May 29, 2015

ಐ.ಎ.ಎಸ್ ಮಾಫಿಯ .... ಭಾಗ 2

ಎಂ.ಎನ್.ವಿಜಯಕುಮಾರ್
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್
ಪ್ರಬಲವಾಗುವತ್ತ ಐ.ಎ.ಎಸ್ ಮಾಫಿಯ

2005 ಮತ್ತು 2007ರ ನಡುವೆ ಇಂಧನ ಇಲಾಖೆಯಲ್ಲಿನ ಹಗರಣಗಳು, ಭೂಕಬಳಿಕೆ, ಮೈಸೂರು ಮಿನರಲ್ಸ್ ಸೇರಿ ಇತರೆ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವರದಿಗಳನ್ನು ನೀಡಿದ್ದೆ. ಅವೆಲ್ಲಾ ವರದಿಗಳನ್ನು ಒಟ್ಟುಗೂಡಿಸಿದರೆ ನಡೆದ ಭ್ರಷ್ಟಾಚಾರದ ಮೊತ್ತ ಮೂವತ್ತು ಸಾವಿರ ಕೋಟಿಗಳನ್ನು ದಾಟುತ್ತದೆ. 2007ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದಾಗ ಹಗರಣಗಳ ಸಂಖೈಯಲ್ಲಿ ಬಹಳವಾಗಿ ಹೆಚ್ಚಳವಾಯಿತು. ಎಷ್ಟರಮಟ್ಟಿಗೆಂದರೆ ಚುನಾವಣೆಯಲ್ಲಿ ತಮಗೆ ಅನುಕೂಲಕರವಾದ ಅಭ್ಯರ್ಥಿಯ ಗೆಲುವಿಗಾಗಿ ಹಣ ಕೊಡುವಷ್ಟರ ಮಟ್ಟಿಗೆ ಐ.ಎ.ಎಸ್ ಅಧಿಕಾರಿಗಳ ಭ್ರಷ್ಟಾಚಾರ ಹೆಚ್ಚಾಗಿತ್ತು. ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ನಿಯಮಬಾಹಿರ ಗಣಿಗಾರಿಕೆಯನ್ನು ಮತ್ತು ಭೂಕಬಳಿಕೆಯನ್ನು ಪ್ರೋತ್ಸಾಹಿಸಿದರು. ಇವೆರಡೇ ಹಗರಣಗಳ ಮೊತ್ತ ನಾಲ್ಕು ಲಕ್ಷ ಕೋಟಿ ದಾಟುತ್ತದೆ. ಇಂತ ಎಲ್ಲಾ ಅನ್ಯಾಯದ ಹಗರಣಗಳಲ್ಲೂ ಐ.ಎ.ಎಸ್ ಮಾಫಿಯಾದ ಒಬ್ಬ ವ್ಯಕ್ತಿಯಾದರೂ ಇದ್ದೇ ಇರುತ್ತಾನೆ.
ಭಾರತದಾದ್ಯಂತ ವಿಸ್ತರಿಸಿದ ಐ.ಎ.ಎಸ್ ಮಾಫಿಯ

