![]() |
ಕವಲುಬಾಲದ ಚಿಟವ |
ಬೆಂಗಳೂರಿನಿಂದ ಹೊರಟಿದ್ದು ಹುಲಿಯೂರುದುರ್ಗದ ಬಳಿಯಿರುವ ದೀಪಾಂಬುಧಿ ಕೆರೆಗೆ. ಕೆರೆಯ ತುಂಬಾ ನೀರಿತ್ತು. ಹಾಗಾಗಿ ನೀರ ಪಕ್ಷಿಗಳ ಸಂಖೈ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ನೀಲಿಬಾಲದ ಕಳ್ಳಿಪೀರಗಳು ಅಲ್ಲಲ್ಲಿ ಹಾರಾಡುತ್ತಿದ್ದವು. ಇನ್ನಿಲ್ಲಿ ಅಷ್ಟು ಫೋಟೋಗ್ರಫಿ ಆಗುವುದಿಲ್ಲವೆಂದುಕೊಂಡು ಹುಲಿಯೂರುದುರ್ಗ - ನಾಗಮಂಗಲ ರಸ್ತೆಯಲ್ಲಿರುವ ಮುತ್ತುರಾಯನ ಕೆರೆಯ ಕಡೆಗೆ ಹೋಗೋಣವೆಂದುಕೊಂಡೆ. ದೀಪಾಂಬುಧಿ ಕೆರೆಯಿಂದ ಹತ್ತದಿನೈದು ನಿಮಿಷದ ಪಯಣ. ಮುತ್ತುರಾಯನ ಕೆರೆಯಲ್ಲಿ ಈ ಮುಂಚೆ ಸೂಜಿಬಾಲದ ಬಾತು (ನಾರ್ತನ್ ಪಿನ್ ಟೈಲ್) ಪಕ್ಷಿಗಳನ್ನು ಕಂಡಿದ್ದೆ. ಹದಿನೈದು ಇಪ್ಪತ್ತು ಪಕ್ಷಿಗಳನ್ನು ನೋಡಿದ್ದ ನೆನಪಿತ್ತು. ಜೊತೆಗೆ ಅಲ್ಲೇ ಇರುವ ದೇಗುಲದ ಬಳಿ ಕರಿ ಎದೆಯ ನೆಲಗುಬ್ಬಿ (ಆ್ಯಶಿ ಕ್ರೌನ್ಡ್ ಸ್ಪ್ಯಾರೋ ಲಾರ್ಕ್) ಇದ್ದವು. ಈ ಬಾರಿಯೂ ಅವುಗಳೆಲ್ಲಾ ಕಾಣಸಿಬಹುದಾ ಎಂದುಕೊಳ್ಳುತ್ತಾ ಕೆಂಕರೆ ಊರು ದಾಟಿದ ನಂತರ ಸಿಗುವ ಕೆರೆಯಂಗಳವನ್ನು ತಲುಪಿದೆ. ಕೆರೆಯ ಪಕ್ಕ ನಡೆದು ಹೋಗುವ ದಡದಲ್ಲಿದ್ದ ಒಂದು ಜೋಡಿ ಸೂಜಿಬಾಲದ ಬಾತುಗಳು, ಮೂರ್ನಾಲ್ಕು ಬಿಳಿಹುಬ್ಬಿನ ಬಾತುಗಳು (ಗಾರ್ಗನೆ), ಐದಾರು ವರಟೆಗಳು (ಸ್ಪಾಟ್ ಬಿಲ್ಡ್ ಡಕ್) ನೀರಿಗಿಳಿದು ಎದುರಿನ ದೂರದ ದಡದ ಕಡೆಗೆ ಸಾಗಿಬಿಟ್ಟವು. ಒಂದಷ್ಟು ಗುಳುಮುಳುಕಗಳು ನನ್ನ ಆಗಮನಕ್ಕೆ ಭಯ ಬೀಳದೆ ಅಲ್ಲೇ ದಡದ ಬಳಿಯಲ್ಲೇ ಮುಳುಗೇಳುತ್ತಿದ್ದವು. ನದಿ ರೀವಗಳು (ರಿವರ್ ಟರ್ನ್) ಗದ್ದಲವೆಬ್ಬಿಸುತ್ತ ಜಗಳವಾಡುತ್ತ ಹಾರಾಡುತ್ತಿದ್ದವು. ಅಲ್ಲೇ ಒಂದು ಬದಿಯಲ್ಲಿ ಶೇಖರಣೆಯಾಗಿದ್ದ ನೀರಿನಲ್ಲಿ ಕೆಂಪು ಟಿಟ್ಟಿಭ ನಿಂತಿತ್ತು. ಜನರನ್ನು ಕಂಡೊಡನೆಯೇ ದೊಡ್ಡ ದನಿಯಲ್ಲಿ ಶಬ್ದ ಮಾಡುತ್ತ ಇತರೆ ಪಕ್ಷಿಗಳಿಗೆ ಎಚ್ಚರಿಕೆಯ ಸಂದೇಶ ನೀಡುವ ಟಿಟ್ಟಿಭ ಇಂದ್ಯಾಕೋ ಮೌನದಿಂದಿತ್ತು.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಅದರದೊಂದು ಸಾಧಾರಣ ಎನ್ನಿಸುವ ಫೋಟೋ ತೆಗೆದುಕೊಂಡು ಮುಂದೆ ಸಾಗಿದವನಿಗೆ ಕೆರೆಯಿಂದ ನೀರನ್ನೆತ್ತಲು ಹಾಕಿದ್ದ ಹಳೆಯ ಪೈಪೊಂದರ ಬಳಿಯಿದ್ದ ಮರಳಿನಲ್ಲಿ ಮರಳಿನದೇ ಬಣ್ಣದ ಪುಟ್ಟ ಪಕ್ಷಿಗಳು ಕಂಡಂತಾಯಿತು. ಗಮನವಿಟ್ಟು ನೋಡಿದಾಗ ಸರಿಸುಮಾರು ಮೂವತ್ತು ಕವಲುಬಾಲದ ಚಿಟವಗಳು (ಸ್ಮಾಲ್ ಪ್ರಾಟಿನ್ ಕೋಲ್) ಕಂಡವು. ಅಲ್ಲೇ ಇದ್ದ ವಿದ್ಯುತ್ ತಂತಿಯ ಮೇಲೆ ಕುಳಿತಿದ್ದ ಅಂಬರಗುಬ್ಬಿಗಳು (ಸ್ವಿವ್ಟ್) ಹಾರಿ ಹೋದವು. ಕೆಲವು ಕ್ಷಣದ ನಂತರ ಒಂದರ ಹಿಂದೊಂದು ಬಂದು ಮತ್ತದೇ ತಂತಿಯ ಮೇಲೆ ಕುಳಿತವು. ಚಿಟವಗಳ ಚಿತ್ರವನ್ನು ದೂರದಿಂದ ತೆಗೆದು ಅಲ್ಲೇ ಕುಳಿತು. ಒಂದೈವತ್ತು ಅರವತ್ತು ಅಡಿಯಷ್ಟು ಅಂತರವಿತ್ತು ನನಗೂ ಆ ಪಕ್ಷಿಗಳಿಗೂ. ಸೂಕ್ಷ್ಮವಾಗಿ ಗಮನಿಸದೇ ಹೋದರೆ ಈ ಪಕ್ಷಿಗಳ ಇರುವಿಕೆಯೇ ತಿಳಿಯುವುದಿಲ್ಲ.