ಮೂರು ದಿನಗಳಿಂದ ಮಾಧ್ಯಮಗಳಲ್ಲೆಲ್ಲಾ ಮ್ಯಾಗಿಯದ್ದೇ ಸುದ್ದಿ. ಎರಡಲ್ಲದಿದ್ದರೂ ಐದು ನಿಮಿಷಕ್ಕೆ ಪಟಾಫಟ್ ಎಂದು ತಯಾರಾಗಿ ಅಡುಗೆ ಮಾಡಿಕೊಳ್ಳಬಯಸುವ ಹಾಸ್ಟೆಲ್ ವಾಸಿಗಳಿಗೆ, ಮಕ್ಕಳಿಗೆ, ದೊಡ್ಡೋರಿಗೆಲ್ಲ ಸಾಥ್ ಕೊಟ್ಟ, ರುಚಿ ಕೊಟ್ಟ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಇರುವುದು ಬೆಳಕಿಗೆ ಬರುತ್ತಿದ್ದಂತೆ ಎಲ್ಲರೂ ಅಂಡು ಸುಟ್ಟ ಬೆಕ್ಕಿನ ಥರ ವಿಲವಿಲ ಒದ್ದಾಡುತ್ತಿದ್ದಾರೆ. ನೂಡಲ್ಸ್ ಎಂದರೆ ಮ್ಯಾಗಿ ಎಂಬಷ್ಟರ ಮಟ್ಟಿಗೆ ಬೆಳೆದ, ಬಹುತೇಕರ ಮೆಚ್ಚುಗೆಗೆ ಪಾತ್ರವಾದ ಮ್ಯಾಗಿ ಹೀಗೆ ನಮಗೆ ವಿಷವುಣ್ಣಿಸಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮ್ಯಾಗಿಯಲ್ಲಿ ವಿಷವಿದೆ ಎಂಬ ಅಂಶ ನಮ್ಮನ್ನು ಇಷ್ಟೊಂದು ವಿಹ್ವಲಗೊಳಿಸಬೇಕೆ?
ಮ್ಯಾಗಿಯಲ್ಲಿ ಪತ್ತೆಯಾದದ್ದೇನು?
ಮ್ಯಾಗಿಯಲ್ಲಿ ದೇಹಕ್ಕೆ ಹಾನಿಯುಂಟುಮಾಡಬಲ್ಲಂಥಹ ಎರಡು ಪ್ರಮುಖ ಅಂಶಗಳು ಪತ್ತೆಯಾಗಿವೆ. ಒಂದು ಸೀಸ(lead), ಮತ್ತೊಂದು ಮೊನೋಸೋಡಿಯಮ್ ಗ್ಲುಟಾಮೇಟ್. ಸೀಸ ವಿಷಕಾರಿಯೆಂಬುದು ಸಾಬೀತಾಗಿರುವಂತದ್ದು. ದೇಹದೊಳಗೆ ಸೀಸ ಸಣ್ಣ ಪ್ರಮಾಣದಲ್ಲಿ ಸೇರುತ್ತಿದ್ದರೂ ಸಾಕು, ದೀರ್ಘಾವಧಿಯಲ್ಲಿ ತನ್ನ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕಾರಣ ಸೀಸ ಒಮ್ಮೆ ದೇಹದೊಳಗೆ ಸೇರಿಬಿಟ್ಟರೆ ನೈಸರ್ಗಿಕವಾಗಿ ಹೊರಹಾಕುವ ಕೌಶಲ್ಯ ನಮ್ಮ ದೇಹಕ್ಕಿಲ್ಲ. ದೇಹದ ಬೆಳವಣಿಗೆಗೆ ಕ್ಯಾಲ್ಶಿಯಂ ಅತ್ಯಗತ್ಯ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ದೇಹಕ್ಕೆ ಸೀಸ ಸೇರಿದಾಗ, ನಮ್ಮಲ್ಲಿರುವ ಜೀವಕೋಶಗಳು ಕ್ಯಾಲ್ಶಿಯಂ ಬದಲಿಗೆ ಸೀಸವನ್ನು ಉಪಯೋಗಿಸಿಕೊಳ್ಳಲಾರಂಭಿಸುತ್ತದೆ. ಇದು ಅಸಹಜ ಪ್ರಕ್ರಿಯೆ, ಉಪಯೋಗಿಸಿಕೊಂಡ ಸೀಸದಿಂದ ನನಗೇ ತೊಂದರೆ ಎಂದು ಜೀವಕೋಶಕ್ಕೆ ಅರಿವಾಗುವ ವೇಳೆಗೆ ಅಪಾಯ ಸಂಭವಿಸಿಬಿಟ್ಟಿರುತ್ತದೆ. ಬೆಳೆಯುತ್ತಿರುವ ಜೀವಕೋಶಗಳ ಮೇಲೆ ಪರಿಣಾಮ ಹೆಚ್ಚಾಗಿರುವ ಕಾರಣ ಆರು ವರುಷದ ಒಳಗಿನ ಮಕ್ಕಳು ಸೀಸದ ದುಷ್ಪರಿಣಾಮಗಳಿಂದ ಪೀಡಿತರಾಗುತ್ತಾರೆ. ಮಾಂಸಖಂಡ, ಮೂಳೆ, ಮಿದುಳು, ಮೂತ್ರಪಿಂಡ, ಜಠರ – ಹೀಗೆ ಬೆಳೆಯುತ್ತಿರುವ ಎಲ್ಲಾ ಅಂಗಾಂಗಗಳೂ ಸೀಸದಿಂದ ಹಾನಿಗೊಳಗಾಗುತ್ತವೆ. ಇನ್ನು ಜೀವಕೋಶಗಳ ಬೆಳವಣಿಗೆ ಬಹುತೇಕ ನಿಂತುಹೋಗಿರುವ ದೊಡ್ಡವರಲ್ಲೂ ಸೀಸದಿಂದ ದುಷ್ಪರಿಣಾಮಗಳಿವೆ. ಮುಖ್ಯವಾಗಿ ಸಂತಾನಹೀನತೆ, ಮರೆಗುಳಿತನ, ಅಧಿಕ ರಕ್ತದೊತ್ತಡ, ಮಾಂಸಖಂಡ ಮತ್ತು ಕೀಲುಗಳ ನೋವು.
ಇನ್ನು ಮ್ಯಾಗಿಯವರು ಲೇಬಲ್ಲಿನ ಮೇಲೆ No MSG ಎಂದು ಬರೆದುಕೊಂಡಿದ್ದರು. ಆದರೆ ನೂಡಲ್ಸಿನಲ್ಲಿ MSG ಅಂದರೆ ಮೊನೋಸೋಡಿಯಮ್ ಗ್ಲುಟಾಮೇಟ್ ಪತ್ತೆಯಾಗಿತ್ತು. ಇದೊಂದೇ ಕಾರಣ ಸಾಕು ಮ್ಯಾಗಿಯನ್ನು ಸಂಪೂರ್ಣವಾಗಿ ನಿಷೇಧಿಸಿಬಿಡಲು. ಅಂದಹಾಗೆ ಈ ಮೊನೋಸೋಡಿಯಮ್ ಗ್ಲುಟಾಮೇಟ್ ಹಾನಿಕಾರಕವಾ ಅಲ್ಲವಾ ಎಂಬುದರ ಬಗ್ಗೆಯೇ ಗೊಂದಲವಿದೆ. ಆಹಾರಕ್ಕೆ ಇದನ್ನು ಹಾಕುವುದಕ್ಕೆ ಪ್ರಮುಖ ಕಾರಣ, ರುಚಿ ಗ್ರಹಿಸುವ ನಾಲಗೆಯಲ್ಲಿರುವ ಜೀವಕೋಶಗಳನ್ನು ಉದ್ರೇಕಿಸುವ ಶಕ್ತಿ ಈ ಎಂ.ಎಸ್.ಜಿಗೆ ಇದೆ. ರುಚಿ ಉದ್ರೇಕಗೊಳ್ಳುವ ಕಾರಣ ಆ ಆಹಾರವನ್ನು ಪದೇ ಪದೇ ತಿನ್ನುವಂತಾಗುತ್ತದೆ. ಕಂಪನಿಗಳ ವ್ಯಾಪಾರ ವೃದ್ಧಿಯಾಗುತ್ತದೆ! ಇಂಥದ್ದೇ ದುಷ್ಪರಿಣಾಮಗಳನ್ನು ಎಂ.ಎಸ್.ಜಿ ಉಂಟುಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲದ ಕಾರಣ ಎಂ.ಎಸ್.ಜಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ. ತಲೆನೋವು, ಎದೆಬಡಿತದ ಹೆಚ್ಚಳ, ಪಾರ್ಕಿನ್ಸನ್ ಖಾಯಿಲೆ, ಮರೆವಿನ ಆಲ್ಜೀಮರ್ಸ್ ಖಾಯಿಲೆಗಳಿಗೆಲ್ಲ ಈ ಎಂ.ಎಸ್.ಜಿ ಕಾರಣವಾಗುತ್ತದೆ ಎಂದನೇಕ ಅಧ್ಯಯನಗಳು ಹೇಳುತ್ತವಾದರೂ ಇದರಿಂದಲೇ ಆ ಖಾಯಿಲೆ ಬಂತು ಎಂದು ಹೇಳುವಷ್ಟು ನಿಖರ ದಾಖಲೆಗಳಿಲ್ಲ.