ಅನೈತಿಕ ಮಾರ್ಗದಲ್ಲಿ ಗಳಿಸಿದ ಸಂಪತ್ತು ತನಿಖಾ ತಂಡಗಳ ಕಣ್ಣಿಗೆ ಬೀಳದಿರಬೇಕಾದರೆ ವಿವಿಧ ರಾಜ್ಯಗಳ ಭ್ರಷ್ಟ ಅಧಿಕಾರಿಗಳು ಜೊತೆ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಒಳ್ಳೆಯದು ಎಂಬಂಶವನ್ನು ಐ.ಎ.ಎಸ್ ಮಾಫಿಯ ಕಂಡುಕೊಂಡಿತ್ತು. ಕರ್ನಾಟಕದ ಭ್ರಷ್ಟ ಐ.ಎ.ಎಸ್ ಅಧಿಕಾರಿಗಳು ಆಂಧ್ರಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ್ದರ ಬಗ್ಗೆ ಸರಕಾರಕ್ಕೆ ವರದಿ ಮಾಡಿದ್ದೆ. ಮೂರು ವಾರಗಳ ಕಾಲ ಬೆಂಗಳೂರಿನ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಬಿಹಾರದ ಐ.ಎ.ಎಸ್ ಅಧಿಕಾರಿಯೊಬ್ಬ ಕಛೇರಿಯಲ್ಲಿ ಹಳೆಯ ಅಧಿಕಾರಿಯೇ ಇದ್ದಾರೆಂದುಕೊಂಡು ಫೋನಿನಲ್ಲಿ ‘ಹಣ ರವಾನೆಯಾಗಿದೆ. ಕೆಲಸ ಮುಗಿಸಿಕೊಡಬಹುದು’ ಎಂದು ಹೇಳಿದ್ದರು! ಲೋಕಾಯುಕ್ತ ಸಂಸ್ಥೆಗಳ ಅಧಿಕಾರ ರಾಜ್ಯದ ಗಡಿಯೊಳಗೆ ಮೀಸಲಾಗಿಬಿಟ್ಟಿರುವುದರಿಂದ ಮತ್ತು ಸಿ.ಬಿ.ಐನಂತಹ ಸಂಸ್ಥೆಗಳ ವ್ಯಾಪ್ತಿಗೆ ರಾಜ್ಯದ ಅಧಿಕಾರಿಗಳು ಬರುವುದಿಲ್ಲವಾದ್ದರಿಂದ ಈ ಐ.ಎ.ಎಸ್ ಮಾಫಿಯ ಬಹುಬೇಗನೆ ದೇಶಾದ್ಯಂತ ಹರಡಿತು. 2010ರಿಂದೀಚೆಗೆ ಕಳ್ಳ ಮಾರ್ಗದಲ್ಲಿ ಗಳಿಸಿದ ಹಣ ಐ.ಎ.ಎಸ್ ಮಾಫಿಯಾದ ನೆರವಿನಿಂದ ದೇಶಾದ್ಯಂತ ಹರಡಿತು ಮತ್ತು ವಿದೇಶಗಳಿಗೂ ತಲುಪಿತು. ಸಾಮಾನ್ಯ ಜನರಷ್ಟೇ ಅಲ್ಲ, ಕೆಲವು ಐ.ಎ.ಎಸ್ ಅಧಿಕಾರಿಗಳು ಕೂಡ ಪ್ರಾಮಾಣಿಕತೆಯ ಸೋಗಿನಲ್ಲಿರುವ ಭ್ರಷ್ಟರ ಮುಖವಾಡ ಕಳಚಿಬಿದ್ದರೆ ಅಚ್ಚರಿ ಪಡುತ್ತಾರೆ.

1981ರಲ್ಲಿ ಐ.ಎ.ಎಸ್ ಸೇರಿದಾಗಿನಿಂದ ಇಲ್ಲಿಯವರೆಗೆ ನನ್ನ ಕಾರ್ಯವಿಧಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಆದರೆ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದವರ ನೈತಿಕತೆಯಲ್ಲಿ ಪತನವಾಗಿದೆ, ಕಳೆದ ಹತ್ತು ವರುಷಗಳಿಂದ ಮೂಗು ತೂರಿಸುವಿಕೆ ಹೆಚ್ಚಾಗಿದೆ.

ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ 1976ರಿಂದ 1982ರವರೆಗೆ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. 1981ರಲ್ಲಿ ಐ.ಎ.ಎಸ್ಸಿಗೆ ಆಯ್ಕೆಯಾದೆ. 1982ರಲ್ಲಿ ನಾನು ಮುಸ್ಸೋರಿಯ ಐ.ಎ.ಎಸ್ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿದ್ದಾಗ ಆಗಿನ ನಿರ್ದೇಶಕ ದಿ. ಪಿ.ಎಸ್. ಅಪ್ಪುರವರು ತಪ್ಪು ಮಾಡುತ್ತಿದ್ದ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿಗಳನ್ನು ಡಿ.ಒ.ಪಿ.ಟಿ (department of personnel and training)ಯವರು ರಕ್ಷಿಸುತ್ತಿದ್ದುದನ್ನು ಕಂಡು ರಾಜೀನಾಮೆ ನೀಡಿಬಿಟ್ಟರು. ಆಗಿನಿಂದಲೇ ಭ್ರಷ್ಟ ವ್ಯವಸ್ಥೆ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾರಂಭಿಸಿದೆ. ಇಲಾಖೆಯವರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದನ್ನು ಬಿಟ್ಟು ಅವರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತು ಪಿ.ಎಸ್.ಅಪ್ಪುರವರ ಸಲಹೆಗಳನ್ನು ಸಾರಸಗಾಟಾಗಿ ತಿರಸ್ಕರಿಸಿದರು. ಭ್ರಷ್ಟ ಅನೈತಿಕ ಕೆಲಸ ಮಾಡುವ ಅಧಿಕಾರಿಗಳನ್ನು ಕಂಡೂ ಕಾಣದಂತೆ ಇರುವುದಿಲ್ಲ ಎಂದು ಪ್ರಮಾಣ ಮಾಡಿಕೊಂಡೆ, ನನ್ನ ಪ್ರಮಾಣದಿಂದ ಯಾವಾಗಲಾದರೂ ನನ್ನ ಕೆಲಸ ಹೋಗುತ್ತದೆ ಎಂಬ ಸತ್ಯ ಮೂವತ್ತನಾಲ್ಕು ವರುಷಗಳ ಹಿಂದೆಯೇ ತಿಳಿದಿತ್ತು.

