ಮೇ 9, 2015

ಅತೀತ

Dr Ashok K R
“ಏಯ್, ಸರಿಯಾಗಿ ನೋಡ್ಕೊಂಡು ನಡಿ”

“ನೀನ್ ಸರಿಯಾಗಿ ನೋಡ್ಕೊಂಡು ನಡಿ”

“ಯಾರಿಗ್ಹೇಳ್ತಿ?”

“ನೀನ್ಯಾರಿಗ್ಹೇಳ್ತಿ?”

“ನಿಮ್ಮಗಳ ಬುದ್ಧೀನೇ ಇಷ್ಟು”

“ನಿಮ್ಮಗಳ ಬುದ್ಧೀನೇ ಇಷ್ಟು”

“ಸಂಸ್ಕಾರವಿಲ್ಲದ ಜನ”

“ಸಂಸ್ಕಾರವಿಲ್ಲದ ಜನ”


ಏರುತ್ತಲೇ ಸಾಗುತ್ತಿದ್ದ ದನಿಗಳಿಂದ ವಿಚಲಿತನಾಗಿ ಡಾಕ್ಟ್ರು ತಮ್ಮ ಕೋಣೆಯಿಂದ ಹೊರಬಂದು “ಯಾರ್ರೀ ಅದು ಆಸ್ಪತ್ರೆ ಅನ್ನೋ ಸೆನ್ಸೂ ಇಲ್ದೆ ಕಿರುಚ್ತಿರೋದು?” ಎಂದ್ಹೇಳಿ ನೋಡಿದವರಿಗೆ ಕಂಡಿದ್ದು ಜೀವನದಲ್ಲೇ ಮರೆಯಲಾಗದ ದುರನುಭವಗಳನ್ನು ನೀಡಿದ್ದ ಸುಲೇಮಾನ್ ಮತ್ತು ಭಾಸ್ಕರ. 

“ಅವನ್ದೇ ತಪ್ಪು”

“ಅವನ್ದೇ ತಪ್ಪು”

“ತಪ್ಪು ನಿಮ್ದೋ ಅವರ್ದೋ ನನಗ್ಯಾಕೆ. ರೋಗಿಗಳ ಮುಂದೆ ಕಿತ್ತಾಡೋಕೆ ಬಂದಿದ್ದೀರಾ? ಹೊರಗೋಗ್ರಿ”

ಸುಲೇಮಾನ್ ಮತ್ತು ಭಾಸ್ಕರ ಬಸಿರಾಗಿದ್ದ ತಮ್ಮ ಹೆಂಡಿರನ್ನು ಚೆಕಪ್ಪಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ಪರೀಕ್ಷಿಸಿ ಕಳುಹಿಸಿದ ಡಾಕ್ಟ್ರಿಗೆ ಹಳೆಯ ಘಟನೆಗಳು ನೆನಪಾಯಿತು.

ಎಂಬಿಬಿಎಸ್ ಮಾಡುವಾಗ ಪ್ರೀತಿಸಿದ್ದ ರೇಷ್ಮಾಳನ್ನು ಮನೆಯವರ ವಿರೋಧದ ನಡುವೆ ಮದುವೆಯಾಗಿ ಈ ಪುಟ್ಟ ಊರಿಗೆ ಬಂದು ನೆಲೆಸಿದ್ದ. ಎರಡು ವರ್ಷದೊಳಗೆ ಪುಟ್ಟ ನರ್ಸಿಂಗ್ ಹೋಮನ್ನು ಕಟ್ಟುವಷ್ಟರ ಮಟ್ಟಿಗೆ ಪ್ರಾಕ್ಟೀಸ್ ಕ್ಲಿಕ್ ಆಗಿತ್ತು. ರೇಷ್ಮಾ ಪಿ.ಜಿ ಮಾಡಲು ಹೋದಳು. ಇಲ್ಲಿನ ಸಮಾಜವೂ ರೋಗಗ್ರಸ್ಥವಾಗಿದೆ ಎಂದರಿವಾಗಲು ಡಾಕ್ಟ್ರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಜನರಿಗಾಗುವ ಖಾಯಿಲೆಗಳು ಏರಿಳಿಯುತ್ತಿತ್ತು, ಸಮಾಜಕ್ಕಂಟುತ್ತಿದ್ದ ಖಾಯಿಲೆ ಏರುಗತಿಯಲ್ಲಷ್ಟೇ ಸಾಗುತ್ತಿತ್ತು. ರಂಜಾನ್ ಮಾಸದಲ್ಲಿ, ಬಕ್ರೀದಿನ ಆಸುಪಾಸು, ಗಣೇಶೋತ್ಸವದ ಸುತ್ತಮುತ್ತ ‘ಎರಡು ಗುಂಪುಗಳ’ ನಡುವೆ ‘ಮಾರಾಮಾರಿ’ ನಡೆಯುವುದು ಸಾಮಾನ್ಯವಾಯಿತು. ತಲೆಗೆ ಬ್ಯಾಂಡೇಜು ಸುತ್ತಿಸಿಕೊಳ್ಳಲು, ಹೊಲಿಗೆ ಹಾಕಿಸಿಕೊಳ್ಳಲು ‘ಎರಡು ಗುಂಪಿನವರೂ’ ಅಕ್ಕಪಕ್ಕದಲ್ಲೇ ಕುಳಿತು ಕಾಯುತ್ತಿದ್ದರು. “ಎಂ.ಎಲ್.ಸಿ ಮಾಡ್ಬೇಕಾಗುತ್ತೆ, ಪೋಲೀಸರಿಗೆ ತಿಳಿಸಬೇಕಾಗುತ್ತೆ” ಎಂದು ಮೊದಮೊದಲು ಹೇಳುತ್ತಿದ್ದ ಡಾಕ್ಟ್ರು ಒಂದೆರಡು ಸಂದರ್ಭದಲ್ಲಿ ರೋಗಿಯಾಗಿ ಬಂದವರು ತಲೆಯ ಗಾಯವನ್ನು ಎಡಗೈಯಲ್ಲಿ ಒತ್ತಿ ಹಿಡಿದು ಬಲಗೈಯಿಂದ ಸೊಂಟದತ್ತಿರ ಸಿಕ್ಕಿಸಿಕೊಂಡ ಚಾಕುವನ್ನೊರಗೆಳೆದ ನಂತರ ಬಂದವರ ಗಾಯಗಳಿಗೆ ಬಾಯ್ಮುಚ್ಚಿಕೊಂಡು ಹೊಲಿಗೆ ಹಾಕಿ ಔಷಧಿ ನೀಡುವುದಕ್ಕೆ ಸೀಮಿತಗೊಳಿಸಿಕೊಂಡರು.

ದೇಹದೊಳಗಿನ ರೋಗಾಣು ಪ್ರತಿರೋಗಾಣುವಿನ ಕಾರ್ಯಾಲಾಪಗಳು ಅರಿಯದವರಿಗೆ ಅಸಂಬದ್ಧದಂತೆ ತೋರಿದಾಗ್ಯೂ ಪ್ರತಿಯೊಂದೂ ಕೂಡ ಯೋಜನಾಬದ್ಧವಾಗಿಯೇ ನಡೆಯುತ್ತಿರುತ್ತದೆ. ಎರಡು ವರ್ಷಗಳವರೆಗೆ ಹಬ್ಬಗಳ ಸಂದರ್ಭದಲ್ಲಿ ‘ಎರಡು ಗುಂಪುಗಳ’ ನಡುವೆ ನಡೆಯುತ್ತಿದ್ದ ಮಾರಾಮಾರಿ ಕ್ರಮೇಣವಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಯ ಮೊದಲು ಅಥವಾ ನಂತರ ‘ಸ್ಪೋಟಗೊಳ್ಳುವ’ ಕೋಮುಗಲಭೆಗಳಾದವು. ಒಂದು ಕೋಮಿನ ನಾಯಕ ವೆಂಕಟಗಿರಿಯಪ್ಪ. ಮತ್ತೊಂದು ಕೋಮಿಗೆ ರಿಜ್ವಾನ್ ಅಬ್ಬಾಸನ ನೇತೃತ್ವ. ‘ಧರ್ಮಿಷ್ಠರಾಗಿದ್ದ’ ಇಬ್ಬರಿಗೂ ಮೂಲವೃತ್ತಿ ವ್ಯಾಪಾರ. ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತು, ವ್ಯಕ್ತಿಯನ್ನೂ ತೂಗುತ್ತಿದ್ದರು. ಅತ್ಯಮೋಘ ಭಾಷಣಗಳಿಂದ ಭಾವನೆಗಳನ್ನು ಕೆರಳಿಸುವಲ್ಲಿ ಸಿದ್ಧಹಸ್ತರು. ಇವರ ಬಟ್ಟೆ ಅವರಿಗೆ ಅವರ ಬಟ್ಟೆ ಇವರಿಗೆ ಹಾಕಿಸಿ ಭಾಷಣ ಮಾಡಿಸಿದರೂ ಗಲಭೆಗಳನ್ನೆಬ್ಬಿಸುವಲ್ಲಿ ಸಫಲವಾಗುವಷ್ಟು ನಾಜೂಕಾಗಿರುತ್ತಿತ್ತು ಇವರ ಮಾತು. ಒಬ್ಬರ ಬಲಗೈ ಮತ್ತೊಬ್ಬರ ಎಡಗೈ ರೀತಿ ಕಾರ್ಯನಿರ್ವಹಿಸುತ್ತಿದ್ದರು ಭಾಸ್ಕರ ಮತ್ತು ಸುಲೇಮಾನ್. ಆರ್ಥಿಕತೆಯಲ್ಲಿ, ಅಂಡಲೆಯುವುದರಲ್ಲಿ, ಮನೆಯವರಿಂದ ತೆಗಳಿಸಿಕೊಳ್ಳುವುದರಲ್ಲಿ ಈರ್ವರಿಗೂ ಸಾಮ್ಯತೆಯಿತ್ತು. ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸರ ಅತ್ಯಮೋಘ ಭಾಷಣ ಕೇಳಿ ಧರ್ಮರಕ್ಷಕರಾಗುವ ಧೃಡನಿಶ್ಚಯ ಮಾಡಿ ಗಣೇಶೋತ್ಸವಕ್ಕೆ ಐದು ದಿನಗಳಿರುವಾಗ ದೀಕ್ಷೆ ತೆಗೆದುಕೊಂಡರು.

ಒಂದೆಡೆ ಸೇರಿದ್ದ ವೆಂಕಟಗಿರಿಯಪ್ಪನ ಸಹಚರರು ‘ಇನ್ಯಾವ ಹಾದಿಯಲ್ಲಿ ಸಾಗದಿದ್ದರೂ ಮಸೀದಿಯ ಮುಂದೆ ಅರ್ಧ ಘಂಟೆ ನಿಲ್ಲಲೇಬೇಕು, ಅಸಂಬದ್ಧ ಮಾತನಾಡಬೇಕು. ಅವರಲ್ಲೊಬ್ಬ ರೊಚ್ಚಿಗೆದ್ದು ಕಲ್ಲೆಸೆಯಬೇಕು. ಎಸೆಯದಿದ್ದರೂ ಚಿಂತಿಲ್ಲ ಯಾರೋ ನಮ್ಮ ದೇವರ ಮೇಲೆ ಕಲ್ಲೆಸೆದರು ಎಂದರಚುತ್ತಾ ಹೊಡೆದಾಟ ಪ್ರಾರಂಭಿಸಬೇಕು’ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು.

ಮತ್ತೊಂದೆಡೆ ಸೇರಿದ್ದ ಅಬ್ಬಾಸನ ಸಹಚರರು ‘ಅವರು ಮಸೀದಿಯ ಮುಂದೆ ಅರ್ಧ ಘಂಟೆ ನಿಲ್ಲುತ್ತಾರೆ, ನಿಲ್ಲಲೇಬೇಕು, ಅಸಂಬದ್ಧ ಮಾತನಾಡಬೇಕು. ಅವರಲ್ಲೊಬ್ಬ ರೊಚ್ಚಿಗೆದ್ದು ಕಲ್ಲೆಸೆಯಬೇಕು. ಎಸೆಯದಿದ್ದರೂ ಚಿಂತಿಲ್ಲ ಯಾರೋ ನಮ್ಮ ದೇವರ ಮೇಲೆ ಕಲ್ಲೆಸೆದರು ಎಂದರಚುತ್ತಾ ಹೊಡೆದಾಟ ಪ್ರಾರಂಭಿಸಬೇಕು’ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಎಲ್ಲವೂ ಅಂದುಕೊಂಡತೆಯೇ ನಡೆಯಿತು. ಭಾಸ್ಕರ ಮತ್ತು ಸುಲೇಮಾನ್ ಧರ್ಮರಕ್ಷಕರಾಗಿ ವೀರೋಚಿತವಾಗಿ ಹೋರಾಡಿದ್ದು ಅವರನ್ನು ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸರ ಬಲಗೈ ಮತ್ತು ಎಡಗೈಯನ್ನಾಗಿ ಮಾಡಿತ್ತು.

ತಲೆ, ಕೈಕಾಲುಗಳಿಗಾಗುತ್ತಿದ್ದ ಗಾಯಗಳು ಪ್ರಾಣಹರಣದ ಮಟ್ಟ ಮುಟ್ಟಿದ್ದು ವಿಧಾನಸಭಾ ಚುನಾವಣೆ ಘೋಷಣೆಯಾದಾಗಿನಿಂದ. ತಮ್ಮ ತಮ್ಮ ‘ಮತ’ಬ್ಯಾಂಕನ್ನು ಗಟ್ಟಿಪಡಿಸಿಕೊಂಡಿದ್ದ ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸ್ ಚುನಾವಣಾ ಅಭ್ಯರ್ಥಿಗಳಾಗಿದ್ದರು. ಗೆಲುವಿನ ನಿರೀಕ್ಷೆಯಲ್ಲಿದ್ದರು. ಚುನಾವಣೆಯ ನಿಮಿತ್ತ ರಜವಿದ್ದುದರಿಂದ ರೇಷ್ಮಾ ಹಿಂದಿನ ದಿನವೇ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಳು. ಎರಡು ತಿಂಗಳ ಗರ್ಭಿಣಿಯಾಕೆ. ಬಸ್ ನಿಲ್ದಾಣದ ಹತ್ತಿರವೇ ಇದ್ದ ಮನೆಗೆ ತಲುಪುವಷ್ಟರಲ್ಲಿ ಆಕೆಯ ಹತ್ಯೆಯಾಗಿತ್ತು. ಪೋಸ್ಟ್ ಮಾರ್ಟಮ್ಮಿಗೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಪೋಸ್ಟ್ ಮಾರ್ಟಮ್ಮಿಗೆ ಅಂದು ಸಾಲು ಮಾಡಿ ಟೋಕನ್ ನೀಡಲಾಗಿತ್ತು. ಅಲ್ಲೇ ಇದ್ದ ಪರಿಚಯದ ಪೋಲೀಸ್ ಸಬ್ ಇನ್ಸ್ ಪೆಕ್ಟರರೊಡನೆ ಘಟನೆಯ ಬಗ್ಗೆ ಚರ್ಚಿಸಲು ಡಾಕ್ಟ್ರು ಹೋದರು. ಸುಲೇಮಾನ್ ಮತ್ತು ಭಾಸ್ಕರ ಧರ್ಮದಾಧಾರದಲ್ಲಿ ಸತ್ತವರ ಸಂಖೈಯನ್ನು ಎಣಿಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ತಮ್ಮ ಊರಿನ ಖ್ಯಾತ ಡಾಕ್ಟ್ರ ಅನ್ಯಧರ್ಮೀಯ ವಿವಾಹದ ಬಗ್ಗೆ ಕೇಳಿ ತಿಳಿದಿರದೆ ಇರಲಿಲ್ಲ.

“ಬಿಡ್ರೀ ಡಾಕ್ಟ್ರೇ. ಆ ಧರ್ಮದವಳು ತಾನೇ. ಸತ್ತರೆ ಸತ್ಲು. ನಮ್ಮ ಪೈಕೀನೇ ಯಾರನ್ನಾದ್ರೂ ನೋಡಿ ಮಾಡ್ಕಳ್ಳೋರಂತೆ”

“ಅವರ ಪೈಕಿ ಮದುವೆಯಾಗಿದ್ಲು. ಸತ್ತರೆ ಸತ್ಲು. ನಮ್ಮ ಜನರಲ್ಲಿ ಕಟ್ಕೊಳ್ಳೋಕೆ ಯಾರೂ ಇರಲಿಲ್ವಾ ಅವಳಿಗೆ”

ಹೇಸಿಗೆಯೆನ್ನಿಸಿತ್ತು ಡಾಕ್ಟ್ರಿಗೆ. ಊರನ್ನೇ ತೊರೆಯಬೇಕೆಂದುಕೊಂಡವರು ಸ್ನೇಹಿತರ ಒತ್ತಾಯ ಮತ್ತು ಸಮಾಧಾನದ ಬಳಿಕ ಅಲ್ಲೇ ನೆಲೆಸಿದರು ರೇಷ್ಮಾಳ ನೆನಪಿನೊಂದಿಗೆ. ಚುನಾವಣೆ ಮುಗಿಯಿತು. ರಿಜ್ವಾನ್ ಅಬ್ಬಾಸ್ ಆಯ್ಕೆಯಾದ. ಧರ್ಮರಕ್ಷಣೆಗಾಗಿ ಅಪಾರ ಶ್ರಮ ಪಟ್ಟ ವೆಂಕಟಗಿರಿಯಪ್ಪನನ್ನು ಅವರ ಪಕ್ಷ ವಿಧಾನಪರಿಷತ್ತಿಗೆ ನೇಮಿಸಿತು. ಕೋಮುಗಲಭೆಗಳು ನಿಂತೇ ಹೋದವೆನ್ನುವಷ್ಟು ಕಡಿಮೆಯಾದವು. ಹಬ್ಬಗಳು ಉತ್ಸವಗಳಾಗುವುದಕ್ಕೆ ಹರಿದು ಬರುತ್ತಿದ್ದ ಹಣಕ್ಕೆ ಕಾಣದ ಕೈಗಳು ತಡೆಯೊಡ್ಡಿದ್ದರಿಂದ ಹಬ್ಬಗಳು ಮತ್ತು ದೇವರು ಬೀದಿಯಿಂದ ಮರಳಿ ಮನೆಯೊಳಗೆ ಬೆಚ್ಚಗಾದವು. ಸುಲೇಮಾನ್ ಮತ್ತು ಭಾಸ್ಕರ ಊರಿನೆರಡು ಮೂಲೆಗಳಲ್ಲಿ ದೊಡ್ಡ ದೊಡ್ಡ ಅಂಗಡಿ ಮಳಿಗೆ ತೆರೆದರು. ಜೊತೆಗೆ ರಿಜ್ವಾನ್ ಅಬ್ಬಾಸ್ ಮತ್ತು ವೆಂಕಟಗಿರಿಯಪ್ಪನ ವ್ಯಾಪಾರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸುಲೇಮಾನ್ ಮತ್ತು ಭಾಸ್ಕರನಿಗೆ ಹೆಚ್ಚು ಕಡಿಮೆ ಒಂದೇ ತಿಂಗಳಲ್ಲಿ ಮದುವೆಯಾಗಿತ್ತು. ಈರ್ವರ ಪತ್ನಿಯರೂ ಗರ್ಭ ಧರಿಸಿದ್ದರು. ಕೈಗುಣದಿಂದ ಫೇಮಸ್ಸಾಗಿದ್ದ ಡಾಕ್ಟ್ರ ಬಳಿಯೇ ತೋರಿಸಲು ಬಂದಿದ್ದರು.

ಈರ್ವರ ಹೆಂಡಿರಿಗೂ ಒಂದೇ ಸಮಯದಲ್ಲಿ ಹೆರಿಗೆ ನೋವು ಪ್ರಾರಂಭವಾಗಿತ್ತು. ಡಾಕ್ಟ್ರ ನರ್ಸಿಂಗ್ ಹೋಮಿಗೆ ಕರೆದುಕೊಂಡು ಬಂದು ಸೇರಿಸಿದ್ದರು. ಇಬ್ಬರನ್ನೂ ಹೆರಿಗೆ ಕೊಠಡಿಗೆ ಸಾಗಿಸಿ ಪರೀಕ್ಷಿಸಿ ಒಂದಷ್ಟು ಔಷಧಿಗಳನ್ನು ನೀಡಿ ಹೆರಿಗೆಯಾಗಲು ಇನ್ನೂ ಸಮಯವಿದೆಯೆನ್ನಿಸಿ ಒಳಗೇ ಇದ್ದ ಕೊಠಡಿಯೊಳಗೆ ಕುಳಿತ ಡಾಕ್ಟರಿಗೆ ತಲೆಸಿಡಿಯಲಾರಂಭಿಸಿತು. ‘ನನ್ನ ಗರ್ಭಿಣಿ ರೇಷ್ಮಾಳನ್ನು ಕೊಂದ ಜನರಿವರು. ಇವರ ಪತ್ನಿಯನ್ನು ಮಗುವನ್ನು ಉಳಿಸಲು ನಾನೇ ಕಾವಲಾಗಬೇಕು. ಅದೂ ಇದೂ ಔಷಧಿ ನೀಡಿ ಮಗುವನ್ನೋ ತಾಯಿಯನ್ನೋ ಅಥವಾ ಇಬ್ಬರನ್ನೂ ಸಾಯುವಂತೆ ಮಾಡಿಬಿಡಲಾ? ಛೇ! ಛೇ! ವೈದ್ಯನಾಗಿ ಈ ರೀತಿ ಯೋಚಿಸಬಾರದು. ರಂಗಣ್ಣ ಇಬ್ಬರ ಸ್ಕ್ಯಾಂನಿಗನ್ನೂ ಮಾಡುತ್ತಿದ್ದಾಗ ನೋಡಿದ್ದೆನಲ್ಲ, ಇಬ್ಬರ ಗರ್ಭದೊಳಗೂ ಗಂಡು ಮಗು. ಅಪ್ಪನ ರೀತಿ ಅವರೂ ಧರ್ಮದ ನಂಜೇರಿಸಿಕೊಂಡು ಕಾದಾಟಕ್ಕಿಳಿದರೆ? ಅದರ ಬದಲು ಇಂದೇ ಮುಗಿಸಿಬಿಟ್ಟರೆ. ಛೀ ಛೀ ಇದೇನ್ ಯೋಚಿಸ್ತಿದ್ದೀನಿ ನಾನು. ಅಪ್ಪ ಮಾಡಿದ ತಪ್ಪಿಗೆ ಪಾಪ ಹಸುಗೂಸುಗಳ್ಯಾಕೆ ಶಿಕ್ಷೆ ಅನುಭವಿಸಬೇಕು’ ಒಂದು ಗ್ಲಾಸು ನೀರು ಕುಡಿದ. ಹೆರಿಗೆ ರೂಮಿನಲ್ಲಿ ಇಬ್ಬರ ಕೂಗು ರಾಗಬದ್ಧವಾಗಿ ದನಿಸಲಾರಂಭಿಸಿತ್ತು. ‘ಆದ್ರೂ ಏನಾದ್ರೂ ಮಾಡ್ಬೇಕು. ಇಬ್ಬರಿಗೂ ಬುದ್ಧಿ ಕಲಿಸಲೇಬೇಕು. ಹುಟ್ಟಿನಿಂದ ಬರುವ ಧರ್ಮದ ಲೇಬಲ್ಲಿನ ಮೇಲೆ ಇಷ್ಟೊಂದೆಲ್ಲಾ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳುವ ಇವರಿಗೆ ಬುದ್ಧಿ ಕಲಿಸಲೇಬೇಕು. ಏನ್ ಮಾಡ್ಲಿ ಏನ್ ಮಾಡ್ಲಿ? ಮಕ್ಕಳನ್ನು ಅದಲು ಬದಲು ಮಾಡಿಬಿಟ್ಟರೆ?’ ತನ್ನ ಯೋಜನೆಗೆ ಬೆಚ್ಚಿಬಿದ್ದ ಡಾಕ್ಟ್ರ ಮುಖದಲ್ಲಿ ನಿಧಾನಕ್ಕೆ ಮಂದಹಾಸ ಮೂಡಿತು. ‘ಹೌದು ಅದೇ ಸರಿ. ಮುಸ್ಲಿಂ ಹಿಂದೂ ಮಗುವನ್ನೂ ಹಿಂದೂ ಮುಸ್ಲಿಂ ಮಗುವನ್ನೂ ಸಾಕಿ ಸಲಹಿ ಪ್ರೀತಿಸಬೇಕು’ ತನ್ನ ಆಲೋಚನೆಗೆ ಶಹಬ್ಬಾಸ್ ಹೇಳಿಕೊಂಡ. ಮರುಕ್ಷಣವೇ ನೈತಿಕತೆಯ ಪ್ರಶ್ನೆ ಎದುರಾಯಿತು. ಬದಲಿಸಲೋ ಬೇಡವೋ ಬದಲಿಸಲೋ ಬೇಡವೋ ಎಂದು ತುಯ್ದಾಡುತ್ತಲೇ ಕುಳಿತವನಿಗೆ ಹೆರಿಗೆ ರೂಮಿನಿಂದ ಬರುತ್ತಿದ್ದ ರಾಗದ ಸ್ವರ ಹೆಚ್ಚುತ್ತಿದ್ದಂತೆ ಕರ್ತವ್ಯಪ್ರಜ್ಞೆ ಜಾಗೃತವಾಗಿ ಹೊರಬಂದ. ಬದಲಿಸಲೋ ಬೇಡವೋ ಬದಲಿಸಲೋ ಬೇಡವೋ ........... ಹೆರಿಗೆಯಾಯಿತು.ಐದು ನಿಮಿಷದ ನಂತರ ತಾಯಂದಿರಿಗೆ ಮಕ್ಕಳನ್ನು ತೋರಿಸಿದಳು ನರ್ಸಮ್ಮ.

* * *

ತಮ್ಮ ಗುರುಗಳೆಡೆಗಿರುವ ಭಕ್ತಿಭಾವದಿಂದ ಅಬ್ಬಾಸ್ ಮತ್ತು ವೆಂಕಟ್ ಎಂದು ಮಕ್ಕಳಿಗೆ ಹೆಸರಿಟ್ಟರು. ಧರ್ಮಕ್ಕನುಸಾರವಾಗಿ ಶಾಸ್ತ್ರಗಳು ಕಾಲಕಾಲಕ್ಕೆ ನಡೆದವು. ಇಬ್ಬರಿಗೂ ಅಮ್ಮನಿಗಿಂತ ಅಪ್ಪನೇ ಅಚ್ಚುಮೆಚ್ಚು. ಸ್ಕೂಲಿಗೆ ಹೋಗುವ ವಯಸ್ಸಾದಾಗ ಆಗ ಖ್ಯಾತವಾಗಿದ್ದ ಶಾಲೆಗೇ ಸೇರಿದರು. ಅಪ್ಪಂದಿರಲ್ಲಿದ್ದ ದ್ವೇಷ ಆ ಸದ್ಯಕ್ಕೆ ಮಕ್ಕಳಲ್ಲಿರಲಿಲ್ಲ. ಗೆಳೆಯರಾಗಿದ್ದರು. ಜೊತೆಗೂಡಿ ಆಡುತ್ತಿದ್ದರು ತಿನ್ನುತ್ತಿದ್ದರು. ಮನೆಯವರು ಬರುವ ವೇಳೆಗೆ ದೂರವಿರುತ್ತಿದ್ದರು. ಹತ್ತು ವರುಷಗಳುರುಳಿತು. ಇನ್ನೊಂದು ಮಗುವಾಗಿದ್ದರೂ ಸುಲೇಮಾನ್ ಮತ್ತು ಭಾಸ್ಕರನಿಗೆ ಮೊದಲನೆಯವನ ಮೇಲೆ ಮಮತೆ ಹೆಚ್ಚು.

ಅಂದು ಬೆಳಿಗ್ಗೆ ಇಬ್ಬರಿಗೂ ಫೋನ್ ಕರೆ ಬಂದಿತ್ತು.

“ಹಲೋ”

“ಹಲೋ”

“ಇವತ್ತು ಸಂಜೆ ನಾಲ್ಕಕ್ಕೆ ಗುಡ್ಡದ ಹಿಂದಿನ ಕೆರೆ ಏರಿ ಮೇಲೆ ನೀವು ಬರಬೇಕು”

“ಯಾಕೆ?”

“ನಿಮಗೆ ಇಲ್ಲಿಯವರೆಗೆ ಗೊತ್ತಿಲ್ಲದ ಒಂದು ರಹಸ್ಯ ತಿಳಿಸಬೇಕಿದೆ”

“ನೀವ್ಯಾರು ಮಾತಾಡ್ತಿರೋದು?”

“ಅದೆಲ್ಲವೂ ಸಂಜೆ ಗೊತ್ತಾಗುತ್ತೆ ಬನ್ನಿ. ಅಂದ್ಹಾಗೆ ಒಬ್ಬರೇ ಬಂದರೆ ಒಳ್ಳೇದು” ಫೋನ್ ಕಟ್ಟಾಗಿತ್ತು.

ತಮ್ಮ ಕಡೆಯವರನ್ನು ಗುಡ್ಡದ ಬಳಿ ಕಾವಲು ಕಾಯುವಂತೆ ಹೇಳಿ ಸಂಜೆ ನಾಲ್ಕರ ಸಮಯಕ್ಕೆ ಇಬ್ಬರೂ ಕೆರೆಯ ಬಳಿಗೆ ಬಂದರು. ಶತ್ರುವನ್ನು ನೋಡಿ ಅಲರ್ಟ್ ಆದರು.

“ನೀನ್ಯಾಕೆ ನನಗೆ ಫೋನ್ ಮಾಡಿ ಕರೆಸಿದೆ”

“ನೀನ್ಯಾಕೆ ನನಗೆ ಫೋನ್ ಮಾಡಿ ಕರೆಸಿದೆ”

“ನನಗೇನ್ ತಿಕ್ಲಾ”

“ನನಗೇನ್ ತಿಕ್ಲಾ”

“ಏನ್ ಮಸ್ಲತ್ತು ನಡಿಸಿದ್ದೀಯಾ?”

“ಏನ್ ಮಸ್ಲತ್ತು ನಡಿಸಿದ್ದೀಯಾ?”

ಭಾಸ್ಕರನ ಫೋನ್ ರಿಂಗಣಿಸಿತು.

“ಹಲೋ”

“ಹಲೋ ಭಾಸ್ಕರ್. ಸ್ವಲ್ಪ ನಿಮ್ಮ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿ”

“ಹಲೋ ಸುಲೇಮಾನ್. ನನ್ನ ದನಿ ಕೇಳ್ತಿದೆಯಲ್ಲ”

“ಕೇಳ್ತಿದೆ”

“ನಮಸ್ತೆ ನಾನೇ ಕರೆಸಿದ್ದು ನಿಮ್ಮನ್ನು. ನಾನ್ಯಾರು ಅಂತ ಗೊತ್ತಾಯ್ತ?”

“ಇಲ್ಲ”

“ನಾನು ಡಾಕ್ಟ್ರು”

“ಯಾವ ಡಾಕ್ಟ್ರು?”

“ನಿಮ್ಮ ಹೆಂಡತಿಯರ ಹೆರಿಗೆ ಮಾಡಿಸಿದ್ದೆ. ಅದಕ್ಕೂ ಮುಂಚೆ ನನ್ನ ಹೆಂಡತಿಯನ್ನು ‘ಧರ್ಮರಕ್ಷಕರು’ ಸಾಯಿಸಿದ್ದರು”

“ಗೊತ್ತಾಯ್ತು ಗೊತ್ತಾಯ್ತು. ಇಲ್ಲಿಗ್ಯಾಕೆ ಕರೆಸಿದ್ದು”

“ನಿಮ್ಮಿಬ್ಬರಿಗೂ ಒಂದು ಸತ್ಯ ತಿಳಿಸಬೇಕಿತ್ತು”

“ಏನು ಸತ್ಯ?”

