ಆಗ 4, 2015

ವಿಂಡೋಸ್ 10 ಆವೃತ್ತಿಗೆ ಅಪ್ ಡೇಟ್ ಆಗುವುದು ಹೇಗೆ?

ವಿಂಡೋಸ್ 7 ಮತ್ತು ವಿಂಡೋಸ್ 8ರ ಅಸಲಿ ಆವೃತ್ತಿಯ ಕಂಪ್ಯೂಟರ್, ಲ್ಯಾಪ್ ಟಾಪ್, ನೆಟ್ ಬುಕ್ ಉಪಯೋಗಿಸುವವರು ನೀವಾಗಿದ್ದರೆ ಕೆಲವು ದಿನಗಳಿಂದ ವಿಂಡೋಸ್ 10ನ್ನು ಪಡೆದುಕೊಳ್ಳಿ (get windows 10) ಎಂಬ ಪುಟ್ಟ ಸೂಚನೆಯನ್ನು ನಿಮ್ಮ ಪರದೆಯ ಬಲಭಾಗದ ಮೂಲೆಯಲ್ಲಿ ಗಮನಿಸಿರುತ್ತೀರಿ. 
get windows 10
ವಿಂಡೋಸ್ ಹತ್ತು ಪಡೆಯಿರಿ
ಜುಲೈ 29ರಂದು ಮೈಕ್ರೋಸಾಫ್ಟ್ ಪ್ರಪಂಚದಾದ್ಯಂತ ವಿಂಡೋಸ್ ಹತ್ತನ್ನು ಬಿಡುಗಡೆಗೊಳಿಸಿದೆ. ಪ್ರತೀ ಕಂಪ್ಯೂಟರಿಗೂ ವಿಂಡೋಸ್ ಹತ್ತಕ್ಕೆ ಅಪ್ ಗ್ರೇಡ್ ಆಗಿ ಎಂಬ ಸಂದೇಶ ಬರುತ್ತದೆ. ಸಂದೇಶ ಬಂದ ನಂತರ ಅಪ್ ಡೇಟ್ ಮಾಡಿಕೊಳ್ಳಬಹುದು. ಅದಕ್ಕೆ ಮುಂಚಿತವಾಗಿಯೇ ನೇರವಾಗಿ ಅಪ್ ಡೇಟ್ ಮಾಡಿಕೊಳ್ಳುವ ಸೌಕರ್ಯವನ್ನೂ ಮೈಕ್ರೋಸಾಫ್ಟ್ ನೀಡಿದೆ. ಚಾರ್ಜರ್, ಯುಪಿಎಸ್ಸನ್ನು ಸಿದ್ಧವಾಗಿಟ್ಟುಕೊಳ್ಳಿ, ವಿಂಡೋಸ್ ಹತ್ತನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಮೂರು ಜಿ.ಬಿಗಿಂತ ಹೆಚ್ಚು ಡೌನ್ ಲೋಡ್ ಮಾಡಿಕೊಳ್ಳಬೇಕಾದ ಕಾರಣ ನಿಮ್ಮ ಅಂತರ್ಜಾಲ ಸಂಪರ್ಕದಲ್ಲಿ ಅಷ್ಟು ಡೇಟಾ ಬಾಕಿ ಇದೆಯಾ ಖಚಿತಪಡಿಸಿಕೊಳ್ಳಿ. 
ಮೊದಲಿಗೆ ನಿಮ್ಮ ಕಂಪ್ಯೂಟರ್ರಿನ ಆಪರೇಟಿಂಗ್ ಸಿಸ್ಟಂನ ತಾಂತ್ರಿಕ ವಿವರವನ್ನು ಗಮನಿಸಿ: 32 ಬಿಟ್ ಅಥವಾ 64 ಬಿಟ್ ಆಪರೇಟಿಂಗ್ ಸಿಸ್ಟಂ ಇರುತ್ತದೆ (ಕೆಳಗಿನ ಚಿತ್ರ ಗಮನಿಸಿ). ವಿಂಡೋಸ್ 7 ರ ಬಳಕೆದಾರರಾಗಿದ್ದ ಪಕ್ಷದಲ್ಲಿ ಸರ್ವೀಸ್ ಪ್ಯಾಕ್ 1 ಎಂದು ಇದೆಯೇ ಗಮನಿಸಿ. 
how to check operating system of pc

ನಂತರ ಮೈಕ್ರೋಸಾಫ್ಟಿನ ವೆಬ್ ಪುಟಕ್ಕೆ ಹೋಗಿ (ಇಲ್ಲಿ ಕ್ಲಿಕ್ಕಿಸಿ) ಮೀಡಿಯಾ ಕ್ರಿಯೇಷನ್ ಟೂಲನ್ನು ಡೌನ್ ಲೋಡ್ ಮಾಡಿಕೊಳ್ಳಿ. 32 ಬಿಟ್ ಅಥವಾ 64 ಬಿಟ್ ಎರಡರಲ್ಲಿ ನಿಮ್ಮ ಗಣಕಯಂತ್ರಕ್ಕೆ ಯಾವುದು ಸೂಕ್ತವೋ ಅದನ್ನು ಡೌನ್ ಲೋಡ್ ಮಾಡಿ. ಈ ಫೈಲಿನ ಗಾತ್ರ ಹದಿನೆಂಟು ಎಂ.ಬಿಯಷ್ಟಿದೆ. ಕೆಳಗಿನ ಚಿತ್ರ ಮೀಡಿಯಾ ಕ್ರಿಯೇಷನ್ ಟೂಲ್ ನ ಚಿತ್ರ. ಅದರ ಮೇಲೆ ಕ್ಲಿಕ್ಕಿಸಿ. ರನ್ ಒತ್ತಿ.
media creation tool
ಮೀಡಿಯಾ ಕ್ರಿಯೇಷನ್ ಟೂಲ್ ತೆರೆದುಕೊಂಡು ಈ ಕೆಳಗಿನ ಪರದೆ ಕಾಣಿಸುತ್ತದೆ:
media creation tool

ಅನ್ಯ ಕಂಪ್ಯೂಟರಿಗೂ ಈ ತಂತ್ರಾಂಶವನ್ನು ಉಪಯೋಗಿಸುವುದಾದಲ್ಲಿ  'create installation media for another pc' ಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವಾದರೆ Upgrade your PC ಯನ್ನು ಆಯ್ಕೆ ಮಾಡಿ ನೆಕ್ಷ್ಟ್ ಒತ್ತಿ. ಮೂರು ಜಿಬಿಯ ವಿಂಡೋಸ್ ಹತ್ತು ತಂತ್ರಾಂಶ ಡೌನ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ನಿಮ್ಮ ಅಂತರ್ಜಾಲದ ವೇಗ ಇದನ್ನು ನಿರ್ಧರಿಸುತ್ತದೆ.
download windows 10

upgrading windows10


ಡೌನ್ ಲೋಡ್ ಆದ ನಂತರ ಇನ್ಸ್ಟಾಲ್ ಮಾಡಲು ಗಣಕಯಂತ್ರವನ್ನು ತಯಾರು ಮಾಡುತ್ತದೆ.
Manual upgrade of windows 10

ಕೊನೆಗೆ ವಿಂಡೋಸ್ ಹತ್ತು ಇನ್ಸ್ಟಾಲ್ ಆಗುವ ಮೊದಲು ಕೆಲವು ಆಯ್ಕೆಗಳನ್ನು ನೀಡುತ್ತದೆ. ನಿಮ್ಮ ಕಂಪ್ಯೂಟರಿನ ಫೈಲುಗಳನ್ನು ಉಳಿಸಿಕೊಳ್ಳಬೇಕಾ ಬೇಡವಾ ಎಂದು ಕೇಳುತ್ತದೆ. ಉಳಿಸಿಕೊಳ್ಳುವುದು ಉತ್ತಮ.
manual update of windows 10

ಇನ್ಸ್ಟಾಲ್ ಗುಂಡಿಯನ್ನು ಒತ್ತಿದ ನಂತರ ಹಲವು ಬಾರಿ ಆಫ್ ಆಗಿ ಆನ್ ಆಗಿ ನಿಧಾನಕ್ಕೆ ಹೆಚ್ಚು ಕಡಿಮೆ ಎರಡರಿಂದ ಮೂರು ಘಂಟೆಗಳಷ್ಟು ಸಮಯ ತೆಗೆದುಕೊಂಡು ವಿಂಡೋಸ್ ಹತ್ತು ಇನ್ಸ್ಟಾಲ್ ಆಗುತ್ತದೆ! ವಿಂಡೋಸ್ ಹತ್ತರ ಮುಖಪುಟ ಆಕರ್ಷಕವಾಗಿದೆ.
windows 10 start page

 ಸ್ಟಾರ್ಟ್ ಮೆನುವಿನಲ್ಲಿ (ವಿಂಡೋಸ್ ಲೋಗೋ ಇರುವ ಎಡಬದಿಯ ಕೆಳಭಾಗದಲ್ಲಿರುವ ಐಕಾನನ್ನು ಕ್ಲಿಕ್ಕಿಸಿದಾಗ ಬರುವ ಪುಟ) ಬಹಳಷ್ಟು ಬದಲಾವಣೆಗಳಾಗಿವೆ. ವಿಂಡೋಸ್ ಫೋನ್ ಉಪಯೋಗಿಸುತ್ತಿರುವವರಿಗೆ ಅದು ಚಿರಪರಿಚಿತವಾದದ್ದು. ಬೇರೆಯವರಿಗೆ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಗಬಹುದು. ವಿಂಡೋಸ್ ಏಳರ ಆವೃತ್ತಿಗೆ ಹೋಲಿಸಿದರೆ ಒಟ್ಟಾರೆ ಕಂಪ್ಯೂಟರಿನ ವೇಗ ಹೆಚ್ಚಾಗಿದೆ.
start menu of windows 10

ಎಲ್ಲಕ್ಕಿಂತ ಹೆಚ್ಚು ಮೆಚ್ಚುಗೆಯಾಗಿದ್ದು ವಿಂಡೋಸಿನ ಹೊಸ ಬ್ರೌಸರ್. ಮೈಕ್ರೋಸಾಫ್ಟ್ ಪ್ರಾರಂಭವಾದಗಲಿಂದಲೂ ಇಂಟರ್ನೆಟ್ ಎಕ್ಸ್ ಪ್ಲೋರರ್ ಚಾಲ್ತಿಯಲ್ಲಿದೆ. ಅದರ ವೇಗ ಹೇಳಿಕೊಳ್ಳುವಷ್ಟೇನಿರಲಿಲ್ಲ. ಫೈರ್ ಫಾಕ್ಸ್, ಗೂಗಲ್ ಕ್ರೋಮ್ ಮತ್ತು ಒಪೆರಾ ಇಂಟರ್ನೆಟ್ ಎಕ್ಸ್ ಪ್ಲೋರರ್ ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಹೊಸ ಆವೃತ್ತಿಯ ವಿಂಡೋಸಿನಲ್ಲಿ ಎಡ್ಜ್ ಹೆಸರಿನ ಹೊಚ್ಚ ಹೊಸ ಬ್ರೌಸರ್ ನೀಡಲಾಗಿದೆ. ಬ್ರೌಸರ್ ತಕ್ಕಮಟ್ಟಿಗೆ ಆಕರ್ಷಕವಾಗಿದೆ. ವೇಗದಲ್ಲಿ ಉಳಿದ ಬ್ರೌಸರ್ ಗಳಿಗೆ ಸೆಡ್ಡು ಹೊಡೆಯುತ್ತದೆ.
ಎಡ್ಜ್ ಬ್ರೌಸರ್

ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ರಿನ ಮುಖಪುಟದಲ್ಲೇ ಅನೇಕ ಸುದ್ದಿಗಳನ್ನು ನೋಡಿಬಿಡಬಹುದು.
ಒಟ್ಟಾರೆಯಾಗಿ ಹೊಸ ವಿಂಡೋಸ್ ಕಾರ್ಯಕ್ಷಮತೆಯಲ್ಲಿ, ಅಂದದಲ್ಲಿ ಮೊದಲ ನೋಟಕ್ಕೆ ಮೆಚ್ಚುಗೆಯಾಗುತ್ತೆ. ಹುಳುಕಗಳೇನಿವೆ ಎಂಬುದನ್ನು ಒಂದಷ್ಟು ದಿನದ ಉಪಯೋಗದ ನಂತರ ಪಟ್ಟಿ ಮಾಡಬಹುದು.  ಇದು ಹೊಸ ತಂತ್ರಾಂಶವಾದ್ದರಿಂದ ಒಂದಷ್ಟು ಗೊಂದಲಗಳಿಗೂ ಕಾರಣವಾಗುತ್ತದೆ. ನಾನು ಎರಡು ಲ್ಯಾಪ್ ಟಾಪನ್ನು ನೇರವಾಗಿ ಅಪ್ ಡೇಟ್ ಮಾಡಿಕೊಂಡೆ. ಒಂದರಲ್ಲಿ ವಿಂಡೋಸ್ ಹತ್ತು ಸರಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದರಲ್ಲಿ ಸಂಪೂರ್ಣ ಇನ್ಸ್ಟಾಲ್ ಆದ ನಂತರ ಕಂಪ್ಯೂಟರನ್ನು ಆನ್ ಮಾಡಿದರೆ ವಿಂಡೋಸ್ ಹತ್ತರ ಲೋಗೋ ತೋರಿಸಿ ಕಪ್ಪು ಪರದೆ ಬಂದುಬಿಡುತ್ತಿತ್ತು. ಕಂಪ್ಯೂಟರಿನ ಕಾರ್ಯನಿರ್ವಹಣೆಯೇ ನಿಂತು ಹೋಯಿತು. ಒಂದಷ್ಟು ಪ್ರಯತ್ನದ ನಂತರ ಮತ್ತೆ ಹಳೆಯ ವಿಂಡೋಸ್ 7ಗೆ ಬದಲಿಸಿಕೊಂಡೆ. ಮೂರು ಜಿ.ಬಿ ನಷ್ಟವಾಯಿತು, ಜೊತೆಗೊಂದಷ್ಟು ಸಮಯ! ಬರುವ ದಿನಗಳಲ್ಲಿ ಆ ತೊಂದರೆಗಳೆಲ್ಲ ಪರಿಹಾರವಾಗಬಹುದು. ಅಲ್ಲಿಯವರೆಗೂ ಕಾದರಾಯಿತು ಏನು ಆತುರ ಎಂದುಕೊಂಡರೂ ಅಡ್ಡಿಯಿಲ್ಲ, ಇಲ್ಲ ಹೊಸ ತಂತ್ರಾಂಶವನ್ನು ಈಗಲೇ ಪರೀಕ್ಷಿಸಿ ನೋಡಬೇಕು ಎಂದುಕೊಂಡರೂ ಅಡ್ಡಿಯಿಲ್ಲ!

