May 19, 2015

ಐ.ಎ.ಎಸ್ ಮಾಫಿಯ

M N Vijayakumar
ಅವರು ಮಾಡಿದ ಏಕೈಕ ತಪ್ಪೆಂದರೆ ಐ.ಎ.ಎಸ್ ಅಧಿಕಾರಿಯಾಗಿದ್ದುಕೊಂಡು ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು. ಆಧಾರ ಸಹಿತ ದೂರುಗಳನ್ನು ನೀಡಿದ್ದು. ಐ.ಎ.ಎಸ್ ಅಧಿಕಾರಿಗಳ ಕೃಪಾಕಟಾಕ್ಷಕ್ಕೆ ಒಳಪಟ್ಟ ಸರಕಾರಗಳು ಎಂ.ಎನ್.ವಿಜಯಕುಮಾರರಿಗೆ ಮಾನ ಸಮ್ಮಾನಗಳನ್ನು ನೀಡಲಿಲ್ಲ. ಪದೇ ಪದೇ ವರ್ಗಾವಣೆ ಮಾಡಿದರು. ಸಾಧ್ಯವಾದ ಎಲ್ಲಾ ರೀತಿಗಳಿಂದಲೂ ಅವರಿಗೆ ತೊಂದರೆ ಕೊಟ್ಟರು. ಕೊನೆಗೆ ನಿವೃತ್ತಿಗೆ ಇನ್ನೊಂದು ದಿನವಿರುವಾಗ ಬಲವಂತದಿಂದ ನಿವೃತ್ತರನ್ನಾಗಿಸಿದರು. ನಿವೃತ್ತ ಜೀವನದಲ್ಲಿ ಅವರಿಗೆ ಲಭಿಸಬೇಕಿದ್ದ ಸೌಲಭ್ಯಗಳನ್ನು ಮೊಟಕುಗೊಳಿಸಿ ಮಾನಸಿಕ ಮತ್ತು ಆರ್ಥಿಕ ಹಿಂಸೆಗೆ ಒಳಪಡಿಸಿದರು. ಜೀವನ ಪರ್ಯಂತ ಭ್ರಷ್ಟತೆ ವಿರುದ್ಧ ಹೋರಾಡುತ್ತಲೇ ಬಂದ ವಿಜಯಕುಮಾರವರನ್ನು ಬಲವಂತದಿಂದ ನಿವೃತ್ತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು ಭ್ರಷ್ಟತೆಯ ವಿರುದ್ಧ ಕೂಗು ಹಾಕುತ್ತಲೇ ಅಧಿಕಾರವಿಡಿದ ಮೋದಿ ಸರಕಾರ. ನಮ್ಮದು ಹಗರಣರಹಿತ ಸರಕಾರ ಎಂದು ಕೊಚ್ಚಿಕೊಳ್ಳುವ ಸಿದ್ಧರಾಮಯ್ಯ ‘ನಮಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಕೈತೊಳೆದುಕೊಳ್ಳುವ ಮಾತನಾಡಿದ್ದು ನಿಷ್ಠಾವಂತರ ಬಗೆಗಿನ ಅವರ ಪ್ರೀತಿಗೆ ಸಾಕ್ಷಿ. ಕೇಂದ್ರದ ನಿರ್ಧಾರದಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲದೇ ಇರಬಹುದು, ಆದರೆ ನೈತಿಕ ಬೆಂಬಲ ಕೊಟ್ಟು ಕೇಂದ್ರಕ್ಕೊಂದು ಪತ್ರವನ್ನಾದರೂ ಬರೆದು ನಿಷ್ಠಾವಂತ ಅಧಿಕಾರಿಗಳಿಗೊಂದು ಸಂದೇಶ ನೀಡಬಹುದಿತ್ತಲ್ಲವೇ? ಎಂ. ಎನ್. ವಿಜಯಕುಮಾರ್ ರವರು ಕೇಂದ್ರಕ್ಕೆ, ರಾಜ್ಯಕ್ಕೆ ಬರೆದಿರುವ ಮನವಿ ಪತ್ರದ ಈ ಕನ್ನಡಾನುವಾದ ಹಿಂಗ್ಯಾಕೆಯ ಓದುಗರಿಗೆ ಐ.ಎ.ಎಸ್ ಮಾಫಿಯಾದ ಬಗ್ಗೆ ಪರಿಚಯಿಸಿಕೊಡಲಿದೆ. 
