ಜೂನ್ 19, 2026

ಇಥೆನಾಲ್‌ ಮಿಶ್ರಿತ ಪೆಟ್ರೋಲಿನ ಸುತ್ತ...


ಡಾ. ಅಶೋಕ್.‌ ಕೆ. ಆರ್.
ಇ – 85 ಪೆಟ್ರೋಲ್‌ ಅನ್ನು ದೆಹಲಿಯಲ್ಲಿ ಅಧಿಕೃತವಾಗಿ ಘೋಷಿಸಿದ ಮೇಲಷ್ಟೇ ಇದೇನಿದು ಇ - 85, ಏನಿದು ಇ - 20 ಪೆಟ್ರೋಲ್‌ ಅಂತ ಹುಡುಕಲಾರಂಭಿಸಿದೆ. ಪೆಟ್ರೋಲಿನಲ್ಲಿ ಎಷ್ಟು ಪ್ರಮಾಣದ ಎಥೆನಾಲ್‌ ಇಂಧನವನ್ನು ಬೆರೆಸುತ್ತೇವೆ ಎನ್ನುವುದರ ಮೇಲೆ "ಇ"ಯ ಪ್ರಮಾಣ ನಿರ್ಧರಿತವಾಗುತ್ತೆ. ಹದಿನೈದು ಪರ್ಸೆಂಟ್‌ ಪೆಟ್ರೋಲಿಗೆ ಎಂಭತ್ತೈದು ಪರ್ಸೆಂಟ್‌ ಎಥೆನಾಲ್‌ ಬೆರೆಸಿದರೆ ಅದು ಇ-85. ಕಳೆದೊಂದು ವರ್ಷದಿಂದ ನಮ್ಮೆಲ್ಲ ಪೆಟ್ರೋಲು ಬಂಕುಗಳಲ್ಲಿ ಇ-20 ಪೆಟ್ರೋಲ್‌ ಮಾತ್ರ ಲಭ್ಯವಿದೆ. ಇದಕ್ಕೂ ಮೊದಲು ಇ-10 ಪೆಟ್ರೋಲ್‌ ಅಥವಾ ಶುದ್ಧ ಪೆಟ್ರೋಲ್‌ ಲಭ್ಯವಿರುತ್ತಿತ್ತು. ಅಂದರೆ ನಾವೀಗ ಬಳಸುತ್ತಿರುವ ಪೆಟ್ರೋಲಲ್ಲಿ ಇಪ್ಪತ್ತು ಪ್ರತಿಶತಃ ಇಥೆನಾಲ್‌ ಇದೆ.

