ಮಾರ್ಚ್ 30, 2015

ಸ್ಮಾರ್ಟ್ ಫೋನ್ ತೊರೆದು ‘ಸ್ಮಾರ್ಟ್ ಆಗಿ’

smartphone mania
Dr Ashok K R
ಹೆಚ್ಚೇನಲ್ಲ, ಕೇವಲ ಹದಿನೈದಿಪ್ಪತ್ತು ವರುಷಗಳ ಹಿಂದೆ ಲ್ಯಾಂಡ್‍ಲೈನ್ ಫೋನು ಮನೆಯಲ್ಲಿದ್ದರೆ ಅದು ಮೇಲ್ಮಧ್ಯಮ ವರ್ಗದ್ದೋ ಶ್ರೀಮಂತರ ಮನೆಯೆಂದೋ ಊಹಿಸಿಬಿಡುತ್ತಿದ್ದೆವು. ಹತ್ತಿಪ್ಪತ್ತು ಮೀಟರ್ ದೂರದವರೆಗೆ ಓಡಾಡುತ್ತಾ ಮಾತನಾಡಲು ಅನುವು ಮಾಡಿಕೊಡುವ ವೈರ್‍ಲೆಸ್ ಫೋನನ್ನಂತೂ ಬಾಯ್ಬಾಯಿ ಬಿಟ್ಟುಕೊಂಡು ನೋಡಿದ್ದೆವು. ತಂತ್ರಜ್ಞಾನ ಯಾವ ಪರಿ ವೇಗ ಪಡೆದುಕೊಂಡಿತೆಂದರೆ ಅಪರೂಪಕ್ಕೊಮ್ಮೆ ದರುಶನ ಕೊಟ್ಟು ಬೆಚ್ಚಿ ಬೀಳಿಸುತ್ತಿದ್ದ ಮೊಬೈಲು ಫೋನುಗಳು ಎಲ್ಲರ ಜೇಬಿನೊಳಗೂ ನಲಿದಾಡಲಾರಂಭಿಸಿತು. ಕಪ್ಪು ಬಿಳುಪು ಸ್ಕ್ರೀನ್ ಕಲರ್ ಆಗಿ ಇಂಟರ್ನೆಟ್ ಕೂಡ ಉಪಯೋಗಿಸಬಹುದು ಎಂಬ ಅಚ್ಚರಿ ಟಚ್ ಸ್ಕ್ರೀನ್ ಬಂದು ಮೊಬೈಲುಗಳೆಲ್ಲ ಸ್ಮಾರ್ಟ್ ಆಗುವಲ್ಲಿಗೆ ಸದ್ಯಕ್ಕೆ ನಿಂತಿದೆ. ಮೊಬೈಲುಗಳು ಸ್ಮಾರ್ಟಾದ ವೇಗದಲ್ಲೇ ಜನರೂ ಸ್ಮಾರ್ಟ್ ಆಗಿದ್ದಾರಾ? ಸತತ ಎರಡು ವರುಷಗಳ ತನಕ ಸ್ಮಾರ್ಟ್ ಫೋನ್ ಉಪಯೋಗಿಸಿದ ಅನುಭವದಲ್ಲಿ ಹೇಳುವುದಾದರೆ ಇಲ್ಲ!

ಮಾರ್ಚ್ 28, 2015

ಅಸಹಾಯಕ ಆತ್ಮಗಳು - ಮನೆಯವರಿಗಾಗಿ ಮಾರಿಕೊಂಡವಳು

Asahayaka Aatmagalu

ಕು.ಸ.ಮಧುಸೂದನ್

ಮದುವೆಯಾಗಿ ಬೆಂಗಳೂರಿಗೆ ಬಂದಾಗ ನನಗೆ ಕೇವಲ ಹದಿನೈದು ವರ್ಷ. ಅಕ್ಕನ ಮದುವೆ ನಿಶ್ಚಯ ಮಾಡಿದ್ದ ಅಪ್ಪ ಮದುವೆ ಖರ್ಚಿಗಾಗಿ ಇದ್ದ ಒಂದೂವರೆ ಏಕರೆ ಜಮೀನು ಮಾರಬೇಕಾಗಿ ಬಂತು. ಹಾಗೆ ಜಮೀನು ಮಾರಿದರೆ ಎರಡನೆಯವಳ ಮದುವೆಗೇನು ಮಾಡೋದು ಅನ್ನೋ ಲೆಕ್ಕಾಚಾರದಲ್ಲಿ, ಆಗಿನ್ನೂ ಎಸ್.ಎಸ್.ಎಲ್.ಸಿ ಓದುತ್ತಿದ್ದ ನನಗೂ ಮದುವೆ ಮಾಡಿ ತಲೆತೊಳೆದುಕೊಂಡು ಬಿಟ್ಟ. ಹಾಗೇನೆ ನನ್ನ ಮದುವೆಯಾದ ನಾಲ್ಕೇ ತಿಂಗಳಿಗೆ ವಿಷ ಕುಡಿದು ಸತ್ತು ಹೋದ.
ನನ್ನ ಮದುವೆಯಾದವನು ದೊಡ್ಡ ಕುಳವೇನಲ್ಲ. ಬೆಂಗಳೂರಿನಲ್ಲಿ ಸಣ್ಣ ವರ್ಕಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದೇ ರೂಮಿನ ತಗಡು ಶೀಟಿನ ಬಾಡಿಗೆ ಮನೆಯಲ್ಲಿ ನಾವು ಸಂಸಾರ ಮಾಡುತ್ತಿದ್ದೆವು. ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ, ಮದುವೆಯಾದ ಎರಡು ವರ್ಷಕ್ಕೆ ಎರಡು ಮಕ್ಕಳನ್ನು ಹೆತ್ತುಬಿಟ್ಟೆ. ನನ್ನ ಗಂಡ ಹತ್ತು ಕಾಸು ದುಡಿದರೆ ಹನ್ನೆರಡು ಕಾಸು ಕುಡಿಯೋನು. ಕುಡಿತಕ್ಕಾಗಿ ಊರ ತುಂಬಾ ಸಾಲ ಮಾಡಿಕೊಂಡಿದ್ದ. ಒಂದು ಕಡೆಯ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡೋದು ಅವನ ಚಾಳಿ. ಕೆಲಸ ಮಾಡುತ್ತಿದ್ದ ವರ್ಕ್‍ಶಾಪಿನಲ್ಲೂ ವರ್ಷಕ್ಕಾಗುವಷ್ಟು ಅಡ್ವಾನ್ಸ್ ತೆಗೆದುಕೊಂಡಿದ್ದರೂ, ಒಳ್ಳೆಯ ಕೆಲಸಗಾರ ಅನ್ನೋ ಕಾರಣಕ್ಕವನನ್ನು ಇಟ್ಟುಕೊಂಡಿದ್ದರು. ಹೀಗೆ ತನಗಿಷ್ಟ ಬಂದಾಗ ದಿನಸಿ ತಂದು ಹಾಕುತ್ತಿದ್ದವನ ಕಾಟ ಸಹಿಸಿಕೊಂಡು ಹೇಗೋ ಜೀವನ ಮಾಡುತ್ತಿದ್ದೆ. ಅಪ್ಪ ಸತ್ತ ಮೇಲೆ ತವರು ಮನೆ ಸೇರಿ, ಅಣ್ಣನ ಮಕ್ಕಳನ್ನು ನೋಡಿಕೊಂಡು ಜೀವನ ಮಾಡುತ್ತಿದ್ದ ಅಮ್ಮನಿಂದ ನನಗೇನೂ ಸಹಾಯವಾಗುವಂತಿರಲಿಲ್ಲ. ಇನ್ನು ನನ್ನ ಗಂಡನ ಮನೆಯವರ ಕಥೆಯಂತೂ ಕೇಳುವುದೇ ಬೇಡ. ಅದು ಕುಡಿದು ಸಾಯಲೆಂದೇ ಹುಟ್ಟಿದ ವಂಶವಾಗಿತ್ತು. ಅವರ ಮನೆಯ ಬಹಳಷ್ಟು ಗಂಡಸರ್ಯಾರು ಆಯಸ್ಸು ಪೂರಾ ಮಾಡಿ ಸಾಯಲೇ ಇಲ್ಲ. ಹೀಗಿರುವಾಗ ನನ್ನ ದೊಡ್ಡ ಮಗಳಿಗೆ ಆರು ವರ್ಷವಾದಾಗ ಹತ್ತಿರದ ಕಾರ್ಪೋರೇಷನ್ ಸ್ಕೂಲಿಗೆ ಸೇರಿಸಿದ್ದೆ. ಸೇರಿಸಿ ಒಂದು ವಾರವಾಗುವ ಹೊತ್ತಿಗೆ, ನನ್ನ ಬದುಕು ಬೀದಿಪಾಲಾಗಿ ಹೋಯಿತು. ಕುಡಿದ ಮತ್ತಿನಲ್ಲಿ ವರ್ಕ್‍ಶಾಪಿನಲ್ಲಿ ಕೆಲಸ ಮಾಡುತ್ತಿದ್ದಾಗ, ಕಾಲುಗಳು ಮಿಷಿನ್ನಿಗೆ ಸಿಕ್ಕು ತುಂಡಾಗಿ ಹೋದವು. ಅವನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ವರ್ಕ್‍ಶಾಪ್‍ನವರು ಮತ್ತಾಕಡೆ ತಲೆ ಹಾಕಲೇ ಇಲ್ಲ. ಮದುವೆಯಾಗುವ ತನಕ ಬೆಂಗಳೂರನ್ನು ನೋಡದೆ ಇದ್ದ ನನಗೆ ಅಂತ ಪ್ರಪಂಚ ಜ್ಞಾನವೂ ಇರಲಿಲ್ಲ. ಸರಿ ಅಂತ ಇದ್ದ ತಾಳಿ, ಮೂಗುಬಟ್ಟು ಮಾರಿ ಅವನನ್ನು ನೋಡಿಕೊಂಡೆ. ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದವನಿಗೆ ಕುಡಿಸಲು ಗಂಜಿಯೂ ಇರದ ಸ್ಥಿತಿಯಿತ್ತು. ನಮ್ಮ ಪಕ್ಕದ ಮನೆಯಲ್ಲಿ ರಾಮಣ್ಣ ಅನ್ನೋರಿದ್ದರು. ಅವರು ಮತ್ತು ಅವರ ಹೆಂಡತಿ ಮಾರ್ಕೆಟ್‍ನಲ್ಲಿ ಹೂ ಮಾರುತ್ತಿದ್ದರು. ಪಾಪ ಅವರು ನಮ್ಮ ಮನೆಗೆ ಒಂದು ತಿಂಗಳಿಗಾಗುವಷ್ಟು ರೇಷನ್ ತಂದು ಹಾಕಿ ನಾವು ಉಪವಾಸದಿಂದ ಸಾಯುವುದನ್ನು ತಪ್ಪಿಸಿದಳು. ಜೊತೆಗೆ ಅವಳಿಗೆ ಪರಿಚಯದವರೊಬ್ಬರಿಗೆ ಮನೆಕೆಲಸದವಳು ಬೇಕಾಗಿದ್ದು ಆ ಕೆಲಸ ಮಾಡುತ್ತೀಯ ಎಂದು ಕೇಳಿದರು. ಬೇರೆ ದಾರಿಯಿಲ್ಲದೆ ಕಂಡವರ ಮನೆ ಮುಸುರೆ ತಿಕ್ಕಲು ಶುರು ಮಾಡಿದೆ. ಇದಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಇನ್ನೊಂದು ಕಷ್ಟ ಎದುರಾಯ್ತು. ಮನೆಯಲ್ಲೇ ಇರುತ್ತಿದ್ದ ನನ್ನ ಗಂಡನಿಗೆ ಪಾಶ್ರ್ವವಾಯು ಹೊಡೆಯಿತು. ಅವನ ಬಲಗೈ ಸ್ವಾಧೀನ ಕಳೆದುಕೊಂಡು ಅವನ ಉಪಚಾರದಲ್ಲಿ ಕೆಲಸಕ್ಕೆ ಸರಿಯಾಗಿ ಹೋಗದಂತಾದ್ದರಿಂದ ಆ ಕೆಲ¸ವನ್ನÀ ಕಳೆದುಕೊಂಡೆ. ಈ ಸಮಯದಲ್ಲೇ ನನ್ನ ಎರಡನೇ ಮಗಳಿಗೆ ಟೈಫಾಯಿಡ್ ಆಗಿ ಆಸ್ಪತ್ರೆಗೆ ಸೇರಿಸಬೇಕಾಯ್ತು. ಕೈಯಲ್ಲೀ ಕವಡೆಕಾಸೂ ಇಲ್ಲ. ಸಾಲದಕ್ಕೆ ಕಷ್ಟಕ್ಕಾಗುತ್ತಿದ್ದ, ರಾಮಣ್ಣನವರ ಸಂಸಾರ, ಯಾವುದೋ ಚೀಟಿ ವ್ಯವಹಾರದಲ್ಲಿ ಸಿಲುಕಿ ಹೇಳದೆ ಕೇಳದೆ ಊರು ಬಿಟ್ಟು ಹೋಗಿದ್ದರು. 

ಇಂತಹ ಸಂದರ್ಭದಲ್ಲಿ ನನಗೆ ಆಸ್ಪತ್ರೆಯಲ್ಲಿ ಪರಿಚಯವಾದವಳೆ ಪಾರ್ವತಿ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಬಂದವಳು ಪರಿಚಯವಾದ ದಿನವೇ ಹತ್ತಿರವಾದಳು. ನನ್ನ ನೋವನ್ನು ಯಾರ ಹತ್ತಿರವಾದರೂ ಹೇಳಿ, ಅತ್ತು ಹಗುರವಾಗುವ ಮನಸ್ಸಿನಲ್ಲಿ, ಎರಡು ಮೂರು ದಿನದಲ್ಲಿ ಅವಳ ಬಳಿ ನನ್ನ ಕಥೆಯನ್ನೆಲ್ಲಾ ಹೇಳಿಕೊಂಡೆ. ನನ್ನ ಕಥೆ ಕೇಳಿ ಮರುಗಿದ ಅವಳು ಏನು ಹೆದರಬೇಡ ದೇವರಿದ್ದಾನೆ, ದಾರಿ ತೋರಿಸುತ್ತಾನೆ ಅಂದು, ನನ್ನ ಮನೆಯ ಅಡ್ರೆಸ್ ತೆಗೆದುಕೊಂಡು ಹುಷಾರಾದ ಮೇಲೆ ನಿನ್ನ ಮನೆಗೆ ಬರುತ್ತೇನೆ ಎಂದು ಹೊರಟು ಹೋದಳು. ಮಗಳು ಹುಷಾರಾಗಿ ಮನೆಗೆ ಬಂದ ಮೇಲೆ ಪಾರ್ವತಿಯನ್ನು ಮರೆತುಬಿಟ್ಟಿದ್ದೆ. ನನ್ನ ಕಷ್ಟದಲ್ಲಿ ಅವಳ ನೆನಪಿಟ್ಟುಕೊಂಡು ಏನು ಮಾಡಲಿ? ಆದರೆ ಅದಾದ ಒಂದೇ ವಾರಕ್ಕೆ ಅವಳು ಮನೆಗೇ ಬಂದುಬಿಟ್ಟಳು. 

