ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ ಮನಸಿಗೆ ಪಿಚ್ಚೆನ್ನಿಸಿ ಬಿಟ್ಟಿತ್ತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನ ಬಹುದು.
ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು.
2000ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ( ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.