“ನಿಮ್ಮ ಪತ್ನಿಯರು ಮೊದಲ ಹೆರಿಗೆಗೆ ನನ್ನ ಆಸ್ಪತ್ರೆಗೇ ಬಂದಿದ್ದರು. ಆಗ ನೀವೋ ಅಥವಾ ನಿಮ್ಮ ತಂಡದವರೋ ನನ್ನ ಪತ್ನಿ, ಆಗಷ್ಟೇ ಎರಡು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಸಾಯಿಸಿದ್ದೆಲ್ಲಾ ನೆನಪಿಗೆ ಬಂತು. ನನಗೆ ತೊಂದರೆ ಕೊಟ್ಟವರ ಹೆಂಡತಿ ಮತ್ತು ಗರ್ಭದಲ್ಲಿರುವ ಮಗುವನ್ನು ಸಾಯಿಸಿಬಿಡಲಾ? ಎಂಬ ಕೆಟ್ಟ ಯೋಚನೆಯೂ ಬಂತು. ನಾನು ನೀವಲ್ಲ ನೋಡಿ! ಅದಕ್ಕೆ ಸಾಯಿಸಲಾಗಲಿಲ್ಲ. ಆದರೆ..”

“ಆದ್ರೆ?”

“ಧರ್ಮದ ಅಮಲೇರಿಸಿಕೊಂಡಿರುವ ನಿಮ್ಮನ್ನು ಸುಮ್ಮನೇ ಬಿಡಲೂ ಮನಸ್ಸಾಗಲಿಲ್ಲ. ಅದಿಕ್ಕೆ..”

“ಅದಿಕ್ಕೆ?”

“ನಿಮಗೆ ನೆನಪಿದ್ಯೋ ಇಲ್ವೋ ನಿಮ್ಮಿಬ್ಬರ ಮೊದಲ ಮಗು ಒಂದೇ ದಿನ ಹೆಚ್ಚುಕಡಿಮೆ ಒಂದೇ ಸಮಯಕ್ಕೆ ಹುಟ್ಟಿದ್ದು”

“ಇರಬಹುದು”

“ಆ ದಿನ ನಾನು ಮಕ್ಕಳನ್ನು ಅದಲು ಬದಲು ಮಾಡಿಬಿಟ್ಟೆ”

“ಡಾಕ್ಟ್ರೇ......”

“ಹ್ಹ ಹ್ಹ ಹ್ಹ. . . ಕಿರುಚಿ ಉಪಯೋಗವಿಲ್ಲ ಕಣ್ರೀ! ಹೇಗಿದೆ ಈ ಡಾಕ್ಟ್ರ ಕೈಚಳಕ. ಹಿಂದೂ ಮನೆಯಲ್ಲಿ ಮುಸ್ಲಿಂ ಹಿಂದೂವಾಗಿ ಬೆಳೆದ. ಮುಸ್ಲಿಂ ಮನೆಯಲ್ಲಿ ಹಿಂದೂ ಮುಸ್ಲಿಮನಾಗಿ ಬೆಳೆದ. ಹ್ಹ ಹ್ಹ ಹ್ಹ”

“ಸುಳ್ಳಾಡಬೇಡಿ ಡಾಕ್ಟ್ರೇ”

“ಸುಳ್ಳಾ! ನಾನ್ಯಾಕೆ ಸುಳ್ಳಾಡಲಿ? ಅನುಮಾನವಿದ್ರೆ ಡಿ.ಎನ್.ಎ ಪರೀಕ್ಷೆ ಮಾಡಿಸಿಕೊಳ್ಳಿ” ಫೋನ್ ಕಟ್ ಮಾಡಿಬಿಟ್ಟ. ಅದೇ ನಂಬರಿಗೆ ತಿರುಗಿ ಕರೆ ಮಾಡಿದರು. ಸ್ವಿಚ್ ಆಫ್ ಆಗಿತ್ತು. ಕ್ರೋದದಿಂದ. ಕುದ್ದುಹೋಗಿ ಇಬ್ಬರೂ ನರ್ಸಿಂಗ್ ಹೋಮಿನೆಡೆಗೆ ಧಾವಿಸಿದರು. ಬೋರ್ಡಿಳಿಸುತ್ತಿದ್ದರು. ಡಾಕ್ಟರು ಊರು ತೊರೆದು ಹೋಗಿದ್ದರು. ಎಲ್ಲೆಗೆಂಬುದು ಯಾರಿಗೂ ತಿಳಿದಿರಲಿಲ್ಲ.

‘ನನ್ನ ಮನೆಯಲ್ಲಿ ಅವನ ಮಗ. ಆ ಧರ್ಮದವನ ಮಗ ನನ್ನ ಮನೆಯಲ್ಲಿ. ಏನ್ ಮಾಡೋದು, ಏನ್ ಮಾಡೋದೀಗ? ಆ ದರಿದ್ರ ಡಾಕ್ಟ್ರು ಮಾಡಿರೋ ಹಲ್ಕಟ್ ಕೆಲಸದಿಂದ ನನ್ನ ಧರ್ಮದ ಮಾನ ಮರ್ಯಾದೆಯಲ್ಲಾ ಹಾಳಾಗಿ ಹೋಯ್ತು. ಅವನ ಮಗನನ್ನು ಸಾಯಿಸುವುದಷ್ಟೇ ಇದಕ್ಕೆ ಪರಿಹಾರ. ಹೌದು ಅದೊಂದೇ ಪರಿಹಾರ. ಆ ಧರ್ಮದವನನ್ಯಾಕೆ ನಾನು ಸಾಕಬೇಕು’ ಮನೆ ಸಿಕ್ಕಿತು. ಕೋಪದಿಂದ ಬಾಗಿಲನ್ನು ದೂಡಿ ಒಳನಡೆದರು.

“ಅಪ್ಪಾ ಅಪ್ಪ ನೀನಿಲ್ಲಾಂತ ಅಮ್ಮ ನನಗೆ ಹೊಡೆದುಬಿಟ್ಟಳು”

“ಪಪ್ಪಾ ಪಪ್ಪ ನೀನಿಲ್ಲಾಂತ ಅಮ್ಮ ನನಗೆ ಹೊಡೆದುಬಿಟ್ಟಳು”

ಓಡಿಬಂದು ಅಪ್ಪನನ್ನು ತಬ್ಬಿಕೊಂಡರು.

ಬಿಗಿದಿದ್ದ ಮುಷ್ಟಿ ದಶಕಗಳಿಂದ ಮುಷ್ಟಿಯಂತೆ ಬಿಗಿಯಾಗಿದ್ದ ಮನಸ್ಸು ತೆರೆದುಕೊಳ್ಳಲಾರಂಭಿಸಿತು.

ಮೇ 8, 2015

ವಾಡಿ ಜಂಕ್ಷನ್ .... ಭಾಗ 9

wadi junction
Dr Ashok K R

ಇಂತಿದ್ದ ಅಭಯನನ್ನು ರಾಘವನ ರೂಮಿಗೆ ಹಾಕಿದ್ದರು. ಸಂಜೆ ರಾಘವನಿಂದ ಆಹ್ವಾನಿತಗೊಂಡು ಅವನ ರೂಮಿಗೆ ಹೋಗಿದ್ದರು ತುಷಿನ್ ಮತ್ತು ಕ್ರಾಂತಿ. ಒಂದಷ್ಟು ಲಘು ಹರಟೆಯಲ್ಲಿ ತೊಡಗಿದ್ದಾಗ ಅಭಯ್ ಎರಡು ಬ್ಯಾಗಿನೊಡನೆ ಒಳಬಂದ. “ಹಾಯ್. ನಾನು ಅಭಯ್ ಅಂತ. ಈ ರೂಮ್ ಅಲಾಟ್ ಮಾಡಿದ್ದಾರೆ ನನಗೆ. ಇಲ್ಲಿ ರಾಘವ ಅಂದ್ರೆ?” ಮೂವರೆಡೆಗೂ ಪ್ರಶ್ನಾರ್ಥಕವಾಗಿ ನೋಡಿದ. ರಾಘವ ಮಂಚದ ಮೇಲಿನಿಂದೆದ್ದು ಕೈಕುಲುಕಿದ. “ನಾನೇ ರಾಘವ. ಹುಣಸೂರಿನಿಂದ”. 

“ಹುಣಸೂರಾ? ಎಲ್ಲಿ ಬರುತ್ತೆ ಅದು?”

ಅಭಯನಿಂದ ಈ ಪ್ರಶ್ನೆಯನ್ನೇ ನಿರೀಕ್ಷಿಸುತ್ತಿದ್ದ ರಾಘವ ಉಳಿದಿಬ್ಬರೆಡೆಗೊಮ್ಮೆ ನೋಡಿ ವ್ಯಂಗ್ಯದಿಂದ “ಕೇಳಿದ್ರೇನಪ್ಪಾ. ಮೈಸೂರು ಕಡೆಯವರಿಗೆ ಮಾತ್ರ ಇವರ ತಾವರೆಕೆರೆ ಗೊತ್ತಿರಬೇಕು. ಆದರೆ ಆ ಕಡೆಯವರಿಗೆ ಹುಣಸೂರು ಗೊತ್ತಿಲ್ಲದಿದ್ದರೂ ನಡೆಯುತ್ತೆ” ಎಂದ. 
‘ಓಹೋ. ನಾನು ಬೆಳಿಗ್ಗೆ ತರಗತಿಯಲ್ಲಿ ಹೇಳಿದ್ದಕ್ಕೆ ಈ ಪ್ರತೀಕಾರ’ ಎಂದು ಯೋಚಿಸುತ್ತಾ ಮೊದಲ ದಿನವೇ ರೂಮ್ ಮೇಟ್ ಜೊತೆ ವಾದ ಮಾಡೋ ಪರಿಸ್ಥಿತಿ ಬಂತಲ್ಲಪ್ಪಾ ಎಂದುಕೊಂಡು ಮುಖದ ಮೇಲೆ ಬಲವಂತದಿಂದ ಮುಗುಳ್ನಗೆಯನ್ನು ತಂದುಕೊಳ್ಳುತ್ತಾ “ತಪ್ಪು ತಿಳ್ಕೊಂಡಿದ್ದೀರಾ ಫ್ರೆಂಡ್ಸ್ ನೀವು. ಇವತ್ತು ಬೆಳಿಗ್ಗೆ ಹೋಟೆಲ್ಲಿಗೆ ರೂಮು ಮಾಡಲು ಹೋದಾಗ ಕನ್ನಡದಲ್ಲೇ ಮಾತನಾಡಿ ರಾಯಚೂರ್ ಅಂದಿದ್ದಕ್ಕೆ ಆ ಹೋಟೆಲ್ ನವ ‘ಪರವಾಗಿಲ್ಲ ಸರ್. ಆಂಧ್ರದಲ್ಲಿದ್ದರೂ ಚೆನ್ನಾಗಿ ಕನ್ನಡ ಮಾತಾಡ್ತೀರಾ’ ಅಂದ. ಕೋಪ ಬರುತ್ತೋ ಇಲ್ವೋ ಹೇಳಿ ಮತ್ತೆ. ಯಾರಾದರೂ ಮೈಸೂರು ತಮಿಳುನಾಡಿನಲ್ಲಿದೆಯಾ ಎಂದರೆ ನಿಮಗೂ ಸಿಟ್ಟು ಬರೋದಿಲ್ವೇ?” ಮೂವರತ್ತ ಪ್ರಶ್ನೆ ಎಸೆದು ಉತ್ತರ ನಿರೀಕ್ಷಿಸುತ್ತಿರುವವನಂತೆ ಸುಮ್ಮನೆ ನಿಂತ. ಅವನು ಹೇಳಿದ್ದರಲ್ಲಿ ಸತ್ಯವಿದೆ ಎಂಬಂತೆ ತಲೆಯಾಡಿಸಿದರು. ರಾಘವನೇ ಮಾತನಾಡಿ “ಹೋಗಲಿ ಬಿಡೋ ಮಾರಾಯ. ನಾನೂ ಸುಮ್ನೆ ತಮಾಷೆ ಮಾಡ್ದೆ ಅಷ್ಟೇ. ಅಂದಹಾಗೆ ಇವರಿಬ್ಬರ ಪರಿಚಯವಾಯ್ತಾ?”

“ಇಲ್ಲಪ್ಪ. ನೂರಕ್ಕಿಂತ ಹೆಚ್ಚು ಜನರ ಹೆಸರು ಒಂದೇ ಸಲ ನೆನಪುಳಿಯೋದು ಹೇಗೆ?”

“ಇವನು ತುಷಿನ್” ತುಷಿನ್ ಕುಳಿತಲ್ಲಿಂದಲೇ ಹಾಯ್ ಮಾಡಿದ. “ಇವನು ಕ್ರಾಂತಿ ಸಂಭವ್” ಕ್ರಾಂತಿ ಹಾಯ್ ಎನ್ನುವಷ್ಟರಲ್ಲಿ ಅಭಯ್ “ಇವನ ಹೆಸರು ನೆನಪಿದೆ. ಕೊಂಚ ಅಪರೂಪದ ಹೆಸರಲ್ವಾ ಕ್ರಾಂತಿ ಸಂಭವ್” ಎಂದು ಹೇಳಿದ್ದನ್ನು ಕೇಳಿ ಕ್ರಾಂತಿ ‘ಒಟ್ಟಿನಲ್ಲಿ ಈ ಅಪರೂಪದ ವಿಚಿತ್ರ ಹೆಸರಿನ ಭೂತ ನಾನು ಸಾಯೋವರ್ಗೂ ಕಾಡುತ್ತೆ’ ಎಂದುಕೊಂಡ.

ನಾಲ್ಕು ಅಪರೂಪದ ಜನರ ಅಪೂರ್ವ ಮೈತ್ರಿಯ ಪ್ರಾರಂಭವಿದಾಗಿತ್ತು.
* * *
“ರೂಮಿನಲ್ಲಿ ಸಿಗರೇಟು ಸೇದಿದ್ರೆ ನಿನಗೇನಾದ್ರೂ ತೊಂದರೆಯಾಗುತ್ತಾ?” ಮುಖದ ಮೇಲಿನ ಮುಸುಕನ್ನು ಅಭಯ್ ಕೆಳಗೆ ಸರಿಸುತ್ತಿದ್ದಂತೆ ಕೇಳಿದ್ದ ರಾಘವ, ಪರಿಚಯವಾದ ಮಾರನೆಯ ದಿನ. ಅಭಯ್ ರಾಘವನನ್ನೇ ದಿಟ್ಟಿಸಿದ. “ಅಲ್ಲ, ನಿನಗೆ ತೊಂದರೆಯಾದ್ರೆ ಮುಲಾಜಿಲ್ಲದೆ ಹೇಳಿಬಿಡು. ಹೊರಗೆ ಹೋಗಿ ಸೇದ್ತೀನಿ. ಇವನ್ಯಾರಪ್ಪ ಸೇರಿದ ಎರಡು ದಿನಕ್ಕೇ ಕಾರಿಡಾರಿನಲ್ಲಿ ನಿಂತು ಸಿಗರೇಟ್ ಸುಡ್ತಿದ್ದಾನೆ ಅಂತ ಜನ ಮಾತಾಡ್ ಬಾರದಲ್ಲ. ಅದಿಕ್ಕೆ ಒಂದೆರಡು ತಿಂಗಳು ರೂಮಲ್ಲಷ್ಟೇ ಸಿಗರೇಟ್ ಸೇದೋಣ ಅಂತಿದ್ದೆ, ನಿನ್ನದೇನೂ ಅಭ್ಯಂತರವಿಲ್ಲದಿದ್ದರೆ”.

ಅಭಯ್ ಮಾತನಾಡದೆ ಸುಮ್ಮನಿದ್ದ.

“ಸರಿ ಬಿಡಪ್ಪ. ನಾನು ಹೊರಗೇ ಹೋಗ್ತೀನಿ” ಎಂದು ಮೇಲೆದ್ದ ರಾಘವ.

ಆತ ಬಾಗಿಲ ಬಳಿ ಹೋಗುತ್ತಿದ್ದಂತೆ “ತೊಂದರೆ ಅಂತ ಅಲ್ಲ. ಆದ್ರೂ ರೂಮಲ್ಲೇ ಸೇದ್ಬೇಕು ಅಂದ್ರೆ ಇವತ್ತಿನ ಮಟ್ಟಿಗೆ ನನಗೂ ಅರ್ಧ ಸಿಗರೇಟು ಕೊಡ್ಬೇಕು” ಅಭಯನ ದನಿ ಕೇಳಿ ಅಚ್ಚರಿ, ಸಂತಸದಿಂದ ತಿರುಗಿದ ರಾಘವ. “ಹಲ್ಕಾ ನನ್ಮಗನೇ. ನಾನೇನೋ ನಿನ್ನ ಮುಖಭಾವ ನೋಡಿ ಸಿಗರೇಟಿನ ವಾಸನೇನೆ ಆಗಲ್ವೇನೋ ಇವನಿಗೆ ಅಂತಿದ್ದೆ. ಅರ್ಧ ಯಾಕ್ ಗುರೂ ಪೂರ್ತಿ ಸೇದು. ಆದ್ರೆ ದಿನಾ ನನ್ಹತ್ರಾನೇ ಕೇಳ್ಬೇಡಪ್ಪಾ, ಅಷ್ಟೊಂದು ಶ್ರೀಮಂತನಲ್ಲ ನಾನು” ಕೊನೆಯ ವಾಕ್ಯಕ್ಕೆ ಒಂದಷ್ಟು ಹೆಚ್ಚೇ ಒತ್ತು ಕೊಟ್ಟುಬಿಟ್ಟೆನೇನೋ ಎಂದುಕೊಳ್ಳುತ್ತಾ ಜೇಬಿನಿಂದ ಕಿಂಗ್ ಸಿಗರೇಟು ಪ್ಯಾಕ್ ಹೊರತೆಗೆದು ಒಂದು ಸಿಗರೇಟನ್ನು ಅಭಯನಿಗೆ ಕೊಟ್ಟು ಮತ್ತೊಂದನ್ನು ತುಟಿಯ ಮಧ್ಯದಲ್ಲಿರಿಸಿಕೊಂಡು ಪ್ಯಾಂಟಿನ ಎಡಗಡೆಯ ಜೇಬಿನಿಂದ ಬೆಂಕಿಪೊಟ್ಟಣ ಹೊರತೆಗೆದ, ಕಡ್ಡಿಯಿರಲಿಲ್ಲ. ಅಭಯ ನಗುತ್ತಾ ಹಾಸಿಗೆಯಿಂದೆದ್ದು ಮಂಚದ ಬಲಬದಿಯ ಗೋಡೆಯಲ್ಲಿನ ಮೊಳೆಗೆ ನೇತುಹಾಕಿದ್ದ ಅಂಗಿಯ ಜೇಬಿನಿಂದ ಲೈಟರನ್ನು ಹೊರತೆಗೆದು ತನ್ನ ಸಿಗರೇಟನ್ನು ಹಚ್ಚಿಕೊಂಡು ಜ್ವಾಲೆಯನ್ನು ರಾಘವನ ಮುಂದೆ ಹಿಡಿದ. ರಾಘವನೂ ಹಚ್ಚಿಕೊಂಡ. ಮೊದಲ ಜುರಿಕೆಯ ಹೊಗೆಯನ್ನು ಹೊರಬಿಡುತ್ತಾ “ಹಿರಿಯರು ದೀಪದಿಂದ ದೀಪ ಹಚ್ಚಬೇಕು ಅಂದ್ರು. ನಾವದನ್ನು ತಪ್ಪಾಗಿ ಆಚರಿಸ್ತಾ ಇದ್ದೀವಲ್ವಾ” ಎಂದ ಅಭಯ್. ಇದೇನು ತಮಾಷೆ ಮಾಡ್ತಿದ್ದಾನೋ ಅಥವಾ ಯೋಚಿಸಬೇಕಾದ ವಿಷಯ ಹೇಳ್ತಿದ್ದಾನೋ ಸರಿಯಾಗಿ ತಿಳಿಯಲಾಗದೆ ಬೆಪ್ಪು ಬೆಪ್ಪಾಗಿ ನಕ್ಕ ರಾಘವ.

ಪರಿಚಯದವರು ಎಂದೆನ್ನಿಸಿಕೊಳ್ಳೋರು ಬಹಳ ಮಂದಿ ಇರಬಹುದಾದರೂ ಗೆಳೆಯರ ಸಂಖೈ ಯಾವಾಗಲೂ ಮಿತಿಯಲ್ಲೇ ಇರುತ್ತೆ. ‘ಊರೋರೆಲ್ಲಾ ನನ್ನ ಫ್ರೆಂಡ್ಸು’ ಅಂತ ಮಾತನಾಡೋರಿಗೆ ಗೆಳೆತನದ ಅರ್ಥ, ವ್ಯಾಪ್ತಿ, ವಿಸ್ತಾರ, ಆಳ ಇವಾವುದೂ ತಿಳಿಯದಿರುವ ಸಾಧ್ಯತೆಯೇ ಹೆಚ್ಚು. ಯಾವಾಗಲಾದರೊಮ್ಮೆ ಎದುರಿಗೆ ಸಿಕ್ಕಾಗ ‘ಹಾಯ್ ಹೇಗಿದ್ದೀರಾ?’ ಅಂತ ಕೇಳಿದವರನ್ನೂ ಗೆಳೆಯನೆನ್ನಲಾದೀತೇ? ಈ ಗೆಳೆಯರಲ್ಲೂ ಬಹಳಷ್ಟು ವಿಧ. ಬೆಳಿಗ್ಗೆ ತಿಂಡಿಗೆ ಹೋಗೋದರಿಂದ ಹಿಡಿದು ರಾತ್ರಿಯ ಊಟದವರೆಗೂ ಕೆಲವರು ಜೊತೆಜೊತೆಯಾಗೇ ಇರುತ್ತಾರೆ. ತರಗತಿಯಲ್ಲೂ ಅಕ್ಕಪಕ್ಕದ ಜಾಗ, ಸಿನಿಮಾ, ಶಾಪಿಂಗೂ, ಟ್ರಿಪ್ಪೂ ಎಲ್ಲದಕ್ಕೂ ಜೊತೆಯಲ್ಲಿ. ಯಾವಾಗಲೂ ನಗುನಗುತಾ ಮಾತು. ಆದರೆ ಆ ಮಾತುಗಳೆಲ್ಲಾ ಮನಸ್ಸಿನ ಪರದೆಯ ಹೊರಗಿನಿಂದಷ್ಟೇ ಬಂದಿರುತ್ತವೆಯೇ ಹೊರತು ಒಳಪದರದಲ್ಲಿನ ಮಾತುಗಳು ಅಲ್ಲೇ ಉಳಿದುಹೋಗಿರುತ್ತೆ. ಕೊನೆಗೆ ಒಬ್ಬರಿಗೊಬ್ಬರು ಪರಿಚಯವಾಗದೇನೇ ಜೀವನದ ಒಂದು ಹಂತದಲ್ಲಿ ಅವರ ಹಾದಿಗಳು ಕವಲೊಡೆದು ಬೇರೆಯಾಗಿಬಿಟ್ಟಿರುತ್ತೆ. ಮುಂದ್ಯಾವತ್ತಾದರೂ ಆ ಹಳೆಯ ಗೆಳೆಯನ ಬಗ್ಗೆ ನೆನಪಿಸಿಕೊಳ್ಳೋಣವೆಂದರೆ ಸಿನಿಮಾಕ್ಕೆ ಹೋದದ್ದರ ಹೊರತಾಗಿ ಮತ್ತೇನೂ ನೆನಪಾಗಲೊಲ್ಲದು. ನಮ್ಮಲ್ಲಿನ ಬಹಳಷ್ಟು ಗೆಳೆತನ ಹೀಗೆಯೇ ಇರುತ್ತದೆಯಲ್ಲವೇ? ಇನ್ನು ಗೆಳೆತನಕ್ಕೆ ನಿಜವಾದ ಅರ್ಥ, ಶ್ರೀಮಂತಿಕೆಯನ್ನು ತಂದುಕೊಟ್ಟವರು ಊರಿಗೆಲ್ಲಾ ಕಾಣುವಂತೆ ದಿನವೆಲ್ಲಾ ಜೊತೆಯಾಗಿರದಿದ್ದರೂ, ದಿನದಲ್ಲಿ ಕೆಲವೇ ನಿಮಿಷಗಳಷ್ಟು ಒಟ್ಟಿಗೆ ಕಳೆದರೂ – ಆ ನಿಮಿಷಗಳಲ್ಲಿ ಮನದಾಳದ ಮಾತುಗಳನ್ನಾಡುತ್ತಾ ಹೆಚ್ಚೆಚ್ಚು ಪರಿಚಿತರಾಗಿ ಹತ್ತಿರವಾಗುತ್ತಾರೆ. ಇನ್ನೂ ಹೆಚ್ಚು ಪರಿಚಿತರಾದಂತೆ ಮೌನದಲ್ಲೂ ಮನದ ಮಾತುಗಳನ್ನು ಅರ್ಥೈಸಿಕೊಳ್ಳಬಲ್ಲವರಾಗುತ್ತಾರೆ.

‘ನಾವು ನಾಲ್ಕೂ ಮಂದಿ ಹತ್ತಿರವಾಗೋದಿಕ್ಕೆ ನಮ್ಮೆಲ್ಲರಲ್ಲೂ ಇರೋ ಸಮಾನ frequencyನೇ ಕಾರಣ’ ಎಂದು ಆಗಾಗ ಹೇಳುತ್ತಿದ್ದ ಕ್ರಾಂತಿ. ಮೊದಮೊದಲು ಈ ನಾಲ್ವರು ಬೇರೆಲ್ಲರಂತೆ ಯಾವಾಗಲೂ ಜೊತೆಯಲ್ಲೇ ಇದ್ದು ಹರಟೆ ಕೊಚ್ಚುತ್ತಿದ್ದರು. ಹದಿನೈದು ದಿನಕ್ಕೇ ವಿಷಯಗಳೆಲ್ಲಾ ಖಾಲಿಯಾದವು. ನಂತರ ಮತ್ತದೇ ಪುನರಾವರ್ತನೆ. ಅಂದು ಶನಿವಾರ. ಮಧ್ಯಾಹ್ನ ಒಂದಕ್ಕೇ ತರಗತಿ ಮುಗಿದಿತ್ತು. ಕಾಲೇಜಿನೆದುರಿಗಿನ ಅಫ್ರೋಜ್ ಭಾಯ್ ಅಂಗಡಿಯಲ್ಲಿ ನಾಲ್ವರೂ ಕುಳಿತಿದ್ದರು. ತುಷಿನ್ ಕೂಡ ಸಿಗರೇಟು ಸಂಘದ ಸದಸ್ಯನಾಗಿದ್ದ. ಕ್ರಾಂತಿ ಇನ್ನೊಂದಷ್ಟು ದಿನದ ನಂತರ ಸೇರುವವನಿದ್ದ. ಕಾಲೇಜಿನ ಪಾಠ, ಹಳೆಯ ಕಾಲೇಜು, ಅಲ್ಲಿದ್ದ ಗೆಳೆಯರು – ಊಹ್ಞೂ ತುಷಿನ್ ಗ್ಯಾಕೋ ಅಂದು ತಡೆಯಲಾಗಲಿಲ್ಲ. “ಯಾಕೋ ನಾವು ನಾಲ್ಕು ಜನ ಮಾತಾಡಿದ್ದೇ ಮಾತಾಡ್ತಿದ್ದೀವಿ ಅನ್ನಿಸ್ತಿಲ್ವಾ?” ತನಗೂ ಎಂಬಂತೆ ಕೇಳಿದ. “ಅಂದ್ರೆ. ನಾವ್ನಾಲ್ಕು ಮಂದಿ ಗೆಳೆಯರಾಗೋಕೆ ಆಗಲ್ಲಾ ಅಂತಾನಾ?” ಅಭಯ ಕೇಳಿದ. ಉಳಿದಿಬ್ಬರೂ ಆತನ ಪ್ರಶ್ನೆಯ ಬಗ್ಗೆ ಯೋಚಿಸುತ್ತಾ ಉತ್ತರವನ್ನರಸುತ್ತಿದ್ದರು. “ನಾನು ಹೇಳಿದ್ದು ಆ ರೀತಿಯಲ್ಲ. ಕಾಲೇಜು ಶುರುವಾಗಿ ಎರಡು ತಿಂಗಳಾಗುತ್ತಾ ಬಂತು. ನಾನು ಮಂಡ್ಯದ ಬಗ್ಗೆ ಹೇಳೋದು, ರಾಘವ ಹುಣಸೂರನ್ನ ಹೊಗಳೋದು, ನೀನು ತಾವರೆಕೆರೆ ಬಗ್ಗೆ ಕೊಚ್ಕೊಂಡಿದ್ದು; ಅದೇ ಪಿ.ಯು.ಸಿ ಮಾರ್ಕ್ಸು, ಸಿ.ಇ.ಟಿ ರ್ಯಾಂಕು; ಮೊದಲ ಸುತ್ತಿನಲ್ಲಿ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ತೆಗೆದುಕೊಂಡಿದ್ದೆ ಅಂತ ಕ್ರಾಂತಿ; ಇನ್ನೊಂದೈದು ಮಾರ್ಕ್ಸ್ ಬಂದಿದ್ರೆ ಮೈಸೂರು ಮೆಡಿಕಲ್ ಕಾಲೇಜಲ್ಲಿ ಸೀಟು ಸಿಕ್ತಿತ್ತು ಅಂತ ರಾಘವ; ಸೊನಾಲಿ ಇವತ್ತು ಮಸ್ತ್ ಕಾಣ್ತಿದ್ಲಲ್ವಾ ಅಂತ ನಾನು; ನೀನು ಕೊನೇ ಮಗ, ನಾನು ಒಬ್ನೇ ಮಗ….. ಇಷ್ಟು ಬಿಟ್ಟು ಮತ್ತೇನಾದರು ಮಾತನಾಡಿದ್ದೀವಾ ಎರಡು ತಿಂಗಳಿನಿಂದ. ಅಪರೂಪಕ್ಕೆ ಒಂದಷ್ಟು ಸಿನಿಮಾಗಳ ಬಗ್ಗೆ ಮಾತಾಡಿದ್ದು ಬಿಟ್ಟರೆ”. ತುಷಿನ್ ನ ಮಾತನ್ನು ಆಸಕ್ತಿಯಿಂದ ಕೇಳುತ್ತಿರುವಂತೆ ಅವನ ಕೈಯಲ್ಲಿದ್ದ ಸಿಗರೇಟು ಸುಡದೆ ಉಳಿದಿತ್ತು. ಮತ್ತೊಮ್ಮೆ ಹಚ್ಚಿಕೊಂಡ. ಅವನು ಹೇಳಿದ್ದು ಅಭಯನಿಗೂ ಸರಿಯೆನ್ನಿಸಿತು. ಆದರೆ ಉತ್ತರ ಅಥವಾ ಸಲಹೆ ಏನು ಕೊಡಬೇಕೆಂದು ಹೊಳೆಯಲಿಲ್ಲ. ಸಿಗರೇಟು ಸೇದುತ್ತಾ ಯೋಚಿಸುತ್ತಿರುವವನಂತೆ ನಟಿಸಿದ.

ಮೇ 2, 2015

ಅಸಹಾಯಕ ಆತ್ಮಗಳು - ಹರಯದ ಕುದುರೆಯೇರಿದಾಗ

kannada prostitute stories
ಕು.ಸ.ಮಧುಸೂದನ್
ನಮ್ಮಪ್ಪ ಪ್ರೈಮರಿ ಸ್ಕೂಲಿನಲ್ಲಿ ಮೇಸ್ಟ್ರಾಗಿದ್ದರು. ಹಳ್ಳಿಯಲ್ಲಿ ಅವರ ಸ್ಕೂಲಿದ್ದರೂ ಮನೆಯನ್ನು ಮಾತ್ರ ತಾಲ್ಲೂಕು ಕೇಂದ್ರದಲ್ಲಿ ಮಾಡಿದ್ದರು. ನಾಲ್ಕು ಮೈಲಿ ದೂರವಿದ್ದ ಹಳ್ಳಿಗೆ ದಿನಾ ಸೈಕಲ್ಲಿನಲ್ಲಿ ಹೋಗಿಬರೋರು. ನಾನು ಒಂಭತ್ತನೇ ತರಗತಿ ಓದುವಾಗ ಒಬ್ಬ ಹುಡುಗ ಪರಿಚಯವಾದ. ಅವನು ಏನು ಮಾಡ್ತಿದ್ದ ಏನು ಓದ್ತಿದ್ದ ಒಂದೂ ಗೊತ್ತಿರಲಿಲ್ಲ. ನಾನು ಸ್ಕೂಲಿಗೆ ಹೋಗುವಾಗ, ಮನೆಗೆ ವಾಪಾಸು ಬರೋವಾಗ ನನ್ನ ಹಿಂಬಾಲಿಸ್ತಾ ಇದ್ದ. ನಮ್ಮ ಮನೆ ಊರಿಂದ ಸ್ವಲ್ಪ ದೂರ ಇದ್ದಿದ್ದರಿಂದ ನಾನು ಒಬ್ಬಳೇ ಹೋಗ್ತಿದ್ದೆ. ಆ ಏರಿಯಾದಿಂದ ಬೇರಾವ ಹುಡುಗೀನು ನಮ್ಮ ಸ್ಕೂಲಿಗೆ ಬರ್ತಾ ಇರಲಿಲ್ಲ. ಹಾಗಾಗಿ ಒಬ್ಬಳೇ ಹೋಗೊದು ಮಾಮೂಲಿಯಾಗಿತ್ತು. ಒಂದಷ್ಟು ದಿನ ಹಿಂದೆ ತಿರುಗಿದೋನು ಒಂದು ದಿನ ಹತ್ತಿರಬಂದು ಒಂದು ಬಿಳಿಹಾಳೆ ಕೊಟ್ಟು ಓದು ಅಂದು ಹೋಗಿಬಿಟ್ಟ. ನಾನು ಕುತೂಹಲ ತಡೆಯಲಾರದೆ ಅಲ್ಲೇ ಅದನ್ನು ಓದಿದರೆ ಐ ಲವ್ ಯೂ,ನಾಳೆ ನೀನು ಇಂತ ಕಾಗದ ಕೊಡಬೇಕು ಅಂತ ಬರೆದಿತ್ತು. ಅದನ್ನು ನೋಡಿ ನನಗೇನು ಶಾಕ್ ಆಗಿರಲಿಲ್ಲ. ಯಾಕಂದ್ರೆ ಇಂತಹ ಪ್ರೇಮ ಪ್ರಕರಣಗಳ ಬಗ್ಗೆ ನನ್ನ ಸ್ಕೂಲಿನ ಹುಡುಗಿಯರು ಸಾಕಷ್ಟು ಹೇಳಿದ್ದರು. ಅವರಲ್ಲಿ ಬಹಳಷ್ಟು ಜನರಿಗೆ ಇಂತಹ ಪತ್ರಗಳು ಬಂದಿದ್ದವು ಒಂದಷ್ಟು ಜನ ಅವಕ್ಕೆ ಉತ್ತರವನ್ನೂ ಕೊಟ್ಟು ಪ್ರೀತಿಸ್ತಾ ಇದ್ದರು ಸತ್ಯ ಹೇಳಬೇಕು ಅಂದರೆ ಒಬ್ಬ ಹುಡುಗ ಇಂತ ಕಾಗದ ಕೊಟ್ಟಿದ್ದು ನನ್ನೊಳಗೆ ಎಂತದೊ ಸಂತೋಷ ಹುಟ್ಟಿ ಹಾಕಿತ್ತು. ಯಾರಿಗೂ ಗೊತ್ತಾಗಬಾರದು ಅಂತ ಅದನ್ನು ಅಲ್ಲೇ ಹರಿದು ಹಾಕಿಬಿಟ್ಟೆ. ಮಾರನೇ ದಿನ ಅವನು ಎದುರು ಬಂದು ನಿಂತು ಉತ್ತರ ಕೊಡು ಅಂದಾಗ ಬರೆದಿಲ್ಲ ಅಂದೆ. ಅದಕ್ಕವನು ಬಾಯಲ್ಲೇ ಹೇಳು ಅಂದ. ನಾಚಿಕೆಯಿಂದ ನಾನು ಆಮೇಲೆ ಎಂದು ಶಾಲೆಗೆ ಹೋಗಿಬಿಟ್ಟೆ. ಸಾಯಂಕಾಲ ಮತ್ತೆ ಬಂದು ಕೇಳಿದ ನಾನು ಬೆಳಿಗ್ಗೆ ಕೊಟ್ಟ ಉತ್ತರವನ್ನೇ ಕೊಟ್ಟೆ. ಹೀಗೇ ಒಂದು ವಾರ ನಾನು ಏನನ್ನು ಹೇಳಲಿಲ್ಲ. ಆಡಲಿಲ್ಲ. ಆದರವನು ಬಡಪೆಟ್ಟಿಗೆ ಬಿಡುವಂತೆ ಕಾಣಲಿಲ್ಲ. ಪ್ರತಿದಿನ ಬೆಳಿಗ್ಗೆ ಸಂಜೆ ನನಗಾಗಿ ಕಾದು ಅದೇ ಮಾತನ್ನು ಹೇಳ್ತಾ ಇದ್ದ. ಹರಯದ ಮಸಲತ್ತು ನೋಡಿ. ಒಂದು ದಿನ ಅವನು ಕಾಣದೇ ಹೋದರೆ ಒಂತರಾ ಏನೋ ಕಳೆದುಕೊಂಡಂತಾಗ್ತಿತ್ತು. ನನಗೆ ಗೊತ್ತಿಲ್ಲದಂತೆ ಅವನ ಬಲೆಯೊಳಗೆ ಬೀಳ್ತ್ತಾ ಹೋಗಿಬಿಟ್ಟೆ. ಆಮೇಲಿನ್ನೇನು ದಿನಾ ಯಾರಿಗೂ ಗೊತ್ತಾಗದ ಹಾಗೆ ಮಾತಾಡ್ತಾ ಇದ್ವಿ. ಅಪ್ಪನಿಗೆ ಊರಲ್ಲೆಲ್ಲ ಪರಿಚಯದವರೇ ಇದ್ದುದರಿಂದ ಕದ್ದು ಮುಚ್ಚಿ ಮಾತಾಡಬೇಕಾಗಿತ್ತು. ನಮ್ಮ ನಡುವೆ ಚೀಟಿಗಳು ಓಡಾಡ ತೊಡಗಿದವು. ಇನ್ನೇನು ಅವನಿಲ್ಲದೆ ಇದ್ದರೆ ಸತ್ತುಹೋಗಿಬಿಡ್ತೀನಿ ಅನ್ನೊವಷ್ಟರ ಮಟ್ಟಿಗೆ ಅವನನ್ನು ಪ್ರೀತಿಸೋಕೆ ಶುರು ಮಾಡಿದ್ದೆ. ಇಂತಾದ್ದರಲ್ಲಿ ಅಪ್ಪನಿಗೆ ತುಂಬಾ ದೂರದ ಊರಿಗೆ ವರ್ಗಾವಣೆ ಆಯ್ತು. ಇಷ್ಟವಿಲ್ಲದ ಮನಸಿಂದ ಅಪ್ಪ ಹೋಗಿ ಅಲ್ಲಿ ಡ್ಯೂಟಿಗೆ ಸೇರಿದರು. ಸದ್ಯ ಈ ವರ್ಷ ಮನೆ ಇಲ್ಲೇ ಇರಲಿ ನಾನಲ್ಲಿ ಹೇಗೋ ಒಬ್ಬನೇ ಇರ್ತೀನಿ ಅಂತ ಅಪ್ಪ ಹೇಳಿ ಹೋದರು. ತಿಂಗಳಿಗೊಂದು ಸಲ ಬಂದು ಮನೆಗೆ ಏನೇನು ಬೇಕೋ ಅದನ್ನೆಲ್ಲ ತಂದು ಹಾಕಿ ಹೋಗ್ತಾ ಇದ್ದರು .ಅಪ್ಪ ಹೋದ ಮೇಲೆ ನನಗೆ ಸ್ವಲ್ಪ ಸ್ವಾತಂತ್ರ ಸಿಕ್ಕಿದ ಹಾಗಾಯ್ತು. ಯಾಕೆಂದರೆ ಅಮ್ಮನಿಗೆ ನನ್ನ ಕಂಡರೆ ತುಂಬಾ ಮುದ್ದು, ಜೊತೆಗವಳಿಗೆ ಕಳ್ಳ ಕಪಟ ಗೊತ್ತಾಗ್ತಿರಲಿಲ್ಲ. ತುಂಬಾ ಮುಗ್ದೆಯಾಗಿದ್ದ ಅವಳು ನಾನು ಹೇಳಿದ್ದನ್ನೆಲ್ಲ ನಂಬಿ ಬಿಡ್ತಾ ಇದ್ದಳು. ಹೀಗಾಗಿ ನಾನು ಶಾಲೆಯಿಂದ ಲೇಟಾಗಿ ಬರೋದು, ಟ್ಯೂಷನ್ ಹೋಗ್ತೀನಿ ಅಂತ ಹೇಳಿ ಅವನ ಜೊತೆ ತಿರುಗೋದು ಜಾಸ್ತಿಯಾಯಿತು. ಒಂದು ದಿನ ಅಮ್ಮ ಪಕ್ಕದವರ ಮನೆ ಜೊತೆ ಯಾವುದೋ ದೇವಸ್ಥಾನಕ್ಕೆ ಹೊರಟಿದ್ದಳು. ಅದು ಹಿಂದಿನ ದಿನವೇ ನನಗೆ ಗೊತ್ತಾಗಿದ್ದರಿಂದ ಅವನಿಗೆ ಬೆಳಿಗ್ಗೆ ಹತ್ತುಗಂಟೆಗೆ ಮನೆಗೆ ಬರೋಕೆ ಹೇಳಿದ್ದೆ. ಬೆಳಿಗ್ಗೆ ಎಂಟಕ್ಕೆ ಅಮ್ಮ ಮನೆ ಬಿಟ್ಟಳು. ನಾನು ತಿಂಡಿ ತಿಂದು ಶಾಲೆಯ ಯೂನಿಫಾರಂನ್ನು ನೆಪ ಮಾತ್ರಕ್ಕೆ ಹಾಕಿಕೊಂಡು ಅವನಿಗಾಗಿ ಕಾಯುತ್ತಾ ಕೂತೆ. ಹೇಳಿದಂತೆ ಸರಿಯಾಗಿ ಹತ್ತುಗಂಟೆಗೆಲ್ಲ ಬಂದವನ ಜೊತೆ ಮಾತಾಡುತ್ತ ಕೂತೆ. ಮದ್ಯಾಹ್ನದವರೆಗು ಮಾತಾಡಿದ ಮೇಲೆ ಒಟ್ಟಿಗೇ ಊಟ ಮಾಡಿದೆವು. ಆನಂತರ ನನ್ನ ರೂಮಿಗೆ ಕರದುಕೊಂಡು ಹೋಗಿ ನನ್ನ ಹಳೆಯ ಆಟದ ಸಾಮಾನುಗಳನ್ನು ಗೋಡೆಗೆ ಅಂಟಿಸಿದ್ದ ಸಿನಿಮಾ ತಾರೆಯರ ಚಿತ್ರಗಳನ್ನೆಲ್ಲ ತೋರಿಸುತ್ತ ಇರುವಾಗ ತಟಕ್ಕನೆ ಅವನು ನನ್ನ ಅಪ್ಪಿಕೊಂಡು ಬಿಟ್ಟ. ಬೇಡವೆಂದು ಕೊಸರಾಡಿದರೂ ಅವನು ಬಿಡಲಿಲ್ಲ. ನಾನೂ ಸುಮ್ಮನಾಗಿಬಿಟ್ಟೆ. ಅವನ ಮೈಬಿಸಿಗೆ ನಾನು ಕರಗತೊಡಗಿದೆ. ಯಾವುದೇ ಹುಡುಗಿಯ ಜೀವನದಲ್ಲಿ ಮದುವೆಗೆ ಮುಂಚೆ ಏನು ನಡೆಯಬಾರದೊ ಅದು ನನ್ನ ಜೀವನದಲ್ಲಿ ನಡೆದು ಹೋಗಿತ್ತು. ಅವನನ್ನು ನನ್ನ ರೂಮಿಗೆ ಕರೆತರುವ ಅವಸರದಲ್ಲಿ ನಾನು ಮುಂದಿನ ಬಾಗಿಲಿಗೆ ಚಿಲಕ ಹಾಕಿಯೇ ಇರಲಿಲ್ಲ. ಸಂಜೆ ಐದು ಗಂಟೆಗೆ ಬರುತ್ತೇನೆಂದು ಹೇಳಿ ಹೋಗಿದ್ದ ಅಮ್ಮ ದಿಡೀರನೆ ಬಾಗಲು ತೆರೆದು ಬಂದುಬಿಟ್ಟಳು. ರೂಮಲ್ಲಿ ಅರೆಬರೆ ಬೆತ್ತಲೆಯಾಗಿ ಮಲಗಿದ್ದ ನಮ್ಮನ್ನು ನೋಡಿ ಹೌಹಾರಿಬಿಟ್ಟಳು. ಅವಳನ್ನು ಕಂಡವನು ಅದ್ಯಾವ ಮಾಯದಲ್ಲಿ ಓಡಿಹೋದನೊ ಗೊತ್ತೇ ಆಗಲಿಲ್ಲ. ಅವತ್ತಿಗೆ ನನ್ನ ಸ್ವಾತಂತ್ರದ ದಿನಗಳು ಮುಗಿದು ಹೋದವು. ಅಷ್ಟು ಮುದ್ದು ಮಾಡುತ್ತಿದ್ದ ಅಮ್ಮ ಅವತ್ತಿನಿಂದ ರಾಕ್ಷಸಿಯಾಗಿಬಿಟ್ಟಳು. ಒಂದು ತಿಂಗಳವರೆಗು ಶಾಲೆಗೂ ಕಳಿಸದೆ ಮನೆಯಲ್ಲಿ ಕೂಡಿಹಾಕಿಬಿಟ್ಟಳು .ಮುಂದಿನ ತಿಂಗಳು ಅಪ್ಪ ಬರುವ ತನಕವೂ ನಾನು ಮನೆಯಲ್ಲೇ ಇರಬೇಕೆಂದು ತಾಕೀತು ಮಾಡಿದ್ದಳು. ಅವನ ದೇಹದ ಬಿಸಿ ಅನುಭವಿಸಿದ್ದ ನನಗೆ ಮನೆ ಜೈಲಿನಂತೆ ಬಾಸವಾಗತೊಡಗಿತ್ತು. ಅಂತಹುದರಲ್ಲಿ ಒಂದು ದಿನ ಪಕ್ಕದ ಮನೆಯ ಏಳನೇ ಕ್ಲಾಸಿನ ಹುಡುಗನ ಕೈಲಿ ಅವನಿಗೆ ಒಂದು ಉದ್ದದ ಕಾಗದ ಬರೆದು ಕೊಟ್ಟು ಕಳಿಸಿದೆ. ಮಾರನೇ ದಿನ ಅವನಿಂದಲೂ ಅಷ್ಠೇ ಉದ್ದದ ಕಾಗದ ಬಂತು. ಅದರಲ್ಲಿದ್ದ ವಿಷಯ ಓದಿ ಸಂತೋಷವಾಗಿ ಹೋಯಿತು. ಅವನು ನನ್ನನ್ನು ತುಂಬಾ ಪ್ರೀತಿಸುತ್ತಿರುವುದಾಗಿಯೂ ನನಗಾಗಿ ಏನು ಬೇಕಾದರು ಮಾಡಲು ಸಿದ್ದವಾಗಿರುವುದಾಗಿಯೂ ಹೇಳಿ ಇವತ್ತು ರಾತ್ರಿ ಹತ್ತು ಗಂಟೆಗೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ನಿಮ್ಮ ಬೀದಿ ಕೊನೆ ತಿರುವಿಗೆ ಬಂದು ಬಿಡು ಎಂದು ಬರೆದಿದ್ದೆ. ಸರಿ, ಅದು ವಿವೇಚನೆಯ ವಯಸ್ಸಲ್ಲ. ರಾತ್ರಿ ಊಟ ಮಾಡಿ ನನ್ನ ಬಟ್ಟೆ ಒಂದಷ್ಟು ಒಡವೆ ತಗೊಂಡು ಅಮ್ಮನಿಗೆ ಕಾಣದ ಹಾಗೆ ಹಿಂದಿನ ಬಾಗಿಲಿನಿಂದ ಮನೆ ಬಿಟ್ಟೆ. ಕೊನೆಗವನು ಹೇಳಿದಂತೆ ಧರ್ಮಸ್ಥಳದ ಕಡೆ ಹೋದೆವು. ಇನ್ನೂ ಚಿಕ್ಕ ವಯಸ್ಸಿನವರಾದ ನಮಗಲ್ಲಿ ರೂಮು ಕೊಡಲಿಲ್ಲ. ಕೊನೆಗಲ್ಲಿಂದ ಮಂಗಳೂರಿಗೆ ಬಂದು ಹೇಗೋ ಮಾಡಿ ಒಂದು ಸಣ್ಣ ಲಾಡ್ಜಿನಲ್ಲಿ ತಂಗಿದೆವು. ಹಗಲು ರಾತ್ರಿ ಒಬ್ಬರನ್ನೊಬ್ಬರು ಬಿಡದೆ ಅಂಟಿಕೊಂಡೇ ಹತ್ತು ದಿನಗಳನ್ನು ಕಳೆದೆವು. ತಂದಿದ್ದ ದುಡ್ಡು ಕರಗತೊಡಗಿತ್ತು. ಮುಂದೇನು ಮಾಡಬೇಕು ಅನ್ನುವ ಯಾವ ಕಲ್ಪನೆಯೂ ಇಬ್ಬರಿಗೂ ಇರಲಿಲ್ಲ. ಆದರೆ ಒಂದು ಸಾಯಂಕಾಲ ಪೋಲಿಸರ ಜೊತೆ ಅಪ್ಪ ಬಂದು ರೂಮಿನ ಬಾಗಿಲು ತಟ್ಟಿದಾಗ ಎದೆ ಝಲ್ಲೆಂದು ಬಿಟ್ಟಿತು. ಅಲ್ಲೇ ಎಲ್ಲರ ಎದುರಿಗೆ ದನಕ್ಕೆ ಹೊಡೆದಂತೆ ಹೊಡೆದು ನನ್ನ ಎಳೆದುಕೊಂಡು ಹೋದರು. ಅವನಂತು ಪೋಲಿಸರ ಜೊತೆ ಹೋಗಬೇಕಾಯಿತು. ಅಲ್ಲಿಂದ ನನ್ನನು ಸೀದಾ ಅಮ್ಮನ ತವರು ಮನೆಗೆ ಕರೆತಂದಿದ್ದರು. ಅಲ್ಲಾಗಲೆ ಮನೆ ಖಾಲಿ ಮಾಡಿ ಸಾಮಾನೆಲ್ಲ ಅಜ್ಜಿಯ ಮನೆಗೆ ಸಾಗಿಸಲಾಗಿತ್ತು. 

ಪೋಲಿಸರು ಕರೆದುಕೊಂಡು ಹೋದವನು ಏನಾದನೊ ನನಗೆ ಗೊತ್ತಾಗಲೇ ಇಲ್ಲ.. ನಂತರ ಮೂರೇ ತಿಂಗಳಿಗೆ ದೂರದೂರಿನ ಒಬ್ಬನಿಗೆ ನನ್ನ ಮದುವೆ ಮಾಡಿಕೊಡಲಾಯಿತು. ಅವನಿಗೆ ಆಗಲೇ ಮುವತ್ತೈದು ತುಂಬಿ ನಾನು ಎರಡನೇ ಹೆಂಡತಿಯಾಗಿದ್ದೆ. ಅವನ ಮೊದಲ ಹೆಂಡತಿ ಹೆರಿಗೆಯಲ್ಲೇ ಸತ್ತು ಹೋಗಿದ್ದಳು. ಮದುವೆಯಾಗಿ ಅವನ ಮನೆಗೆ ಕಾಲಿಟ್ಟ ನನಗೆ ನಾಲ್ಕು ವರ್ಷದ ಗಂಡು ಮಗುವಿನ ಆರೈಕೆ ಮಾಡುವ ಬಾರ ಬಂದು ಬಿತ್ತು. ಆಶ್ಚರ್ಯವೆಂದರೆ ಮದುವೆಯಾದ ಆ ಮನುಷ್ಯನಿಗೆ ಸೆಕ್ಸ್ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಒಂದು ದಿನವೂ ಅವನು ನನ್ನ ಜೊತೆ ಮಲಗಲಿಲ್ಲ. ಕೇಳಿದರೆ ನಿನಗೇನೂ ಕಡಿಮೆ ಮಾಡಲ್ಲ, ನನ್ನ ಮಗುವಿಗೆ ತಾಯಿಯಾಗಿರು ಸಾಕು ಅನ್ನುತ್ತಿದ್ದ. ಹೀಗೇ ಎರಡು ವರ್ಷ ಕಳೆದ ಮೇಲೆ ನಾವಿದ್ದ ಹಳೆಯ ಮನೆ ರಿಪೇರಿಗೆ ಅಂತ ಪರವೂರಿಂದ ಆಳುಗಳು ಬಂದರು. ಅವರಿಗೊಬ್ಬ ಮೇಸ್ತ್ರಿ ಇದ್ದ. ಅವನು ನೋಡಲು ಕಟ್ಟುಮಸ್ತಾಗಿ ನಾನು ಪ್ರೀತಿಸಿದ ಹುಡುಗನ ತರಾನೆ ಇದ್ದ. ಅದೇಗೊ ಅವನ ಬಲೆಗೆ ಬಿದ್ದು ಬಿಟ್ಟೆ. ಆಗಾಗ ಹತ್ತಿರ ಬಂದು ಮಾತಾಡಿಸುವುದನ್ನೆಲ್ಲ ಮಾಡುತ್ತಿದ್ದ ಅವನು ಒಂದು ದಿನ ಯಾರೂ ಇಲ್ಲದಾಗ ಬಂದು ನನ್ನ ಜೊತೆ ಬರ್ತೀಯಾ ಮದುವೆಯಾಗೋಣ ಅಂದು ಬಿಟ್ಟ. ಅದ್ಯಾವ ಕೆಟ್ಟಗಳಿಗೆಯೊ ಗೊತ್ತಿಲ್ಲ ಹೂ ಅಂದುಬಿಟ್ಟೆ. ಸರಿ ನಾಲ್ಕೇ ದಿನಕ್ಕೆ ಮನೆಯಲ್ಲಿದ್ದ ಸುಮಾರು ಹಣವನ್ನು ಲಕ್ಷಗಟ್ಟಲೆ ಒಡವೆಯನ್ನೂ ಎತ್ತಿಕೊಂಡು ಅವನ ಜೊತೆ ಓಡಿಹೋದೆ.ತಮಿಳುನಾಡಿನ ಊರೊಂದಕ್ಕೆ ಕರೆದೊಯ್ದ ಅವನು ಒಂದು ಮನೆ ಮಾಡಿ ನನ್ನನ್ನಿಟ್ಟ. ಹಗಲೂ ರಾತ್ರಿ ಅವನ ಜೊತೆ ಕಳಿದದ್ದೇ ಗೊತ್ತಾಗಲಿಲ್ಲ. ಹೀಗೇ ಆರು ತಿಂಗಳು ಕಳೆಯುವಷ್ಟರಲ್ಲಿ ನಾನು ಬಸಿರಾಗಿದ್ದೆ. ಆಗ ಇದ್ದಕ್ಕಿದ್ದಂತೆ ನನಗೆ ಜ್ಞಾನೋದಯವಾದಂತಾಯಿತು. ಅವನಿಗೆ ನನ್ನ ಮದುವೆ ಮಾಡಿಕೊ, ನೀನು ಕೆಲಸ ಮಾಡು ಇಲ್ಲ ಅಂದರೆ ತಂದ ಒಡವೆ ದುಡ್ಡೆಲ್ಲ ಹೀಗೇ ಖಚಾಗಿಬಿಡುತ್ತೆ ಅಂತ ರಂಪಾಟ ಶುರು ಮಾಡಿದೆ. ನೋಡೋಣ ಅನ್ನುತ್ತಲೇ ಮತ್ತೆರಡು ತಿಂಗಳು ಕಳೆದವನಿಗೆ ಒಂದು ದಿನ ತೀರಾ ಕಟುವಾಗಿ ಮಾತನಾಡಿದೆ. ಆಗ ಕೆರಳಿದ ಅವನು ನಿನ್ನ ಯಾಕೆ ಮದುವೆಯಾಗಬೇಕು? ನೀನು ಇನ್ನೊಬ್ಬನ ಜೊತೆ ಓಡಿಹೋಗೋಕಾ ಅಂದುಬಿಟ್ಟ. ನನಗೆ ಶಾಕ್ ಆಯಿತು. ತಿರುಗಿ ಉತ್ತರ ಕೊಟ್ಟಿದ್ದಕ್ಕೆ ನೀನು ನನ್ನ ಸೂಳೆ ಅಷ್ಟೆ ಮುಚ್ಚಿಕೊಂಡಿರು ಅಂತ ನಾಯಿಗೆ ಬಡಿದ ಹಾಗೆ ಬಡಿದು ಮನೆಯಿಂದ ಹೊರಗೆ ಹೊರಟು ಹೋದ. ಹಾಗೆ ಹೋದವನು ನಂತರ ನಾಲ್ಕು ದಿನವಾದರು ಮನೆಗೆ ಬರಲೇ ಇಲ್ಲ. ನನಗೆ ಹೆದರಿಕೆ ಶುರುವಾಯಿತು. ಅದಾಗಲೆ ನನಗೆ ಐದು ತಿಂಗಳು ನಡೆಯುತ್ತಿತ್ತು. ಆಮೇಲೆ ಮನೆಯೆಲ್ಲ ಹುಡುಕಿದರು ನಾನು ತಂದ ದುಡ್ಡಲ್ಲಿ ಒಂದು ರೂಪಾಯಿಯಾಗಲಿ, ಒಡವೆಯ ಒಂದು ಚೂರಾಗಲಿ ಸಿಗಲಿಲ್ಲ. ಸದ್ಯ ನನ್ನ ಮೈಮೇಲೆ ಹಾಕಿಕೊಂಡಿದ್ದ ಒಂದಷ್ಟು ಒಡವೆಗಳು ಹಾಗೇ ಇದ್ದವು. ಮಾರನೇ ದಿನ ಬೆಳಿಗ್ಗೆ ನಾನು ಪಕ್ಕದಲ್ಲೇ ಇದ್ದ ಮನೆ ಓನರ್‍ಗೆ ನನ್ನ ಗಂಡ ಕೆಲಸಕ್ಕೋಸ್ಕರ ಬೆಂಗಳೂರಿಗೆ ಹೋಗಿದ್ದಾನೆ,ಮನೆ ನಿಬಾಯಿಸೋಕೆ ದುಡ್ಡು ಬೇಕಾಗಿತ್ತು ಈ ಬಂಗಾರ ಎಲ್ಲಾದರು ಇಟ್ಟು ದುಡ್ಡು ಕೊಡಿಸೋಕೆ ಆಗುತ್ತಾ ಅಂತ ಅರ್ದಬರ್ದ ತಮಿಳಿನಲ್ಲಿ ಕೇಳಿದಾಗ ಆತ ಆಯಿತು ಅಂತ ಅವನ್ನು ತೆಗೆದುಕೊಂಡ. ಸಾಯಂಕಾಲದ ಹೊತ್ತಿಗೆ ಹಣ ತಂದು ಕೊಟ್ಟ. ಆತ ಮತ್ತು ಆತನ ಹೆಂಡತಿಯ ಸಹಾಯದಿಂದ ಅಲ್ಲೇ ಹೆರಿಗೆಯೂ ಆಯಿತು. ಒಬ್ಬ ಕೆಲದವಳನ್ನು ಇಟ್ಟುಕೊಂಡು ಸುಮಾರು ಐದು ತಿಂಗಳ ಬಾಣಂತನ ಮುಗಿಸಿಕೊಂಡೆ. ಆಮೇಲೊಂದು ದಿನ ಓನರ್‍ಗೆ ಹೇಳದೆ ಒಂದೆರಡು ಜೊತೆ ಬಟ್ಟೆ ತಗೊಂಡು ಆ ಊರು ಬಿಟ್ಟು ಮದ್ರಾಸಿಗೆ ಹೋದೆ. ಅಲ್ಲಿದ್ದ ಯಾವುದೋ ಒಂದು ಅನಾಥಾಶ್ರಮದಲ್ಲಿ ಮಗುವನ್ನು ಬಿಟ್ಟು ನಾನು ಬೆಂಗಳೂರು ಬಸ್ಸು ಹತ್ತಿಬಿಟ್ಟೆ. ಬೆಂಗಳೂರಿಗೆ ಬಂದವಳಿಗೆ ತವರು ಮನೆಯ ಅಮ್ಮ ಅಪ್ಪ, ಗಂಡನ ಮನೆ, ಗಂಡ ಅವನ ಮಗ ನೆನಪಾದರೂ ಅಲ್ಲಿಗೆ ತಿರುಗಿ ಹೋಗುವ ಮುಖವಿರಲಿಲ್ಲ. ಇಪ್ಪತ್ತು ವರ್ಷಕ್ಕೆ ಬದುಕಿನ ಎಲ್ಲ ಏರಿಳಿತಗಳನ್ನೂ ಕಂಡಿದ್ದ ನನಗೆ ಭಯ ಅನ್ನುವುದು ಹೊರಟುಹೋಗಿತ್ತು. ಒಬ್ಬಳೇ ಬೆಂಗಳೂರಿನ ಲಾಡ್ಜೊಂದರಲ್ಲಿ ರೂಮು ಮಾಡಿ ಒಂದು ವಾರ ಅಲ್ಲೇ ಇದ್ದೆ. ಒಬ್ಬಳೇ ಇರುವುದನ್ನು ನೋಡಿದ ಹೋಟೆಲಿನ ಮ್ಯಾನೇಜರ್ ಒಂದು ದಿನ ರೂಮಿಗೆ ಬಂದು ಇದೇ ಹೋಟೆಲಿನ ರೂಮೊಂದರಲ್ಲಿರುವ ಒಬ್ಬರು ನೀವು ಫ್ರೀ ಇದ್ದರೆ ರೂಮಿಗೆ ಬರುವುದಾಗಿ ಹೇಳಿದ್ದಾರೆ ಎಂದು ನೇರವಾಗಿ ಕೇಳಿದ. ಎಲ್ಲ ಭಯ ಮುಜುಗರಗಳನ್ನು ಬಿಟ್ಟು ನಿಂತಿದ್ದ ನಾನು ಈ ಹೋಟೆಲ್ ಬೇಡ ಬೇರೆ ಕಡೆ ರೂಮ್ ಮಾಡುವಂತೆ ಹೇಳು ಬರ್ತೀನಿ ಅಂದು ಕಳಿಸಿದೆ. ಹೇಳಿದಂತೆ ಆ ಗಿರಾಕಿ ಬೇರೊಂದು ಹೋಟೆಲ್ಲಿನಲ್ಲಿ ರೂಮು ಮಾಡಿದ್ದ. ಆ ರಾತ್ರಿ ಅವನೊಂದಿಗೆ ಕಳೆದು ಕೊಟ್ಟ ದುಡ್ಡು ತೆಗೆದುಕೊಂಡು ಬಂದೆ. ನಂತರ ಮ್ಯಾನೇಜರ್ ಗೆ ಅದರಲ್ಲಿ ಒಂದಿಷ್ಟು ಕೊಟ್ಟು ಇದು ನಿನಗೆ, ನನಗೊಂದು ಸಣ್ಣ ಮನೆ ನೋಡು, ನೀನು ಹೇಳಿದಾಗ ಬಂದು ಹೋಗುತ್ತೇನೆಂದು ಒಪ್ಪಂದ ಮಾಡಿಕೊಂಡೆ. ಸರಿ ಮೂರೇ ದಿನದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸಣ್ಣ ಮನೆಯೊಂದನ್ನು ಹುಡುಕಿದ ಜನದಟ್ಟಣೆಯಿರದ ಆ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತಂದು ಕೊಂಡೆ. ಒಂದು ರೀತಿಯಲ್ಲಿ ಸಂಸಾರಸ್ಥರ ರೀತಿ ಮನೆಯನ್ನು ಸಜ್ಜುಗೊಳಿಸಿಕೊಂಡೆ. ನಂತರ ಮ್ಯಾನೇಜರ್ ಒಳ್ಳೆಯ ಶ್ರೀಮಂತ ಗಿರಾಕಿ ಇದ್ದಾಗ ಹೇಳಿ ಕಳಿಸೋನು. ನಾನು ಬೇರೆ ಬೇರೆ ಹೋಟೆಲ್ಲುಗಳಲ್ಲಿ ರೂಮ್ ಮಾಡಿಸಿ ಅವರ ಜೊತೆ ಇರುತ್ತಿದ್ದೆ. ಒಂದೆರಡು ವರ್ಷ ಹೀಗೆ ನನ್ನ ಕಸುಬು ಮಾಡುತ್ತಾ ಹೋದೆ . ಈ ಮದ್ಯೆ ಬೆಂಗಳೂರು ನನಗೆ ಚೆನ್ನಾಗಿ ಪರಿಚಯವಾಗಿಬಿಡ್ತು. ಒಂದು ದಿನ ಗಿರಾಕಿಯೊಬ್ಬ ದೊಡ್ಡ ಹೋಟೆಲ್ಲಿನಲ್ಲಿ ರೂಮ್ ಸಿಗಲಿಲ್ಲವೆಂದು ಯಾವುದೊ ಮೂರನೇ ದರ್ಜೆಯ ಹೋಟೆಲ್ಲಿನಲ್ಲಿ ರೂಮ್ ಮಾಡಿದ್ದ. ಅಲ್ಲಿ ಪೋಲಿಸ್ ರೈಡ್ ಆಗಿ ಸಿಕ್ಕಿ ಬಿದ್ದೆ. ಸ್ಟೇಷನ್ನಿನ ಮುದುಕ ಇನ್ಸಪೆಕ್ಟರ್ ಬಹಳ ಒಳ್ಳೆಯವನು,ಮುಂದೆ ಇಂತಾ ಕೆಲಸ ಮಾಡಬೇಡ ಅಂತ ಬುದ್ದಿ ಹೇಳಿ ಕಳಿಸಿದ. ಹಾಗೆ ವಾಪಾಸು ಕಳಿಸುವ ಮುಂಚೆ ನನ್ನ ಜೊತೆ ಒಂದಿಡೀ ರಾತ್ರಿ ಕಳೆದೇ ಕಳಿಸಿದ್ದು.

