 |
| ಚಮಚದ ಕೊಕ್ಕುಗಳು |
ಡಾ. ಅಶೋಕ್. ಕೆ. ಆರ್ಹೋಗೋದೋ ಬೇಡ್ವೋ ಅಂದುಕೊಂಡೇ ಕಿತನಾಮಂಗಲದ ಕೆರೆಯ ಕಡೆಗೆ ಹೊರಟೆ. ಕಳೆದ ಬಾರಿ, ತಿಂಗಳಿಂದೆ ನೋಡಿಕೊಂಡು ಬರಲು ಹೋಗಿದ್ದಾಗ ಒಂದಷ್ಟು ಚಮಚದ ಕೊಕ್ಕುಗಳು (ಸ್ಪೂನ್ ಬಿಲ್) ಕಾಣಿಸಿದ್ದವು, ವರ್ಷಪೂರ್ತಿ ಇರುವ ಪಕ್ಷಿಗಳನ್ನು ಹೊರತುಪಡಿಸಿ. ಬಹಳಷ್ಟು ವರ್ಷಗಳಿಂದೆ ಇಲ್ಲಿ ನೂರಾರು ಸಂಖೈಯಲ್ಲಿ ಕರಿಕೊಕ್ಕಿನ ರೀವ (ಕಾಮನ್ ಟರ್ನ್)ಗಳನ್ನು ನೋಡಿದ್ದೆ. ಇನ್ನೊಮ್ಮೆ ನೀರು ಹೆಚ್ಚಿದ್ದ ಸಮಯದಲ್ಲಿ ನೂರಾರು ಸೂಜಿಬಾಲದ ಬಾತುಗಳನ್ನು ಕಂಡಿದ್ದೆ. ಆ ವರ್ಷ ಬಿಟ್ಟರೆ ಬೇರ್ಯಾವ ವರುಷವೂ ನಾ ಭೇಟಿ ಕೊಟ್ಟಾಗ ಅಷ್ಟು ಸಂಖ್ಯೆಯ ಸೂಜಿಬಾಲದ ಬಾತುಗಳು ಕಾಣಿಸಿರಲಿಲ್ಲ.
ಕಿತನಾಮಂಗಲ ಕೆರೆ ಬಹಳ ಅಂದರೆ ಬಹಳ ವಿಶಾಲವಾದುದು. ಆರೇಳು ವರ್ಷದಿಂದೀಚೆಗೆ ಒಂದೇ ಒಂದು ಬಾರಿ ಪೂರ್ತಿ ಕೆರೆ ತುಂಬಿದ್ದನ್ನು ನೋಡಿದ್ದೆ. ಇಲ್ಲವಾದರೆ ಹುಲ್ಲುಗಾವಲಿನಂತೆ ಕಾಣಿಸುತ್ತದೆ. ರಸ್ತೆಗೆ ಹೊಂದಿಕೊಂಡಂತೆ ಬಹಳಷ್ಟು ಒಣಗಿದ ಮರಗಳಿವೆ. ಒಂಥವಾ ದೆವ್ವದ ಸಿನಿಮಾದ ದೃಶ್ಯದಂತೆ ಗೋಚರವಾಗ್ತದೆ. ಜೆಸಿಬಿ ಬಳಸಿ ಕೆರೆಯ ಮಣ್ಣನ್ನು ಸುತ್ತಮುತ್ತಲಿನವರು ತೆಗೆದುಕೊಂಡು ಹೋಗಿರುವುದರಿಂದ ಬಹಳಷ್ಟು ಹಳ್ಳ ದಿಣ‌್ಣೆಗಳು ನಿರ್ಮಾಣವಾಗಿದೆ. ಮೆತ್ತಗಿನ ಮಣ್ಣಿನ ದಿಬ್ಬಗಳನ್ನು ಸಾಮಾನ್ಯ ಮಿಂಚುಳ್ಳಿ, ಕಳ್ಳಿಪೀರಗಳು ಗೂಡು ಕಟ್ಟಲು ಅಪರೂಪಕ್ಕೆ ಬಳಸಿಕೊಳ್ಳುತ್ತವೆ. ಈ ಸಲ ಹಸಿರು ಕಳ್ಳಿಪೀರಗಳು ಅಲ್ಲೊಂದು ಇಲ್ಲೊಂದು ಕಾಣಿಸಿದವಷ್ಟೇ.
