ಆಗ 1, 2026

ಇಥೆನಾಲ್‌ ಮಿಶ್ರಿತ ಪೆಟ್ರೋಲಿನ ಸುತ್ತ... ಭಾಗ ೨


ಡಾ. ಅಶೋಕ್. ಕೆ. ಆರ್.

ಈ ಹಿಂದಿನ ಪೋಸ್ಟ್‌ ಓದಿಲ್ಲವಾದರೆ ಒಮ್ಮೆ ಓದಿ ಬನ್ನಿ. ಓದಲು ಇಲ್ಲಿ ಕ್ಲಿಕ್ಕಿಸಿ 

ಇ-೨೦ ಪೆಟ್ರೋಲ್‌ ಬಗ್ಗೆ, ಅದರಿಂದ ವಾಹನಗಳಿಗಾಗುತ್ತಿರುವ ಹಾನಿಯ ಬಗ್ಗೆ ವಿಪರೀತ ಚರ್ಚೆಗಳು ಶುರುವಾದ ಮೇಲೆ ಪೆಟ್ರೋಲಿಯಂ ಸಚಿವರಲ್ಲದ, ಹೆದ್ದಾರಿ ಸಚಿವರು ಒಂದಾದ ಮೇಲೊಂದರಂತೆ ಹೇಳಿಕೆಗಳನ್ನು ಕೊಟ್ಟರು. ಇ-೨೦ ಪೆಟ್ರೋಲಿನಿಂದ ಗಾಡಿಗಳಿಗೆ ಯಾವುದೇ ತರದ ಹಾನಿಯಾಗುವುದಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಜನ ಸುಳ್ಳು ಸುಳ್ಳೇ ಹೇಳುತ್ತಿದ್ದಾರೆ ಅಂತ ಆರೋಪಿಸಿದರು. ಅಂತರ್ಜಾಲ ತಾಣಗಳನ್ನೂ ಸೇರಿಸಿ ಒಂದಷ್ಟು ಜನರ ಮೇಲೆ ಕೇಸೂ ದಾಖಲಿಸಲಾಯಿತು. ಇರಲಿ.
ಮೈಲೇಜ್‌ ಕಮ್ಮಿಯಾಗುವುದನ್ನು ಗಾಡಿ ಓಡಿಸುವವರು ಕಂಡು ಹಿಡಿಯಲಾಗುವುದಿಲ್ಲ, ಅದನ್ನು ಶೋರೂಂ ಅಥವಾ ಸರ್ವೀಸ್‌ ಸ್ಟೇಷನ್ನಿನಲ್ಲೇ ಪರೀಕ್ಷಿಸಬೇಕು ಎಂಬ ವಾದಗಳು ಕೇಳಿ ಬಂದವು! ನಂತರದ ದಿನಗಳಲ್ಲಿ ಮೈಲೇಜ್‌ ಒಂಚೂರು ಕಡಿಮೆಯಾಗಬಹುದು ಆದರೆ ಗಾಡಿಗೇನೂ ಹಾನಿಯಾವುದಿಲ್ಲ ಎಂದರು. ನಂತರದಲ್ಲಿ ಹಳೆಯ ವಾಹನಗಳಲ್ಲಿನ (ಅಂದರೆ ಇ-೨೦ ಪೆಟ್ರೋಲಿಗೆ ಸೂಕ್ತವಲ್ಲದ ೨೦೨೩ರ ಮುಂಚಿನ ಗಾಡಿಗಳಲ್ಲಿ) ರಬ್ಬರ್‌ ಭಾಗಗಳಿಗೆ ಒಂಚೂರು ಹಾನಿಯಾಗಬಹುದು ಅಷ್ಟೇ ಗಾಡಿಗೇನೂ ತೊಂದರೆಯಾಗುವುದಿಲ್ಲ ಎಂದುಬಿಟ್ಟರು. ಮುಂದಿನ ದಿನಗಳಲ್ಲಿ ಏನು ಹೇಳುತ್ತಾರೆಂದು ಕಾದು ನೋಡಬೇಕಷ್ಟೇ! ಇರಲಿ.