ನನಗೆ ಗಿರಾಕಿಗಳನ್ನು ಪೂರೈಸುತ್ತಿದ್ದ ಮ್ಯಾನೇಜರ ಒಂದು ದಿನ ಸತ್ತು ಹೋದ. ಆದರೆ ಈಗಾಗಲೆ ನಾನು ನನ್ನದೇ ಆದ ಬೇರೆ ಜನರನ್ನು ಸಂಪಾದಿಸಿದ್ದೆ ಅವರ ಮೂಲಕ ದಂದೆ ನಡೆಸತೊಡಗಿದೆ. ಸ್ವಲ್ಪದಿನಗಳಾದ ಮೇಲೆ ಅನಾಥಾಶ್ರಮದಲ್ಲಿ ಬಿಟ್ಟುಬಂದ ಮಗುವಿನ ನೆನಪಾಗ ತೊಡಗಿತು. ತಡೆಯಲಾರದೆ ಒಂದು ದಿನ ಮದ್ರಾಸಿಗೆ ಹೋಗಿ ವಿಚಾರಿಸಿದೆ. ಅದಕ್ಕವರು ಅದನ್ನು ಯಾರೋ ದತ್ತು ತೆಗೆದುಕೊಂಡಿದ್ದಾರೆ. ಅವರ ವಿಳಾಸ ಕೊಡಲಾಗುವುದಿಲ್ಲವೆಂದು ಹೇಳಿದರು. ಬರಿಗೈಲಿ ವಾಪಾಸಾದೆ. ಯಾಕೊ ಮಗುವನ್ನು ಬಿಟ್ಟುಬಂದ ಪಾಪ ಕಾಡತೊಡಗಿತ್ತು.. ಹೀಗೇ ಬದುಕು ಸಾಗುತ್ತಿರುವಾಗ ಯಾವುದೊ ಹಳ್ಳಿಯಿಂದ ಬೆಂಗಳೂರಿಗೆ ಓಡಿಬಂದ ಹುಡುಗಿಯೊಬ್ಬಳು ಸಿಕ್ಕಿದಳು. ಅವಳನ್ನು ತಂದು ಮನೆಯಲ್ಲಿಟ್ಟುಕೊಂಡೆ. ಹದಿನಾರು ವರ್ಷದ ಅವಳಿಗೆ ಅಪ್ಪ ಅಮ್ಮ ಯಾರೂ ಇರಲಿಲ್ಲ. ನೆಂಟರ ಮನೆಯಲ್ಲಿದ್ದವಳು, ಅವರ ಕಾಟ ತಡೆಯಲಾರದೆ ಓಡಿ ಬಂದಿದ್ದಳು. ಸತ್ಯ ಹೇಳ್ತೀನಿ ಅವಳನ್ನು ದಂದೆಗೆ ಇಳಿಸೋದಿರಲಿ ನಾನೇನು ಮಾಡ್ತೀನಿ ಅನ್ನೋದು ಸಹ ಗೊತ್ತಾಗದ ಹಾಗೆ ನೋಡಿಕೊಂಡೆ. ಐದು ವರ್ಷ ನನ್ನ ಜೊತೆಗಿದ್ದ ಅವಳು ಟೈಲರಿಂಗ್ ಕಲಿತಳು. ಕೊನೆಗೆ ಆಗತಾನೇ ಶುರುವಾಗಿದ್ದ ಗಾರ್ಮೆಂಟ್ಸ್ ಒಂದಕ್ಕೆ ಸೇರಿಕೊಂಡಳು. ಅವಳು ನನ್ನನ್ನು ಚಿಕ್ಕಮ್ಮ ಅಂತ ಕರೀತೀದ್ದಳು. ಕೊನೆಗೊಂದು ದಿನ ಅದೇ ಗಾರ್ಮೆಂಟ್ಸಲ್ಲಿ ಕೆಲಸ ಮಾಡೋ ಹುಡುಗನ್ನ ಇಷ್ಟಪಟ್ಟು ನನಗೆ ಹೇಳಿದಳು. ಹುಡುಗಾನು ಹಳ್ಳಿಯವನು, ಅನಾಥ. ನಾನೇ ನಿಂತು ಮದುವೆ ಮಾಡಿಸಿದೆ. ಅಷ್ಟು ವರ್ಷ ನಾನು ಕೂಡಿಟ್ಟಿದ್ದ ದುಡ್ಡನ್ನೆಲ್ಲ ಅವಳ ಮದುವೆಗೆ ಖರ್ಚು ಮಾಡಿದೆ. ಆಮೇಲವರ ಒತ್ತಾಯದ ಮೇರೆಗೆ ಅವರ ಮನೆಯಲ್ಲೇ ಇರತೊಡಗಿದೆ. ಈಗವರಿಗೆ ಇಬ್ಬರು ಹೆಣ್ಣಮಕ್ಕಳು. ನೆಮ್ಮದಿಯಾಗಿದ್ದಾರೆ. ಆಮೇಲೊಂದು ದಿನ ಹುಡುಗನಿಗೆ ನನ್ನ ನಿಜವಾದ ಕಸುಬು ಗೊತ್ತಾಗಿ ಗಲಾಟೆ ಮಾಡಿದ. ಹುಡುಗಿ ನನ್ನ ಸಪೋರ್ಟಿಗೆ ನಿಂತಳು. ಇನ್ನು ನನ್ನಿಂದ ಅವರ ಸಂಸಾರಕ್ಕೆ ತೊಂದರೆಯಾಗೋದು ಬೇಡವೆಂದು ನಾನು ಅವರಿಗೆ ಹೇಳದೆ ಕೇಳದೆ ಬೆಂಗಳೂರು ಬಿಟ್ಟೆ. ಈ ಊರಿಗೆ ಬರುವಷ್ಟರಲ್ಲಿ ನನಗೆ ಗುಣವಾಗದ ಕಾಯಿಲೆಗಳೆಲ್ಲ ಶುರುವಾಗಿದ್ದವು. ಕೈಲಿ ಮುಂಚಿನ ಹಾಗೆ ದುಡ್ಡಿರಲಿಲ್ಲ. ಮೈಲಿ ಶಕ್ತಿಯೂ ಇರಲಿಲ್ಲ. ಒಂದು ದಿನ ಹೊಟ್ಟೆ ಹಸಿದುಕೊಂಡು ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಕೂತಿರುವಾಗ ಯಾರೋ ಭಕ್ತರು ಬಿಕ್ಷುಕಿ ಇರಬೇಕು ಅಂತ ತಮ್ಮ ಕೈಲಿದ್ದ ಪ್ರಸಾದ ಮತ್ತು ಚಿಲ್ಲರೆ ಕಾಸು ಹಾಕಿ ಹೋದರು. ಸರಿ ಆಮೇಲಾಮೇಲೆ ಆ ದೇವಸ್ಥಾನವೇ ನನ್ನ ಮನೆಯಾಗಿಬಿಟ್ಟಿತು. ಹಗಲು ಹೊತ್ತು ಹೊರಗೆ ಕೂತರೆ ಸಾಕು ಒಂದಷ್ಟು ಚಿಲ್ಲರೇ ಕಾಸು ಮಡಿಲಿಗೆ ಬಂದು ಬೀಳುತ್ತೆ. ದಿನಾ ಬೇರೆ ಬೇರೆ ರೀತಿಯ ಪ್ರಸಾದ ಕೊಡ್ತಾರೆ. ಸಂಜೆ ಭಜನೆಯಲ್ಲಿ ನಾನು ಹೊರಗೆ ಕೂತೆ ಹಾಡ್ತೀನಿ. ಇವತ್ತಿನವರೆಗು ದೇವಸ್ಥಾನದ ಒಳಗೆ ಹೋಗಿಲ್ಲ. ನಾನು ಯಾವಾಗ ಬೇಕಾದರು ಸಾಯಬಹುದು. ಒಳಗಿರುವ ದೇವರು ಯಾವಾಗ ಕರೆದುಕೊಳ್ತಾನೊ ಅಂತ ಕಾಯ್ತಾ ಇದೀನಿ. ಆದರೆ ನನ್ನಂತವರಿಗೆ ಅಷ್ಟು ಸುಲಭವಾಗಿ ದೇವರು ಮುಕ್ತಿ ಕೊಡ್ತಾನಾ ಸಾರ್. ತಪ್ಪು ಮಾಡಿದೆ ಅನಿಸುತ್ತೆ ಸಾರ್. ಆದರೆ ತಪ್ಪು ಯಾರು ಮಾಡಲ್ಲ ಹೇಳಿ? ಆದರೆ ಶಿಕ್ಷೆ ಮಾತ್ರ ಒಬ್ಬರಿಗೇ ಯಾಕೆ ಆಗ್ಬೇಕು ಹೇಳಿ?

ಉತ್ತರ ನನಗಿರಲಿ ಬಹುಶ: ಆ ದೇವರಿಗೂ ಗೊತ್ತಿರಲಿಕ್ಕಿಲ್ಲವೆನಿಸಿತು!

ಭೂ‘ಕಂಪನಕ್ಕೆ’ ಕಳಚಿಬಿದ್ದ ಮುಖವಾಡಗಳು

nepal earthquake
Dr Ashok K R
ನೇಪಾಳ ಬೆಚ್ಚಿ ಬಿದ್ದಿದೆ. ಅಕ್ಷರಶಃ ಬಿದ್ದು ಹೋಗಿದೆ. ಭೂಕಂಪನಕ್ಕೆ ಕಟ್ಟಡಗಳನೇಕವು ಬಿದ್ದು ಲೆಕ್ಕಕ್ಕೆ ಸಿಗದಷ್ಟು ಸಾವು ನೋವುಗಳು ಸಂಭವಿಸಿವೆ. ಮೊದಲ ದಿನದ ವರದಿಗಳು ಸಾವಿರದವರೆಗೆ ಸತ್ತಿರಬಹುದೆಂದು ಹೇಳಿತಾದರೂ ಪ್ರತಿದಿನವೂ ಸಾವಿರದಷ್ಟು ಏರಿಕೆಯಾಗುತ್ತಿದೆ. ನಗರದ ಕಟ್ಟಡಗಳ ಅಡಿಯಲ್ಲಿ, ದೂರದ ಕುಗ್ರಾಮಗಳಲ್ಲಿ ಸತ್ತವರ ನಿಖರ ಸಂಖೈಯ ಅರಿವಾಗಲು ಇನ್ನೂ ಅನೇಕ ದಿನಗಳು ಅವಶ್ಯಕ. ಇಂತಹ ನೈಸರ್ಗಿಕ ದುರ್ಘಟನೆಯ ವೇಳೆ ನಿಖರ ಸಂಖೈ ತಿಳಿಯುವುದು ಕಷ್ಟವೂ ಹೌದು. ಇಡೀ ಕುಟುಂಬವೇ ಸಾವಿಗೀಡಾಗಿ ಬಿಟ್ಟಾಗ ‘ನಮ್ಮ ಕುಟುಂಬದವರು ಕಾಣಿಸುತ್ತಿಲ್ಲ’ ಎಂದು ದೂರು ನೀಡುವವರಾದರೂ ಯಾರು. ನಮ್ಮ ಪಶ್ಚಿಮ ಬಂಗಾಳ, ಬಿಹಾರದಲ್ಲೂ ಭೂಮಿ ಕಂಪಿಸಿದೆ. ನೂರರ ಆಸುಪಾಸಿನಲ್ಲಿ ಸಾವುಂಟಾಗಿದೆ. ಭೂಕಂಪನ ಉಂಟುಮಾಡಿದ ಹಿಮಕುಸಿತದಿಂದಾಗಿ ಚಾರಣಕ್ಕೆಂದು ಹಿಮಾಲಯ ಪರ್ವತಶ್ರೇಣಿಯಲ್ಲಿದ್ದವರು ಮೃತಪಟ್ಟಿದ್ದಾರೆ. ನೇಪಾಳದ ಅಥವಾ ಹಿಮಾಲಯದ ತಪ್ಪಲಿನ ಭೂಕಂಪ ಅಚ್ಚರಿಯ ವಿದ್ಯಮಾನವೇನಲ್ಲ. ಭಾರತ ಉಪಖಂಡದ ಚಲನೆಯನ್ನು ಗಮನಿಸಿದಾಗ ಇದು ಶತಮಾನದಲ್ಲೊಮ್ಮೆಯಾದರೂ ನಡೆಯಲೇಬೇಕಾದ ನೈಸರ್ಗಿಕ ವಿದ್ಯಮಾನ ಎಂಬ ಸಂಗತಿ ವೇದ್ಯವಾಗುತ್ತದೆ.

ಇಂಡಿಯನ್ ‍ಪ್ಲೇಟ್ ಎಂದು ಕರೆಯಲ್ಪಡುವ ಭಾರತ ಉಪಖಂಡ ಏಷ್ಯಾ ಖಂಡಕ್ಕೆ ಸೇರುವ ಮೊದಲು, ಮಿಲಿಯಾಂತರ ವರುಷಗಳ ಹಿಂದೆ ಆಫ್ರಿಕಾ ಖಂಡದೊಂದಿಗೆ ಸೇರಿಕೊಂಡಿತ್ತು. ಆಫ್ರಿಕಾದಿಂದ ಬೇರ್ಪಟ್ಟ ಇಂಡಿಯನ್ ಪ್ಲೇಟ್ ವೇಗವಾಗಿ ಯುರೇಷಿಯನ್ ಪ್ಲೇಟ್ ಎಂದು ಕರೆಯಲ್ಪಡುವ ಉಳಿದ ಏಷ್ಯಾ ಖಂಡದ ಕಡೆಗೆ ಸಾಗಲಾರಂಭಿಸಿತು. ಕೊನೆಗೆ ಇಂಡಿಯನ್ ಪ್ಲೇಟ್ ಯುರೇಷಿಯನ್ ಪ್ಲೇಟಿಗೆ ಡಿಕ್ಕಿ ಹೊಡೆದು ಈಗಿರುವ ಸ್ಥಿತಿಯಲ್ಲಿ ನಿಂತಂತೆ ಮಾಡಿತು. ಭೂಮಿಯಲ್ಲಿ ಇಂಡಿಯನ್ ಪ್ಲೇಟ್ ಅತ್ಯಂತ ಚಲನಶೀಲವಾಗಿದೆ. ಏಷ್ಯಾ ಖಂಡದೊಂದಿಗೆ ಮೇಲ್ಮೈಯಲ್ಲಿ ಸೇರಿಕೊಂಡಂತೆ ಮಾಡಿದರೂ ಪ್ರತಿವರ್ಷ ಇಂಡಿಯನ್ ಪ್ಲೇಟ್ ಯುರೇಷಿಯನ್ ಪ್ಲೇಟನ್ನು ನಾಲ್ಕೈದು ಸೆಂಟಿಮೀಟರಿನಷ್ಟು ತಳ್ಳುತ್ತಲೇ ಇದೆ. ಯುರೇಷಿಯನ್ ಪ್ಲೇಟಿನ ಕೆಳಗೂ ಸಾಗುತ್ತಿದೆ. ಈ ಎರಡೂ ಪ್ಲೇಟುಗಳ ತಳ್ಳಾಟ, ನೂಕಾಟ ಹೆಚ್ಚಾದಾಗಲೆಲ್ಲ ಭೂಕಂಪ ಸಂಭವಿಸುವುದು ಖಂಡಿತ. ಒಂದು ಅಧ್ಯಯನದ ಪ್ರಕಾರ ಎಂಭತ್ತು ತೊಂಭತ್ತು ವರುಷಗಳಿಗೊಮ್ಮೆ ಹಿಮಾಲಯದ ತಪ್ಪಲಿನ ಭೂಪ್ರದೇಶದಲ್ಲಿ ಭೂಕಂಪ ನಡೆಯುತ್ತದೆ. ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ತೊಂದರೆಗೀಡಾಗುವುದು ಮನುಷ್ಯ ಪ್ರಾಣಿ. ಕಾರಣ, ಕೃತಕ ನಿರ್ಮಾಣದಲ್ಲಿ ವಾಸಿಸುವ ನಮ್ಮ ತಲೆಯ ಮೇಲೆ ನಮ್ಮ ನಿರ್ಮಾಣವೇ ಕುಸಿದು ಬೀಳುವುದು. ಅತಿ ಹೆಚ್ಚು ಭೂಕಂಪವಾಗುವ ಜಪಾನಿನಂತಹ ದೇಶಗಳಲ್ಲಿ ಭೂಕಂಪ ನಿರೋಧಕ ಮನೆಗಳ ನಿರ್ಮಾಣ ಪ್ರಾಮುಖ್ಯತೆ ಪಡೆದುಕೊಂಡಿರುವಂತೆ ನಮ್ಮ ಅಥವಾ ನೇಪಾಳದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಸರಕಾರಗಳ ಅಸಡ್ಡೆ ಒಂದು ಕಾರಣವಾದರೆ, ದೇಶದ ಮತ್ತು ಜನರ ಆರ್ಥಿಕ ಪರಿಸ್ಥಿತಿಗಳು ಮತ್ತೊಂದು ಕಾರಣ. ಭೂಕಂಪನದ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಷ್ಟಾಗಿ ಅಭಿವೃದ್ಧಿಯಾಗಿಲ್ಲದ ಕಾರಣವೂ ಸೇರಿಕೊಂಡು ನಮ್ಮಲ್ಲಿ ಸಾವು ನೋವುಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತವೆ. 

ಸುಖೈಶ್ವರ್ಯಗಳು ಹೆಚ್ಚಾದ ಸಂದರ್ಭದಲ್ಲಿ ಮನುಷ್ಯರ ಮನಸ್ಸುಗಳು ದೂರವಿದ್ದರೂ ದುರಂತದ ಸಂದರ್ಭಗಳಲ್ಲಿ ತತ್ವ – ಸಿದ್ಧಾಂತ – ಧರ್ಮ ಭೇದಗಳನ್ನು ಮರೆಸುವ ಮಾನವೀಯತೆ ಮೆರೆಯುತ್ತದೆ. ಸೈದ್ಧಾಂತಿಕವಾಗಿ ವಿರೋಧಿಸಿದ ಸಂಘಟನೆಗಳ ಸೇವಾಕಾರ್ಯದ ಬಗ್ಗೆಯೂ ಮೆಚ್ಚಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಸಾವು ನೋವಿನ ನಷ್ಟಗಳ ಜೊತೆಜೊತೆಗೆ ಮನುಷ್ಯರನ್ನು ಒಂದುಗೂಡಿಸುವ ಕೆಲಸವನ್ನೂ ನೈಸರ್ಗಿಕ ವಿಕೋಪಗಳು ಮಾಡುತ್ತವೆ. ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವವರ ಸಂಖೈ ಹೆಚ್ಚಾಗಿರುವ ಈ ದಿನಮಾನದಲ್ಲಿ ಒಗ್ಗೂಡುವಿಕೆ ವೇಗದಿಂದ ನಡೆಯಬೇಕಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಕೋಪದ ಘಟನೆಗಳು ಹಿಂದಾಗಿ ‘ಧಾರ್ಮಿಕ’ ಘಟನೆಗಳು ಮುಂದಾಗುತ್ತ ಮತ್ತಷ್ಟು ವಿಘಟನೆಗೆ ಕಾರಣವಾಗುತ್ತಿದೆ. ಹಿಂದೂ – ಕ್ರೈಸ್ತ – ಮುಸಲ್ಮಾನರೆಲ್ಲರೂ ಈ ವಿಘಟನೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅರ್ಧ ಸತ್ಯ, ಸುಳ್ಳು, ಅತಿರಂಜಿತ ಸತ್ಯ ಮತ್ತು ಅಪರೂಪಕ್ಕೆ ಸತ್ಯವೆಲ್ಲವೂ ಮಿಲಿಸೆಕೆಂಡಿನಲ್ಲಿ ಮಿಲಿಯಾಂತರ ಜನರನ್ನು ತಲುಪುತ್ತ ಜನರ ಮುಖವಾಡಗಳನ್ನು ಕಳಚಿ ಬಿಸಾಡುತ್ತಿವೆ. 

ನೇಪಾಳ ಹಿಂದೂ ಧರ್ಮೀಯರು ಹೆಚ್ಚಿರುವ ದೇಶ. ಕ್ರಿಶ್ಚಿಯನ್ನರಲ್ಲಿ ಕೆಲವರು ‘ಅಯ್ಯೋ ಹಿಂದೂಗಳೇ. ಪಾಪ ಪಾಪ. ಮೊದಲು ನಮ್ಮ ಧರ್ಮಕ್ಕೆ ಬನ್ನಿ’ ಎಂದು ಕ್ರಿಶ್ಚಿಯನ್ನರು ನೈಸರ್ಗಿಕ ವಿಕೋಪದಿಂದ ಸಾಯುವುದೇ ಇಲ್ಲವೆಂಬಂತೆ ಧರ್ಮ ಪ್ರಚಾರದಲ್ಲಿ ತೊಡಗಲಾರಂಭಿಸಿದ್ದಾರೆ! ಬೀಳದ ಮಸೀದಿಯ ಚಿತ್ರವನ್ನಾಕಿಕೊಂಡ (ಆ ಚಿತ್ರವಾದರೂ ಎಷ್ಟರಮಟ್ಟಿಗೆ ಸತ್ಯ ಎಂಬುದು ಪ್ರಶ್ನಾರ್ಹ) ಕೆಲವು ಮುಸ್ಲಿಮರು ‘ನೋಡಿ ನೋಡಿ ನಮ್ಮ ಅಲ್ಲಾ ಹೇಗೆ ಈ ಮಸೀದಿಯನ್ನು ರಕ್ಷಿಸಿದ್ದಾನೆ’ ಎಂದು ಅಲ್ಲಾನಿಗೆ ಪಾಪ ಮಸೀದಿ ಕಾಯುವುದೇ ಕೆಲಸವೆಂಬಂತೆ ಬೊಬ್ಬೆಯೊಡೆಯುತ್ತಿದ್ದಾರೆ. ‘ಕೇದಾರನಾಥದಲ್ಲಿ ಜಲಪ್ರಳಯವಾದಾಗ ಶಿವನ ದೇಗುಲ ಅಲುಗಲಿಲ್ಲ. ಈಗ ನೋಡಿ ನೇಪಾಳದ ಭೂಕಂಪ ಪಶುಪತಿನಾಥ ದೇಗುಲವನ್ನು ಏನು ಮಾಡಿಲ್ಲ. ನಮ್ಮ ದೇವರ ಪವರ್ ಇದು’ ಎಂಬ ಅಸಂಬದ್ಧ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕೆಲವು ಹಿಂದೂಗಳು ಆಗಿನ ಕಾಲದ ಕಟ್ಟಡ ಕಾರ್ಮಿಕರ ಬುದ್ಧಿಶಕ್ತಿಯನ್ನು ನಿರ್ಲಕ್ಷಿಸುತ್ತಿದ್ದಾರೆ! ರಾಹುಲ್ ಗಾಂಧಿಯೆಂಬ ಮಾಂಸಾಹಾರಿ ‘ಪರಿಶುದ್ಧ’ನಾಗದೇ ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದೇ ಈ ಭೂಕಂಪಕ್ಕೆ ಕಾರಣ ಎಂದು ಹೇಳಿದ ವ್ಯಕ್ತಿಯೊಬ್ಬ ನಮ್ಮ ಸಂಸದ ಎನ್ನುವುದು ನಾಚಿಕೆಪಡಬೇಕಾದ ಸಂಗತಿ. ಹಫೀಜ್ ಸಯ್ಯದ್ ಎಂಬ ಉಗ್ರನ ಸಂಘಟನೆ ಪಾಕಿಸ್ತಾನದಲ್ಲಿ ನಡೆದ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಸೇವಾಕಾರ್ಯಗಳನ್ನು ಕೈಗೊಂಡು ಜನ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಸಂಘಟನೆಯಷ್ಟು ಅಲ್ಲವಾದರೂ ಒಂದಷ್ಟು ಮಟ್ಟಿಗಿನ ಉಗ್ರತೆ ಮತ್ತು ದ್ವೇಷ ಮನೋಭಾವ ಇಟ್ಟುಕೊಂಡಿರುವ ಆರ್ ಎಸ್ ಎಸ್ ಸಂಘಟನೆ ನೈಸರ್ಗಿಕ ವಿಕೋಪದ ಪರಿಸ್ಥಿತಿಗಳಲ್ಲಿ ಸೇವಾಕಾರ್ಯ ಕೈಗೊಳ್ಳುವುದನ್ನು ಅನೇಕ ಸಂದರ್ಭದಲ್ಲಿ ನೋಡಿದ್ದೇವೆ, ಜನ ಮೆಚ್ಚುವಂತಹ ಕೆಲಸಗಳನ್ನು ಅಂತಹ ದುರಂತದಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಅವರು ಮಾಡುವುದು ಮೆಚ್ಚುವಂತಹ ಕೆಲಸವೇ ಹೌದು. ಆದರೆ ನೇಪಾಳದಲ್ಲಿ ಭೂಕಂಪ ನಡೆದ ಮಾರನೇ ದಿನವೇ 20,000ದಷ್ಟು ಕಾರ್ಯಕರ್ತರು ನೇಪಾಳಕ್ಕೆ ಹೋಗಿದ್ದಾರೆ ಎಂದು ಸುಳ್ಳಾಡುವುದು ಯಾತಕ್ಕಾಗಿ? ಇಂತಹ ಸುಳ್ಳು ಸುದ್ದಿಯನ್ನು ಆರ್ ಎಸ್ ಎಸ್ ಹಬ್ಬಿಸಲಿಲ್ಲ. ಸಾಮಾನ್ಯ ಜನರ್ಯಾರೋ ಹಬ್ಬಿಸಿದ ಸುಳ್ಳೆಂದರೂ ಸುಮ್ಮನಾಗಬಹುದಿತ್ತೇನೋ. ಆದರೆ ಸುಳ್ಳು ಹಬ್ಬಿಸಿದ್ದು ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದವರು! ಬಿಜೆಪಿಯ ಉನ್ನತ ಸ್ಥಾನದಲ್ಲಿರುವವರು! ಸೈನಿಕರು ಹೋಗುವುದೇ ದುಸ್ತರವಾದ ಸಂದರ್ಭದಲ್ಲಿ 20,000 ಕಾರ್ಯಕರ್ತರು ಅಷ್ಟು ಶೀಘ್ರವಾಗಿ ತಲುಪುವುದಾದರೂ ಹೇಗೆ ಎಂಬುದನ್ನು ಯೋಚಿಸದ ‘ವಿದ್ಯಾವಂತ’ ಜನತೆ ಫೋಟೋಗಳನ್ನು ಲೈಕ್ ಮಾಡಿ ಶೇರ್ ಮಾಡಿದರು! ಆ ಫೋಟೋಗಳು ಆರ್.ಎಸ್.ಎಸ್ ಗುಜರಾತಿನಲ್ಲಿ ಮಾಡಿದ ಸೇವೆ ಮತ್ತು ಕೇರಳದ ಹಳೆಯ ಫೋಟೋಗಳು ಎಂದು ನಂತರದ ದಿನಗಳಲ್ಲಿ ತಿಳಿಯಿತು! ಬಿಜೆಪಿಯ ಸೋಷಿಯಲ್ ಮೀಡಿಯಾ ವಿಭಾಗದವರಿಗೆ ಕಾಂಗ್ರೆಸ್ಸನ್ನು ಕೆಲವು ಸತ್ಯ ಮತ್ತು ಸುಳ್ಳುಗಳಿಂದ ಟೀಕಿಸುವುದಕ್ಕೆ ದುರಂತದಲ್ಲೂ ಸಮಯವಿತ್ತು! ಇನ್ನು ನಮ್ಮ ನೆರೆಯ ಪಾಕಿಸ್ತಾನವೆಂಬ ದೇಶ ಹತ್ತಲವು ಆಹಾರ ಪೊಟ್ಟಣಗಳೊಂದಿಗೆ ಬಹುತೇಕ ನೇಪಾಳಿಗರು ಸೇವಿಸದ ದನದ ಮಸಾಲೆಯನ್ನು ಕಳುಹಿಸಿದ್ದಾರೆ! ಸಹಾಯ ಮಾಡುತ್ತಿರುವವರಿಗಿಂತ ಇಂತಹ ವಿಪರೀತದ ವರ್ತನೆಗಳು ಮಿಲಿಸೆಕೆಂಡುಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಶೇರ್ ಆಗುತ್ತಿದೆ!