ಆಗ 3, 2015

ರೈತರ ಸರಣಿ ಆತ್ಮಹತ್ಯೆಗಳ ಈ ಸಮಯದಲ್ಲಿ ತೇಜಸ್ವಿಯವರು ಮತ್ತೆ ನೆನಪಾದರು.


ಇದು ನನ್ನ “ನಮ್ಮ ನಡುವಿನ ತೇಜಸ್ವಿ” ಪುಸ್ತಕದ ಒಂದು ಅಧ್ಯಾಯ (2010 ಹಂಪಿ ವಿ.ವಿ. ಪ್ರಕಟನೆ). ರೈತರ ಸರಣಿ ಆತ್ಮಹತ್ಯೆಗಳ ಈ ಸಮಯದಲ್ಲಿ ತೇಜಸ್ವಿಯವರು ಮತ್ತೆ ನೆನಪಾದರು. - ಪ್ರಸಾದ್ ರಕ್ಷಿದಿ
97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.

ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು. ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣಗೌಡ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಬಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು-ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ‘ಬೈಕ್ ನಾರಾಯಣಗೌಡ’ ಎಂದ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣ ಗೌಡನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!.

ನಾರಾಯಣ ಗೌಡ ನನ್ನನ್ನುದ್ದೇಶಿಸಿ “ಎತ್ಲಾಗೋ ಮಾರಾಯ” ಎಂದ.

“ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ” ಎಂದೆ.

“ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ” ಎಂದು ಕರೆದ.

ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ. ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.

“ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ ಏನಾರಹೇಳಿ ಬೇಗ ಹೊರಡ್ಬೋದು ಬಾ” ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.

ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪಹುಡುಕುತ್ತಾ “ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ” ಎಂದೆ.

“ಬಾ ಅಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆಕಡೆ(ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ” ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.

“ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು” ಎಂದು ಎಳೆದು ಬೈಕ್ ಹತ್ತಿಸಿದ. “ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚುಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ ನಿಂದೇ” ಎನ್ನುತ್ತಾ ಅವನೊಂದಿಗೆ ಹೊರಟೆ.

ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣಗೌಡ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.

ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್‍ನಿಲ್ಲಿಸಿದ ನಾರಾಯಣಗೌಡ “ಬಾ ಕಾಫಿ ಕುಡ್ದು ಹೋಗಣ” ಎಂದ.

ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.

“ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ,” ಎಂದೆ.

“ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ..ಬೆಳಗ್ಗೇನೆ ಅವ್ರ ಮನೆಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ ಕೇಳುದ್ರೆ ‘ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು’ ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರುಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ್ಬೌದು ಅಂದ್ಕಂಡ್... ಅಣ್ಣಾ... ಅಣ್ಣಾ..... ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ್..... ಅಂತ ಹಾರಿಹೋದ್ವು.. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಭರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ... ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ‘ಯಾವೋನೊ ಅವನು, ನಾನು ಅಷ್ಟೊಂತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂಕ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು, ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ, ನಾನು ಹೆಂಗೆ ಪದರಾಡುಹಾಕ್ದೇ (ಓಟಕಿತ್ತೆ) ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು” ಅಂದ.

ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. “ನೀನು ಏನೇ ಹೇಳಿದ್ರೂ ನಾರಾಯಣ ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ್ತಾಇಲ್ಲಾ ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು” ಎಂದೆ.

“ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ” ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು.

ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸಧ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. “ಊಟಕ್ಕೆ ಏನು ಮಾಡ್ತೀರಿ?” ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು- ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಎನೂ ತೊಂದರೆ ಇಲ್ಲವೆಂದು.. ಮುಂದೆ ಅವರೇ ಬರೆದ “ಪಾಕಕ್ರಾಂತಿ”ಯ ಕೆಲವು ವಿವರಗಳನ್ನು ನೀಡಿದರು.

ಮಾತು ಮುಂದುವರೆದಂತೆ ‘ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ‘ ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ.ವಿ.ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. “ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ?” ಎಂದರು.

“ಅಲ್ಲೇ ಇದ್ದಾರೆ ಸಾರ್” ಎಂದೆ.

“ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ.. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರನ್ನ ಯೋಚೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ” ಎಂದರು. ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು. ಕೊನೆಗೆ ತೇಜಸ್ವಿಯರಿಗೆ ಮಾತು ಸಾಕೆನಿಸಿ 

“ಮತ್ತೇನು ಈಕಡೆ ಬಂದ್ರಿ” ಎಂದು ಮುಕ್ತಾಯದ ಸೂಚನೆ ನೀಡಿದರು.

ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಗೌಡ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನಕಾಯಿಯಂತೆ ಕೂತಿದ್ದ.

ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣಗೌಡ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.

ಆಗ ನಾರಾಯಣಗೌಡ ಅನಿವಾರ್ಯವೆಂಬಂತೆ ಬಾಯಿ ತೆರೆದ “ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು, ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.

“ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ” ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.

“ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ, ಹೆಂಗ್ಹೇಳಿ?. ನಂಗೂ ಸಿಟ್ಬಂತು. ನಾನೂ ಒಂದ್‍ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ‘ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೇ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು” ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣಗೌಡನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.

“ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು ಆ ಮೇನೇಜರ್ ನಂಗೂ ಫೋನ್ ಮಾಡಿದ್ರು, ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ, ‘ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಪೋಲಿಸಿಗೆ ಕೊಡಿ ಅಂತ, ನಿಂಗೇನಾದ್ರು ತಲೆಗಿಲೆಕೆಟ್ಟಿದಿಯೇನಯ್ಯ, ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು ಸುಮ್ನೆ ಗಲಾಟೆಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ್ಸೋಕ್ಕಾಗುತ್ತೋ ನೋಡು” ಎಂದು ಹೇಳಿ, ಸ್ವಲ್ಪ ಯೋಚಿಸಿ, “ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ” ಎಂದರು.

“ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ, ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ, ಹಂಗೇ ಮೈನ್ ರೋಡಿಗೆ ಕಾಣದಲ್ಲ, ಎಲ್ಲಾರೂ ಕೇಳೋರೆ ‘ಅದುಯಾರ್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು, ಆ ಮೇಲೆ ಏನೆಲ್ಲಾ ಮಾಡ್ದೆ, ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ” ಎಂದ.

ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು. 

ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.

ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.

“ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ್ಸÀದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್-ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪರ್ಮಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಪಾರೆಸ್ಟ್‍ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿಮಾಡಿ ನಾವು ಬಚಾವಾಗಿ ಚಕ್ಕೆ ಮಾರೋಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ” ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ. 

“ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ” ಎಂದು ತೇಜಸ್ವಿ.

“ಇನ್ನೆಂತದು ಮಾಡ್ಳಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ್ಬೇಕು ಅಂತಿದ್ದೀನಿ. ಅಲ್ಲಿವರ್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ” ಎಂದ.

“ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ, ಸರ್ಕಾರವಂತೋ ಬರೋದೇ ಇಲ್ಲ, ತಿಳ್ಕಳಿ” ಎಂದರು.

ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದು ಕೊಟ್ಟರು. ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣ ಗೌಡನಿಗೆ. “ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು” ಎಂದರು. 

ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ಗೌಡ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ‘ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣ ಗೌಡನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ‘ರಮ್ಮಿ ನಾಕೌಟ್’ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ. 

ಇದನ್ನು ಊಹಿಸಿಯೇ ತೇಜಸ್ವಿಯವರು “ಶಿಸ್ತು ಕಲೀಬೇಕು ಕಣ್ರಯ್ಯ” ಎಂದಿರಬೇಕು.

ಆಗ 2, 2015

ಸುಂದರ ಮಲೆಕುಡಿಯನ ಕೈಕತ್ತರಿಸಿದ ಗೋಪಾಲ ಕೃಷ್ಣಗೌಡ.

ಮುನೀರ್ ಕಾಟಿಪಳ್ಳ
ದ ಕ ಜಿಲ್ಲೆಯ ಬೆಳ್ತಂಗಡಿಯ, ನೆರಿಯಾ ಎಂವ ಕುಗ್ರಾಮದಲ್ಲಿ ಆದಿವಾಸಿ ಸುಂದರ ಮಲೆಕುಡಿಯರ ಒಂದು ಕೈ, ಇನ್ನೊಂದು ಕೈಯ ನಾಲ್ಕು ಬೆರಳುಗಳನ್ನು ಸ್ಥಳೀಯ ಭೂಮಾಲೀಕ ಗೋಪಾಲ ಕೃಷ್ಣ ಗೌಡ ಮರ ಕತ್ತರಿಸುವ ಯಂತ್ರದ ಮೂಲಕ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕಿದ್ದಾನೆ.

ತನ್ನ ತುಂಡು ಭೂಮಿಯನ್ನು ಬಿಜೆಪಿಗೆ ಸೇರಿರುವ ಭೂಮಾಲಿಕನಿಗೆ ಬಿಟ್ಟುಕೊಡದ್ದು ಸುಂದರ ಮಲೆಕುಡಿಯ ಮಾಡಿರುವ ಮಹಾ ಅಪರಾಧ. ಕತ್ತರಿಸಲ್ಪಟ್ಟ ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಮರು ದಿವಸ ಪೊಲೀಸರಿಗೆ ಸಿಕ್ಕಿದೆ ಅನ್ನುವುದೇ ಘಟನೆಯ ಬರ್ಬರತೆಯನ್ನು ಸಾರುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ತುಂಡಾದ ಎರಡೂ ಕೈಗಳನ್ನು ಅಪರೇಷನ್ ಮಾಡಿ ಜೋಡಿಸಿದ್ದರೂ, ಕೈ ಮೊದಲಿನಂತೆ ಕೆಲಸ ಮಾಡೋದು ಅಸಾಧ್ಯ ಎಂದು ವೈದ್ಯರು ಕೈಚೆಲ್ಲಿದ್ದಾರೆ.

ಆದಿವಾಸಿ ಮಲೆಕುಡಿಯರು ಇದೇ ಪ್ರಥಮ ಬಾರಿ ಇಷ್ಡೊಂದು ಆಕ್ರೋಶಗೊಂಡಿದ್ದರು. ನ್ಯಾಷನಲ್ ಪಾರ್ಕ್ ಹೆಸರಲ್ಲಿ ತಮ್ಮ ಭೂಮಿಯ ಹಕ್ಕನ್ನು ಕಿತ್ತುಕೊಂಡಾಗ, ಕಾಡುತ್ಪತ್ತಿಗಳನ್ನು ಸಂಗ್ರಹಿಸದಂತೆ ತಡೆದಾಗ, ನಕ್ಸಲ್ ಹೆಸರಲ್ಲಿ ಪೊಲೀಸರು ಮನೆನುಗ್ಗಿದಾಗ, ಜೈಲಿಗಟ್ಟಿದಾಗ, ಎನ್ಕೌಂಟರ್ ಹೆಸರಲ್ಲಿ ತಮ್ಮ ಯುವಕರನ್ನು ಗುಂಡಿಟ್ಟು ಕೊಂದಾಗ... ಮೌನವಾಗಿಯೇ ಸಹಿಸಿಕೊಂಡಿದ್ದ ಮಲೆಯ ಮಕ್ಕಳು ಈ ಬಾರಿ ಮಾತ್ರ ತಿರುಗಿ ಬಿದ್ದಿದ್ದಾರೆ.

