ಜುಲೈ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 7: ಕೊಮ್ಮಘಟ್ಟ ಕೆರೆ ಮತ್ತು ಉಲ್ಲಾಳ ಕೆರೆ

ಹೊಂಬೆಳಕಿನಲ್ಲಿ ಕಂಡ ಚಲುಕದ ಬಾತುಗಳು
ಡಾ. ಅಶೋಕ್.‌ ಕೆ. ಆರ್
ಕೊಮ್ಮಘಟ್ಟ ಕೆರೆಯಲ್ಲಿ ಬೆಳಗಿನ ಸಮಯ ಬೆಳಕು ಯಾವ ಕಡೆಯಿಂದ ಬರುತ್ತದೆಂಬ ಅಂದಾಜಾಗಿದ್ದರಿಂದ ಆರೂವರೆಯಷ್ಟೊತ್ತಿಗೆ ಕೆರೆಯಂಗಳ ತಲುಪಿದೆ. ಸೂರ್ಯ ಮೂಡಲು ಇನ್ನೂ ಹತ್ತದಿನೈದು ನಿಮಿಷವಿತ್ತು. ಕೊಮ್ಮಘಟ್ಟ ರಸ್ತೆಗೆ ತಿರುಗುತ್ತಿದ್ದಂತೆಯೇ ವಿಪರೀತ ಮಂಜು, ಚಳಿ.

ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ


ಕೆರೆಯಂಗಳಕ್ಕೆ ಕಾಲಿಟ್ಟರೆ ಅಚ್ಚರಿ. ಹೆಜ್ಜಾರ್ಲೆ(ಪೆಲಿಕಾನ್)ಗಳ ಸುಳಿವೇ ಇಲ್ಲ! ಅಲ್ಲೆಲ್ಲೋ ಒಂದೆರಡು ದೂರದಲ್ಲಿ ಕಂಡವು. ಬಹುಶಃ ಹೆಜ್ಜಾರ್ಲೆಗಳು ಸಂಜೆಯ ಸಮಯದಲ್ಲಿ ವಿರಮಿಸಲಷ್ಟೇ (ರೂಷ್ಟಿಂಗ್) ಇಲ್ಲಿಗೆ ಬರುತ್ತಿರಬೇಕು. ಅಥವಾ ಪಾಚಿ ತುಂಬಿರುವ ಕೆರೆಯಲ್ಲಿ ಮೀನುಗಳ ಸಂಖೈ ಹೆಚ್ಚಿಲ್ಲದ ಕಾರಣ ಇಲ್ಲಿಂದ ಜಾಗ ಖಾಲಿ ಮಾಡಿರಬೇಕು ಎಂದುಕೊಂಡೆ. ಚಲುಕದ ಬಾತುಗಳು ಕೆಲವು ಮಾತ್ರ ನೀರಿನಲ್ಲಿದ್ದವು. ಉಳಿದವಿನ್ನೂ ನಡುಗಡ್ಡೆಯ ಅಂಚಿನಲ್ಲಿ ವಿರಮಿಸುತ್ತಿದ್ದವು. ಮುಂಜಾನೆಯ ಹೊಂಬಣ್ಣದ ಬೆಳಕಿನಲ್ಲಿ ಚಲುಕದ ಬಾತು, ಗುಳುಮುಳುಕಗಳ ಫೋಟೋ ತೆಗೆದುಕೊಂಡು ಕೆರೆಯ ಸುತ್ತ ಒಂದು ಸುತ್ತು ಹಾಕಿ ಬರೋಣವೆಂದುಕೊಂಡು ಹೊರಟೆ. ಇಡೀ ಕೆರೆಯನ್ನು ಒಂದು ಸುತ್ತು ಹೊಡೆದರೆ ಒಂದೂವರೆಯಿಂದ ಎರಡು ಕಿಲೋಮೀಟರ್ ಆಗಬಹುದು. ಮಂಜು ಹೆಚ್ಚಿತ್ತು. ಸೂರ್ಯ ಮೂಡಲಾರಂಭಿಸಿದ್ದ. ಸೂರ್ಯನ ಕಿರಣಗಳು ಮಂಜಿನ ನಡುವೆ ತೂರಿಬರುವಾಗ ಸೃಷ್ಟಿಯಾಗುವ ನೆರಳು ಬೆಳಕಿನ ಕಲಾ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಅಲ್ಲಲ್ಲಿ ನಿಂತು ಫೋಟೋ ತೆಗೆಯುತ್ತಾ ಸಾಗಿದೆ.

ಹೊಂಬಣ್ಣದ ಬೆಳಕಿನಲ್ಲಿ ಗದ್ದೆ ಮಿಂಚುಳ್ಳಿ
ಹೊಂಬಣ್ಣದ ಬೆಳಕಿನಲ್ಲಿ ಬಿಳಿ ಎದೆಯ ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗ್ ಫಿಶರ್) ಫೋಟೋ ಮನಸ್ಸಿಗೆ ತೃಪ್ತಿ ಕೊಟ್ಟಿತು. ಚಳಿ ಜಾಸ್ತಿ ಇದ್ದ ಕಾರಣಕ್ಕೋ ಏನೋ ಚಲುಕದ ಬಾತುಗಳು ಇನ್ನೂ ನೀರಿಗಿಳಿದಿರಲಿಲ್ಲ. ನೀರಿನಲ್ಲಿದ್ದ ಪಕ್ಷಿಗಳು ಸಹ ಹೆಚ್ಚು ಚಟುವಟಿಕೆಯಿಂದಿರಲಿಲ್ಲ. ಇದ್ದ ಒಂದೆರಡು ಹೆಜ್ಜಾರ್ಲೆಗಳೂ ಕೆರೆಯಂಗಳವನ್ನು ತೊರೆದವು. ಎರಡು ಸುತ್ತು ನಡೆದು ಮುಗಿಸಿ ಉಲ್ಲಾಳ ಕೆರೆಯ ಕಡೆಗೆ ಹೋದೆ.