ನಾನೇನೂ ಆಟೋಮೊಬೈಲ್‌ ತಂತ್ರಜ್ಞನಲ್ಲ, ಇಂಜಿನಿಯರ್‌ ಅಲ್ಲ. ಏನೋ ಒಂದು ಇಪ್ಪತ್ತು ವರ್ಷದಿಂದ ಮೂರು ಲಕ್ಷಕ್ಕಿಂತ ಅಧಿಕ ಕಿಲೋಮೀಟರುಗಳನ್ನು ಬೈಕು ಸ್ಕೂಟರು ಕಾರುಗಳಲ್ಲಿ ಓಡಿಸಿದ ಅನುಭವವಿದೆ ಅಷ್ಟೇ! ಆ ಅನುಭವದ ಆಧಾರದ ಮೇಲೆ ಹೇಳುವುದಾದರೆ ಮೈಲೇಜು ಪರೀಕ್ಷಿಸಲು ಶೋರೂಂಗೆ ಅಥವಾ ಸರ್ವೀಸ್‌ ಸೆಂಟರ್ರಿಗೇ ಹೋಗಬೇಕೆಂದೇನೂ ಇಲ್ಲ. ಕಾರಿನಲ್ಲಿ ಮತ್ತು ಇತ್ತೀಚೆಗೆ ಹಲವು ಬೈಕುಗಳಲ್ಲಿ ಮೈಲೇಜ್‌ ಎಷ್ಟು ಬರುತ್ತಿದೆಯೆಂದು ಅಲ್ಲೇ ತೋರಿಸುತ್ತದೆ. ಆದರಿದು ಸಂಪೂರ್ಣ ಸರಿಯಾಗಿರುವುದಿಲ್ಲ. ಉತ್ತಮ ವಿಧಾನವೆಂದರೆ ಟ್ಯಾಂಕ್‌ ಟು ಟ್ಯಾಂಕ್‌ ವಿಧಾನ. ಪೂರ್ತಿ ಟ್ಯಾಂಕು ಪೆಟ್ರೋಲು ತುಂಬಿಸಿ ಗಾಡಿಯನ್ನು ಒಂದಷ್ಟು ಓಡಿಸಿದ ಮೇಲೆ ಐಡಿಯಲಿ ಅದೇ ಪೆಟ್ರೋಲು ಬಂಕಿನಲ್ಲಿ ಮತ್ತೆ ಪೂರ್ತಿ ಟ್ಯಾಂಕು ತುಂಬಿಸಬೇಕು. ಎಷ್ಟು ಕಿಲೋಮೀಟರು ಗಾಡಿ ಓಡಿಸಿದೋ ಎಷ್ಟು ಪೆಟ್ರೋಲ್‌ ಬಳಸಿದೋ ಎನ್ನುವುದರ ಆಧಾರದ ಮೇಲೆ ಮೈಲೇಜು ತಿಳಿದುಬಿಡುತ್ತದೆ. ಪಾಪ ಗಡ್ಕರಿಯವರಿಗೆ ಇದರ ಅರಿವಿಲ್ಲವೋ ಏನೋ.

ನಮ್ಮ ಮನೆಯಲ್ಲಿ ಸದ್ಯಕ್ಕೆ ಇರೋದು ಮೂರು ಗಾಡಿ. ೨೦೧೬ರ ಬಿಎಸ್‌ - ೩ ಸ್ಕೂಟರ್,‌ ೨೦೧೯ರ ಬಿಎಸ್‌ - ೪ ಕಾರು ಮತ್ತು ೨೦೨೧ರ ಬಿಎಸ್‌ - ೬ ಬೈಕು. ಎಲ್ಲಾ ಗಾಡಿಗಳೂ ೨೦೨೩ರ ಹಿಂದಿನ ಗಾಡಿಗಳಾಗಿರುವುದರಿಂದ ಯಾವ ಗಾಡಿಯೂ ಇ-೨೦ ಪೆಟ್ರೋಲಿಗೆಂದು ತಯಾರಾಗಿಲ್ಲ. ಕಳೆದೊಂದು ವರ್ಷದಿಂದ ಮೂರೂ ಗಾಡಿಗಳಲ್ಲಿ ಶಬ್ದ ಜಾಸ್ತಿಯಿರುತ್ತಿತ್ತು, ವೈಬ್ರೇಷನ್‌ ಅದರಲ್ಲೂ ಗಾಡಿ ಸಿಗ್ನಲ್ಲುಗಳಲ್ಲಿ ಸುಮ್ಮನೆ ನಿಂತಿದ್ದಾಗ, ಗಾಡಿ ಶುರು ಮಾಡಿದಾಗ ವಿಪರೀತ ಅನ್ನಿಸುವಷ್ಟು ವೈಬ್ರೇಷನ್‌ (idling vibration). ಸ್ಕೂಟರ್‌ ತುಂಬ ಹಳತೇ ಆಯಿತಲ್ಲ ಅದಕ್ಕೆ ವೈಬ್ರೇಷನ್‌ ಇರೋದು ಸಹಜ ಎಂದುಕೊಂಡೆ, ಕಾರು ಲಕ್ಷದಷ್ಟು ಓಡಿ ಹಳತಾಗಿದೆಯಲ್ಲ ವೈಬ್ರೇಷನ್‌ ಬರದೇ ಇನ್ನೇನಾಗ್ತದೆ ಅಂತ ಸುಮ್ಮನಾದೆ. ಬೈಕು ಬಹುಶಃ ಇರೋದೇ ಹಿಂಗೇನೋ ಅಂತ ಸುಮ್ಮನಾಗಿಬಿಟ್ಟಿದ್ದೆ. ಇವುಗಳೆಲ್ಲದರ ಜೊತೆಗೆ ಎಲ್ಲಾ ವಾಹನಗಳ ಮೈಲೇಜು ಕಡಿಮೆಯಾಗಿದ್ದೂ ಗಮನಕ್ಕೆ ಬಂದಿತ್ತು. ಅವವೇ ಕಾರಣಗಳಿರಬಹುದು ಎಂದುಕೊಂಡಿದ್ದೆ.

