ಅಕ್ಟೋ 25, 2025

ಜಾತಿ ವ್ಯವಸ್ಥೆಯ ವಿಕಾರಗಳಿಗೆ ಕನ್ನಡಿ ಹಿಡಿಯುವ "ಹೆಬ್ಬುಲಿ ಕಟ್"


ಡಾ. ಅಶೋಕ್. ಕೆ. ಆರ್.

ಸಮಾಜದ ವಿಕಾರಗಳಿಗೆ ಕನ್ನಡಿ ಹಿಡಿಯುವ ಇಂತಹ ಚಿತ್ರಗಳನ್ನು "ಚೆನ್ನಾಗಿದೆ" "ಅದ್ಭುತವಾಗಿದೆ" ಎಂದು ಹೇಗೆ ಹೇಳುವುದು? 

ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ʼಹೆಬ್ಬುಲಿ ಕಟ್‌ʼ ಸಿನಿಮಾವನ್ನು ಇವತ್ತು ನೋಡಲು ಸಮಯವಾಯಿತು. ಹದಿಹರೆಯದ ಹುಡುಗನ ಹುಡುಗಿಯೆಡೆಗಿನ ವಯೋಸಹಜ ಆಕರ್ಷಣೆ, ಅದಕ್ಕಿಂತಲೂ ಹೆಚ್ಚಾಗಿ ಒಂದು ಚೆಂದದ ಹೇರ್‌ ಕಟ್‌ ಮಾಡಿಸಿಕೊಳ್ಳಬೇಕೆಂಬ ಚಡಪಡಿಕೆಯೇ ತಳಪಾಯವಾದ ಸಿನಿಮಾ ಲವಲವಿಕೆಯಿಂದ ನೋಡುಗರನ್ನು ನಗಿಸುತ್ತ ನಗಿಸುತ್ತ ಕೊನೆಗೆ ಬೇಸರಕ್ಕೆ, ಎಂತ ಮಾಡಿದರೂ ಸರಿ ಹೋಗದ ನಮ್ಮ ಸಮಾಜದ ಕುರಿತು ಅಸಹನೆ ಮೂಡಿಸಿಬಿಡುತ್ತದೆ. ಬೇಸರ - ಅಸಹನೆ ಮೂಡದೇ ಹೋದರೆ ಅದು ನಮ್ಮಲ್ಲಿರುವ ಜಾತಿ ಮೇಲ್ಮೆಯ ಸೂಚಕ.

ʼಹಿಂದೂ ನಾವೆಲ್ಲ ಒಂದುʼ ಎನ್ನುವ ಘೋಷಣೆ ಈ ಮುಂಚೆಗಿಂತಲೂ ಅತ್ಯುಗ್ರವಾಗಿ ಕೇಳಿಬರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೀವಿ. ಆ ಘೋಷಣೆ ಕೂಡ ಈ ಚಿತ್ರದ ಒಂದು ಪ್ರಮುಖ ಪಾತ್ರಧಾರಿ. ಜೊತೆಗೆ ಐದು ಸಲದ ನಮಾಜಿಗೆ ಕೂಡ ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರವಿದೆ.

ಮುಖ್ಯಪಾತ್ರದಲ್ಲಿರುವ ವಿನ್ಯಾ ಎಂಬ ಹುಡುಗ, ಅವನ ಅಪ್ಪ - ಅಮ್ಮ, ವಿನ್ಯಾನ ಗೆಳೆಯ ರಫೀಕ, ಬುಟಿ ಕಟಿಂಗ್‌ ಶಾಪಿನ ಹೇರ್‌ ಸ್ಟೈಲಿಷ್ಟ್, ಬುಟಿ ಕಟಿಂಗ್‌ ಶಾಪಿನ ಮೆಟ್ಟಿಲು ಹತ್ತಲು ಅನುಮತಿ ಇಲ್ಲದವರಿಗೆ ಮನೆಯ ಬಳಿಯೇ ಬಂದು ಕಟಿಂಗ್‌ ಮಾಡುವ ಮೌಲ, ವಿನ್ಯಾನ ಶಾಲೆಯ ಗೆಳೆಯರು, ವಿನ್ಯಾನನ್ನು ಆಕರ್ಷಿಸಿದ "ಮೇಲು ಜಾತಿ"ಯ ಸಹಪಾಠಿ, ಸಹಪಾಠಿಯ ಅಪ್ಪನ ಅಭಿನಯವೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಚಿತ್ರದ ಶುರುವಿನಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಕೆಲವರ ಅಭಿನಯ ಕೃತಕವಾಯಿತೇನೋ ಅಂತನ್ನಿಸುವಷ್ಟರಲ್ಲಿ ಮುಂದಿನ ದೃಶ್ಯಗಳು ಹಳೆಯ ದೃಶ್ಯಗಳ ತಪ್ಪುಗಳನ್ನು ಸರಿಪಡಿಸಿಬಿಡುತ್ತವೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ಕೆಲಸ, ಕೊನೆಯಲ್ಲಿನ ಎಂಡಿಂಗ್ ಕಾರ್ಡಿನಲ್ಲಿ ಬರುವ ರ್ಯಾಪ್‌ ಸಾಂಗು ಚಿತ್ರದ ಸೊಗಸನ್ನು ಮತ್ತಷ್ಟು ಹೆಚ್ಚಿಸಿವೆ.

