ಡಾ ಅಶೋಕ್ ಕೆ ಆರ್.
ಧಾರವಾಡ, ಹುಮನಾಬಾದ್ ಮತ್ತಿವೆಲ್ಲವಕ್ಕೂ ಕಳಶವಿಟ್ಟಂತೆ ದಕ್ಷಿಣ ಕನ್ನಡದ
ನಾನಾ ಭಾಗಗಳಲ್ಲಿ ಕಳೆದೆರಡು ತಿಂಗಳುಗಳಿಂದ ಒಂದರಹಿಂದೊಂದರಂತೆ ಕೋಮುಗಲಭೆಗಳು ವರದಿಯಾಗುತ್ತಿವೆ.
ಅಪರಾಧ ಪ್ರಕರಣಗಳು, ವೈಯಕ್ತಿಕ ಸಂಗತಿಗಳು, ಉದ್ದೇಶಪೂರ್ವಕವೆಂಬಂತೆ ತೋರುವ ಘಟನೆಗಳೆಲ್ಲ ದೊಡ್ಡ ಕೋಮು
ಗಲಭೆಗಳಾಗಿ ಮಾರ್ಪಡುತ್ತಿರುವುದು ಏನನ್ನು ಸೂಚಿಸುತ್ತಿದೆ? ಮತ್ತೇನಿಲ್ಲ ಚುನಾವಣೆ ಸಮೀಪಿಸುತ್ತಿದೆ.
ಅತಿದೊಡ್ಡ ಪ್ರಜಾಪ್ರಭುತ್ವದ ಬಹುದೊಡ್ಡ ಲೋಕಸಭಾ ಚುನಾವಣೆಗೆ ಸರ್ವಪಕ್ಷಗಳೂ ಸಿದ್ಧಗೊಳ್ಳುತ್ತಿವೆ,
ಸಿದ್ಧತೆಯ ಮಾದರಿ ಸಮಾಜದ ಆರೋಗ್ಯಕ್ಕೆ ಮತ್ತು ತತ್ಪರಿಣಾಮವಾಗಿ ವ್ಯಕ್ತಿಯ ವಿಕಸನಕ್ಕೆ ಮಾರಕವಾಗಿ
ಪರಿಣಮಿಸುತ್ತಿದೆ.