ಬೈಕು ಮತ್ತು ಸ್ಕೂಟರಿಗೆ ಬಳಸಿದ್ದು. 

ಕಳೆದ ಪೋಸ್ಟಿನಲ್ಲಿ ತಿಳಿಸಿದಂತೆ ಇಫ್ಟೆಕ್ಸ್‌ ಕಂಪನಿಯ ಫ್ಯುಯೆಲ್‌ ಅಡಿಟಿವ್‌ಗಳನ್ನು ಬಳಸಲಾರಂಭಿಸಿ ಒಂದೂವರೆ ತಿಂಗಳಾಯಿತು. ಬೈಕು ಸ್ಕೂಟರುಗಳಿಗೆ ಮತ್ತು ಕಾರುಗಳಿಗೆಂದೇ ಬೇರೆ ಬೇರೆ ಥರದ ಫ್ಯುಯೆಲ್‌ ಅಡಿಟಿವ್‌ಗಳಿದ್ದಾವೆ. ಬೈಕು ಸ್ಕೂಟರುಗಳಿಗೆ ಒಂದು ಲೀಟರ್‌ ಪೆಟ್ರೋಲಿಗೆ ಎರಡು ಎಂ.ಎಲ್‌ನಷ್ಟು ಅಡಿಟಿವ್‌ ಹಾಕಬೇಕು. ಕಾರಿಗೆ ಲೀಟರ್‌ ಪೆಟ್ರೋಲಿಗೆ ಒಂದು ಎಂ.ಎಲ್.‌ ಈ ಅಡಿಟಿವ್‌ಗಳಿಂದ ನಿಜಕ್ಕೂ ನನಗೆ ಉಪಯೋಗವಾಯಿತಾ?

ಬೈಕು ಮತ್ತು ಕಾರನ್ನು ಹತ್ತರಿಂದ ಹದಿನೈದು ಕಿಲೋಮೀಟರುಗಳಷ್ಟು ಓಡಿಸುವಷ್ಟರಲ್ಲಿ ವೈಬ್ರೇಷನ್‌ ಎಂಭತ್ತರಿಂದ ತೊಂಭತ್ತು ಭಾಗದಷ್ಟು ಕಡಿಮೆಯಾಗಿದ್ದು ಗಮನಕ್ಕೆ ಬಂತು. ಮುಖ್ಯವಾಗಿ ಕಾರು ಮತ್ತು ಬೈಕಿನಲ್ಲಿ idlingನಲ್ಲಿ ವೈಬ್ರೇಷನ್‌ ಇಲ್ಲವಾಯಿತು. ಕಾರಿನಲ್ಲಿ ಐಡ್ಲಿಂಗ್‌ನಲ್ಲಿ ಆರ್‌ಪಿಎಂ ೧೫೦೦ರಿಂದ ೧೦೦೦ದ ಒಳಗೆ ಇರಲಾರಂಭಿಸಿತು. ಬಿಎಸ್-‌೩ ಸ್ಕೂಟರಿನಲ್ಲಿ ವೈಬ್ರೇಷನ್‌ ಒಂದು ಐವತ್ತು ಪ್ರತಿಶತಃದಷ್ಟು ಮಾತ್ರ ಕಡಿಮೆಯಾಯಿತು. ಒಂದೂವರೆ ತಿಂಗಳಲ್ಲಿ ಗಾಡಿಯನ್ನು ಬಹಳಷ್ಟು ಕಿಲೋಮೀಟರುಗಳು ಓಡಿಸಿದ ನಂತರ ಮೈಲೇಜಿನ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡಿರಬಹುದೆಂದು ಗಮನಿಸಿದಾಗ (ಟ್ಯಾಂಕ್‌ ಟು ಟ್ಯಾಂಕ್‌ ವಿಧಾನದಲ್ಲಿ) ಬಿಎಸ್‌ - ೪ ಕಾರಿನ ಮೈಲೇಜು ಲೀಟರಿಗೆ ಎರಡು ಕಿಲೋಮೀಟರುಗಳಷ್ಟು ಜಾಸ್ತಿಯಾಗಿತ್ತು. ಬಿಎಸ್‌ - ೬ ಬೈಕಿನ ಮೈಲೇಜು ಲೀಟರಿಗೆ ಏಳರಿಂದ ಹತ್ತು ಕಿಲೋಮೀಟರುಗಳಷ್ಟು ಜಾಸ್ತಿಯಾಗಿದೆ. ಒಟ್ಟಾರೆ ಹತ್ತರಿಂದ ಹದಿನೈದು ಪರ್ಸೆಂಟಿನಷ್ಟು ಮೈಲೇಜು ಜಾಸ್ತಿಯಾಗಿದೆ. ಇನ್ನು ಬಿಎಸ್-‌೩ ಸ್ಕೂಟರಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಡಿಟಿವ್‌ ಹಾಕಿದ ಮೇಲೂ ಸ್ಕೂಟರಿನ ಮೈಲೇಜು ಜಾಸ್ತಿಯಾಗಿಲ್ಲ.

