ಜೂನ್ 18, 2026

ಕರಾವಳಿಯ ಕೋಮು ಗಲಭೆಗಳಲ್ಲಿ ಸತ್ತವರ ಕುಟುಂಬಗಳ ಕಣ್ಣೀರ ಕತೆಗಳು.


 ಡಾ. ಅಶೋಕ್ ಕೆ ಆರ್

ನಾನು ಕನ್ನಡದಲ್ಲಿ ಓದಿದ ವಿಶಿಷ್ಟ ಪುಸ್ತಕಗಳಲ್ಲಿ "ಕರಾವಳಿಯ ರಕ್ತ - ಕಣ್ಣೀರು" ಪ್ರಮುಖ ಸ್ಥಾನವನ್ನೇ ಪಡೆಯುತ್ತದೆ.

ಮತಾಂಧರ ದ್ವೇಷದಿಂದ, ಧಾರ್ಮಿಕ ದ್ವೇಷದ ಕಾರಣದಿಂದ ಕೊಲೆಯೊಂದು ನಡೆದರೆ ಮುಖ್ಯವಾಹಿನಿ ವಾಹಿನಿಗಳಲ್ಲಿ ಸುದ್ದಿಯಾಗುತ್ತದೆ. ಕೊಲೆಯಾದವರ ಸಾಮಾಜಿಕ ಸ್ಥಾನಮಾನ, ರಾಜಕೀಯ ಹಿನ್ನೆಲೆ, ಅಪರಾಧಗಳ ಹಿನ್ನೆಲೆಯ ಆಧಾರದ ಮೇಲೆ ಸುದ್ದಿ ಮೊದಲ ಪುಟದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತದೋ ಅಥವಾ ಎರಡು ಮೂರನೇ ಪುಟಗಳ ಸ್ಥಳೀಯ ಆವೃತ್ತಿಯಲ್ಲಿ ಪುಟ್ಟ ಕಾಲಂನಲ್ಲಿ ಪ್ರಕಟವಾಗುತ್ತದೋ ಎನ್ನುವುದು ನಿರ್ಧಾರವಾಗುತ್ತದೆ. ಟಿವಿಯಲ್ಲಿ ಹೆಚ್ಚು ಸಮಯ ಸುದ್ದಿಯಾಗಲು ಸಹ ಇದೇ ಮಾನದಂಡಗಳು ಅನ್ವಯ. ರಾಜಕೀಯ ಪಕ್ಷಗಳು ನೇರವಾಗಿ ಅಖಾಡಕ್ಕೆ ಧುಮುಕಿದರೆ ಮತ್ತೊಂದಷ್ಟು ದಿನಗಳ ಕಾಲ ಸುದ್ದಿಯ ಪ್ರಸಾರವಾಗುತ್ತದೆ. 

ಇತ್ತ ಕಡೆ ಸಾಮಾಜಿಕ ಮಾಧ್ಯಮಗಳ ಪರಿಸ್ಥಿತಿಯೂ ಭಿನ್ನವೇನಲ್ಲ. ನಮ್ಮ ನಮ್ಮ ಸೈದ್ಧಾಂತಿಕತೆಯ ಅಳತೆಗೋಲಿನಲ್ಲಿ ನಡೆದ ಕೊಲೆಯನ್ನು ವಿಶ್ಲೇಷಿಸುತ್ತ, ದುಃಖ ವ್ಯಕ್ತಪಡಿಸುತ್ತ, ಆಕ್ರೋಶ ಹೊರಹಾಕುತ್ತ ಒಂದಷ್ಟು ಸಾಲುಗಳನ್ನು ಬರೆದು ಬಿಸಾಕುತ್ತೇವೆ. ಎರಡು ದಿನ, ಬೇಡ ನಾಲ್ಕು ದಿನದ ನಂತರ ಇನ್ನೊಂದ್ಯಾವುದಾದರೂ ಆಸಕ್ತಿ ಮೂಡಿಸುವ ಘಟನೆ ನಡೆದರೆ ಬೆರಳಿಗಂಟಿದ ರಕ್ತವನ್ನು ತೊಡೆದುಕೊಂಡು ಬೇರೆ ಪದಗಳನ್ನು ಟೈಪಿಸುವುದರಲ್ಲಿ ಬ್ಯುಸಿಯಾಗಿ ಹೋಗುತ್ತೇವೆ. ಸತ್ತವರ ಮನೆಯ ಸಂಕಟ ಆ ಮನೆಯವರ ಖಾಸಗಿ ಸ್ವತ್ತಾಗಷ್ಟೇ ಉಳಿದುಹೋಗುತ್ತದೆ.

