ಡಾ. ಅಶೋಕ್. ಕೆ. ಆರ್.
ಸಮಾಜದ ವಿಕಾರಗಳಿಗೆ ಕನ್ನಡಿ ಹಿಡಿಯುವ ಇಂತಹ ಚಿತ್ರಗಳನ್ನು "ಚೆನ್ನಾಗಿದೆ" "ಅದ್ಭುತವಾಗಿದೆ" ಎಂದು ಹೇಗೆ ಹೇಳುವುದು?
ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ʼಹೆಬ್ಬುಲಿ ಕಟ್ʼ ಸಿನಿಮಾವನ್ನು ಇವತ್ತು ನೋಡಲು ಸಮಯವಾಯಿತು. ಹದಿಹರೆಯದ ಹುಡುಗನ ಹುಡುಗಿಯೆಡೆಗಿನ ವಯೋಸಹಜ ಆಕರ್ಷಣೆ, ಅದಕ್ಕಿಂತಲೂ ಹೆಚ್ಚಾಗಿ ಒಂದು ಚೆಂದದ ಹೇರ್ ಕಟ್ ಮಾಡಿಸಿಕೊಳ್ಳಬೇಕೆಂಬ ಚಡಪಡಿಕೆಯೇ ತಳಪಾಯವಾದ ಸಿನಿಮಾ ಲವಲವಿಕೆಯಿಂದ ನೋಡುಗರನ್ನು ನಗಿಸುತ್ತ ನಗಿಸುತ್ತ ಕೊನೆಗೆ ಬೇಸರಕ್ಕೆ, ಎಂತ ಮಾಡಿದರೂ ಸರಿ ಹೋಗದ ನಮ್ಮ ಸಮಾಜದ ಕುರಿತು ಅಸಹನೆ ಮೂಡಿಸಿಬಿಡುತ್ತದೆ. ಬೇಸರ - ಅಸಹನೆ ಮೂಡದೇ ಹೋದರೆ ಅದು ನಮ್ಮಲ್ಲಿರುವ ಜಾತಿ ಮೇಲ್ಮೆಯ ಸೂಚಕ.
ʼಹಿಂದೂ ನಾವೆಲ್ಲ ಒಂದುʼ ಎನ್ನುವ ಘೋಷಣೆ ಈ ಮುಂಚೆಗಿಂತಲೂ ಅತ್ಯುಗ್ರವಾಗಿ ಕೇಳಿಬರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೀವಿ. ಆ ಘೋಷಣೆ ಕೂಡ ಈ ಚಿತ್ರದ ಒಂದು ಪ್ರಮುಖ ಪಾತ್ರಧಾರಿ. ಜೊತೆಗೆ ಐದು ಸಲದ ನಮಾಜಿಗೆ ಕೂಡ ಚಿತ್ರದಲ್ಲೊಂದು ಕ್ಯಾಮಿಯೋ ಪಾತ್ರವಿದೆ.








