ಸೆಪ್ಟೆಂ 8, 2015

ಅಡ್ಡಡ್ಡ ಮಲಗಲು ಅಡ್ಡದಾರಿ ಹಿಡಿದವರು.

Dr Ashok K R
ಯಾವ ಚುನಾವಣೆಯೇ ಆದರೂ ಬಹುಮತ ಬರದಿದ್ದರೆ ರಾಜಕೀಯ ನಾಟಕಗಳು ಉತ್ತುಂಗಕ್ಕೇರಿಬಿಡುತ್ತವೆ. ಬಿಬಿಎಂಪಿ ಚುನಾವಣೆ ಕೂಡ ರಾಜಕೀಯ ನಾಟಕಗಳಿಗೆ ರೆಸಾರ್ಟ್ ರಾಜಕೀಯಕ್ಕೆ ಕಾರಣವಾಗಿದೆ. ಯಾವ ಪಕ್ಷಕ್ಕೂ ಸರಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 100 ಸ್ಥಾನಗಳನ್ನು ಪಡೆದ ಬಿಜೆಪಿ ಪ್ರಥಮ ಸ್ಥಾನದಲ್ಲಿದ್ದರೆ ಕಾಂಗ್ರೆಸ್ 76 ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಜೆಡಿಎಸ್ 14ರಲ್ಲಿ ಮತ್ತು ಪಕ್ಷೇತರರು 8 ರಲ್ಲಿ ಜಯ ಗಳಿಸಿದ್ದಾರೆ. ಕಳೆದ ಬಾರಿಯ ಬಿಬಿಎಂಪಿ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಕಳೆದ ಬಾರಿಗಿಂತ ಹನ್ನೆರಡು ಸ್ಥಾನಗಳನ್ನು ಕಡಿಮೆ ಗಳಿಸಿದ್ದರೆ, ಕಾಂಗ್ರೆಸ್ ಹನ್ನೊಂದು ಸ್ಥಾನಗಳನ್ನು ಹೆಚ್ಚು ಗಳಿಸಿದೆ. ಜೆಡಿಎಸ್ ಕಳೆದ ಬಾರಿಯೂ ಹದಿನಾಲ್ಕು ಸ್ಥಾನಗಳನ್ನೇ ಗಳಿಸಿತ್ತು. ಇನ್ನು 8 ಪಕ್ಷೇತರರಲ್ಲಿ ಮೂವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದರೆ ಮೂವರು ಬಿಜೆಪಿಯ ಬಂಡಾಯ ಅಭ್ಯರ್ಥಿಗಳು. ಕಳೆದ ಬಾರಿಗಿಂತ ಹೆಚ್ಚು ಮತ, ಸ್ಥಾನಗಳನ್ನು ಪಡೆದಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ಸಿನದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇದ್ದು ಬೆಂಗಳೂರಿನ ಚುನಾವಣೆ ಸೋತಿರುವುದು ಆ ಪಕ್ಷದ ಬೆಂಗಳೂರು ನಾಯಕರಿಗೆ, ಚುನಾವಣೆಗೆ ಮುಂಚೆ ಊರು ಸುತ್ತಿದ ಸಿದ್ಧರಾಮಯ್ಯರಿಗಾದ ಸೋಲೆಂದೇ ಹೇಳಬೇಕು.