ಇಥೆನಾಲ್‌ ಅನ್ನು ಸಸ್ಯಜನ್ಯ ಮೂಲಗಳಿಂದ ದೇಶದೊಳಗೇ ಉತ್ಪಾದಿಸುವುದರಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ಪೆಟ್ರೋಲಿನ ಮೇಲೆ ಅವಲಂಬನೆ ಕಡಿಮೆಯಾಗ್ತದೆ. ಅಷ್ಟರಮಟ್ಟಿಗೆ ಹಣದ ಹೊರಹರಿಯುವಿಕೆ ತಪ್ಪುತ್ತದೆ. ಜೊತೆಗೆ ಇಥೆನಾಲ್‌ ಮಿಶ್ರಿತ ಪೆಟ್ರೋಲ್‌ ಉಂಟುಮಾಡುವ ಮಾಲಿನ್ಯದ ಪ್ರಮಾಣವೂ ಕಡಿಮೆ ಇರುತ್ತದಂತೆ. ಆ ಲೆಕ್ಕಕ್ಕೆ ಇಥೆನಾಲ್‌ ಇಲ್ಲದ ಇ-0 ಪೆಟ್ರೋಲಿಗಿಂತ ಇಥೆನಾಲ್‌ ಬೆರೆಸಿದ ಇ-20 ಪೆಟ್ರೋಲಿನ ಬೆಲೆ ಕಡಿಮೆಯಿರಬೇಕಿತ್ತು. ಅದಾಗಿಲ್ಲ. ಲಾಭ ಉಳಿಸಿಕೊಳ್ಳುವುದು ಎಷ್ಟು ಕಾರಣವೋ ಇಥೆನಾಲ್‌ ತಯಾರಿಕೆ ಕೂಡ ಕಡಿಮೆ ಖರ್ಚಿನದ್ದಲ್ಲವಾದ್ದರಿಂದ ವಿದೇಶಿ ಪೆಟ್ರೋಲಿಗೆ ಇಪ್ಪತ್ತು ಪ್ರತಿಶತಃ ಸ್ವದೇಶಿ ಇಥೆನಾಲ್‌ ಬೆರೆಸಿದ ಮೇಲೂ ಬೆಲೆ ಅಷ್ಟೇ ಉಳಿದಿದೆ. ದೆಹಲಿಯಲ್ಲಿ ಇ-85 ಪೆಟ್ರೋಲಿನ ಬೆಲೆ ಮಾತ್ರ ಮಾಮೂಲಿ ಪೆಟ್ರೋಲಿಗಿಂತ ಇಪ್ಪತ್ತು ರುಪಾಯಿಯಷ್ಟು ಕಡಿಮೆಯಿರುತ್ತದೆಂದು ಘೋಷಿಸಿದ್ದಾರೆ.

ಒಳ್ಳೇದೇ ಆಯ್ತಲ್ಲ, ಮಾಲಿನ್ಯ ಕಡಿಮೆಯಾಯಿತು, ವಿದೇಶಿ ವಿನಿಮಯದಲ್ಲಿ ಉಳಿತಾಯವಾಯಿತು. ಇ-85 ಅಥವಾ ಮುಂದಿನ ದಿನಗಳಲ್ಲಿ ಬರುವ ಶುದ್ಧ ಇಥೆನಾಲಿನ ಪೆಟ್ರೋಲ್‌ ಚೂರೂ ಇಲ್ಲದ ಇ-100 ಇಂಧನದ ಬೆಲೆ ಕೂಡ ಪೆಟ್ರೋಲ್‌ ಬೆಲೆಗೆ ಸಿಕ್ಕರೆ ನಮಗೂ ಲಾಭವೇ ಅಲ್ಲವೇ ಎಂದು ಯೋಚಿಸಿದೆ. ವಿಷಯ ಅಷ್ಟು ಸರಳವಾಗಿಲ್ಲ ಎಂದು ಅರಿವಾಗಿದ್ದು ನನ್ನ ಸ್ವಂತ ಗಾಡಿಗಳಲ್ಲಾದ ಬದಲಾವಣೆಗಳನ್ನು ಗಮನಿಸಿದ ಮೇಲೆ.