ಸುಂದರ ಮಲೆಕುಡಿಯರ ಎರಡು ಕೈಗಳನ್ನು ಮರ ಕತ್ತರಿಸುವ ಯಂತ್ರದಲ್ಲಿ ಭೂಮಾಲಿಕ ಗೋಪಾಲಕೃಷ್ಣ ಗೌಡ ನಿಷ್ಕರುಣೆಯಿಂದ ಕತ್ತರಿಸಿಹಾಕಿ, ಆತನ ಮನೆಯ ಹೆಣ್ಣುಮಕ್ಕಳು ಕತ್ತರಿಸಿದ ಕೈಗೆ ಮೆಣಸಿನ ಹುಡಿ ಸುರಿದಿದ್ದನ್ನು ಕಂಡು ಮಲೆಕುಡಿಯರು ಕೆರಳಿ ನಿಂತಿದ್ದಾರೆ. ಇಂದು dyfi, cpm, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಕೈಯಲ್ಲಿ ಕೆಂಪು, ಬಿಳಿ ಬಾವುಟ ಹಿಡಿದು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರೂರಿ ಭೂಮಾಲಕನ ಫೋಟೊಗಳಿಗೆ ಚಪ್ಪಲಿಹಾರ ಹಾಕಿ, ಆತನ ಶವದ ಪ್ರತಿಕೃತಿಯನ್ನು ಹೊತ್ತುಕೊಂಡು ಬೆಳ್ತಂಗಡಿ ಪೇಟೆ ಇಡೀ ಮೆರವಣಿಗೆ ನಡೆಸಿದ್ದಾರೆ. ಅವರ ಘೋಷಣೆಯ ಆವೇಶ, ನಡಿಗೆಯ ಬಿರುಸಿಗೆ ಬೆಳ್ತಂಗಡಿಯ "ನಾಗರಿಕರು" ದಂಗಾಗಿಹೋಗಿದ್ದರು. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಮುಖಂಡರ ಭಾಷಣಗಳಿಗೆ ಮಲೆಮಕ್ಕಳು ತೋರುತ್ತಿದ್ದ ಪ್ರತಿಕ್ರಿಯೆಗೆ ಮಂಗಳೂರಿನಲ್ಲಿದ್ದ ಜಿಲ್ಲಾಧಿಕಾರಿಯೂ ಕಂಪಿಸಿದ್ದು ಸ್ಥಳಕ್ಕೆ ಬಂದ ತಹಶೀಲ್ದಾರ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಈ ವರಗೆ ಕೈಕಳಕೊಂಡ ನತದೃಷ್ಟನನ್ನು ಸಂದರ್ಶಿಸದ ಶಾಸಕ, ಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಆದಿವಾಸಿಗಳ ಬೇಡಿಕೆಯಂತೆ ತಕ್ಷಣ ಭೂಮಾಲಕ ಗೋಪಾಲಕೃಷ್ಣ ಗೌಡನನ್ನು ಬಂಧಿಸಬೇಕು, ಬೀದಿಗೆ ಬಿದ್ದಿರುವ ಸುಂದರ ಮಲೆಕುಡಿಯರ ಕುಟುಂಬಕ್ಕೆ ಪೂರ್ಣ ಪರಿಹಾರ ನೀಡಬೇಕು, ಭೂಮಾಲಕನ ಅಪಾರ ಒತ್ತುವರಿಗಳನ್ನು ತೆರವುಗೊಳಿಸಿ ಬಡ ಮಲೆಕುಡಿಯರಿಗೆ ಹಂಚಬೇಕು. ಇಲ್ಲದಿದ್ದಲ್ಲಿ ಆದಿವಾಸಿಗಳ ಹೋರಾಟ ತೀವ್ರ ಸ್ವರೂಪ ಪಡಕೊಳ್ಳುವುದು ನಿಶ್ಚಿತ...

ಹೊಟ್ಟೆಯ ಸಿಟ್ಟು ರಟ್ಟೆಗೆ ಬಂದರೆ ಭವ್ಯ ಮಹಲುಗಳು ನಿಲ್ಲೋದಿಲ್ಲ, ಇದಕ್ಕೆ ದಕ್ಷಿಣ ಕನ್ನಡವೂ ಹೊರತಲ್ಲ.

ಬೆಳ್ತಂಗಡಿ ಮಲೆಕುಡಿಯ ಆದಿವಾಸಿಗಳ ಕೈ ಕತ್ತರಿಸಿದ ಭೂಮಾಲಕ ಅರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗಸ್ಟ್‌ 4, ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ. ಗೆಳೆಯರೊಂದಿಗೆ ಬನ್ನಿ. 
'ಮನುಜಮತ' ವಾಟ್ಸ್ ಅಪ್ ಗ್ರೂಪ್. 9008055958
ಪೂರಕ ಮಾಹಿತಿ: ಅನಂತ್ ನಾಯ್ಕ್

ಯಾಕೂಬನ ಸಾವು ಮತ್ತು ನೇಣಿಗೆ ಬಿದ್ದ ಸಮಾಜದ ಮನಸ್ಥಿತಿ.

yakub memon funeral
Ashok K R
ಆತನ ಶವವನ್ನು ನಾಗಪುರದಿಂದ ಮುಂಬಯಿಗೆ ತಂದಾಗ ಶವವನ್ನು ‘ವೀಕ್ಷಿಸಲು’ ಸಾವಿರಾರು ಜನರು (ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ ಹದಿನೈದು ಸಾವಿರದಷ್ಟು ಜನರು) ನೆರೆದಿದ್ದರು. ನೆರೆದವರಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮುಸ್ಲಿಮರು. ಸತ್ತವನು ಯಾರೋ ಪುಣ್ಯಾತ್ಮ ಮುಸ್ಲಿಂ ಜನಾಂಗದ ಜನರ ಓದಿಗೆ, ಬರಹಕ್ಕೆ, ಜೀವನಕ್ಕೆ ಹೊಡೆದಾಡಿದ ಮಹಾನುಭಾವ ಎಂದುಕೊಂಡಿರಾದರೆ ಅದು ಖಂಡಿತವಾಗಿಯೂ ತಪ್ಪು! ಸತ್ತ ವ್ಯಕ್ತಿ ಮುಂಬಿಯಯಲ್ಲಿ 1993ರಲ್ಲಿ ನಡೆದ ಪೈಶಾಚಿಕ ಸರಣಿ ಬಾಂಬ್ ಸ್ಪೋಟಕ್ಕೆ ಸಹಾಯ ಮಾಡಿದವನು ಎಂಬ ಆರೋಪ ಹೊತ್ತಾತ. ಯಾಕೂಬ್ ಮೆಮೊನ್ ಎಂಬ ವ್ಯಕ್ತಿಗೆ ಇಪ್ಪತ್ತಮೂರು ವರುಷಗಳ ವಿಚಾರಣೆಯ ನಂತರ, ಭಾರತದ ಕಾನೂನಿನ ಎಲ್ಲಾ ಹಂತಗಳನ್ನೂ ದಾಟಿದ ನಂತರ ಜುಲೈ ಮೂವತ್ತರಂದು ಗಲ್ಲಿಗೇರಿಸಲಾಯಿತು. ಆತನ ವಿರುದ್ಧದ ಅಪರಾಧಗಳು ಅದೇ ಬಾಂಬ್ ಸ್ಪೋಟದ ರುವಾರಿಗಳಾದ, ನಂತರದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಯಾಕೂಬನ ಸಹೋದರ ಟೈಗರ್ ಮೆಮೊನ್ ನಷ್ಟು ಇರಲಿಲ್ಲ; ಆದರೆ ಇನ್ನೂರಕ್ಕೂ ಅಧಿಕ ಜನರು ಸಾಯುವುದರಲ್ಲಿ ಯಾಕೂಬ್ ಮೆಮನ್ನಿನ ಪಾತ್ರವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಬಾಂಬ್ ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದ ಬಹುತೇಕರು ಯಾಕೂಬ್ ಮೆಮೊನ್ನಿನ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಸರಣಿ ಸ್ಪೋಟದ ಪ್ರಮುಖ ರುವಾರಿ ಟೈಗರ್ ಮೆಮೊನನಿಗೆ ಹಣ ನೀಡಿದ ಆರೋಪ, ಇಂತಹುದೊಂದು ದುಷ್ಕೃತ್ಯವನ್ನೆಸಗಲು ತರಬೇತಿ ಪಡೆದುಕೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ ಹದಿನೈದು ಯುವಕರ ತಂಡಕ್ಕೆ ಹಣಕಾಸು ನೆರವು ನೀಡಿದ ಆರೋಪ, ಸ್ಪೋಟಕಗಳನ್ನು ಸಂಗ್ರಹಿಸಿಟ್ಟ ಆರೋಪಗಳೆಲ್ಲವೂ ಯಾಕೂಬ್ ಮೆಮೊನ್ ನ ಮೇಲಿದ್ದವು.
yakub memon
ಯಾಕೂಬ್ ಮೆಮೊನ್
ನ್ಯಾಯಾಲಯ ಕಾರ್ಯನಿರ್ವಹಿಸುವುದೇ ಸಾಕ್ಷ್ಯಾಧಾರಗಳ ಆಧಾರದಿಂದ, ಆ ಸಾಕ್ಷ್ಯಾಧಾರಕ್ಕನುಗುಣವಾಗಿ ಯಾಕೂಬ್ ಮೆಮನ್ನಿಗೆ ಭಾರತದ ಕಾನೂನಿನಲ್ಲಿರುವ ಅತ್ಯುಗ್ರ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಿತು. ಇವತ್ತು ಮರಣದಂಡನೆ ವಿಧಿಸಿ ನಾಳೆ ನೇಣಿಗಾಕುವ ದಿಡೀರ್ ನ್ಯಾಯ ಭಾರತದಲ್ಲಿಲ್ಲ, ಇರಲೂಬಾರದು. ಉನ್ನತ ಕೋರ್ಟುಗಳು, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟಿನವರೆಗೆ ಯಾಕೂಬ್ ಮೆಮೊನ್ ಪರವಾಗಿ ವಕೀಲರು ದಾವೆ ಹೂಡಿದರು, ಎಲ್ಲೆಡೆಯೂ ದಾವೆಗೆ ಸೋಲಾಯಿತು; ಅರ್ಥಾತ್ ಸಾಕ್ಷ್ಯಾಧಾರಗಳು ಯಾಕೂಬನ ವಿರುದ್ಧವಾಗಿದ್ದವು. ನ್ಯಾಯಾಲಯದಲ್ಲೂ ತಪ್ಪುಗಳಾಗುತ್ತಾವಾದರೂ ನಮಗೆ ಅಪ್ರಿಯವೆನ್ನಿಸಿದ ತೀರ್ಪುಗಳು ಬಂದಾಗ ಸಾರಾಸಗಟಾಗಿ ನ್ಯಾಯಾಲಯವನ್ನು ಟೀಕಿಸುವುದು ವಿವೇಚನೆಯಲ್ಲ. ಈ ಪ್ರಕರಣದಲ್ಲಿರುವ ಅನೇಕ ಚರ್ಚಾಸ್ಪದ ವಿಷಯಗಳ ನಡುವೆ ಗಮನಿಸಲೇಬೇಕಾದ ವಿಷಯವೆಂದರೆ ಯಾಕೂಬನ ಶವಸಂಸ್ಕಾರದ ಸಮಯದಲ್ಲಿ ಸಹಸ್ರ ಜನರು ಹಾಜರಿದ್ದುದು. ಒಂದು ಮೂಲಭೂತವಾದಿ ಕೃತ್ಯಕ್ಕೆ ನೈತಿಕ ಬೆಂಬಲ ಕೊಡುವಂತಹ ಮನಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು.

ಕಾಕತಾಳೀಯವೆಂಬಂತೆ ಕಳೆದ ವಾರವಷ್ಟೇ ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ ಪುಸ್ತಕ ಓದಿ ಮುಗಿಸಿದ್ದೆ. ನಮ್ಮ ಭವ್ಯ ಭಾರತ ದೇಶದ ಬಗ್ಗೆ ಹೊಗಳಿಕೊಳ್ಳುವಾಗ ನಾವು ಶಾಂತಿ ಪ್ರಿಯರು, ಯಾವೊಂದು ದೇಶದ ಮೇಲೂ ದಂಡೆತ್ತಿ ಹೋದವರಲ್ಲ ಎನ್ನುವ ಸಾಲುಗಳನ್ನು ಸಾಮಾನ್ಯವಾಗಿ ಹೇಳುತ್ತಿರುತ್ತೇವೆ - ಕೇಳುತ್ತಿರುತ್ತೇವೆ. ಭಾರತದ ಸ್ವಾತಂತ್ರ್ಯ ಮತ್ತು ದೇಶವಿಭಜನೆಯ ಹಿಂಚುಮುಂಚಿನಲ್ಲಿ ನಡೆದ ಭೀಕರ ಹಿಂಸಾಕೃತ್ಯಗಳ ವಿವರಗಳನ್ನು ಓದುವಾಗ ಈ ಹಿಂದೂ – ಇಸ್ಲಾಂ – ಸಿಖ್ಖರ ‘ಶಾಂತಿ’ ಹೇಗಿತ್ತೆನ್ನುವುದು ತಿಳಿದು ಬಿಡುತ್ತದೆ. ಇವತ್ತಿನ ಭಾರತ ಮತ್ತು ಪಾಕಿಸ್ತಾನ ಹುಟ್ಟಿದ್ದೇ ಹಿಂಸೆಯ ಕೂಪದಿಂದ ಎಂಬ ಅಂಶ ಇವತ್ತಿನ ಮೂಲಭೂತವಾದಿ ಮನಸ್ಥಿತಿಯ ಹೆಚ್ಚಳಕ್ಕೆ ಇರುವ ಹತ್ತಲವು ಕಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾ? ವಿಭಜನೆಯ ಸಮಯದಲ್ಲಿ ಅಮಾಯಕರನ್ನು ಹತ್ಯೆ ಮಾಡಿದವರಿಗೆ, ಅತ್ಯಾಚಾರವೆಸಗಿದವರಿಗೆ, ಲೂಟಿ ಮಾಡಿದವರಿಗೆ ಭಾರತ ಅಥವಾ ಪಾಕಿಸ್ತಾನ ಸರಕಾರಗಳು ಶಿಕ್ಷೆ ವಿಧಿಸಿದ ಕುರಿತಾಗಿ ಯಾವುದಾದರೂ ದಾಖಲೆ – ಬರಹಗಳಿವೆಯಾ? ನನ್ನ ಓದಿನ ಪರಿಮಿತಿಯಲ್ಲಂತೂ ಅಂತಹದ್ದು ನಡೆದಿರುವ ಸೂಚನೆ ಸಿಕ್ಕಿಲ್ಲ. ಅಲ್ಲಿಗೆ ಎರಡು ದೇಶಗಳ ಜನ್ಮದೊಡನೆಯೇ ‘ಗಲಭೆ’ಗಳಲ್ಲಿ ನಡೆಸುವ ಹತ್ಯಾಕಾಂಡಕ್ಕೆ, ಅನಾಚಾರಕ್ಕೆ ಶಿಕ್ಷೆ ಕೊಡುವುದು ಕಷ್ಟ ಎಂಬ ಬಹುದೊಡ್ಡ ತಪ್ಪು ಸಂದೇಶವೊಂದು ಸೃಷ್ಟಿಯಾಗಿ ಹೋಯಿತು. 