ಬಂದವಳು ಅದೂ ಇದೂ ಮಾತನಾಡುತ್ತಾ ಮುಂದೇನು ಮಾಡ್ತೀಯ ಅಂತ ಕೇಳಿದಳು. ಅಳೋದು ಬಿಟ್ಟು ನನಗೇನು ಗೊತ್ತಾಗ್ತಿಲ್ಲ ಅಂದಾಗ ಸಮಾಧಾನ ಮಾಡಿದವಳು, ನೀನು ತಪ್ಪು ತಿಳಿಯಲ್ಲ ಅಂದರೆ ನಾನು ಮಾಡೋದನ್ನೇ ನೀನು ಮಾಡಬಹುದು ಅಂತ ತನ್ನ ಕೆಲಸ, ಜೀವನದ ಬಗ್ಗೆ ಹೇಳಿದಳು. ಅಂತವನ್ನೆಲ್ಲಾ ಕನಸು ಮನಸಲ್ಲೂ ಯೋಚಿಸಿರದ ನಾನು ಇಂಥಾ ಹಲ್ಕಾ ಕೆಲಸ ಮಾಡೋದ ಅಂತ ಬೈದುಬಿಟ್ಟೆ. ತಾಳ್ಮೆ ಕಳೆದುಕೊಳ್ಳದ ಅವಳು ಸಮಾಧಾನದಿಂದ ಆಯಿತು. ನೀನೀಗ ಅರ್ಥ ಮಾಡಿಕೊಳ್ಳೋ ಸ್ಥಿತಿಯಲ್ಲಿಲ್ಲ. ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಶಾಂತಿ ಟಾಕೀಸಿನ ಹತ್ತಿರ ಸಿಗು ಅಂತ ಹೇಳಿ ಎದ್ದು ಹೋದಳು. ಅವತ್ತೆಲ್ಲಾ ಅಳುತ್ತಲೇ ಅದರ ಬಗ್ಗೆ ಯೋಚಿಸಿದೆ. ತಪ್ಪು ಅನಿಸಿತ್ತು. ಗಂಡನ ಖಾಯಿಲೆ, ಮಕ್ಕಳ ಆರೈಕೆಗೆ ಬೇರೆ ದಾರಿಯೇ ಇರಲಿಲ್ಲ. ಭಿಕ್ಷೆ ಬೇಡುವುದೋ ಇಲ್ಲ ಸಾಯುವುದೋ ದಾರಿಯಾಗಿತ್ತು. ಮಕ್ಕಳನ್ನು ಅನಾಥರನ್ನಾಗಿ ಮಾಡಿ ಸಾಯುವುದು ಪಾಪ ಅನಿಸ್ತು. ಕೈಲಾಗದ ಗಂಡನನ್ನು ನೋಡಿಕೊಳ್ಳೋರು ಯಾರು ಅನಿಸ್ತು. ಅವತ್ತಿಡೀ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲಿಲ್ಲ. 

ಬೆಳಗ್ಗೆ ಎದ್ದಾಗ ಮನಸ್ಸು ಸ್ವಲ್ಪ ತಿಳಿಯಾಗಿತ್ತು. ಮಕ್ಕಳಿಗೋಸ್ಕರ ಏನು ಮಾಡಿದರೂ ಪಾಪವಲ್ಲ ಅಂತಂದುಕೊಂಡು ಹತ್ತುಗಂಟೆಗೆ ಶಾಂತಿ ಟಾಕೀಸಿನ ಬಳಿ ಹೋಗಿ ಪಾರ್ವತಿಯನ್ನು ಭೇಟಿ ಮಾಡಿದೆ. ಆಗವಳು ಹತ್ತಿರದ ಪಾರ್ಕಿನಲ್ಲಿ ಕೂರಿಸಿಕೊಂಡು ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದಳು. ನಿನಗೇನಾದರೂ ತೊಂದರೆಯಾದರೆ ನಾನಿದ್ದೀನಿ, ಯೋಚನೆ ಮಾಡಬೇಡ ಬಾ ಅಂದು ಯಾವುದೋ ಒಂದು ಮನೆಗೆ ಕರೆದೊಯ್ದಳು. ಅಲ್ಲಿದ್ದ ಹೆಂಗಸಿಗೆ ನನ್ನ ಪರಿಚಯ ಮಾಡಿಕೊಟ್ಟು, ನಾಳೆಯಿಂದ ಇವಳು ಬರ್ತಾಳೆ. ಗಿರಾಕಿಗಳು ಕೋಡೋದ್ರಲ್ಲಿ ಅವಳ ಪಾಲಿನದನ್ನು ಸರಿಯಾಗಿ ಕೊಟ್ಟು ಬಿಡು. ಪಾಪದವಳು ಒಳ್ಳೆ ಹುಡುಗಿ ಯಾರ್ಯಾರೊ ಅಪಾಪೋಲಿಗಳನ್ನು, ಕುಡುಕರನ್ನು ಅವಳ ಹತ್ತಿರ ಕಳಿಸಬೇಡ ಅಂತ ಹೇಳಿ ನನ್ನನ್ನು ವಾಪಾಸು ಕರೆದುಕೊಂಡು ನನ್ನ ಮನೆಗೆ ಬಂದಳು. ಸಂಜೆಯ ತನಕ ಜೊತೆಯಲ್ಲಿದ್ದು ನಾನು ಅಲ್ಲಿಗೂ ಇಲ್ಲಿಗೂ ಬರ್ತಾ ಇರ್ತೀನಿ ಹೆದರಬೇಡ ದೇವರಿಟ್ಟ ಹಾಗಾಗುತ್ತೆ. ಮಕ್ಕಳನ್ನು ಚೆನ್ನಾಗಿ ಓದಿಸು, ಗಂಡನ್ನ ಮಕ್ಕಳನ್ನ ಚನ್ನಾಗಿ ನೋಡಿಕೋ ಅಂತ ಹೇಳಿ ಹೋದಳು.

ಆಮೇಲಿನದನ್ನು ಹೇಳೋದೇನಿದೆ. ಬೆಳಗೆದ್ದು ಮನೆಕೆಲಸ ಮಾಡಿ, ತಿಂಡಿ ಅಡುಗೆ ಮಾಡಿಟ್ಟು, ಮಕ್ಕಳನ್ನು ಸ್ಕೂಲಿಗೆ ಕಳಿಸಿ, ಗಂಡನಿಗೆ ಬೇಕಾದ್ದನ್ನೆಲ್ಲಾ ಅವನ ಪಕ್ಕದಲ್ಲಿಟ್ಟು ಪಾರ್ವತಿ ಪರಿಚಯಿಸಿದ ಮನೆಗೆ ಹೋಗುತ್ತಿದ್ದೆ. ಆ ಮನೆಯಲ್ಲಿ ನನ್ನ ಮತ್ತೊಂದು ಬದುಕು ಶುರುವಾಯ್ತು. ಮೊದಮೊದಲು ಪ್ರಾಣಕಳೆದುಕೊಳ್ಳುವಷ್ಟು ಅವಮಾನವಾದಂತಾಗುತ್ತಿತ್ತು. ಆದರೆ ಕಾಲ ಎಲ್ಲವನ್ನೂ ಮರೆಸುತ್ತೆ ನೋಡಿ. ನಿದಾನವಾಗಿ ಆ ಕಸುಬಿಗೆ ಒಗ್ಗಿಕೊಳ್ಳುತ್ತಾ ಹೋದೆ. ನಿಜ ಹೇಳ್ತೀನಿ ನಾನು ಎರಡು ಮಕ್ಕಳ ತಾಯಯಾಗಿದ್ರೂ ಮೊದಲ ಸಲ ನೋಡಿದ ಯಾರಿಗೂ ಹಾಗನ್ನಿಸುತ್ತಿರಲಿಲ್ಲ. ಹಾಗಾಗಿ ನನ್ನ ವ್ಯವಹಾರ ಚನ್ನಾಗಿ ನಡೆಯತೊಡಗಿತು. ಸತತ ಮೂರು ವರ್ಷಗಳ ಕಾಲ ಆ ಮನೆಯಲ್ಲೇ ದುಡಿದೆ. ಆಮೇಲೊಂದು ದಿನ ಯಾವುದೋ ವಿಷಯಕ್ಕೆ ಮನಸ್ತಾಪ ಬಂದು ಹೋಗುವುದು ನಿಲ್ಲಿಸಿದೆ. 

ಆದರೆ ಅಷ್ಟರಲ್ಲಾಗಲೇ ಈ ದಂಧೆಯ ಆಳ ಅಗಲಗಳು ಅದರಲ್ಲಿರುವ ಹೆಂಗಸರ ಪರಿಚಯವಾಗಿತ್ತು. ಹಾಗೆ ಪರಿಚಯವಾಗಿದ್ದ ಬೇರೆಬೇರೆ ಹೆಂಗಸರ ಮನೆಗಳಿಗೆ ಹೋಗುತ್ತಿದ್ದೆ. ದಿನಕ್ಕೊಂದು ಏರಿಯಾದಲ್ಲಿ ದಿನಕ್ಕೊಂದು ಗಿರಾಕಿ ಒಟ್ಟಿನಲ್ಲಿ ಸ್ವತಂತ್ರವಾಗಿ ಕೆಲಸಮಾಡತೊಡಗಿದೆ. ಸುಳ್ಯಾಕೆ ಹೇಳಲಿ ಕೈತುಂಬಾ ಸಂಪಾದಿಸಿದೆ. ಹೆಚ್ಚು ಖರ್ಚು ಮಾಡದೆ ಮುಂದಕ್ಕಿರಲಿ ಅಂತ ಆದಷ್ಟೂ ದುಡ್ಡು ಕೂಡಿಡುತ್ತಿದ್ದೆ.

ಇಷ್ಟರಲ್ಲಿ ನಾನು ಬೇರೆ ಏರಿಯಾದ ಒಳ್ಳೆ ಮನೆಗೆ ಶಿಫ್ಟ್ ಆಗಿದ್ದೆ. ಆ ಮನೆಯ ಪಕ್ಕದಲ್ಲೇ ಇದ್ದ ಅಂಗಡಿ ಮಳಿಗೆಯ ಅಂಗಡಿಯೊಂದನ್ನು ಬಾಡಿಗೆಗೆ ತಗೊಂಡು ಗಂಡನಿಗೆ ಝೆರಾಕ್ಸ್ ಮತ್ತು ಎಸ್.ಟಿ.ಡಿ ಹಾಕಿಕೊಟ್ಟೆ. ಹತ್ತಿರದಲ್ಲಿ ಒಂದು ಸ್ಕೂಲ್ ಬೇರೆ ಇತ್ತು. ಹಾಗಾಗಿ ಮಕ್ಕಳಿಗೆ ಬೇಕಾಗುವ ಪೆನ್ನು,ಪೆನ್ಸಿಲ್,ಎಕ್ಸೈಜ್ ಮುಂತಾದ ವಸ್ತುಗಳನ್ನು ತಂದು ಜೋಡಿಸಿದೆ. ಅದೃಷ್ಟಕ್ಕೆ ವ್ಯಾಪಾರ ಚನ್ನಾಗಿ ನಡೆಯತೊಡಗಿತು. ಮಂಕಾಗಿ ಮಲಗಿರುತ್ತಿದ್ದ ಗಂಡನೂ ಲವಲವಿಕೆಯಿಂದ ಇರಲು ಶುರು ಮಾಡಿದ. ಮೊದಲ ಮಗಳು ಎರಡನೇ ಬಿಎಸ್ಸ್‍ಸಿ ಓದುತ್ತಿದ್ದಳು. ಎರಡನೆಯವಳ್ಯಾಕೋ ಪಿ,ಯು,ಸಿ ಮುಗಿಸಿ ಮುಂದೆ ಓದಲ್ಲ ಅಂತ ಹೇಳಿ ಅಪ್ಪನ ಜೊತೆ ಅಂಗಡಿಯಲ್ಲಿ ಕೂರುತ್ತಿದ್ದಳು. ಸದ್ಯ ಬದುಕು ಒಂದು ಹಂತಕ್ಕೆ ಬಂತಲ್ಲ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟು ಇನ್ನು ಈ ಕಸುಬು ಬಿಟ್ಟು ಆರಾಮಾಗಿರೋಣ ಅಂದುಕೊಳ್ಳುವಷ್ಟರಲ್ಲಿ ಮತೊಂದು ಆಘಾತ ಕಾದಿತ್ತು. 

ಇದ್ದಕ್ಕಿದ್ದಂತೆ ನನ್ನ ಆರೋಗ್ಯ ಕೆಟ್ಟು, ಕೆಮ್ಮುಜ್ವರ ತಿಂಗಳಾದರೂ ಬಿಡಲಿಲ್ಲ. ಕೊನೆಗೆ ವಿಧಿಯಿಲ್ಲದೆ ದೊಡ್ಡಮಗಳು ಆಸ್ಪತ್ರೆಗೆ ಅಡ್ಮಿಟ್ ಮಾಡಿದಳು. ಅಲ್ಲಿ ರಕ್ತ ಪರೀಕ್ಷೆ, ಎಕ್ಸರೆ ಮಾಡಿದ ಡಾಕ್ಟರು ನನಗೆ ಹೆಚ್.ಐ.ವಿ. ಇದೆ ಅಂತ ಹೇಳಿಬಿಟ್ಟರು. ಜೊತೆಯಲ್ಲಿದ್ದ ಮಗಳು ಅವರು ಹೇಳಿದ್ದಕ್ಕೆಲ್ಲ ಹೂ ಅಂದು ಕೊಂಡು ಮನೆಗೆ ಬಂದವಳು ಅವರಪ್ಪನಿಗೆ, ತಂಗಿಗೆ ವಿಷಯ ಹೇಳಿದಳು. ಗಂಡನಂತೂ “ನಿನ್ನ ಮುಟ್ಟಿ ಇಪ್ಪತ್ತು ವರ್ಷವಾಯ್ತು. ಹೇಳು, ಈ ಕಾಯಿಲೆ ಹೇಗೆ ಬಂತು” ಅಂತ ಕೆಂಡಮಂಡಲವಾಗಿಬಿಟ್ಟ. ಅವನ ಅರಚಾಟದಿಂದ ಇರೋ ವಿಷಯವನ್ನು ಹೇಳಿ ತಪ್ಪು ಮಾಡಿಬಿಟ್ಟೆ, ಸಂಸಾರ ಸಾಕೋಕೆ ನಾನೀ ಕೆಲಸ ಮಾಡಿದೆ. ದಯವಿಟ್ಟು ಕ್ಷಮಿಸಿಬಿಡಿ ಅಂತ ಗಂಡನಿರಲಿ ಹೆಣ್ಣುಮಕ್ಕಳ ಕಾಲನ್ನೂ ಹಿಡಿದು ಬೇಡಿಕೊಂಡೆ. ಉಹುಂ ಯಾರೂ ಕರಗಲಿಲ್ಲ. ಇಂತ ಕೆಲಸ ಮಾಡೋ ಬದಲು ಅವತ್ತೇ ನಮ್ಮನ್ನೆಲ್ಲ ಸಾಯಿಸಿಬಿಡ್ಬೇಕಿತ್ತು ಅಂದು ಕೂಗಾಡಿ ಮನೆಯಿಂದ ಹೊರಹಾಕಿಬಿಟ್ಟರು. ಬೆಳಿಗ್ಗೆಯ ಹೊತ್ತಿಗಾದರೂ ಅವರ ಕೋಪ ಕಡಿಮೆಯಾಗಿ ನನ್ನ ಸೇರಿಸಬಹುದು ಅನ್ನೊ ನಂಬಿಕೆಯಿಂದ ಇಡೀ ರಾತ್ರಿ ಮನೆ ಬಾಗಿಲಲ್ಲೇ ಕೂತಿದ್ದೆ. ಆದರೆ ಬೆಳಿಗ್ಗೆ ಬಾಗಿಲು ತೆಗೆದ ಹೆಣ್ಣುಮಕ್ಕಳು ನನ್ನನ್ನು ಎಳೆದುಕೊಂಡು ಬಂದು ರಸ್ತೆಗೆ ಎಸೆದುಬಿಟ್ಟರು. ಅವತ್ತಿಗೆ ನನ್ನ ಅವರ ಋಣ ಮುಗಿದು ಹೋಯಿತು. 

