ಡಾ ಅಶೋಕ್ ಕೆ ಆರ್
ಬಿಸಿಲೊತ್ತಿನಲ್ಲಿ ನಮ್ಮ ಮನೆಯ ಕಾಂಪೌಂಡಿನೊಳಗೆ ಅಪರಿಚಿತರು ನೆರಳು ಅರಸಿ ಬಂದರೆ ಮುನಿದು ರೇಗುವ ನಾವು ಅದೇ ತರಹ ಪಕ್ಕದ ಮನೆಯವರು ಯಾರ ಮೇಲೋ ರೇಗುತ್ತಿದ್ದರೆ "ಐದು ನಿಮಿಷ ನೆರಳಲ್ಲಿ ನಿಂತು ಹೋದರೆ ಇವರ ಗಂಟೇನು ಹೋಗ್ತದೆ" ಅಂತ ಪಕ್ಕದ ಮನೆಯವರ ಬಗ್ಗೆ ಗೊಣಗಿಕೊಳ್ಳುತ್ತೇವೆ!
ಈ ಯೋಚನೆ ಪದೇ ಪದೇ ತಲೆಯಲ್ಲಿ ಬಂದಿದ್ದು Hyeonseo lee (co author - David john) ಬರೆದಿರುವ The girl with seven names: A north korean defectors story ಓದುವಾಗ. ವಲಸೆಯನ್ನು ನಿಯಂತ್ರಿಸುವ ಕೆಲಸ ಎಷ್ಟೇ ನಡೆದರೂ ವಲಸೆಯನ್ನು ನೂರು ಪ್ರತಿಶತಃ ನಿಲ್ಲಿಸುವುದು ಯಾರ ಕೈಲೂ ಸಾಧ್ಯವಿಲ್ಲ. ಕುತೂಹಲಕ್ಕೆ, ಒಂದು ದಿನವೋ ಅಥವಾ ಒಂದು ವಾರದ ಮಟ್ಟಿಗೆಂದೋ ಸರ್ವಾಧಿಕಾರದ ಉತ್ತರ ಕೊರಿಯಾದಿಂದ ಚೀನಾಕ್ಕೆ ಭೇಟಿ ಕೊಡುವ Hyeonseo lee ಯ ಜೀವನಗಾಥೆಯಿದು. ಎಷ್ಟೋ ಕಲ್ಪಿತ ಕತೆಗಳಿಗಿಂತ ನಿಜಜೀವನದ ಘಟನೆಗಳೇ ರೋಚಕವಾಗಿರ್ತವೆ ಎನ್ನುವುದಕ್ಕೂ ಈ ಪುಸ್ತಕ ಒಂದು ಉದಾಹರಣೆಯಂತಿದೆ.
ಸರ್ವಾಧಿಕಾರದ ಆಡಳಿತ ಹೇಗಿರುತ್ತದೆ, ಜನರ ಮನಸ್ಸನ್ನು ಭಾವನೆಗಳನ್ನು ಹೇಗೆಲ್ಲಾ ನಿಯಂತ್ರಿಸುತ್ತಾರೆ, ಜನರನ್ನೇ ಒಬ್ಬರ ಮೇಲೊಬ್ಬರನ್ನು ಛೂ ಬಿಟ್ಟು ಹೇಗೆ ತಮ್ಮಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎನ್ನುವಂಶ ವಿವರವಾಗಿದೆ. ಉತ್ತರ ಕೊರಿಯಾ ಬಿಟ್ಟು ಹೊರಗೇ ಬರದವರಿಗೆ, ಸರಕಾರಿ ಮಾಹಿತಿಯನ್ನು ಬಿಟ್ಟು ಬೇರೇನನ್ನೂ ಕದ್ದು ಮುಚ್ಚಾದರೂ ತಿಳಿಯದೆ ಹೋದವರಿಗೆ ಇಡೀ ವಿಶ್ವದಲ್ಲಿ ಉತ್ತರ ಕೊರಿಯಾ ದೇಶವೇ ಸರ್ವಶ್ರೇಷ್ಠ ದೇಶ! ಇಂತಿರುವ ದೇಶದಲ್ಲಿರುವ ಶ್ರೇಣೀಕರಣ ವ್ಯವಸ್ಥೆಗೆ ಹುಟ್ಟು ಹಾಗು ಕುಟುಂಬದ ಹಿನ್ನೆಲೆ ಪ್ರಮುಖ ಕಾರಣ. ಆಡಳಿತಕ್ಕೆ ಎದುರಾಗಿನಿಂತು ಶ್ರೇಣೀಕರಣ ವ್ಯವಸ್ಥೆಯಲ್ಲಿ ಕೆಳಜಾರಬಹುದೇ ಹೊರತು ಮೇಲೇರುವುದು ಕಷ್ಟದ ಕೆಲಸ. ದೇಶದ ಕಾನೂನಿಗೆ ವಿರುದ್ಧವಾಗಿ ನಿಂತೂ ಜಾರದೆ ಉಳಿಯಲು ಭ್ರಷ್ಟಾಚಾರ ಸಹಾಯಕ. Shantaram ಕಾದಂಬರಿಯಲ್ಲಿ ಬರುವ Problem with corruption is it works fine ಎಂಬ ಮಾತುಗಳು ಎಲ್ಲಾ ದೇಶಕ್ಕೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ.