gandhi and godhse
ಗಾಂಧಿ ಮತ್ತು ಗೋಡ್ಸೆ
ಬಿಡಿ, ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆಲ್ಲ ಕುತಂತ್ರಿ ಬ್ರಿಟೀಷರೇ ಕಾರಣ ಎಂದು ನೆಪ ಹೇಳಿಬಿಡಬಹುದು. ವಿಭಜನೆಯ ನಂತರ ನಡೆದ ಹಿಂಸಾಚಾರಗಳತ್ತ ಗಮನಹರಿಸೋಣ. ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಮೊದಲ ಹಿಂಸಾಚಾರ ಅಹಿಂಸಾ ತತ್ವ ಭೋದಿಸಿದ ಗಾಂಧೀಜಿಯೊಂದಿಗೆ ತಳುಕುಹಾಕಿಕೊಂಡಿದೆ! ವೈರುಧ್ಯಗಳು ಹೇಗಿರುತ್ತವೆ ನೋಡಿ, ಜೀವನವಿಡೀ ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿಯ ಹತ್ಯೆ ಹಿಂಸಾ ಮಾರ್ಗದಲ್ಲಾಗುತ್ತದೆ. ನಾಥೂರಾಮ್ ಗೋಡ್ಸೆ ಎಂಬ ಹಿಂದೂ ಉಗ್ರವಾದಿ ಸಾರ್ವಜನಿಕವಾಗಿ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲುತ್ತಾನೆ. ಬಹುಶಃ ಗಾಂಧೀಜಿ ಕೂಡ ನಾಥೂರಾಮ್ ಗೋಡ್ಸೆಗೆ ನೇಣಾಗುವುದನ್ನು ಒಪ್ಪುತ್ತಿರಲಿಲ್ಲವೇನೋ, ನೇಣಿಗಾಕುವುದು ಸರಕಾರಿ ಹಿಂಸೆ ಎಂಬ ಕಾರಣಕ್ಕೆ. ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರು ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ಗಾಂಧಿ ಹತ್ಯೆಯ ನಂತರ ದೇಶದ ವಿವಿದೆಡೆ ಚಿತ್ಪಾವನ ಬ್ರಾಹ್ಮಣರ ಮನೆಗಳ ಮೇಲೆ ದಾಳಿಗಳು ನಡೆದವು. ಅಹಿಂಸೆ ಭೋದಿಸಿದ ವ್ಯಕ್ತಿಯ ಸಾವಿನಿಂದ ಹಿಂಸೆ ಪ್ರಾರಂಭವಾಯಿತು! ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಗುರಿ ಮಾಡಿಕೊಂಡು ನಡೆಸಿದ ದುಷ್ಕ್ರತ್ಯ ಎಷ್ಟರಮಟ್ಟಿಗೆ ಸರಿ? ಸಾಮೂಹಿಕ ದಾಳಿ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಲಾಯಿತಾ? 

1984 sikh riots
1984ರ ಸಿಖ್ ಹತ್ಯಾಕಾಂಡ
ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ದಾಂಧಲೆ ನಡೆದದ್ದು ಇಂದಿರಾ ಗಾಂಧಿ ಹತ್ಯೆಯಾದ ನಂತರ. 1984ರಲ್ಲಿ ಇಂದಿರಾ ಗಾಂಧಿಯನ್ನು ಆಕೆಯ ಸಿಖ್ ಅಂಗರಕ್ಷಕರು ಹತ್ಯೆ ಮಾಡಿಬಿಡುತ್ತಾರೆ. ಇಂದಿರಾ ಬೆಂಬಲಿಗರಿಗೆ, ಕಾಂಗ್ರೆಸ್ಸರಿಗೆ ತಮ್ಮ ನಾಯಕಿಯನ್ನು ತಾವೆಷ್ಟು ಆರಾಧಿಸುತ್ತಿದ್ದೆವು ಎಂದು ತೋರ್ಪಡಿಸುವ ಹಪಾಹಪಿ. ಅದಕ್ಕೆ ಬಲಿಯಾಗಿದ್ದು ಮಾತ್ರ ಅಮಾಯಕ ಸಿಖ್ಖರು. ‘ಒಂದು ದೊಡ್ಡ ಆಲದ ಮರ ಬಿದ್ದಾಗ ಇಂತವೆಲ್ಲ ಸಹಜ’ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದು ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿ. ಹತ್ತಾರು ತನಿಖೆಗಳು, ವಿಚಾರಣೆ ಆಯೋಗಗಳ ಪ್ರಹಸನಗಳೆಲ್ಲ ಮುಗಿದವಾದರೂ ಸಿಖ್ಖರನ್ನು ಮುಗಿಸಿಬಿಡಲು ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕರಾರಿಗೂ ಶಿಕ್ಷೆಯಾಗಲಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದಾಗಿ.

1992ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಮತ್ತೊಂದು ಸುತ್ತಿನ ಸಾಮೂಹಿಕ ಹಿಂಸೆಗೆ ಮೂಕಸಾಕ್ಷಿಯಾಯಿತು. ಹಿಂದೂ ಭಾವನೆಗಳನ್ನು ಉದ್ರೇಕಗೊಳಿಸುತ್ತ, ಹಿಂದೂಗಳ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎನ್ನುತ್ತಾ ರಥಯಾತ್ರೆ ಪ್ರಾರಂಭಿಸಿದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆಯ ಮುಂದಾಳತ್ವ ವಹಿಸಿದ್ದರು. ರಥಯಾತ್ರೆ ನಡೆದ ವಿಷಯವನ್ನು ಜನರು ಮರೆತು ಬಿಡಬಾರದು ಎಂಬ ಕಾರಣಕ್ಕೆ ಒಂದು ದೊಡ್ಡ ಕ್ಲೈಮಾಕ್ಸ್ ಸಿದ್ಧಪಡಿಸಿದ್ದರು. ಅದು ಬಾಬರಿ ಮಸೀದಿಯ ಧ್ವಂಸ ಮತ್ತಾ ಜಾಗದಲ್ಲಿ ರಾಮಮಂದಿರ ನಿರ್ಮಿಸುವ ಪ್ರಮಾಣ. ಬಾಬರಿ ಮಸೀದಿಯ ಧ್ವಂಸದೊಂದಿಗೇ ದೇಶಾದ್ಯಂತ ಮುಸ್ಲಿಮರ ಮೇಲೆ ಹಲ್ಲೆಗಳು ಪ್ರಾರಂಭವಾದವು. ಬಾಬರನಿಗೂ ಬಾಬರಿ ಮಸೀದಿಗೂ ಸಂಬಂಧವೇ ಇರದ ಸಾವಿರಾರು ಮುಸ್ಲಿಮರು ಹತ್ಯೆಗೊಳಗಾದರು. ಈ ಘಟನೆಗಳಿಗೆಲ್ಲ ಕಾರಣಕರ್ತರಾದ ಬಿಜೆಪಿಯ ನಾಯಕರುಗಳಿಗೆ ಶಿಕ್ಷೆಯಾಯಿತಾ? ಅವರೆಲ್ಲರೂ ಆರಾಮವಾಗಿ ಓಡಾಡಿಕೊಂಡೇ ಇದ್ದಾರೆ.

2002 gujrat riots
2002ರ ಗುಜರಾಜ್ ಹತ್ಯಾಕಾಂಡ
ಇನ್ನು ತೀರ ಇತ್ತೀಚೆಗೆ ನಡೆದಿದ್ದು 2002ರ ಗುಜರಾತ್ ಹತ್ಯಾಕಾಂಡ. ಗೋದ್ರದ ರೈಲಿನಲ್ಲಿ ನಡೆದ ಹಿಂದೂ ಸನ್ಯಾಸಿಗಳ ಹತ್ಯೆಗೆ ಪ್ರತೀಕಾರವಾಗಿ ಇಡೀ ಗುಜರಾತಿನಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಲಾಗುತ್ತದೆ. ಇಲ್ಲಿನ ಆರೋಪಿಗಳಿಗೆ ಶಿಕ್ಷೆಯಾಯಿತಾ? ಇನ್ನೂ ಅನೇಕವು ವಿಚಾರಣೆಯಲ್ಲಿವೆ, ಕೆಲವೊಂದರಲ್ಲಿ ಜೀವಾವಧಿ ಶಿಕ್ಷೆಯಾಗಿದೆ ಕೆಳ ಹಂತದ ನ್ಯಾಯಾಲಯದಲ್ಲಿ; ಆ ಶಿಕ್ಷೆಯಾದವರೂ ಕೂಡ ಜಾಮೀನಿನ ಮೇಲೆ ತಿರುಗಾಡಿಕೊಂಡಿದ್ದಾರೆ!

ಈ ಘಟನೆಗಳನ್ನೆಲ್ಲಾ ಏನನ್ನು ಸೂಚಿಸುತ್ತವೆ? ನಿಮಗೆ ಒಂದು ಸಮುದಾಯದ ಮೇಲೆ ಕೋಪವಿದ್ದರೆ ದ್ವೇಷವಿದ್ದರೆ ಅದನ್ನು ಸಾಮೂಹಿಕವಾಗಿ ತೀರಿಸಿಕೊಳ್ಳಿ, ವೈಯಕ್ತಿಕವಾಗಲ್ಲ. ಸಾಮೂಹಿಕ ಅಪರಾಧದಲ್ಲಿ ತಪ್ಪಿಸಕೊಳ್ಳುವುದು ಸುಲಭ. ಅದರಲ್ಲೂ ನೀವು ಬಹುಸಂಖ್ಯಾತರಾಗಿದ್ದು ನೀವು ಹತ್ಯೆ ಮಾಡಿದವರು ಅಲ್ಪಸಂಖ್ಯಾತರಾಗಿದ್ದರೆ ತಪ್ಪಿಸಿಕೊಳ್ಳುವುದು ಮತ್ತೂ ಸುಲಭ. ಭಾರತದ ಪ್ರಮುಖ ಸಾಮೂಹಿಕ ಹತ್ಯಾಕಾಂಡವನ್ನು ಗಮನಿಸಿ ನೋಡಿ, ಸಿಖ್, ಮುಸ್ಲಿಂ ಸಮುದಾಯ ಹೆಚ್ಚು ಹಾನಿ ಅನುಭವಿಸಿದೆ. ಹಾನಿ ಮಾಡಿದ್ದು ಹಿಂದೂ ಸಮುದಾಯ. ಆ ಪ್ರಕರಣಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಯಾದವರೆಲ್ಲಾ ನಂತರದ ದಿನಗಳಲ್ಲಿ ಏನಾದರು ಎಂಬುದನ್ನು ಗಮನಿಸಿದರೆ ಇಡೀ ಸಮಾಜದ ಮನಸ್ಥಿತಿಯ ಬಗ್ಗೆಯೇ ಮರುಕವುಂಟಾಗುತ್ತದೆ. ದೊಡ್ಡಾಲದ ಮರ ಬಿದ್ದಾಗ ಇಂತವೆಲ್ಲ ಸಹಜ ಎಂದು ಸಿಖ್ಖರ ಜೀವವನ್ನು ತುಚ್ಛವಾಗಿ ಕಂಡ ರಾಜೀವ್ ಗಾಂಧಿ ಅನುಕಂಪದ ಆಧಾರದಲ್ಲಿ ಅತಿ ಹೆಚ್ಚು ಸೀಟುಗಳನ್ನು ಪಡೆದ ಕಾಂಗ್ರೆಸ್ಸಿನ ಮೂಲಕ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ಸಿನ ಬಕೆಟ್ ರಾಜಕೀಯದ ಕಾರಣದಿಂದಾಗಿ ದೇಶದೆಲ್ಲೆಡೆ ರಾಜೀವ್ ಗಾಂಧಿ ಹೆಸರು ಇವತ್ತಿಗೂ ರಾರಾಜಿಸುತ್ತಿದೆ. ಇನ್ನು 1992ರ ಗಲಭೆಗೆ ಕಾರಣಕರ್ತರಾದ ಬಿಜೆಪಿಯವರು ಲೋಕಸಭೆಯಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಿಜೆಪಿಯ ಭಾಗವೇ ಆಗಿದ್ದ, ಬಿಜೆಪಿಯ ನಾಯಕನಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗುತ್ತಾರೆ. ನಂತರದ ದಿನಗಳಲ್ಲಿ ಅವರು ಮುತ್ಸದ್ಧಿ ನಾಯಕನಾಗಿ, ಅಜಾತ ಶತ್ರುವಾಗಿ ಬಿಂಬಿತವಾಗುತ್ತಾರೆ. ರಾಜೀವ್ ಗಾಂಧಿಗೆ ಸಿಕ್ಕ ಭಾರತ ರತ್ನ ಅಟಲ್ ಗೂ ಸಿಗುತ್ತದೆ! ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರವಾದ್ದರಿಂದ ಯೋಜನೆಗಳಿಗೆ ಅಟಲ್ ಹೆಸರು ಇಡುವ ಪರಿಪಾಟ ಪ್ರಾರಂಭವಾಗಿದೆ! ಇನ್ನು ರಥಯಾತ್ರೆಯ ನಾಯಕರಾಗಿದ್ದ ಅಡ್ವಾಣಿ ಉಪಪ್ರಧಾನಿಯಾಗುತ್ತಾರೆ. ಈಗ ಸದ್ಯಕ್ಕೆ ಅವರು ಮುತ್ಸದ್ಧಿ ನಾಯಕರಾಗಿದ್ದಾರೆ, ಅಜಾತ ಶತ್ರುವಾಗಿ ‘ಭಾರತ ರತ್ನ’ ಪಡೆದರೆ ಅಚ್ಚರಿಪಡಬೇಕಾಗಿಲ್ಲ. ಮುರಳಿ ಮನೋಹರ ಜೋಶಿ, ಉಮಾಭಾರತಿಯಂತಹ ನಾಯಕರೆಲ್ಲ ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ಗುಜರಾತಿನ ಹತ್ಯಾಕಾಂಡಕ್ಕೆ ಪ್ರೇರಣೆ ನೀಡಿದವರು ಎಂದು ಆರೋಪಿಸಲಾದ (ನ್ಯಾಯಾಲಯದಲ್ಲೇನೂ ಸಾಬೀತಾಗಿಲ್ಲ) ನರೇಂದ್ರ ಮೋದಿ ಒಂದಾದ ಮೇಲೊಂದರಂತೆ ಚುನಾವಣೆಗಳನ್ನು ಗೆಲ್ಲುತ್ತಾರೆ. ಗುಜರಾತ್ ಹತ್ಯಾಕಾಂಡ ನಡೆದು ಹನ್ನೆರಡು ವರುಷಗಳ ನಂತರ ಪ್ರಧಾನಿಯಾಗುತ್ತಾರೆ. ಭಾರತ ಕಂಡ ಶಕ್ತಿಶಾಲಿ ಪ್ರಧಾನಿ ಎಂದು ಸದ್ಯಕ್ಕೆ ಹೇಳಲಾಗುತ್ತದೆ, ಇನ್ಯಾವ ಗುಣವಿಶೇಷಣಗಳು ಸೇರಿಕೊಳ್ಳುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು!

