![]() |
ಮೂಲ |
ಅರ್ಧ ಘಂಟೆಯ ಮುಂಚೆ ಅಪೆಂಡಿಸೈಟಿಸ್ ಆಪರೇಷನ್ ಮುಗಿಸಿ ಮಲಗಲು ಹೋದವಳನ್ನು
ನರ್ಸ್ ಎಬ್ಬಿಸಿದ್ದಳು. ಆಕ್ಸಿಡೆಂಟ್ ಕೇಸ್ ಬಂದಿದೆ. ಎರಡು ಎರಡೂವರೆ ವರ್ಷದ ಮಗು, ತಲೆಗೆ ಪೆಟ್ಟಾಗಿದೆ
ಎಂದು ಹೇಳಿದ್ದಳು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡು ಕೂದಲು ಸರಿಮಾಡಿಕೊಂಡು ಎದೆಯ ಮೇಲೊಂದು
ದುಪ್ಪಟ್ಟಾ ಹೊದ್ದಿಕೊಂಡು ಕೆಳಮಹಡಿಯಲ್ಲಿದ್ದ ಎಮರ್ಜೆನ್ಸಿ ವಾರ್ಡಿಗೆ ಬಂದಾಗ ಘಂಟೆ ಹನ್ನೊಂದಾಗಿತ್ತು.
ಮಗುವಿನ ತಲೆಗೊಂದು ಬ್ಯಾಂಡೇಜನ್ನು ಒತ್ತಿ ಹಿಡಿದಿದ್ದರು, ರಕ್ತಮಯವಾಗಿತ್ತು. ಮಂಚದ ಪಕ್ಕದಲ್ಲಿ ನಿಂತಿದ್ದ
ವ್ಯಕ್ತಿಯ ಅಂಗಿ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಅಂಗಿಯ ಎಡಭಾಗದಲ್ಲಿ ರಕ್ತದ ಕಲೆಯಿತ್ತು. ಮಣ್ಣಾಗಿ
ಕೆದರಿದ್ದ ಕೂದಲು. ಡಾಕ್ಟರ್ ಬಂದರೆಂದು ತಿರುಗಿ ನೋಡಿದ ರಾಕೇಶ. “ಅರೆ! ರಾಕಿ ನೀನು?!” ಭವ್ಯಳ ದನಿಯಲ್ಲಿ
ಅಚ್ಚರಿ ಆಶ್ಚರ್ಯ ಸಂತಸವಿತ್ತು.