ಬೇರೆ ದಾರಿಯಿಲ್ಲದೆ ಸಾಯುವ ತೀರ್ಮಾನಕ್ಕೆ ಬಂದ ನಾನು ಹುಚ್ಚಿಯಂತೆ ಬೀದಿಬೀದಿ ಅಲೆದೆ. ಆದರೆ ಯಾರಿಗಾಗಿ ನಾನು ಇಷ್ಟೆಲ್ಲಾ ಕಷ್ಟಪಟ್ಟೆನೋ ಅವರೇ ಆರಾಮಾಗಿರಬೇಕಾದರೆ, ಬದುಕು ಒತ್ತೆಯಿಟ್ಟ ನಾನ್ಯಾಕೆ ಸಾಯಬೇಕು ಅನ್ನಿಸಿ ನನ್ನನ್ನು ಪರೀಕ್ಷಿಸಿದ ಡಾಕ್ಟರ ಹತ್ತಿರ ಹೋಗಿ ಮನೆಯಿಂದ ಹೊರಹಾಕಿರುವ ವಿಷಯ ಹೇಳಿದೆ. ಆಗವರು ಈಗ ನಾನಿರುವ ಈ ಸಂಸ್ಥೆಯ ಅಡ್ರೆಸ್ ಕೊಟ್ಟು ಅಲ್ಲಿಗೆ ಹೋಗು ಅಂದರು. ಜೊತೆಗೆ ನನ್ನೆದುರಿಗೇನೆ ಇಂತಹ ಹೆಣ್ಣುಮಗಳೊಬ್ಬಳನ್ನು ಕಳುಹಿಸುತ್ತಿದ್ದೇನೆ ಎಂದು ಸಹ ಹೇಳಿ ಉಪಕಾರÀ ಮಾಡಿದರು. ನನ್ನಂತಹ ಹೆಚ್.ಐ.ವಿ. ರೋಗಿಗಳ ಪುನರ್ವಸತಿಗಾಗಿರುವ ಈ ಸಂಸ್ಥೆಯಲ್ಲಿ ನಾವುಬಹಳಷ್ಟು ಮಕ್ಕಳು ಹೆಣ್ಣುಮಕ್ಕಳು ಇದ್ದೇವೆ. ಮಕ್ಕಳಿಗೆ ಇಲ್ಲೇ ಶಾಲೆಯಿದೆ. ಸ್ವಲ್ಪ ಗಟ್ಟಿಮುಟ್ಟಾಗಿರೋ ನನ್ನಂತಹ ಹೆಂಗಸರಿಗೆ ಕೈ ಕೆಲಸ ಹೇಳಿಕೊಟ್ಟಿದ್ದಾರೆ. ನಿರ್ವಂಚನೆಯಿಂದ ಅದನ್ನು ಮಾಡುತ್ತಾ, ನಮ್ಮ ಅನ್ನ ನಾವೇ ದುಡಿದು ತಿನ್ನುತ್ತಿದ್ದೇವೆ. ಇಲ್ಲಿ ಬಂದು ಒಂದು ತಿಂಗಳಾದ ಮೇಲೆ ಇಲ್ಲಿಯ ಒಬ್ಬ ಸ್ವಯಂಸೇವಕಿಯ ಹತ್ತಿರ, ನಮ್ಮ ಮನೆ ಅಡ್ರೆಸ್ ಕೊಟ್ಟು ನಾನಿಲ್ಲಿರುವ ವಿಚಾರ ಮನೆಗೆ ತಿಳಿಸುವಂತೆ ಹೇಳಿದೆ. ನನ್ನ ಗಂಡ ಮಕ್ಕಳಲ್ಲವೇ, ಎಂದಾದರೊಂದು ಇನ ಮನೆಗೆ ಕರೆದುಕೊಂಡು ಹೋಗಬಹುದೆಂಬ ಹುಚ್ಚು ಆಸೆ. ಆದರೇನು ಪ್ರಯೋಜನವಾಗಲಿಲ್ಲ. ಮನೆಗೆ ಹೋದ ಆಕೆಗೆ ಅವಳ್ಯಾರು ಅಂತ ಗೊತ್ತಿಲ್ಲ. ನೀವು ಇನ್ನೊಂದು ಸಾರಿ ಬಂದ್ರೆ ಪೋಲೀಸಿಗೆ ಕಂಪ್ಲೇಟ್ ಕೊಡುತ್ತೇವೆಂದು ಹೇಳಿ ಹೆದರಿಸಿ ಓಡಿಸಿದರಂತೆ. ನನಗೆ ಯಾರೂ ಇಲ್ಲ ಎಂದು ಅವತ್ತಿಂದ ಗಟ್ಟಿ ಮನಸ್ಸು ಮಾಡಿಕೊಂಡೆ. 

ಐದು ವರ್ಷವಾಯ್ತು. ಇವತ್ತಿನವರೆಗೂ ಅವರುಗಳ ವಿಚಾರ ಗೊತ್ತಾಗಿಲ್ಲ. ಇಷ್ಟೇ ಸರ್ ನನ್ನ ಕಥೆ ಅಂತ ಮುಗಿಸಿದವಳಿಗೆ ಕೈಮುಗಿದು ಹೊರಡಲು ಅನುವಾದವನಿಗೆ, ಸರ್ ನನಗೊಂದು ಸಹಾಯ ಮಾಡುತ್ತೀರ? ಏನೂ ಇಲ್ಲ, ಈಗ ನನ್ನ ಮಕ್ಕಳು ಏನು ಮಾಡ್ತಿದಾರೆ ಅಂತ ತಿಳಿದುಕೊಂಡು ನನಗೆ ತಿಳ್ಸೋಕೆ ಆಗುತ್ತಾ? 

ಆಯ್ತು ಖಂಡಿತಾ ಮಾಡ್ತೇನೆ ಎಂದು ಹೊರಗೆ ಬಂದವನಿಗೆ ಯಾಕೋ ಅಂತಹ ಕೃತಘ್ಞರ ಮುಖ ನೋಡಬೇಕೆನಿಸಲಿಲ್ಲ. ಜೊತೆಗೆ ಹೋಟೆಲ್ಲಿನ ರೂಮಿಗೆ ಬಂದವನಿಗೆ ಆಕೆಯಿಂದ ವಿಳಾಸವನ್ನೇ ಪಡೆಯದೇ ಬಂದದ್ದು ಅರಿವಿಗೆ ಬಂದು ಬೇಸರವಾಯಿತು!

ಮಾರ್ಚ್ 26, 2015

ಆರಂಭ ಚಿತ್ರಕ್ಕೆ ಎಮ್ಮೆ ಬಲಿ!

ರಸಗವಳ ನಾರಾಯಣ
ಇದು ಪಟ್ಟು ಬಿಡದ ನಿರ್ದೇಶಕ ಮತ್ತು ನಟನೊಬ್ಬನ ಕಲಾನಿಷ್ಠೆಯ ಪರಿ! ಆರಂಭ ಚಿತ್ರದ ಹಾಡುಗಳು ಮತ್ತು ಟೀಸರ್ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಚಿತ್ರದಲ್ಲಿ ಸದ್ದು ಮಾಡುವ ತಮಟೆಯೊಂದರ ಹಿಂದಿನ ಕಥೆಯಿದು! ಕಥೆಯಲ್ಲ, ನೈಜ ಘಟನೆ! ಎಸ್. ಅಭಿ ಹನಕೆರೆ ನಿರ್ದೇಶನದ ‘ಆರಂಭ ಚಿತ್ರದ ಒಂದು ಪ್ರಮುಖ ಪಾತ್ರ ಕುಂಟು ಬೋರನದು. ಚಿತ್ರದ ಹಲವೆಡೆ ಕುಂಟು ಬೋರ ತಮಟೆ ಬಡಿಯುವ ದೃಶ್ಯಗಳಿತ್ತು. ತಮಟೆ ಮೇಲೆ ಕೈ ಆಡಿಸುವ ರೀತಿಯನ್ನು, ದೇಹಭಾಷೆಯ ವ್ಯತ್ಯಾಸವನ್ನು ಅಧ್ಯಯನ ಮಾಡಲು ಕುಂಟು ಬೋರನ ಪಾತ್ರ ನಿರ್ವಹಿಸಿರುವ ‘ರಸಗವಳ ನಾರಾಯಣ’ರವರನ್ನು ತಮಟೆ ಬಡಿಯುವವರ ಹತ್ತಿರವೇ ಕಳುಹಿಸಿದ್ದರಂತೆ.

ಕಲಿತು ವಾಪಸ್ಸಾದ ರಸಗವಳ ನಾರಾಯಣರಿಗೆ ‘ಎಲ್ಲಾದ್ರೂ ಹುಡುಕಿಕೊಂಡು ಒಂದು ಚರ್ಮದ ತಮಟೆಯನ್ನೇ ತರಬೇಕು’ ಎಂದು ನಿರ್ದೇಶಕರು ತಾಕೀತು ಮಾಡಿದ್ದರು. ಎಲ್ಲೆಡೆಯೂ ಪ್ಲಾಸ್ಟಿಕ್ಕು, ಫೈಬರ್ರಿನ ತಮಟೆಯನ್ನೇ ನೋಡಿ ಕಂಗೆಟ್ಟರು ರಸಗವಳ ನಾರಾಯಣ! ಅಲ್ಲೊಂದಿಲ್ಲೊಂದಿದ್ದ ಚರ್ಮದ ತಮಟೆಯನ್ನು ಕೊಡಲು ಅದರ ಯಜಮಾನರು ಒಪ್ಪುತ್ತಿರಲಿಲ್ಲ! ಕೊನೆಗೆ ಕುಂಟು ಬೋರ ಒಂದು ಎಮ್ಮೆಯನ್ನು ಬಲಿಕೊಟ್ಟು ಅದರ ಚರ್ಮದಿಂದ ಹೊಸತೊಂದು ತಮಟೆಯನ್ನೇ ಮಾಡಿಸಿಕೊಂಡು ಚಿತ್ರೀಕರಣಕ್ಕೆ ಹಾಜರಾದರು!

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ, ಹಿನ್ನೆಲೆ ಸಂಗೀತ ನುಡಿಸುವಾಗ ನೈಜತೆಗಾಗಿ ಆ ಚರ್ಮದ ತಮಟೆಯನ್ನೇ ಬಳಸಿದರೆ ಒಳ್ಳೆಯದು ಎಂದು ತಮ್ಮ ಹಂಬಲವನ್ನು ಸಂಗೀತನಿರ್ದೇಶಕರಾದ ಗುರುಕಿರಣ್ ಹತ್ತಿರ ಅಭಿ ಹನಕೆರೆ ಹೇಳಿಕೊಂಡಾಗ, ಮತ್ತೆ ಅದೇತಮಟೆಯನ್ನು ತರಿಸಿ, ಲೈವ್ ರೆಕಾರ್ಡ್ ಮಾಡಿಸಿದ್ದಾರೆ.

ರಸಗವಳ ನಾರಾಯಣನಿಗೆ ಮತ್ತೆ,ತಮಟೆ ತರಲು ಹೇಳಿದಾಗೆ,"ಮನೆಯಲ್ಲಿ ತಮಟೆಯನ್ನುಇಟ್ಟುಕೊಂಡರೆ,ಕೆಟ್ಟಾದಾಗಬಹುದು ಎಂದು ಭಾವಿಸಿ, ಮದ್ದೂರಿನ ದೇವಸ್ತಾನದಲ್ಲಿಇರಿಸಿದ್ದನ್ನು ಕೇಳಿ,ನಿರ್ದೇಶಕರು "ಚಿತ್ರ ಚೆನ್ನಾಗಿ ಮೂಡಿಬರಲು,ನಮ್ಮ ಕೈಯಲ್ಲಿ ಎಷ್ಟುಸಾಧ್ಯ,ಅಷ್ಟು ನೈಜವಾಗಿ ಮಾಡ್ಬೇಕು,ಇಲ್ಲಿ ಎಲ್ಲಾನೂ ಒಳ್ಳೇದಾಗುತ್ತೆ,ಕೆಟ್ಟದಾಗೋ ಮಾತೆಇಲ್ಲ"ಅಂತ ಅವರಿಗೆ ಹೇಳಿ,ಅವರಿಗೆ ಅದೇ ತಮಟೆಯಿಂದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಮಾಡೋಣವೆಂದು,ಮತ್ತೆ ಅದೇ ತಮಟೆ ತರಿಸಿದ್ದಾರೆ.

ಚಿತ್ರದಲ್ಲಿ ಉಪಯೋಗಿಸಿದ ಚರ್ಮದ ತಮಟೆಯನ್ನೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕಿನಲ್ಲೂ ಉಪಯೋಗಿಸಿರುವುದಕ್ಕೆ ಗುರುಕಿರಣ್ ಹರ್ಷ ವ್ಯಕ್ತ ಪಡಿಸುತ್ತಾ ಈ ರೀತಿಯ ಅನುಭವ ಇದೇ ಮೊದಲು ಎಂದಿದ್ದಾರೆ. ಕುಂಟು ಬೋರನ ಪಾತ್ರದ ಅಭಿನಯಕ್ಕೆ ‘ರಸಗವಳನಾರಾಯಣ’ರಿಗೆ ಪ್ರಶಸ್ತಿಗಳ ಸುರಿಮಳೆಯೇ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಅಭಿಹೇಳುತ್ತಾರೆ.

ಹಿನ್ನೆಲೆ ಸಂಗೀತವನ್ನು ಮುಗಿಸಿರುವ ಚಿತ್ರವು ಸೆನ್ಸಾರಿಗೆ ತೆರಳಲು ತಯಾರಾಗಿದ್ದು,ಶೀಘ್ರದಲ್ಲೇ ತೆರೆ ಕಾಣಲಿದೆ.

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.

ಮಾರ್ಚ್ 25, 2015

ದಲಿತ ಕೂಲಿಗಳ ಶಿರಚ್ಛೇಧ ಪ್ರಕರಣ : ದಿಕ್ಕುತಪ್ಪಿಸುವ ಯತ್ನ?

dalits beheaded in chamrajnagar
ರಘೋತ್ತಮ ಹೊ.ಬರವರ ಫೇಸ್‍ಬುಕ್ ಪುಟದಿಂದ

ಡಿ.ಕೆ.ರವಿ ಸಾವಿನ ಪ್ರಕರಣದ ನಡುವೆಯೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಗಿದೆ. ಕಳೆದ ಗುರುವಾರ ಮಾರ್ಚಿ 19, ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿಯಲ್ಲಿ ತೋಟವೊಂದಕ್ಕೆ ಕೂಲಿಗೆಂದು ಹೋಗಿದ್ದ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಕೂಲಿಗಳನ್ನು ಆ ತೋಟದ ಮಾಲೀಕನೇ ಶಿರಚ್ಛೇಧಗೈದಿದ್ದಾನೆ. ನಿಜಕ್ಕೂ ಈ ಘಟನೆ ಹೈಟೆಕ್ ಯುಗದಲ್ಲೂ ದಲಿತರ ಸ್ಥಿತಿ ಯಾವ ಪರಿ ದಾರುಣವಾಗಿದೆ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ ಹಾಗೆಯೇ ಕೊಂದ ಆ ಸವರ್ಣೀಯನ ಕ್ರೌರ್ಯವನ್ನೂ ಕೂಡ.
ಘಟನೆಯ ಭೀಭತ್ಸತೆಯನ್ನೇ ದಾಖಲಿಸುವುದಾದರೆ ಬಲಿಯಾದ ದಲಿತ ಕೂಲಿಗಳಾದ ಸಂತೆಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ನಂಜಯ್ಯ (50) ಬಿನ್ ಮರಸಯ್ಯ, ದೇಶವಳ್ಳಿ ಗ್ರಾಮದ ಕೃಷ್ಣಯ್ಯ(60) ಬಿನ್ ನಂಜಯ್ಯ ಅಂದು ಅದೇ ಸಂತೇಮರಹಳ್ಳಿ ಸಮೀಪದ ದೇಶವಳ್ಳಿ ಗ್ರಾಮದ ಆರೋಪಿ ಮಹದೇವ(38) ಬಿನ್ ಶಿವಪ್ಪನವರ ಬಾಳೆ ತೋಟಕ್ಕೆ ಕೂಲಿಗೆಂದು ಆಗಮಿಸಿದ್ದಾರೆ. ಕೂಲಿಗೆಂದು ಇವರನ್ನು ಕರೆತಂದದ್ದು ಆರೋಪಿಯ ಅಣ್ಣ ನಾಗಪ್ಪ. ನಾಗಪ್ಪ ಕೂಲಿಯಾಳುಗಳಿಗೆಂದು ಟೀ ತರಲು ಹೋಗಿದ್ದಾಗ ಮಹದೇವ ಜಮೀನಿಗೆ ಆಗಮಿಸಿದ್ದಾನೆ ಹಾಗೆಯೇ ದಲಿತ ಕೂಲಿಗಳಿಗೆ ಆತ ಇಂತಿಂಥ ಕೆಲಸ ಮಾಡಿ ಎಂದು ತಾಕೀತುಮಾಡಿದ್ದಾನೆ. ಪರಿಣಾಮ ಮಾತಿಗೆ ಮಾತು ಬೆಳೆದು ಆರೋಪಿ ಮಹದೇವ ತನ್ನ ಕೈಯಲ್ಲಿದ್ದ ಮಚ್ಚಿನಿಂದ ಒಬ್ಬ ಕೂಲಿಯವನಿಗೆ ಬಲವಾಗಿ ಹೊಡೆದಿದ್ದಾನೆ ತಡೆಯಲು ಬಂದ ಮತ್ತೊಬ್ಬನಿಗೂ ಆತ ಮಚ್ಚು ಬೀಸಿದ್ದಾನೆ. ಪೊಲೀಸರ ಪ್ರಕಾರ ಮಚ್ಚು ಹರಿತವಿದ್ದರಿಂದ ಒಮ್ಮೆಯೇ ಆ ಇಬ್ಬರು ದಲಿತ ಕೂಲಿಗಳ ಶಿರಚ್ಛೇಧನವಾಗಿದೆ.