ಸಾಮೂಹಿಕ ಹತ್ಯಾಕಾಂಡಕ್ಕೆ ಪ್ರತಿಕ್ರಿಯಿಸುವ ನಮ್ಮ ಸಮಾಜದ ಮನಸ್ಥಿತಿಯ ಇತಿಹಾಸವನ್ನು ಸ್ವಲ್ಪ ನೋಡಿದ್ದಾಯಿತು. ಇನ್ನು ಮತ್ತೆ ಯಾಕೂಬ್ ಮೆಮೊನ್ ಶವಸಂಸ್ಕಾರದಲ್ಲಿ ಸೇರಿದ್ದ ಅಪಾರ ಜನಸಂಖ್ಯೆಯ ಮನಸ್ಥಿತಿ ಏನಿರಬಹುದು ಎಂದು ಯೋಚಿಸಿದಾಗ ತಟ್ಟನೆ ನೆನಪಾಗಿದ್ದು ನಾಥೂರಾಮ್ ಗೋಡ್ಸೆ. ಗಾಂಧಿಯನ್ನು ಹತ್ಯೆ ಮಾಡಿದ ಕಾರಣಕ್ಕೆ ಆತನನ್ನು ಆರಾಧಿಸುವ ಮನಸ್ಥಿತಿಗಳು ಮುಂಚಿನಿಂದಲೂ ಇದ್ದವು. ಕಾರಣ? ಗೋಡ್ಸೆ ಹಿಂದೂವಾದಿ, ಹಿಂದೂಗಳಿಗೆ ‘ದ್ರೋಹ’ ಮಾಡಿದ ಗಾಂಧೀಜಿಯನ್ನು ಕೊಂದದ್ದಕ್ಕಾಗಿ ಗೋಡ್ಸೆ ಹೀರೋ! ಮುಂಚೆ ಕದ್ದು ಮುಚ್ಚಿ ಆರಾಧಿಸುತ್ತಿದ್ದವರು ಈಗ ಬಹಿರಂಗವಾಗಿಯೇ ಗೋಡ್ಸೆಯನ್ನು ಆರಾಧಿಸುತ್ತಿದ್ದಾರೆ. ಗೋಡ್ಸೆ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸುತ್ತೇವೆ, ರಸ್ತೆಗೆ ಹೆಸರಿಡುತ್ತೇವೆ ಎನ್ನುವವರ ಸಂಖೈ ದಿನೇ ದಿನೇ ಹೆಚ್ಚುತ್ತಿದೆ. ಗೋಡ್ಸೆ ನಂಬಿದ ಸಿದ್ಧಾಂತಗಳಿಂದಲೇ ಬೆಳೆದು ಬಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಈ ಗೋಡ್ಸಾರಾಧನೆಗೂ ಸಂಬಂಧವಿಲ್ಲ ಎಂದರೆ ನಂಬಲಾದೀತೆ? ಗೋಡ್ಸೆ ಆರಾಧಕರಿಗೆ ಇರುವ ಒಂದು ಅನುಕೂಲವೆಂದರೆ ಅವರ್ಯಾರನ್ನೂ ಸಮಾಜ ರಾಷ್ಟ್ರದ್ರೋಹಿ ಉಗ್ರಗಾಮಿ ಭಯೋತ್ಪಾದಕ ಎಂಬ ವಿಶೇಷಣಗಳಿಂದ ಗುರುತಿಸುವುದಿಲ್ಲ. ಕಾರಣ ಈ ಆರಾಧಕರು ಹಿಂದೂಗಳು. ಹಿಂದೂ ಆಗಿ ಹುಟ್ಟಿದವನು ಆ ಕಾರಣಕ್ಕಾಗಿಯೇ ರಾಷ್ಟ್ರಪ್ರೇಮಿಯಾಗಿಬಿಡುತ್ತಾನೆ! ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂಬ ಅಘೋಷಿತ ಕಾನೂನೊಂದು ನಮ್ಮಲ್ಲಿ ಜಾರಿಯಲ್ಲಿದೆ! ರಾಷ್ಟ್ರಪ್ರೇಮವನ್ನು ಸಾಬೀತುಪಡಿಸುವ ಕರ್ಮವೆಲ್ಲ ಮುಸ್ಲಿಮರಿಗೆ, ಸಿಖ್ಖರಿಗೆ, ಕ್ರಿಶ್ಚಿಯನ್ನರಿಗೆ ಸೀಮಿತ. ಇನ್ನು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಎಲ್.ಟಿ.ಟಿ.ಐ ಉಗ್ರರಿಗೆ ತಮಿಳುನಾಡಿನಲ್ಲಿ ಸಿಗುವ ಬೆಂಬಲ ಕೂಡ ಆಘಾತ ಮೂಡಿಸುತ್ತದೆ. ಎಲ್.ಟಿ.ಟಿ.ಐ ಹೋರಾಟಕ್ಕೆ ಅನೇಕಾನೇಕ ಕಾರಣಗಳಿರಬಹುದು ಆದರೆ ಆ ಕಾರಣಗಳ್ಯಾವುವೂ ರಾಜೀವ್ ಗಾಂಧಿಯ ಹತ್ಯೆಯನ್ನು ಸಮರ್ಥಿಸುವಂತೆ ಮಾಡಬಾರದು. ಗೋಡ್ಸೆಯ ವಿಚಾರದಲ್ಲಿ ಯಾಕೂಬ್ ನ ವಿಚಾರದಲ್ಲಿ ಧರ್ಮ ಅಮಲೇರಿಸಿದರೆ, ಎಲ್.ಟಿ.ಟಿ.ಐ ವಿಷಯದಲ್ಲಿ ಪ್ರದೇಶಾಭಿಮಾನ, ಭಾಷಾಭಿಮಾನ ಹಂತಕರನ್ನು ಬೆಂಬಲಿಸುವಂತಹ, ಆರಾಧಿಸುವಂತಹ ವಾತಾವರಣವನ್ನು ಸೃಷ್ಟಿಸಿತು. ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ನೀಡಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯಗಳಾಗುತ್ತವೆಂದರೆ ನಮ್ಮ ಜನರ ಹಂತಕ ಪ್ರೇಮತನ ಯಾವ ಮಟ್ಟಿಗಿರಬೇಕು ನೀವೇ ಲೆಕ್ಕಹಾಕಿ. ಹಂತಕರನ್ನು ಆರಾಧಿಸುವ ಗುಣ ದೇಶಾದ್ಯಂತ ಹರಡಿರುವಾಗ ಯಾಕೂಬನ ಶವಸಂಸ್ಕಾರದಲ್ಲಿ ಮುಸ್ಲಿಮರು ಭಾಗವಹಿಸಿದ್ದು ಅಚ್ಚರಿ ಮೂಡಿಸದೇ ಹೋಗುವ ಕೆಟ್ಟ ಮನಸ್ಥಿತಿಗೆ ದೂಡುತ್ತದೆ.
bal thackeray funeral
ಬಾಳಾ ಠಾಕ್ರೆ ಸತ್ತಾಗ ಸೇರಿದ ಜನತೆ
1992ರಲ್ಲಿ ನಡೆದ ಮುಸ್ಲಿಂ ಹತ್ಯೆಗಳಿಗೆ ಪ್ರತೀಕಾರದ ಹೆಸರಿನಲ್ಲಿ 1993ರಲ್ಲಿ ಮುಂಬಯಿಯಲ್ಲಿ ಸರಣಿ ಸ್ಪೋಟ ನಡೆಸಲು ನೆರವಾಗಿ ಅನೇಕ ಅಮಾಯಕರನ್ನು ಹತ್ಯೆ ಮಾಡಿದ ಯಾಕೂಬ್ ಮುಸ್ಲಿಮರಿಗೆ ಶಕ್ತಿಯ ಸಂಕೇತವಾಗಿ ಕಂಡುಬಿಡುತ್ತಾನಾ? ನಮ್ಮ ಮೇಲೆ ನಡೆದ ಅನ್ಯಾಯಕ್ಕೆ ಪ್ರತಿಯಾಗಿ ಅನ್ಯಾಯ ಮಾಡಿ ನ್ಯಾಯ ಕೊಡಿಸಿದವನಂತೆ ಕಂಡುಬಿಡುತ್ತಾನಾ? ಇಂತಹ ಅಪಾಯಕಾರಿ ಪ್ರಶ್ನೆಗಳಿಗೆ ಉತ್ತರ ಹೌದೆಂದು ಆಗಿಬಿಟ್ಟಿರುವುದೇ ನಮ್ಮ ಸಮಾಜದ ದುರಂತ. ಇಲ್ಲಿ ಭಾಗವಹಿಸಿದ್ದವರು ಮುಸ್ಲಿಮರಾದ್ದರಿಂದ ದೇಶದ್ರೋಹಿಗಳಂತೆ, ಉಗ್ರಗಾಮಿಗಳಂತೆ ಗೋಚರಿಸುತ್ತಾರಷ್ಟೇ. ಶ್ರೀಕೃಷ್ಣ ವರದಿಯಲ್ಲಿ ಅಪರಾಧಿಯಾಗಿ ಗುರುತಿಸಲ್ಪಟ್ಟ ಬಾಳ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು, ಠಾಕ್ರೆಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರಲಿಲ್ಲ, ಹಾಗಾಗಿ ದ್ವೇಷವನ್ನೇ ಬಿತ್ತಿದ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಹಿಂದೂಗಳು ದೇಶಪ್ರೇಮಿಗಳಾಗಿ ಗುರುತಿಸಲ್ಪಡುತ್ತಾರೆಯೇ ಹೊರತು ದೇಶದ್ರೋಹಿಗಳಾಗಿ ಅಲ್ಲ!