ಹಿರಿಯ ಐ.ಎ.ಎಸ್ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ 1986ರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರಗಳಲ್ಲನೇಕವನ್ನು ನಾನು ಇಟ್ಟಿಲ್ಲವಾದರೂ ಸರಕಾರದ ಫೈಲುಗಳಲ್ಲಿ ಅವುಗಳಿವತ್ತಿಗೂ ಲಭ್ಯವೆಂದು ಆಶಿಸುತ್ತೇನೆ. 1997ರಿಂದ 2013ರವರೆಗೆ ಬರೆದ ಕೆಲವು ಪತ್ರಗಳ ಲಿಂಕುಗಳನ್ನು ಕೆಳಗೆ ನೀಡಿದ್ದೇನೆ. ನನ್ನ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಿಲ್ಲವೆಂಬುದು ಆ ಪತ್ರಗಳಿಂದ ನಿಮಗೆ ತಿಳಿಯುತ್ತದೆ. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸುತ್ತಲೇ ಬಂದಿದ್ದೇನೆ. ಇದೇ ಸಮಯದಲ್ಲಿ ಐ.ಎ.ಎಸ್ ಅಧಿಕಾರಿಗಳ ನೈತಿಕತೆ ಪಾತಾಳ ತಲುಪುತ್ತಿತ್ತು. 2005ರಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ಕೆ.ಮಿಶ್ರಾ ನಾನವರಿಗೆ ಕೊಟ್ಟ ವರದಿಯನ್ನು ಆಧರಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅವರಿಗಾಗುತ್ತಿದ್ದ ಭಯದ ಬಗ್ಗೆ ಹೇಳಿದರು. 2006ರಲ್ಲಿ ನಾನು ನೀಡಿದ ಭ್ರಷ್ಟರ ವರದಿಯ ಬಗ್ಗೆ ಮೌನವಾಗಿದ್ದ ಬಿ.ಕೆ.ದಾಸ್ ನನ್ನನ್ನು ತತ್ ಕ್ಷಣವೇ ವರ್ಗ ಮಾಡಲು ಮಾತ್ರ ಹೇಸಲಿಲ್ಲ. 2006ರ ಕೊನೆಗೆ ಕೆಲವು ಸಮಯದ ಕಾಲ ಡಾ ಮಾಲತಿ ದಾಸ್ ಮುಖ್ಯ ಕಾರ್ಯದರ್ಶಿಯಾಗಿದ್ದರು. ಭ್ರಷ್ಟರ ಬಗೆಗಿನ ನನ್ನ ವರದಿಗಳ ಕಾರಣದಿಂದ ನನಗೆ ಜೀವ ಭಯವಿದೆ ಎಂದು ಹೇಳಿಕೊಂಡಿದ್ದೆ. ಲಿಖಿತ ಹೇಳಿಕೆಯನ್ನು ಬರೆಸಿಕೊಂಡಿದ್ದರು. ಅದನ್ನಾಧರಿಸಿ ಆಗಿನ ಮುಖ್ಯಮಂತ್ರಿ ನನ್ನ ವರ್ಗಾವಣೆಯನ್ನು