ಮಧ್ಯಮ ಶ್ರೇಣಿಯಲ್ಲೇ ಇದ್ದ Hyeonseo Lee ಗೆ ಉತ್ತರ ಕೊರಿಯಾ ತೊರೆಯಲು ಹೆಚ್ಚಿನ ಕಾರಣಗಳೇನೂ ಇರಲಿಲ್ಲ. ಕದ್ದು ಮುಖ್ಯ ನೋಡಿದ ಟಿವಿಯ ಕಾರ್ಯಕ್ರಮಗಳಲ್ಲಿ ತೋರಿದ ಪ್ರಪಂಚವನ್ನೊಮ್ಮೆ ಕಾಣಬೇಕೆಂಬ ವಯೋಸಹಜ ಕುತೂಹಲ (ಆ ಕುತೂಹಲ ಕೂಡ ಉತ್ತರ ಕೊರಿಯಾದಲ್ಲಿ ಸಹಜವಲ್ಲ) ಹೀಗೆ ಒಮ್ಮೆ ಚೀನಾ ದೇಶ ಪ್ರವೇಶಿಸಿದ ಲೇಖಕಿಗೆ ಮತ್ತೆ ಪರ್ಮನೆಂಟಾಗಿ ಉತ್ತರ ಕೊರಿಯಾಗೆ ಹಿಂದಿರುಗುವ ಅವಕಾಶವೂ ಸಿಗುವುದಿಲ್ಲ, ಹಿಂದಿರುಗುವ ಆಸೆಯೂ ಉಳಿಯುವುದಿಲ್ಲ. ಚೀನಾದಲ್ಲಿ ಅಕ್ರಮವಾಸಿಯಾಗಿ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ತೆರಳುತ್ತಾ ನಕಲಿ ಐಡಿಗಳನ್ನು ಪಡೆದು ಅಲ್ಲಿಲ್ಲಿ ಕೆಲಸ ಮಾಡುತ್ತಾ ಶತ್ರು ದೇಶವಾದ ದಕ್ಷಿಣ ಕೊರಿಯಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದು ತನ್ನ ಅಮ್ಮ ಮತ್ತು ತಮ್ಮನನ್ನು ಕೂಡ ಉತ್ತರ ಕೊರಿಯಾದಿಂದ ಪಾರು ಮಾಡಿ ದಕ್ಷಿಣ ಕೊರಿಯಾಗೆ ಕರೆಸಿಕೊಳ್ಳಬೇಕೆಂದು ನಿಶ್ಚಯಿಸುತ್ತಾಳೆ. ಲೇಖಕಿಯ ಆಸೆ ಈಡೇರುತ್ತದಾ ಇಲ್ಲವಾ ಎಂಬುದೇ ಪುಸ್ತಕದ ಮೂಲ ತಿರುಳು.
ಉತ್ತರ ಕೊರಿಯಾ ಶತ್ರು ದೇಶವಾದರೂ ಅಲ್ಲಿಂದ ತನ್ನಲ್ಲಿಗೆ ವಲಸೆ ಬರುವ ಜನರನ್ನು ದೂರ ತಳ್ಳದೆ ತನ್ನ ದೇಶದ ಪ್ರಜೆಗಳನ್ನಾಗಿಸುವ ದಕ್ಷಿಣ ಕೊರಿಯಾದ ನಡೆ ಶ್ಲಾಘನೀಯವೇ ಹೌದು. ದಿನದ ಸುದ್ದಿಗಳನ್ನು ಓದುವಾಗ ಚೀನಾದ ಪೂರ್ಣ ಬೆಂಬಲ ಉತ್ತರ ಕೊರಿಯಾಗಿದೆ ಎಂದು ಅನ್ನಿಸುತ್ತದೆ. ಆದರೆ ವಾಸ್ತವ ಆ ರೀತಿಯಿಲ್ಲ ಎನ್ನುವಂತಹ ಘಟನೆಗಳು ಪುಸ್ತಕದಲ್ಲಿ ದಾಖಲಾಗಿವೆ.
ವಲಸೆ ನಿಯಂತ್ರಿಸುವ ಸಲುವಾಗಿ ಬಿಗಿ ಕಾನೂನು ಇರುವ ದೇಶಗಳಲ್ಲೂ ಅಕ್ರಮವಾಗಿ ದೇಶದೊಳಗೆ ನುಸುಳುವವರಿಗೆ ಸಹಾಯ ಮಾಡುವ ಮಧ್ಯವರ್ತಿಗಳು ಎಲ್ಲಾ ದೇಶಗಳಲ್ಲೂ ಇದ್ದೇ ಇರುತ್ತಾರೆ. ನಮ್ಮ ಇಂಡಿಯಾದಲ್ಲೂ ಇದ್ದೇ ಇರುತ್ತಾರೆ. ದುಡ್ಡು ಪಡೆದು ವಿದೇಶಿಯರಿಗೆ ನಕಲಿ ದಾಖಲೆ ಮಾಡಿಕೊಡುವ ನಮ್ಮ ದೇಶದ ಮಧ್ಯವರ್ತಿಗಳ ಬಗ್ಗೆ ಕೋಪ ಸಿಟ್ಟು ಬರುವುದು ಸಹಜವೇ. ಪುಸ್ತಕ ಓದುವಾಗ ಅಲ್ಲಿ ಬರುವ ಮಧ್ಯವರ್ತಿಗಳ ಬಗ್ಗೆ ಈ ರೀತಿ ಕೋಪ ಸಿಟ್ಟಿನ ಭಾವನೆ ಬರದೆ ಹೆಂಗೋ ಒಂದು ಆ ಹೆಣ್ಮಗ ದಡ ಸೇರ್ಕಂಡ್ರೆ ಸಾಕು ಅಂತ ಹಾರೈಸುತ್ತಿರುತ್ತೀವಿ.
ಉದಾರ ಮನೋಭಾವ ಪಕ್ಕದ ಮನೆಯವರಲ್ಲಿ ಇರಬೇಕು ನಮ್ಮಲ್ಲಲ್ಲ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