ಜೂನ್ 4, 2026

ಸಿದ್ಧರಾಮಯ್ಯನವರೀಗ ಮಾಜಿ ಮುಖ್ಯಮಂತ್ರಿ.


ಡಾ. ಅಶೋಕ್.‌ ಕೆ. ಆರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಾ ಮತ‌ ಚಲಾಯಿಸಲು ಪ್ರಮುಖ ಕಾರಣ ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಲಿ ಎಂದು.

ಮಂಡ್ಯದ ಬಹಳಷ್ಟು ಒಕ್ಕಲಿಗ ಗೌಡರು 'ಈ ಕುರುಬ ಎರಡೆರಡು ಸಲ ಮುಖ್ಯಮಂತ್ರಿ ಆಗಿಬಿಟ್ನಲ್ಲ' ಅಂತ ಕೊರಗೋದನ್ನ ನೋಡೋದೇ ಒಂದು ಚೆಂದವಾಗಿತ್ತು! ಕರ್ನಾಟಕದ ಉಳಿದ ಮುಖ್ಯಮಂತ್ರಿಗಳು ಸ್ವರ್ಗವನ್ನೇ ಕರ್ನಾಟಕಕ್ಕೆ ಇಳಿಸಿ ಬಿಟ್ಟಿದ್ದವರಂತೆ ಸಿದ್ಧರಾಮಯ್ಯನವರನ್ನು ಶೋಷಕ ಜಾತಿಯ ಅನೇಕರು ಲೇವಡಿ ಮಾಡುತ್ತಿದ್ದುದಕ್ಕೆ ಜಾತಿ ಕಾರಣವೇ ಹೊರತು ಮತ್ತೇನಲ್ಲ. ಮೇಲ್ ಶೋಷಕ ಜಾತಿಯ ಮಾತಿನ ಶೈಲಿ "ಗತ್ತು" ಅನ್ನಿಸಿಕೊಂಡರೆ ಸಿದ್ಧರಾಮಯ್ಯನವರ ಮಾತಿನ ಶೈಲಿ "ದುರಹಂಕಾರ" ಅನ್ನಿಸಿಕೊಳ್ಳುತ್ತಿತ್ತು. ಇರಲಿ, ನಮ್ಮ ಸಮಾಜದಲ್ಲಿ ಜಾತಿ ಅನ್ನೋದು ನಮ್ಮ ಜೀವಿತಾವಧಿಯಲ್ಲಂತೂ ಅತ್ತಗಿತ್ತಗೂ ಅಲುಗಾಡುವುದಿಲ್ಲ. ಇನ್ನೆರಡಲ್ಲ ಹತ್ತು ತಲೆಮಾರು ಕಳೆಯುವಷ್ಟರಲ್ಲಾದರೂ ಅಲ್ಲಾಡಿದರೆ ಪುಣ್ಯ.
ಮುಖ್ಯಮಂತ್ರಿ ಗಾದಿ ಉಳಿಸಿಕೊಳ್ಳುವುದೇ ಮುಖ್ಯವಾಯಿತೋ ಅಥವಾ ಅಯ್ಯೋ ಇನ್ನೇನು ಕೆಲಸ ಮಾಡೋದು ಅಂತ ಸೋಮಾರಿಯಾದರೋ ಒಟ್ಟಿನಲ್ಲಿ ಸಿದ್ಧರಾಮಯ್ಯನವರ ಎರಡನೇ ಅವಧಿಯ ಸರಕಾರ ಸರಿಯಾಗಿ ಕೆಲಸ ಪ್ರಾರಂಭಿಸಲೇ ಇಲ್ಲ ಅಂತ ಅನ್ನಿಸಿದ್ದಂತೂ ಹೌದು.
ಕಾರಣಗಳೇನೇ ಇರಲಿ ಸಿದ್ಧರಾಮಯ್ಯನವರ ಮುಖ್ಯಮಂತ್ರಿಯ ಅವಧಿ ಕೊನೆಯಾಗಿದೆ. ಸಿದ್ಧರಾಮಯ್ಯನವರು ಇಲ್ಲದೆ ಕಾಂಗ್ರೆಸ್ ಮುಗಿದು ಹೋಗುತ್ತದೆ ಅಂತೆಲ್ಲ ವಾದ ನಡೆಯುತ್ತಿರುವುದು ಎಷ್ಟು ಸರಿ? ಸಿದ್ಧರಾಮಯ್ಯನವರು ಕಾಂಗ್ರೆಸ್ ಸೇರುವುದಕ್ಕೆ ಮುಂಚೆ ಕೂಡ ಕರ್ನಾಟಕದಲ್ಲಿ ಕಾಂಗ್ರೆಸ್ ಹಲವಾರು ಸಲ ಅಧಿಕಾರದಲ್ಲಿತ್ತು. 