ಬದಲಿಸಿದ್ದರು. ಆದರದು ಕಾರ್ಯರೂಪಕ್ಕೆ ಬರಲಿಲ್ಲ. ಕಾರಣ? ಡಾ. ಮಾಲತಿ ದಾಸ್ ರವರ ಸ್ವಂತ ತಮ್ಮ ಕೂಡ ನನ್ನ ವರದಿಯಲ್ಲಿದ್ದ ಭ್ರಷ್ಟ ಅಧಿಕಾರಿಗಳಲ್ಲೊಬ್ಬನಾಗಿದ್ದ! ಮಾಲತಿ ದಾಸರ ನಂತರ ಮುಖ್ಯ ಕಾರ್ಯದರ್ಶಿಯಾಗಿ ಬಂದ ಪಿ.ಬಿ.ಮಹಿಷಿಯವರೇ ಭ್ರಷ್ಟರಾಗಿದ್ದರು, ಯಾವೊಂದು ಹಿಂಜರಿಕೆಯೂ ಇಲ್ಲದೆ ಭ್ರಷ್ಟರನ್ನು ನಾನು ರಕ್ಷಿಸುತ್ತೇನೆ ಎಂದು ಹೇಳಿದ್ದರವರು! ಪಿ.ಬಿ.ಮಹಿಷಿಯವರ ಭ್ರಷ್ಟತೆಯನ್ನು ನನ್ನ ಪತ್ನಿ ಸಾರ್ವಜನಿಕಗೊಳಿಸಿದಾಗ ಮಹಿಷಿಯವರನ್ನು ಕೆಳಗಿಳಿಸಿ ಸುಧಾಕರ್ ರಾವ್ ರವರನ್ನು ಮುಖ್ಯಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಭ್ರಷ್ಟ ಐ.ಎ.ಎಸ್ ಅಧಿಕಾರಿಗಳ ವಿರುದ್ಧದ ವರದಿಗಳನ್ನು ಮುಂದುವರೆಸಿದರೆ, ನಿಮಗೆ ಬೆಂಬಲ ಕೊಡುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ತೊಂದರೆಗೀಡುಮಾಡಬೇಕಾಗುತ್ತದೆ ಎಂಬ ಬೆದರಿಕೆಯ ಮಿಂಚೆ ಕಳುಹಿಸಿದ್ದರು ನನ್ನ ಪತ್ನಿಗೆ. ಸುಧಾಕರ್ ರಾವ್ ನಂತರ ಮುಖ್ಯ ಕಾರ್ಯದರ್ಶಿಯಾದ ಎಸ್.ವಿ.ರಂಗನಾಥ್ ರದು ಮತ್ತಷ್ಟು ತೆರೆದ ವ್ಯಕ್ತಿತ್ವ! ‘ನಿಮಗೆ ಯಾವುದಾದರೂ ಹುದ್ದೆ ದೊರಕಬೇಕೆಂದರೆ ನೀವಿಲ್ಲಿಯವರೆಗೆ ಸರಕಾರಕ್ಕೆ ಭ್ರಷ್ಟರ ವಿರುದ್ಧ ಸಲ್ಲಿಸಿರುವ ವರದಿಗಳನ್ನು ಮರೆತುಬಿಡಬೇಕು ಮತ್ತು ಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಕಣ್ಣು ಮುಚ್ಚಿಕೊಂಡಿರಬೇಕು’ ಎಂದು ಹೇಳಿಬಿಟ್ಟರು. ನಂತರ ಬಂದ ಕೌಶಿಕ್ ಮುಖರ್ಜಿ ಐ.ಎ.ಎಸ್ ಮಾಫಿಯ ಕಾರ್ಯನಿರ್ವಹಿಸುವ ರೀತಿಯನ್ನು ಪದೇಪದೇ ತೋರಿಸುತ್ತಿದ್ದಾರೆ!