ಒಂದು ಚೆಂದದ ಹೇರ್‌ ಕಟ್‌ ಮಾಡಿಸಿಕೊಳ್ಳಬೇಕು, ಮಾಡಿಸಿಕೊಂಡು ಎಲ್ಲರ ಕಣ್ಣಿಗೆ ಆಕರ್ಷಕವಾಗಿ ಕಾಣಬೇಕು ಎನ್ನುವುದೇ ಚಪ್ಪಲಿ ಹೊಲಿಯುವ ಮಲ್ಲಣ್ಣನ ಮಗನಾದ ವಿನ್ಯಾನ ಆಸೆ. ಒಂದು ಹೇರ್ ಕಟಿಂಗಿನ ಕನಸಿನ ಸುತ್ತ ಹೆಣೆದಿರುವ ಕತೆಯಲ್ಲಿ ಊರೊಂದರ ಜಾತಿ ವ್ಯವಸ್ಥೆ, ಧಾರ್ಮಿಕ‌ ಮೂಲಭೂತವಾದ, ಧಾರ್ಮಿಕ ಮೂಲಭೂತವಾದದೊಳಗೆ ಅಡಗಿರುವ ಜಾತೀಯತೆಯಲ್ಲ ಯಾವುದೋ ಹಿಂದಿನ ದಿನಗಳ ಸಮಾಜವಲ್ಲ ಇವತ್ತಿನ ಸಮಾಜದ ಚಿತ್ರಣ.

ನಟನೆ ಚೆಂದಿದೆ, ಹಾಡುಗಳು ಚೆಂದಿವೆ, ಶಾಲೆಯಲ್ಲಿ ನಡೆಯುವ ಒಂದೇ ಒಂದು ಪುಟ್ಟ ಫೈಟು ನಗಿಸುವಷ್ಟು ಆಕರ್ಷಕವಾಗಿದೆ, ಇಷ್ಟೆಲ್ಲ ಸೊಗಸಿನ ಸಂಗಮದ ಚಿತ್ರ ಕೊನೆಯಲ್ಲುಳಿಸುವುದು ಗಾಢ ವಿಷಾದವನ್ನು... 

ಸಿನಿಮಾದಲ್ಲೂ ಕೊನೆಗೊಂದು ಆಶಾಭಾವ ಮೂಡಿಸುವ ಅಂತ್ಯವಿಲ್ಲ, ಅಷ್ಟರಮಟ್ಟಿಗೆ ನಿರ್ದೇಶಕರು ಕಟು ವಾಸ್ತವಕ್ಕೆ ಅಂಟಿಕೊಂಡಿದ್ದಾರೆ.‌ ನಿರಾಶೆಯ ಅಂತ್ಯ "ಮೇಲು ಜಾತಿಯ" ಜನರಿಗೆ 'ಹಂಗೇ ಆಗಬೇಕು ಅವ್ರಿಗೆ' ಅನ್ನೋ ಅಹಂಭಾವ ಹುಟ್ಟಿಸದಿದ್ದರೆ ನಮ್ಮ ಪುಣ್ಯ.

ನಗರಗಳ ಕಾರಣಕ್ಕೆ ಜೊತೆಯಲ್ಲಿ ಬದುಕುತ್ತಿದ್ದೀವಿ, ನಗರಗಳಲ್ಲಿರುವ ಹೋಟೆಲ್ಲುಗಳ ಕಾರಣಕ್ಕೆ ಜೊತೆಯಲ್ಲಿ ಕುಳಿತು ಊಟ ಮಾಡುತ್ತಿದ್ದೀವಿ ಅಷ್ಟೆ ಎಂಬರ್ಥದ ದೇವನೂರು ಮಹಾದೇವರ ಮಾತುಗಳು ಚಿತ್ರದುದ್ದಕ್ಕೂ ನೆನಪಾಗುತ್ತಲೇ ಇತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