 |
| ಬಣ್ಣದ ಕೊಕ್ಕರೆ |
 |
| ಹೆಜ್ಜಾರ್ಲೆ |
ದೊಡ್ಡ ಸಂಖೈಯಲ್ಲಿ ಹೆಜ್ಜಾರ್ಲೆಗಳು, ಬಣ್ಣದ ಕೊಕ್ಕರೆ (ಪೈಂಟೆಡ್ ಸ್ಟಾರ್ಕ್), ಚಮಚದ ಕೊಕ್ಕುಗಳಿದ್ದವು. ಬೂದು ಬಕ, ಬೆಳ್ಳಕ್ಕಿ, ಗೋವಕ್ಕಿ, ಮೆಟ್ಟುಗಾಲು ಪಕ್ಷಿಗಳು, ಗದ್ದೆ ಗೊರವ, ಒಂದೆರಡು ಸಣ‌್ಣ ಕರಿಪಟ್ಟೆ ಗೊರವ, ನೀರ್ಕಾಗೆ, ವರಟೆ, ಗದ್ದೆ ಮಿಂಚುಳ್ಳಿ, ಹಳದಿ ಕುಂಡೆಕುಸ್ಕ, ಕವಲುತೋಕೆ, ಬೇಲಿಚಟಕ, ಕಾಗೆ, ಚೋರೆಹಕ್ಕಿಗಳಿದ್ದವು. ಉಣ್ಣೆ ಕತ್ತಿನ ಕೊಕ್ಕರೆ, ಹದ್ದು, ಗರುಡಗಳ ಜೊತೆಗೆ ಇನ್ನೊಂದೆರಡು ಹೆಸರು ತಿಳಿಯದ ರ್ಯಾಪ್ಟರ್ ಗಳು ಅಷ್ಟೆತ್ತರದಲ್ಲಿ ಹಾರುತ್ತಿದ್ದವು. ಒಂದು ಜೋಡಿ ಹದ್ದುಗಳು ನೆಲದ ಮೇಲೆ ತೆಂಗಿನ ಸಿಪ್ಪೆಯಿಂದ ನಾರು ಬಿಡಿಸುತ್ತಿದ್ದವು! ಗೂಡು ಕಟ್ಟಲು ತೆಗೆದುಕೊಂಡು ಹೋಗುತ್ತಿದ್ದವೇನೋ.
 |
| ಹದ್ದು |
ಇಂದು ಸಿಕ್ಕ ವಿಶೇಷ ಪಕ್ಷಿಯೆಂದರೆ ದೂರದ (ಉತ್ತರ ದೃವದಿಂದಲೂ) ಪ್ರದೇಶದಿಂದ ಚಳಿಗಾಲ ಕಳೆಯಲು ಬಂದಿದ್ದ ಕಪ್ಪು ಬಾಲದ ಹಿನ್ನೀರಗೊರವಗಳು (ಬ್ಲ್ಯಾಕ್ ಟೈಲ್ಡ್ ಗಾಡ್ವಿಟ್). ಹೆಚ್ಚಿನ ಸಂಖೈಯಲ್ಲಿರಲಿಲ್ಲ. ಎಂಟೇ ಎಂಟು ಪಕ್ಷಿಗಳಿದ್ದವು. ಆಹಾರ ಇನ್ನೇನೂ ಮುಗಿದೇ ಹೋಗ್ತದೇನೋ ಎಂಬಂತೆ ಗಬಗಬನೆ ತಿನ್ನುವುದರಲ್ಲಿ ಮಗ್ನವಾಗಿದ್ದವು. ವರುಷವೊಂದಕ್ಕೆ ಇಪ್ಪತ್ತು ಸಾವಿರಕ್ಕೂ ಅಧಿಕ ಕಿಲೋಮೀಟರುಗಳನ್ನು ಇವು ಕ್ರಮಿಸುತ್ತವೆ.