http://depenq.com/PRESSRELEASE/CS1997.pdf 
http://depenq.com/PRESSRELEASE/BKdas25SEP06.pdf 
http://depenq.com/PRESSRELEASE/BKDASshieldedCORRUPT.pdf
http://depenq.com/PRESSRELEASE/MalatiDAS.pdf
http://depenq.com/PRESSRELEASE/MAHISHIIignoringLOKAYUKTA.pdf
http://depenq.com/PRESSRELEASE/sudhakarrao.pdf
http://depenq.com/PRESSRELEASE/SVR.pdf
http://depenq.com/PRESSRELEASE/MNVtoKM6NOV14.pdf

ಹಿರಿಯ ಐ.ಎ.ಎಸ್ ಅಧಿಕಾರಿಗಳು whistleblowersಗಳನ್ನು ಯಾಕೆ ದ್ವೇಷಿಸುತ್ತಾರೆ?

ಕಾನೂನು ಮತ್ತು ನೈತಿಕತೆಯ ಗಡಿಯಲ್ಲಿ ನಿಂತು whistleblowers ಕಾರ್ಯನಿರ್ವಹಿಸುತ್ತಾರೆ ಎಂದು ಕಾನೂನು ಆಯೋಗ ಗುರುತಿಸಿದೆ. ಆಯಕಟ್ಟಿನ ಜಾಗದಲ್ಲಿರುವ, ವೈಯಕ್ತಿಕ ಹಿತಾಸಕ್ತಿಗಳಿರುವ ಅಧಿಕಾರಿಗಳು ಸೀಟಿ ಹೊಡೆಯುವ ನನ್ನಂತವರ ಕಾಯಕವನ್ನು ಕೆಟ್ಟ ಕೆಲಸವೆಂದು ಪರಿಗಣಿಸುತ್ತಾರೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿ ಹಿಡಿಯಲಿಕ್ಕಾಗಿ ನಾವಿಂಥ ಕೆಲಸಗಳನ್ನು ಮಾಡುತ್ತಿದ್ದೀವೆಂಬ ಸತ್ಯವನ್ನು ಬೇಕೆಂದೆ ಕಡೆಗಣಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ಸೀಟಿ ಹೊಡೆಯುವವರನ್ನು ಯಾವಾಗಲೂ ಆಜ್ಞಾಭಂಜಕರೆಂದೇ ಗುರುತಿಸುವುದಕ್ಕೆ ಕಾರಣ ಅವರ ಭ್ರಷ್ಟ ಕೆಲಸಗಳು ಹೊರಬಂದುಬಿಡಬಹುದೆಂಬ ಭಯ. ಐ.ಎ.ಎಸ್ಸಿನ ನೀತಿ ನಿಯಮಗಳು ಹಿರಿಯ ಅಧಿಕಾರಿಗಳೆಲ್ಲ ಪ್ರಾಮಾಣಿಕರು ಎಂದು ನಂಬಿದರೆ, ಪ್ರಪಂಚದಾದ್ಯಂತ ಸೀಟಿದಾರರಿಗಾಗಿ ಇರುವ ಕಾಯ್ದೆಗಳು ಹಿರಿಯ ಅಧಿಕಾರಿಗಳು ಅಪ್ರಾಮಾಣಿಕರು ಮತ್ತು ಭ್ರಷ್ಟರಾಗಿರಲು ಸಾಧ್ಯ ಎಂಬ ಸತ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಸೀಟಿದಾರರನ್ನು ರಕ್ಷಿಸಲು ಕಾಯ್ದೆಯಿದೆ, ಅದರ ನೀತಿ ನಿಯಮಗಳು ಇನ್ನೂ ರೂಪಿತವಾಗಿಲ್ಲ. ಆ ಕಾಯ್ದೆ ಆಚರಣೆಗೆ ಬರುವುದಕ್ಕೆ ಮುಂಚೆಯೇ ಸೀಟಿ ಹೊಡೆಯುವುದನ್ನೇ ತಡೆಯಲು ಬೇಕಾದ ಮಾರ್ಪಾಡುಗಳನ್ನು ಡಿ.ಒ.ಪಿ.ಟಿ ಮಾಡುತ್ತಿದೆ. ಕಾಯ್ದೆಯ ಅನುಸಾರ ಎಲ್ಲಾ ಸರಕಾರಿ ಸೇವಕರು ಭ್ರಷ್ಟರ ವಿರುದ್ಧ ಸೀಟಿ ಹೊಡೆಯಬೇಕು, ಆದರೆ ಡಿ.ಒ.ಪಿ.ಟಿ ಇದನ್ನು ಬಲವಾಗಿ ವಿರೋಧಿಸುತ್ತಿರುವುದಕ್ಕೆ ಕಾರಣ ಅನೇಕ ಹಿರಿಯ ಅಧಿಕಾರಿಗಳು ಮತ್ತೀಗಾಗಲೇ ನಿವೃತ್ತಿ ಹೊಂದಿದ ಅಧಿಕಾರಿಗಳ ಜೀವನ ಈ ಕಾಯ್ದೆ ಜಾರಿಯಾಗಿಬಿಟ್ಟರೆ ಶೋಚನೀಯವಾಗಿಬಿಡುತ್ತದೆ ಎಂದು. ಸೀಟಿದಾರ ಸತ್ಯೇಂದ್ರ ದುಬೆಯ ಹತ್ಯೆಯ ನಂತರ ಸುಪ್ರೀಂ ಕೋರ್ಟಿನ ನಿರ್ದೇಶನದ ಪ್ರಕಾರ ಸಂಸತ್ತು ಜುಲೈ 2004ರಂದು ಸೀಟಿದಾರರನ್ನು ರಕ್ಷಿಸುವ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಆದರೆ ಪ್ರಾಮಾಣಿಕರನ್ನು ರಕ್ಷಿಸುವ ಕೆಲಸ ಇಂದಿಗೂ ನಡೆಯುತ್ತಿಲ್ಲ.
http://depenq.com/PRESSRELEASE/MNV16APRL2015.pdf

No comments:

Post a Comment