ಡಾ ಅಶೋಕ್ ಕೆ
ಆರ್
‘Twenty thousand leagues under sea’ – ನಾನು ಓದಿದ ಪ್ರಥಮ ಪಠ್ಯೇತರ
ಪುಸ್ತಕ. ಜೂಲಿಸ್ ವರ್ನೆ ರಚನೆಯ ಈ ಫ್ರೆಂಚ್ ಕೃತಿಯಲ್ಲಿ ನಾಟಿಲಸ್ ಎಂಬ ಬೃಹತ್ ಗಾತ್ರದ ಸಮುದ್ರದ
ಎಲ್ಲ ಭಾಗಗಳಲ್ಲೂ ಚಲಿಸುವ ಸಾಮರ್ಥ್ಯವಿರುವ ಸಬ್ ಮೆರೀನ್ ಇದೆ; ಸಬ್ ಮೆರೀನ್ ಮೂಲಕ ಸಮುದ್ರದಾಳದ ಚಿತ್ರ
ವಿಚಿತ್ರ ವಿಸ್ಮಯಕಾರಿ ಜೀವಿಗಳ ಪರಿಚಯ ಮಾಡಿಸುತ್ತಾನೆ ಲೇಖಕ. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಖುದ್ದು
ನಾವೇ ಸಮುದ್ರದೊಳಗೆ ಈಜಾಡಿ ಬಂದಂತಹ ಅನುಭವವಾಗುತ್ತದೆ. ಪುಸ್ತಕವನ್ನು ಓದಿ ಮುಗಿಸಿದ ಎಷ್ಟೋ ದಿನಗಳ
ಮೇಲೆ ಆ ಇಡೀ ಪುಸ್ತಕ ಕಲ್ಪನೆಯಿಂದ ಮೂಡಿದ್ದು ಎಂಬ ಸತ್ಯ ತಿಳಿಯಿತು!! 1870ರಲ್ಲಿ ಜೂಲಿಸ್ ವರ್ನೆ
ಆ ಪುಸ್ತಕ ರಚಿಸಿದಾಗ ‘ನಾಟಿಲಸ್’ ಸಾಮರ್ಥ್ಯದ ಸಬ್ ಮೆರೀನ್ ಇರಲೇ ಇಲ್ಲ! ಪುಸ್ತಕದಲ್ಲಿದ್ದ ಕಲ್ಪಿತ
ತಾಂತ್ರಿಕ ವಿವರಗಳನ್ನು ಕಾಲಾಂತರದಲ್ಲಿ ನಿಜಕ್ಕೂ ಅಳವಡಿಸಿಕೊಳ್ಳಲಾಯಿತು! ನ್ಯೂಕ್ಲಿಯರ್ ಇಂಧನ ಮೂಲದಿಂದ
ಚಲಿಸಬಲ್ಲ ತನ್ನ ಪ್ರಥಮ ಸಬ್ ಮೆರೀನಿಗೆ ಅಮೆರಿಕ ‘ನಾಟಿಲಸ್’ ಎಂದೇ ನಾಮಕರಣ ಮಾಡಿತು! ಇಷ್ಟೇ ಅಲ್ಲದೆ
ಲೇಖಕನ ಕಲ್ಪನೆಯಲ್ಲಿ ಸೃಷ್ಟಿಯಾದ ಅನೇಕ ಜೀವಿಗಳನ್ನು ಹೋಲುವಂತಹ ಸಮುದ್ರಜೀವಿಗಳನ್ನೂ ನಂತರದಲ್ಲಿ
ಪತ್ತೆ ಹಚ್ಚಲಾಯಿತು!