ಇದನ್ನೂ ಓದಿ: ಸತ್ತ ನಂತರ ಒಳ್ಳೆಯವರಾಗಿಬಿಡುವ ಪರಿಗೆ ಅಚ್ಚರಿಗೊಳ್ಳುತ್ತಾ

ಯಾಕೂಬನ ವಿಚಾರಣೆ ಸರಿಯಾಗಿ ನಡೆಯಲಿಲ್ಲ ಎಂದು ಈಗ ಹೇಳಿದರೆ ಅದಕ್ಯಾವ ಅರ್ಥವೂ ಇರುವುದಿಲ್ಲ. ನ್ಯಾಯಲಯಗಳು ಸಾಕ್ಷ್ಯಾಧಾರಗಳ ಮೇಲೆ ಕಾರ್ಯನಿರ್ವಹಿಸುತ್ತವೆ, ಆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕಾದ ಪೋಲೀಸರು ಧರ್ಮದಾಟಕ್ಕೆ, ರಾಜಕೀಯಕ್ಕೆ ಒಳಪಟ್ಟಿರುತ್ತಾರೆ ಎನ್ನುವುದು ಸುಳ್ಳಲ್ಲ. ಮುಸ್ಲಿಂ ಉಗ್ರರ ವಿಷಯವಾಗಿ ತೋರುವ ಉತ್ಸಾಹ ಹಿಂದೂ ಉಗ್ರರ ಬಗ್ಗೆ ತೋರಿಸುವುದಿಲ್ಲ ಎನ್ನುವುದು ಸತ್ಯ. ಯಾಕೂಬ್ ಗಲ್ಲಿಗೇರಿದ ದಿನವೇ ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಾಬು ಭಜರಂಗಿ ಜಾಮೀನಿನ ಮೇಲೆ ಹೊರಬರುತ್ತಾರೆ. ಬಾಬು ಭಜರಂಗಿ ತೆಹೆಲ್ಕಾ ಸಂಸ್ಥೆಯ ಕಳ್ಳ ಕ್ಯಾಮೆರಾಗಳ ಮುಂದೆಯೇ ಹತ್ಯಾಕಾಂಡ ನಡೆಸಿದ್ದನ್ನು ಒಪ್ಪಿಕೊಂಡಿದ್ದ. ಆತನಿಗೆ ಸಿಕ್ಕಿದ್ದು ಜೀವಾವಧಿ ಶಿಕ್ಷೆಯೇ ಹೊರತು ಮರಣದಂಡನೆಯಲ್ಲ. ಸರಕಾರೀ ಯಂತ್ರ ಅಪರಾಧಿಗಳ ಪರ ವಹಿಸಿದರೆ ನ್ಯಾಯದಾನದಲ್ಲಿ ಏರುಪೇರಾಗುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಮಲೇಗಾಂವ್, ಅಜ್ಮೀರದಲ್ಲಿ ಬಾಂಬ್ ಸ್ಪೋಟಿಸಿದ ಹಿಂದೂ ಉಗ್ರರಿದ್ದಾರೆ. ‘ನೋಡಿ ನೋಡಿ ಹಿಂದೂ ಉಗ್ರರಿಗೆ ಶಿಕ್ಷೆಯೇ ಆಗಿಲ್ಲ. ಯಾಕೂಬನಿಗೆ ಯಾಕೆ ಶಿಕ್ಷೆಯಾಗಬೇಕು?’ ಎಂಬ ಪ್ರಶ್ನೆ ಕೇಳುವುದು ಕೂಡ ಮೂರ್ಖತನ. ಯಾಕೂಬ್ ಅಪರಾಧಿ, ಅವನಿಗೆ ಶಿಕ್ಷೆಯಾಗಲಿ; ಉಳಿದ ಅಪರಾಧಿಗಳಿಗೂ ಶಿಕ್ಷೆಯಾಗಲಿ ಎನ್ನುವುದು ನ್ಯಾಯಪರ. ಆ ರೀತಿ ಆಗುತ್ತಿಲ್ಲ ಎನ್ನುವುದು ಸತ್ಯವೇ ಆದರೂ ಒಬ್ಬ ಅಪರಾಧಿಗೆ ಶಿಕ್ಷೆಯಾಗದ ಕಾರಣಕ್ಕೆ ಮತ್ತೊಬ್ಬನ ಅಪರಾಧವನ್ನು ಸಮರ್ಥಿಸುವುದು ಸಲ್ಲದು.

ಈ ಗೋಡ್ಸೆ, ಅಫ್ಜಲ್, ಯಾಕೂಬ್, ಸಾಧ್ವಿ ಪ್ರಜ್ಞಾ, ಲೆ. ಶ್ರೀಕಾಂತ್ ಕುಲಕರ್ಣಿಯಷ್ಟೇ ಅಪಾಯಕಾರಿಯಾದ ಜನರೆಂದರೆ ಇಂತಹ ಅಪರಾಧಿಗಳಲ್ಲಿ ಕೆಲವರನ್ನು ಬೆಂಬಲಿಸಿ ಕೆಲವರನ್ನು ವಿರೋಧಿಸಿ ಅತ್ಯುಗ್ರ ರೀತಿಯಲ್ಲಿ ಪ್ರಚಾರ ಕೊಡುವ ನೆಟ್ಟಿಗರು. ಸುಮ್ಮನೆ ಗಮನಿಸುತ್ತಾ ಹೋದರೆ ಯಾಕೂಬನನ್ನು ವಿರೋಧಿಸುವವರು, ಅವನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಫೋಟೋಗಳನ್ನು ಹಂಚಿಕೊಂಡು shame on them ಎಂದು ಅಬ್ಬರಿಸಿದವರು ಅಪ್ಪಟ ದೇಶಪ್ರೇಮಿಗಳಂತೆ ಪೋಸು ಕೊಡುತ್ತಾರೆ, ಅವರ ಹಿಂದಿನ ಪೋಸ್ಟುಗಳನ್ನು ನೋಡಿದರೆ ಗೋಡ್ಸೆ, ಸಾಧ್ವಿಯನ್ನು ಸಮರ್ಥಿಸಿಕೊಂಡಿರುತ್ತಾರೆ! ಇನ್ನು ಸಾಧ್ವಿಯಂತವರಿಗೆ ಶಿಕ್ಷೆಯಾಗಲೇಬೇಕು ಎಂದು ನ್ಯಾಯಪರವಾಗಿ ಕೂಗುತ್ತಿದ್ದವರು ಇದ್ದಕ್ಕಿದ್ದಂತೆ ಯಾಕೂಬನ ಪರವಾಗಿ ಮಾತನಾಡಿಬಿಡುತ್ತಾರೆ! ಗೋಡ್ಸೆ ಯಾಕೂಬನಂತಹ ಅಪರಾಧಿಗಳು ಹುಟ್ಟುವುದಕ್ಕೆ ಇಂತಹ ಎರಡಲಗಿನ ನಾಲಗೆಯ ಜನರೂ ಕಾರಣ ಎಂಬುದನ್ನು ಮರೆಯಬಾರದು.

ಇನ್ನು ಮರಣದಂಡನೆ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಒಂದು ಮರಣದಂಡನೆ ಜಾರಿಯಾದಾಗಲೆಲ್ಲ ಹುಟ್ಟುತ್ತದೆ. ಕಸಬ್ ನನ್ನು ನೇಣಿಗೇರಿಸಿದಾಗ ಮರಣದಂಡನೆಯೆಂಬ ಶಿಕ್ಷೆಯಿಂದ ಅಪರಾಧಗಳು ಕಡಿಮೆಯಾಗುತ್ತದೆಯಾ ಎಂದು ಬರೆದಿದ್ದ ನೆನಪು. ಅದು ಬರೆದು ಮುಗಿಸುತ್ತಿದ್ದಂತೆ ಆ ರೀತಿಯ ದಿಢೀರ್ ಬರವಣಿಗೆಯ ನಿರರ್ಥಕತೆಯ ಅರಿವಾಗಿತ್ತು. ಮರಣದಂಡನೆ ಜಾರಿಯಾಗುವಾಗ ಅದರ ಅನುಪಯೋಗದ ಬಗ್ಗೆ ಚರ್ಚೆ ಮಾಡಿ ನಂತರ ಮತ್ತೆ ಮರೆತುಬಿಡುವುದು ಯಾವ ಸಂಭ್ರಮಕ್ಕೆ? ಮರಣದಂಡನೆ ಬಗ್ಗೆ ಚರ್ಚೆಯಾಗಬೇಕಾಗಿರುವುದು ಯಾವ ಮರಣದಂಡನೆಯೂ ನಡೆಯದ ಸಂದರ್ಭದಲ್ಲಿ ಈಗಲ್ಲ ಅಲ್ಲವೇ?

ಕೊಂಚ ದೀರ್ಘವಾಗಿರುವ ಲೇಖನವನ್ನು ಕೊನೆಯವರೆಗೂ ಓದಿರುವಿರಾದರೆ ಧನ್ಯವಾದ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಜುಲೈ 31, 2015

ಏರಿಳಿದ ಕನ್ನಡ ಮಾಧ್ಯಮ ಲೋಕ.

ವಿಜಯ್ ಗ್ರೋವರ್, ತೆಹೆಲ್ಕಾ.
ಮೂವತ್ತನಾಲ್ಕು ವರುಷದ ಸುನಿಲ್ ಶಿರಸಂಗಿ ಒರ್ವ ಪತ್ರಕರ್ತ. ಕಳೆದ ಕೆಲವು ತಿಂಗಳುಗಳಿಂದ ಕಾರ್ಮಿಕ ನ್ಯಾಯಾಲಯ ಮತ್ತು ಕಾರ್ಮಿಕ ಅಧಿಕಾರಿಯ ಕಛೇರಿಗೆ ಅಲೆಯುತ್ತಲೇ ಸುಸ್ತಾಗಿ ಹೋಗಿದ್ದಾನೆ. ಐದು ವರುಷಗಳ ಹಿಂದೆ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಸುನಿಲ್ ಹೊರಳಿಕೊಂಡಾಗ ಈ ರೀತಿಯ ದಿನಮಾನಗಳನ್ನು ನೋಡಬೇಕಾಗಬಹುದೆಂದು ಊಹಿಸಿರಲಿಲ್ಲ. ಸುನಿಲ್ ತನ್ನೊಬ್ಬನ ಹಕ್ಕಿಗಾಗಿ ನ್ಯಾಯಾಲಯಕ್ಕೆ ಅಲೆಯುತ್ತಿಲ್ಲ, ಜನಶ್ರೀ ವಾಹಿನಿಯಲ್ಲಿ ತನ್ನೊಡನೆ ಕೆಲಸ ಹಂಚಿಕೊಳ್ಳುತ್ತಿದ್ದ ಅರವತ್ತು ಸಹೋದ್ಯೋಗಿಗಳಿಗಾಗಿ ಹೋರಾಡುತ್ತಿದ್ದಾನೆ.

ಸರಿಯಾಗಿ ಸಂಬಳ ಸಿಗುತ್ತಿಲ್ಲವೆಂದು ವಾಹಿನಿಯ ಮಾಲೀಕರ ಬಳಿ ಕೇಳಿದ್ದೇ ಸುನಿಲ್ ಮತ್ತವರ ಸಹೋದ್ಯೋಗಿಗಳ ಕೆಲಸಕ್ಕೆ ಎರವಾಯಿತು. ಸುನಿಲ್ ನೆನಪಿಸಿಕೊಳ್ಳುವಂತೆ ಡಿಸೆಂಬರ್ 2014ರ ಒಂದು ದುರ್ದಿನ ಅರವತ್ತೈದು ಜನರನ್ನು ಕಛೇರಿಯ ಒಳಗಡೆ ಕಾಲಿಡಲು ಬಿಡಲಿಲ್ಲ. “ಕೆಲಸ ನಿರ್ವಹಿಸಿದ್ದಕ್ಕೆ ಸಂಬಳ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು. ಗುಂಪಾಗಿ ಹೋಗಿ ಸಂಬಳ ಕೇಳಿದ್ದು ಮಾಲೀಕರ ತಂಡಕ್ಕೆ ಮೆಚ್ಚುಗೆಯಾಗಲಿಲ್ಲವಂತೆ” ಎನ್ನುತ್ತಾರೆ ಸುನಿಲ್.

ಏಳು ತಿಂಗಳ ನಂತರ ಕಾರ್ಮಿಕ ನ್ಯಾಯಾಲಯದಲ್ಲಿ ನೌಕರರ ಪರ ತೀರ್ಪು ಬರುವ ಸಂಭವ ಹೆಚ್ಚಿದೆ. ಬಾಕಿ ಇರುವ ಸಂಬಳವನ್ನು ನೀಡುವಂತೆ ನ್ಯಾಯಾಲಯ ಆದೇಶಿಸುವುದೆಂಬ ಆಶಯದಲ್ಲಿರುವ ಅರವತ್ತು ಜನ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ.

“ನ್ಯಾಯಕ್ಕಾಗಿ ಸವೆಸಿದ ಹಾದಿ ಕಠಿಣವಾಗಿತ್ತು. ಜೀವನ ಕಷ್ಟಕರವಾಗಿತ್ತು. ಏಳು ತಿಂಗಳು ಸಂಬಳವಿಲ್ಲದೆ ಮನೆ ಕಟ್ಟಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿಲ್ಲ; ಕಷ್ಟಗಳು ಹೆಂಡತಿಯ ಒಡವೆಗಳನ್ನು ಒತ್ತೆ ಇಡುವಂತೆ ಮಾಡಿಬಿಟ್ಟವು” ಹೆಸರು ಹೇಳಲಿಚ್ಛಿಸದ ದೃಶ್ಯ ವಾಹಿನಿಯ ಪತ್ರಕರ್ತರೊಬ್ಬರ ದುಗುಡವಿದು.