ನೇಪಾಳದಲ್ಲಿ ಭಾರತೀಯ ಸೈನ್ಯ
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವೇಗದ ನಿರ್ಣಯಗಳಿಂದ ನೇಪಾಳಕ್ಕೆ ಸಹಾಯ ಒದಗಿಸುತ್ತ ಇಡೀ ಭಾರತ ನಿಮ್ಮ ಜೊತೆಗಿದೆ ಎಂಬ ಭರವಸೆ ತುಂಬುತ್ತಿದ್ದರೆ ಅವರದೇ ಪಕ್ಷದವರು ಬಿಜೆಪಿಯ ‘ರಾಜಕೀಯ’ದ ಬಗ್ಗೆ ಅಸಹ್ಯ ಮೂಡುವಂತೆ ಮಾಡುತ್ತಿದ್ದಾರೆ. ದೇಶದ ನೂರ ಇಪ್ಪತ್ತೈದು ಕೋಟಿ ಜನತೆ ನಿಮ್ಮ ಜೊತೆಗಿದ್ದಾರೆ ಎಂದು ಪ್ರಾರಂಭದಲ್ಲಿ ಹೇಳಿ ಮೆಚ್ಚುಗೆ ಪಡೆದ ಮೋದಿ ನಂತರದ ದಿನಗಳಲ್ಲಿ ‘ಸೇವೆ ನಮ್ಮ ಧರ್ಮ’ ‘ನೇಪಾಳದ ಪ್ರಧಾನಿಗೆ ಭೂಕಂಪ ಗೊತ್ತಾಗಿದ್ದೇ ನನ್ನಿಂದ’ ಎಂಬಂತಹ ಮಾತುಗಳನ್ನು ಅನವಶ್ಯಕವಾಗಿ ಹೇಳುತ್ತಿರುವುದ್ಯಾಕೋ ತಿಳಿಯುವುದಿಲ್ಲ. ಭಾರತ ನೇಪಾಳದ ನೆರವಿಗೆ ಮೊದಲು ಬಂದಿದ್ದು ಹೌದಾದರೂ ನಂತರದ ದಿನಗಳಲ್ಲಿ ಪಾಕಿಸ್ತಾನ, ಚೀನಾ ಸೇರಿದಂತೆ ಅನೇಕ ದೇಶಗಳು, ವಿವಿಧ ದೇಶಗಳ ಎನ್.ಜಿ.ಒಗಳು ನೇಪಾಳಕ್ಕೆ ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿವೆ. ಪುಟ್ಟ ರಾಷ್ಟ್ರವೊಂದಕ್ಕೆ ನೆರವು ನೀಡುವುದರ ಮೂಲಕ ರಾಜಕೀಯ ಪ್ರಭಾವ ಪಡೆದುಕೊಳ್ಳಲು ನೆರೆಯ ರಾಷ್ಟ್ರಗಳು ನಂತರದ ದಿನಗಳಲ್ಲಿ ಯತ್ನಿಸುವುದು ನಿಜವಾದರೂ ತತ್ ಕ್ಷಣದಲ್ಲಿ ಇದು ಮಾನವೀಯತೆಯ ದೃಷ್ಟಿಯ ನೆರವು. ಸಮೂಹ ಮಾಧ್ಯಮಗಳು ಓದುಗರಿಂದ ದುರಂತಕ್ಕೀಡಾದ ದೇಶಕ್ಕೆ ನೆರವು ಯಾಚಿಸುವುದು ಸಾಮಾನ್ಯ. ಸಾಮಾಜಿಕ ತಾಣ ಫೇಸ್ ಬುಕ್ ಕೂಡ ನೇಪಾಳದ ದುರಂತಕ್ಕೆ ನೆರವು ನೀಡಲು ಪ್ರೇರೇಪಿಸುತ್ತಿರುವುದು ಅಭಿನಂದನಾರ್ಹ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರಕಾರದ ಸ್ಪಂದನೆಯನ್ನು ಅಭಿನಂದಿಸುತ್ತಲೇ ಮಾಧ್ಯಮಗಳು ನೇಪಾಳದಲ್ಲಿ ‘ಮೋದಿಯನ್ನು ಹೊಗಳಿ’ ‘ಸರಕಾರವನ್ನು ಹೊಗಳಿ’ ಎಂದು ಸಂತ್ರಸ್ತ ಜನರಿಗೆ ಹೇಳುವಂತೆ ಮಾಡಿದ ಕುರಿತು ನೇಪಾಳದಲ್ಲಿದ್ದ ಭಾರತೀಯನೊಬ್ಬ ಟ್ವೀಟಿಸಿದ್ದು ಪ್ರಸ್ತುತ ಸರಕಾರದ ಅತಿಯಾದ ಪ್ರಚಾರಪ್ರಿಯತೆಯನ್ನು ತೋರಿಸುತ್ತದೆ. ಸರಕಾರವೊಂದಕ್ಕೆ ಇಷ್ಟೊಂದು ಪ್ರಚಾರ ಬೇಕಾ?

ನೇಪಾಳಕ್ಕೆ ತೆರಳಿದ ಕರ್ನಾಟಕದ ವೈದ್ಯರು
ನೇಪಾಳಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಕರ್ನಾಟಕದವರನೇಕರು ಭೂಕಂಪನಕ್ಕೆ ಸಿಲುಕಿಕೊಂಡಿದ್ದರು. ಅವರಲ್ಲಿ ಬಹುತೇಕರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ದೂರದ ನೇಪಾಳಕ್ಕೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದ ವೈದ್ಯರ ತಂಡವನ್ನು ಕರ್ನಾಟಕ ಸರಕಾರ ಇನ್ನೂರು ಕೆ.ಜಿ ಮಾತ್ರೆಗಳೊಂದಿಗೆ ನೇಪಾಳಕ್ಕೆ ಕಳುಹಿಸಿದೆ. ಕರ್ನಾಟಕ ಬಿಜೆಪಿಯ ವತಿಯಿಂದಲೂ ವೈದ್ಯರ ತಂಡವೊಂದು ನೇಪಾಳಕ್ಕೆ ತೆರಳಲು ಸಿದ್ಧತೆ ನಡೆಸಿದೆ. ಪಕ್ಷಾತೀತವಾಗಿ, ದೇಶಾತೀತವಾಗಿ ನೇಪಾಳಕ್ಕೆ ಸಹಾಯ ಮಾಡಲು ಜನರು ಮುಂದೆ ಬರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಧರ್ಮ ದ್ವೇಷವನ್ನೇ ಪ್ರಮುಖವಾಗಿಸಿಕೊಂಡವರ ಅಟ್ಟಹಾಸ ಬೇಸರ ಮೂಡಿಸುತ್ತದೆ. ನಕಾರಾತ್ಮಕ ಕಾರಣಗಳಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಜಾಲತಾಣಗಳು ನಿಧಾನಕ್ಕೆ ಜನರಿಂದ ದೂರಾಗುತ್ತಿದೆಯಾ ಎಂಬ ಸಂಶಯ ಮೂಡುವುದು ಫೇಸ್ ಬುಕ್, ಟ್ವಿಟರ್ರಿನಲ್ಲಿ ಆ್ಯಕ್ಟೀವ್ ಆಗಿರುವವರ ಸಂಖೈಯಲ್ಲಿ ಕಡಿತವಾಗುತ್ತಿದೆ ಎಂಬ ಅಧ್ಯಯನಾತ್ಮಕ ವರದಿಗಳು. 

ಕರ್ನಾಟಕ ಬಿಜೆಪಿ ವತಿಯಿಂದ ನೇಪಾಳಕ್ಕೆ ತೆರಳಿದ ವೈದ್ಯರ ತಂಡ
ಜನರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ ಎಂಬುದಕ್ಕೆ ನೇಪಾಳ ಭೂಕಂಪಕ್ಕೆ ಸಂಬಂಧಿಸಿದಂತೆಯೇ ಎರಡು ಉದಾಹರಣೆಗಳಿವೆ. thelapine.ca ಎಂಬ ಕೆನಡಾದ ಅಂತರ್ಜಾಲ ಪುಟವೊಂದು ನೇಪಾಳ ಭೂಕಂಪನ ನಡೆದ ಎರಡನೇ ದಿನ ಒಂದು ವರದಿ ಪ್ರಕಟಿಸಿತ್ತು. ಕ್ರಿಶ್ಚಿಯನ್ ಧರ್ಮಪ್ರಚಾರಕರು ನೇಪಾಳಕ್ಕೆ ಹತ್ತು ಸಾವಿರ ಬೈಬಲ್ಲುಗಳನ್ನು ಕಳುಹಿಸಿದ್ದಾರೆ. ದುರಂತದ ಸಮಯದಲ್ಲಿ ಇಂತಹ ಧರ್ಮಪ್ರಚಾರವನ್ನು ಮಾಡುತ್ತಿರುವ ಸಂಘಟನೆಯನ್ನು ನೇಪಾಳಿಗರು ಕಟು ಮಾತಿನಲ್ಲಿ ಟೀಕಿಸಿದ್ದಾರೆ. ಹಸಿದವರೇನು ಬೈಬಲ್ಲು ತಿನ್ನುತ್ತಾರೆಯೇ ಎಂದು ನೇಪಾಳದ ಪ್ರಧಾನಮಂತ್ರಿ ಕೇಳಿದ್ದಾರೆ ಎಂದು ಬರೆಯಲಾಗಿತ್ತು. ಎರಡು ದಿನಗಳ ನಂತರ ಭಾರತದ ಅನೇಕ ವೆಬ್ ಪುಟಗಳು ಇದನ್ನು ಕೆಲವು ಮಾರ್ಪಾಡುಗಳೊಂದಿಗೆ ಮರುಪ್ರಕಟಿಸಿದ್ದಾರೆ. ಅದನ್ನು ಸಾವಿರಾರು ಜನರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ! ಸತ್ಯಾಂಶವೆಂದರೆ thelapine.ca ಒಂದು ವಿಡಂಬನಾತ್ಮಕ ಅಂತರ್ಜಾಲ ಪುಟ! ಎಲ್ಲವನ್ನೂ ವಿಡಂಬನೆಯ ದೃಷ್ಟಿಯಿಂದ ಟೀಕಿಸುತ್ತಾರೆನ್ನುವ ಅಂಶ ಅದರ ಇನ್ನಿತರೆ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ! This is satirical website ಅಂತ ಅವರೇ ಹಾಕಿಕೊಂಡಿದ್ದಾರೆ. ಮೂರೊತ್ತು ಧರ್ಮ ಪ್ರಚಾರದ ಬಗ್ಗೆಯೇ ಯೋಚಿಸುವ ಕ್ರಿಶ್ಚಿಯನ್ ಮಿಷಿನರಿಗಳನ್ನು ವಿಡಂಬಿಸುವ ಉದ್ದೇಶದಿಂದ ಬರೆದ ಲೇಖನವೊಂದು ‘ಸತ್ಯ’ ಪ್ರಕಟಿಸುವ ಪುಟಗಳಲ್ಲೂ ‘ಸತ್ಯವೆಂಬಂತೆ’ ಪ್ರಕಟವಾಗಿಬಿಟ್ಟಿದ್ದು ನಿಜವಾದ ವಿಡಂಬನೆ! ಕೊನೆಗೆ thelapine.ca ಆ ಲೇಖನವನ್ನೇ ತೆಗೆದುಹಾಕಿಬಿಟ್ಟಿದೆ! ಮತ್ತೊಂದು ಉದಾಹರಣೆ ನಮ್ಮದೇ ದೇಶದ ಸಂಘಟನೆಯದ್ದು. ಬಿಜೆಪಿ ಘನತೆವೆತ್ತ ನಾಯಕ/ನಾಯಕಿಯರು ಮತ್ತದರ ಬೆಂಬಲಿಗರು, ಬೆಂಬಲಿಗ ಅಂತರ್ಜಾಲ ಪುಟಗಳು ಆರ್.ಎಸ್.ಎಸ್ಸಿನ ಬಗ್ಗೆ ಪುಂಖಾನುಪುಂಖವಾಗಿ ಸುಳ್ಳನ್ನು ಹರಿಯಬಿಡಲಾರಂಭಿಸಿಬಿಟ್ಟಾಗ ತನ್ನ ಅಧಿಕೃತ ಟ್ವಿಟರ್ ಖಾತೆಯ ಮುಖಾಂತರ ಆರ್.ಎಸ್.ಎಸ್ ಸಮಜಾಯಿಷಿ ನೀಡಬೇಕಾಯಿತು. ಇಪ್ಪತ್ತು ಸಾವಿರ ಜನರು ನೇಪಾಳಕ್ಕೆ ಹೋಗಿಲ್ಲ. ಮುಖಂಡರು ಹೋಗಿ ಅಲ್ಲಿನ ಹಿಂದೂ ಸಂಘಟನೆಯ ಜೊತೆಗೆ ಪರಿಸ್ಥಿತಿಯನ್ನು ಅಭ್ಯಸಿಸುತ್ತಿದ್ದಾರೆ, ಅದಾದ ನಂತರ ನೇಪಾಳಕ್ಕೆ ಯಾವ ರೀತಿಯ ಸಹಾಯ ಮಾಡಬಹುದೆಂದು ಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ. ಆರ್.ಎಸ್.ಎಸ್ ಆ ರೀತಿ ಹೇಳಿದ ನಂತರವೂ ನಕಲಿ ಸುದ್ದಿಗಳು ಪ್ರಚಾರ ಪಡೆಯುತ್ತಲೇ ಇರುವುದು ‘ವಿದ್ಯಾವಂತ’ ಜನರ ಜಾಣತನದ ವಿಘಟನಾ ಬುದ್ಧಿಗೆ ಉದಾಹರಣೆಯಷ್ಟೇ! ಅವರವರು ನಂಬಿದ ದೇವರುಗಳು ಅವರಿಗೆ ಒಳ್ಳೆಯ ಸದ್ಭುದ್ಧಿ ಕೊಡಲಿ!

ಏಪ್ರಿ 30, 2015

ಬೋರಾಗದ ಹಾಡು ಪಡಿಮೂಡಿದ ಬಗೆ!

hadi hadi kannada song
ಆರಂಭ ಚಿತ್ರದ ನಿರ್ದೇಶಕರಾದ ಎಸ್ ಅಭಿ ಹನಕೆರೆಯವ್ರು, ತಮ್ಮ ಚಿತ್ರದ ಹಾಡುಗಳು ಹುಟ್ಟಿದ ಬಗ್ಗೆ ಈ ಮೊದಲೇ ಹಂಚಿಕೊಂಡಿದ್ದರು. ಅವರ ಚಿತ್ರದ ಇನ್ನೊಂದು ಸೂಪರ್ ಹಿಟ್ ಆದ ಹಾಡಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಲಾಂಗು, ಮಚ್ಚು ಹಿಡಿದುಕೊಂಡು ಓಡಾಡಿದ್ದನ್ನ, ಅನಾಥ ಮಕ್ಕಳ ಸೇವೆ ಮಾಡೋದನ್ನ, ರೇಪ್ ನಡೆಯುವಾಗ, ದಿಡೀರನೆ ಬಂದು ಕಾಪಾಡುವ, ಇನ್ನೂ ಏನೇನೋ ರೀತಿಯಲ್ಲಿ ತೋರಿಸೋದು ಹೀರೋಯಿಸಂ ಅಲ್ಲ. ಎಂತಹ ಕಷ್ಟ ಪರಿಸ್ಥಿತಿಯಲ್ಲೂ, ಪಾಸಿಟಿವ್ ಅಗಿರೋದನ್ನ ತೋರಿಸೋದು ಹೀರೋಯಿಸಂ! ಎಂಬ ಸಂದರ್ಭಕ್ಕೆ ಹಾಡೊಂದು ಬೇಕು, ಅನ್ನೋದನ್ನ ಗುರುಕಿರಣ್ ಹತ್ತಿರ ಚರ್ಚಿಸಿದಾಗ, ಅವರು ಯಾವತ್ತೋ, ಇವರ ಮುಂದೆ ಗುನುಗಿದ್ದ ಹಾಡಿನ ಪಲ್ಲವಿ "ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ, ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೋದಿಲ್ಲ" ಪಾಸಿಟಿವ್ ಲೈನ್ಸ್ ಚೆನ್ನಾಗಿವೆ. ಇದನ್ನು ಕಂಪೋಸ್ ಮಾಡಿ, ಚೆನ್ನಾಗಿ ಇರುತ್ತೆ, ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ ಅಭಿಯವ್ರಿಗೆ, "ಅದು ಯಾವತ್ತೋ ಮಾಡಿದ್ದ ಹಾಡಿನ ಸಾಲು, ಯಾರಿಗೂ ಇಷ್ಟ ಆಗಿರ್ಲಿಲ್ಲ, ಹಾಗಾಗಿ ಅದನ್ನ ಡೆವೆಲಪ್ ಮಾಡಿರ್ಲಿಲ್ಲ, ಅದರಲ್ಲೂ ನಾನು ಇದುವರೆಗೂ, ಲವ್ ಹಾಡಿನ ಬಗ್ಗೆ, ಪಾಸಿಟಿವ್ ಆಗಿ ಬರೆದಿಲ್ಲ, ಅದು ಬೇಡ" ಎಂದರು. 
sandeep dance master
ನಮ್ಮ ಆರಂಭ ಚಿತ್ರದಲ್ಲಿ, ನಿಮ್ಮ ಬಿನ್ನವಾದ ಆ ಹಾಡು ಕೂಡ ಆರಂಭ ಆಗಲಿ, ಈ ಹಾಡನ್ನು ನೀವೇ ಬರೆದು, ಹಾಡಬೇಕು ಎಂದು ಪಟ್ಟು ಹಿಡಿದು ಕುಳಿತಾಗ, ಗುರುಕಿರಣ್ ಹಾಡನ್ನು ಬರೆದು, ಹಾಡಿದರು. ಗುರುಕಿರಣ್ ಮೊದಲ ಬಾರಿಗೆ ಬರೆದಂತಹ ಲವ್ ಹಾಡು ಇದಾಗಿದೆ.
ಈ ಹಾಡನ್ನು, ತುಂಬಾ ಸ್ಟೈಲಿಶ್ ಆಗಿ, ಮತ್ತು ಕಲರ್ ಫುಲ್ ಆಗಿ ಚಿತ್ರೀಕರಿಸುವ ದೃಷ್ಟಿಯಿಂದ, ಈ ಹಾಡಿನ ಡ್ಯಾನ್ಸ್ ಮಾಸ್ಟರ್ ಸಂದೀಪ್ ರವರನ್ನ ಬೇಟಿ ಮಾಡಿ, ಸಹ ನೃತ್ಯಗಾರ್ತಿಯರ ಆಯ್ಕೆ ಮಾಡಿ, ಅವ್ರಿಗೆಲ್ಲ ಪ್ರ್ಯಾಕ್ಟೀಸ್ ಮಾಡಿಸಿ, ಶೂಟಿಂಗ್ ಸ್ಪಾಟ್ಗೆ ಕರೆದೊಯ್ದುರು. ಇದಕ್ಕೆ ಬೇಕಾದ ರೇಡಿಯೋ ಪ್ರತಿಕೃತಿಗಳನ್ನು ಆರೋಗ್ಯ ಸ್ವಾಮಿಯವ್ರು ಅದ್ಬುತವಾಗಿ ಮಾಡಿಕೊಟ್ಟಿದ್ದರು. ಹಾಡಿನಲ್ಲಿ ಎಲ್ಲ ನೃತ್ಯಗಾರ್ತಿಯರ ಕೈಯಲ್ಲಿ ಎಲ್‌ಸಿಡಿ ಟೀವೀ ಹಿಡಿಸಿ, ಅದರಲ್ಲಿ ನಾಯಕಿಯ ಚಿತ್ರ ಬರುವಂತೆ ಚಿತ್ರಿಸುವ ಉಪಾಯ ಹೊಳೆದಿದ್ದ ಅಭಿಯವ್ರಿಗೆ, ನಿರ್ಮಾಪಕರ ಸಹಕಾರ ಸಿಗಲಿಲ್ಲ. ಆ ಬೇಸರದಲ್ಲಿ ಇದ್ದಾಗ, ಅದಕ್ಕೆ ತಕ್ಷಣ ಅವ್ರಿಗೆ ಹೊಳೆದಿದ್ದು, ಬಿಸಿಲಲ್ಲೂ ಹೊಳೆಯುತ್ತಿದ್ದ, ನೃತ್ಯಗಾರ್ತಿಯರ ಬಿಳಿ ಸೊಂಟದ ಮೇಲೇನೇ, ಟಿವಿ ಚಾನೆಲ್ಲಿನ ಲೋಗೋ ಬಿಡಿಸಿ ತೋರಿಸೋದು ಅಂತಾ!
aarogya swamy
ಅದಕ್ಕೆ ನೃತ್ಯಗಾರ್ತಿಯರು ಒಪ್ಪಲಿಲ್ಲ "ಚಿತ್ರ ಮಾಡುವುದು ನಟ ನಟಿಯರಿಗೆ ಸಂಭಾವನೆ ಕೊಡೋಕೆ ಅಲ್ಲ, ಜನಗಳಿಗೆ ಮನರಂಜನೆ ನೀಡುವುದಕ್ಕೆ, ಜೊತೆಗೆ ಸಾಧ್ಯವಾದರೆ ಒಂದಷ್ಟು ಒಳ್ಳೇ ಸಂದೇಶ ತಲುಪಿಸೋದಿಕ್ಕೆ" ಎಂದು ಅಭಿಯವ್ರು ಹೇಳಿ ಒಪ್ಪಿಸಿ, ಆರೋಗ್ಯ ಸ್ವಾಮಿ ಎಲ್ಲರ ಸೊಂಟದ ಮೇಲೆ ಟಿವಿ ಚ್ಯಾನೆಲ್ ಗಳ ಲೋಗೋ ಚಿತ್ತಾರ ಬಿಡಿಸಿದರು, ನಂತರ ಎಲ್ಲರೂ ಸಂತೋಷವಾಗಿ ಹಾಡಿನ ಚಿತ್ರೀಕರಣಕ್ಕೆ ಸಹಕರಿಸಿದರು ಹಾಡಿನ ಕೊನೆಯಲ್ಲಿ ಬಾಟಲ್ ಹೊಡೆಯುವ ದೃಶ್ಯದಲ್ಲಿ ಕೆಲ ನೃತ್ಯಗಾರ್ತಿಯರಿಗೆ ಗಾಯಗಳು ಸಹ ಆಯಿತಂತೆ.
ಕೊನೆಗೆ ಹಾಡಿನ ವೀಡಿಯೋ ನೋಡಿ ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ ತುಂಬಾ ಖುಷಿಪಟ್ಟ ಅಭಿಯವರು ತಮ್ಮ ಅನುಭವ ಮೆಲುಕು ಹಾಕಿದ್ದಾರೆ.
ಗುರುಕಿರಣ್ ತಮ್ಮ ಶೋಗಳಲ್ಲಿ ಈ ಹಾಡನ್ನು ಹಾಡುವುದರ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಹೊಸಬರೊಂದಿಗೆ ಗುರುಕಿರಣ್ ಹೆಚ್ಚು ಉತ್ಸಾಹದಿಂದ, ಒಂಚೂರು ಬೇಧವಿಲ್ಲದೆ, ಸಂಗೀತ ಸಂಯೋಜನೆ ಮಾಡಿ ಕೊಟ್ಟಿದ್ದಕ್ಕೆ ತುಂಬಾ ಖುಷಿಯಿದೆ ಎಂದು ಅಭಿ ಹೇಳುತ್ತಾರೆ.
"ಹೊಸಬರೊಂದಿಗೆ ನಾನು ಹೊಸಬನಾಗಿ ಕೆಲಸ ಮಾಡಲು ಇಚ್ಚಿಸುವುದರಿಂದ, ಹೊಸತನ ತುಂಬಾ ಖುಷಿ ಕೊಡುತ್ತೆ"ಅಂತಾ ಗುರುಕಿರಣ್ ಸಹ ಕಣ್ಣು ಮಿಟುಕಿಸಿ ಹೇಳುತ್ತಾರೆ..!
ಹಾಡಿನ ವೀಡಿಯೋ ನೋಡಿದ ಯಾರೋ ಪತ್ರಿಕಾ ಸಿಬ್ಬಂದಿ,"ಏನ್ರೀ ಟೀವೀ ಚ್ಯಾನೆಲ್ನವರನ್ನ, ಸೊಂಟದ ಮೇಲೆ ಕೂರಿಸಿದಿರಾ?" ಎಂದು ಛೇಡಿಸಿದ್ದನ್ನ ನೆನಪು ಮಾಡಿಕೊಂಡ್ರು. ಹಾಡನ್ನು ನೋಡಿದವ್ರೆಲ್ಲ ತಮ್ಮ ಮನೆಯಲ್ಲಿದ್ದ ಹಳೆಯ ರೇಡಿಯೋಗಳನ್ನು ನೆನಪು ಮಾಡಿಕೊಳ್ಳೋದು ಗ್ಯಾರೆಂಟೀ....ನೀವು ಸಾಂಗ್ ನೋಡಿಲ್ಲ ಅಂದ್ರೆ, ಒಂದ್ಸಲ ನೋಡ್ಕೊಂಡು ಅಭಿಪ್ರಾಯ ತಿಳಿಸಿ. ಚಿತ್ರ ಡಿ.ಟಿ.ಎಸ್ ಮುಗಿಸಿ ಸೆನ್ಸಾರ್ ಬೋರ್ಡಿನ ಮುಂದೆ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.
ಹಾಡು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಏಪ್ರಿ 28, 2015

ಸರಳ ಸೊಬಗಿನ ಮಲೆನಾಡಿನಲ್ಲೊಂದು ‘ಮಂಗನ ಬ್ಯಾಟೆ’

mangana byate kalkuli vittal hegde
Dr Ashok K R
ವಿದ್ಯಾರ್ಥಿಯಾಗಿದ್ದ ದಿನಗಳಿಂದಲೇ ಪುಸ್ತಕ ಓದುವ ಹುಚ್ಚು. ಪುಸ್ತಕದ ನಿರೂಪಣೆ, ವಿಚಾರ ಮೆಚ್ಚುಗೆಯಾಗಿಬಿಟ್ಟರೆ ಕಾಲೇಜು – ಕ್ಲಾಸುಗಳೆಲ್ಲವಕ್ಕೂ ಚಕ್ಕರ್! ಪೋಲಿ ತಿರುಗಿದ ವಿದ್ಯಾರ್ಥಿ ದಿನಗಳನ್ನು ಕಳೆದು ಕೆಲಸ ಸೇರಿ ಜವಾಬ್ದಾರಿಯುತ ಪ್ರಜೆಯಾಗಿಬಿಟ್ಟ ಮೇಲೆ ‘ಕೆಲಸ’ಗಳನ್ನು ಮುಗಿಸಿದ ತರುವಾಯವಷ್ಟೇ ಪುಸ್ತಕಗಳನ್ನು ಓದುವ ಸೌಕರ್ಯ. ಒಂದೇ ಏಟಿಗೆ ಓದಿಬಿಡಬೇಕು ಎನ್ನಿಸುವ ಪುಸ್ತಕಗಳನ್ನು ಇತ್ತೀಚಿನ ದಿನಗಳಲ್ಲಿ ಓದಿದ್ದು ಕಡಿಮೆಯೇ. ಬೇಟೆಯ ಬಗೆಗಿನ ಪುಸ್ತಕಗಳು ಯಾವತ್ತಿಗೂ ಆಕರ್ಷಕ. ಜಗದೀಶ್ ಕೊಪ್ಪ ಬರೆದಿರುವ ಜಿಮ್ ಕಾರ್ಬೆಟ್ ಬಗೆಗಿನ ಪುಸ್ತಕ ವಿದ್ಯಾರ್ಥಿ ದೆಸೆಯಲ್ಲಿ ಓದಿದ್ದ ಬೇಟೆಯ ಕಥೆಗಳನ್ನು ನೆನಪಿಸಿತು. ಅದೇ ಗುಂಗಿನಲ್ಲಿ ಲಂಕೇಶರ ಎಂಭತ್ತನೇ ವರುಷದ ವಾರ್ಷಿಕೋತ್ಸವಕ್ಕೆ ಹೋದಾಗ ಕಣ್ಣಿಗೆ ಬಿದ್ದಿದ್ದು ಕಲ್ಕುಳಿ ವಿಠಲ್ ಹೆಗಡೆ ಬರೆದಿರುವ ‘ಮಂಗನ ಬ್ಯಾಟೆ’. ಮೈಸೂರಿನ ಬಳಿಯ ಚಾಮಲಾಪುರದಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಬೇಕೆಂದು ಸರಕಾರ ನಿರ್ಧರಿಸಿದಾಗ ಅಲ್ಲಿನ ರೈತರು ಬಹುದೊಡ್ಡ ಚಳುವಳಿ ನಡೆಸಿದರು. ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಚಳುವಳಿಗೆ ಸಂಬಂಧಪಟ್ಟ ಕರಪತ್ರಗಳನ್ನು ಹಂಚುತ್ತಿದ್ದಾಗ ಕಲ್ಕುಳಿ ವಿಠಲ್ ಹೆಗಡೆ ಮತ್ತು ಗೌರಿ ಲಂಕೇಶರನ್ನು ಮೊದಲ ಬಾರಿಗೆ ಕಂಡಿದ್ದೆ. ಅದಾಗಲೇ ಕಲ್ಕುಳಿ ವಿಠಲ್ ಹೆಗಡೆ ಕುದುರೆಮುಖದಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡಬಾರದು ಎಂದು ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಹೋರಾಡುತ್ತಿದ್ದರು. ಇದೇ ಹೋರಾಟದಲ್ಲಿ ನಕ್ಸಲರೂ ಸಕ್ರಿಯರಾಗಿದ್ದರು. ಕಲ್ಕುಳಿ ವಿಠಲ್ ಹೆಗಡೆ ಕೂಡ ನಕ್ಸಲ್ ಎಂದು ಹಣೆಪಟ್ಟಿ ಕಟ್ಟುವ ಕೆಲಸ ಜೋರಾಗಿಯೇ ನಡೆದಿತ್ತು. ಇಂತಹ ಕಲ್ಕುಳಿ ವಿಠಲ್ ಹೆಗಡೆಯವರ ಬೇಟೆಯ ಬಗೆಗಿನ ಪುಸ್ತಕವನ್ನು ಕೊಳ್ಳದೆ ಇರಲಾದೀತೇ! ಕೊಂಡು ತಂದು ಓದಲಾರಂಭಿಸಿದ ಮೇಲೆ ‘ನಾನು ಲೇಖಕನಲ್ಲ’ ಎಂದು ವಿನಯದಿಂದಲೇ ಹೇಳಿಕೊಂಡಿರುವ ವಿಠಲ್ ಹೆಗಡೆಯವರ ಲೇಖನಿಯ ಶಕ್ತಿಯ ಅರಿವಾಯಿತು. ದಿನದ ಕೆಲಸಗಳನ್ನು ಮುಗಿಸಿ ಬೇಟೆಯಾಡುವುದೇ ಮೂರು ದಿನದ ಕೆಲಸವಾಯಿತು!