ಸಾಮಾನ್ಯವಾಗಿ ಕಾರನ್ನು ಹೆದ್ದಾರಿಗಳಲ್ಲೇ ಹೆಚ್ಚು ಬಳಸುವುದು ನಾನು. ಲೀಟರಿಗೆ ಇಪ್ಪತ್ತರ ಮೇಲೆ ಮೈಲೇಜು ಕೊಡುತ್ತಿತ್ತು. ಕಳೆದೊಂದು ವರ್ಷದಿಂದ ಅದೇ ರಸ್ತೆಗಳಲ್ಲಿ ಲೀಟರಿಗೆ ಹದಿನೇಳು ಹದಿನೆಂಟರಷ್ಟು ಮಾತ್ರ ಓಡುತ್ತಿದ್ದೆ. ಮಾರುತಿ ಸುಝಕಿಯ ಗಾಡಿಗಳು ಹಳತಾದರೂ ಮೈಲೇಜು ಅಷ್ಟೇನೂ ಕಡಿಮೆಯಾಗುವುದಿಲ್ಲ ಎಂದು ಗೊತ್ತಿತ್ತು. ಆದರೂ ಗಾಡಿಗೊಂದಷ್ಟು ವಯಸ್ಸಾಯ್ತಲ್ಲ ಜಾಸ್ತಿ ಪೆಟ್ರೋಲು ಕುಡಿಯುತ್ತಿರಬೇಕು ಎಂದುಕೊಂಡೆ. ಜೊತೆಗೆ ಇತ್ತೀಚೆಗೆ ಮೊದಲಿಗಿಂತ ಇಂಜಿನ್‌ ಹೆಚ್ಚು ಸದ್ದು ಮಾಡುತ್ತಿದ್ದುದನ್ನೂ ಗಮನಿಸಿದ್ದೆ. ಅಷ್ಟೇನೂ ಹಳತಲ್ಲದ ಬೈಕು ಕೂಡ ಮುಂಚಿಗಿಂತ ಹೆಚ್ಚು ಪೆಟ್ರೋಲ್‌ ಕುಡಿಯಲಾರಂಭಿಸಿತ್ತು. ನಗರದೊಳಗೇ ಐವತ್ತರ ಮೇಲೆ ಮೈಲೇಜು ಕೊಡುತ್ತಿದ್ದ ಬೈಕು ನಲವತ್ತೈದು ಕಿಲೋಮೀಟರುಗಳ ಅಂಕಿಯನ್ನು ತಲುಪುತ್ತಿರಲಿಲ್ಲ. ಜೊತೆಗೆ ಬೈಕಿನ ವೈಬ್ರೇಷನ್‌ ಕೂಡ ಹೆಚ್ಚಾಗಿತ್ತು. ಏನೋ ಈ ಬೈಕೇ ಹಿಂಗಿರಬೇಕೇನೋ ಅಂತಂದುಕೊಂಡಿದ್ದೆ.

ಇವೆರಡೂ ಸಮಸ್ಯೆಗಳಿಗೆ ಉಳಿದ ಕಾರಣಗಳ ಜೊತೆಗೆ ಇ-20 ಪೆಟ್ರೋಲ್‌ ಕೂಡ ಕಾರಣ ಅಂತ ಇಥೆನಾಲ್‌ ಮಿಶ್ರಿತ ಪೆಟ್ರೋಲಿನ ಬಗ್ಗೆ ಓದುವಾಗ ಅರಿವಿಗೆ ಬಂತು. ನನ್ನ ಬಳಿಯಿರುವ ಗಾಡಿಗಳು 2023ಕ್ಕೂ ಹಿಂದಿನವು. ಆಗಿದ್ದ ಇ-10 ಮತ್ತು ಇ-0 ಪೆಟ್ರೋಲಿಗೆ ಅನುಗುಣವಾಗಿ ತಯಾರಾಗಿದ್ದ ಗಾಡಿಗಳವು. ನಂತರದ ಗಾಡಿಗಳು ಇ-20 ಪೆಟ್ರೋಲಿಗೆ ಅನುಕೂಲಕರವಾಗಿ ತಯಾರಾಗಿವೆ. (ಇತ್ತೀಚೆಗೆ ಮಾರುತಿ ಮತ್ತು ಹೀರೋ ಕಂಪನಿಗಳು ಇ-85 ರಿಂದ ಇ-100ವರೆಗಿನ ಇಂಧನವನ್ನು ಬಳಸಿಕೊಳ್ಳುವಂತಹ ವಾಹನಗಳನ್ನು ಅನಾವರಣಗೊಳಿಸಿವೆ. ಫ್ಲೆಕ್ಸ್‌ ಫ್ಯೂಯೆಲ್‌ ವಾಹನಗಳಿವು). ಹಳೆಯ ಗಾಡಿಗಳಲ್ಲಿ ಇ-20 ಇಂಧನ ಕೆಲಸ ಮಾಡುತ್ತೆ, ಆದರೆ ಕೆಲವೊಂದು ತೊಂದರೆಗಳನ್ನೂ ಉಂಟುಮಾಡುತ್ತೆ. ಇಥೆನಾಲಿನಲ್ಲಿರುವ ನೀರಿನಂಶ ಇಂಜಿನ್ನಿನ ಭಾಗಗಳಿಗೆ, ಇಂಧನದ ಟ್ಯಾಂಕಿನಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಪೆಟ್ರೋಲಿನಷ್ಟು ಸರಿಯಾಗಿ ಉರಿಯದ ಕಾರಣದಿಂದಾಗಿ ಮೈಲೇಜು ಕೂಡ ಕಡಿಮೆಯಾಗುತ್ತದೆ. ಇಂಧನವನ್ನು ಉರಿಸಲು ಇಂಜಿನ್‌ ಹೆಚ್ಚಿನ ಶ್ರಮಪಡುವುದರಿಂದ ವೈಬ್ರೇಷನ್‌ ಕೂಡ ಹೆಚ್ಚಾಗುತ್ತದೆ.