ಈ ರೀತಿಯ ದುರ್ವಿಧಿ ಜನಶ್ರೀ ವಾಹಿನಿಯಲ್ಲಿ ಕೆಲಸ ಮಾಡಿದ ಅರವತ್ತೂ ಚಿಲ್ಲರೆ ಪತ್ರಕರ್ತರದ್ದು ಮಾತ್ರವಲ್ಲ. ಕರ್ನಾಟಕದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೃಶ್ಯ ವಾಹಿನಿ ಪತ್ರಕರ್ತರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕನ್ನಡ ವಾಹಿನಿಗಳ ಆರ್ಥಿಕ ಸ್ಥಿತಿ ದಯನೀಯವಾಗುತ್ತಿರುವುದು ಸಿಲಿಕಾನ್ ವ್ಯಾಲಿಯೆಂದೇ ಹೆಸರಾದ ಬೆಂಗಳೂರಿನ ಅನೇಕ ಪತ್ರಕರ್ತರ ಜೀವನವನ್ನು ದುರ್ಬರವಾಗಿಸಿದೆ; ಸಿಲಿಕಾನ್ ಸಿಟಿ ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಂಶ ಈ ಪತ್ರಕರ್ತರಿಗೆ ಅಪಹಾಸ್ಯದಂತೆ ಕಂಡರೆ ಅಚ್ಚರಿಯಿಲ್ಲ!

2007ರಲ್ಲಿ ಕನ್ನಡ ದೃಶ್ಯ ವಾಹಿನಿಗಳಲ್ಲಿದ್ದ ಉತ್ಸಾಹದ ಬೆಳವಣಿಗೆಗೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ.

2007ರಲ್ಲಿ ಜೆಡಿಎಸ್ಸಿನ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕರ್ನಾಟಕ ‘ಸುದ್ದಿಗ್ರಸ್ಥ’ ರಾಜ್ಯವಾಗಿ ಹೆಸರು ಮಾಡಿತು. ಇಪ್ಪತ್ತಿಪ್ಪತ್ತು ತಿಂಗಳ ಅಧಿಕಾರ ಹಂಚಿಕೆ, ತಂದೆಯ ಮಾತು ಕೇಳಿ ವಚನಭ್ರಷ್ಟರಾದ ಕುಮಾರಸ್ವಾಮಿ, ದಿನಕ್ಕತ್ತು ಸುದ್ದಿ ಕೊಡುತ್ತಿದ್ದ ಯಡಿಯೂರಪ್ಪನವರ ಆಡಳಿತಾವಧಿ, ಬಿಜೆಪಿಯ ಆಂತರಿಕ ಕಚ್ಚಾಟದಿಂದ ಮುಖ್ಯಮಂತ್ರಿಗಳು ಬದಲಾಗಿದ್ದು, ಬಳ್ಳಾರಿಯ ರೆಡ್ಡಿ ಸಹೋದರರ ಅನ್ಯಾಯದ ಗಣಿಗಾರಿಕೆ, ಆಗ ಲೋಕಾಯುಕ್ತದ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಗಣಿ ಮಾಫಿಯಾದ ವಿರುದ್ಧ ಅಂಜದೆ ಕಾರ್ಯನಿರ್ವಹಿಸಿದ್ದೆಲ್ಲವೂ ಕರ್ನಾಟಕದ ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಬಿಡುವನ್ನೇ ನೀಡಿರಲಿಲ್ಲ.

ಕನ್ನಡದ ಮಾಧ್ಯಮದ ದೃಷ್ಟಿಯಿಂದ 2007ರಿಂದ 2013ರವರೆಗೆ ಸುವರ್ಣ ಸಮಯ ನಡೆಯುತ್ತಿತ್ತು. ಬರೋಬ್ಬರಿ ಆರು ಹೊಸ ಕನ್ನಡ ಸುದ್ದಿವಾಹಿನಿಗಳು ಶುರುವಾಯಿತು. ಉದ್ದಿಮೆದಾರರು, ರಾಜಕಾರಣಿಗಳು ಕೋಟಿ ಕೋಟಿ ರುಪಾಯಿಯನ್ನು ದೃಶ್ಯ ಮಾಧ್ಯಮವೆಂಬ ಉದ್ದಿಮೆಗೆ ಸುರಿದರು. 2007ರಲ್ಲಿ ಆಂಧ್ರ ಮೂಲದ ಟಿವಿ 9 ಕನ್ನಡದಲ್ಲಿ ವಾಹಿನಿ ಪ್ರಾರಂಭಿಸಿದ ನಂತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುವರ್ಣ ವಾಹಿನಿಯನ್ನು ಹುಟ್ಟು ಹಾಕಿದರು. ರೆಡ್ಡಿ ಸಹೋದರರು ಜನಶ್ರೀ ವಾಹಿನಿಯನ್ನು ಪ್ರಾರಂಭಿಸಿದರೆ ಜಾರಕಿಹೊಳಿ ಕುಟುಂಬ ಸಮಯ ವಾಹಿನಿಯನ್ನು ಶುರುಮಾಡಿದರು.

ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ವಾಹಿನಿಗಳು ಪ್ರಾರಂಭಗೊಂಡಿದ್ದೇ ತಡ, ದೃಶ್ಯ ಮಾಧ್ಯಮದಲ್ಲಿ ಅನುಭವ ಇದ್ದವರು, ಇಲ್ಲದವರಿಗೆಲ್ಲ ಅಲ್ಲಿಯವರೆಗೆ ಪತ್ರಿಕೋದ್ಯಮ ಕಂಡು ಕೇಳರಿಯದ ರೀತಿಯಲ್ಲಿ ಅವಕಾಶಗಳು ಸಿಗಲಾರಂಭಿಸಿತು. ಬೇಕಾಬಿಟ್ಟಿ ನೇಮಕಗಳಿಂದ, ತರಬೇತಿಯ ಕೊರತೆಯಿಂದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಕಾರ್ಯಕ್ರಮಗಳ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. ರಾಜಕೀಯ ನಾಟಕಗಳು ಪರಾಕಾಷ್ಟೆಯಲ್ಲಿದ್ದ ಸುದ್ದಿ ಹಸಿವಿನ ರಾಜ್ಯ ಇದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಮಾಧ್ಯಮಕ್ಕೆ ಹಣ ಹರಿಯುತ್ತಲೇ ಇತ್ತು, 2013ರ ವಿಧಾನಸಭಾ ಚುನಾವಣೆಯವರೆಗೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜಕೀಯದ ನಾಟಕಗಳು ಪರದೆಯ ಹಿಂದೆ ಸರಿದವು. ರಾಜಕಾರಣಿಗಳ ನಾಟಕಾಭಿನಯ ಕಡಿಮೆಯಾಗುತ್ತಿದ್ದಂತೆ ಸುದ್ದಿ ವಾಹಿನಿಗಳೆಡೆಗೆ ಜನರಿಗಿದ್ದ ಆಸಕ್ತಿಯೂ ಕಡಿಮೆಯಾಯಿತು. ಕುಸಿಯುತ್ತಿದ್ದ ಆದಾಯ, ಟಿ.ಆರ್.ಪಿ ಅನೇಕ ವಾಹಿನಿಗಳ ಅಸ್ತಿತ್ವಕ್ಕೇ ಸಂಚಕಾರ ತಂದಿತು.

ಸಮಯ ವಾಹಿನಿ ಮಾಲೀಕತ್ವದಲ್ಲಿ ಎರಡಕ್ಕೂ ಹೆಚ್ಚು ಬಾರಿ ಬದಲಾವಣೆಗಳಾಗಿದ್ದರೆ, ಜನಶ್ರೀ ತನ್ನನ್ನು ಉಳಿಸಿಕೊಳ್ಳಬಲ್ಲ ಹಣವಂತರಿಗಾಗಿ ಕಾಯುತ್ತಿದೆ. ಸುವರ್ಣ ಮತ್ತು ಪಬ್ಲಿಕ್ ಟಿವಿ ಏದುಸಿರುಬಿಡುತ್ತಾ ವೆಚ್ಚಗಳನ್ನು ಕಡಿಮೆ ಮಾಡುವುದರತ್ತ ಗಮನಹರಿಸುತ್ತಿವೆ. ಇವುಗಳ ನಡುವೆ ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿಯಾದ ಉದಯ ನ್ಯೂಸ್ ಕನಿಷ್ಟ ಬಂಡವಾಳ ಮತ್ತು ಕಡಿಮೆ ಉದ್ಯೋಗಿಗಳ ಕಾರಣದಿಂದಾಗಿ ಇನ್ನೂ ಉಳಿದುಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಎರಡು ಹೊಸ ಕನ್ನಡ ಸುದ್ದಿ ವಾಹಿನಿಗಳು ಪ್ರಾರಂಭವಾಗಿವೆಯಾದರೂ ವೀಕ್ಷಕರ ಮೇಲಿನ್ನೂ ಪರಿಣಾಮ ಬೀರಲಾಗಿಲ್ಲ. ಈ ಎರಡೂ ವಾಹಿನಿಗಳಿಗೆ ರಿಯಲ್ ಎಸ್ಟೇಟಿನ ಹಣ ಹರಿದು ಬರುತ್ತಿದೆಯಾದರೂ ಅವುಗಳ ಗೆಲುವು ಸುಲಭವಲ್ಲ. “ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಂತಸ್ತು ಹೆಚ್ಚಿಸುವಲ್ಲಿ ವಾಹಿನಿಗಳು ಸಹಾಯ ಮಾಡುತ್ತವೆ ಎನ್ನುವ ನಂಬುಗೆಯಿಂದ ಅನೇಕ ಬಂಡವಾಳಗಾರರು ಸುದ್ದಿವಾಹಿನಿಯಲ್ಲಿ ಹಣ ತೊಡಗಿಸುತ್ತಾರೆ. ಕೆಲವು ಸಮಯದ ನಂತರ ಸುದ್ದಿ ವಾಹಿನಿಯೆಂಬುದು 24 x 7 ದುಡ್ಡು ಸೆಳೆಯುವ ಸುಳಿಯೆಂದು ಅರಿವಾಗುತ್ತದೆ; ಬರುವ ಆದಾಯ ತುಂಬಾನೇ ಕಡಿಮೆ ಎಂದು ಅರಿತುಕೊಳ್ಳುತ್ತಾರೆ” ಎನ್ನುತ್ತಾರೆ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ನಜರ್ ಅಲಿ.

ಬಂಡವಾಳ ಹಾಕುವವರು ದೂರ ಸರಿಯುತ್ತ, ದೃಶ್ಯ ವಾಹಿನಿಗಳ ಬೆಳವಣಿಗೆಯೂ ಕುಂಠಿತಗೊಂಡಿರುವ ಸಂಗತಿ ಇನ್ನೂರೈವತ್ತು ಪತ್ರಕರ್ತರಿಗೆ ಎಷ್ಟು ತಲೆಬೇನೆ ತರುತ್ತಿದೆಯೋ 29 ಪತ್ರಿಕೋದ್ಯಮ ಕಾಲೇಜುಗಳಿಂದ ಪ್ರತೀ ವರುಷ ಹೊರಬರುವ ಏಳುನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೂ ಭವಿಷ್ಯದ ಭೀತಿ ಹುಟ್ಟಿಸುತ್ತಿದೆ. ಕನ್ನಡ ಸುದ್ದಿ ವಾಹಿನಿಗಳಿಗೆ ಮತ್ತೆ ಒಳ್ಳೆಯ ದಿನಗಳು ಬರುವವರೆಗೆ ಈ ಪ್ರತಿಭಾವಂತ ವಿದ್ಯಾರ್ಥಿಗಳು ಈಗಿನ ಸಂದರ್ಭದಲ್ಲಿ ಸಿಗುವ ಕೆಲವೇ ಕೆಲವು ಅವಕಾಶಗಳಿಗೆ ಬಡಿದಾಡಲೇಬೇಕಾಗಿದೆ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.

ಜುಲೈ 29, 2015

ಸಂಕಟದ ಸ್ವಾತಂತ್ರ್ಯ

Dr Ashok K R
ಕಾರಣವೇನೋ ಗೊತ್ತಿಲ್ಲ Freedom at Midnight ಪುಸ್ತಕ ನೆಹರೂ ಬರೆದ ಪುಸ್ತಕವೆಂದೇ ವರುಷಗಳಿಂದ ನಂಬಿದ್ದೆ. ಆಂಗ್ಲ ಪುಸ್ತಕವನ್ನು ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವ ಎಚ್.ಆರ್.ಚಂದ್ರವದನ ರಾವರ ಪುಸ್ತಕವನ್ನು ಕೈಗೆತ್ತಿಕೊಂಡಾಗಲೇ ಅರಿವಾಗಿದ್ದು Freedom at Midnight ಬರೆದವರು ಎಲ್.ಕಾಲಿನ್ಸ್ ಮತ್ತು ಡಿ.ಲ್ಯಾಪೈರ್ ಎಂದು! ಇದು ಅನುವಾದದ ಪುಸ್ತಕವೆಂದು ತಿಳಿಯದಷ್ಟು ಸಶಕ್ತವಾಗಿದೆ. ಭಾರತದ ಸ್ವಾತಂತ್ರ್ಯದ ಮತ್ತು ವಿಭಜನೆಯ ಹಿಂದು ಮುಂದಿನ ಘಟನೆಗಳ ಪುಸ್ತಕವಿದು.