ದುರಂತವೆಂದರೆ ಇಲ್ಲಿ ಕಗ್ಗೊಲೆ ನಡೆದಿರುವುದಲ್ಲ, ಆದರೆ ಆ ಕಗ್ಗೊಲೆಯನ್ನು ದಿಕ್ಕುತಪ್ಪಿಸುವ ಯತ್ನ ನಡೆದಿರುವುದು. ಹೇಗೆಂದರೆ ಸವರ್ಣೀಯ ಸಮುದಾಯಕ್ಕೆ ಸೇರಿದ ಆ ಕೊಲೆಗಾರ ಮಹದೇವನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಲಾಗುತ್ತಿದೆ! ಆ ಮೂಲಕ ಆತನನ್ನು ರಕ್ಷಿಸುವ, ಆತನಿಗೆ ವಿಧಿಸಲ್ಪಡುವ ಶಿಕ್ಷೆಯನ್ನು ತಗ್ಗಿಸುವ ಕುತಂತ್ರ ಎಗ್ಗಿಲ್ಲದೆ ನಡೆದಿದೆ. ಯಾವ ಪರಿ ಎಂದರೆ ಮಾರನೇ ದಿನದ ಸ್ಥಳೀಯ ಪತ್ರಿಕೆಗಳ ವರದಿಯಂತೆ ದಲಿತ ಕೂಲಿಗಳನ್ನು ಹೀಗೆ ಬರ್ಬರವಾಗಿ ಕೊಂದ “ಆರೋಪಿ ಮಾನಸಿಕ ಅಸ್ವಸ್ಥನೇ?” ಎಂದು ಪೊಲೀಸರ ಕೈಯಲ್ಲಿ ಹೇಳಿಸಲಾಗುತ್ತದೆಯೆಂದರೆ... ಅದನ್ನು ತನಿಖೆಯನ್ನು ಹಳ್ಳಹಿಡಿಸುವ ಹಾದಿಯೆನ್ನದೆ ಬೇರೇನೆನ್ನಬಹುದು? ಇನ್ನು ಸಮೂಹ ಮಾಧ್ಯಮಗಳಲ್ಲಿ ಈ ಸಂಬಂಧ ಆರೋಪಿ ಮಹದೇವನಿಗೆ ‘ಸ್ಪ್ಲಿಟ್ ಪರ್ಸನಾಲಿಟಿ’ ಇತ್ತು, ‘ಬೈಪೋಲಾರ್ ಡಿಸೀಸ್’ ಇತ್ತು, ‘ಅನ್ನಿಯನ್’ ಚಿತ್ರದ ನಾಯಕನಿಗೆ ಇದ್ದಂತಹ ಕಾಯಿಲೆ ಇತ್ತು ಎಂಬ ವ್ಯವಸ್ಥಿತ ಪ್ರಚಾರ! ಆದರೆ ವಾಸ್ತವ? ಆತ ಮಾಡಿದ ದಲಿತರ ಕಗ್ಗೊಲೆ? ದಲಿತ ಕಾರ್ಮಿಕರ ಆ ರುಂಡಗಳನ್ನು ಕತ್ತರಿಸಿ ಅವುಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿಟ್ಟು ರುಂಡವೊಂದೆಡೆ ಮುಂಡವೊಂದೆಡೆ ಎಂಬಂತೆ ಅವುಗಳನ್ನು ಅಡಗಿಸಿ ಇಟ್ಟ ಆತನ ಕ್ರೂರತನ? ಅದಕ್ಕೆ ಬಲಿಯಾದ ದಲಿತ ಕೂಲಿಗಳ ದುರಂತ ಅಂತ್ಯ? ಆ ಕುಟುಂಬಗಳ ಆಕ್ರಂಧನ?

ಖಂಡಿತ, ಸದರಿ ದಲಿತ ಕೂಲಿಗಳ ಈ ಹತ್ಯೆಯನ್ನು ಅವರೆಡೆಗಿನ ವ್ಯವಸ್ಥೆಯ ನಿರ್ಲಕ್ಷ್ಯವನ್ನು ನಾವು ಡಿ.ಕೆ.ರವಿಯವರ ಪ್ರಕರಣದೊಡನೆ ಹೋಲಿಸಬಹುದು. ಡಿ.ಕೆ.ರವಿ ಮೇಲ್ವರ್ಗದವರು ಅವರ ಸಾವಿಗೆ ಇಡೀ ವ್ಯವಸ್ಥೆಯೇ ದನಿ ಎತ್ತರಿಸುತ್ತದೆ. ಆದರೆ ದಲಿತರ ಸಾವು? ದಲಿತ ಕೂಲಿಗಳಿಬ್ಬರ ದಾರುಣ ಹತ್ಯೆ? ವ್ಯವಸ್ಥೆ ಅವರ ಪರ ದನಿ ಇರಲಿ, ಕಾನೂನು ಮತ್ತು ನ್ಯಾಯವೇ ಅವರ ಪರ ಇರದಂತೆ ನೋಡಕೊಳ್ಳಲೆತ್ನಿಸುತ್ತದೆ! ಇದನ್ನು ತಮಾಷೆಗೆ ಹೇಳುತ್ತಿಲ್ಲ. ಹದಿನೈದು ವರ್ಷಗಳ ಹಿಂದೆ(2000) ಇದೇ ಮಾರ್ಚ್ ತಿಂಗಳ ಸಮಯದಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿ ಎಂಬ ಗ್ರಾಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ 7 ಜನ ದಲಿತರನ್ನು ಮನೆಯೊಂದಕ್ಕೆ ಕೂಡಿಹಾಕಿ ಹಾಡಹಗಲೇ ಭಸ್ಮಮಾಡಲಾಯಿತು. ದುರಂತವೆಂದರೆ ಕಳೆದ ವರ್ಷ ಸದರಿ ಕಂಬಾಲಪಲ್ಲಿಯ ಆರೋಪಿಗಳು ಹೈಕೋರ್ಟ್ ತೀರ್ಪೊಂದರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಮುಕ್ತರಾಗಿ ಹೊರಬಂದಿದ್ದಾರೆ. ಇನ್ನು ಬಿಹಾರದ ಲಕ್ಮಣ್ ಪುರ್‍ಬಾಥೆ ಘಟನೆ ಇಲ್ಲಿ ದಾಖಲಿಸುವುದಾದರೆ 1997ರ ಡಿಸೆಂಬರ್ 1ರ ಮಧ್ಯರಾತ್ರಿ 11 ಗಂಟೆಯಲ್ಲಿ ರಣವೀರ ಸೇನೆ ಎಂಬ ಮೇಲ್ಜಾತಿ ಭೂಮಿಹಾರ್ ಸಮುದಾಯದ ದೌರ್ಜನ್ಯಕೋರ ಗುಂಪು 27 ಮಹಿಳೆಯರು, 16 ಮಕ್ಕಳನ್ನೂ ಒಳಗೊಂಡಂತೆ ಲಕ್ಷ್ಮಣ್‍ಪುರ್‍ಬಾಥೆ ಗ್ರಾಮದ 58 ದಲಿತರನ್ನು ಸಾಮೂಹಿಕವಾಗಿ ಕೊಂದಿತ್ತು. ಅಂದಹಾಗೆ ಅಂತಹ ಗುಂಪುಕೊಲೆಯಲ್ಲಿ ಒಂದು ವರ್ಷದ ಹಾಲುಗಲ್ಲದ ಕಂದನೂ ಇತ್ತೆಂದರೆ ಹಂತಕರಿಗೆ ನೀಡಬಹುದಾದ ಶಿಕ್ಷೆಯ ಪ್ರಮಾಣವನ್ನು ಎಂಥವರಾದರೂ ಊಹಿಸಬಹುದು. ದುಂರಂತವೆಂದರೆ 2013 ಅಕ್ಟೋಬರ್ 9ರಂದು ನೀಡಿದ ತೀರ್ಪಿನಲ್ಲಿ ಪಾಟ್ನಾ ಉಚ್ಛ ನ್ಯಾಯಾಲಯ ಲಕ್ಷ್ಮಣ್‍ಪುರ್ ಬಾಥೆ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತು! ಇಲ್ಲಿಯೂ ಅಷ್ಟೆ ನ್ಯಾಯಾಲಯ ಹೇಳಿದ್ದು ಸಾಕ್ಷ್ಯಾಧಾರಗಳ ಕೊರತೆ ಎಂದು. ಇನ್ನು ಸ್ವತಂತ್ರ ಭಾರತದಲ್ಲೇ ಅತಿ ಭಯಂಕರ ಎನಿಸುವ ಮಹಾರಾಷ್ಟ್ರದ ಖೈರ್ಲಾಂಜಿ ಘಟನೆಯೂ ಕೂಡ ಇಲ್ಲಿ ಉಲ್ಲೇಖನೀಯ. 2006 ಸೆಪ್ಟೆಂಬರ್ 29 ರಂದು ಖೈರ್ಲಾಂಜಿಯಲ್ಲಿ ದಲಿತ ಕುಟುಂಬದ ನಾಲ್ವರನ್ನು ಊರ ತುಂಬಾ ಅಟ್ಟಾಡಿಸಿದ ಸವರ್ಣೀಯರ ಗುಂಪು ಆ ನಾಲ್ವರನ್ನು ಬಹಿರಂಗವಾಗಿ ಕೊಲೆಗೈದಿತ್ತು. ಹಾಗೇ ಕೊಲೆಗೂ ಮುನ್ನ ಹತ ಆ ಕುಟುಂಬದ ಪ್ರಿಯಾಂಕ ಭೂತ್‍ಮಾಂಗೆ ಎಂಬ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಕೂಡ ನಡೆದಿತ್ತು. ದುರಂತವೆಂದರೆ ಇಲ್ಲಿಯೂ ಇಷ್ಟೆ ಕೆಳ ಹಂತದ ನ್ಯಾಯಾಲಯವೊಂದು ಆರೋಪಿಗಳಿಗೆ ಮರಣದಂಡನೆ ವಿಧಿಸಿದ್ದರೆ ನಾಗಪುರದ ಹೈಕೋರ್ಟ್ ಪೀಠ 2010 ಜುಲೈ 12ರಂದು ತೀರ್ಪು ನೀಡಿ ಖೈರ್ಲಾಂಜಿ ಆ ಆರೋಪಿಗಳ ಮರಣದಂಡನೆಯನ್ನು ರದ್ದುಗೊಳಿಸಿ ಶಿಕ್ಷೆಯನ್ನು ಜೀವಾವಧಿಗಿಳಿಸಿತು. ಒಟ್ಟಾರೆ ಹೇಳುವುದಾದರೆ ದಲಿತರ ಹತ್ಯಾಕಾಂಡದ ಬಹುತೇಕ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ದೊರಕಿಲ್ಲ.

ದುರಂತವೆಂದರೆ ಸಂತೇಮರಹಳ್ಳಿಯ ಸದ್ಯದ ದಲಿತರ ಶಿರಚ್ಛೇಧನ ಪ್ರಕರಣ? ಆರೋಪಿಗೆ ಮಾನಸಿಕ ಅಸ್ವಸ್ಥ ಪಟ್ಟಕಟ್ಟುವ ಹುನ್ನಾರ ನಡೆದಿದೆಯೆಂದರೆ ಇದೂ ಕೂಡ ಕಂಬಾಲಪಲ್ಲಿಯ ಹಾಗೆ ಹಳ್ಳ ಹಿಡಿಯುವ ಸಾಧ್ಯತೆಯಿದೆ. ಅಂದಹಾಗೆ ಘಟನೆ ನಡೆದ ಒಂದೆರಡು ದಿನದ ನಂತರ ಕೇಳಿಬರುತ್ತಿರುವ ಮಾತೆಂದರೆ ಇದೊಂದು ನರಬಲಿ ಯಾಗಿರುವ ಸಾಧ್ಯತೆ ಇದೆ ಎಂದು! ಯಾಕೆಂದರೆ ಘಟನಾ ಸ್ಥಳದ ಪಕ್ಕದಲ್ಲೇ ಹೊಸದೊಂದು ಕಲ್ಯಾಣಮಂಟಪ ನಿರ್ಮಾಣವಾಗಿದೆ. ಅದಕ್ಕಾಗಿ ಈ ಬಲಿ ನಡೆದಿದೆ ಎಂದು. ಹಾಗೆಯೇ ಹತರಾದ ಈರ್ವರನ್ನು ಓರ್ವನೇ ಕೊಂದಿದ್ದಾನೆ ಎಂಬುದನ್ನೂ ಕೂಡ ನಂಬುವುದು ಕಷ್ಟ ಮತ್ತು ಆರೋಪಿ ಮತ್ತು ಹತರಾದ ಕೂಲಿಗಳ ನಡುವೆ ಹಳೆಯ ದ್ವೇಷವಾಗಲೀ ಮತ್ತೊಂದಾಗಲೀ ಇರಲಿಲ್ಲ! ಖಂಡಿತ ಇದರ ಹಿಂದೆ ಒಂದು ತಂಡ, ಮತ್ತು ಒಂದು ಸಂಚು ಇದ್ದೇ ಇರುವಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಂತೇಮರಹಳ್ಳಿಯಲ್ಲಿ ಸದ್ಯ ನಡೆದಿರುವ ದಲಿತ ಕೂಲಿಗಳಿಬ್ಬರ ಅಮಾನುಷ ಹತ್ಯೆಯನ್ನು ಅದು ಸಿಐಡಿಗೆ ವಹಿಸಿ ಘಟನೆಯ ಹಿನ್ನೆಲೆಯನ್ನು ಪತ್ತೆ ಹಚ್ಚಿ ಎಲ್ಲಾ ಸಂಚುಕೋರರನ್ನು ಬಂಧಿಸಲಿ. ತನ್ಮೂಲಕ ಅಮಾನುಷ ಈ ಹತ್ಯೆಯಲ್ಲಿ ದಲಿತರಿಗೆ ನ್ಯಾಯ ದೊರಕಿಸಿಕೊಡಲಿ.

ಮಾರ್ಚ್ 23, 2015

ಸೇವಾಬದ್ದ ಸಾಲು!

ಕು.ಸ.ಮಧುಸೂದನ್

ಪ್ರತಿ ಪ್ರಭುತ್ವದ
ಹಿಂದೆ
ಒಂದು ಉದ್ದ ಸಾಲು
ಸದಾ ಸಿದ್ದವಾಗಿರುತ್ತದೆ
ಕಾಯಕಕ್ಕೆ
ಕಟಿಬದ್ದವಾಗಿರುತ್ತದೆ;
ಕಾಲೆಗೆರಗಿ
ಮುಜುರೆ ಒಪ್ಪಿಸಿ
ಅಡುಗೆ ಮನೆ ಮುಸುರೆ ತಿಕ್ಕಿ
ಅವರ ಹೆಂಡಿರ ಸೀರೆ ಒಗೆದು
ಮಕ್ಕಳ ಹೆಲಿನ ಡೈಪರ್ ತೊಳೆದು
ಉಳಿದ ಅನ್ನಸಾರು ಕಲೆಸಿ ತಿಂದು
ಡರ್ರನೆ ತೇಗಿ
ಬೋಪರಾಕು ಹಾಕಲು
ಒಂದು ಉದ್ದನೇ ಸಾಲು
ಸದಾ ಸಿದ್ದವಾಗಿರುತ್ತದೆ
ಸೇವೆಗೆ ಕಟಿಬದ್ದವಾಗಿರುತ್ತದೆ!

