![]() |
ಹುಲಿಯ ನೆರಳಿನೊಳಗೆ |
Dr Ashok K R
ಗೌಡ,
ಜಮೀನ್ದಾರ, ಪೋಲೀಸ್ ಪಾಟೀಲ್, ಮಾಲಿ ಪಾಟೀಲ್, ಪೂಜಾರಿ, ಅಯ್ಯಂಗಾರಿ ಇನ್ನೂ ಹತ್ತಲವು ಪದಗಳು
ನಮ್ಮಲ್ಲನೇಕರ ಹೆಸರುಗಳನ್ನಲಂಕರಿಸುತ್ತವೆ. ಈಗವುಗಳಲ್ಲಿ ಬಹುತೇಕವು ತಲೆಮಾರಿನ ಮುಂದುವರಿಕೆಗೆ
ಇದ್ದರೆ ಮುಂಚಿನ ದಿನಗಳಲ್ಲಿ ಅವರ ಸುಪರ್ದಿಯಲ್ಲಿದ್ದ ದೇವಸ್ಥಾನ, ಜಮೀನು, ಕೆಲಸವನ್ನು
ಸೂಚಿಸುತ್ತಿದ್ದವು, ಜೊತೆಗೆ ಜಾತಿ ಸೂಚಕವಾಗಿದ್ದವು. ದೇವಸ್ಥಾನದ ಒಳಗೆ ಕಾಲಿಡಲಾಗದ, ಜಮೀನಿನ
ಒಡೆತನವೇ ಇಲ್ಲದ, ಮಾಡುವ ಕೆಲಸವನ್ನು ಹೇಳಿಕೊಳ್ಳಲಾಗದ, ಹೆಸರೇ ಕೀಳರಿಮೆ ಹುಟ್ಟಿಸುವ ಜಾತಿಯಲ್ಲಿ
ನರಳಿದ ಜನರು ಸರ್ ನೇಮಿಗಾಗಿ ಏನು ಮಾಡುತ್ತಿದ್ದರು?! ಆಸ್ತಿ ಪಾಸ್ತಿ ಇಲ್ಲದ ಜನರು
ಪ್ರಕೃತಿಯಲ್ಲಿ ಉಳಿದವರಿಗಿಂತ ಹೆಚ್ಚಾಗಿ ಒಡನಾಡಿದವರು. ಅಂಥಹ ಪ್ರಕೃತಿಯೊಂದಿಗೇ ತಮ್ಮನ್ನು
ಗುರುತಿಸಿಕೊಳ್ಳುವ ಅತ್ಯದ್ಭುತ ವಾಸ್ತವಾತ್ಮಕ ಕಲ್ಪನೆಯೊಂದಿಗೆ ಕನ್ನಡಕ್ಕೆ ಭಾವಾನುವಾದಗೊಂಡಿರುವ
ನಾಮದೇವ ನಿಮ್ಗಾಡೆಯವರ ಆತ್ಮಕಥನ ‘ಹುಲಿಯ ನೆರಳಿನೊಳಗೆ – ಅಂಬೇಡ್ಕರ್ ವಾದಿಯ ಆತ್ಮಕಥೆ’
ಪ್ರಾರಂಭವಾಗುತ್ತದೆ. ನಿಮ್ಗಾಡೆಯ ಅರ್ಥ ಬೇವಿನ ಮರ! ಇದೇ ರೀತಿ ತೆಂಗಿನ ಮರ(ಕೋಬ್ರಗಾಡೆ), ಮಾವಿನ
ಗಿಡ (ಅಂಬಗಾಡೆ), ಸೀಬೆ ಮರ (ಜಮಗಾಡೆ), ಚೆಕ್ಕಕಾಯಿ (ಬೋರ್ಕರ್) ಎಂಬ ಹೆಸರುಗಳೂ ಇವೆಯಂತೆ.
ಪ್ರಕೃತಿಯೊಂದಿಗೆ ಇದಕ್ಕಿಂತ ಹೆಚ್ಚಿನ ರೀತಿಯ ಸಹಬಾಳ್ವೆಯ ಉದಾಹರಣೆಯನ್ನು ನಾನಂತೂ ಇದುವರೆಗೆ
ಓದಿರಲಿಲ್ಲ.