ಕಾಂಗ್ರೆಸ್ ಸೋಲಿಗೆ ಬಿಬಿಎಂಪಿ ಚುನಾವಣೆಯನ್ನು ಪದೇ ಪದೇ ಮುಂದೂಡಲು ಪ್ರಯತ್ನಿಸಿದ್ದು, ಬಿಬಿಎಂಪಿಯನ್ನು ವಿಭಜಿಸಲು ಪ್ರಯತ್ನಿಸಿದ್ದು ಹೇಗೆ ಪ್ರಮುಖ ಕಾರಣವೋ ಬೆಂಗಳೂರಿನ ಜನತೆ ಹಲವು ವರುಷಗಳಿಂದ ಯಾವ ಚುನಾವಣೆಯೇ ಆದರೂ ಬಿಜೆಪಿಯ ಕಡೆಗೆ ಹೆಚ್ಚು ವಾಲುತ್ತಿರುವುದೂ ಸತ್ಯ. ಆ ವಾಲುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಪ್ರಯತ್ನ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಜೊತೆಗೆ ಕಾಂಗ್ರೆಸ್ಸಿನೊಳಗಡೆಯೇ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಮುಸುಕಿನ ಗುದ್ದಾಟ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಬಹಿರಂಗವಾಗಿಯೇ ಸ್ಪೋಟಗೊಂಡಿತ್ತು. ಬೆಂಗಳೂರಿಗರು ಇವತ್ತಿಗೂ ನೆನೆಯುವ ಎಸ್.ಎಂ.ಕೃಷ್ಣ ಮತ್ತು ಬಿ.ಕೆ.ಹರಿಪ್ರಸಾದ್ ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಮಾತನಾಡಿದರು. ಇವೆಲ್ಲವೂ ಕಾಂಗ್ರೆಸ್ಸಿನ ಸೋಲಿಗೆ ಪ್ರಮುಖ ಕಾರಣಗಳಾಯಿತು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತರೂ ಬಿಜೆಪಿ ಮತ್ತೆ ಹೆಚ್ಚು ಸ್ಥಾನ ಪಡೆಯುವಲ್ಲಿ ಅದರ ನಾಯಕ ಅಶೋಕ್ ರ ಪಾತ್ರ ದೊಡ್ಡದು. ಒಂದು ಹಂತದಲ್ಲಿ ಅಶೋಕ್ ಮತ್ತು ಯಡಿಯೂರಪ್ಪ ನಡುವಿನ ತಿಕ್ಕಾಟಗಳು ಬಿಜೆಪಿಯನ್ನು ದಯನೀಯ ಸೋಲಿಗೆ ದೂಡುತ್ತವೆ ಎಂದು ಎಣಿಸಲಾಗಿತ್ತು. ಸಮೀಕ್ಷೆಗಳೂ ಕಾಂಗ್ರೆಸ್ಸಿಗೆ ಅಧಿಕ ಸ್ಥಾನ ಸಿಗುವುದೆಂದೇ ಹೇಳಿತ್ತು. ಮತದಾರ ಆ ಊಹಾ ಪೋಹಗಳಿಗೆಲ್ಲಾ ತಿಲಾಂಜಲಿ ಕೊಟ್ಟು ಬಿಜೆಪಿಗೇ ಅಧಿಕ ಸ್ಥಾನ ಸಿಗುವಂತೆ ಮಾಡಿದ. ಸೋತ ಕಾಂಗ್ರೆಸ್ ಏನು ಮಾಡಬೇಕಿತ್ತು?

ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಕಾಂಗ್ರೆಸ್ ಸ್ವಾಭಾವಿಕವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ವರ್ತಿಸಬೇಕಿತ್ತು. ಕಳೆದ ಬಾರಿ ಬಿಜೆಪಿ ಬಿಬಿಎಂಪಿಯಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತೆ ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಅದರ ಬಗ್ಗೆ ಯೋಚನೆಯನ್ನೇ ಮಾಡದ ಕಾಂಗ್ರೆಸ್ ಬಿಜೆಪಿ ಗೆಲುವಿನ ಸಂಭ್ರಮದಲ್ಲಿರುವಾಗ ಒಳಗೊಳಗೇ ಬಿಬಿಎಂಪಿಯ ಅಧಿಕಾರ ಹಿಡಿಯಲಿರುವ ಎಲ್ಲಾ ಅಡ್ಡದಾರಿಗಳನ್ನು ಹುಡುಕಲಾರಂಭಿಸಿತ್ತು. ಬಿಜೆಪಿಗೂ ಸರಳ ಬಹುಮತವಿರಲಿಲ್ಲ. ಪಕ್ಷೇತರರ ಬೆಂಬಲ ಅದಕ್ಕೆ ಅಗತ್ಯವಾಗಿ ಬೇಕಿತ್ತು. ಜೊತೆಗೆ ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಬೆಂಗಳೂರಿನ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು, ಸಂಸದರೆಲ್ಲರ ಮತಗಳೂ ಅವಶ್ಯಕ. ಕಾಂಗ್ರೆಸ್ ಪಕ್ಷೇತರರನ್ನು ಸೆಳೆದರೆ ಸಾಕಾಗುತ್ತಿರಲಿಲ್ಲ. ಅಡ್ಡದಾರಿಯಿಂದ ಗೆಲ್ಲಲು ಅದಕ್ಕೆ ಜೆಡಿಎಸ್ಸಿನ ಬೆಂಬಲವೂ ಬೇಕಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಜೆಡಿಎಸ್ಸಿನ ಒಡೆಯರಾದ ದೇವೇಗೌಡರ ಕುಟುಂಬಕ್ಕೂ ಇರುವ ತಿಕ್ಕಾಟಗಳು ಎಲ್ಲರಿಗೂ ತಿಳಿದಿರುವಂತದ್ದೇ. ಬಹುಶಃ ಈ ತಿಕ್ಕಾಟವಿರುವ ಕಾರಣದಿಂದಲೇ ಏನೋ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಸೇರಿ ಬಿಬಿಎಂಪಿ ಅಧಿಕಾರ ಹಿಡಿಯುವುದರ ಬಗ್ಗೆ ಚಿಂತಿಸಲೇ ಇಲ್ಲ. ಕಳೆದ ಬಾರಿಯ ಬಿಜೆಪಿ ಸರಕಾರದಲ್ಲಿ, ಅದಕ್ಕೂ ಹಿಂದಿನ ಬಿಜೆಪಿ-ಜೆಡಿಎಸ್ ದೋಸ್ತಿ ಸರಕಾರದ ಸಮಯದಲ್ಲಿ ಕರ್ನಾಟಕದ ಹೆಸರನ್ನು ದೇಶದೆಲ್ಲೆಡೆ ಹಾಳುಗೆಡವಿದ್ದ ರೆಸಾರ್ಟ್ ರಾಜಕೀಯ ಈಗ ಬಿಬಿಎಂಪಿಯಲ್ಲೂ ಕಾಲಿಟ್ಟುಬಿಟ್ಟಿದೆ. ಪಕ್ಷೇತರರನ್ನು ಕೇರಳಕ್ಕೆ ರವಾನಿಸಲಾಗಿದೆ. ನಾವು ಬಂದಿರೋದು ಆಡಳಿತ ಹೇಗೆ ನಡೆಸಬೇಕು ಎಂದು ಕಲಿಯಲು ಎನ್ನುವ ಜೋಕುಗಳನ್ನು ಬಿಬಿಎಂಪಿ ಕಾರ್ಪೊರೇಟರ್ರುಗಳು ಮಾಡುತ್ತಿದ್ದಾರೆ. ಜೆಡಿಎಸ್ ಕೂಡ ತನ್ನವರನ್ನು ರೆಸಾರ್ಟುಗಳಿಗೆ ಅಟ್ಟುತ್ತಿದೆ! ಒಟ್ಟಿನಲ್ಲಿ ಕುದುರೆ ವ್ಯಾಪಾರ ಜೋರಾಗಿರುವಂತೆ ಕಾಣುತ್ತಿದೆ. ‘ಅಭಿವೃದ್ಧಿ’ಗಾಗಿ ಜೆಡಿಎಸ್ ಕಾಂಗ್ರೆಸ್ಸಿನ ಜೊತೆಗೆ ಕೈಜೋಡಿಸುತ್ತಿದೆಯಂತೆ! ಬಿಬಿಎಂಪಿಯಲ್ಲೊಂದು ರಾಜ್ಯದಲ್ಲೊಂದು ಪಕ್ಷ ಅಧಿಕಾರವಿದ್ದರೆ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲವೇ? 