ಹದಿನೈದು ವರುಷಕ್ಕೂ ಹೆಚ್ಚು ಹಳತಾದ ವಾಹನಗಳನ್ನು ಬಳಸುವ ಜನರು ಅಧಿಕವಿರುವ ದೇಶದ ಸರಕಾರವು ಇ-20 ಅನ್ನು ಹಂತಹಂತವಾಗಿ ಪರಿಚಯಿಸಬೇಕಿತ್ತು. ಬೆಲೆ ಅಷ್ಟೇ ಇರುವಾಗ ಇ-0 ಅಥವಾ ಇ-10 ಪೆಟ್ರೋಲ್‌ ಕೂಡ ಬಂಕುಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕಿತ್ತು. ಆಗ ಗ್ರಾಹಕರು ತಮ್ಮ ವಾಹನಗಳಿಗೆ ಸೂಕ್ತವಾದ ಇಂಧನವನ್ನು ತುಂಬಿಸಿಕೊಳ್ಳಬಹುದಿತ್ತು. ಇಥೆನಾಲ್‌ ಮಿಶ್ರಿತ ಪೆಟ್ರೋಲಿನ ಬೆಲೆ ಕಡಿಮೆಯಿದ್ದರೆ ಮತ್ತಷ್ಟು ಅನುಕೂಲವಾಗುತ್ತಿತ್ತು. ಇದೇನು ಕಷ್ಟದ ಕೆಲಸವೂ ಆಗಿರಲಿಲ್ಲ. ಈಗಲೇ ಹಲವು ಬಂಕುಗಳಲ್ಲಿ ಪೆಟ್ರೋಲ್‌, ಡೀಸೆಲ್‌, ಪ್ರೀಮಿಯಂ ಪೆಟ್ರೋಲುಗಳು ಲಭ್ಯವಿದೆ. ಇವುಗಳ ಜೊತೆ ಇ-20 ಕೂಡ ಇದ್ದಿದ್ದರೆ ಆಗುತ್ತಿತ್ತು. ಆದರೆ ಇದ್ಯಾವುದನ್ನೂ ಮಾಡದ ಸರಕಾರ ಇನ್ನು ಮುಂದೆ ಎಲ್ಲಾ ಪೆಟ್ರೋಲು ಬಂಕುಗಳಲ್ಲಿ ಇ-20 ಪೆಟ್ರೋಲ್‌ ಮಾತ್ರ ಮಾಡಬೇಕು ಎಂದು ತೀರ್ಮಾನಿಸಿಬಿಟ್ಟಿತು. ಹೊಸ ವಾಹನಗಳ ಮೈಲೇಜು ಕೂಡ ಶುದ್ಧ ಪೆಟ್ರೋಲಿಗಿಂತ ಕಡಿಮೆಯಾಗುತ್ತದೆಯಾದರೂ ಇಂಜಿನ್ನಿನ ಭಾಗಗಳು ಹಾಳಾಗುವುದಿಲ್ಲ.

