ನವೆಂ 4, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 11: ಮೋದೂರು ಕೆರೆ

ಮೀನಿನ ಬೇಟೆಯಲ್ಲಿ ಬೆಳ್ಳಕ್ಕಿ

ಡಾ. ಅಶೋಕ್.‌ ಕೆ. ಆರ್
ಕುಣಿಗಲ್ಲಿನ ಆಸುಪಾಸಿನಲ್ಲಿರುವ ಕೆರೆಗಳಲ್ಲಿ ನಾನು ಅತಿ ಹೆಚ್ಚು ಭೇಟಿ ಕೊಟ್ಟಿರುವ ಕೆರೆಯಿದು. ಸಂತೆಮಾವತ್ತೂರಿನಿಂದ ಅಮೃತ್ತೂರಿಗೆ ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಈ ಕೆರೆಯನ್ನು ಕಂಡಿದ್ದೆ. ಪುಟ್ಟ ಕೆರೆ. ಕೆರೆಯ ಎದುರಿಗೆ ಶಂಕರೇಶ್ವರ ಬೆಟ್ಟ. ಬೆಟ್ಟದಿಂದ ಹರಿದು ಬರುವ ಮಳೆ ನೀರೇ ಇದರ ಮುಖ್ಯ ಮೂಲ. ಸದ್ಯಕ್ಕೆ ಯಾವ ನದಿಯ, ಕಾಲುವೆಯ ನೀರೂ ಇಲ್ಲಿಗೆ ಹರಿಸಲಾಗಿಲ್ಲ. ಹಾಗಾಗಿ ಮಳೆಗಾಲದಲ್ಲಿ ನೀರು ಹೆಚ್ಚಿರುತ್ತದೆ, ಮಳೆಯ ಪ್ರಮಾಣಕ್ಕೆ ತಕ್ಕಂತೆ; ಬೇಸಿಗೆಯಲ್ಲಿ ಕೆಲವೊಮ್ಮೆ ಹನಿ ನೀರೂ ಇರುವುದಿಲ್ಲ. ೨೦೨೩ರ ಬರಗಾಲದಲ್ಲಿ ನೀರು ಪೂರ್ಣ ಖಾಲಿಯಾಗಿತ್ತು. ಸುತ್ತಮುತ್ತಲಿನವರು ತಮ್ಮ ಜಮೀನಿಗೆ ಮಣ್ಣು ಹೊಡೆದುಕೊಂಡಿದ್ದರು. ಕೆರೆಯ ಮಧ್ಯಭಾಗದಲ್ಲಿ ಬಂಡೆಯೊಂದಿದೆ. 
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಈ ಬಂಡೆಯ ಮೇಲೆ ಕನಿಷ್ಠ ಒಂದು ಜೋಡಿ ನದಿ ರೀವವಾದರೂ ಇದ್ದೇ ಇರುತ್ತದೆ. ಸಾಮಾನ್ಯ ಮಿಂಚುಳ್ಳಿಗಳು ನಾಲ್ಕಿವೆ, ಗದ್ದೆ ಮಿಂಚುಳ್ಳಿ ಕೆಲವೊಮ್ಮೆ ಕಾಣಿಸಿಕೊಂಡರೆ ಕಪ್ಪು ಬಿಳಿ ಮಿಂಚುಳ್ಳಿ ಅಪರೂಪ. ತಿಂಗಳಿಂದೆ ನಾಮದ ಬಾತು (ಯುರೇಷಿಯನ್ ವಿಜಿಯನ್) ಎರಡು ಜೋಡಿ ಮತ್ತು ಆರು ಕಾಟನ್ ಪಿಗ್ಮಿ ಗೂಸ್ ಗಳಿದ್ದವು. ಇಂದು ಇರಲಿಲ್ಲ. ಗುಳುಮುಳುಕ, ನಾಮದ ಕೋಳಿ, ನೇರಳೆ ಜಂಬುಕೋಳಿ, ಜಂಬುಕೋಳಿ, ಬೆಳ್ಳಕ್ಕಿ, ಗೋವಕ್ಕಿ, ಗದ್ದೆ ಗೊರವ, ಬೂದು ಬಕ, ಕೆನ್ನೀಲಿ ಬಕ, ಕೊಳದ ಬಕ, ನೀರ್ಕಾಗೆ ಇದ್ದೇ ಇರುತ್ತವೆ. ಅಪರೂಪಕ್ಕೆ ಹಾವಕ್ಕಿ.