ಎಂ.ಎನ್. ವಿಜಯ್ ಕುಮಾರ್
ಕನ್ನಡಕ್ಕೆ: ಡಾ ಅಶೋಕ್.ಕೆ.ಆರ್

ಇದೇ 2015ರ ಎಪ್ರಿಲ್ 28ಕ್ಕೆ ನಿವೃತ್ತನಾಗಬೇಕಿದ್ದ ನನ್ನನ್ನು ಒಂದು ದಿನ ಮೊದಲು ಬಲವಂತದಿಂದ ನಿವೃತ್ತನಾಗುವಂತೆ ಮಾಡಿದ ಹಿಂದಿನ ಕಾರಣಗಳನ್ನು ಅರಿಯಬೇಕಾದರೆ ಭಾರತದ ಐ.ಎ.ಎಸ್ ಮಾಫಿಯ ಕಾರ್ಯನಿರ್ವಹಿಸುವ ರೀತಿಯನ್ನು ಮತ್ತು ಈ ಮಾಫಿಯ ದೇಶದ ಸಂವಿಧಾನಾತ್ಮಕ ಸಂಸ್ಥೆಗಳನ್ನು ತಪ್ಪುದಾರಿಗೆಳೆಯುವ ವಿಧಾನವನ್ನು ತಿಳಿಯಬೇಕು. 2010ರಲ್ಲಿ ಐ.ಎ.ಎಸ್ ಮಾಫಿಯ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮತ್ತಲವು ಖ್ಯಾತನಾಮರ ಹೆಸರನ್ನು ಬಳಸಿಕೊಂಡು ಕಾನೂನು ಬಾಹಿರ ಕೆಲಸಗಳನ್ನು ಮಾಡಿದ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ಈ ಐ.ಎ.ಎಸ್ ಮಾಫಿಯಾಗೆ ನಾನು ಮಗ್ಗಲು ಮುಳ್ಳಾಗಿದ್ದ ಕಾರಣ ಇರುವ ಎಲ್ಲಾ ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರಿ ನನ್ನನ್ನು ಬಲವಂತದಿಂದ ನಿವೃತ್ತನಾಗುವಂತೆ ಮಾಡುವುದು ಕಷ್ಟವಾಗಲಿಲ್ಲ. ಈ ಮಾಫಿಯಾದ ಸುಳ್ಳುಗಳಿಂದ ವಿಚಲಿತರಾಗದೆ ಉನ್ನತ ಸಂಸ್ಥೆಗಳು ನನಗೆ ನ್ಯಾಯ ದೊರಕಿಸಿಕೊಡಬಲ್ಲವೇ ಎಂಬುದೇ ಈಗ ನನ್ನೆದುರಿಗಿರುವ ಪ್ರಶ್ನೆ. ನನಗನ್ಯಾಯ ಮಾಡಿದವರಿಗೆ ಶಿಕ್ಷೆಯಾಗಿ, ನನಗೆ ನ್ಯಾಯ ದೊರಕಲಿ ಎಂಬ ಆಶಯದಿಂದ ಗೌಪ್ಯವಾಗಿರಬೇಕಿದ್ದ ಈ ಪತ್ರವನ್ನು ಸಾರ್ವಜನಿಕ ಓದಿಗೆ ತೆರೆದಿದ್ದೇನೆ. ಐ.ಎ.ಎಸ್ ಸಂಸ್ಥೆಯ ಇತಿಹಾಸದಲ್ಲಿ ನನ್ನ ಬಲವಂತದ ನಿವೃತ್ತಿ ಹೇಗೆ ಅಪರೂಪವೋ ಹಾಗೆಯೇ ಈ ರೀತಿಯ ಸಾರ್ವತ್ರಿಕ ಸಾರ್ವಜನಿಕ ಮನವಿ ಕೂಡ ಅಷ್ಟೇ ಅಪರೂಪ. ಐ.ಎ.ಎಸ್ ಮಾಫಿಯ ಕಟ್ಟಿರುವ ಬೃಹತ್ ಗೋಡೆಯನ್ನು ಕೆಡವುವುದಕ್ಕೆ ನನಗಿನ್ಯಾವ ದಾರಿಯೂ ತೋಚುತ್ತಿಲ್ಲ.