ಪುಸ್ತಕ ಪ್ರಾರಂಭವಾಗುವುದು ಇಂಗ್ಲೆಂಡಿನಲ್ಲಿ ಭಾರತಕ್ಕೆ ಹೊಸ ವೈಸ್ ರಾಯ್ ಆಗಿ ಮೌಂಟ್ ಬ್ಯಾಟನ್ ನೇಮಕವಾಗುವುದರೊಂದಿಗೆ. ಇಂಗ್ಲೆಂಡಿನವರ ಮನದಲ್ಲಿ ಅತಿ ದೊಡ್ಡ ದೇಶವಾದ ಭಾರತದ ವೈಸ್ ರಾಯ್ ಆಗುವುದೆಂದರೆ ಹೆಮ್ಮೆಯ, ಸಂತಸದ ಸಂಗತಿ. ಮೌಂಟ್ ಬ್ಯಾಟನ್ನಿನಲ್ಲಿ ಆ ಸಂಭ್ರಮವಿಲ್ಲ. ಕಾರಣ ಆತ ನಿಯತಿಗೊಂಡಿರುವುದು ಭಾರತವನ್ನು ಮತ್ತಷ್ಟು ವರುಷಗಳ ಕಾಲ ಆಳುವುದಕ್ಕಾಗಲ್ಲ; ಭಾರತವನ್ನು ಸ್ವತಂತ್ರಗೊಳಿಸಿ ಬ್ರಿಟೀಷ್ ಸಾಮ್ರಾಜ್ಯವನ್ನು ಕೊನೆ ಮಾಡಲು. ಬ್ರಿಟೀಷರ ಒಡೆದು ಆಳುವ ನೀತಿಯ ಕಾರಣದಿಂದಾಗಿ ಭಾರತವೆಂಬುದು ಒಂದೇ ದೇಶವಾಗಿ ಉಳಿಯುವ ಸಾಧ್ಯತೆಗಳು ಕ್ಷೀಣವಾಗಿತ್ತು. ಮುಸ್ಲಿಂ ನಾಯಕತ್ವ ಪ್ರತ್ಯೇಕ ದೇಶಕ್ಕಾಗಿ ಪಟ್ಟು ಹಿಡಿದರೆ ಮೊದಮೊದಲಿಗೆ ವಿಭಜನೆಯನ್ನು ಒಪ್ಪದ ಕಾಂಗ್ರೆಸ್ಸಿಗರು ಅನಿವಾರ್ಯವಾಗಿ ಒಪ್ಪಿಬಿಟ್ಟರು, ಒಬ್ಬ ಗಾಂಧಿಯ ಹೊರತಾಗಿ.

ಬೂಟಾಸಿಂಗನೆಂಬ ಅಮರ ಪ್ರೇಮಿ

ನಡುರಾತ್ರಿಯಲ್ಲಿ ಸ್ವಾತಂತ್ರ್ಯದಲ್ಲಿ ರಾಜಕೀಯ ನಾಟಕಗಳು, ಗಾಂಧಿ, ಜಿನ್ನಾ, ನೆಹರೂ, ಸರ್ದಾರ್ ಪಟೇಲರ ವ್ಯಕ್ತಿ ಚಿತ್ರಣಗಳು, ಸ್ವಲ್ಪ ಹೆಚ್ಚೇ ಎನ್ನಿಸುವಂತಹ ಮೌಂಟ್ ಬ್ಯಾಟನ್ ಮತ್ತಾತನ ಪತ್ನಿಯ ಹೊಗಳಿಕೆ, ರಾಜ ಮಹಾರಾಜರ ಚಿತ್ರ ವಿಚಿತ್ರವೆನ್ನಿಸುವ ಅಭ್ಯಾಸಗಳೆಲ್ಲವೂ ದಾಖಲಾಗಿವೆ. ರಾಂಪುರದ ನವಾಬ ವರುಷಕ್ಕಿಷ್ಟು ಕನ್ಯೆಯ ಕನ್ಯಾಪೊರೆ ಕಳಚುತ್ತೇನೆ ಎಂದು ಪಂದ್ಯ ಕಟ್ಟುತ್ತಿದ್ದನಂತೆ, ಕಾಶ್ಮೀರದ ಮಹಾರಾಜ ಹರಿಸಿಂಗ್ ಲಂಡನ್ನಿನ ಸ್ತ್ರೀ ಸಹವಾಸದಿಂದ ಬೊಕ್ಕಸದ ಹಣ ಖಾಲಿ ಮಾಡಿದನಂತೆ, ಮಾತು ಕೇಳದ ಕುದುರೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಆಳ್ವರ್ ಮಹಾರಾ….. ಇಂತಹ ರಾಜಮಹಾರಾಜರಿದ್ದ ಭಾರತವನ್ನು ಕೆಲವು ಸಾವಿರ ಸಂಖೈಯ ಬ್ರಿಟೀಷರು ಶತಮಾನಗಳ ಕಾಲ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದು ಅಚ್ಚರಿ ಪಡಬೇಕಾದ ವಿಷಯವೇನಲ್ಲ.

ಸ್ವಾತಂತ್ರ್ಯಕ್ಕೆ ಮುನ್ನವೇ ಉತ್ತರ ಭಾರತದಲ್ಲಿ ಹಿಂದೂ – ಮುಸ್ಲಿಂ ಕೋಮುದಳ್ಳುರಿ ಹಬ್ಬಲಾರಂಭಿಸಿತ್ತು. ಕಲ್ಕತ್ತಾದ ಕೋಮುಗಲಭೆಯನ್ನು ಶಮನಗೊಳಿಸಲು ಗಾಂಧಿ ಬರಬೇಕಾಯಿತು. ಗಾಂಧೀಜಿಯವರ ವ್ಯಕ್ತಿತ್ವದ ದಿಗ್ದರ್ಶನವಾಗುವುದು ಇಂತಹ ಸಂದರ್ಭದಲ್ಲೇ. ಯಾರಿಂದಲೂ ನಿಯಂತ್ರಿಸಲಾಗದು ಎನ್ನಿಸುವ ಸನ್ನಿವೇಶಗಳಲ್ಲೂ ತಮ್ಮ ಅಹಿಂಸೆಯ ತತ್ವದಿಂದಲೇ ನಿಯಂತ್ರಿಸಿಬಿಡುವ, ಜನರ ಮನಃಪರಿವರ್ತನೆ ಮಾಡುವ ಮತ್ತೊಬ್ಬ ನಾಯಕನನ್ನು ಕಾಣುವುದು ಕಷ್ಟ. ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ಗಾಂಧೀಜಿಯವರ ಹುಳುಕುಗಳನ್ನು ತೋರಿಸುತ್ತದೆ, ಹಿರಿಮೆಯನ್ನೂ ಚಿತ್ರಿಸುತ್ತದೆ. ಈ ಪುಸ್ತಕ ಓದಿದ ನಂತರ ಗಾಂಧಿಯನ್ನು ಮತ್ತಷ್ಟು ಪ್ರೀತಿಸಲು ಕಾರಣ ಸಿಗುತ್ತದೆ, ಮಗದಷ್ಟು ದ್ವೇಷಿಸಲೂ ನೆಪಗಳು ಸಿಗುತ್ತವೆ!

ವಿಭಜನೆಯೇ ಕೊನೆಯ ತೀರ್ಮಾನವಾದ ನಂತರ ಅದು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಗಡಿಯ ಭಾಗದಲ್ಲಿ ನಡೆದಿದ್ದು ಹಿಂಸೆ ಹಿಂಸೆ ಮತ್ತು ಹಿಂಸೆ. ರೈಲುಗಳು ನಿರಾಶ್ರಿತರ ದುಃಖ ದುಮ್ಮಾನಗಳನ್ನು ಹೊತ್ತು ತರುತ್ತಿದ್ದಂತೆ ಗಡಿಯಿಂದ ದೂರವಿದ್ದ ಪಟ್ಟಣಗಳಲ್ಲೂ ಹಿಂಸೆ ತಾಂಡವವಾಡತೊಡಗಿತು. ನಿರಾಶ್ರಿತರ ಶಿಬಿರದಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ನಡುವೆ ನಿಂತು ಅಹಿಂಸಾಧರ್ಮದ ಬಗ್ಗೆ ತಿಳಿಹೇಳುವ ಆತ್ಮಸ್ಥೈರ್ಯ ಗಾಂಧೀಜಿಗಷ್ಟೇ ಇರಲು ಸಾಧ್ಯ. ನಿರಾಶ್ರಿತರ, ದೇಶವಾಸಿಗಳ ಟೀಕಾಸ್ತ್ರಗಳು ಅವರ ಸತ್ಯವನ್ನು ಮಾರ್ಪಡಿಸಲಿಲ್ಲ.

ವಿಭಜನೆಯ ಸಮಯದಲ್ಲಿ ಮನುಷ್ಯರೆಂಬುದನ್ನೇ ಮರೆತು ವರ್ತಿಸಿದ ಜನರ ನಡುವೆ ಪ್ರಾಣದ ಹಂಗು ತೊರೆದು ಅನ್ಯಧರ್ಮದವರನ್ನು ಕಾಪಾಡಿದವರ ಕಥೆಯಿದೆ. ಅಂತಹವರ ಸಂಖೈ ಕಡಿಮೆಯಿತ್ತಷ್ಟೇ. ಹುಟ್ಟುತ್ತಲೇ ಭಾರತದ ಮೇಲೆ ದ್ವೇಷ ಸಾಧಿಸಲಾರಂಭಿಸಿದ ಪಾಕಿಸ್ತಾನದ ಕುತಂತ್ರಗಳು, ಇಸ್ಲಾಂ ಮೂಲಭೂತವಾದಿಗಳ ಮತಿಗೇಡಿತನ ಇಂದಿಗೂ ಕೊನೆಗೊಂಡಿಲ್ಲ. ಹಿಂದೂ ಮೂಲಭೂತವಾದಿಗಳು ಜಿನ್ನಾನನ್ನು ಕೊಲ್ಲಲು ಪಾಕಿಸ್ತಾನಕ್ಕೆ ತೆರಳಿ ಕಾರ್ಯ ಸಫಲವಾಗದೇ ವಾಪಸ್ಸಾಗುವ ಘಟನೆಯ ವಿವರಗಳಿವೆ. ಕೊನಗೆ ಅದೇ ಮೂಲಭೂತವಾದಿ ಮನಸ್ಸುಗಳು ಗಾಂಧಿಯನ್ನು ಹತ್ಯೆಗೈಯ್ಯಲು ನಡೆಸಿದ ಸಿದ್ಧತೆಯ ವಿವರಗಳೆಲ್ಲವೂ ಪುಸ್ತಕದಲ್ಲಿದೆ. ಗಾಂಧಿ ಸತ್ತು ಅರವತ್ತೇಳು ವರುಷಗಳಾಗುವಷ್ಟರಲ್ಲಿ ಗಾಂಧಿ ಹಂತಕರನ್ನೇ ಪೂಜಿಸುವ ಹಂತಕ್ಕೆ ನಾವು ತಲುಪಿದ್ದೇವೆ! ವಿಭಜನೆಯ ಸಮಯದ ಘಟನೆಗಳನ್ನು ಮನಕಲುಕುವಂತಹ, ಚಿಂತನೆಗೆ ಹಚ್ಚುವಂತಹ, ಅಳಿದುಳಿದ ಮಾನವೀಯತೆಯನ್ನು ಬಡಿದೆಬ್ಬಿಸುವಂತಹ ಕತೆಯ ರೂಪದಲ್ಲಿ ಬರೆದಿದ್ದು ಸದತ್ ಹಸನ್ ಮಾಂಟೋ. ಅಷ್ಟೇ ಸಶಕ್ತವಾಗಿ ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಪುಸ್ತಕ ವಿಭಜನೆಯ ನೋವುಗಳನ್ನು ನಮಗೆ ದಾಟಿಸುತ್ತದೆ. ಪುಸ್ತಕ ಓದಿ ಮುಗಿಸುವಾಗ ಸ್ವತಂತ್ರಗೊಂಡ ಭಾರತದ ಸಂಭ್ರಮದ ನೆನಪಿಗಿಂತ ಸಂಕಟಗಳೇ ಕಾಡುತ್ತವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಹದಿನಾಲ್ಕರ ಮಧ್ಯರಾತ್ರಿ ಯಾವುದೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲವಂತೆ. ಸಂಕಟದ ಸ್ವಾತಂತ್ರ್ಯದಲ್ಲಿ ಸಂಭ್ರಮವೆಲ್ಲಿ?

ಭೂಮಿಗೀತ ತಂಡದ ಹಾಡುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭೂಮಿಗೀತ ತಂಡದ ಹಾಡುಗಳು






ಜುಲೈ 27, 2015

ಲಕ್ಷ್ಮಣ್ ಹೂಗಾರ್ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಲಕ್ಷ್ಮಣ್ ಹೂಗಾರ್ ಮಾತುಗಳು.


ಎಂ.ಎಸ್.ಆಶಾದೇವಿಯವರ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಎಂ.ಎಸ್.ಆಶಾದೇವಿಯವರ ಮಾತುಗಳು.

ಕೋಟಗಾನಹಳ್ಳಿ ರಾಮಯ್ಯನವರ ಮಾತುಗಳು.

ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ 'ಪತ್ರಕರ್ತರ ಅಧ್ಯಯನ ಕೇಂದ್ರ' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕೋಟಗಾನಹಳ್ಳಿ ರಾಮಯ್ಯನವರ ಮಾತುಗಳು.