ನೆರಳು ಬೆಳಕಿನಾಟ
ಭಾನುವಾರವಾದ್ದರಿಂದ ಹೆಚ್ಚು ಜನರಿದ್ದರು ಉಲ್ಲಾಳ ಕೆರೆಯಲ್ಲಿ. ಚಲುಕದ ಬಾತುಗಳನ್ನು ಮೊದಲ ಸಲ ನಾನೀ ಕೆರೆಯಲ್ಲಿಯೇ ನೋಡಿದ್ದು. ಇವತ್ತು ಚಲುಕದ ಬಾತುಗಳು, ಬೆಳ್ಳಕ್ಕಿ, ಗೋವಕ್ಕಿ, ನೀರ್ಕಾಗೆ, ಗುಳುಮುಳುಕ, ನಾಮದ ಕೋಳಿ ಕಂಡವು. ಕೆರೆಯ ನೀರು ಕೊಮ್ಮಘಟ್ಟಕ್ಕಿಂತ ಶುದ್ಧವಾಗಿ ಕಂಡಿತು, ಪಕ್ಷಿಗಳು ಕಡಿಮೆಯಿದ್ದವು! ಕೆರೆಯ ಪೂರ್ವ ಭಾಗದಲ್ಲಿ ರಾಜ ಕಾಲುವೆ ಕೆರೆಗೆ ಮೋರಿ ನೀರನ್ನು ಹೊತ್ತು ತರುತ್ತಿತ್ತು. ಎಲ್ಲಾ ನೀರೂ ಕೆರೆಗೆ ಬರದಿರಲೆಂದು ಮತ್ತೊಂದು ಮೋರಿಗೆ/ ರಾಜ ಕಾಲುವೆಗೆ ನೀರನ್ನು ಮರಳಿನ ಮೂಟೆಗಳ ಸಹಾಯದಿಂದ ತಿರುಗಿಸಿದ್ದರು.


ಮರಳಿನ ಮೂಟೆಯಿಂದ ಜಿನುಗಿ ಉಲ್ಲಾಳ ಕೆರೆಗೆ ಸೇರಿದ ನೀರು ಸೃಷ್ಟಿಸಿದ ಪಾಚಿಯಲ್ಲಿ ಚಲುಕದ ಬಾತುಗಳು, ವರಟೆ (ಸ್ಪಾಟ್ ಬಿಲ್ಡ್ ಡಕ್) ಹಾಗು ನೇರಳೆ ಜಂಬುಕೋಳಿ (ಪರ್ಪಲ್ ಮೂರ್ ಹೆನ್/ಸ್ವಾಂಪ್ ಹೆನ್)ಗಳು ಕಂಡವು. ಜೊತೆಗೆ ಒಂದೆರಡು ಕೆಂಪು ಟಿಟ್ಟಿಭಗಳಿದ್ದವು.

ಉಲ್ಲಾಳ ಕೆರೆಯಲ್ಲಿ ಕಂಡ ಚಲುಕದ ಬಾತು
ಇನ್ನೊಂದಷ್ಟು ಮುಂದೆ ಸಾಗಿದರೆ ಮತ್ತಷ್ಟು ಚಲುಕದ ಬಾತುಗಳು ಅಲ್ಲಿದ್ದ ಬಂಡೆಗಲ್ಲುಗಳ ಮೇಲೆ ಬಿಸಿಲು ಕಾಯಿಸಿಕೊಳ್ಳುತ್ತಿದ್ದವು. ಮಗದೊಂದಷ್ಟು ನೀರಿಗಿಳಿದಿದ್ದವು. ಏಳು ವರ್ಷದ ಮುಂಚೆ ಇದ್ದಷ್ಟು ಪಕ್ಷಿಗಳಿರಲಿಲ್ಲ. ಹೆಚ್ಚಿನ ಪಕ್ಷಿಗಳು ಇಲ್ಲೇ ಪಕ್ಕದಲ್ಲಿರುವ ಕೊಮ್ಮಘಟ್ಟದಲ್ಲಿದ್ದವಲ್ಲ. ಈ ಕೆರೆಗಳಿಗೆ ಸೇರುತ್ತಿರುವ ಮೋರಿ ನೀರು ಮನೆಗಳಿಂದ ಬರುವಂತದ್ದು. ಕಾರ್ಖಾನೆಯ ಕೊಳಚೆ ನೀರಲ್ಲ. ನಮ್ಮ ಮನೆಗಳಲ್ಲೂ ಸಾಕಷ್ಟು ರಾಸಾಯನಿಕಗಳನ್ನು ನಾವು ಬಳಸುತ್ತೇವೆ. ಆದರೂ ಪಾಚಿ ಬೆಳೆಯುವಷ್ಟು ಯೋಗ್ಯ ನೀರಿದು. ಆ ಪಾಚಿಯನ್ನು ಅವಲಂಬಿಸಿ ಇಷ್ಟೊಂದು ಪಕ್ಷಿಗಳು. ಪಾಚಿಯ ರೂಪದಲ್ಲಿ ಆಹಾರವೇನೋ ಸಿಗ್ತಿದೆ. ಈ ವಿಷಯುಕ್ತ, ರಾಸಾಯನಿಕ ಯುಕ್ತ ಆಹಾರ ತಿನ್ನುವುದರಿಂದ ಪಕ್ಷಿಗಳ ಮೇಲಾಗಬಹುದಾದ ದೂರಗಾಮಿ ಪರಿಣಾಮಗಳೇನಿರಬಹುದು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