ಇವತ್ತು ಕ್ಯಾಮೆರಾ ಇಲ್ಲದೆ ಬಂದಿದ್ದೆ. ಕ್ಯಾಮೆರಾ ಇದ್ದರೆ ತಲೆಯಲ್ಲಿ ಚೆಂದದ ಫೋಟೋ ಬಗ್ಗೆಯಷ್ಟೇ ಯೋಚನೆ ಇರ್ತದೆ. ಬಹಳಷ್ಟು ಬಾರಿ ಈ ಯೋಚನೆ - ಯೋಜನೆಯ ನಡುವೆ ಮನಸ್ಸು ಮುದಗೊಳ್ಳುವುದನ್ನೇ ಮರೆತುಬಿಡುತ್ತದೆ. ಜೊತೆಗೆ ಕ್ಯಾಮೆರಾದ ಮೂಲಕ ಪಕ್ಷಿಗಳನ್ನು ನೋಡುವಾಗ ಗಮನವೆಲ್ಲ ಒಂದೆರಡು ಪಕ್ಷಿಗಳ ಮೇಲಷ್ಟೇ ಇರುತ್ತದೆಯೇ ಹೊರತು ಪೂರ್ತಿ ಪರಿಸರದ ಮೇಲಲ್ಲ. ಹೀಗಾಗಿ ಆವಾಗಿವಾಗ ಕ್ಯಾಮೆರಾ ಇಲ್ಲದಿದ್ದಾಗಲೂ ಪಕ್ಷಿಗಳನ್ನು ಗಮನಿಸಬೇಕು!
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ನಿನ್ನೆ ಬೆಳಿಗ್ಗೆ ಕಾಣೆಯಾಗಿದ್ದ ಹೆಜ್ಜಾರ್ಲೆಗಳೆಲ್ಲ ಇವತ್ತು ಹಾಜರಿ ಹಾಕಿದ್ದವು. ಅಲ್ಲಿಗೆ ಹೆಜ್ಜಾರ್ಲೆಗಳು ಕೊಮ್ಮಘಟ್ಟದಿಂದ ದೂರಾಗಿರಲಿಲ್ಲ ಎನ್ನುವುದು ಖಚಿತವಾಯಿತು. ಬೆಳಗಾಗುವುದಕ್ಕೆ ಮುನ್ನವೇ ಆಹಾರವನ್ನರಿಸಿ ಹೋಗಿ ಸಂಜೆ ಕೊಮ್ಮಘಟ್ಟಕ್ಕೆ ಹಿಂದಿರುಗುತ್ತಿದ್ದವು. ಸಂಖೈ ಮೂರು ದಿನದ ಹಿಂದಿನಷ್ಟಿರಲಿಲ್ಲ. ಸ್ಥಳದ ಅಭಾವವಿರುವುದಕ್ಕೆ ಬೇರೆ ಜಾಗಕ್ಕೆ ಹೋಗಿರಬಹುದು.
ವೀಕ್ಷಣಾ ಸ್ಥಳದಲ್ಲಿ ಇಬ್ಬರು ಕ್ಯಾಮೆರಾ ಇಟ್ಟುಕೊಂಡು ಹೆಜ್ಜಾರ್ಲೆಗಳ ಫೋಟೋ ತೆಗೆಯುತ್ತಿದ್ದರು. ಒಬ್ಬರ ಹೆಸರು ದೀಪಕ್, ಇನ್ನೊಬ್ಬರ ಹೆಸರು ಮರೆತೇ ಹೋಯಿತು, ವಿಜಯನಗರದವರು. ಚಲುಕದ ಬಾತುಗಳು ಈ ಕೆರೆಗೆ ವರ್ಷಾವರ್ಷ ಬರುತ್ತವಂತೆ. ಕಳೆದ ವರ್ಷ ಇನ್ನೂ ಹೆಚ್ಚಿನ ಸಂಖೈಯಲ್ಲಿದ್ದವಂತೆ. ಕಳೆದ ವರ್ಷದ ಕೆಲವು ಅದ್ಭುತ ಚಿತ್ರಗಳನ್ನು ತೋರಿಸಿದರು. ಒಂದಷ್ಟು ಮಾತನಾಡಿ ನಡೆಯಲಾರಂಭಿಸಿದೆ. ನಿಯಮಿತವಾಗಿ ನಡೆಯುವವರು ಎದುರಿಗೆ ಸಿಕ್ಕು ‘ಯಾಕ್ ಸರ್? ಕ್ಯಾಮೆರಾ ತಂದಿಲ್ವಾ?’ ಎಂದಿದ್ದಕ್ಕೆ ಇಲ್ಲಾ ಇವತ್ತು ಸುಮ್ನೆ ನೋಡ್ಕಂಡ್ ಹೋಗುವಾ ಅಂತ ಬಂದಿದ್ದು ಅಂದೆ. ‘ಹು ಇವುನ್ನ ನೋಡುದ್ರೆ ಒಳ್ಳೆ ಟೈಂಪಾಸೇ ಬಿಡಿ’ ಅಂದರು. ಕೆರೆಯಲ್ಲಿರುವ ಪುಟ್ಟ ಗಾತ್ರದ ಚಲುಕದ ಬಾತುಗಳು ದೊಡ್ಡ ದೇಹದ ಹೆಜ್ಜಾರ್ಲೆಗಳ ಮರಿಗಳು ಎಂದವರ ಅನಿಸಿಕೆಯಾಗಿತ್ತು! ಇಲ್ಲ ಇಲ್ಲ, ಅದೇ ಬೇರೆ, ಇದೇ ಬೇರೆ… ಚಳಿಗಾಲದಲ್ಲಿ ವಿದೇಶದಿಂದ ಬರ್ತವೆ ಈ ಚಲುಕದ ಬಾತುಗಳು. ಅಲ್ಲಿ ಹಿಮಪಾತವಿರ್ತದೆ, ಕೆರೆಗಳ ನೀರೆಲ್ಲ ಐಸಾಗಿ ಹೋಗಿರ್ತದೆ. ಹಂಗಾಗಿ ಇತ್ತಾ ಕಡೆ ಬಂದು ಮತ್ತೆ ವಾಪಸ್ಸಾಗ್ತವೆ ಅಂದೆ. ನಿನ್ನೆ ದಿನ ಉಲ್ಲಾಳ ಕೆರೆಯಲ್ಲೂ ಕೇಳಿದ ಆಸಕ್ತರಿಗೆ ಈ ಬಗ್ಗೆ ಹೇಳಿದ್ದೆ. ಅವರಲ್ಲೊಬ್ಬರು ‘ನಮುಗ್ ಪಕ್ಕುದ್ ರೋಡುಗ್ ಹೋದ್ರೆ ದಾರಿ ಮರೆತುಹೋಗುತ್ತೆ. ಇವು ಅಷ್ಟು ಸಾವಿರಾರು ಕಿಲೋಮೀಟ್ರು ಹೆಂಗೆ ಬರ್ತಾವಲ್ಲ’ಅಂತ ಅಚ್ಚರಿಪಟ್ಟರು. ದಾರಿ ಮರೆಯೋದ್ರಲ್ಲಿ ನಾನೂ ಎತ್ತಿದ ಕೈಯಾಗಿದ್ದರಿಂದ ಅವರ ಮಾತುಗಳು ಸಂಪೂರ್ಣ ಅರ್ಥವಾಗಿತ್ತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