ಹೆಸರಿಗಿದು ಕಾದಂಬರಿಯಾದರೂ ಕಾದಂಬರಿಯ ಲಕ್ಷಣಗಳಿಲ್ಲ. ಮಲೆನಾಡಿನ ಪರಿಸರ ಕಥನ ಎಂಬ ಟ್ಯಾಗನ್ನು ಪುಸ್ತಕದ ಮೇಲೆ ಕಾಣುತ್ತೀವಾದರೂ ನಿರ್ದಿಷ್ಟ ಕಥನಕ್ರಮವಿಲ್ಲ. ಎಡಪಂಥೀಯ ರಾಜಕೀಯ ನಿಲುವುಗಳು ಪಾತ್ರಗಳ ಮೂಲಕ, ಲೇಖಕರ ಸ್ವಯಂ ಮಾತಿನ ಮೂಲಕ ಅಲ್ಲಲ್ಲಿ ಇಣುಕುತ್ತಾದರೂ ಇದು ರಾಜಕಾರಣದ ಪುಸ್ತಕವಲ್ಲ. ಬೇಟೆಯ ಕುರಿತಾದ ಪುಸ್ತಕವೆಂದರೂ ಇಡೀ 272 ಪುಟಗಳಲ್ಲಿ ಬೇಟೆಯ ಚಿತ್ರಣವಿಲ್ಲ. ಈ ಪುಸ್ತಕದ ತುಂಬ ಹಾಸಿಹೊಕ್ಕಿರುವುದು ಒಂದಿಡೀ ಭೂಪ್ರದೇಶದ ಪರಂಪರೆ, ಅಲ್ಲಿಯ ಸಾಂಸ್ಕೃತಿಕ ಸೊಬಗು ಮತ್ತಾ ಸೊಬಗು, ಪರಂಪರೆಯಲ್ಲಿ ನಾನಾ ಕಾರಣಗಳಿಗಾಗಿ ಆಗುತ್ತಿರುವ ನಿರಂತರ ಬದಲಾವಣೆಗಳು. ಬದಲಾವಣೆ ಸಹಜವಾದರೂ ಬದಲಾವಣೆಯ ವೇಗ ಸಹಜವಾಗಿಲ್ಲ. ಅತಿವೇಗದ ಬದಲಾವಣೆ ಪರಿಸರಕ್ಕಾಗಲೀ, ಆ ಪರಿಸರಕ್ಕೆ ಹೊಂದಿಕೊಂಡೇ ಬದುಕುವ ಜನರಿಗಾಗಲೀ ಒಳ್ಳೆಯದನ್ನು ಮಾಡಲಾರದು. 

ಪುಸ್ತಕದ ಪ್ರಾರಂಭವಾಗುವುದೇ ಮಂಗನ ಬ್ಯಾಟೆ ಮತ್ತು ಮಂಗ ತಿನ್ನುವವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಹೋದ ಬಗ್ಗೆ ವಿಷಾದ ವ್ಯಕ್ತಪಡಿಸುವ ಬ್ರಾಹ್ಮಣ ರೈತನಿಂದ. ನಗರದಲ್ಲಿ ಮಂಗಗಳ ಹಾವಳಿ ಹೆಚ್ಚಾಯಿತೆನ್ನುವ ಕಾರಣದಿಂದ ವಿಶೇಷ ಬೋನಿನ ಸಹಾಯದಿಂದ ಮಂಗಗಳನ್ನು ಹಿಡಿದು ಹಳ್ಳಿಗಳಿಗೆ, ಹಳ್ಳಿಯ ಸುತ್ತಲಿನ ಕಾಡುಗಳಿಗೆ ಸರಕಾರ ಬಿಟ್ಟುಬಿಡುತ್ತಾರೆ. ಮಂಗನನ್ನು ನಿಯಂತ್ರಿಸುವ ಯಾವ ಉಪಾಯಗಳೂ ಸಿಗದೆ ‘ಕಾಡಿನ ಮಧ್ಯದ ಹಳ್ಳಿ ತೊರೆಯಿರಿ’ ಎಂದ ಸರಕಾರಕ್ಕೆ ಸೆಡ್ಡು ಹೊಡೆದ ಜನರು, ಬಂದೂಕಿಗೆ ಎದೆಯೊಡ್ಡಿದ ಜನರು ಮಂಗನ ಕಾಟಕ್ಕೆ ಹೆದರಿ ಊರು ತೊರೆಯುವ ನಿಸ್ಸಹಾಯಕತೆಯೊಂದಿಗೆ ಮಂಗನ ಬ್ಯಾಟೆ ಪ್ರಾರಂಭವಾಗುತ್ತದೆ. ನಗರದ ಮಂಗಗಳನ್ನು ಹಿಡಿಯಲು ವಿಶೇಷ ಬೋನು ತಯಾರಿಸಿ ಹಿಡಿದ ‘ಸಿದ್ಧ’ ಮಂಗನ ಬ್ಯಾಟೆಯ ನಾಯಕ, ಸರಕಾರದ ನಿರ್ಧಾರಗಳ ಕಾರಣದಿಂದ ಮಂಗನ ಬ್ಯಾಟೆಯ ಖಳನಾಯಕನೂ ‘ಸಿದ್ಧ’ನೇ! ಸಿದ್ಧನ ಹುಟ್ಟು, ಬೆಳವಣಿಗೆ, ಜೀತ, ಬೇಟೆಯ ಚಾತುರ್ಯ, ಅಪರೂಪದ ಔಷಧೀಯ ಗುಣಗಳುಳ್ಳ ಗಿಡಗಳನ್ನು ಗುರುತಿಸುವ ಬಗೆ, ದೈತ್ಯಾಕಾರದ ಮರಗಳನ್ನು ಚಕಚಕನೆ ಏರುವ ಚಾಣಾಕ್ಷತೆ – ಹೀಗೆ ಇಡೀ ಪುಸ್ತಕ ಸಿದ್ಧನ ಮೂಲಕ ಮಲೆನಾಡಿನ ಕಳೆದುಹೋಗಿರಬಹುದಾದ ಪರಿಸರವನ್ನು ನಮಗೆ ಪರಿಚಯಿಸುತ್ತ ಸಾಗುತ್ತದೆ. ಮಲೆನಾಡಿನ ಗಂಧಗಾಳಿ ಇಲ್ಲದ ಬಯಲುಸೀಮೆಯವರನ್ನೂ ತನ್ಮಯವಾಗಿಸುವಷ್ಟರ ಮಟ್ಟಿಗೆ ಕಲ್ಕುಳಿ ವಿಠಲ್ ಹೆಗಡೆಯವರ ಲೇಖನಿ ಹರಿತವಾಗಿದೆ, ಸರಳವಾಗಿದೆ. ಲೇಖಕರ ರಾಜಕೀಯ ನಿಲುವುಗಳು ಒಪ್ಪಿತವಾಗದಿದ್ದವರಿಗೂ ಪುಸ್ತಕದ ಓದು ಆಸಕ್ತಿದಾಯಕವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲೆನಾಡಿನ ಬಗ್ಗೆ, ಬೇಟೆಯ ಬಗ್ಗೆ ಬಂದಿರುವ ಪುಸ್ತಕಗಳಲ್ಲಿ ಉತ್ಕ್ರಷ್ಟವಾದ ಪುಸ್ತಕವಿದೆಂದು ಅನುಮಾನವಿಲ್ಲದೆ ಹೇಳಬಹುದು. ಕನ್ನಡ ಪುಸ್ತಕ ಲೋಕದಲ್ಲೊಂದು ಹೊಸ ಬಗೆಯ ಪುಸ್ತಕವಿದು. ರೈತರ ಬಗೆಗೆ ಕಾರ್ಮಿಕರ ಬಗೆಗೆ ಅನೇಕಾನೇಕ ಪುಸ್ತಕಗಳು, ಕಾದಂಬರಿಗಳು ಬಂದಿವೆ. ಜಾಗತೀಕರಣ, ಬಂಡವಾಳಶಾಹಿತನ ರೈತರ – ಕಾರ್ಮಿಕರ ಜೀವನದಲ್ಲಿ ಉಂಟುಮಾಡುವ ಪಲ್ಲಟಗಳ ಬಗ್ಗೆ ಪುಸ್ತಕಗಳಿವೆ. ಆದರೆ ತತ್ವ ಸಿದ್ಧಾಂತಗಳ ಯಾವ ವರ್ಗಕ್ಕೂ ಸೇರದ ಆದಿವಾಸಿಗಳು – ಬುಡಕಟ್ಟು ಜನಾಂಗಗಳ ಜೀವನ ಪದ್ಧತಿಯ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಇರುವ ಪುಸ್ತಕಗಳು ತುಂಬ ಕಡಿಮೆ. ಒಂದು ನಿರ್ಧಾರವನ್ನು ಇಡೀ ರಾಜ್ಯಕ್ಕೆ/ ದೇಶಕ್ಕೆ ಏಕರೂಪವಾಗಿ ಹೇರುವ ಸರಕಾರ ಹೇಗೆಲ್ಲ ಗೊಂದಲಗಳನ್ನು ಸೃಷ್ಟಿಸುತ್ತದೆ ಎನ್ನುವುದಕ್ಕೆ ಈ ಪುಸ್ತಕದಲ್ಲಿ ಹತ್ತಲವು ಉದಾಹರಣೆಗಳು ಸಿಕ್ಕುತ್ತವೆ. ಸರಕಾರದ, ಊರ ಮುಖ್ಯಸ್ಥರ ಯಾವ ನಿರ್ಧಾರಕ್ಕೂ ಬೇಸರ ಪಟ್ಟುಕೊಳ್ಳದೆ ಪ್ರತಿಯೊಂದರಲ್ಲೂ ಆಶಾವಾದವನ್ನೇ ಕಾಣುವ ಯಾವ ಕೆಲಸವನ್ನಾದರೂ ಮಾಡುವ ‘ಸಿದ್ಧ’ ದೌರ್ಜನ್ಯವನ್ನು ಸಹಿಸುವ ಮೌನಿಯಾಗಿಯೂ ಕಾಣಿಸುತ್ತಾನೆ, ತನ್ನದೇ ರೀತಿಯಲ್ಲಿ ಪ್ರತಿಭಟಿಸುವ ಕ್ರಾಂತಿಕಾರಿಯಾಗಿಯೂ ಕಾಣಿಸುತ್ತಾನೆ.

ಬ್ಯಾಟೆಯ ಒಂದು ಪುಟ್ಟ ಭಾಗ ಹಿಂಗ್ಯಾಕೆ ಓದುಗರಿಗಾಗಿ

“ಜಗದ್ಗುರುಗಳಿಗೆ ಸರ್ಕಾರ ಇಷ್ಟೆಲ್ಲ ಹೆದರುತ್ತದೆ ಎಂದು ಅಲ್ಲಿಯತನಕ ಸಿದ್ಧನಿಗೆ ಗೊತ್ತೇ ಇರಲಿಲ್ಲ. ಪ್ಯಾಟೆ ತುಂಬಾ ಮಂಗಗಳು ಅದೆಷ್ಟೋ ಜನರಿಗೆ ಏನೇನೋ ಅನಾಹುತ ಮಾಡಿದರೂ ಯಾರೂ ಕ್ಯಾರೆ ಅಂದಿರಲಿಲ್ಲ. ಆದರೆ ಮಂಗಗಳು ಮಠದ ಗುರುಗಳ ಮೇಲೇ ಹಾರಿದವು ಎಂದಮಾತ್ರಕ್ಕೆ ಸರಕಾರದ ಇಷ್ಟೆಲ್ಲ ಅಧಿಕಾರಿಗಳು ಸೇರಿದ್ದು ಸಿದ್ಧನಲ್ಲಿ ಸೋಜಿಗ ಉಂಟುಮಾಡಿತ್ತು. ಆದರೂ ಮಂಗಗಳ ದೆಸೆಯಿಂದ ತನಗೆ ಒಲಿದ ಭಾಗ್ಯದಿಂದ ಆತ ಒಳಗೊಳಗೇ ಸಂತೋಷಗೊಂಡಿದ್ದ. ಸಿದ್ಧನಿಗೆ ಪುರಸಭೆ ಅಧ್ಯಕ್ಷರು ಎಲ್ಲರೂ ಮಾತನಾಡುವಂತೆ ಒತ್ತಾಯಿಸಿದರು. 

ಮಾತಿಗೆ ಎದ್ದುನಿಂತ ಸಿದ್ಧ, ‘ನಾ ಹೇಳೋದೂ ಎಂತದ್ದೂ ಇಲ್ಲ. ನಮ್ಮ ವಡೇರು ಅದಾರೆ. ಅವರೇ ಎಲ್ಲಾ ಹೇಳ್ತಾರೆ’ ಅಂದ. ಆಗ ವಡೇರು, ‘ಮಾತಾಡಿ ಮಾತಾಡಿ. ನಿಮಗೆ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿ’ ಎಂದು ಮೊದಲ ಬಾರಿಗೆ ಸಿದ್ಧನಿಗೆ ಮರ್ಯಾದೆ ಕೊಟ್ಟು ಹೇಳಿದರು.

ಮೊದಲೆಲ್ಲ ಸಿದ್ಧನ ಹತ್ತಿರ ವಡೇರು ಕೂರುವುದು ಕನಸಿನ ಮಾತು. ಸಿದ್ಧನಿಗೆ ಏನಾದರೂ ಹೇಳಬೇಕಿದ್ರೆ ಹೆಚ್ಚೆಂದರೆ ಗೋವಿಂದನ ಹತ್ತಿರ ಹೇಳುತ್ತಿದ್ದರು. ಸಿದ್ಧನ ಹತ್ತಿರ ವಡೇರು ಮಾತಾಡಿದ್ದು ಸಿದ್ಧನಿಗೆ ನೆನಪಿಲ್ಲ. ಇವತ್ತು ಮಂಗಗಳ ದೆಸೆಯಿಂದ ಸಿದ್ಧ ಸಿದ್ಧಯ್ಯ ಆಗಿದ್ದ. ಸಿದ್ಧಯ್ಯ ಅಂತಲೇ ವಡೇರು ಮರ್ಯಾದೆ ಕೊಟ್ಟು ಹೇಳಿದ್ರು. ಸಿದ್ಧನನ್ನು ಗೋವಿಂದ ಹುರಿದುಂಬಿಸಿದ. ಸಿದ್ಧ ಧೈರ್ಯ ಮಾಡಿ ಮಾತಿಗೆ ಶುರುಮಾಡಿದ.

ಆಗ ಆ ಸಭಾಂಗಣದ ಮೂಲೆಯಲ್ಲಿ ನಿಂತಿದ್ದ ಫಾರೆಸ್ಟ್ ಗಾರ್ಡ್ ಸಿದ್ಧನ ಕಣ್ಣಿಗೆ ಬಿದ್ದ. ಅವನನ್ನು ಉದ್ದೇಶಿಸಿ ‘ಮಂಗನ ಬ್ಯಾಟೆ ಮಾಡಬ್ಯಾಡಿ ಅಂತ ನಮಗೆಲ್ಲ ತಾಕೀತು ಮಾಡಿದ್ರಿ. ಕಾಡಿನಲ್ಲಿದ್ದ ಮಂಗಗಳನ್ನು ತಂದು ಪ್ಯಾಟೇಲಿ ಬಿಟ್ರಿ. ಪ್ಯಾಟೆ ಮನುಷ್ಯರು ಮಂಗಗಳಿಗೆ ತಾವು ತಿನ್ನೋದನ್ನು ಕೊಟ್ರು. ಮನುಷ್ಯರ ಬುದ್ಧಿಯನ್ನು ಮಂಗಗಳಿಗೆ ಕಲ್ಸಿದ್ರು. ಅದ್ಕೆ ನೋಡಿ ಅವು ಇಷ್ಟೆಲ್ಲಾ ಜೋರಾಗಿವೆ. ಮಂಗಗಳನ್ನು ಮಠಕ್ಕೂ ಸೇರಿಸಿದ್ರಿ. ಮಠಕ್ಕೆ ಸೇರಿದ ಮ್ಯಾಲೆ ಅವು ಇನ್ನೂ ಕೊಬ್ಬಿ ಹೋಗ್ಯವೆ. ಅದ್ಕೆ ನೋಡಿ ಇವತ್ತು ಕಾಡಿನ ಮಂಗಗಳ ದೆಸೆಯಿಂದ ಊರಾಗ್ಯಾರು ಇರಂಗಿಲ್ಲ. ಹಂಗೆ ಬಂದದೆ ಕಾಲ’ ಎಂದು ಗಾರ್ಡ್ ಗೆ ತಿರುಗು ಬಾಣ ಬಿಟ್ಟ."
ಮಂಗನ ಬ್ಯಾಟೆ – ಕಲ್ಕುಳಿ ವಿಠಲ್ ಹೆಗಡೆ.
ಲಂಕೇಶ್ ಪ್ರಕಾಶನ, ಬೆಲೆ – ರೂ 200/-
ಸಪ್ನ ಬುಕ್ ಹೌಸಿನಿಂದ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ

ಏಪ್ರಿ 25, 2015

ಅಸಹಾಯಕ ಆತ್ಮಗಳು - ಮುಳ್ಳಿನ ಪೊದೆಯೊಳಗೆ ಹಾಡುಹಕ್ಕಿ

ಕು.ಸ.ಮಧುಸೂದನ್
ಮದುವೆ ಮಾಡಿಕೊಂಡು ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ನನ್ನ ಮೊದಲನೆಯ ಅಕ್ಕ ಬೇರೆ ಜಾತಿಯವನೊಡನೆ ಓಡಿಹೋಗಿ ನಮ್ಮನ್ನು ನರಕಕ್ಕೆ ತಳ್ಳಿಬಿಟ್ಟಿದ್ದಳು. ಮನೆಯಲ್ಲಿ ಅಷ್ಟು ಬಡತನವಿದ್ದರೂ ಅಪ್ಪ ಅಮ್ಮನಿಗೆ ಜಾತಿಯ ಭೂತ ಮೆಟ್ಟಿಕೊಂಡಿತ್ತು. ದೊಡ್ಡ ಹುಡುಗಿ ಓಡಿಹೋದಮೇಲೆ ಉಳಿದ ಹುಡುಗಿಯರನ್ನು ಯಾರು ಮದುವೆಯಾಗ್ತಾರೆ ಅನ್ನೊದನ್ನು ತಲೆಲಿ ತುಂಬಿಕೊಂಡ ಅಪ್ಪ ಅಮ್ಮ ಹುಡುಗಿಯರು ಮೈನೆರೀತ ಇದ್ದ ಹಾಗೆ ಮದ್ವೆ ಮಾಡಿ ಕೊಡೋಕೆ ಶುರು ಮಾಡಿದರು. ಐದನೆಯವಳು ಮದುವೆಯಾದಾಗ ನನಗೆ ಹನ್ನೆರಡು ವರ್ಷವಾಗಿತ್ತು. ಅದೇನು ಪುಣ್ಯವೋ ಗೊತ್ತಿಲ್ಲ ನಾನು ಮೈನೆರೆದಿದ್ದೇ ಹದಿನೈದು ತುಂಬಿದ ಮೇಲೆ. ಹಾಗಾಗಿ ಉಳಿದವರೆಲ್ಲ ಹದಿಮೂರು ಹದಿನಾಲ್ಕಕ್ಕೆ ಮದುವೆಯಾದರೆ ನನಗೆ ಮಾತ್ರ ಹದಿನಾರನೆ ವಯಸ್ಸಿಗೆ ಮದುವೆ ಆಯ್ತು. ನಮ್ಮೂರಿನವರು ತುಂಬಾ ಜನ ಕರ್ನಾಟಕದಲ್ಲಿ ಇದ್ದರು. ಆಗೀಗ ಅವರುಗಳು ಬಂದು ಹೋಗ್ತಾ ಇದ್ದರು. ಅಂತವರಲ್ಲಿ ಸರವಣ ಅಂತ ಒಬ್ಬ ಅಪ್ಪನಿಗೆ ಆತ್ಮೀಯನಾಗಿದ್ದ. ಊರಿಗೆ ಬಂದಾಗಲೆಲ್ಲ. ಅಪ್ಪನಿಗೆ ಕುಡಿಸೋದು ತಿನ್ನಿಸೋದು ಮಾಡೋನು. ಆ ವರ್ಷ ಅವನು ಮುರುಗ ಅಂತ ಒಬ್ಬನನ್ನು ಕರೆದುಕೊಂಡು ಬಂದು ಇವನಿಗೆ ನಿನ್ನ ಮಗಳನ್ನು ಕೊಡು. ಹುಡುಗ ಗಾರೆ ಕೆಲಸದಲ್ಲಿ ಚೆನ್ನಾಗಿ ದುಡಿತಾ ಇದಾನೆ ಅಂತ ಹೇಳಿ ಅವನಿಗೆ ನನ್ನ ತೋರಿಸಿದ. ಆ ಹುಡುಗ ನನಗಿರೋದು ಅಮ್ಮ ಒಬ್ಬಳೆ ಅವಳಿಗೆ ಸರಿಯಾಗಿ ಕಣ್ಣು ಕಾಣಿಸಲ್ಲ,ಹಾಗಾಗಿ ನಾನು ಮತ್ತೆಮತ್ತೆ ಇಲ್ಲಿಗೆ ಬರೋಕಾಗಲ್ಲ. ನೀವು ಹು ಅಂದ್ರೆ ಈಗಲೆ ಮದ್ವೆ ಮಾಡಿಕೊಂಡು ಹುಡುಗೀನಾ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದಕ್ಕೆ ಅಪ್ಪ ತಲೆಯಾಡಿಸಿಬಿಟ್ಟ. ಊರಲ್ಲೇ ಇದ್ದ ಮಾರಿಯಮ್ಮನ ದೇವಸ್ಥಾನದಲ್ಲಿ ಅರಿಶಿನ ದಾರ ಕಟ್ಟಿಸಿಬಿಟ್ಟ. ಸರಿ ಅಂತ ಅವಸರಕ್ಕೆ ಶಾಸ್ತ್ರ ಮುಗಿಸಿದವರು ಒಂದೇ ವಾರಕ್ಕೆ ನನ್ನ ಅವನ ಜೊತೆ ಕಳಿಸಿಬಿಟ್ಟರು. ನನ್ನ ಹಣೇಬರಹ ನೋಡಿ ಬೇರೆ ರಾಜ್ಯಕ್ಕೆ, ಭಾಷೆ ಬರದ ಊರಿಗೆ ಮಗಳನ್ನು ಕೊಡ್ತಾ ಇದೀವಿ ಅಂತ ಯೋಚನೆ ಮಾಡಿ ಯಾರಾದರು ಒಬ್ಬರು ನನ್ನ ಜೊತೆ ಬಿಡೋಕಾದರು ಬರಬಹುದಿತ್ತು. ಊಹು ಯಾರೂ ಬರಲೇ ಇಲ್ಲ. ಗಂಡನ ಜೊತೆ ನಾನೊಬ್ಬಳೇ ಕರ್ನಾಟಕಕ್ಕೆ ಬಂದೆ. ಯಾವತ್ತೂ ನಾನು ಅಷ್ಟು ದೂರ ಪ್ರಯಾಣ ಮಾಡಿದೋಳಲ್ಲ. ಅದೂ ಅಲ್ಲದೆ ಕನ್ನಡ ಅನ್ನೋಭಾಷೇನಾ ನಾನು ಕೇಳಿರಲೇ ಇಲ್ಲ.

ಸರಿ, ಇಲ್ಲಿ ಬಂದಮೇಲೆ ನೋಡಿದರೆ ಊರಲ್ಲಿನ ನಮ್ಮ ಮನೇನೇ ವಾಸಿ ಅನ್ನಿಸ್ತು. ಯಾಕಂದರೆ ಒಂದು ಸಣ್ಣ ಗುಡಿಸಿಲಿನಂತಿದ್ದ ಜಾಗದಲ್ಲಿ ನಾನು ನನ್ನ ಗಂಡ ಅತ್ತೆ ಜೀವನ ಮಾಡಬೇಕಾಗಿತ್ತು. ಮನೆಲಿದ್ದೋವು ಒಂದೆರಡು ಅಲ್ಯುಮಿನಿಯಂ ಪಾತ್ರೆಗಳಷ್ಟೆ. ಸರಿ ಹೇಗೋ ಹೊಂದಿಕೊಂಡು ಅವುಗಳಲ್ಲೆ ಸಂಸಾರ ಮಾಡತೊಡಗಿದೆ. ಬಂದ ಒಂದು ವಾರದಲ್ಲೇ ಅಕ್ಕಪಕ್ಕದ ಒಂದಷ್ಟು ಹೆಂಗಸರು ಪರಿಚಯವಾದರು. ಕನ್ನಡ ಮಾತಾಡೋದನ್ನು ಕಲಿಯತೊಡಗಿದೆ. ನಮ್ಮ ಬೀದಿಯಲ್ಲಿದ್ದೋರೆಲ್ಲ ನಮ್ಮಂತಹ ಗುಡಿಸಲಿನವರೇ ಆಗಿದ್ದರು ಆ ಹಳ್ಳಿಯಲ್ಲಿ ನಮ್ಮ ಬಿಡಾರವನ್ನು ತಮಿಳು ಕ್ಯಾಂಪ್ ಅಂತ ಕರೀತಾ ಇದ್ದರು. ಹೀಗೇ ಆರೇಳು ತಿಂಗಳು ಸಂಸಾರ ಮಾಡಿದೆ. ಅಷ್ಟು ತಿಂಗಳಲ್ಲಿ ನನಗೆ ಗೊತ್ತಾಗಿದ್ದೆಂದರೆ ನನ್ನ ಗಂಡ ನಾನು ಅಂದುಕೊಂಡಷ್ಟೇನು ಒಳ್ಳೆಯವನಾಗಿರಲಿಲ್ಲ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕೋನು. ಮನೆಗೆ ಸರಿಯಾಗಿ ಸಾಮಾನು ತಂದು ಹಾಕ್ತಾ ಇರಲಿಲ್ಲ. ಜೊತೆಗೆ ಪಕ್ಕದ ಹಳ್ಳಿಯಲ್ಲಿ ಯಾವಳನ್ನೊ ಇಟ್ಟುಕೊಂಡಿದ್ದ. ಅಂತಾದ್ರಲ್ಲಿಯೇ ನಾನು ಬಸುರಿಯಾದೆ. ನನಗೆ ಏಳು ತಿಂಗಳು ತುಂಬಿದ ಮೇಲೆ ತಮಿಳುನಾಡಿಂದ ಅಪ್ಪ ಅಮ್ಮ ಬಂದು ಕರೆದುಕೊಂಡು ಹೋದರು ಹೆರಿಗೆ ಆದ ಮೂರೇ ತಿಂಗಳಿಗೆ ಗಂಡ ವಾಪಾಸು ಕರೆದುಕೊಂಡುಬಂದುಬಿಟ್ಟ. ನಾನೆಷ್ಟೇ ಪ್ರಯತ್ನ ಪಟ್ಟರು ಅವನು ಬದಲಾಗಲೇ ಇಲ್ಲ.ನಾನು ಕೂಲಿ ಗೀಲಿ ಮಾಡೋಣ ಅಂದ್ರೆ ನನಗೇನು ಬರ್ತಾ ಇರಲಿಲ್ಲ. ಕಪ್ಪಗಿದ್ದರು ನೋಡೋಕೆ ಲಕ್ಷಣವಾಗಿದ್ದ ನನ್ನ ಹೊರಗೆ ಕಳಿಸೋಕು ಅವನು ಒಪ್ತಾ ಇರಲಿಲ್ಲ. ಹೀಗೇ ಸಂಸಾರ ನಡೀತಾ ಇರಬೇಕಾದರೆ ಒಂದು ದಿನ ಅವನು ಕೆಲಸಕ್ಕೆ ಹೋಗಬೇಕಾದರೆ ಲಾರಿಯೊಂದು ಗುದ್ದಿ ಸತ್ತು ಹೋಗಿಬಿಟ್ಟ. ಊರಿಗೆ ಟೆಲಿಗ್ರಾಂ ಕೊಟ್ಟರೂ ಅದು ತಲುಪಿ ಅಪ್ಪ ಅಮ್ಮ ಬರೋದ್ರೊಳಗೆ ಅವನು ಮಣ್ಣಾಗಿದ್ದ. ಬಂದವರು ವಾಪಸು ನನ್ನ ಕರೆದುಕೊಂಡುಹೋಗ್ತಾರೆ ಅಂತ ಇದ್ದೆ. ಆದರೆ ಅದ್ಯಾಕೊ ಅವರು ಅಲ್ಲಿ ನಮಗೆ ನಮ್ಮದೇ ಕಷ್ಟಗಳಿವೆ. ಅದೂ ಅಲ್ಲದೆ ನಿಮ್ಮ ಅತ್ತೇನಾ ಒಬ್ಬಳೇ ಬಿಟ್ಟು ಹೋದರೆ ಜನ ಏನಂತಾರೆ. ಅವಳನ್ನು ನೋಡಿಕೊಂಡು ಇಲ್ಲೇ ಇರು ಅಂತ ಹೇಳಿ ತಿಥಿ ಮಗಿಸಿ ಹೊರಟು ಹೋದರು. ಬೆಳಿಗ್ಗೆ ಎದ್ದರೆ ತಿನ್ನೋಕೆನು ಅಂತ ಹುಡುಕೊ ಪರಿಸ್ಥಿತೀಲಿ ನಾವಿದ್ದ್ವಿ. ಇಂತಹ ಸ್ಥಿತಿಯಲ್ಲಿ ಬಿಟ್ಟುಹೋದ ಅಪ್ಪ ಅಮ್ಮ ಸತ್ತು ಹೋದರು ಅಂತ ಅವತ್ತೆ ಅಂದುಕೊಂಡು ಬಿಟ್ಟೆ. ಮನೆಲಿದ್ದ ಅಷ್ಟಿಷ್ಟು ಸಾಮಾನಲ್ಲಿ ಅಡುಗೆ ಮಾಡ್ತಾ ಒಂದು ವಾರ ನೂಕಿದೆ.ಮನೆಯಲ್ಲಿ ಐದು ಸಾವಿರ ರೂಪಾಯಿಗಳ ಒಂದು ಇನ್ಷೂರೆನ್ಸ್ ಬಾಂಡ್ ಇತ್ತು. ಓದಿದವರಿಗೆ ಅದನ್ನು ತೋರಿಸಿದಾಗ ನನ್ನ ಗಂಡ ಅದನ್ನು ಮದುವೆಗೆ ಮುಂಚೇನೆ ಮಾಡಿಸಿ ಅವರ ಅಮ್ಮನನ್ನು ನಾಮಿನಿ ಮಾಡಿದ್ದ ಅಂತ ಗೊತ್ತಾಯಿತು.. ಸರಿ ಇನ್ನು ಅದನ್ನು ತಗೋಳೇಕೆ ಅಲೆದಾಟ ಶುರುವಾಯಿತು. ಅಕ್ಸಿಡೆಂಟ್ ಕೇಸ್ ಆಗಿದ್ರು ಗುದ್ದಿದ ಲಾರಿ ಯಾವುದು ಅಂತ ಗೊತ್ತಾಗಲೇ ಇಲ್ಲ. ಹಾಗಾಗಿ ಅದರಿಂದಾನು ಏನು ದುಡ್ಡು ಬರಲಿಲ್ಲ. ಸರಿ ಇನ್ಷುರೆನ್ಸ್ ದುಡ್ಡನ್ನ ಹೇಗೆ ತೆಗೆಯೋದು ಅದು ಗೊತ್ತಾಗದೇ ಇದ್ದಾಗ ಪಕ್ಕದ ಹಳ್ಳಿಯಲ್ಲಿ ನಮ್ಮ ತಮಿಳಿನವನೇ ಒಬ್ಬ ಸಣ್ಣ ರಾಜಕಾರಣಿ ಸುಬ್ರಮಣಿ ಅಂತ ಇದ್ದ. ಸರಿ ಅವನ ಹತ್ತಿರ ಹೋದೆ. ಅವನು ಅದನ್ನು ತೆಗೆಯೋಕೆ ನಿನ್ನ ಗಂಡ ಸತ್ತಿದ್ದರ ಸರ್ಟಿಫಿಕೇಟ್ ತಗೋಬೇಕು ಅಂದ. ಅದನ್ನು ಎಲ್ಲಿ ತಗಿಯೋದು ಅನ್ನೋದು ನನಗೆ ಗೊತ್ತಿರಲಿಲ್ಲ. ಅದಕ್ಕವನು ನಿನ್ನ ಗಂಡ ಸತ್ತಿದ್ದು ತಾಲ್ಲೂಕು ಕೇಂದ್ರದ ಹತ್ತಿರದಲ್ಲಿ. ಅಲ್ಲಿನ ಕಚೇರಿಗೆ ಹೋಗಿ ತಗೋಬೇಕು. ಅದಕೆಲ್ಲ ದುಡ್ಡು ಕೊಡಬೇಕಾಗುತ್ತೆ ಏನು ಮಾಡ್ತೀಯಾ ಅಂದ. ನನಗೇನಾದರು ಗೊತ್ತಿದ್ದರೆ ತಾನೇ ಉತ್ತರ ಕೊಡೋದು. ಸುಮ್ಮನಿದ್ದೆ. ಕೊನೆಗವನೇ ನೋಡು ಏನು ಮಾಡ್ತೀಯಾಂತ ದುಡ್ಡಿಲ್ಲದೆ ಯಾವ ಕೆಲಸಾನು ಆಗಲ್ಲ. ನೀನು ದುಡ್ಡಿಗೆ ಹೂ ಅಂದರೆ ಹೋಗಬಹುದು ಅಂದ. ಅದಕ್ಕೆ ನಾನು ಅಣ್ಣಾ ಇನ್ಷುರೆನ್ಸ್ ದುಡ್ಡು ಕೈಗೆ ಬಂದಕೂಡಲೇ ಅದರಲ್ಲೆ ನೀವು ತಗೊಳ್ಳಿವರಂತೆ ಈಗ ಏನಾದರು ಮಾಡಿ ಅಂದೆ. ಅದಕ್ಕವನು ಅರ್ದ ಮನಸಿಂದ ಒಪ್ಪಿದಂತೆ ನಾಟಕ ಮಾಡಿ, ಆಯ್ತು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಊರಿನ ಗೇಟಿನ ಹತ್ತಿರ ಬಾ. ಅಲ್ಲಿಗೆ ನಾನು ಬರ್ತೀನಿ,ನನ್ನ ಗಾಡೀಲೇ ಹೋಗೋಣ ಅಂದ. ವಿದಿಯಿಲ್ಲದೆ ಆಯ್ತು ಅಂತ ವಾಪಾಸು ಬಂದೆ. ಮಾರನೆ ದಿನ ಗೇಟಿಗೆ ಹೋಗಿ ಅವನ ಸ್ಕೂಟರಿನಲ್ಲಿ ತಾಲ್ಲೂಕಿಗೆ ಹೋದ್ವಿ. ಅಲ್ಲಿ ಆಫೀಸಿನ ಹೊರಗೆ ನನ್ನ ಕೂರಿಸಿ ಒಳಗೆ ಹೋದವನು ಮದ್ಯಾಹ್ನ ಬಂದ. ಬಂದವನು ಅವರಿಗಿನ್ನೂ ಪೋಲಿಸ್ ರಿಪೋರ್ಟ ಬಂದಿಲ್ವಂತೆ. ಅದು ಬಂದ ಕೂಡಲೇ ಕೊಡ್ತಾರಂತೆ. ಅದು ಪೋಲೀಸ್ ಕೇಸ್ ಆಗಿರೋದ್ರಿಂದ ಸ್ವಲ್ಪ ಕಷ್ಟವಾಗುತ್ತೆ. ಈಗ ನಾವು ಸ್ಟೇಷನ್ನಿಗೆ ಹೋಗಿ ಬರಬೇಕು ಅಂದು ನನ್ನ ಕರೆದುಕೊಂಡು ಸ್ಟೇಷನ್ನಿಗೆ ಹೋದ. ಅಲ್ಲಿಯೂ ನನ್ನ ಹೊರಗೆ ನಿಲ್ಲಿಸಿ ಹೆಣ್ಣುಮಕ್ಕಳು ಸ್ಟೇಷನ್ನಿಗೆಲ್ಲ ಬರಬಾರದು. ನಾನೇ ಒಳಗೆ ಹೋಗಿ ಬರ್ತೀನಿ ಅಂದು ಒಳಗೆ ಹೋದವನು ಒಂದು ಗಂಟೆಬಿಟ್ಟು ಹೊರಗೆ ಬಂದ. ಊಹೂ ಇವತ್ತು ಇನ್ಸಫೆಕ್ಟರ್ ಇಲ್ಲ ನಾಳೆ ಬೆಳಿಗ್ಗೆ ನೋಡೋಣ ಅಂದ್ರು. ನಾವು ವಾಪಾಸ್ ಊರಿಗೆ ಹೋಗಿ ನಾಳೆ ಬೆಳಿಗ್ಗೆ ಬರೋಣ ಅಂದ. ಏನು ಗೊತ್ತಾಗದೆ ಅವನ ಮಾತಿಗೆ ತಲೆದೂಗಿದೆ. ಬೆಳಿಗ್ಗೆ ಕುಡಿದ ಅಂಬಲಿ ಖಾಲಿಯಾಗಿತ್ತು. ಅದು ಅರ್ಥವಾದವನಂತೆ ಬಾ ಮೊದಲು ಏನಾದರು ತಿನ್ನೊಣವಂತೆ ಅಂತ ಒಂದು ಹೋಟೆಲ್ಲಿಗೆ ಕರೆದುಕೊಂಡುಹೋಗಿ ಊಟಕ್ಕೆ ಹೇಳಿದ. ತಟ್ಟೆಯ ಮುಂದೆ ಕೂತರೂ ಊಟ ಸರಿಯಾಗಿ ಸೇರಲಿಲ್ಲ. ಮನೆಯಲ್ಲಿ ಏನೂ ಮಾಡಿರಲಿಲ್ಲ. ಪಾಪ ಹಸಿದುಕೊಂಡು ಕೂತಿರೋ ಅತ್ತೆಯ ನೆನಪಾಯ್ತು. ಮಗನಿಗೆ ಪಕ್ಕದಮನೆಯವರೇನಾದರು ಕೊಟ್ಟಿದ್ದರೆ ಪುಣ್ಯ ಅಂದುಕೊಂಡು ಅಳು ಬಂತು. ಅವನೆಷ್ಟೇ ಬಲವಂತ ಮಾಡಿದರು ತಿನ್ನೋಕಾಗಲಿಲ್ಲ ಅರ್ದ ಊಟಬಿಟ್ಟು ಕೈ ತೊಳೆದು ಎದ್ದು ಬಿಟ್ಟೆ. ನೋಡು ಎಷ್ಟು ದಿನಾಂತ ಹೀಗೆ ಊಟ ಬಿಡ್ತೀಯಾ? ನಿನ್ನ ಗಂಡನ ದುಡ್ಡು ಎಷ್ಟು ದಿನಕ್ಕಾಗುತ್ತೆ. ನೀನು ಹೇಗಾದರು ಮಾಡಿಬದುಕೊದು ಕಲೀಬೇಕು ಅಂತ ಉಪದೇಶ ಮಾಡಿದ. ಅವನು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಸರಿ ಸಂಜೆ ಹೊತ್ತಿಗೆ ಮನೆಗೆ ಬಂದಿವಿ. 

