ಡಾ. ಅಶೋಕ್. ಕೆ. ಆರ್.
“ಹೇಳಪ್ಪ ಏನ್ ಬಂದಿದ್ದು ಇಷ್ಟೊತ್ತಿನಲ್ಲಿ" ಅಪ್ಪನ ದನಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ತಾಳ್ಮೆಯಿತ್ತು.
“ಅದೇ ಅಂಕಲ್. ಧರಣಿಗೆ ಮದುವೆ ಗೊತ್ತು ಮಾಡಿದ್ರಿ ಅಂತ ಗೊತ್ತಾಯ್ತು....”
“ಯಾರ್ ಹೇಳಿದ್ರು?” ಪುರುಷೋತ್ತಮ ನನ್ನ ಕಡೆಗೆ ನೋಡಿದ. ಅಪ್ಪ ಅಮ್ಮನ ಸಿಟ್ಟಿನ ಕಣ್ಣುಗಳು, ತಮ್ಮನ ಅಸಹಾಯಕ ಕಣ್ಣುಗಳು ನನ್ನತ್ತ ಚಲಿಸಿದವು.
“ಹೂನಪ್ಪ. ಗೊತ್ತು ಮಾಡಿದ್ವಿ. ನಮ್ಮ ಬಲವಂತವೇನೂ ಇಲ್ಲ. ಅವಳು ಒಪ್ಪಿಗೆ ನೀಡಿದ ಮೇಲೆಯೇ ಗೊತ್ತು ಮಾಡಿದ್ದು"
“ಅದೂ ಗೊತ್ತಿದೆ ಅಂಕಲ್. ನಿಮ್ಮದೂ ಲವ್ ಮ್ಯಾರೇಜೇ ಅಂತಿದ್ಲು ಧರಣಿ. ಆರು ವರ್ಷದ ಲವ್ ಅಂಕಲ್....ಕಷ್ಟವಾಗ್ತದೆ"
“ನನ್ನ ನಿರ್ಧಾರ ನಿಂಗೆ ಗೊತ್ತೇ ಇರಬೇಕಲ್ಲಪ್ಪ. ನಿಮ್ಮಮ್ಮನನ್ನು ಒಪ್ಪಿಸಿ ಕರೆದುಕೊಂಡು ಬಾ. ಧಾಂ ಧೂಂ ಅಂತ ಮದುವೆ ಮಾಡಿಕೊಡೋ ಜವಾಬ್ದಾರಿ ನಂದು. ನಮ್ಮ ಮನೆಯಲ್ಲಿ ಇನ್ಯಾರೂ ಒಪ್ಪದಿದ್ರೂ ಚಿಂತೆಯಿಲ್ಲ"
“ಅಪ್ಪ ಮಗಳು ಅದೇ ಕಿತ್ತೋದ ಡೈಲಾಗ್ ಹೇಳಿ ಹೇಳಿ ನನ್ನ ಸಾಯಿಸ್ತೀರ. ನಿಮ್ಮ ಮಗಳಿಗೆ ನನ್ನ ಜೊತೆ ಲವ್ ಮಾಡ್ಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ನನ್ನ ಕೈಲಿ ಪಾರ್ಟಿ ಕೊಡಿಸ್ಕೊಂಡು, ಚಾಕಲೇಟು ಐಸ್ಕ್ರೀಮು ಕೊಡಿಸ್ಕೊಂಡು ದುಡ್ಡು ಖರ್ಚು ಮಾಡಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ಆವಾಗ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ ಇವ್ಳು.....” ಕತ್ತೆತ್ತಿ ನನ್ನ ಕಡೆಗೆ ನೋಡಿದ. ಮನಸಲ್ಲೇ ಚಿನಾಲಿ ಎಂದು ಉಗಿದ. ಕಣ್ಣು ನನ್ನ ಬೆನ್ನ ಹಿಂದಿದ್ದ ಶೋಕೇಸಿನತ್ತ ಸರಿಯಿತು. ಅದರೆಡೆಗೆ ಕೈ ತೋರುತ್ತಾ "ಆ ನಿಮ್ ಶೋಕೇಸಿನಲ್ಲಿರೋ ಮುಕ್ಕಾಲು ಗಿಫ್ಟುಗಳು ನಾ ಕೊಟ್ಟಿರೋದು. ಅದನ್ನೆಲ್ಲ ತೆಗೆದುಕೋಬೇಕಾದ್ರೆ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ .....” ಅವನ ಮಾತು ಮುಗಿಯುವ ಮುನ್ನವೇ ಅಪ್ಪ ದಡಕ್ಕನೆ ಮೇಲೆದ್ದು ನನ್ನ ಕಡೆಗೆ ನಡೆದು ಬಂದರು. ಬಿತ್ತು ಏಟು ಕೆನ್ನೆಗೆ ಎಂದುಕೊಂಡೆ. ನನ್ನನ್ನು ಬದಿಗೆ ತಳ್ಳಿ ಶೋಕೇಸಿನ ಬಾಗಿಲು ತೆಗೆದು "ಅದ್ಯಾವ್ಯಾವ ಗಿಫ್ಟು ಕೊಡಿಸಿದ್ದೆ ತಗಳಪ್ಪ. ಲೋ ಶಶಿ ಒಳಗೋಗಿ ಒಂದು ದೊಡ್ಡ ಕವರ್ ತಗಂಡ್ ಬಾ" ಅಂದುಬಿಟ್ಟರು. ನಮ್ಮೆಲ್ಲರಿಗಿಂತ ಹೆಚ್ಚು ಆಘಾತಕ್ಕೊಳಗಾದವನು ಪುರುಷೋತ್ತಮ. ಅಪ್ಪ ಹಿಂಗೆಲ್ಲ ವರ್ತಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಹೇಳಿದ್ದಾಗೋಗಿದೆ. ಇನ್ನೇನು ಮಾಡೋದು ಎನ್ನುವವನಂತೆ ಎದ್ದು ಬಂದು ಒಂದೊಂದಾಗಿ ಗಿಫ್ಟುಗಳನ್ನೆಲ್ಲ ಎತ್ತಿಕೊಳ್ಳುತ್ತಿದ್ದ. ಐದು ವ್ಯಾಲೆಂಟೈನ್ಸ್ ಡೇಗೆ ಕೊಟ್ಟಿದ್ದು, ಆರು ನನ್ನುಟಿದಬ್ಬಕ್ಕೆ ಕೊಟ್ಟಿದ್ದು, ಎರಡು ಅವನ ಹುಟ್ಟಿದ ಹಬ್ಬದಂದು ಕೊಡಿಸಿದ್ದು, ಹೊಸ ವರ್ಷದಂದು ಕೊಡಿಸಿದ್ದ ನಾಲಕ್ಕು, ಯುಗಾದಿಗೆ ಕೊಡಿಸಿದ್ದ ಎರಡು, ಸುಮ್ಮನೆ ನನಗಿಷ್ಟವಾಯ್ತು ಅಂತ ಕೊಡಿಸಿದ್ದ ಐದು ಗಿಫ್ಟುಗಳನ್ನೂ ನೆನಪಿಟ್ಟುಕೊಂಡು ಎತ್ತಿಕೊಂಡ. ಅಂತಹ ಗಂಭೀರ ಸನ್ನಿವೇಶದಲ್ಲೂ ನನಗಿವರ ಮಕ್ಕಳಾಟ ನಗು ಮೂಡಿಸುತ್ತಿತ್ತು. ಜೋರು ನಗಲಿಲ್ಲ ಅಷ್ಟೇ. ಕವರ್ರಿಗಾಕಿಕೊಂಡವನಿಗೆ ಇನ್ನೇನು ಮಾತನಾಡಬೇಕೆಂದು ತೋಚಲಿಲ್ಲ. ಅಪ್ಪನೇ ಮಾತನಾಡಿದರು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.