ಸಿದ್ಧರಾಮಯ್ಯ ಸರಕಾರದ ಎಲ್ಲಾ ನೂನ್ಯತೆಗಳ ನಡುವೆ ಕಳೆದ ಬಾರಿಯಂತೆ ಅಸಹ್ಯದ ರಾಜಕಾರಣವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಇನ್ನು ಮುಂದೆ ಆ ಸಮಾಧಾನವೂ ಇಲ್ಲದಂತಾಗಿದೆ ಬಿಬಿಎಂಪಿಯ ರೆಸಾರ್ಟ್ ರಾಜಕೀಯದ ದೆಸೆಯಿಂದ. ಬಿಬಿಎಂಪಿಯ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಅಧಿಕಾರ ಹಿಡಿದರೆ ಅಚ್ಚರಿಪಡಬೇಕಿಲ್ಲ. ಕೆಲವು ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಅಧಿಕಾರ ಹಿಡಿದಿರುವುದೂ ಇದೆ! ‘ಸ್ಥಳೀಯ ಅನುಕೂಲಗಳಿಗಾಗಿ’! ಇನ್ನು ಹಲವು ಸಲ ರಾಜ್ಯ ರಾಷ್ಟ್ರ ಮಟ್ಟದಲ್ಲೇ ಜೊತೆಗಿದ್ದ ಕಾಂಗ್ರೆಸ್ – ಜೆಡಿಎಸ್ ಬಿಬಿಎಂಪಿಯಲ್ಲಿ ಒಂದಾಗುವುದು ಸಹಜ, ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವಾಗ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದು ಅನೈತಿಕ. ಈ ಅನೈತಿಕತೆಯನ್ನು ಬಿಜೆಪಿ ಬೀದಿಗಿಳಿದು ವಿರೋಧಿಸುತ್ತಿದೆ. ಕೆಲವೇ ವರುಷಗಳ ಹಿಂದೆ ಅವರೇ ಉತ್ಸಾಹದಿಂದ ಮಾಡುತ್ತಿದ್ದ ಆಪರೇಷನ್ ಕಮಲವನ್ನು ಅವರು ಮರೆತುಬಿಟ್ಟಿದ್ದಾರೆ! ಆಪರೇಷನ್ ಕಮಲ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಮಹತ್ತರ ಪಾತ್ರ ವಹಿಸಿತು ಎಂಬಂಶವನ್ನು ಆಪರೇಷನ್ ಕೈ ಆಪರೇಷನ್ ಬಿಬಿಎಂಪಿ ಮಾಡುತ್ತಿರುವ ಕಾಂಗ್ರೆಸ್ ಕೂಡ ಮರೆತುಬಿಟ್ಟಿದೆ! ಮತ್ತೆ ರಾಜಕೀಯ ಮನರಂಜನೆಯಾಗಿಬಿಡುವ ಎಲ್ಲಾ ಅಪಾಯಗಳೂ ಕಾಣುತ್ತಿವೆ…

ಆಗ 20, 2015

ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು....

ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಕನ್ನಡ, ಇಂಗ್ಲೀಷಿನ ಜೊತೆಗೆ ತೆಲುಗು, ತಮಿಳು, ಉರ್ದು ಭಾಷೆಯಲ್ಲಿಯೂ ಪ್ರಕಟಿಸಿ ಮತಗಳಿಕೆಗಾಗಿ ಕನ್ನಡತನವನ್ನು ಕೊಲ್ಲುವುದಕ್ಕೆ ತಾನು ಹಿಂಜರಿಯುವುದಿಲ್ಲ ಎಂದು ತೋರಿಸಿತ್ತು. 

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.


ಉಳಿದೆರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಂಚ ಭಾಷಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಗೆ ನಾ ಮುಂದು ತಾ ಮುಂದು ಎಂಬಂತೆ So Called ರಾಷ್ಟ್ರೀಯ ಪಕ್ಷಗಳು ತಮಿಳು ಭಾಷೆಯ ಕರಪತ್ರವನ್ನು ಹಂಚುತ್ತಿವೆ. ಕರ್ನಾಟಕದ ನಾಯಕ ಶಿರೋಮಣಿಗಳಾದ ದೇವೇಗೌಡ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಪರಮೇಶ್ವರ್, ಅನಂತಕುಮಾರ್, ಯಡಿಯೂರಪ್ಪ, ಸದಾನಂದಗೌಡ ಮುಂತಾದವರು ತಮಿಳು ಭಾಷಾ ಕರಪತ್ರದಲ್ಲಿ ಮಿಂಚುತ್ತಿರುವ ಪರಿಯನ್ನು ಆನಂದಿಸಿ ತಣ್ಣಗೆ ಒಂದು ಲೋಟ ನೀರು ಕುಡ್ಕೊಳ್ಳಿ....
BJP tamil bbmp

Congress Tamil BBMP

JDS Tamil BBMP

ಆಗ 11, 2015

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.