ಹೊಸ ಪೆಟ್ರೋಲಿನ ಸಲುವಾಗಿ ಹೊಸ ವಾಹನ ಖರೀದಿಸಲು ಆಗುವುದಿಲ್ಲವಲ್ಲ. ಈಗಲೂ ಎಲ್ಲೋ ಅಪರೂಪಕ್ಕೆ ಅಲ್ಲೊಂದು ಕಡೆ ಇಲ್ಲೊಂದು ಕಡೆ ಇಥೆನಾಲ್‌ ಬೆರೆಸದ ಪ್ರೀಮಿಯಂ ಪೆಟ್ರೋಲು (100 octane ಅಥವಾ ಇ-0) ಲಭ್ಯವಿದೆಯಾದರೂ ಬೆಲೆ ವಿಪರೀತ ಹೆಚ್ಚು. 160 ರುಪಾಯಿ ಪ್ರತಿ ಲೀಟರಿಗೆ!

ಮೈಲೇಜು ಕಡಿಮೆಯಾಗುವುದನ್ನಂತೂ ತಪ್ಪಿಸಲಾಗುವುದಿಲ್ಲವಲ್ಲ. ಇಂಜಿನ್ನಿಗೆ ಆಗುವ ಹಾನಿಯನ್ನು ಕಡಿಮೆಗೊಳಿಸುವ ವಿಧಾನವೇನಾದರೂ ಇದೆಯಾ ಅಂತ ಹುಡುಕಿದಾಗ ಪೆಟ್ರೋಲು ಹಾಕಿಸುವಾಗ ಲೀಟರಿಗೆ ಒಂದು ಎಂ.ಎಲ್ಲಿನಂತೆ ಬೆರೆಸುವಂತಹ ಪೆಟ್ರೋಲ್‌ ಅಡಿಟಿವ್ಸ್‌ ಬಳಸಬಹುದು ಎಂದು ಅರಿವಾಯಿತು. ಥೇಟ್‌ ನಮ್ಮ ಹಳೆಯ ಟೂ ಸ್ಟ್ರೋಕ್‌ ಇಂಜಿನ್ನಿನ ಸ್ಕೂಟರುಗಳಿಗೆ ಆಯಿಲ್‌ ಹಾಕಿಸುತ್ತಿದ್ದಂತೆ ಈ ಅಡಿಟಿವ್ ನ ಬಳಕೆ. ಅಮೆಜಾನಿನಲ್ಲಿ ಲಭ್ಯವಿದ್ದ ತುಂಬಾ ದುಬಾರಿಯಲ್ಲದ ಒಳ್ಳೇ ರೇಟಿಂಗ್ಸು ಕೂಡ ಇದ್ದ ಅಡಿಟಿವ್ (Iftex clean system 2/3 e20fuel additive) ̄ಒಂದನ್ನು ತರಿಸಿದೆ. ಕಾರಿಗೆ ಮೊದಲಿಗೇ ಬಳಸುವುದಕ್ಕೆ ಭಯವೇ. ಹಳೆಯ ಕಾರುಗಳ ಇಂಜಿನ್‌ ಈ ಅಡಿಟಿವ್ಸ್‌ ಇಂದ ಕೂಡ ಹಾನಿಗೊಳಗಾಗಬಹುದು ಎಂದು ಕೆಲವರು ತಿಳಿಸಿದ್ದರು. ಬೈಕಿಗೆ ಬಳಸಿ ನೋಡುವ, ಬೈಕು ತೀರ ಕಾರಿನಷ್ಟೂ ಹಳತೂ ಅಲ್ಲವಲ್ಲ ಎಂದು ಐದು ಲೀಟರ್‌ ಪೆಟ್ರೋಲ್‌ ಹಾಕಿಸುವಾಗ ಐದು ಎಂ.ಎಲ್ ನಷ್ಟು ಅಡಿಟಿವ್ ಹಾಕಿದೆ.