ಮಾರ್ಚ್ 20, 2015

ಸೂತಕದ ಮನೆಯಲ್ಲಿ ಸಾವಿಗೂ ಸಂಭ್ರಮ

D K Ravi
Dr Ashok K R
‘ನೀನ್ಯಾಕೆ ಅವರ ಸಾವಿನ ಬಗ್ಗೆ ಒಂದು ಲೇಖನ ಬರೆಯಲಿಲ್ಲ? ಕೊನೇಪಕ್ಷ ಒಂದು ಫೇಸ್ಬುಕ್ ಸ್ಟೇಟಸ್ಸನ್ನೂ ಹಾಕಲಿಲ್ಲವಲ್ಲ ಯಾಕೆ?’ ಎಂಬ ಪ್ರಶ್ನೆ ಕೆಲವು ಗೆಳೆಯರಿಂದ ಬಂತು. ಸತ್ತುಹೋದವರ ಬಗ್ಗೆ ಏನನ್ನು ಬರೆಯಬೇಕು? ‘ಇವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬರೆಯಬೇಕೆ?’ ಅಥವಾ ಸಾವಿನ ಬಗ್ಗೆ ಯಾರಿಗೂ ಏನೊಂದೂ ಸರಿಯಾದ ಮಾಹಿತಿಯಿಲ್ಲದಿರುವಾಗ ಪುಂಖಾನುಪುಂಖವಾಗಿ ಹಬ್ಬುತ್ತಿರುವ ಗಾಳಿ ಸುದ್ದಿಗಳನ್ನೇ ನಿಜವೆಂದು ಹಬ್ಬಿಸಬೇಕೆ? ಇಪ್ಪತ್ತನಾಲ್ಕು ಘಂಟೆಗಳ ಸುದ್ದಿವಾಹಿನಿಗಳಿಗೆ ಸುದ್ದಿಯನ್ನು ತುಂಬಿಸಲು ಅದು ಅನಿವಾರ್ಯ. ಸಮಯ ತುಂಬಿಸಬೇಕಾದ ಅನಿವಾರ್ಯತೆಯಲ್ಲೂ ಅವರು ವಾಹಿನಿಗೆ ಬಂದು ಬೀಳುತ್ತಿರುವ ಎಲ್ಲಾ ಗಾಳಿಸುದ್ದಿಗಳನ್ನು ಪ್ರಸಾರ ಮಾಡುತ್ತಿಲ್ಲ ಎನ್ನುವುದು ಮೆಚ್ಚಬೇಕಾದ ವಿಷಯ. ಜೊತೆಜೊತೆಗೆ ‘ಇದೇ ಡಿ.ಕೆ.ರವಿಯವರ ಸಾವಿಗಿರುವ ಕಾರಣ’ ಎಂಬ ಸತ್ಯವೆನ್ನಲಾದ ಮಾಹಿತಿಯನ್ನೂ ಪ್ರಸಾರ ಮಾಡುತ್ತಿಲ್ಲ. ದಿನಪತ್ರಿಕೆಗಳಿಗೆ, ಸುದ್ದಿವಾಹಿನಿಗಳಿಗೆ ಪತ್ರಿಕೆ ತುಂಬಿಸುವ ಸಮಯ ತುಂಬಿಸುವ ಅನಿವಾರ್ಯ ಕರ್ಮವಿರುತ್ತದೆ, ವಿವೇಚನೆಯನ್ನು ಪಕ್ಕಕ್ಕಿಟ್ಟು ‘ಹೋರಾಟ’ ನಡೆಸಬೇಕಾದ ಅನಿವಾರ್ಯತೆ ರಾಜಕಾರಣಿಗಳಿಗೂ ಇರುತ್ತದೆ. ಆದರೆ ಫೇಸ್ ಬುಕ್, ಟ್ವಿಟರ್, ಅಂತರ್ಜಾಲದಲ್ಲಿ ಬರೆದುಕೊಳ್ಳುವವರಿಗೆ ಯಾವ ಅನಿವಾರ್ಯತೆ ಇರುತ್ತದೆ? ಸಮಕಾಲೀನ ಘಟನೆಯೊಂದಕ್ಕೆ ನಾನೂ ಪ್ರತಿಕ್ರಿಯಿಸುತ್ತಿದ್ದೀನಿ, ಕೊಂಚವೂ ತಡಮಾಡದೆ ಪ್ರತಿಕ್ರಿಯಿಸುತ್ತಿದ್ದೀನಿ ನೋಡು ಎಂಬ ತೋರ್ಪಡಿಸುವುದಕ್ಕಾಗಿ ಕಾರಣಕ್ಕೆ ಪ್ರತಿಕ್ರಿಯಿಸುವವರ ಸಂಖೈ ಜಾಸ್ತಿಯಾಗುತ್ತಿದೆಯಾ?

ಡಿ.ಕೆ.ರವಿಯವರ ಬಗ್ಗೆ ಮೊದಲು ಕೇಳಿದ್ದು ಕೋಲಾರದ ಐಎಎಸ್ ಆಫೀಸರ್ರೊಬ್ಬರು ಶನಿವಾರ ಭಾನುವಾರ ಐಎಎಸ್ ಕೆಎಎಸ್ ಪರೀಕ್ಷೆ ಕಟ್ಟುವವರಿಗೆ ಉಚಿತ ತರಬೇತಿ ನೀಡುತ್ತಾರೆ ಎಂಬ ಸುದ್ದಿಯ ಮೂಲಕ. ಡಿಸಿ ಅಂದ್ರೆ ಬ್ಯುಸಿ ಪರ್ಸನ್, ಇಲ್ಯಾರೋ ಆಸಾಮಿ ಅಂಥ ಬ್ಯುಸಿ ಶೆಡ್ಯೂಲಿನಲ್ಲೂ ಬಿಡುವು ಮಾಡಿಕೊಂಡು ಇಂತವೆಲ್ಲ ಮಾಡೋದು ಗ್ರೇಟ್ ಎಂದುಕೊಂಡಿದ್ದೆವು. ದಲಿತರ ಮನೆಗೆ ಭೇಟಿ ಕೊಟ್ಟದ್ದು ಒಂದಷ್ಟು ಸುದ್ದಿಯಾಗಿತ್ತು. ಕೋಲಾರದಿಂದ ಅವರನ್ನು ವರ್ಗ ಮಾಡಿದ ನಂತರ ಅಲ್ಲಿನ ಜನರ ಹೋರಾಟ ಮತ್ತೆ ಅವರ ಹೆಸರನ್ನು ಮತ್ತು ಪ್ರಾಮಾಣಿಕತೆಯನ್ನು ಮುಖ್ಯಸುದ್ದಿಯನ್ನಾಗಿಸಿತ್ತು. ನಂತರ ಅವರ ಬಗ್ಗೆ ಹೆಚ್ಚು ಸುದ್ದಿಯಿರಲಿಲ್ಲ. ಅವರ ಬಗೆಗಿನ ಅಷ್ಟೂ ಡೀಟೇಲ್ಸ್ ಹೊರಬಂದಿದ್ದು ಅವರ ಸಾವಿನ ನಂತರ. ಹುಲಿಯೂರುದುರ್ಗದ ಪುಟ್ಟ ಹಳ್ಳಿಯ ಬಡಕುಟುಂಬದಿಂದ ಕಷ್ಟಪಟ್ಟು ಬೆಳೆದು ಐಎಎಸ್ ಮಾಡುವುದು ಸಾಧನೆ, ಆ ಸಾಧನೆ ವಿರಳವೇನಲ್ಲ. ಐಎಎಸ್ ಆಫೀಸರ್ ಆದ ನಂತರ ಬೆಳೆದು ಬಂದ ಬಡಪರಿಸ್ಥಿತಿಯನ್ನು ಮರೆಯದೆ ಬಡಜನರ ಪರವಾಗಿ ಕೆಲಸ ಮಾಡುತ್ತ ಪ್ರಾಮಾಣಿಕನಾಗಿ ಕಾರ್ಯನಿರ್ವಹಿಸುವುದು ಇವತ್ತಿನ ದಿನಮಾನದಲ್ಲಿ ವಿರಳಾತಿ ವಿರಳ. ಇಂಥ ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು ಜನಮಾನಸವನ್ನು ಕಲಕಿ ಹೋರಾಟಕ್ಕೆ ಪ್ರಚೋದಿಸಿರುವುದು ಸರಿಯಾಗಿಯೇ ಇದೆ. 

ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಬಿಲ್ಡರುಗಳ ಮೇಲೆ ಮುರಕೊಂಡು ಬಿದ್ದಿದ್ದರು ಡಿ.ಕೆ.ರವಿ. ನಾಲ್ಕು ತಿಂಗಳಲ್ಲಿ 129 ಕೋಟಿ ತೆರಿಗೆ ಬಾಕಿಯನ್ನು ವಸೂಲು ಮಾಡಿರುವುದು ಕಡಿಮೆ ಸಾಧನೆಯೇನಲ್ಲ. ಬೆಂಗಳೂರಿನ ಬಿಲ್ಡರುಗಳಿಗೆ, ರಿಯಲ್ ಎಸ್ಟೇಟಿನವರಿಗೆ ರಾಜಕಾರಣಿಗಳ ಜೊತೆ ಸಂಬಂಧವಿರುವುದು ಸುಳ್ಳೇನಲ್ಲ. ಅನೇಕ ರಾಜಕಾರಣಿಗಳೂ ರಿಯಲ್ ಎಸ್ಟೇಟಿನವರೇ. ಸಹಜವಾಗಿ ಅನೈತಿಕ ಮಾರ್ಗದಲ್ಲಿ ರವಿಯವರ ಮೇಲೆ ಒತ್ತಡಗಳಿದ್ದೇ ಇರುತ್ತದೆ. ಡಿ.ಕೆ.ರವಿ ದಾಳಿ ನಡೆಸಿದ ಒಂದು ಕಂಪನಿಯ ಹೆಸರು ಎಂಬೆಸ್ಸಿ - ಗಲ್ಫ್ ಲಿಂಕ್. ಗಲ್ಫ್ ಲಿಂಕ್ಸ್ ಕರ್ನಾಟಕದ ಗೃಹಸಚಿವರಾದ ಜಾರ್ಜ್ ರವರ ಕಂಪನಿ. ಮಾಧ್ಯಮದ ಮುಂದೆ ಅವರೇ ಹೇಳಿಕೆ ನೀಡಿರುವಂತೆ ‘ಎಂಬೆಸ್ಸಿ ಎಂಬುದು ಬಹುದೊಡ್ಡ ಕಂಪನಿ. ಅವರದು ಅನೇಕ ಉದ್ಯಮಗಳಿವೆ. ಒಂದು ಉದ್ಯಮಕ್ಕೆ ನಮ್ಮ ಜೊತೆ ಟೈಅಪ್ ಮಾಡಿಕೊಂಡಿದ್ದಾರೆ’. ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಕಾಲಿಕ ಅನೈಸರ್ಗಿಕ ಮರಣ (ಅದು ಆತ್ಮಹತ್ಯೆಯೋ ಕೊಲೆಯೋ ಎಂಬುದನ್ನು ಮರೆಯೋಣ) ನಡೆದು ಜನರು ಆಕ್ರೋಶಗೊಂಡಿರುವಾಗ ‘ನನ್ನ ಪಾಲುದಾರಿಕೆಯ ಕಂಪನಿಯ ಮೇಲೆ ರವಿ ದಾಳಿ ನಡೆಸಿದ್ದಾರೆ. ಸಿಐಡಿ ತನಿಖೆ ನಡೆಯುವ ಈ ಸಂದರ್ಭದಲ್ಲಿ ಗೃಹಸಚಿವನಾಗಿ ನಾನು ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ’ ಎಂದು ಜಾರ್ಜ್ ರಾಜೀನಾಮೆ ನೀಡಬೇಕಿತ್ತಲ್ಲವೇ? ತನಿಖೆಯಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದುಬಿಟ್ಟರೆ ನಂಬುವಷ್ಟು ಮೂರ್ಖರೇ ನಮ್ಮ ಜನ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ರಾಜಕಾರಣಿಗಳ ತಳಿಯೇ ನಶಿಸಿಹೋಗಿರಬೇಕು.

ಸಿಬಿಐ ತನಿಖೆ ಅವಶ್ಯಕವೇ?

ಈ ಹೋರಾಟದಲ್ಲಿ ಪಾಲ್ಗೊಂಡಿರುವ ಬಹುತೇಕರು ರಾಜ್ಯ ಸರಕಾರದ ಅಧೀನದಲ್ಲಿರುವ ಸಿಐಡಿ ತನಿಖೆಗಿಂತ ಸಿಬಿಐ ತನಿಖೆ ಉತ್ತಮ ಎನ್ನುತ್ತಾರೆ. ಡಿ.ಕೆ.ರವಿಯವರ ತಂದೆ ತಾಯಿ ಕೂಡ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸಿಬಿಐ ಅಷ್ಟೊಂದು ಶ್ರೇಷ್ಟವಾದ ಸಂಸ್ಥೆಯೇ ಎಂದು ನೋಡಿದರೆ ನಿರಾಶೆಯಾಗುತ್ತದೆ. ಹೆಸರಿಗೆ ಸ್ವಾಯತ್ತ ಸಂಸ್ಥೆಯಾದ ಸಿಬಿಐ ಕಾಲದಿಂದಲೂ ಕೇಂದ್ರ ಸರಕಾರದ ಕೈಗೊಂಬೆಯಾಗಿಯಷ್ಟೇ ಕೆಲಸ ಮಾಡಿದೆ. ತನ್ನ ಆಡಳಿತವಿಲ್ಲದ ರಾಜ್ಯಗಳಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಸಿಬಿಐ ಉಪಯೋಗಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ ಮಹಂತೇಶ್ ಸಾವಿಗೀಡಾದಾಗ ಬಿಜೆಪಿ ಸರಕಾರ ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಒಪ್ಪಲಿಲ್ಲ. ಆಗ ಕೇಂದ್ರದಲ್ಲಿದ್ದಿದ್ದು ಕಾಂಗ್ರೆಸ್! ಸಿದ್ಧರಾಮಯ್ಯ ಡಿ.ಕೆ.ರವಿಯ ಸಾವನ್ನು ಸಿಬಿಐಗೆ ವಹಿಸಲು ಒಪ್ಪದಿರುವುದಕ್ಕೂ ಇದೇ ಪ್ರಮುಖ ಕಾರಣ. ಕೇಂದ್ರದಲ್ಲೇನಾದರೂ ಈಗ ಕಾಂಗ್ರೆಸ್ ಸರಕಾರವೇ ಇದ್ದಿದ್ದರೆ ಕಣ್ಣುಮುಚ್ಚಿ ಸಿಬಿಐಗೆ ಕೇಸನ್ನು ವರ್ಗ ಮಾಡಿಬಿಡುತ್ತಿದ್ದರು. ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರ. ಡಿ.ಕೆ.ರವಿಯವರ ಸಾವಿನ ತನಿಖೆಯ ನೆಪದಲ್ಲಿ ಯಾವಯಾವ ರಿಯಲ್ ಎಸ್ಟೇಟ್ ಹುತ್ತಕ್ಕೆ ಕೈ ಹಾಕಿ ತಮ್ಮ ಶಾಸಕರ, ಸಚಿವರ ಕುತ್ತಿಗೆಗೆ ತರುತ್ತಾರೋ ಎಂಬ ಭಯವೂ ಇದೆ. ಸಿಐಡಿ ತನಿಖೆಯನ್ನು ರವಿಯ ಸಾವಿಗಷ್ಟೇ ಸೀಮಿತವನ್ನಾಗಿ ಮಾಡಬಹುದು. ಸಿಬಿಐ ಶ್ರೇಷ್ಟ ಸಂಸ್ಥೆಯಲ್ಲ ಎನ್ನುವುದುನ್ನು ಒಪ್ಪುತ್ತಲೇ ಗೃಹಸಚಿವರ ಮೇಲೆ ಆರೋಪ ಬಂದ ಕಾರಣಕ್ಕಾದರೂ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸಬೇಕಿತ್ತು. ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ರಾಜ್ಯ ಸರಕಾರದ ಬಹುದೊಡ್ಡ ಎಡವಟ್ಟಿದು. ಪ್ರತಿಪಕ್ಷ – ಆಡಳಿತ ಪಕ್ಷಗಳ ಗದ್ದಲದ ರಾಜಕೀಯ, ಭಾವನೆಗಳನ್ನು ಪಕ್ಕಕ್ಕಿಟ್ಟು ಯೋಚಿಸದ ಜನತೆ, ಜನರ ಭಾವನೆಗಳನ್ನು ಟಿ.ಆರ್.ಪಿಗಾಗಿ, ಪ್ರಸಾರದಲ್ಲಿ ಏರಿಕೆಗಾಗಿ ಉಪಯೋಗಿಸುವ ಮಾಧ್ಯಮಗಳ ಮಧ್ಯೆ ಡಿ.ಕೆ.ರವಿಯವರ ಸಾವಿನ ನಿಜವಾದ ಸತ್ಯ ಹೊರಬರುತ್ತದಾ? 