ಕರ್ನಾಟಕದಲ್ಲಿ ಐ.ಎ.ಎಸ್ ಮಾಫಿಯಾದ ಜನನ

ಅಧಿಕಾರ ಭ್ರಷ್ಟಾಚಾರವನ್ನುಟ್ಟು ಹಾಕುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ದೀರ್ಘ ಅವಧಿಯವರೆಗೆ ಅಧಿಕಾರದ ರುಚಿ ಹತ್ತಿಸಿಕೊಂಡ ಒಂದು ಗುಂಪಿನ ಜನರು ಮಾಫಿಯಾದ ಹುಟ್ಟಿಗೆ ಕಾರಣಕರ್ತರಾಗುತ್ತಾರೆ ಎಂಬ ಸಂಗತಿ ಬಹಳ ಜನರಿಗೆ ತಿಳಿದಿರಲಾರದು. ಮಾಫಿಯಾದ ಹುಟ್ಟಿಗೆ ದುರ್ಬಲ ಸರಕಾರವಿರಬೇಕಷ್ಟೇ. ಮೊದಲ ಪೋಸ್ಟಿಂಗ್ಸಿನಿಂದ ನಿವೃತ್ತರಾಗುವ ತನಕ ಅಧಿಕಾರದ ರುಚಿ ಹತ್ತಿಸಿಕೊಳ್ಳುವ ಐ.ಎ.ಎಸ್ ಅಧಿಕಾರಿಗಳಿಗೆ ಇಂತಹುದೊಂದು ಅವಕಾಶ ಕರ್ನಾಟಕದಲ್ಲಿ ಲಭಿಸಿದ್ದು 2005ರ ಈಚೆಗೆ. ಭ್ರಷ್ಟ ಅಧಿಕಾರಿಗಳೆಲ್ಲ ಸಂಘಟಿತರಾಗಲು ಪ್ರಾರಂಭಿಸಿದರು. ನೀತಿ ನಿಯಮಗಳನ್ನು ಮೀರಲು ಪ್ರಾರಂಭಿಸುವುದರ ಜೊತೆಜೊತೆಗೆ ಭ್ರಷ್ಟಾಚಾರವನ್ನು ತಡೆಯಲೆಂದಿರುವ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲು ಶುರುಮಾಡಿದರು. ಜುಲೈ 4 2005ರಂದು ಅಂದಿನ ಮುಖ್ಯ ಕಾರ್ಯದರ್ಶಿ ಶ್ರೀ ಕೆ.ಕೆ. ಮಿಶ್ರಾರವರಿಗೆ ವ್ಯಾಪಕಗೊಳ್ಳುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತೆಗೆದುಕೊಳ್ಳಬೇಕಾದ ಸಂಭಾವ್ಯ ನಿರ್ಧಾರಗಳ ಕುರಿತು ಪತ್ರ ಬರೆದೆ. ನಂತರ ನಡೆದಿದ್ದು ಆಹ್ಲಾದ ಕೊಡುವಂತದ್ದಾಗಿರಲಿಲ್ಲ.