 |
| ಕಪ್ಪು ಬಾಲದ ಹಿನ್ನೀರಗೊರವಗಳು (ಬ್ಲ್ಯಾಕ್ ಟೈಲ್ಡ್ ಗಾಡ್ವಿಟ್) |
೨೦೧೭ರ ಬೇಸಿಗೆಯಲ್ಲಿ ಮಂಡ್ಯದ ಸೂಳೆಕೆರೆಯಲ್ಲಿ ನೀರು ತುಂಬಾ ಅಂದರೆ ತುಂಬಾ ಕಡಿಮೆಯಿತ್ತು. ಆಗಿನ್ನೂ ಕೆರೆಗೆ ನಾಲೆಯ ಮೂಲಕ ನೀರು ಹರಿಸುತ್ತಿರಲಿಲ್ಲ. ಗಲೀಜು ನೀರು ಸಹ ಸೂಳೆಕೆರೆಗೆ ಬಿಡುತ್ತಿರಲಿಲ್ಲವೆನ್ನಿಸುತ್ತೆ. ನೂರಾರು ಸಂಖೈಯಲ್ಲಿ ಈ ಕಪ್ಪುಬಾಲದ ಹಿನ್ನೀರಗೊರವಗಳನ್ನು ಕಂಡಿದ್ದೆ. ನನ್ನಿರುವಿಕೆಗೆ ಅಷ್ಟೇನೂ ಭಯ ಪಡದೆ ತೀರ ಹತ್ತಿರಕ್ಕೇ ಬಂದಿದ್ದವು. ಅದರ ಮುಂದಿನ ವರ್ಷ ಗದ್ದೆಗಳಲ್ಲಿ ಅಲ್ಲೊಂದು ಇಲ್ಲೊಂದು ಕಂಡಿದ್ದೆ. ಕೆರೆಗೆ ನದಿ ನೀರನ್ನು ನಾಲೆಗಳ ಮೂಲಕ ತುಂಬಿಸುವುದರಿಂದ ಸುತ್ತಮುತ್ತಲಿನ ಮನುಷ್ಯರಿಗೆ ಖಂಡಿತ ಅನುಕೂಲಕರ (ಸದ್ಯಕ್ಕೆ; ಮುಂದೆ ನೀರು ಜಾಸ್ತಿಯಾಗಿದ್ದರಿಂದಲೇ ಭೂಮಿ ಹಾಳಾದರೆ ಅಚ್ಚರಿಯಿಲ್ಲ). ಕೆಲವು ಪಕ್ಷಿಗಳು ಹೆಚ್ಚಿನ ನೀರಿರುವ ಕೆರೆಯ ಅನುಕೂಲತೆ ಪಡೆದಿವೆ. ನೀರು ಕಡಿಮೆಯಿರುವ ಜೌಗು ಪ್ರದೇಶಗಳ ಅಭಾವದಿಂದ ಅವುಗಳನ್ನೇ ಅವಲಂಬಿಸಿರುವ ಪಕ್ಷಿಗಳಿಗೆ ತೊಂದರೆಯಾಗಿರಬಹುದೆಂದೇ ತೋರುತ್ತದೆ. ಬೆಂಗಳೂರು ಹಾಸನ ಹೆದ್ದಾರಿಯಿಂದಲೇ ಕಾಣುವ ಬೇಗೂರು ಕೆರೆಯಲ್ಲಿ ಬೇಸಿಗೆಯಷ್ಟೊತ್ತಿಗೆ ನೀರು ಕಡಿಮೆಯಾಗಿಬಿಡುತ್ತಿತ್ತು. ಆಗ ವಿಪರೀತವೆಂದರೆ ವಿಪರೀತ ಪಕ್ಷಿಗಳ ಕಲವರವಿರುತ್ತಿತ್ತು. ಈಗೆಲ್ಲ ಹೇಮಾವತಿ ನೀರನ್ನು ತುಂಬಿಸ್ತಾರೆ. ಪಕ್ಷಿಗಳೇ ಕಾಣಿಸುವುದಿಲ್ಲ. ಬಹಳಷ್ಟು ಕೆರೆಗಳೂ ಕೂಡ ಮನುಷ್ಯನ ಸೃಷ್ಟಿಯೇ ಆಗಿರುವುದರಿಂದ ನಮ್ಮ ಕೆಲಸಗಳಿಂದ ಕೆಲವು ಪಕ್ಷಿಗಳು ಅನುಕೂಲ ಪಡೆದುಕೊಳ್ಳುತ್ತವೆ, ಮತ್ತೊಂದಷ್ಟಕ್ಕೆ ಅನಾನುಕೂಲವಾಗ್ತದೆ ಎಂದಷ್ಟೇ ಅಂದುಕೊಳ್ಳಬೇಕು.
2/2/2025 ಬೆಳಿಗ್ಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