ಪ್ರಾಮಾಣಿಕ ಅಧಿಕಾರಿಯೊಬ್ಬನ ಸಾವು ಜನಮಾನಸವನ್ನು ಕಲಕಿರುವುದೇನೋ ಸರಿ. ಆದರೆ ಭಾವನೆಗಳನ್ನೇ ಮುಂದಾಗಿಸಿ ವಿವೇಕವನ್ನು ಕಳೆದುಕೊಂಡುಬಿಡಬೇಕೆ ಎಂಬ ಪ್ರಶ್ನೆ ಕಾಡುತ್ತದೆ. ಬೆಂಗಳೂರಿನ ಕಮಿಷನರ್ ರೆಡ್ಡಿಯವರು ಡಿ.ಕೆ.ರವಿಯವರ ಮನೆಯ ಪರಿಶೀಲನೆಯ ನಂತರ ‘ಪ್ರೈಮಾ ಫೇಸಿ ಇದು ಆತ್ಮಹತ್ಯೆಯೆಂದು ತೋರುತ್ತದೆ’ ಎಂಬ ಹೇಳಿಕೆ ಕೂಡ ತಪ್ಪೆಂದು ಅನ್ನಿಸುವುದು ಇದೇ ಕಾರಣಕ್ಕೆ. ಪೋಸ್ಟ್ ಮಾರ್ಟಮ್ ವರದಿ ಬರುವ ಮುಂಚೆ ಆತ್ಮಹತ್ಯೆಯೆಂದು ಹೇಳಿದ್ದೇಗೆ? ಎಂಬ ಪ್ರಶ್ನೆ ಹುಟ್ಟುವುದು ತನಿಖೆಯೊಂದು ಹೇಗೆ ನಡೆಯುತ್ತದೆ ಮತ್ತು ಪೋಸ್ಟ್ ಮಾರ್ಟಮ್ ವರದಿಯ ಪ್ರಾಮುಖ್ಯತೆ ಏನು ಎನ್ನುವುದು ತಿಳಿಯದಿದ್ದಾಗ. ಪೋಸ್ಟ್ ಮಾರ್ಟಮ್ ವರದಿ ತನಿಖೆಗೆ ಪೂರಕವಾಗಿರುತ್ತದೆಯೇ ಹೊರತು ಅದೇ ತನಿಖೆಯ ಜಾಡನ್ನು ನಿರ್ಧರಿಸಿಬಿಡುವುದಿಲ್ಲ. ಜನರಿಗೆ ಗೊತ್ತಿರುವುದಿಲ್ಲ ಸರಿ, ಮಾಧ್ಯಮಗಳಿಗೂ ಗೊತ್ತಿರುವುದಿಲ್ಲವೇ? ಸತ್ತ ವ್ಯಕ್ತಿಯ ಮನೆಯ ಪರಿಸರ, ವಸ್ತುಗಳು ಇರುವ ರೀತಿ, ಬಾಗಿಲು ಕಿಟಕಿಗಳು ತೆರೆದಿದ್ದವೋ ಹಾಕಿದ್ದವೋ ಎಂಬ ಅನೇಕಾನೇಕ ಸಂಗತಿಗಳನ್ನು ಪರಿಶೀಲಿಸಿ ‘ಮೇಲ್ನೊಟಕ್ಕೆ ಇದು ಕೊಲೆ / ಆತ್ಮಹತ್ಯೆ’ ಎಂದು ಅಂದಾಜಿಸುವುದು ಪೋಲೀಸರ ಕೆಲಸವೇ ಅಲ್ಲವೇ? ಇದು ಸೂಕ್ಷ್ಮ ಪ್ರಕರಣವಾದ ಕಾರಣ ತಮ್ಮ ಅಂದಾಜನ್ನು ಮಾಧ್ಯಮದ ಮುಂದೆ ಹೇಳಿದ್ದು ರೆಡ್ಡಿಯವರ ತಪ್ಪು. ಪೋಸ್ಟ್ ಮಾರ್ಟಮ್ ವರದಿ ಬರುವವರೆಗಾದರೂ ಕಾಯುವ ತಾಳ್ಮೆ ಅವರಲ್ಲಿರಬೇಕಿತ್ತು. ಅದೇ ವಾಕ್ಯವನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರೂ ಹೇಳಿ ಪ್ರೈಮಾ ಫೇಸಿಗೆ ಇರುವ ಬೆಲೆಯನ್ನೇ ಕಳೆದುಬಿಟ್ಟಿದ್ದಾರೆ. ಜನರಲ್ಲಿಲ್ಲದ ತಾಳ್ಮೆಯನ್ನು ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ಹುಡುಕುವುದೇ ತಪ್ಪೇನೋ.

ಈ ಎಲ್ಲಾ ಚರ್ಚೆಗಳ ನಡುವೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಐಎಎಸ್ ಅಧಿಕಾರಿ ಮನುಷ್ಯನೂ ಹೌದು ಎಂಬುದನ್ನೇ ನಾವು ಮರೆತುಬಿಟ್ಟಿದ್ದೀವಿ. ಪ್ರೊಫೆಶನಲಿ ಕರೆಕ್ಟಾದ ವ್ಯಕ್ತಿಗೆ ಒಂದು ಪರ್ಸನಲ್ ಲೈಫು ಕೂಡ ಇತ್ತು, ಕಷ್ಟ ಸುಖಗಳಿತ್ತು, ಸಂತಸ ಬೇಸರಗಳಿದ್ದವು ಎಂಬುದನ್ನು ಮರೆತುಬಿಡುತ್ತೇವೆ. ದೊಡ್ಡದೊಡ್ಡ ರಾಜಕಾರಣಿಗಳನ್ನೆಲ್ಲಾ ಎದುರುಹಾಕಿಕೊಂಡ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಮ್ಮ ಮನಸ್ಸು ಒಪ್ಪದಿರುವುದಕ್ಕೇ ಈ ಮರೆವೇ ಕಾರಣ. ಅವರ ಅಧಿಕಾರದ ವೈಖರಿಯನ್ನು ನೋಡಿದ ಜನರು ಇದು ಖಂಡಿತವಾಗಿಯೂ ಕೊಲೆಯೇ, ಸರಕಾರದ ಒಳಗಿರುವವರೇ ಮಾಡಿಸಿದ್ದಾರೆ ಎಂದು ಅಚಲವಾಗಿ ನಂಬುತ್ತಾರೆ. ಮೂರು ಜನ ಐಟಿ ಆಫೀಸರ್ರಿನ ನೆಪದಲ್ಲಿ ಅವರನ್ನು ಮನೆಗೆ ಕರೆಸಿ ಕಾರ್ಬನ್ ಮೊನಾಕ್ಸೈಡ್ ಬಳಸಿ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ, ಅವರ ಕತ್ತಿಗೆ ಸುತ್ತಿರುವ ತೆಳು ಬಟ್ಟೆಯಿಂದ ಸಾಯಲು ಸಾಧ್ಯವೇ ಎಂಬ ಮೆಸೇಜು ವಾಟ್ಸಪ್ಪಿನಲ್ಲಿ ಹರಿಯುವುದಕ್ಕೆ ಈ ನಂಬಿಕೆ ಕಾರಣ. ಇನ್ನು ಡಿ.ಕೆ.ರವಿಯವರ ಮಾವನ ಮನೆಯಿರುವ ನಾಗರಬಾವಿಯ ಜನರು ಇದು ಆತ್ಮಹತ್ಯೆ; ಕಾಂಗ್ರೆಸ್ಸಿನವರಾದ ಅವರ ಮಾವನವರೇ ಈ ಸಾವಿಗೆ ಕಾರಣ ಎಂದು ನಂಬಿದ್ದಾರೆ. ಮಾವನವರ ಒತ್ತಡ ತಡೆಯಲಾರದೇ ಈ ಕೃತ್ಯ ಮಾಡಿಕೊಂಡಿದ್ದಾರೆ ಎಂದವರ ನಂಬಿಕೆ. ಮಂಡ್ಯದ ಕಡೆ ಈ ಸಾವಿಗೆ ಪ್ರೊಫೆಶನಲಿ ಕರೆಕ್ಟಾದ ವ್ಯಕ್ತಿಯ ಪರ್ಸನಲ್ ಇಮ್ಮೆಚ್ಯುರಿಟಿಯ ಬಗ್ಗೆ ಮಾತನಾಡುತ್ತಾರೆ. ಪ್ರೇಮ ಪ್ರಸಂಗ ಕಾರಣ, ಆ ಪ್ರೇಮ ಪ್ರಸಂಗದಿಂದ ರವಿಯನ್ನು ಹೊರತರಲು ದೊಡ್ಡ ದೊಡ್ಡ ಐಎಎಸ್ ಅಧಿಕಾರಿಗಳು ರವಿಗೆ ಬುದ್ಧಿ ಹೇಳಿದ್ದರು; ಅವರು ಕೊನೆಯದಾಗಿ ಕಳುಹಿಸಿದ ಮೆಸೇಜು ಆ ಹೆಣ್ಣಿಗೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಪ್ರತಿಯೊಬ್ಬರು ತಮಗೆ ತೋಚಿದ, ಅನುಕೂಲ ಕಂಡ ಕತೆಯನ್ನು ಕಟ್ಟಿಕೊಂಡಿದ್ದಾರೆ. ಅವರ ಪ್ರಕಾರ ಅವರ ಕತೆಯೇ ಸರಿ. ಅವರ ಸಾವು ಕೊಲೆಯಾಗಿದ್ದರೆ ಜನರು ನಡೆಸುತ್ತಿರುವ ಅಷ್ಟೂ ಹೋರಾಟಗಳಿಗೊಂದು ಅರ್ಥ ಬರುತ್ತದೆ. ಆತ್ಮಹತ್ಯೆಯಾಗಿದ್ದರೆ? ಪ್ರೊಫೆಶನಲ್ ಒತ್ತಡಕ್ಕೆ ಬಗ್ಗುವ ವ್ಯಕ್ತಿಯಂತೂ ಅಲ್ಲ ಡಿ.ಕೆ.ರವಿ. ಪರ್ಸನಲ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದರೆ ಅದರ ನಿಜವಾದ ಕಾರಣ ತಿಳಿಯುವುದು ಕಷ್ಟಸಾಧ್ಯ – ಅದು ರವಿ ಸಮಾಜಕ್ಕೆ ಮತ್ತದಕ್ಕಿಂತ ಹೆಚ್ಚಾಗಿ ಕುಟುಂಬಸ್ಥರಿಗೆ ಮಾಡಿದ ಅನ್ಯಾಯ. 

ಪ್ರತಿಯೊಬ್ಬರೂ ತಮ್ಮ ತಮ್ಮ ಅನುಕೂಲಕ್ಕೆ ಕತೆಯನ್ನು ಹೆಣೆದು ಕುಳಿತುಕೊಂಡಿರುವಾಗ ಸತ್ಯವೇನೆಂದು ತಿಳಿಯುವುದು ಸಾಧ್ಯವೇ? ತನಿಖಾ ಸಂಸ್ಥೆ ಯಾವುದೇ ಆಗಿರಲಿ ಅದು ನೀಡುವ ವರದಿಯನ್ನು ಒಪ್ಪುವುದು ಅವರ ವರದಿ ನಮ್ಮ ಕತೆಗೆ ಒಪ್ಪುವಂತೆ ಇದೆಯಾ ಎಂಬುದರ ಮೇಲೆ. ನಿಜವಾದ ಸತ್ಯವನ್ನೇ ತನಿಖಾ ಸಂಸ್ಥೆ ಹೇಳಿದರೂ ಆ ಸತ್ಯವನ್ನು ಒಪ್ಪಲಾಗದ ಮನಸ್ಥಿತಿಯನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ. ನಮಗೆ ಸಿಐಡಿ ಮೇಲೆ ನಂಬಿಕೆಯಿಲ್ಲ, ನಮ್ಮ ಪೋಲೀಸರ ಮೇಲೆ ನಂಬಿಕೆಯಿಲ್ಲ, ನಮ್ಮ ಸಿಬಿಐ ಮೇಲೆ ನಂಬಿಕೆಯಿಲ್ಲ, ನಮ್ಮ ರಾಜಕಾರಣಿಗಳ ಮೇಲೆ ನಂಬಿಕೆಯಿಲ್ಲ – ನಮಗ್ಯಾಕೆ ಯಾರ ಮೇಲೂ ನಿಜವಾದ ಪ್ರಾಮಾಣಿಕರ ಮೇಲೂ ನಂಬಿಕೆ ಬರುವುದಿಲ್ಲವೆಂದರೆ ನಮಗೆ ನಮ್ಮ ಮೇಲೆಯೇ ನಂಬುಗೆಯಿಲ್ಲ. ನಮ್ಮ ಪ್ರಾಮಾಣಿಕತೆಯ ಮೇಲೆ ನಮಗೇ ಅಪನಂಬುಗೆ. ಅನಿಷ್ಟಕ್ಕೆಲ್ಲ ರಾಜಕಾರಣಿಗಳೇ ಕಾರಣ ಎಂದು ಬೈಯುವ ಸಂತಸದಲ್ಲಿ ಸೈಟು ಕೊಳ್ಳುವಾಗ ಮನೆ ಖರೀದಿಸುವಾಗ ಕೊಟ್ಟ ಹಣಕ್ಕೂ ರಿಜಿಷ್ಟ್ರೇಶನ್ ವ್ಯಾಲ್ಯೂವಿಗೂ ಇರುವ ವ್ಯತ್ಯಾಸವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ನಮ್ಮ ಮನಸ್ಥಿತಿ ನಮಗೆ ನೆನಪೇ ಆಗುವುದಿಲ್ಲ. ಅಷ್ಟರಮಟ್ಟಿಗೆ ನಾವು ಆತ್ಮವಂಚಕರು.