ಇಂಧನ ಇಲಾಖೆಯಲ್ಲಿದ್ದು ಕೆಲವು ಐ.ಎ.ಎಸ್. ಅಧಿಕಾರಿಗಳು ಜನರ ಹಣವನ್ನು ದೋಚುವುದರ ಕುರಿತಂತೆ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾರವರಿಗೆ 2005ರಲ್ಲಿ ವಿಸ್ತೃತ ವರದಿ ನೀಡಿದೆ. ನನ್ನ ವರದಿಯನ್ನು ಮಿಶ್ರಾರವರು ಮೆಚ್ಚಿಕೊಂಡರಾದರೂ ವರದಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಭಯ ವ್ಯಕ್ತಪಡಿಸಿದರು ಮತ್ತು ಈ ಭ್ರಷ್ಟ ಅಧಿಕಾರಿಗಳು ನಿಮ್ಮ ಹೆಸರನ್ನು ಹಾಳು ಮಾಡಿ ನಿಮಗೆ ತೊಂದರೆ ಕೊಡುವ ಉದ್ದೇಶದಿಂದ ಯಾವ ನೀಚ ಮಟ್ಟಕ್ಕಾದರೂ ಇಳಿಯಬಹುದು ಎಂದು ಎಚ್ಚರಿಕೆ ನೀಡಿದರು. ನಿವೃತ್ತರಾಗುವುದಕ್ಕೆ ಸ್ವಲ್ಪ ದಿನದ ಮೊದಲು ಕೆ.ಕೆ.ಮಿಶ್ರಾರವರು ನನಗೆ ಕರೆ ಮಾಡಿ ಲೋಕಾಯುಕ್ತ ಸಂಸ್ಥೆಗೆ ಸೇರಲು ನಿಮಗೆ ಇಚ್ಛೆಯಿದೆಯೇ ಎಂದು ಕೇಳಿದರು. ಭ್ರಷ್ಟರ ಬಗ್ಗೆ ನಾನೇ ಕೊಟ್ಟ ವರದಿ ಮತ್ತು ಇತರೆ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧ ನಿಂತೇ ಹೋಗಿರುವ ಕೇಸುಗಳ ಬಗ್ಗೆ ನೀವು ವಿಚಾರಣೆ ನಡೆಸಿ ಒಂದು ಹಂತಕ್ಕೆ ತರಬಹುದು ಎಂದು ತಿಳಿಸಿದರು. ಅವರ ಮಾತಿಗೆ ಒಪ್ಪಿ ಅಂದಿನ ಲೋಕಾಯುಕ್ತ ಎನ್.ವೆಂಕಟಾಚಲರವರನ್ನು ಭೇಟಿ ಮಾಡಿ ಲೋಕಾಯುಕ್ತ ಸಂಸ್ಥೆಯಲ್ಲಿ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಲಿಕ್ಕಿರುವ ಇಚ್ಛೆಯನ್ನು ಹೇಳಿಕೊಂಡೆ. ಆಗ ಲೋಕಾಯುಕ್ತ ವೆಂಕಟಾಚಲ ಒಪ್ಪಿಗೆಯನ್ನು ಪತ್ರದಲ್ಲಿ ಕೊಟ್ಟು ಮುಖ್ಯಕಾರ್ಯದರ್ಶಿಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿ ಎಂದರು. ಇಷ್ಟೊತ್ತಿಗೆ ಮಿಶ್ರಾ ನಿವೃತ್ತರಾಗಿ ಬಿ.ಕೆ.ದಾಸ್ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿದ್ದರು. ಮುಖ್ಯಕಾರ್ಯದರ್ಶಿಯಾಗುವುದಕ್ಕೆ ಮುಂಚೆ ಬಿಕೆ.