2013 ರಿಂದ 2018ರವರೆಗೆ ಮುಖ್ಯಮಂತ್ರಿ ಆದ ಮೇಲೆ ಕೂಡ ಕಾಂಗ್ರೆಸ್ ಸೋಲು ಅನುಭವಿಸಿತ್ತು. ಒಂದು ವರ್ಷದ ರಾಜಕೀಯಾಟಗಳ‌ ನಂತರ ನಡೆದ ಚುನಾವಣೆಯಲ್ಲೂ ಸೋತಿತು. 2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಕಾಂಗ್ರೆಸ್ನ ಶ್ರಮ ಎಷ್ಟು ಕಾರಣವೋ ಬಿಜೆಪಿಯ ಐದು ವರ್ಷದ ಆಡಳಿತ ಕೂಡ ಕಾರಣವಾಗಿತ್ತು. ಈಗ ಮತ್ತೆ ಐದು ವರ್ಷವೂ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರೂ ಮತ್ತೆ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತಿತ್ತು ಅಂತ ಹೇಳಲು ಸಾಧ್ಯವೇ?
ಸಿದ್ಧರಾಮಯ್ಯನವರು ಒಂದಷ್ಟು ಕೆಲಸ ಮಾಡಿದ್ರು, ಇನ್ನೂ ಎಷ್ಟೋ ಕೆಲಸಗಳನ್ನು ಮಾಡಬಹುದಿತ್ತು, ಮಾಡಲಿಲ್ಲ. ಬಹಳಷ್ಟು ಕೆಲಸಗಳು ಅವರ ಮಾತಿನಲ್ಲಿ ಉಳಿದುಹೋಯಿತೇ ಹೊರತು ಕಾರ್ಯರೂಪಕ್ಕೆ ಬರಲೇ ಇಲ್ಲ.
ಮೇಲ್ ಶೋಷಕ ಜಾತಿಯ ಎಷ್ಟೋ ಜನ ಕುರುಬನೊಬ್ಬನನ್ನು ಅಯ್ಯ ಅನ್ನಬೇಕಲ್ಲ ಅನ್ನೋ ಸಂಕಟದಿಂದ ಸಿದ್ರಾಮ ಅನ್ನೋರು, ಮುಸ್ಲಿಮರಿಗೆ ಹೇಳಿಕೊಳ್ಳುವಂತದ್ದೇನೂ ಮಾಡದೇ ಇದ್ದರೂ ಸಿದ್ರಾಮುಲ್ಲಾ ಖಾನ್ ಅಂತ ಕುಹಕದಿಂದ ಕರೆಯುತ್ತಿದ್ದಿದ್ದು ಧರ್ಮದ್ವೇಷಿಗಳು. ಕರೀಲಿ ಬಿಡಿ ಅದ್ರಲ್ಲೇನಿದೆ ಅಂತ ಎಂದಿನ ಶೈಲಿಯಲ್ಲಿ ಹೇಳುತ್ತಿದ್ದ ಸಿದ್ಧರಾಮಯ್ಯನವರು ಕಡೇ ಪಕ್ಷ ಮಾತಿನಲ್ಲಾದರೂ ಕೋಮುವಾದಿಗಳಿಗೆ ಜಾತಿವಾದಿಗಳಿಗೆ ಒಂದಷ್ಟು ಹೊಟ್ಟೆ ಉರಿಸುತ್ತಿದ್ದರು ಅನ್ನುವುದಂತೂ ಸತ್ಯ!
ಮಾಧ್ಯಮಗಳು ಎಷ್ಟೇ ಉರಿದು ಮುಕ್ಕಿದರೂ ಮಾಧ್ಯಮಗಳ ಮೈಕುಗಳಿಗೆ ಬೆನ್ನು ತೋರಿಸಿ ನಡೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡದೆ ಹೋಗಲಿಲ್ಲ ಅನ್ನುವುದು ಕೂಡ ಉತ್ತಮ ಗುಣವಲ್ಲವೇ ಅಂತ ಬರೆಯಬೇಕಾದ ಕೆಟ್ಟ ದಿನಗಳಲ್ಲಿ ನಾವಿದ್ದೇವೆ!
ಹಂಗಾಗಿ ಈ ಫೋಟೋ...
ಫೋಟೋ ಮೂಲ: star of mysore

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