ಬೈಕು ಒಂದಷ್ಟು ಕಿಲೋಮೀಟರು ಓಡಿದ ಮೇಲೆ ಇದು ನಂದೇನಾ ಬೈಕು ಅಂತ ಅನುಮಾನವುಂಟಾಗಿಬಿಟ್ಟಿತು. ಕಾರಣ ವೈಬ್ರೇಷನ್‌ ಅರ್ಧಕ್ಕರ್ಧ ಕಡಿಮೆಯಾಗಿಬಿಟ್ಟಿತ್ತು. ಅದರಲ್ಲೂ ಅಲುಗಾಡುತ್ತಿದ್ದ ಮಿರರ್ರುಗಳು ಮೌನದ ಮೊರೆಹೋಗಿಬಿಟ್ಟವು! ಗಾಡಿ ಶುರುವಾಗುವಾಗಲೂ ಮೊದಲಿನ ಕರ್ಕಶ ಶಬ್ದ ಇಲ್ಲವಾಗಿಬಿಟ್ಟಿದೆ. ಹೇಳಿದಂತೆಯೇ ಇಷ್ಟೆಲ್ಲ ಕೆಲಸ ಮಾಡಿರುವ ಈ ಅಡಿಟಿವ್‌ ಮೈಲೇಜನ್ನು ಹೆಚ್ಚಿಸಬಹುದೆಂಬ ನಂಬಿಕೆ ಬಂದಿದೆ (ಮುಂದಿನ ದಿನಗಳಲ್ಲಿ ತಿಳಿಸುವೆ). ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟ ಅಡಿಟಿವ್‌ ನ ಬೆಲೆ ನೂರು ಎಂ.ಎಲ್ಲಿನ ಬಾಟಲಿಗೆ ನೂರ ಐವತ್ತು ರುಪಾಯಿ. ಹಳೆಯ ಗಾಡಿಯ ಇಂಜಿನನ್ನು ಉಳಿಸಿಕೊಳ್ಳಲು ಲೀಟರಿಗೆ ಒಂದೂವರೆ ರುಪಾಯಿ ಹೆಚ್ಚು ವೆಚ್ಚ ಮಾಡುವಂತಾಗಿದೆ ಈಗ.

ಗ್ರಾಹಕರಿಗೆ ಅವಕಾಶವನ್ನೇ ನೀಡದೆ ನಿಮ್ಮ ಗಾಡಿಯ ಇಂಜಿನ್ನು ಏನಾದರೆ ನಮಗೇನು ಇದೇ ಪೆಟ್ರೋಲು ಕೊಡೋದು ನಾವು ಎನ್ನುವಂತಹ ಸರಕಾರದ ನಿಯಮಗಳು ಹೇಗೆ ನಮಗೆ ಆರ್ಥಿಕವಾಗಿ ಹಾನಿಯುಂಟುಮಾಡುತ್ತವೆ ಎನ್ನುವುದಕ್ಕೆ ಇಥೆನಾಲ್‌ ಮಿಶ್ರಿತ ಪೆಟ್ರೋಲು ಕೂಡ ಒಂದು ಉದಾಹರಣೆ.

ಇಥೆನಾಲ್‌ ತಯಾರಿಸಲೇ ಸಸ್ಯಗಳನ್ನು ಹೆಚ್ಚು ಬೆಳೆಯಲಾರಂಭಿಸಿದರೆ ಉಂಟಾಗಬಹುದಾದ ಒಳ್ಳೆ ಹಾಗು ಕೆಟ್ಟ ಪರಿಣಾಮಗಳದ್ದು ಮತ್ತೊಂದೇ ಕತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