ದಾಸ್ ಸಾರ್ವಜನಿಕ ಉದ್ದಿಮೆಯ ಇಲಾಖೆಯಲ್ಲಿ ನನ್ನ ಸೀನಿಯರ್ ಆಗಿದ್ದರು. ಆ ಇಲಾಖೆಯಲ್ಲಿದ್ದಾಗ ಬಿಕೆ.ದಾಸ್ ರವರ ಕಾರ್ಯವೈಖರಿಲ್ಲಿದ್ದ ಹುಳುಕುಗಳನ್ನು ಅವರ ಗಮನಕ್ಕೆ ತಂದಿದ್ದೆ. ಎನ್.ವೆಂಕಟಾಚಲರವರು ಸಾರ್ವಜನಿಕವಾಗಿಯೇ ಬಿಕೆ.ದಾಸ್ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ್ದರು. ಇಂತ ಬಿಕೆ.ದಾಸ್ ನನ್ನನ್ನು ಲೋಕಾಯುಕ್ತಕ್ಕೆ ನೇಮಿಸುತ್ತಾರೆ ಎನ್ನುವುದು ಹಗಲುಗನಸೇ ಸರಿ. ನಂತರದ ದಿನಗಳಲ್ಲಿ ನನಗೆ ತಿಳಿದು ಬಂದಂತೆ ಬಿಕೆ.ದಾಸ್ ರವರ ಸೂಚನೆಯ ಮೇರೆಗೆ ಕೆಲವು ಹಿರಿಯ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ಗುಂಪುಗೂಡಿ ಜಿಲ್ಲಾಮಟ್ಟದ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರಿ ಅವರೆಲ್ಲರೂ ನನ್ನನ್ನು ಲೋಕಾಯುಕ್ತ ಕಛೇರಿಗೆ ನಿಯೋಜಿಸುವುದನ್ನು ವಿರೋಧಿಸುವಂತೆ ಮಾಡಿದ್ದರು. ವೆಂಕಟಾಚಲರವರು ನನಗೆ ಕರೆ ಮಾಡಿ ನಿಮ್ಮನ್ನು ಲೋಕಾಯುಕ್ತಕ್ಕೆ ತೆಗೆದುಕೊಳ್ಳುವುದು ಕಷ್ಟಸಾಧ್ಯ, ತೆಗೆದುಕೊಳ್ಳದಂತೆ ಕಟ್ಟಿಹಾಕಿದ್ದಾರೆ, ಕೆ.ಕೆ.ಮಿಶ್ರಾರವರಿಗೂ ಈ ಸಂದಿಗ್ಧತೆಯನ್ನು ವಿವರಿಸಿದ್ದೇನೆ ಎಂದರು (ಕೆ.ಕೆ.ಮಿಶ್ರಾ ನಿವೃತ್ತರಾದ ನಂತರ ಮಾಹಿತಿ ಆಯೋಗದ ಅಧ್ಯಕ್ಷರಾದರು). ಇದು ಐ.ಎ.ಎಸ್ ಮಾಫಿಯಾದ ಜನನ. 
http://depenq.com/PRESSRELEASE/14aug06.pdf 

ಕರ್ನಾಟಕದ ಐ.ಎ.ಎಸ್ ಮಾಫಿಯಾ ಬೆಳೆದ ಬಗೆ

ಆಗಸ್ಟ್ 28, 2006ರಂದು, ಕರ್ನಾಟಕ ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ನೇಮಕಗೊಂಡ ಕೆಲವು ದಿನಗಳ ತರುವಾಯ ನಡೆದ ಐ.ಎ.ಎಸ್ ಅಧಿಕಾರಿಗಳ ಸಭೆಯಲ್ಲಿ ಐ.ಎ.ಎಸ್ ಅಧಿಕಾರಿಗಳ ಸಹಕಾರವನ್ನು ಕೋರುತ್ತಾ ತಮ್ಮ ಮತ್ತು ತಮ್ಮ ಕುಟುಂಬದ ಸ್ಥಿರ ಮತ್ತು ಚರಾಸ್ತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡುವಂತೆ ಹಿರಿಯ ಐ.