Dr Ashok K R
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ? 
ಆಂಧ್ರದ ಒವೈಸಿ, ಚಂದ್ರಬಾಬು ನಾಯ್ಡು ತಮಿಳುನಾಡಿನ ಜಯಲಲಿತಾ ತಮ್ಮ ತಮ್ಮ ಪಕ್ಷವನ್ನು ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸುತ್ತಿದೆಯಂತೆ ಎಂಬ ಸುದ್ದಿಗಳು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಕಾರಣವಾಯಿತಾ? ಕನ್ನಡಿಗರ ರಾಷ್ಟ್ರೀಯ ಪಕ್ಷಗಳ ಮೇಲಿನ ಪ್ರೇಮದಿಂದ ಹಿಂದಿ ಹೇರಿಕೆಯೆಂಬುದು ನಿರಂತರವಾಗಿಬಿಟ್ಟಿದೆ. ಈಗ ಬೆಂಗಳೂರಿನಲ್ಲಿ ಅನ್ಯಭಾಷಾ ಪ್ರಣಾಳಿಕೆಯನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಸರದಿ ಬೆಂಗಳೂರಿಗರದು. ಬಿಬಿಎಂಪಿ ವಿಭಜನೆಯಾಗುವ ಮುನ್ನವೇ ಭಾಷಾ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಪ್ಪಿತಪ್ಪಿ 'ಆಡಳಿತದ' ಹೆಸರಿನಲ್ಲಿ ಬಿಬಿಎಂಪಿಯನ್ನು ವಿಭಜನಗೊಳಿಸಿಬಿಟ್ಟರೆ ಯಾವ ರೀತಿ ವರ್ತಿಸಬಹುದು? ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶದಲ್ಲಿ ಕೇವಲ ತೆಲುಗು ಪ್ರಣಾಳಿಕೆ, ತಮಿಳರು ಹೆಚ್ಚಿರುವ ಕಡೆ ತಮಿಳು ಪ್ರಣಾಳಿಕೆ, ಉರ್ದು ಭಾಷಿಕರಿರುವ ಕಡೆ (ಇಲ್ಲಿರುವ ಮುಸ್ಲಿಮರು ಮಾತನಾಡುವುದು ಉರ್ದುವಾ?) ಉರ್ದು ಪ್ರಣಾಳಿಕೆಯನ್ನಷ್ಟೇ ಪ್ರಕಟಿಸಿ ಕನ್ನಡವನ್ನೇ ಮೂಲೆಗುಂಪು ಮಾಡಿಬಿಡುವ ದಿನಗಳು ದೂರವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿ ಪಕ್ಷಗಳು ನಗರಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಂತೆ ಮುಂದೊಂದು ದಿನ ಬೆಂಗಳೂರಿನ ಈ ಭಾಗವನ್ನು ಆಂಧ್ರಕ್ಕೆ ತಮಿಳುನಾಡಿಗೆ ಸೇರಿಸಿಬಿಡಿ ಎಂಬ ನಿರ್ಣಯಗಳೂ ಕೇಳಿ ಬರಬಹುದು. 
ಒಟ್ಟಿನಲ್ಲಿ ಕನ್ನಡ, ಕರ್ನಾಟಕ ಎಂದು ಎದೆತಟ್ಟಿ ಹೇಳುತ್ತಾ ದೇಶವನ್ನೇ ಎದುರುಹಾಕಿಕೊಳ್ಳುವ ಪಕ್ಷವೊಂದು ಕರ್ನಾಟಕದಲ್ಲಿ ಇಲ್ಲದ ಫಲಗಳನ್ನು ನಾವೀಗ ನೋಡುತ್ತಿದ್ದೇವೆ. ದೇಶ ಮೊದಲು ಎಂಬ 'ವಿಶಾಲ ಮನೋಭಾವವನ್ನು' ತೊರೆದು ರಾಜ್ಯ ಮೊದಲು ಭಾಷೆ ಮೊದಲು ಎಂಬ 'ಸಂಕುಚಿತ ಮನೋಭಾವವನ್ನು' ಬೆಳೆಸಿಕೊಳ್ಳದಿದ್ದರೆ ಈ ರಾಜಕಾರಣಿಗಳ ಸೋಗಲಾಡಿತನದಿಂದ ಕನ್ನಡಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ.

ಏಪ್ರಿ 11, 2015

ಬಿ.ಬಿ.ಎಂ.ಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಹಸನ!

bbmp division
ಹೂವಿನಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ತಮ್ಮದೇ ಕಾಂಗ್ರೆಸ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಉತ್ತರ ಕರ್ನಾಟಕಕ್ಕೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಪದೇ ಪದೇ ಮಾಡುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿರುವ ನಡಹಳ್ಳಿಯವರು ಪೂರ್ಣ ಕರ್ನಾಟಕವನ್ನು ಅಭಿವೃದ್ಧಪಡಿಸುವುದು ನಿಮಗೆ ಸಾಧ್ಯವಾಗದೇ ಇದ್ದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಯಾದರೂ ಮಾಡಿಬಿಡಿ ಎಂದಿದ್ದಾರೆ. ಅದನ್ನೇನು ಅವರು ಸಿಟ್ಟಿನಿಂದ, ಬೇಸರದಿಂದ ಹೇಳಿದರೋ ಅಥವಾ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂಬರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಎಂಟು ವರುಷಗಳ ಹಿಂದೆ ‘ಬೃಹತ್ತಾಗಿಸಿದ್ದ’ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬಲವಂತದಿಂದ ಮತ್ತೆ ಚಿಕ್ಕದು ಮಾಡಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೊರಟಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪ್ರತ್ಯೇಕ ರಾಜ್ಯ ಬೇಡಿಕೆಯೂ ಸರಿಯೇ ಅಲ್ಲವೇ?!

