ಡಾ ಅಶೋಕ್ ಕೆ. ಆರ್
ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಬಗೆಗಿನ ಚರ್ಚೆಗಳು,
ಮಹಿಳಾ ವಾದ, ಮಹಿಳಾ ಸಮಾನತೆಯ ಬಗ್ಗೆ ರಾಜಕಾರಣಿಗಳ ಅದೇ ಹಳೆಯ ಪುನರಾವರ್ತಿತ ಒಣ ಭಾಷಣಗಳನ್ನು ಕೇಳುವ
ಸಮಯ. ಜೊತೆಯಲ್ಲಿಯೇ ಮಹಿಳಾವಾದವನ್ನು ತಪ್ಪಾಗಿ ಅರ್ಥೈಸಿಕೊಂಡು ಆ ತಪ್ಪು ಅರ್ಥೈಸುವಿಕೆಯನ್ನೇ ಜೋರು
ದನಿಯಲ್ಲಿ ಹೇಳುವ ಮಹಿಳಾವಾದಿಗಳ ಮಾತನ್ನು ಕೇಳುವ, ಓದುವ ಸಮಯವಿದು. ಹೇಗೆ ಜಾತ್ಯತೀತ, ಸೆಕ್ಯುಲರ್,
ದೇಶಪ್ರೇಮ, ಧಾರ್ಮಿಕ ವ್ಯಕ್ತಿ ಎಂಬ ಪದಗಳು ಅದನ್ನು ಉಪಯೋಗಿಸುವವರ, ಅದನ್ನು ಆಚರಿಸುತ್ತೇವೆಂದು ಹೇಳಿಕೊಳ್ಳುವ
ಜನರ ಆಷಾಡಿಭೂತತನದಿಂದ ಅಪಭ್ರಂಶಗೊಂಡಿದೆಯೋ ಫೆಮಿನಿಷ್ಟ್ ಪದ ಕೂಡ ಅದೇ ಹಾದಿಯಲ್ಲಿದೆ. ಮಹಿಳಾವಾದವೆಂದರೆ
ಪುರುಷ ವಿರೋಧವಷ್ಟೇ ಎಂಬ ಭಾವನೆಯಲ್ಲಿರುವವರು “ಸಮಾನತೆಗಾಗಿ ಮಹಿಳೆಯರ ಹೋರಾಟದ ಹಾದಿ ಒಬ್ಬ ಮಹಿಳಾವಾದಿ
ಅಥವಾ ಒಂದು ಸಂಘಟನೆಯಿಂದ ರೂಪುಗೊಂಡಿದ್ದಲ್ಲ, ಮಾನವ ಹಕ್ಕುಗಳಿಗಾಗಿ ಹೋರಾಡುವ ಪ್ರತಿಯೊಬ್ಬನ ಶ್ರಮವೂ
ಇದರ ಹಿಂದಿದೆ” ಎಂದು ಹೇಳಿದ ಗ್ಲೋರಿಯಾ ಸ್ಟೀನೆಮ್ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.