ಹೀಗೇ ಮೂರು ದಿನ ಅಲೆದರೂ ಬೇಕಾದ ಡೆತ್ ಸರ್ಟಿಫಿಕೆಟ್ ಸಿಗಲೇ ಇಲ್ಲ. ಮನೆಯಲ್ಲಿ ನೋಡಿದರೆ ಕಡುಕಷ್ಟ. ಅಕ್ಕಪಕ್ಕದ ಮನೆಗಳಲ್ಲಿ ದುಡ್ಡು ಬಂದಾಕ್ಷಣ ಕೊಡ್ತೀನಿ ಅಂತ ಹೇಳಿ ಒಂದಿಷ್ಟು ಅಕ್ಕಿ ರಾಗಿ ಸಾಲ ತೆಗೆದುಕೊಂಡು ಹೇಗೋ ನಿಬಾಯಿಸ್ತಾ ಇದ್ದೆ. ನಾಲ್ಕನೇ ದಿನ ಸಂಜೆ ಸುಬ್ರಮಣಿ ತಾನೆ ಮನೆ ಹತ್ತಿರ ಬಂದು ನಾಳೆ ಸಂಜೆ ಐದುಗಂಟೆಗೆ ಹೋಗೋಣ. ಹೇಗಾದ್ರು ಮಾಡಿ ಸರ್ಟಿಫಿಕೇಟ್ ಕೊಡಿಸ್ತೀನಿ ಅಂದ. ಮಾರನೆ ಸಂಜೆ ನಾವು ಆಫೀಸಿಗೆ ಹೋದಾಗ ಅದಾಗಲೆ ಐದು ಗಂಟೆಯಾಗಿ ಹೋಗಿತ್ತು. ಮನೆಗೆ ಹೊರಡುತಿದ್ದ ಗುಮಾಸ್ತ ಎಲ್ಲ ರೆಡಿಯಾಗಿದೆ ಸಾಹೇಬರ ಸೈನ್ ಒಂದೇ ಬಾಕಿಯಿರೋದು. ಬೆಳಿಗ್ಗೆ ಹತ್ತುಗಂಟೆಗೆಲ್ಲ ಬಂದುಬಿಡಿ ಅಂದ. ಸರಿ ಇನ್ನೆನು ಮಾಡೋದು ಅಂತ ಅಲ್ಲಿಂದ ಹೊರಟ್ವಿ. ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತ ಸುಬ್ರಮಣಿ ನನ್ನ ಸ್ಕೂಟರ್ ಸ್ವಲ್ಪ ಸರಿ ಮಾಡಿಸಬೇಕು, ಬಿಟ್ಟರೆ ಹೋಗೋಕೆ ನಿನಗೆ ಬಸ್ಸಿಲ್ಲ. ಆದರಿಂದ ಹೇಗಿದ್ರೂ ಬೆಳಿಗ್ಗೆ ಮತ್ತೆ ಬರಬೇಕು. ಇವತ್ತು ಇಲ್ಲೇ ಉಳಿದುಕೊಂಡು ಬೆಳಿಗ್ಗೆ ಸರ್ಟಿಪೀಕೇಟ್ ತಗೊಂಡೇ ಹೋಗಿಬಿಡೋಣ ಅಂದ. ನಾನು ಅಣ್ಣಾ ಅತ್ತೆಗೆ ಹೇಳಿಲ್ಲ, ಜೊತೆಗೆ ಮಗೂನು ನಾನಿಲ್ಲದಿದ್ದರೆ ಅಳ್ತಾನೆ ಅಂದೆ ಅದಕ್ಕವನು ನೋಡು ಈಗ ಹೇಗಾದರು ಮಾಡಿ ವಾಪಾಸು ಹೋದರೂ ನಾಳೆ ಬೆಳಿಗ್ಗೆ ಗಾಡಿ ರಿಪೇರಿಯಾಗದೆ ಬರೋಕ್ಕಾಗಲ್ಲ ನೀನೊಬ್ಬಳೆ ಬಂದು ತಗೊಳ್ಳೊ ಹಾಗಿದ್ದರೆ ಹೇಳು ಅಂದ. ನಾನೊಬ್ಬಳೇ ಬಂದು ತಗೊಳ್ಳೋದು ಕಷ್ಟದ ಕೆಲಸ ಅನಿಸಿ ಆಯ್ತು ಅಂದು ಬಿಟ್ಟೆ. ಸರಿ ನಾವು ಕಾಫಿ ಕುಡಿಯುತ್ತಿದ್ದ ಹೋಟೆಲ್ಲಿನಲ್ಲೇ ಒಂದು ರೂಮು ಮಾಡಿ, ನನ್ನ ಅಲ್ಲಿ ಬಿಟ್ಟು ಗಾಡಿ ರಿಪೇರಿಗೆ ಬಿಟ್ಟು ಬರ್ತೀನಿ ಅಂತ ಹೋಗಿ ರಾತ್ರಿ ಎಂಟು ಗಂಟೆಗೆ ಊಟ ತಗೊಂಡು ಬಂದ. ಇದ್ದ ಒಂದು ಸಣ್ಣ ಮಂಚ ಅವನಿಗೆ ಬಿಟ್ಟು ನಾನು ರೂಮಿನ ಇನ್ನೊಂದು ಮೂಲೆಯಲ್ಲಿ ಬೆಡ್ ಶೀಟು ಹಾಸಿಕೊಂಡು ಮಲಗಿದೆ. ಲೈಟು ಆರಿಸಿ ಅವನೂ ಮಲಗಿದ ಸುಮಾರು ಒಂದು ಗಂಟೆಯ ನಂತರ ಅವನು ತೀರಾ ಹತ್ತಿರ ಬಂದು ನನ್ನ ಕರೆದಂತಾಗಿ ಕಣ್ಣು ಬಿಟ್ಟರೆ ಅವನು ನನ್ನ ಪಕ್ಕದಲ್ಲೇ ಬಂದು ಮಲಗಿದ್ದ. ನಾನು ಮೇಲೇಳಲು ಹೋದರು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡು ನೋಡು ನಿನಗೆ ಯಾರೂ ದಿಕ್ಕಿಲ್ಲ. ಪರ್ಮನೆಂಟಾಗ ನಾನು ನೋಡಿಕೊಳ್ಳ್ತೀನಿ. ಸುಮ್ಮನಿರು ಅಂತೆಲ್ಲ ಹೇಳಿದ ನಾನು ಬಹಳಷ್ಟು ಪ್ರಯತ್ನ ಮಾಡಿದರು ಅವನ ಹಿಡಿತದಿಂದ ಹೊರಗೆ ಬರಲಾಗಲೇ ಇಲ್ಲ. ಗಂಡ ಸತ್ತ ಒಂದೆ ತಿಂಗಳೊಳಗೆ ಬೇರೆ ಗಂಡಸಿನ ಜೊತೆ ಮಲಗಿ ಬಿಟ್ಟಿದ್ದೆ. ಬೆಳಿಗ್ಗೆ ಎದ್ದಾಗ ಮನಸ್ಸಿಗೆ ಕಷ್ಟವಾದರು ರಾತ್ರಿಯೆಲ್ಲ ಅವನು ನನ್ನ ಕುಟುಂಬದ ಜವಾಬ್ದಾರಿಯನ್ನು ತಗೊಂಡು ನಿನ್ನ ಮಗನನ್ನು ನನ್ನ ಮಗನ ತರಾ ಸಾಕ್ತೀನಿ ಅಂತೆಲ್ಲ ಹೇಳಿದ್ದನ್ನು ಕೇಳಿ ಮನಸ್ಸಿಗೆ ಸಮಾಧಾನ ಮಾಡಿಕೊಂಡೆ. 

ಆಮೆಲಿನ್ನೇನು ಸರ್ಟಿಫಿಕೇಟು ತಗೊಂಡು ಮನೆಗೆ ಬಂದ್ವಿ. ಆಮೇಲೆ ಒಂದೇ ವಾರದಲ್ಲಿ ದುಡ್ಡೂ ಬಂತು ಆ ದುಡ್ಡಲ್ಲಿ ಮನೆಗೆ ಬೇಕಾದ ಸಾಮಾನು ತಗೊಂಡು ಗಂಡನ ಒಂದೆರಡು ಸಾಲ ತೀರಿಸಿದೆ. ಈ ಮದ್ಯೆ ಒಂದೆರಡು ಬಾರಿ ಸುಬ್ರಮಣಿಯೊಂದಿಗೆ ತಾಲ್ಲೂಕಿಗೆ ಹೋಗಿ ಬರಬೇಕಾಯಿತು. ಆರು ತಿಂಗಳಾಗುವಷ್ಟರಲ್ಲಿ ಮನೆಯ ಸಾಮಾನೆಲ್ಲ ಖಾಲಿಯಾಗಿ ಊಟಕ್ಕಿಲ್ಲದಂತಾಯಿತು. ಒಂದು ರಾತ್ರಿ ಅವನ ಜೊತೆಯಿದ್ದಾಗ ಈ ವಿಷಯ ಹೇಳಿ ಏನು ಮಾಡೋದು ಮುಂದೆ? ಅಂದೆ.ಅದಕ್ಕವನು ಒಂದಿಷ್ಟು ದುಡ್ಡು ಕೊಟ್ಟು ಸದ್ಯಕ್ಕಿದನ್ನು ಇಟ್ಟುಕೊ ಆಮೆಲೆ ಏನಾದರು ಮಾಡೋಣ ಅಂದ.

ಆಮೇಲೊಂದಷ್ಟು ದಿನಗಳಾದ ಮೇಲೆ ಮನೆಗೆ ಬಂದ ಸುಬ್ರಮಣಿ ನಾಳೆ ಬೆಳಿಗ್ಗೆ ರೆಡಿಯಾಗಿ ಗೇಟಿಗೆ ಬಾ ಸಿಟಿಗೆ ಹೋಗಿ ಬರೋಣ ಸ್ವಲ್ಪ ಕೆಲಸವಿದೆ ಅಂದ. ಮಾರನೆ ದಿನ ಅವನ ಜೊತೆ ಸಿಟಿಗೆ ಹೋದೆ. ನನ್ನನ್ನು ಒಂದು ದೊಡ್ಡ ಹೋಟೇಲಿನ ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟು ಈಗ ಬರ್ತೀನಿ ಅಂತ ಹೊರಗೆ ಹೋಗಿಬಿಟ್ಟ.ಒಂದಷ್ಟು ಹೊತ್ತಾದ ಮೇಲೆ ಇನ್ಯಾರದೊ ಜೊತೆಗೆ ಬಂದು ಸಾಯಂಕಾಲದ ತನಕ ಇವರ ಹತ್ತಿರ ಇರು ಆಮೇಲೆ ನಾನು ಬರ್ತೀನಿ ಅಂತ ಹೊರಟು ಹೋದ. ಆಗವನ ತಂತ್ರ ಗೊತ್ತಾಗಲಿಲ್ಲ.ಬಂದವನು ನಾನು ಅಷ್ಟು ದುಡ್ಡು ಕೊಟ್ಟೀದಿನಿ, ಸುಬ್ರಮಣಿ ಬೇರಲ್ಲ ನಾನು ಬೇರಲ್ಲ ಅಂತ ನನ್ನ ವಿರೋದದ ನಡುವೆಯೂ ನನ್ನ ಉಪಯೋಗಿಸಿಕೊಂಡುಬಿಟ್ಟ. ಸಾಯಂಕಾಲದ ಹೊತ್ತಿಗೆ ರೂಮಿಗೆ ಸುಬ್ರಮಣಿ ಬಂದಾಗ ಅವನು ಮಾಡಿದ್ದಕ್ಕೆ ಜಗಳವಾಡಿದೆ,ಅತ್ತೆ, ಕಾಲಿಡಿದು ಹೀಗ್ಯಾಕೆ ಮಾಡಿದೆ ಅಂತ ಗೋಳಿಟ್ಟೆ.ಅದಕ್ಕವನು ನಿನಗೊಂದು ದಾರಿ ತೋರಿಸಿದೀನಿ. ನೋಡು ಎರಡೆ ಗಂಟೆಗೆ ಎಷ್ಟು ದುಡ್ಡು ಕೊಟ್ಟಿದಾನೆ ಅಂತೇಳಿ ದುಡ್ಡನ್ನು ನನ್ನ ಹತ್ತಿರ ಎಸೆದು ಹೊರಗೆ ಹೋಗಿಬಿಟ್ಟ. ಪಾಪಿ ಸೂಳೇಮಗ ನಾನು ಸಾಕ್ತೀನಿ ಅಂತೇಳಿ ನನ್ನ ಜೊತೆ ಮಲಗಿ ಈಗ ತಲೆಹಿಡುಕನ ತರಾ ಇನ್ನೊಬ್ಬರ ಜೊತೆ ಮಲಗಿಸಿಬಿಟ್ಟ ಅನ್ನೋ ಕೋಪದಲ್ಲಿ ನಾನು ಸಾಯಬೇಕು ಅಂತ ತೀರ್ಮಾನ ಮಾಡಿ ಇನ್ನೇನು ಅದೇ ರೂಮಿನ ಫ್ಯಾನಿಗೆ ಸೀರೆ ಕಟ್ಟಿ ನೇಣು ಹಾಕಿಕೊಳ್ಬೆಕು ಅನ್ನುವಷ್ಟರಲ್ಲಿ ರೂಂಬಾಯ್ ಬಂದು ಬಾಗಿಲು ತಟ್ಟಿಬಿಟ್ಟ. ಒಳಗೆ ಬಂದವನು ಫ್ಯಾನಿಗೆ ನೇತು ಬಿದ್ದಿದ್ದ ಸೀರೆ ನೋಡಿ ಗಾಬರಿಯಿಂದ ಮ್ಯಾನೇಜರ್‍ನನ್ನು ಕರೆದುಕೊಂಡು ಬಂದ. ಒಳಗೆ ಬಂದ ಮ್ಯಾನೇಜರ್ ತಾಳ್ಮೆಯಿಂದ ನನ್ನ ಕತೆ ಕೇಳಿಸಿಕೊಂಡು ನಾವಿಂತದ್ದಕ್ಕೆಲ್ಲ ರೂಂ ಕೊಡಲ್ಲ ಏನೋ ಪರಿಚಯದವರು ಅಂತ ರೂಂ ಕೊಟ್ಟು ತಪ್ಪು ಮಾಡಿಬಿಟ್ಟೆ ಅಂದು ನನಗೆ ಹೋಗುವಂತೆ ಹೇಳಿದ. ಹೊರಗೆ ಬಂದರೆ ಸುಬ್ರಮಣಿ ಕಾಯ್ತಾ ಇದ್ದ. ವಿದಿಯಿಲ್ಲದೆ ಅವನ ಜೊತೆ ಹಳ್ಳಿಗೆ ಬಂದೆ. ಅವನು ಕೊಟ್ಟ ದುಡ್ಡಲ್ಲಿ ಒಂದು ತಿಂಗಳಿಗಾಗುವಷ್ಟು ಸಾಮಾನು ತಂದುಹಾಕಿಕೊಂಡೆ. ಒಂದಷ್ಟು ದಿನಗಳ ನಂತರ ಮುಂದೇನು ಅನ್ನೊ ಪ್ರಶ್ನೆ ಎದುರಾಯ್ತು. ಮತ್ತೆ ಸಾಮಾನು ಖಾಲಿಯಾಗುತ್ತೆ ಉಪವಾಸ ಇರಬೇಕಾಗುತ್ತೆ ಏನು ಮಾಡೋದು ಅಂತ ಯೋಚಿಸ್ತಾ ಇರಬೇಕಾದರೆ ಒಂದು ಮದ್ಯಾಹ್ನ ಸುಬ್ರಮಣಿ ಮನೆಗೆ ಬಂದ. ನೋಡು ನಾನೇನು ಬೇಕೂ ಅಂತ ಆ ತರ ಮಾಡಿಲ್ಲ. ನನ್ನ ಆದಾಯನು ಕಡಿಮೆಯಾಗಿದೆ. ಊರತುಂಬಾ ಕಂಟ್ರಾಕ್ಟರುಗಳಾಗಿ ಕೆಲಸ ಮುಂಚಿನ ಹಾಗೆ ಸಿಕ್ತಿಲ್ಲ. ಜೊತೆಗೆ ಹೋದಸರಿ ಪಂಚಾಯಿತಿ ಎಲೆಕ್ಷನ್ನಿಗೆ ಖರ್ಚು ಮಾಡಿದ ಸಾಲ ಹಾಗೇ ಇದೆ. ಗೆದ್ದಿದರೆ ಏನಾದರು ಮಾಡಬಹುದಿತ್ತು. ಸೋತಮೇಲೆ ದುಡ್ಡೆಲ್ಲಿಂದ ಬರುತ್ತೆ ಹೇಳು ಅಂತೆಲ್ಲ ರಮಿಸಿದ. ಅವನ ಮಾತು ಕೇಳಿ ನನಗೂ ಬೇಜಾರಾಯಿತು. ಸರಿ ಈಗ ಮುಂದಕ್ಕೆ ನಾನೇನು ಮಾಡಲಿ ಅಂದೆ. ಅದಕ್ಕವನು ನೀನೇನು ಯೋಚಿಸಬೇಡ ಸಿಟೀಲಿ ಒಂದಷ್ಟು ಜನ ಫ್ರೆಂಡ್ಸ್ ಇದಾರೆ ಅವರಿಗೆ ಪರಿಚಯಿಸಿ ಕೊಡ್ತೀನಿ.ನೀನು ಸ್ವಲ್ಪ ಮನಸ್ಸು ಗಟ್ಟಿಮಾಡಿಕೊ ಎಲ್ಲ ಸರಿ ಹೋಗುತ್ತೆ ಅಂತ ಹೇಳಿ ನಾಳೆ ಗೇಟಿಗೆ ಬಾ ಅಂತ ಹೊರಟು ಹೋದ.

ಬೆಳಿಗ್ಗೆ ಹೋಗೋದೋ ಬೇಡವೊ ಅಂತ ರಾತ್ರಿಯೆಲ್ಲ ಯೋಚನೆ ಮಾಡಿದೆ. ಆದರೆ ಹೋಗದೇ ಇದ್ದರೆ ವಿಧಿಯಿಲ್ಲ ಅನಿಸ್ತು. ಬೆಳಿಗ್ಗೆ ಧೈರ್ಯ ಮಾಡಿ ಅವನ ಜೊತೆ ಸಿಟಿಗೆ ಹೋದೆ. ಅಲ್ಲೊಂದು ಮನೆಗೆ ಕರೆದುಕೊಂಡು ಹೋಗಿ ಒಬ್ಬ ಮದ್ಯವಯಸ್ಸಿನ ನರಪೇತಲ ಮನುಷ್ಯನನ್ನು ಪರಿಚಯ ಮಾಡಿಸಿದ. ಆ ನರಪೇತಲ ಒಬ್ಬ ತಲೆಹಿಡುಕನಾಗಿದ್ದ. ಪರಿಚಯ ಮಾಡಿಸಿದ ಸುಬ್ರಮಣಿ ನಾಳೆಯಿಂದ ಇವಳು ಬರ್ತಾಳೆ. ನಮ್ಮ ಖಾಸಾ ಹುಡುಗಿ. ಬೆಳಿಗ್ಗೆ ಹತ್ತು ಗಂಟೆಗೆ ಬಂದರೆ ಸಾಯಂಕಾಲ ಐದು ಗಂಟೆಯೊಳಗೆ ಮನೆಗೆ ವಾಪಸಾಗಬೇಕು ಆ ಥರಾ ವ್ಯವಸ್ಥೆ ಮಾಡಿಕೊಡಬೇಕು ಅಂತ ಹೇಳಿದ. ನಾನೇನೋ ದೊಡ್ಡ ಅಫೀಸಿಗೆ ಹೋಗ್ತಾ ಇದೀನೇನೋ ಅನ್ನೋ ತರಾ ಟೈಮೆಲ್ಲಾ ಫಿಕ್ಸ್ ಮಾಡಿದ. ಹು ಅಂದ ಪಿಂಪ್ ನಾಳೆ ಬಸ್ಸು ಇಳಿದು ಸೀದಾ ಮನೆಗೆ ಬಂದು ಬಿಡು ದಾರಿ ಗೊತ್ತಾಗುತ್ತಲ್ಲ ಅಂದ. 

ವಾಪಾಸು ಹೋಗೋವಾಗ ಸುಬ್ರಮಣಿ ನಾನು ಅವಾಗವಾಗ ಬರ್ತಾ ಇರ್ತೀನಿ, ಏನೂ ಭಯ ಪಡಬೇಡ ಅಂತೇಳಿ ಸಮಾಧಾನ ಮಾಡಿದ.

ಮಾರನೆ ದಿನದಿಂದ ಬೆಳಿಗ್ಗೆ ಎಂಟುಗಂಟೆಗೆ ಗೇಟಿಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹಿಡಿದು ಹತ್ತುಗಂಟೆಗೆಲ್ಲ ಅವನ ಮನೆ ತಲುಪ್ತಾ ಇದ್ದೆ. ಅಲ್ಲಿಂದ ಅವನು ಯಾವುದಾದರು ಹೋಟೆಲಿಗೊ ಇಲ್ಲ ಯಾರದಾದರು ಮನೆಗೊ ಕರೆದುಕೊಂಡು ಹೋಗಿ ಬಿಡ್ತಾ ಇದ್ದ. ದುಡ್ಡಿನ ವ್ಯವಹಾರವನ್ನೆಲ್ಲ ಅವನೇ ಮಾಡ್ತಾ ಇದ್ದ. ಮೊದಮೊದಲು ನಾನೂ ಸಹ ಗಿರಾಕಿಗಳು ಇವನಿಗೆ ಎಷ್ಟು ಕೊಡ್ತಾರೆ ಇವನು ಅದರಲ್ಲಿ ನನಗೆಷ್ಟು ಕೊಡ್ತಾನೆ ಅನ್ನೊದರ ಬಗ್ಗೆ ತಲೆ ಕೆಡಸಿಕೊಂಡಿರಲಿಲ್ಲ. ಆದರೆ ಅಮೇಲೆ ಗಿರಾಕಿಗಳು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ ಅಂದಾಗಲೇ ಅವನು ಜಾಸ್ತಿ ತಗೊಂಡು ಕಡಿಮೆ ಕೊಡ್ತಿದ್ದ ಅಂತ ಗೊತ್ತಾಗಿದ್ದು. ಹಳ್ಳೀಲಿ ಎಲ್ಲರಿಗು ಸಿಟಿಯಲ್ಲಿ ಯಾರೊ ಶ್ರೀಮಂತರ ಮನೆಗೆಲಸ ಮಾಡಿಕೊಂಡಿದೀನಿ ಅಂತ ಸುಳ್ಳು ಹೇಳಿದ್ದೆ. ಹೀಗೇ ಎರಡು ವರ್ಷ ಕಳೆಯಿತು. ಈ ಮದ್ಯೆ ಅತ್ತೆ ಸತ್ತು ಹೋದಳು. ಆಗಲು ಅಪ್ಪ ಅಮ್ಮನಿಗೆ ನಾನು ವಿಷಯ ತಿಳಿಸಲಿಲ್ಲ. ಸಾವಿನ ವಿಷಯ ಗೊತ್ತಾಗಿ ಎಷ್ಟೋ ದಿನಗಳಾದ ಮೇಲೆ ಬಂದೋರಿಗೆ ನಾನು ನೆಮ್ಮದಿಯಾಗಿ ಜೀವನ ಮಾಡೋದು ನೋಡಿ ಆಶ್ಚರ್ಯವಾದರೂ ಸಂತೋಷವೇನು ಪಡಲಿಲ್ಲ. ಒಂದು ವಾರವಿದ್ದು ಹೊರಟುಹೋದರು ಈಗ ನನಗೆ ಮಗನ ಚಿಂತೆ ಶುರುವಾಗಿತ್ತು. ಏಳು ವರ್ಷ ತುಂಬುತ್ತಾ ಬಂದಿದ್ದ ಅವನು ಹಳ್ಳಿ ಸ್ಕೂಲಲ್ಲೇ ಎರಡನೇ ಕ್ಲಾಸು ಓದ್ತಾ ಇದ್ದ. 

