿನಿಂದ ಮೇಲೆ ಹಾರುವ ಚಿತ್ರಗಳನ್ನು ತೆಗೆಯಬೇಕು ಎಂದುಕೊಂಡೆ. ಆ ರೀತಿಯ ಚಿತ್ರಗಳನ್ನು ಈ ಮುಂಚೆಯೂ ತೆಗೆದಿದ್ದೆನಾದರೂ ಕಣ್ಣಿನ ಮಟ್ಟದ ಫೋಟೋಗಳು ಹೆಚ್ಚಿಗೆ ಇರಲಿಲ್ಲ. ಕ್ಯಾಮೆರಾವನ್ನು ನೆಲದ ಮೇಲಿಟ್ಟು ಇದ್ದುದರಲ್ಲಿ ಹತ್ತಿರವಿರುವ ಹೆಜ್ಜಾರ್ಲೆಗಳ ಮೇಲೆ ಫೋಕಸ್ ಮಾಡಿ ನೀರಿನಿಂದ ಮೇಲಾರಲಿ ಎಂದು ಕಾಯುತ್ತ ಕುಳಿತೆ. ಸ್ವಲ್ಪ ಸಮಯದ ನಂತರ ಪರವಾಗಿಲ್ಲ ಎಂದನ್ನಿಸುವ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಸೂರ್ಯಾಸ್ತದ ಜೊತೆಗೆ ಪೆಲಿಕಾನಿನ ಫೋಟೋ ತೆಗೆಯಬಹುದಾ ಇಲ್ಲವಾ ಎಂದು ಗಮನಿಸಲು ಎದುರು ದಡದ ಕಡೆಗೆ ನಡೆದೆ. ಅವತ್ಯಾಕೋ ಸೂರ್ಯ ಮೋಡಗಳಿಂದೆ ಮರೆಯಾಗಿದ್ದ. ಸೂರ್ಯ ಮರೆಯಾಗಿದ್ದರೂ ಮುಳುಗುತ್ತಿದ್ದ ಸೂರ್ಯನ ವರ್ಣಗಳು ಮೋಡಗಳಿಗೆ ಮೆರಗು ನೀಡಿತ್ತು. ಮೋಡಗಳ ಹಿನ್ನಲೆಯಲ್ಲಿ ಹೆಜ್ಜಾರ್ಲೆ, ಬೆಳ್ಳಕ್ಕಿ, ಬೂದು ಬಕ, ಕೆಂಬರಲು (ಐಬಿಸ್) ಪಕ್ಷಿಗಳ ಫೋಟೋ ತೆಗೆದುಕೊಂಡು ಸೂರ್ಯಾಸ್ತ ಮತ್ತು ಪೆಲಿಕಾನಿನ ಫೋಟೋ ತೆಗೆಯಲು ಮತ್ತೊಂದು ದಿನ ಬರುವುದೆಂದುಕೊಳ್ಳುತ್ತಾ ಹಿಂದುರಿಗಿದೆ.
23/1/25
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