ಭಾರತದಲ್ಲಿ ಸೀಸ ಮತ್ತು ಮೊನೋಸೋಡಿಯಮ್ ಗ್ಲುಟಾಮೇಟ್ ಮ್ಯಾಗಿಯಲ್ಲಷ್ಟೇ ಇದೆ ಎಂದುಕೊಳ್ಳುವುದು ಮೂರ್ಖತನ. ಸೀಸದ ಅಂಶ ಆಹಾರದಿಂದ ಹಿಡಿದು ಗೊಂಬೆಗಳವರೆಗೆ, ಮನೆಗೆ ಬಳಿಯುವ ಬಣ್ಣದವರೆಗೆ ಇದೆ. ಸಿದ್ಧ ಆಹಾರದಲ್ಲಷ್ಟೇ ಸೀಸವಿರಬಹುದು, ತರಕಾರಿ ತಿನ್ಕೊಂಡು ಖುಷಿಯಾಗಿರ್ತೀನಿ ಎಂದು ಬೆನ್ನುತಟ್ಟಿಕೊಳ್ಳಬೇಡಿ. ಮನೆ ಹತ್ತಿರದ ತರಕಾರಿ ಅಂಗಡಿಯಿಂದಲೇ (ಅದರಲ್ಲೂ ನಗರಗಳಲ್ಲಿ) ಒಂದಷ್ಟು ಹಸಿ ಬಟಾಣಿ ತಂದು ನೀರಿನಲ್ಲಿ ನೆನೆಸಿಡಿ. ನಿಧಾನಕ್ಕೆ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮತ್ತಾ ಬಣ್ಣದಲ್ಲಿ ಸೀಸದ ಅಂಶವಿರುತ್ತದೆ! ಹಸಿ ಬಟಾಣಿ ಒಂದು ಉದಾಹರಣೆಯಷ್ಟೇ, ಮಾರುಕಟ್ಟೆಯಲ್ಲಿ ಫಳಫಳ ಹೊಳೆಯುವ ಎಲ್ಲವೂ ವಿಷಕಾರಿಯಾಗಿರುತ್ತದೆ. ಸೀಸವಲ್ಲದಿದ್ದರೆ ಮತ್ತೊಂದು ವಿಷದಿಂದ. ಹೊಳೆಯುವ ವಸ್ತುಗಳೆಡೆಗೇ ಆಕರ್ಷಿತರಾಗೋ ಗ್ರಾಹಕರ ತಪ್ಪಾ? ಗ್ರಾಹಕರ ದೌರ್ಬಲ್ಯವನ್ನು ತನ್ನ ಲಾಭವನ್ನಾಗಿ ಪರಿವರ್ತಿಸಿಕೊಂಡ ವ್ಯಾಪಾರಿಯ ತಪ್ಪಾ? ಇನ್ನು ಮೊನೋಸೋಡಿಯಮ್ ಗ್ಲುಟಾಮೇಟ್ ಬಗ್ಗೆ ಚರ್ಚೆಯೇ ಬೇಡ; ಮನೆಯ ಹೊರಗೆ ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಹುತೇಕ ಎಲ್ಲಾ ತಿಂಡಿಗಳಲ್ಲೂ ಅದು ಇದ್ದೇ ಇರುತ್ತದೆ!