ಆಗ ಮತ್ತೆ ಸುಬ್ರಮಣಿನೆ ಅವನನ್ನು ಹಾಸ್ಟೆಲ್ಲಿಗೆ ಸೇರಿಸೋ ಐಡಿಯಾ ಕೊಟ್ಟ. ಪಕ್ಕದ ತಾಲ್ಲೂಕಲ್ಲಿ ಒಂದು ಕ್ರಿಶ್ಚಿಯನ್ ಹಾಸ್ಟೆಲ್ಲಿದೆ, ಅಲ್ಲಿಗೆ ಸೇರಿಸೋಣ ಅಂದಾಗ ನಾನು ವಿಧಿಯಿಲ್ಲದೆ ಒಪ್ಪಿದೆ. ಅಲ್ಲಿದ್ದ ಫಾದರ್ ಇದನ್ನು ನಾವು ಅನಾಥ ಮಕ್ಕಳಿಗಾಗಿ ನಡೆಸ್ತಾ ಇದೀವಿ. ನೀವು ಬದುಕಿರೋವಾಗ ಅವನನ್ನು ಅನಾಥ ಅಂತ ಇಟ್ಟುಕೊಳ್ಳೋಕೆ ಆಗಲ್ಲ ಅಂದರು. ಬೇಕಿದ್ದರೆ ನಾನು ಇನ್ನೊಂದು ಹಾಸ್ಟೆಲ್ ನಡೆಸೊ ಫಾದರ್ ಒಬ್ಬರ ವಿಳಾಸ ಕೊಡ್ತೀನಿ. ಅಲ್ಲಿ ತೀರಾ ಕಡಿಮೆ ದುಡ್ಡು ತಗೊಂಡು ಮದ್ಯಮವರ್ಗದವರ ಮಕ್ಕಳನ್ನು ಓದಿಸ್ತಾರೆ ಅಂದರು. ನಾನು ಅದೇ ಊರಿನ ಆ ಹಾಸ್ಟೆಲ್ಲಿಗೆ ಮಗನನ್ನು ಸೇರಿಸಿ ಬಂದೆ. ಆಮೇಲೆ ಹಳ್ಳಿಯಲ್ಲಿರೋದು ಯಾಕೆ ಅನಿಸ್ತು. ನಾನು ಸಿಟೀಲೇ ಸಣ್ಣದೊಂದು ಬಾಡಿಗೆ ಮನೆ ಮಾಡಿದೆ. ಅಷ್ಟರಲ್ಲಿ ಈವ್ಯವಹಾರ ಅರ್ಥವಾಗಿ ಹೋಗಿತ್ತು. ಗಿರಾಕಿಗಳೊಡನೆ ನೇರವಾಗಿ ವ್ಯವಹಾರ ಕುದುರಿಸೋ ಕಲೆ ಸಿದ್ದಿಸಿತ್ತು. ನಡುಮದ್ಯೆ ಯಾವನೂ ಬೇಡ ಅಂತೇಳಿ ನಾನೇ ಕಸುಬು ಮಾಡತೊಡಗಿದೆ. ಊರಿಂದ ಸ್ವಲ್ಪ ದೂರವಿದ್ದ ಮನೆಯಾದ್ದರಿಂದ ಕೆಲವೇ ಕೆಲವು ಗಿರಾಕಿಗಳಿಗೆ ಅಡ್ರೆಸ್ ಕೊಟ್ಟು ಮನೆಗೆ ಕರೆಸಿಕೊಳ್ಳ್ತಾ ಇದ್ದೆ. ಆದರೆ ಪೋಲಿಸರಿಗೆ ಜನರಿಗೆ ಬೇಗ ವಿಷಯ ಗೊತ್ತಾಗಿ ಬಿಡೋದು. ಆರಾರು ತಿಂಗಳಿಗೆ ಸಿಟಿಯ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಮನೆ ಬದಲಾಯಿಸಬೇಕಾಗ್ತಿತ್ತು. ಅಂತೂ ನಾನು ಸಿಟಿಯ ಎಲ್ಲ ದಿಕ್ಕುಗಳನ್ನೂ ನೋಡಿಬಿಟ್ಟಿದ್ದೆ. ಇಷ್ಟೆಲ್ಲ ಮಾಡಿದರು ಪೋಲಿಸರ ಕಾಟ ಇದ್ದೇ ಇರ್ತಿತ್ತು. ಅವರು ಕರೆದಾಗೆಲ್ಲ ಹೋಗಿ ಕಾಸುಕೊಟ್ಟು ಅವರ ಜೊತೆ ಮಲಗಿ ಬರಬೇಕಾಗಿತ್ತು. ಈ ಮದ್ಯೆ ಕಾಯಿಲೆ ಕಸಾಲೆ ಬಂದರೆ ನಾನೇ ಆರೈಕೆ ಮಾಡಿಕೊಳ್ಳಬೇಕಾಗ್ತಿತ್ತು. ಆಗಾಗ ಬಂದುಹೋಗ್ತಾ ಇದ್ದ ಸುಬ್ರಮಣಿ ಬೇರೆ ಸತ್ತು ಹೋಗಿದ್ದ. ರಜಾ ದಿನಗಳಲ್ಲಿ ಮಗ ಮನೆಗೆ ಬಂದರೆ ಎಲ್ಲವನ್ನೂ ನಿಲ್ಲಿಸಿಬಿಡ್ತಾ ಇದ್ದೆ. ಹೀಗೆ ವರ್ಷಗಳು ಕಳೀತಾ ಹೋವು. ಮಗ ಪಿಯುಸಿಗೆ ಬಂದಿದ್ದ. ಅಲ್ಲಿಯತನಕ ಚೆನ್ನಾಗಿ ಓದಿಕೊಂಡು ಒಂದೇ ಹಾಸ್ಟೆಲ್ಲಿನಲ್ಲಿ ಓದ್ತಾ ಫಾದರ್ ಹತ್ತಿರ ಒಳ್ಳೆ ಹೆಸರು ಸಂಪಾದಿಸಿದ್ದ. ಈ ನಡುವೆ ಒಂದು ಅಚಾತುರ್ಯ ನಡೆದು ಹೋಯಿತು. ಮಗ ಓದ್ತಾ ಇದ್ದ ಸಿಟೀಲಿ ಏನೋ ಗಲಾಟೆ ಅಂತ ಅವನ ಕಾಲೇಜಿಗೆ ಹದಿನೈದು ದಿನ ರಜಾ ಕೊಟ್ಟಿದ್ದರಂತೆ. ನನಗದು ಗೊತ್ತಾಗಲಿಲ್ಲ. ಅವಾಗಲೇ ರಿಪೇರಿಗೆ ಅಂತ ಹದಿನೈದು ದಿನ ಹಾಸ್ಟೆಲ್ ಬಂದು ಮಾಡಿ ಎಲ್ಲರಿಗೂ ಊರುಗಳಿಗೆ ಹೋಗುವಂತೆ ಫಾದರ್ ಹೇಳಿದ್ದರು. ಅದರಂತೆ ನನ್ನ ಮಗ ದಿಡೀರನೇ ಊರಿಂದ ಬಂದು ಬಿಟ್ಟು ಕಸುಬು ನಡೆಸುವ ನನ್ನನ್ನು ನೋಡಿಬಿಟ್ಟ. ಬಹುಶ: ಅಂತಾ ಪರಿಸ್ಥಿತಿಯನ್ನು ಎದುರಿಸೋ ಕೆಟ್ಟ ಗಳಿಗೆ ಯಾವ ತಾಯಿಯ ಜೀವನದಲ್ಲೂ ಬಂದಿರಲಿಲ್ಲ ಅನಿಸುತ್ತೆ. ಮನೆಗೆ ಬಂದ ಮಗ ಊಟವನ್ನೂ ಮಾಡದೆ ಮೂಕನಾಗಿ ಕೂತುಬಿಟ್ಟಿದ್ದ. ಒಂದು ಮಾತೂ ಆಡಲಿಲ್ಲ. ಕೊನೆಗೆ ನಾನೇ ಧೈರ್ಯ ತಗೊಂಡು ಅವರ ಅಪ್ಪ ಹೋದಮೇಲೆ ಅವನನ್ನು ಅವನ ಅಜ್ಜಿಯನ್ನೂ ಸಾಕೋಕೆ ಪಟ್ಟ ಪಡಿಪಾಟಲನ್ನೆಲ್ಲ ಹೇಳಿಕೊಂಡು ಅತ್ತೆ. ಅವನಿದ್ದ ಆ ಹದಿನೈದು ದಿನದಲ್ಲಿ ಅವನು ಮಾತೇ ಆಡಲಿಲ್ಲ. ಮಾಡಿಟ್ಟ ಅಡುಗೆಯನ್ನು ತಾನೇ ಹಾಕಿಕೊಂಡು ತಿಂದು ಹೊರಗೆಲ್ಲಾದರು ಹೋಗಿ ಬರೋನು. ಸದ್ಯ ಮಗ ಮನೇಲಿದ್ದು ಊಟ ಮಾಡ್ತನಲ್ಲ ಅನ್ನೋ ಸಮಾಧಾನದಿಂದ ಬದುಕ್ತಾ ಇದ್ದೆ. ರಜಾ ಮುಗಿದಮೇಲೆ ಹೋಗುವಾಗಲು ಅವನು ಮಾತಾಡಲಿಲ್ಲ. ಒಂದೇ ಮಾತು ನೀನಿನ್ನು ಹಾಸ್ಟೆಲ್ಲಿಗೆ ಬರೋ ಅವಶ್ಯಕತೆಯಿಲ್ಲ ಅಂತೇಳಿ ಹೊರಟು ಹೋದ. ಅದೇಕಡೆ ಅವನನ್ನು ನೋಡಿದ್ದು. ಒಂದಷ್ಟು ದಿನ ಕಳೆದ ಮೇಲೆ ಅವನೇ ಸಮಾಧಾನ ಮಾಡಿಕೊಳ್ತಾನೆ ಅಂತ ಒಂದೆರಡು ತಿಂಗಳು ನಾನೂ ಹಾಸ್ಟೆಲ್ಲಿಗೆ ಹೋಗಲೇ ಇಲ್ಲ. ಆಮೇಲೊಂದು ದಿನ ಫಾದರ್ ಬರೋದಿಕ್ಕೆ ಹೇಳಿಕಳಿಸಿದಾಗ ಹೋದೆ. ನನಗೆ ನನ್ನ ತಾಯಿಯನ್ನು ಕಂಡರೆ ಇಷ್ಟವಿಲ್ಲ. ನಾನು ದೂರ ಎಲ್ಲಾದರು ಹೋಗಿ ಬದುಕಿ ಕೊಳ್ತೀನಿ, ನನ್ನ ಹುಡುಕಬೇಡಿ ಅಂತೇಳಿ ಕಾಗದ ಬರೆದಿಟ್ಟು ಎಲ್ಲೊ ಹೊರಟು ಹೋಗಿದ್ದ. ನನಗೆ ಆಕಾಶ ತಲೆಮೇಲೆ ಬಿದ್ದಂತಾಯಿತು. ಪೋಲೀಸಿಗೆ ಕಂಪ್ಲಂಟ್ ಕೊಟ್ಟರು ಪ್ರಯೋಜನವಾಗಲಿಲ್ಲ. 

ಆಮೇಲಿನ್ನೇನು ಕೂಡಿಟ್ಟಿದ್ದ ಒಂದಷ್ಟು ದುಡ್ಡನ್ನು ತಗೊಂಡು ಅವನ ಪೋಟೋ ಹಿಡಿದುಕೊಂಡು ಊರೂರು ಅಲೆದೆ. ಸುಮಾರು ಮೂರುವರ್ಷ ನಾಯಿ ತರಾ ಅಲೆದಿದ್ದೀನಿ. ಅವನ ಎಲ್ಲಿದಾನೊ ಗೊತ್ತಾಗಲಿಲ್ಲ. ಇದ್ದ ದುಡ್ಡೆಲ್ಲ ಖರ್ಚಾದ ಮೇಲೆ ಬದುಕೋಕೆ ಏನು ಮಾಡೋದು ಅಂತಿರುವಾಗಲೆ ನಾನು ಹುಷಾರು ತಪ್ಪಿ ಯಾವುದೊ ಗೊತ್ತಿರದ ಊರಿನ ಸರಕಾರಿ ಆಸ್ಪತ್ರೆಯಲ್ಲಿ ಮಲಗಿಬಿಟ್ಟೆ. ನನಗೀ ಕಾಯಿಲೆ ಇರೋದು ಗೊತ್ತಾಗಿದ್ದು ಅಲ್ಲೇ. ಆಮೆಲೇನು ಮಾಡಲು ತೋಚದೆ ಮತ್ತೆ ನನ್ನ ಮಗ ಓದ್ತಾ ಇದ್ದ ಹಾಸ್ಟೆಲ್ಲಿಗೆ ವಾಪಾಸು ಬಂದು ಫಾದರ್ ಹತ್ತಿರ ಯಾವತ್ತಾದರು ಒಂದು ದಿನ ಅವನಿಲ್ಲಿಗೆ ಬರಬಹುದಲ್ವ, ಫಾದರ್. ಅವನಿಗೆ ಕಾಯ್ತಾ ನಾನಿಲ್ಲಿ ಇರ್ತೀನಿ. ಇಲ್ಲಿ ಏನಾದರು ಕೆಲಸ ಮಾಡಿಕೊಂಡಿರ್ತೀನಿ ಅಂತ ಬೇಡಿಕೊಂಡೆ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದ ಅವರು ಸರಿ ಮಗಳೆ ಇಲ್ಲಿಗೆ ಬರುವವರ ಸೇವೆ ಮಾಡು.ಅದರಿಂದಲಾದರು ಏಸು ನಿನ್ನ ಪಾಪಗಳನ್ನು ಕ್ಷಮಿಸಬಹುದು ಅಂದು ಒಪ್ಪಿಗೆ ಕೊಟ್ಟರು. ಅಲ್ಲಿಯೂ ಒಂದು ವರ್ಷ ಕೆಲಸ ಮಾಡಿಕೊಂಡಿದ್ದೆ. ಆದರೆ ಕಾಯಿಲೆ ಜಾಸ್ತಿಯಾದಂತೆ ಚರ್ಚಿನವರೇ ನಡೆಸುವ ಈ ಆಶ್ರಮಕ್ಕೆ ಕಳಿಸಿದರು. ಇಲ್ಲೀಗ ಹೀಗೆ ನಿಮ್ಮೆದರು ಬಿದ್ದುಕೊಂಡಿದ್ದೀನಿ.ಸಾವು ಯಾವ ಕ್ಷಣದಲ್ಲಾದರು ಬರಬಹುದು ಅಂತನೋಡ್ತಾ ಇದೀನಿ.ಎಲ್ಲೋ ಹುಟ್ಟಿ ಹೀಗೆ ಬಂದು ಎಲ್ಲೋ ಅನಾಥಳ ಥರಾ ಸಾಯೋಕೆ ನಾನು ಹಿಂದಿನ ಜನ್ಮದಲ್ಲಿ ಮಾಡಿದ ಯಾವುದೋ ಪಾಪವೇ ಕಾರಣವಿರಬೇಕು.

ಅಷ್ಟು ಹೊತ್ತು ಒಂದೇ ಸಮನೆ ಮಾತಾಡಿದ್ದಕ್ಕೆ ಅವಳಿಗೆ ಕೆಮ್ಮು ಶುರುವಾಯಿತು. ನಮ್ಮ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ಸಿಸ್ಟರ್ ಅವಳಿಗೆ ನೀರು ಕುಡಿಸಿ ಸಾಕು ಅನ್ನುವಂತೆ ನನಗೆ ಸನ್ನೆ ಮಾಡಿದರು.

ಅವಳಿಗೊಂದು ನಮಸ್ಕಾರ ಹೇಳಿ ಹೊರಡಲು ತಯಾರಾದಾಗ ಹಾಸಿಗೆಯ ಕೆಳಗಿಟ್ಟುಕೊಂಡಿದ್ದ ಮಾಸಲು ಬಣ್ಣದ ಪೋಟೋ ಒಂದನ್ನು ತೋರಿಸಿ.ಇವನೇ ನನ್ನ ಮಗ. ಎಲ್ಲಾದರು ನೋಡಿದರೆ ನನಗೆ ತಿಳಿಸಿ ಸರ್ ಅಂದಳು. ಹತ್ತೊ ಹನ್ನೆರಡರ ವಯಸ್ಸಲ್ಲಿ ತೆಗೆಸಿದ ಪೋಟೋದಲ್ಲಿರುವವನನ್ನು ಈಗ ಗುರುತಿಸಲು ಸಾದ್ಯವಿಲ್ಲವೆಂದು ಹೇಳಿ ಅವಳಿಗ್ಯಾಕೆ ನೋವುಂಟು ಮಾಡಬೇಕೆಂದುಕೊಂಡು, ಆಯಿತು, ಖಂಡಿತಾ ಅಂತೇಳಿ ಹೊರಗೆ ಬಂದಾಗ ಸಿಸ್ಟರ್ ನಿರ್ಮಲಾ ನನ್ನ ಹಿಂದೆಯೇ ಬಂದರು.

ಗೇಟಿನ ಹತ್ತಿರ ಬಂದಾಗ ಸಿಸ್ಟರ್ ಮಧು ನೀನು ನನ್ನ ಹಳೆಯ ಮಿತ್ರ ಅಂತ ಹೇಳ್ತಾ ಇದೀನಿ, ಹೀಗೊಂದು ಆರು ತಿಂಗಳ ಹಿಂದೆ ಇವಳ ಮಗ ಇಲ್ಲಿಗೆ ಬಂದಿದ್ದ. ದೂರದಿಂದ ಕಿಟಕಿಯಿಂದಲೇ ತಾಯಿಯನ್ನು ನೋಡಿ ಹೊರಟು ಹೋದ. ಅವನೀಗ ಮಿಲ್ಟ್ರಿಯಲ್ಲಿದ್ದಾನಂತೆ. ಅವಳೆಷ್ಟೇ ಕೆಟ್ಟವಳಾದರು ತಾಯಿಯೇ ಅಲ್ಲವೆ ಒಂದು ಸಾರಿ ಮುಖ ತೋರಿಸು ಸಾಕು ಅವಳು ನೆಮ್ಮದಿಯಾಗಿ ಕರ್ತನನ್ನು ಸೇರುತ್ತಾಳೆಂದು ಎಷ್ಟು ಹೇಳಿದರು ಅವನು ಕೇಳದೇ ಹೋದ. ಹೋಗುವಾಗ ಮಾತ್ರ ನನ್ನ ಹತ್ತಿರ ಬಂದು ಹತ್ತು ಸಾವಿರ ರೂಪಯಿಗಳ ಎರಡು ಕಟ್ಟು ಕೊಟ್ಟು ನಿಮ್ಮ ಆಶ್ರಮಕ್ಕೆ ಇದು ನನ್ನ ಕಾಣಿಕೆಯೆಂದು ಹೇಳಿ ಹೊರಟುಹೋದ ಅಂದರು. ನಾನಾಗ ಸಿಸ್ಟರ್ ಈಗ ನಿಮ್ಮ ಹತ್ತಿರ ಅವನು ಕೊಟ್ಟ ವಿಳಾಸವೇನಾದರು ಇದೆಯಾ ಎಂದಾಗ ಒಂದುನಿಮಿಷ ಎಂದು ಚರ್ಚಿನ ಒಳಗೆ ಹೋದವರು ಒಂದು ಚೀಟಿ ತಂದು ಕೊಟ್ಟರು. ನಾನು ಥ್ಯಾಂಕ್ಸ್ ಹೇಳಿ ಹೊರಗೆ ಬಂದೆ.

ಊರಿಗೆ ಬಂದವನು ನನ್ನ ಪರಿಚಯದ ಬಹಳಷ್ಟು ಸೈನ್ಯದ ಮಿತ್ರರುಗಳಿಗೆ ಕರೆಮಡಿ ಆ ವಿಳಾಸ ಕೊಟ್ಟು ಆ ಹುಡುಗನ್ನು ಪತ್ತೆ ಹಚ್ಚಲು ಕೋರಿದೆ. ಒಂದೆರಡು ತಿಂಗಳಾದ ಮೇಲೆ ದೆಹಲಿಯಲ್ಲಿದ್ದ ನನ್ನ ಮಿತ್ರನೊಬ್ಬನಿಂದ ಕರೆಬಂತು,ನೀನು ಹೇಳಿದ ಹುಡುಗ ಸೈನ್ಯದಲ್ಲಿದ್ದುದು ನಿಜ. ಆದರೆ ಈಗೊಂದು ಮೂರುತಿಂಗಳ ಹಿಂದೆ ಗಡಿಯಲ್ಲಿ ನಡೆದ ಘರ್ಷಣೆಯೊಂದರಲ್ಲಿ ಹತನಾಗಿದ್ದಾನೆ ಅಂದವನ ಮಾತು ಕೇಳಿ ಎದೆ ಬಾರವಾಯಿತು. ಅವನು ಬದುಕಿದ್ದರೆ ತಾಯಿಯನ್ನು ನೋಡುವಂತೆ ಮಾಡಬಹುದಿತ್ತಾ ಗೊತ್ತಿಲ್ಲ,ಆದರೆ ಪ್ರಯತ್ನವನ್ನಂತು ಮಾಡಬಹುದಿತ್ತೆನಿಸಿ ಮನಸ್ಸಿಗೆ ವಿಷಾದವೆನಿಸಿತು! 

Think Small For Better Cities!


Dr Ashok K R
‘Think small’ should be the new Mantra in the era of rapid urbanisation. Residents of Mandur successfully protested against the dumping of garbage generated from the Bruhat Bengaluru Mahanagara Palike. When almost all the governments promote urbanisation, when we the people flood to cities in the name of job, future, success it’s absurd to put the entire blame on the government for mishandling the waste generated in thousands of tonnes per day in Bengaluru. Though the plastic waste is difficult to manage in individual home setup (what we can do best is to reduce the use of plastic covers wherever possible) wet waste / kitchen waste can be handled effectively in home.

Che Guevera is my inspiration for life. That inspiration led me to read more and more about Cuba. While reading many articles about Cuba urban farming/city farms ignited my interest. Cuba initiated city farming because of acute shortage of vegetables and eatables after the fall of Soviet Union and trade ban from America. That ignited interest was further inspired by Organic Terrace Gardening facebook group which actively discusses pros and cons of terrace / balcony gardening. At present Bengalurians are most active in terrace gardening. 

With all those ignition and inspiration i started to compost the kitchen waste through simple aerobic composting in plastic tubs and containers. It was smelly, too dry, too wet, too many magots in the initial days which was quite worrisome. Nature has many ways of correcting our mistakes and gradually i am learning the nature’s way of composting – combine carbon with nitrogen. It’s been a year since i threw wet waste into the garbage van! All those kitchen waste are happily nourishing the plants of our home.

Urban farm in Havana, Cuba.
When we shifted to this present house with full terrace for our use there were two options. First option was to buy the containers, soil, cocopeat, compost at once and fill the terrace with plants; quite easier. Second option to create the compost gradually from kitchen and growing garden’s waste, use the trash in home to create or innovate the containers and later buy containers as and when amount of compost increases. Absence of financial restrain tempted me to go with first option so that i can see everything green in a month’s time but my experimental mind made me to select the time consuming second option!

Ideally we should have small pockets of places for human dwelling so that waste management won’t become troublesome. When the government and we, the people are more inclined towards ‘bigger’ ‘smart’ ‘greenless’ cities amount of waste generated will be proportionately big; Huge enough to spoil the health of an entire village which are near to the ‘big’ cities. While it’s almost impossible for most of us to leave the cities and move to countryside we can atleast do our bit to protect the health of countryside. A container in our balcony/terrace to compost the kitchen waste mixed with dried leaves might appear small, but the benefits it does to the environment is enormous. Think small, save environment.

There are plenty of sites which guide us to terrace gardening, this is a tiny attempt from my side to share my experiences with simple and almost inexpensive methods to create a garden. My main aim is to avoid kitchen waste’s travelling into a distant village. 

Suggestions and full articles from the readers are welcome in both English and Kannada.

Image source: OTG fb page & thecubaneconomy.com

ಏಪ್ರಿ 19, 2015

ಗೂಗಲ್ ಹ್ಯಾಂಡ್ ರೈಟಿಂಗ್ ತಂತ್ರಾಂಶದ ಪರಿಚಯ.

google handwriting input guide
ಆ್ಯಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಟೈಪಿಸುವುದು ಕೊಂಚ ಕಷ್ಟವಾದ ಕೆಲಸವೇ. ಜೆಲ್ಲಿ ಬೀನ್ ನಂತರದ ಆಪರೇಟಿಂಗ್ ಸಿಸ್ಟಮ್ ಇರುವ ಫೋನುಗಳಲ್ಲಿ ಕನ್ನಡ ಪುಟಗಳನ್ನು, ಕನ್ನಡ ಮೆಸೇಜುಗಳನ್ನು ಓದುವುದು ಸಲೀಸಾದರೂ ಟೈಪಿಸುವ ಕೆಲಸ ಮಾತ್ರ ಪ್ರಯಾಸಕರವಾಗಿತ್ತು. ಎನಿ ಸಾಫ್ಟ್ ಕೀಬೋರ್ಡ್, ಜಸ್ಟ್ ಕನ್ನಡ, ಕನ್ನಡ ಪದ ಹೀಗೆ ಹತ್ತಲವು ತಂತ್ರಾಂಶಗಳು ಕನ್ನಡ ಟೈಪಿಸಲು ನೆರವಾಗುತ್ತಿವೆಯಾದರೂ ಟೈಪಿಸುವ ಕೆಲಸವೇ ಕಷ್ಟವೆಂದುಕೊಳ್ಳುವವರಿಗೆ ಇದು ಸುಲಭದ್ದಾಗಿರಲಿಲ್ಲ. ಹಾಗಾಗಿ ಫೇಸ್ ಬುಕ್, ಟ್ವಿಟ್ಟರಿನಂತಹ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೀಷ್ ಲಿಪಿ ಬಳಸಿ ಕನ್ನಡ ಬರೆಯುವವರ ಸಂಖ್ಯೆ ಹೆಚ್ಚಿತ್ತು. ಇಂತವರಿಗೆ ನೆರವಾಗಲೆಂಬಂತೆ ಗೂಗಲ್ಲಿನ ಹ್ಯಾಂಡ್ ರೈಟಿಂಗ್ ತಂತ್ರಾಂಶ ಬಿಡುಗಡೆಯಾಗಿದೆ. ಪೇಪರ್ರಿನ ಮೇಲೆ ಬರೆಯುವಂತೆ ಮೊಬೈಲ್ ಪರದೆಯ ಮೇಲೆ ಬರೆದರೆ ಸಾಕು, ನಿಮ್ಮ ಕೈಬರಹ ಅಷ್ಟೇನೂ ಉತ್ತಮವಲ್ಲದಿದ್ದರೂ ಗೂಗಲ್ ಅದನ್ನು ಅಕ್ಷರ ರೂಪಕ್ಕೆ ಮೂಡಿಸುತ್ತದೆ. ಈ ಲೇಖನದಲ್ಲಿ ಗೂಗಲ್ ಹ್ಯಾಂಡ್ ರೈಟಿಂಗ್ ತಂತ್ರಾಂಶವನ್ನು ಮೊಬೈಲಿಗೆ ಹಾಕಿಕೊಂಡು ಅದನ್ನು ಉಪಯೋಗಿಸುವ ವಿಧಾನವನ್ನು ಚಿತ್ರಗಳ ಮೂಲಕ ತಿಳಿಸಲಾಗಿದೆ. ಉಪಯುಕ್ತವೆನ್ನಿಸಿದರೆ ಗೆಳೆಯರೊಡನೆ ಹಂಚಿಕೊಳ್ಳಿ. 
1. ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಗೂಗಲ್ಲಿನ ಪ್ಲೇ ಸ್ಟೋರಿನಲ್ಲಿ ಹ್ಯಾಂಡ್ ರೈಟಿಂಗ್ ಇನ್ ಪುಟ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿ. (click to download)
2. ಗೂಗಲ್ಲಿನ ನಿಯಮಗಳಿಗೆ ಓಕೆ ಒತ್ತಿ.
Google Handwriting Input guide

3. ಕಾನ್ಫಿಗರ್ ಲ್ಯಾಂಗ್ವೇಜಸ್ಸಿಗೆ ಹೋಗಿ. ಸಿಸ್ಟಂ ಲ್ಯಾಂಗ್ವೇಜ್ (ಸಾಮಾನ್ಯವಾಗಿ ಎಲ್ಲಾ ಫೋನುಗಳಲ್ಲಿ ಸಿಸ್ಟಂ ಲ್ಯಾಂಗ್ವೇಜ್ ಇಂಗ್ಲೀಷ್) ಆಯ್ಕೆ ಆಗಿರುತ್ತದೆ. ಆ ಆಯ್ಕೆಯನ್ನು ತೆಗೆದುಹಾಕಿ.
Google Handwriting Input guide kannada
4. ಕೆಳಗೆ ಸ್ಕ್ರಾಲ್ ಮಾಡಿದಾಗ ಕನ್ನಡ ಭಾಷೆ ಸಿಗುತ್ತದೆ.
Google Handwriting Input guide kannada
5. ಕನ್ನಡ ಭಾಷೆಯನ್ನು ಆಯ್ಕೆ ಮಾಡಿ. ಜೊತೆಗೆ ಇಂಗ್ಲೀಷ್ ಭಾಷೆಯನ್ನೂ ಆಯ್ಕೆ ಮಾಡಿ.
Google Handwriting Input guide
6. ಭಾಷೆ ಆಯ್ಕೆ ಮಾಡಿದ ನಂತರ, ಆ ಭಾಷೆಗೆ (ಇಲ್ಲಿ ಕನ್ನಡಕ್ಕೆ) ಸಂಬಂಧಪಟ್ಟಂತ ಫೈಲುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
Google Handwriting Input guide download
7. 7.2 ಎಂಬಿಯ ಫೈಲನ್ನು ಡೌನ್ ಲೋಡ್ ಮಾಡಿಕೊಳ್ಳಿ.
Google Handwriting Input guide

Google Handwriting Input guide
8. ಭಾಷೆ ಡೌನ್ ಲೋಡ್ ಆದ ನಂತರ ಭಾಷಾ ಇನ್ ಪುಟ್ಟಿನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಿ.
Google Handwriting Input guide input method
9. ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿ!
Google Handwriting Input guide typing kannada

10. ಕನ್ನಡದಲ್ಲಿ ಮೆಸೇಜು ಮಾಡಬೇಕೆಂದರೆ ಮೆಸೇಜಿಂಗ್ ತಂತ್ರಾಂಶವನ್ನು ತೆರೆಯಿರಿ. ಮತ್ತು ಕೈಯಲ್ಲಿ ಬರೆಯಿರಿ.
Google Handwriting Input guide in messaging

Google Handwriting Input guide

11. ಭಾಷೆಯ ಆಯ್ಕೆಯಲ್ಲಿ ಬದಲಾವಣೆ ಬೇಕೆನ್ನಿಸಿದಾಗ ಅಥವಾ ಟೈಪಿಂಗ್ ಮಾಡುವುದೇ ಚೆಂದವೆನ್ನಿಸಿದಾಗ ಸೆಟ್ಟಿಂಗ್ಸಿಗೆ ಹೋಗಿ, ಅಲ್ಲಿ ಲ್ಯಾಂಗ್ವೇಜ್ ಮತ್ತು ಇನ್ಪುಟ್ ಆಯ್ಕೆ ಮಾಡಿ. ಅದರಡಿ ಕೀಬೋರ್ಡ್ ಇನ್ಪುಟ್ಟಿನಲ್ಲಿ ನಿಮಗೆ ಸಲೀಸಾದ ಆಯ್ಕೆಯನ್ನು ಬೇಕಾದಾಗ ಬದಲಿಸಿಕೊಳ್ಳಬಹುದು.
Google Handwriting Input guide

Google Handwriting Input guide

Google Handwriting Input guide