ಕೆರೆಯ ಮಧ್ಯಭಾಗದಲ್ಲಿ ಜೌಗು ಪ್ರದೇಶವಿದೆ. ಹಾಗಾಗಿ ನೀರು ತುಂಬಿ ತುಳುಕುತ್ತಿರುವ ಕೆರೆಗಳಿಗಿಂತ ಇಲ್ಲಿ ಹಕ್ಕಿಗಳು ಜಾಸ್ತಿ.

ಸಿಳ್ಳೆ ಬಾತು

ಎಂದಿನ ಪಕ್ಷಿಗಳ ಜೊತೆಗೆ ಈ ಸಂಜೆ ಹೆಚ್ಚಿನ ಸಂಖೈಯಲ್ಲಿ ಕಾಣಿಸಿದ್ದು ಸಿಳ್ಳೆಬಾತು (ಲೆಸ್ಸರ್ ವಿಸ್ಲಿಂಗ್ ಡಕ್). ಕಳೆದ ವರ್ಷ ನೋಡಿದ್ದಕ್ಕಿಂತ ಈ ವರ್ಷ ಕಡಿಮೆ ಇದ್ದಂತೆ ಕಾಣ್ತದೆ. ನೀರಿನಿಂದ ಮೇಲೆದ್ದಿರುವ ಹುಲ್ಲಿನ ಮಧ್ಯೆಯೇ ಇವು ಹೆಚ್ಚು ಸಮಯ ಕಳೆಯುತ್ತಿದ್ದವು. ಫೋಟೋಗೆ ಸಿಗಲಿಲ್ಲ. ಅಲ್ಲೇ ಹುಲ್ಲಿನ ಸಮೀಪದಲ್ಲೇ ಒಂದು ಜೋಡಿ ವರಟೆಗಳಿದ್ದವು (ಸ್ಪಾಟ್ ಬಿಲ್ಡ್ ಡಕ್).

ಜೊತೆಗೆ ಒಂದು ಜೋಡಿ ಬಿಳಿ ಹುಬ್ಬಿನ ದೇವನಕ್ಕಿ (ಬ್ರಾನ್ಝ್ ವಿಂಗ್ಡ್ ಜಕಾಣ) ಮತ್ತು ಬಹಳ ವರ್ಷಗಳ ನಂತರ ಒಂದು ಜೋಡಿ ಇರುಳ ಬಕ (ನೈಟ್ ಹೆರಾನ್) ಕೂಡ ಕಾಣಿಸಿತು. ಫೋಟೋಗೆ ಸರಿಯಾಗಿ ಸಿಗಲಿಲ್ಲ. ಒಂದಷ್ಟು ಗಿಣಿಗಳು, ಸೂರ್ಯನಿಗೆ ಎದುರಾಗಿ ಕುಳಿತಿದ್ದ ಕಾಜಾಣ, ಬಾಯಲ್ಲಿ ಕಡ್ಡಿಯನ್ನು ಕಚ್ಚಿಕೊಂಡು ಹೋಗುತ್ತಿದ್ದ ನಾಮದ ಕೋಳಿಗಳು ಕ್ಯಾಮೆರಾದಲ್ಲಿ ಸೆರೆಯಾದವು.
ನಾಮದ ಕೋಳಿ

ಕಾಜಾಣ

ಗಿಣಿಗಳ ಗುಂಪು


2/2/25 ಸಂಜೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