![]() |
ಪೆರುಮಾಳ್ ಮುರುಗನ್ |
ಚಾರ್ಲಿ ಹೆಬ್ಡೋ ಮೇಲೆ ಉಗ್ರರು ಪೈಶಾಚಿಕ ದಾಳಿ ನಡೆಸಿ ವ್ಯಂಗ್ಯಚಿತ್ರಕಾರರನ್ನು ಹತ್ಯೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲನೇಕರು ಹೇಗೆ ಹಿಂದೂ ಧರ್ಮ ಶಾಂತಿಯ ಪರವಾಗಿದೆ ಮತ್ತು ಆ ಕಾರಣಕ್ಕಾಗಿ ಹಿಂದೂ ಧರ್ಮದ ಹುಳುಕುಗಳ ಬಗ್ಗೆಯಷ್ಟೇ ಲೇಖಕರು ಸಿನಿಮಾ ಮಂದಿ ಅವಹೇಳನ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಎಲ್ಲೋ ಒಂದೆಡೆ ಅವರುಗಳ ಮನಸ್ಸಿನಲ್ಲಿ ಹಿಂದೂ ಧರ್ಮದ ರೂಢಿ - ಆಚರಣೆಗಳ ವಿರುದ್ಧ ಮಾತನಾಡುವವರಿಗೆ ಚಾರ್ಲಿ ಹೆಬ್ಡೋಗಾದ ಗತಿಯೇ ಆಗಬೇಕು ಎಂದಿತ್ತಾ? ಅಂತಹ ಹಿಂದೂ ಮೂಲಭೂತವಾದಿಗಳಿಗೆಲ್ಲ ಸಂತಸವಾಗುವಂತಹ ಸುದ್ದಿ ತಮಿಳುನಾಡಿನ ತಿರುಚಿನಗೊಡೆಯಿಂದ ಬಂದಿದೆ! ಈ ಊರಿನ ಪೆರುಮಾಳ್ ಮುರುಗನ್ ಎಂಬ ಮನುಷ್ಯನ ಒಳಗಿದ್ದ ಲೇಖಕ, ಕಾದಂಬರಿಕಾರನನ್ನು ಹತ್ಯೆ ಮಾಡಲಾಗಿದೆ. ಕಾರಣ ಆತ ಬರೆದ ಕಾದಂಬರಿಯೊಂದು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿತ್ತಂತೆ. ಚಾರ್ಲಿ ಹೆಬ್ಡೋದ ವಿರುದ್ಧ ನಡೆದ ಕೃತ್ಯಕ್ಕೆ ಕಣ್ಣೀರಾಕಿದ ಅನೇಕರಿಗೆ ಇದು ಸಮ್ಮತ ಕೃತ್ಯದಂತೆ ಕಾಣಿಸುತ್ತದೆ!