ಮಾರ್ಚ್ 10, 2015

ಶಿರಸಿಯ ಸಿರಿ

tourist places of shirsi
ಶಿರಸಿ ಮಾರಿಕಾಂಬ ದೇವಾಲಯ
Umesh Mundalli
ಘಟ್ಟದ ಮೇಲಿನ ಎತ್ತರದ ನೆತ್ತಿಯ ಮೇಲಿನ ಪ್ರದೇಶವಾಗಿದ್ದರಿಂದಲೇ ಶಿರಸಿ ಎಂದು ಹೆಸರಾಗಿದೆ ಎನ್ನುತ್ತಾರೆ. ‘ಶಿರಿಷ’ ಎಂಬ ಸಂಸ್ಕೃತ ಪದದಿಂದ ಉತ್ಪತ್ತಿಯನ್ನು ಸೂಚಿಸುತ್ತಾರೆ. ಶಿರಸಿ ತಾಲೂಕು ಹುಬ್ಬಳ್ಳಿಯಿಂದ 90 ಕಿ.ಮಿ. ಕುಮಟಾದಿಂದ 55 ಕಿ.ಮಿ. ಮತ್ತು ಸಿದ್ದಾಪುರದಿಂದ 36 ಕಿ.ಮಿ.ದೂರದಲ್ಲಿದೆ. ಇಂದು ವಾಣಿಜ್ಯೋದ್ಯಮ, ಬ್ಯಾಂಕು, ಶೈಕ್ಷಣಿಕ ಸಂಸ್ಥೆ ಇತ್ಯಾದಿಗಳಿಂದಾಗಿ ಮತ್ತು ಮಾರಿಕಾಂಬಾ ದೇವಿಯ ಜಾತ್ರೆಯಿಂದಾಗಿ ಕನಾಟಕದಾದ್ಯಂತ ಪ್ರಸಿದ್ಧಿ ಪಡೆದಿದೆ. ಶಿರಸಿಯಲ್ಲಿ ಅನೇಕ ಮಂದಿರಗಳು, ಮಠ, ಕಲ್ಯಾಣಮಂಟಪಗಳಿದ್ದು ವಿಶಾಲವಾಗಿ ಕಲಾತ್ಮಕವು ಆಗಿವೆ.ಶಿರಸಿಯ ಮಾರಿಕಾಂಬಾ ದೇವಾಲಯ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದು. ಇದು ಶಿರಸಿಯ ಕಿರೀಟಪ್ರಾಯವಾಗಿದೆ. ಈ ದೇವಾಲಯ ಅತ್ಯಂತ ಪ್ರಾಚೀನವಾಗಿದ್ದು ಇದುವರೆಗೆ ಅನೇಕ ಬಾರಿ ನವೀಕರಣಗೊಂಡಿವೆ. ದೇವಾಲಯದ ರಂಗಮಂಟಪ ವಿಶಾಲವಾಗಿವೆ. ದೇವಾಲಯದ ಗೋಡೆಗಳಲ್ಲಿ ಕಾವಿಕಲೆಯ ಉತ್ತಮ ಚಿತ್ರಗಳನ್ನು ಕಾಣಬಹುದಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಕನಾಟಕದಲ್ಲೆ ಅತಿ ದೊಡ್ಡ ಜಾತ್ರೆಯಾಗಿದ್ದು ಆಗ ದೇವಿಯ ಕಟ್ಟಿಗೆಯ ಪ್ರತಿಮೆಯನ್ನು ನವಿಕರಿಸಲಾಗುತ್ತದೆ.
madhukeshwara temple
ಮದುಕೇಶ್ವರ ದೇವಸ್ಥಾನ
ಬನವಾಸಿ ಮದುಕೇಶ್ವರ ದೇವಾಲಯ
ಕನ್ನಡದ ಮೊಟ್ಟಮೊದಲ ಸಾಮ್ರಾಜ್ಯ ಸ್ಥಾಪಿಸಿದ ಕದಂಬ ಮಯೂರಶರ್ಮನು ಕ್ರಿ.ಶ.4ನೇ ಶತಮಾನದಲ್ಲಿ ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಬನವಾಸಿ ಶಿರ್ಶಿಯಿಂದ 22 ಕಿ.ಮಿ. ದೂರದಲ್ಲಿದೆ. ಮಯೂರ ವರ್ಮನಿಂದ ನಿರ್ಮಿತವಾಗಿರುವ ಮಧುಕೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ವರದಾ ನದಿಯ ದಂಡೆಯ ಮೇಲಿದೆ ಈ ಪುಣ್ಯ ಕ್ಷೇತ್ರ ಬನವಾಸಿ. ಮರುದುಂಬಿಯಾಗಾದರೂ ಹುಟ್ಟುವೆನು ಮತ್ತೊಮ್ಮೆ ಬನವಾಸಿಯಲ್ಲೆ ಎಂದು ಕನ್ನಡದ ಆದಿಕವಿ ಪಂಪ ಹೇಳಿರುವುದು ಇಲ್ಲಿನ ಸ್ಥಳದ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತವೆ. ಕರ್ನಾಟಕದ ಇತಿಹಾಸ ಮತ್ತು ಸಾಹಿತ್ಯಕ ದ್ರಷ್ಠಿಯಿಂದ ಪ್ರಮುಖ ಸ್ಥಾನವಿದೆ. ಇಲ್ಲಿ ಪ್ರತಿವರ್ಷ ಕದಂಬೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಕನ್ನಡದ ಒಬ್ಬ ಪ್ರತಿಭಾನ್ವಿತ ಸಾಹಿತಿಗೆ ಮುಖ್ಯಮಂತ್ರಿಗಳು ಪಂಪ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

Madhukeshwara temple
ದೇಗುಲದ ಒಳನೋಟ
ವರದಾ ನದಿಯ ದಂಡೆಯ ಮೇಲಿರುವ ಮದುಕೇಶ್ವರ ದೇವಾಲಯ ಪ್ರಮುಖವಾದದ್ದು. ಈ ದೇವಾಲಯದಲ್ಲಿರುವ ಐದು ಹೆಡೆಯ ನಾಗಶಿಲ್ಪ, ಗರ್ಭಗುಡಿಯಲ್ಲಿರುವ ಮದುಕೇಶ್ವರಲಿಂಗ, ಕಾರ್ತಿಕೇಯ, ಆದಿಮೂರ್ತಿ, ವೀರಭದ್ರ, ನರಸಿಂಹ, ಗಣಪತಿ,ವೆಂಕಟರಮಣ ಮತ್ತು ಅಷ್ಟದಿಕ್ಪಾಲಕ ಮೂರ್ತಿಗಳು ಆಕರ್ಷಣೀಯವಾಗಿವೆ. ದೇವಾಲಯದ ಕಂಬಗಳು ಕಲಾತ್ಮಕವಾಗಿದ್ದು ನೋಡುಗರನ್ನು ಸೆಳೆಯುತ್ತವೆ. ಇವು ಕದಂಬ ಶೈಲಿಯ ದ್ಯೋತಕವಾಗಿದೆ. ಸಾಲುಗಂಬಗಳ ಮದ್ಯೆ ಇರುವ ಬೃಹದ್ದಾಕಾರದ ನಂದಿಯ ಮೂರ್ತಿ ಮನಮೋಹಕವಾಗಿದೆ. ದೇವಾಲಯದ ಕಂಬದ ಮೇಲೆ ಕಲ್ಯಣಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರು ಮತ್ತು ಸೋದೆ ಅರಸರ ಕಾಲದ ಅನೇಕ ಶಾಸನಗಳನ್ನು ಕಾಣಬಹುದಾಗಿದೆ. ಶಿರಸಿಯಿಂದ ಬನವಾಸಿಗೆ ಬಸ್ಸು ಮತ್ತು ಖಾಸಗಿ ವಾಹನಗಳ ಸೌಲಭ್ಯವಿದೆ.
Sonda mata
ಸೋಂದ ಮಠ
ಸೋಂದ ಮಠ
ಬನವಾಸಿಯಂತೆ ಇನ್ನು ಕೆಲವು ಧಾರ್ಮಿಕ ಐತಿಹಾಸಿಕ ಸ್ಥಳಗಳು ಇಲ್ಲಿವೆ. ಶಿರಸಿಯಿಂದ 16ಕಿ.ಮಿ. ದೂರದಲ್ಲಿ ಸ್ವರ್ಣವಲ್ಲಿ ಮಠ ಮತ್ತು 19 ಕಿ.ಮಿ. ದೂರದಲ್ಲಿ ಸೋಂದ ಮಠವಿದೆ. ಇದೊಂದು ಐತಿಹಾಸಿಕ ಮತ್ತು ಯಾತ್ರಾ ಸ್ಥಳವಾಗಿದೆ. ಹಿಂದೆ ಈ ಭಾಗವು ಸೋದೆ ಅರಸರ ರಾಜಧಾನಿಯಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಇಲ್ಲಿಯ ಕೆರೆಗಳಸಂಪರ್ಕ ಜಾಲ ಅದ್ಯಯನಕ್ಕೆ ಬಹಳ ಅನುಕೂಲಮಾಡಿಕೊಟ್ಟಿದೆ. ಹುಲೇಕಲ್ ಲಕ್ಷ್ಮೀನಾರಾಯಣ ದೇವಾಲಯ,ಸೋದೆ ಕೋಟೆ, ಮುತ್ತಿನಕೆರೆ,ಹಳೆಯೂರು ಶಂಕರನಾರಾಯಣ ದೇವಾಲಯ ಮೊದಲಾದ ಹಲವು ದೇವಾಲಯಗಳು ಕಲಾತ್ಮಕವಾಗಿದೆ. ಇಲ್ಲಿರುವ ಜೈನ ಮಠಗಳು ಸೋದೆ ಅರಸರ ಐತಿಹಾಸಿಕ ಪಳಿಯುಳಿಕೆಗಳು. ಸೋಂದಾ ಸ್ವಾದಿ ಜೈನ ಮಠ, ಸೋದೆ ವಾದಿರಾಜ ಮಠ, ಸ್ವರ್ಣವಲ್ಲಿ ಮಠ, ಗದ್ದಿಗೆಯ ಮಠ ಹಾಗೂ ಮಹಾಂತೀರ ಮಠ ಎಂಬ ಪಂಚಮಠಗಳು ಇಲ್ಲಿ ದರ್ಶನಕ್ಕೆ ಸಿಗುತ್ತದೆ. ಈ ಮಠಗಳು ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕೇಂದ್ರಗಳಾಗಿಯು ಕಾರ್ಯನಿರ್ವಹಿಸುತ್ತಿವೆ.
shivagange falls
ಶಿವಗಂಗೆ
ಶಿವಗಂಗಾ ಫಾಲ್ಸ್ 
ಶಿರಸಿಯಿಂದ 24ಕಿ.ಮೀ.ದೂರದಲ್ಲಿರುವ ಶಿವಗಂಗಾ ಜಲಪಾತವು ಗಣೇಶ ಫಾಲ್ ಹೊಳೆಯಿಂದ ಆಗಿದೆ. ಶಿವ ಜಟೆಯಿಂದ ಇಳಿಯುವ ಗಂಗೆಯಂತೆ ದು ಕಾಣುವುದರಿಂದ ಇದನ್ನು ಶಿವಗಂಗಾ ಜಲಪಾತ ಎಂದು ಕರೆಯಲಾಗಿದೆ ಎನ್ನುತ್ತಾರೆ ಸ್ಥಳಿಯರು.
ಹುಣಸೆಹೊಂಡ ವೆಂಕಟ್ರಮಣ ಸ್ವಾಮಿ 
ಸೋದೆ ಶಿರಸಿ ಬಳಿ ಇರುವ ಪವಿತ್ರ ಕ್ಷೇತ್ರ. ಈ ಊರಿನ ಬಳಿ ಇರುವ ಹುಣಸೆಹೊಂಡದ ವೆಂಕಟ್ರಮಣ ದೇವಾಲಯ ಅತ್ಯಂತ ಮನಮೋಹಕವಾದದದ್ದು. ಈ ದೇವಾಲಯವನ್ನು ವೃದ್ಧರೊಬ್ಬರು ಹುಣಸೆ ಹಣ್ಣು ಮಾರಿದ ಹಣದಿಂದ ಕಟ್ಟಿಸಿದರೆಂದು ಹೇಳಲಾಗುತ್ತದೆ. ಆದರೆ ಇತಿಹಾಸತಜÐರ ಪ್ರಕಾರ 1672ರ ಅವಧಿಯಲ್ಲಿ ಮಧುಲಿಂಗ ನಾಯಕ ಕಟ್ಟಿಸಿರುವನೆಂದು ಹೇಳುತ್ತಾರೆ. ಸುಂದರ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಬೇಲೂರು- ಹಳೆಬೀಡಿನ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿದೆ. ದೇವಾಲಯದ ವಾಸ್ತು ಶಿಲ್ಪ ವಿಜಯನಗರ ಮತ್ತು ಹೊಯ್ಸಳ ಶೈಲಿಯಿಂದ ಕೂಡಿದೆ.
hunasehonda
ಹುಣಸೆಹೊಂಡ
ಸಹಸ್ರ ಲಿಂಗ
ಶಿರಸಿಯಿಂದ 17 ಕಿ.ಮಿ. ದೂರದಲ್ಲಿರುವ ಶಾಲ್ಮಲಾ ನದಿಯಲ್ಲಿ ಎಲ್ಲೆಂದರಲ್ಲಿ ಹರಡಿ ನಿಂತ ಶಿವಲಿಂಗಗಳ ತಾಣ ಸಹಸ್ರ ಲಿಂಗವಿದೆ. ಎತ್ತ ನೋಡಿದರೂ ನದಿಯಲ್ಲಿ ವಿವಿಧ ಗಾತ್ರದ, ವಿವಿದ ವಿನ್ಯಾಸದ ಲಿಂಗಗಳೇ ಕಾಣಸಿಗುತ್ತದೆ. ಪರಮಶೀವನನ್ನು ಎಷ್ಟು ಬೇಕಾದರೂ ಕಣ್ತುಂಬಿಕೊಂಡು ಆರಾದಿಸುವ ಅವಕಾಸ ಇಲ್ಲಿ ಮಾತ್ರ ಸಾಧ್ಯ. ಮಹಾ ಶಿವರಾತ್ರಿಯಂದು ಇಲ್ಲಿ ಭಕ್ತರ ದಂಡೆ ಮೆರೆದಿರುತ್ತದೆ. ಅಲ್ಲಲ್ಲಿ ನಂದಿ ಮತ್ತು ಬಸವನ ವಿಗ್ರಹಗಳು ಕಾಣಸಿಗುತ್ತವೆ. ಸೋದೆಯಿಂದ ಬರಿ 5ಕಿ.ಮೀ ಅಂತರದಲ್ಲಿದೆ ಈ ಪ್ರವಾಸಿ ತಾಣ.

ಮಾರ್ಚ್ 7, 2015

ಲಂಕೇಶ್ ಎಂಭತ್ತು 'ಗೌರಿ' ಲಂಕೇಶ್ ಹತ್ತು...




ಸಕಲ ಜೀವಾತ್ಮರಿಗೆ ಲೇಸ ಬಯಸುವ ಮಹಿಳಾ ಚಳುವಳಿ

ಕೆ. ನೀಲಾ
ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ ಬಿಡುಗಡೆಗೆ ಸಿದ್ಧವಾಗಿರುವ 'ಸಾಕಾರದತ್ತ ಸಮಾನತೆಯ ಕನಸು' ಪುಸ್ತಕದ ಒಂದು ಅಧ್ಯಾಯ 'ಹಿಂಗ್ಯಾಕೆ'ಯ ಓದುಗರಿಗಾಗಿ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಪ್ರಭುತ್ವದ ಕಾನೂನಿನಿಂದಾಗಿ ಖರೇವು ಅರ್ಥದೊಳಗೆ ನಾ ಮಾಡ್ಲಿಕ್ ಹೊಂಟ್ರ ಕದನ ಗ್ಯಾರಂಟಿ. ಕದನದ ಹಿನ್ನೆಲೆಯೊಳಗೆ ಅಂತಾರಾಷ್ಟ್ರೀಯ ದಿನಾಚರಣೆ ಹುಟ್ಟಿಕೊಂಡಿದೆ. ಮತ್ತ 8ನೇ ತಾರೀಕಿನ ಘೋಷಣೆ ಇತ್ತಲ್ಲ, ಅವತ್ತು ನಮ್ಮ ಕಾರ್ಮಿಕ ಮಹಿಳೆಯರು ಉಳಿದೆಲ್ಲ ಆರ್ಥಿಕ ಬೇಡಿಕೆಗಳ ಜೊತೆಗೆ ಮುನ್ನೆಲೆಯಾಗಿ ಮತದಾನ ಹಕ್ಕಿನ ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದ್ರು. ಅದು ರಾಷ್ಟ್ರೀಯ ಪ್ರಜ್ಞೆಯ ಹೋರಾಟ ಆಗಿತ್ತು. ಅದನ್ನು ನೆನಪಿಸಿಕೊಳ್ಳುತ್ತಾ... ಮಹಿಳೆಯರ ಪ್ರಶ್ನೆಯಂದ್ರಾ ಅದೊಂದು ಹಂಗಿಸಿ ಅನುಮಾನಿಸುವ ಪದವಲ್ಲ. ಪುರುಷ ಮತ್ತು ಮಹಿಳೆ ಎದುರು ಬದುರು ನಿಂತಿರುವ ಪ್ರಶ್ನೆಯಲ್ಲ. ಅದನ್ನು ನಾನು ಉತ್ತರ ಕರ್ನಾಟಕ ಭಾಷೆಯ ಒಳಗ ಹೇಳಬೇಕು ಅಂತಂದ್ರ ಇದು ಸಕಲ ಜೀವಾತ್ಮರಿಗೆ ಲೇಸು ಬಯಸುವ ಒಂದು ಚಳುವಳಿ. ಅದೇ ನಮ್ಮ ಸಂಸ್ಕೃತಿ. ಸಕಲ ಜೀವಾತ್ಮರಿಗೆ ಲೇಸು ಬಯಸುವಂಥ ಈ ಚಳುವಳಿಯನ್ನು ನಾವು ನಾಡಿನಾದ್ಯಂತ ಪ್ರಖರವಾಗಿ ಮುಂದಕ್ಕ ತೊಕ್ಕೊಂಡು ಹೋಗುವಂಥ ಹೊಣೆಗಾರಿಕೆ ನಮ್ಮ ಮ್ಯಾಲ ಐತಿ. 