ಇಂತಿಪ್ಪ ಕಾಲದಲ್ಲಿ ವೃತ್ತಿಯಿಂದ ಪತ್ರಕರ್ತರಾದ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಇರ್ಷಾದ್‌ ಉಪ್ಪಿನಂಗಡಿ ಕೊಲೆಗಳ ಸುದ್ದಿಯನ್ನು ಪ್ರಕಟಿಸುವುದಕ್ಕಷ್ಟೇ ಪುಸ್ತಕವನ್ನು ಸೀಮಿತವಾಗಿಸಿಲ್ಲ. ತಮ್ಮ ಊರಿನಲ್ಲಿ "ಧರ್ಮದ" ಹೆಸರಿನಲ್ಲಿ, ಹಿಂದಿನ ಕೊಲೆಗೆ "ಪ್ರತೀಕಾರದ" ರೂಪದಲ್ಲಿ ನಡೆಯುತ್ತಿರುವ ಇಷ್ಟೆಲ್ಲ ಕೊಲೆಗಳು ಸತ್ತವರ ಮನೆಗಳಲ್ಲಿ ಉಳಿಸಿಹೋಗಿರುವ ಸಂಕಟಗಳೇನು ಎನ್ನುವುದನ್ನು ಅರಸರಾಲಂಭಿಸಿದ್ದಾರೆ. 

ಹಿಂದೂ ಮತಾಂಧರಿಂದ ಸತ್ತ ಮುಸ್ಲಿಮರ ಮನೆಗೆ, ಮುಸ್ಲಿಂ ಮತಾಂಧರಿಂದ ಸತ್ತ ಹಿಂದೂಗಳ ಮನೆಗೆ ಭೇಟಿ ಕೊಟ್ಟು ಮಾತನಾಡಿದ್ದಾರೆ. ಸತ್ತವರ ಮನೆಯ ಸಂಕಟಗಳಿಗೆ ಹಿಂದೂ ಮುಸ್ಲಿಂ ಎಂಬ ಭೇದವಿರಲು ಸಾಧ್ಯವಿಲ್ಲವಲ್ಲ. 

ಲೇಖಕರೇ ಹೇಳುವಂತೆ "ಕನಿಷ್ಠ ಪಕ್ಷ ಸಮಾಜದ ಆತ್ಮಸಾಕ್ಷಿಯನ್ನು ಕೆಣಕಿ, ಸಾಮರಸ್ಯದ ಕಡೆಗೆ ಹೆಜ್ಜೆ ಇಡುವಂತೆ ಪ್ರೇರೇಪಿಸುವಂತಾಗಲಿ" ಎಂಬ ಆಶಯ ಈ ಪುಸ್ತಕದ್ದು. ಸಾಮರಸ್ಯದ ಕಡೆಗೆ ಹೆಜ್ಜೆ ಇಡಬೇಕಾದಂತಹ ಮತಾಂಧರು ಇಂತಹ ಪುಸ್ತಕವನ್ನು ಓದುತ್ತಾರಾ ಅನ್ನೋ ಅನುಮಾನಗಳೇನೇ ಇದ್ದರೂ ಪ್ರಯತ್ನ ನಿಲ್ಲಬಾರದಲ್ಲ.

ನಾನೀ ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಎರಡನೇ ಮುದ್ರಣ ಕಂಡಿದೆ.

ಕೆಲವು ಪ್ರಕರಣಗಳಲ್ಲಿ ಮುಸ್ಲಿಂ ಅಪರಾಧಿಗಳ ಹೆಸರು, ಹಿಂದೂ ಅಪರಾಧಿಗಳ ಹೆಸರು ಬರೆದಿದ್ದಾರೆ ಆದರೆ ಕೆಲವದರಲ್ಲಿ ಹಿಂದೂ ಅಥವಾ ಮುಸ್ಲಿಂ ಅಪರಾಧಿಗಳ ಹೆಸರನ್ನು ಬರೆದಿಲ್ಲದಿರುವುದಕ್ಕೆ ಕಾರಣವೇನೆಂದು ತಿಳಿಯಲಿಲ್ಲ. ಸತ್ತವರ ಅಥವಾ ಅನುಮತಿ ಕೊಟ್ಟ ಕುಟುಂಬದವರ ಫೋಟೋಗಳು ಇದ್ದಿದ್ದರೆ ಪುಸ್ತಕದ ಪರಿಣಾಮ ಮತ್ತಷ್ಟು ಹೆಚ್ಚುತ್ತಿತ್ತು ಅನ್ನಿಸಿತು.

(ಒಂದಷ್ಟು ಪ್ರಕರಣಗಳಲ್ಲಿ ಅಪ್ರಾಪ್ತ ಅಪರಾಧಿಗಳಿರುವ ಕಾರಣದಿಂದ ಮತ್ತು ಕೆಲವೊಂದು ಪ್ರಕರಣಗಳಲ್ಲಿ ಕೋರ್ಟಿನಲ್ಲಿ ಬಿಡುಗಡೆ ಆಗಿರುವುದರಿಂದ ಎಲ್ಲರ ಹೆಸರುಗಳನ್ನು ಬರೆಯಲಾಗಿಲ್ಲ ಎಂದು ಲೇಖಕರು ತಿಳಿಸಿದರು)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