ಎ.ಎಸ್ ಅಧಿಕಾರಿಗಳಿಗೆ ಕೇಳಿಕೊಂಡರು. ನಾನು ಮತ್ತು ಇತರೆ ಇಬ್ಬರು ಅಧಿಕಾರಿಗಳು ಈ ಆಸ್ತಿ ಘೋಷಣೆಯ ಸಲಹೆಗೆ ಸಭೆಯಲ್ಲಿಯೇ ಒಪ್ಪಿಗೆ ಸೂಚಿಸಿದೆವು. ಸಭೆ ನಡೆದ ಮರುದಿನವೇ ಅಂದರೆ ಆಗಸ್ಟ್ 29, 2006ರಂದು ನನ್ನ ಮತ್ತು ಕುಟುಂಬ ಸದಸ್ಯರ ಆಸ್ತಿಯ ಸಂಪೂರ್ಣ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ನೀಡಿದೆ. ಲೋಕಾಯುಕ್ತ ಅದೇ ದಿನ ಮೆಚ್ಚುಗೆಯ ಪತ್ರ ಕಳುಹಿಸಿತು. ದುರದೃಷ್ಟವಶಾತ್, ಅಂದಿನ ಸಭೆಯಲ್ಲಿ ಆಸ್ತಿ ಘೋಷಿಸುವುದಾಗಿ ಹೇಳಿದ್ದ ಈರ್ವರು ನಿವೃತ್ತರಾಗುವವರೆಗೂ ಆ ಕೆಲಸ ಮಾಡಲಿಲ್ಲ. ಲೋಕಾಯುಕ್ತಕ್ಕೆ ಆಸ್ತಿ ವಿವರಗಳನ್ನು ನೀಡಿ ಅದನ್ನು ಸಾರ್ವಜನಿಕಗೊಳಿಸುವುದಕ್ಕೆ ಒಪ್ಪಿಗೆ ಕೊಟ್ಟ ದೇಶದ ಮೊದಲ ಐ.ಎ.ಎಸ್ ಅಧಿಕಾರಿ ನಾನು. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಹೆಚ್ಚೆಚ್ಚು ಜನರು ಐ.ಎ.ಎಸ್ ಅಧಿಕಾರಿಗಳ ಆಸ್ತಿ ವಿವರಗಳನ್ನು ಕೇಳಲಾರಂಭಿಸಿದಾಗ ಕರ್ನಾಟಕ ಮಾಹಿತಿ ಆಯೋಗ ಐ.ಎ.ಎಸ್ ಅಧಿಕಾರಿಗಳಿಗೆ ಆಸ್ತಿ ಘೋಷಿಸುವಂತೆ ಸೂಚಿಸಿತ್ತು. ಆದರೆ ಅನೇಕ ಐ.ಎ.ಎಸ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಈ ಸೂಚನೆಯನ್ನು ಹಿಂಪಡೆದುಬಿಟ್ಟಿತು. ಅಕ್ರಮ ಆಸ್ತಿ ಹೊಂದಿದ ದೊಡ್ಡ ಸಂಖೈಯ ಐ.ಎ.ಎಸ್ ಅಧಿಕಾರಿಗಳಿಗೆ ಆಗಷ್ಟೇ ಕಣ್ಣುಬಿಡುತ್ತಿದ್ದ ಐ.ಎ.ಎಸ್ ಮಾಫಿಯಾವನ್ನು ಸೇರುವುದರಿಂದ ಬಹಳಷ್ಟು ಪ್ರಯೋಜನಗಳಿವೆ ಎಂಬ ಸತ್ಯ ತಿಳಿಯಿತು. ಲೋಕಾಯುಕ್ತ ಮನವಿ ಐ.ಎ.ಎಸ್ ಅಧಿಕಾರಿಗಳನ್ನು ಆಸ್ತಿ ಘೋಷಣೆಗೆ ಉತ್ಸುಕರನ್ನಾಗಿಸುವ ಬದಲು ಸಂಪೂರ್ಣ ವಿರೋಧಾಭಾಸದ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಿದ್ದು ವಿಪರ್ಯಾಸ.
http://depenq.com/PRESSRELEASE/Loka30AUG06.pdf

No comments:

Post a Comment