ಕಳೆದ ಅನೇಕ ವರ್ಷಗಳಿಂದ ನಮ್ಮ ನಾಡಿನೊಳಗ ಅನೇಕ ಸಂಘ ಸಂಸ್ಥೆಗಳು ಮಹಿಳಾ ಪರ ಕಾರ್ಯಕ್ರಮಗಳನ್ನ ನಿರ್ವಹಿಸುತ್ತಾ ಇದಾರ. ಆ ರೀತಿಯ ಪ್ರತಿ ವ್ಯಕ್ತಿ ಶಕ್ತಿ ಎಲ್ಲರಿಗೂ ನಾನೊಂದು ದೊಡ್ಡ ಸಲಾಮು ಹೇಳಿ, ಕೆಲವು ಅಂಶ ನಿಮ್ಮ ಮುಂದೆ ಮಂಡಿಸುತ್ತೀನಿ. ವೇದಿಕೆಯ ಮೇಲೆ ಇಷ್ಟು ತನಕ ಲಿಂಗರಾಜಕಾರಣ, ವರ್ಗ ರಾಜಕಾರಣ, ಜಾತಿ ರಾಜಕಾರಣ ಎಲ್ಲಾ ವಿಷಯಗಳನ್ನು ನಿಮ್ಮ ಮುಂದೆ ಇಟ್ಟಿದ್ರು. 

ನಾವು ಇಲ್ಲಿ ಮುಂಜಾನೆದ್ದು ಯಾರ್ಯಾರ್ನ ನೆನೆಯಬೇಕು ಅಂತ ಕೇಳಿದ್ರ, ನಮ್ಮ ಜಾನಪದ ಅಕ್ಕ ಅಥವಾ ತಾಯಿ ಬೀಸುತ್ತಾ ಒಂದು ಮಾತು ಹೇಳುತ್ತಿರುತ್ತಾರೆ. 

ಮುಂಜಾನೆ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯುವ ತವರವರ ಎದ್ದೊಂದು ಗಳಿಗೆ

ಆಯ್ತು ತವರವರನ್ನು ನೆನೆಯೋಣ. ಆದ್ರ ಇವತ್ತಿಗೂ ಸಹಿತ 90-95 ಪರ್ಸೆಂಟು ನಮ್ಮ ಹೆಣ್ಣು ಮಕ್ಕಳು ಆಸ್ತಿವಂಚಿತರು ಆಗ್ಯಾರಲ್ಲ. ನಮ್ಮನ್ನು ಹೆತ್ತವರೇ ನಮಗೆ ಆಸ್ತಿ ಕೊಡಲು ತಯಾರಿಲ್ಲ. ಕಟ್ಟಿಕೊಂಡಿರುವ ಗಂಡನ ಮನೆಯವರು ಆಸ್ತಿ ಕೊಡಲು ತಯಾರಿಲ್ಲ. ಇಂಥ ಸಂದರ್ಭದಲ್ಲಿ ನಮಗೊಂದು ಬಲವಾದ ಕಾನೂನು ಮಾಡಿಕೊಟ್ಟಂತಹ, ಹೆಣ್ಣುಮಕ್ಕಳಿಗೆ, ಸಮಸ್ತಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇರಬೇಕು ಅಂತ ಕಾನೂನು ಮಾಡಿಕೊಟ್ಟಂತಹ ಡಾ. ಬಾಬಾ ಸಾಹೇಬ್ ಅಂಬೇಡ್ಕರರನ್ನು ಮುಂಜಾನೆದ್ದು ನಮ್ಮ ಹೆಣ್ಣುಮಕ್ಕಳು ಮತ್ತು ಸಮಸ್ತ ಜನತೆ ನೆನೆಯಲಿಕ್ಕೆ ಸಾಧ್ಯವಾಗಬೇಕು. 

ಹೆಣ್ಣುಮಕ್ಕಳನ್ನು ಜಾಗತಿಕ ದಲಿತತ್ವಕ್ಕೆ ದೂಡಿದ ಪ್ರಕ್ರಿಯೆಯನ್ನು ವಿವರಿಸಲು ನಾನು ಹೋಗುವುದಿಲ್ಲ. ಸಮಸ್ತ ಹೆಣ್ಣುಮಕ್ಕಳು ಜಾಗತಿಕ ದಲಿತತ್ವಕ್ಕೆ ತಳ್ಳಲ್ಪಟ್ಟವರು. ಅದರೊಂದಿಗೆ ಭಾರತದ ಪರಿಸ್ಥಿತಿಯೊಳಗ ಇವತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೀತದ, ಅದು ನಮ್ಮ ಶ್ರೇಣೀಕೃತ ವ್ಯವಸ್ಥೆಗೆ ಅನುಸರಿಸಿ ನಡೀತದ. 

ಬಡವರು, ಭೂರಹಿತರು ಮತ್ತು ಅತ್ಯಂತ ಕಡು ಬಡತನಕ್ಕೆ ಒಳಗಾದವರು, ದಲಿತರು, ಹಿಂದುಳಿದವರು, ಗ್ರಾಮೀಣ ಪ್ರದೇಶದಲ್ಲಿರುವವರು, ಈ ರೀತಿ ಶ್ರೇಣೀಕೃತ ವ್ಯವಸ್ಥೆ ರೀತಿಯೊಳಗೇನೆ ನಮ್ಮ ಬಡತನದ ಅಂಕಿ ಅಂಶ ಸಿಗುತ್ತವೆ ಅಂತ ನಮಗ ಗಮನಿಸಲು ಸಾಧ್ಯವಾಗಬೇಕು. ವರ್ಗ ಮತ್ತು ಜಾತಿ ಈ ಎರಡು ಪ್ರಶ್ನೆಗಳು ಸಹಿತ ಒಂದಕ್ಕೊಂದು ತಳಕು ಹಾಕಿಕೊಂಡು ಇವತ್ತು ಬೆಳೆದು ಬಂದಿರುವುದನ್ನು ನೋಡ್ತೇವೆ. ಹಾಗಾಗಿ ನಮ್ಮ ಚಳುವಳಿಯನ್ನು, ಇವತ್ತು ವರ್ಗ ತಾರತಮ್ಯದ ವಿರುದ್ಧ ಚಳುವಳಿಯನ್ನು ಮಾಡ್ತ ಮಾಡ್ತನೆ ಜಾತಿಯ ತಾರತಮ್ಯದ ವಿರುದ್ಧ ಸಹ ಚಳುವಳಿ ಮಾಡುವಂತಹ ಅವಶ್ಯಕತೆ ಹಿಂದೆಂದಿಗಿಂತ ಇವತ್ತು ಹೆಚ್ಚದ. ಅದನ್ನು ಮುಂದೆಯೂ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. 

ನಾನು ಇಲ್ಲಿ ಬಂದಂತಹ ಎಲ್ಲ ಹೆಣ್ಮಕ್ಳು ಸಹಿತ ಮನೆಯೊಳಗೆ ಕೆಲಸ ಮಾಡಿಬಂದಿದೀವಿ. ನಮ್ಮ ಯಾರ ಮನೆಯೊಳಗೂ ರೊಟ್ಟಿ ತಟ್ಟಿದ್ದಕ್ಕೂ, ಮುದ್ದೆ ತಟ್ಟಿದ್ದಕ್ಕೂ, ಅಡಿಗೆ ಮನೆ ಕೆಲಸ ಮಾಡಿದ್ದಕ್ಕೂ, ಬಟ್ಟೆ ತೊಳೆದದ್ದಕ್ಕೂ, ಪಾತ್ರೆ ತೊಳೆದಿದ್ದಕ್ಕೂ ನಮಗೆ ಖಂಡಿತಾ ಕೂಲಿಯಿಲ್ಲ. ನೀವು ಏನಾದರೂ ಆರ್ಥಿಕ ವಿಚಾರ ಮಾತಾಡಕ ಚಾಲು ಮಾಡಿದ್ರಿ ಅಂದ್ರ, ಆವಾಗ ಹೊಸ ವಾದ ನಿಮ್ಮ ಎದುರು ಬಂದು ಬಿಡ್ತದ. ಅದು ಎನು ಅಂತಂದ್ರ ‘ನೀವು ತಾಯಿಯಾಗಿ, ಅಕ್ಕ-ತಂಗಿ ಇಷ್ಟೆಲ್ಲ ಆಗಿ ಇಷ್ಟೊಂದು ನಮ್ಮ ನಿಮ್ಮ ಮಧ್ಯದ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ನೀವು ವ್ಯವಹಾರಿಕವಾಗಿ ನೋಡ್ತಿರೇನೂ’ ಅಂತ ನಮಗ ಪ್ರಶ್ನೆ ಮಾಡ್ತಾರ. ಅಂದ್ರ ನಾವು ವ್ಯಾವಹಾರಿಕ ಮಾತನಾಡಿದಾಗ ಭಾವನಾತ್ಮಕ ಪ್ರಶ್ನೆ ಎತ್ತಿ, ಭಾವನಾತ್ಮಕ ಮಾತನಾಡಿದಾಗ ವ್ಯವಹಾರಿಕ ಪ್ರಶ್ನೆ ಎತ್ತಿ ಗಲಿಬಿಲಿ ಮಾಡ್ತಾರ. 

ಇದ್ರ ಉದ್ದೇಶವೇನು ಅಂದ್ರ ಹೆಂಗಸರನ್ನು ಬಿಟ್ಟಿಯಾಗಿ, ಪುಕ್ಕಟೆಯಾಗಿ ದುಡಿಯುವುದಕ್ಕ ಬೇಕಾದಂತಹ ತಂತ್ರ ಕುತಂತ್ರವನ್ನು ಹೆಣ್ದಿದ್ದಾರ ಅಂತ ಅನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಬಂಧುಗಳೇ, ನಾನು ಹಳ್ಳಿಯಲ್ಲಿ ಕೆಲಸ ಮಾಡ್ತೀನಿ. ನಮ್ಮ ಗೌಡರ ಮನೆಯಾಗ ಜಮೀನ್ದಾರರ ಹೆಂಡತಿ ಬಂಗಾರ ಹೇರಿಕೊಂಡು ಮೀಟಿಂಗ್‍ಗೆ ಬಂದಿರ್‍ತಾರ. ಅಂಥವ್ರನ್ನ ಒಂದು ಮಾತು ಕೇಳ್ತೀನಿ, ‘ಏನಕ್ಕ ನಿಮ್ಮ ತಂಗಿ ಬಡತನದಲ್ಲಿ ಇದ್ದಳಾ, ನಿಮ್ಮ ಒಂದು ತೊಲ ಬಂಗಾರನ ತೆಗೆದು ಕೊಡ್ತೀಯಾ?’ ಅಂದ್ರ ‘ಇಲ್ಲ’. ಆಕೆಯ ಮೈಮೇಲೆ ಹಾಕಿಕೊಂಡಿರುವ ಬಂಗಾರ ಆ ಗೌಡ/ಸಾಹುಕಾರನ ಹೆಂಡತಿ ಅಂತ ತೋರಿಸಿಕೊಳ್ಳಲು ಹಾಕಿಕೊಂಡಿರುವುದೇ ವಿನ: ಆಕೆಗೆ ಅದರ ಮ್ಯಾಲೆ ಯಾವ ರೀತಿಯ ಅಧಿಕಾರನೂ ಇಲ್ಲ. ಹಂಗೇನೇ ನಮ್ಮ ಉದ್ಯೋಗಸ್ತ ಹೆಣ್ಣು ಮಕ್ಕಳು ಸಹಿತ ಒಂದು ಲಕ್ಷ ರೂಪಾಯಿ ಯುಜಿಸಿ ಸಂಬಳ ತೆಗೆದುಕೊಂಡ್ರ ಸಹಿತ, ಅದರ ಮೇಲೆ ಅವಳದು ಎಷ್ಟು ಅಧಿಕಾರ ಇರ್ತದ? ನೀವು ಅವರನ್ನು ಕೇಳಬಹುದು, ಆ ಮಾತು ಬೇರೆ. ನಮ್ಮ ಹೆಣ್ಣುಮಕ್ಕಳನ್ನು ಮನೆಯ ಒಳಗೂ ಹೊರಗೂ ಪುಕ್ಸಟೆ ದುಡಿಸಿಕೊಳ್ಳಲು ಬೇಕಾದಂತಹ ವ್ಯವಸ್ಥೆ ನಮ್ಮ ಸಮಾಜದ್ದು ಅದಲ್ಲ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. ಮತ್ತೆ ಹಿಂಗೇನೆ ಅಂಗನವಾಡಿ, ಬಿಸಿಯೂಟ, ಇಟ್ಟಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವವರು, ಗಾರ್ಮೆಂಟ್‍ನಲ್ಲಿ ಕೆಲಸ ಮಾಡುವವರು, ಬೇರೆ ಬೇರೆ ರೀತಿ (ಇತ್ತೀಚಿನ ಹತ್ತು ವರ್ಷಗಳಿಂದ) ಹಳ್ಳಿಗಳಿಂದ ನಗರಕ್ಕೆ ವಲಸೆ ಶುರುವಾಗಿಬಿಟ್ಟಿದೆ. ಈ ವಲಸೆ ಬರುವ ಸಂಖ್ಯೆ ಬಹಳ ದೊಡ್ಡದಾಗಿದೆ. ದಲಿತ ಮಹಿಳೆಯರ ಸಂಖ್ಯೆಯೂ ಅಷ್ಟೇ ದೊಡ್ಡ ರೀತಿಯಲ್ಲಿ ಅಗಿದೆ. ಸಣ್ಣ ರೈತರು, ಬಡ ರೈತರು, ಸಾಮಾನ್ಯ ರೈತರು, ಕೃಷಿ ಕೂಲಿ ಕಾರ್ಮಿಕರು ಇವರೆಲ್ಲರೂ ಪಟ್ಟಣಕ್ಕೆ ಬರಲು ಶುರುಮಾಡಿದ್ದಾರೆ.

ಎಲ್ಲಿ ಒಂದು ಆರ್ಥಿಕ ಅಸಮಾನತೆ ಉಂಟಾಗುತ್ತದೋ ಎಲ್ಲಿ ಸಂಪತ್ತು ಒಂದು ಕಡೆ ಕ್ರೋಢೀಕರಣವಾಗಿ ಬಡತನ ಜಾಸ್ತಿಯಾಗುತ್ತೋ ಅಲ್ಲಿ ವಿಚಿತ್ರವಾದ, ವಿಕಾರವಾದ ಎಲ್ಲ ರೀತಿಯ ಕ್ರೌರ್ಯ ತಲೆದೋರುತ್ತ ಅನ್ನೋದನ್ನು ಗಮನಿಸಲಿಕ್ಕೆ ನಮಗೆ ಸಾಧ್ಯವಾಗಬೇಕು. ಹಾಗಾಗಿ ಇವತ್ತು ನಗರದೊಳಗೆ ಹೆಣ್ಣುಮಕ್ಕಳನ್ನು ಅವಳ ಶರೀರ, ಅವಳ ಮನಸ್ಸು, ಅವಳ ಶ್ರಮ ಎಲ್ಲವನ್ನು ಸಹಿತ ಪುಕ್ಸಟೆಯಾಗಿ ದುಡಿಸಿಕೊಳ್ಳಲು ಬೇಕಾದ ಫ್ಲೆಕ್ಸಿಬಲ್ ರೀವರ್ ರೀತಿಯಲ್ಲಿ ದುಡಿಸಿಕೊಳ್ಳಲು ಬೇಕಾದಂತಹ ಕಾನೂನು ಸರ್ಕಾರದಿಂದ ಆಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆನ್ನುವುದು ಮಹಿಳೆಯ ಅಸ್ಮಿತೆ, ಸ್ವಾಭಿಮಾನ, ವಿಮೋಚನೆಯ ಹಕ್ಕಿಗಾಗಿ ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಾಗಿದೆ. ಮಹಿಳೆಯರು ಒಂದು ವರ್ಗದ ದಾಳಿಯಿಂದ, ಜಾತಿಯ ದಾಳಿಯಿಂದ ಕಷ್ಟಪಡುತ್ತಿರುವ ಈ ಸಂದರ್ಭದೊಳಗೆ ನಾವು ಮಹಿಳಾ ಚಳುವಳಿಯನ್ನು ತೀವ್ರಗೊಳಿಸಬೇಕು ಅನ್ನುವ ಮಾತನ್ನು ಹೇಳುತ್ತಾ, ಈ ಚಳುವಳಿಗೆ ಹೆಗಲು ಕೊಟ್ಟಂತಹ ಇಲ್ಲಿ ಸೇರಿದಂತಹ ನಿಮಗೆಲ್ಲರಿಗೂ ವಂದಿಸುತ್ತೇನೆ.