ಭಾರತಕ್ಕೆ ಕೆ.ಎಫ್.ಸಿ, ಮೆಕ್ ಡೊನಾಲ್ಡ್ ನಂತಹ ಬಹುರಾಷ್ಟ್ರೀಯ ಕಂಪನಿಗಳ ಆಗಮನ ಶುರುವಾದಾಗ ಅದನ್ನು ವಿರೋಧಿಸಿದ ರೈತ ಸಂಘದವರು, ಎಡಪಂಥೀಯ ವಿಚಾರಧಾರೆಯವರೆಲ್ಲ ಅಪಹಾಸ್ಯಕ್ಕೀಡಾಗಿದ್ದರು. ‘ಅಭಿವೃದ್ಧಿ’ ಬೇಡ್ವಲ್ರೀ ಇವರಿಗೆ ಎಂದು ಗೇಲಿ ಮಾಡಿದ್ದರು. ಜಾಗತೀಕರಣದ ಪರಿಣಾಮವನ್ನು ತಡೆಯಲು ಯಾರಿಗೂ ಸಾಧ್ಯವಾಗದ ಕಾರಣ ಕೆ.ಎಫ್.ಸಿಯ ಜೊತೆಜೊತೆಗೆ ಹತ್ತಲವು ದಿಡೀರ್ ಆಹಾರ ತಯಾರಕರು ದಾಳಿ ಮಾಡಿದರು. ಅವುಗಳ ಜೊತೆಗೆ ಓಡೋಡಿ ಬಂದದ್ದು ಮ್ಯಾಗಿಯಂಥ ಬಾಯಿ ಚಪ್ಪರಿಸಿಯೇ ತಿನ್ನಬೇಕಾದಂತಹ ಸಿದ್ಧಾಹಾರ ಕಂಪನಿಗಳು. ಸಿದ್ಧ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬರಿವು ಇದ್ದರೂ ನಾವೆಲ್ಲ ಅದನ್ನು ತಿನ್ನುತ್ತಲೇ ಇದ್ದೆವು. ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಮ್ಯಾಗಿಯನ್ನು ಮಾಡುವುದನ್ನೇ ಬಿಟ್ಟುಬಿಡುತ್ತೇವೆ ಎಂದು ಬಡಬಡಿಸುತ್ತಿದ್ದೇವೆ. ಕೋಕೋ ಕೋಲಾ, ಪೆಪ್ಸಿಯಂತಹ ಪಾನೀಯಗಳು ವಿಷಕ್ಕೆ ಸಮ ಎಂದು ಅಧ್ಯಯನಗಳು ಸಾರಿ ಹೇಳಿದ ಮೇಲೆ ಅದನ್ನು ಕುಡಿಯುವುದನ್ನು ಬಿಟ್ಟುಬಿಟ್ಟರಾ? ಕೆಟ್ಟ ವಸ್ತುಗಳು ಬಹುಬೇಗ ಪ್ರಿಯವಾಗಿಬಿಡುವುದು ಸುಳ್ಳಲ್ಲ. ವೃತ್ತಿಯೊಂದು ಉದ್ಯಮವಾಗಿ ಲಾಭ ನಷ್ಟವೇ ಪ್ರಮುಖವಾಗಿಬಿಟ್ಟಾಗ ಲಾಬಿ ಪ್ರಾರಂಭವಾಗುತ್ತದೆ, ಲಾಭಕ್ಕಾಗಿ ತಟ್ಟೆಗೂ ವಿಷವಿಕ್ಕುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಭೂಮಿಯಲ್ಲಿ ಬೀಜವಾಕುವ ಸಮಯದಿಂದಲೇ ವಿಷದ ತಯಾರಿ ನಡೆಯುತ್ತಿದೆ ಎಂಬುದು ವಿಪರ್ಯಾಸ. ಮ್ಯಾಗಿಯನ್ನು ವಿರೋಧಿಸುವ ಸಮೂಹ ಸನ್ನಿ ಈಗ ಕಾಣುತ್ತಿದೆ. ಇದು ಎಷ್ಟು ದಿನಗಳವರೆಗೆ ಇರಬಹುದು? ಒಂದು ತಿಂಗಳು, ಎರಡು ತಿಂಗಳು? ಕೊನೇಪಕ್ಷ ಗಣೇಶನ ಹಬ್ಬದವರೆಗೆ? ಗಣೇಶನ ಹಬ್ಬ ಬಂತೆಂದರೆ ವಿಷವನ್ನೆಲ್ಲ ಮರೆತು ಸೀಸ ತುಂಬಿದ ಬಣ್ಣದಿಂದ ಅಲಂಕೃತನಾದ ಗಣಪತಿಯನ್ನು ಕಣ್ಣಲ್ಲಿ ತುಂಬಿಕೊಂಡು ಕೊನೆಗದನ್ನು ಕೆರೆಗೆ, ನಾಲೆಗೆ ಬಿಟ್ಟು ಕೃತಾರ್ಥವಾಗುವ ಕೆಲಸವನ್ನು ಮ್ಯಾಗಿ ಮೂಡಿಸಿದ ಎಚ್ಚರಿಕೆ ತಡೆಯಬಲ್ಲದೇ? ನಿಮಗಿರುವ ಅನುಮಾನೇ ನನಗೂ ಇದೆ.