ಕಾರಿಗೆ ಬಳಸಿದ್ದು 

ನಾ ಬಳಸಿದ ಅಡಿಟಿವ್‌ಗಳು ಎಲ್ಲಾ ಗಾಡಿಗಳಲ್ಲೂ ಏಕ ರೀತಿಯಲ್ಲಿ ಕೆಲಸ ಮಾಡೇ ಮಾಡುತ್ತವೆ ಅನ್ನುವುದನ್ನು ಹೇಳಲಾಗುವುದಿಲ್ಲ. ಅನೇಕ ಆನ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ ತಮ್ಮ ವಾಹನದಲ್ಲಿ ಅಡಿಟಿವ್‌ಗಳು ಯಾವ ರೀತಿಯಲ್ಲೂ ಕೆಲಸ ಮಾಡಲಿಲ್ಲ ಅನ್ನುವಂತಹ ಕಮೆಂಟುಗಳೂ ಇವೆ. ನಿಮ್ಮ ಗಾಡಿಗೆ ಸೂಕ್ತವಾದ ಅಡಿಟಿವ್‌ ಯಾವುದಿದೆ ಎನ್ನುವುದನ್ನು ಹುಡುಕಿ ಬಳಸುವುದು ಉತ್ತಮ. ಈ ಅಡಿಟಿವ್‌ಗಳ ಬೆಲೆ ಕೂಡ ತುಂಬಾ ಕಡಿಮೆಯೇನಲ್ಲ. ಕಾರಿಗೆ ಬಳಸುವ ಇಫ್ಟೆಕ್ಷ್‌ ಅಡಿಟಿವ್‌ನ ಬೆಲೆ ೨೦೦ಮಿಲಿಗೆ ೩೫೦ರಷ್ಟಿದ್ದರೆ ಬೈಕು – ಸ್ಕೂಟರಿಗೆ ಬಳಸುವ ಅಡಿಟಿವ್‌ನ ಬೆಲೆ ನೂರು ಮಿಲಿಗೆ ೧೫೦ರಷ್ಟಿದೆ. ಹೆಚ್ಚು ಕಮ್ಮಿ ಲೀಟರಿಗೆ ಎರಡು ರುಪಾಯಿಯವರೆಗೆ ಹೆಚ್ಚುವರಿ ಖರ್ಚು ಬೀಳುತ್ತದೆ.

ಸದ್ಯಕ್ಕಂತೂ ಸರಕಾರ ಇ-೨೦ಯಿಂದ ಹಿಂದಕ್ಕೆ ಸರಿಯುವ ಯಾವ ಲಕ್ಷಣಗಳೂ ಇಲ್ಲವಾದ್ದರಿಂದ ಗಾಡಿಗಳನ್ನು ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿಡಲು ಅಡಿಟಿವ್‌ ಬಳಸುವುದು ಉತ್ತಮವೆಂದೇ ಅನ್ನಿಸುತ್ತದೆ. ಏನೋ ಇ-೨೦ ಕುರಿತಂತೆ ಒಂದಷ್ಟು ಸದ್ದು ಗದ್ದಲ ನಡೆದಿರುವುದರಿಂದ ಇ-೨೫, ಇ-೩೦ ಪೆಟ್ರೋಲುಗಳನ್ನು ಸಾರ್ವತ್ರಿಕಗೊಳಿಸುವುದು ತಡವಾಗುತ್ತದೆಂದು ಸಮಾಧಾನ ಪಟ್ಟುಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