ಒಂದು ವರದಿಯ ಪ್ರಕಾರ 1949ರಲ್ಲಿ ಬೆಂಗಳೂರು ನಗರ ಪಾಲಿಕೆ ಅರವತ್ತೊಂಭತ್ತು ಚದರ ಕಿ.ಮಿಗಳಷ್ಟು ಮಾತ್ರವಿತ್ತು. ರಾಜಧಾನಿಯೆಂಬ ಕಾರಣ, ಆರ್ಥಿಕತೆ ಇಲ್ಲೇ ಕೇಂದ್ರೀಕೃತವಾದಂತೆ ಉದ್ಯೋಗಗಳನ್ನರಸಿ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೆ ದೇಶದ ವಿವಿದೆಡೆಯಿಂದಲೂ ಬೆಂಗಳೂರಿಗೆ ವಲಸೆ ಬರುವವರ ಸಂಖೈ ಹೆಚ್ಚುತ್ತಲೇ ಸಾಗಿತು. 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದಿದ್ದು ನೂರು ವಾರ್ಡುಗಳು. ‘ಅಭಿವೃದ್ಧಿ’ಗೆ ಪೂರಕವಾಗಲಿ ಎಂಬ ಕಾರಣದಿಂದ ಈ ನೂರು ವಾರ್ಡುಗಳ ಜೊತೆಗೆ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೃಷ್ಣರಾಜಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಕೆಂಗೇರಿ ನಗರ/ಪಟ್ಟಣ ಪಂಚಾಯತ್ ಗಳನ್ನು ಬೆಂಗಳೂರು ಪಾಲಿಕೆಯ ವ್ಯಾಪ್ತಿಗೆ ತರಲಾಯಿತು. ಇದರ ಜೊತೆಜೊತೆಗೆ ನಗರಕ್ಕೆ ಹೊಂದಿಕೊಂಡ ನೂರಹನ್ನೊಂದು ಹಳ್ಳಿಗಳನ್ನೂ ಸೇರಿಸಿಕೊಂಡು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಅಸ್ತಿತ್ವಕ್ಕೆ ಬಂತು. ಅರವತ್ತೊಂಭತ್ತು ಚದರ ಕಿ.ಮಿ ಇದ್ದ ಬೆಂಗಳೂರು ಈಗ 716 ಚದರ ಕಿ.ಮಿಗಳವರೆಗೆ ಬೆಳೆದು ನಿಂತಿತು! ಮಾಗಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಾಗಡಿಯವರೆಗೂ ಚಾಚಿಕೊಳ್ಳುತ್ತಿದೆ ಎಂದರೆ ತಪ್ಪಲ್ಲ.

ಈಗ ಬೃಹತ್ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹಳ್ಳಿಗಳು ತಾವ್ಯಾವಾಗ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುತ್ತೇವೆ ಎಂದು ಕಾಯುತ್ತಿವೆ! ‘ಮಹಾನಗರ ಪಾಲಿಕೆ’ ಎಂಬ ಬೋರ್ಡು ಬಿದ್ದಾಗ ನಡೆಯುವ ರಸ್ತೆ, ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳು ನಗರ/ಪಟ್ಟಣ/ಗ್ರಾಮ ಪಂಚಾಯ್ತಿ ಎಂಬ ಬೋರ್ಡು ಬಿದ್ದಾಗ ನಡೆಯುವುದಿಲ್ಲ ಎಂಬುದು ಇದಕ್ಕೆ ಒಂದು ಕಾರಣವಾದರೆ ‘ಬಿ.ಬಿ.ಎಂ.ಪಿ’ ವ್ಯಾಪ್ತಿಕೆ ಒಳಪಟ್ಟ ಕ್ಷಣದಿಂದಲೇ ಭೂಮಿಯ ಬೆಲೆ ಆಕಾಶಕ್ಕೇರುವುದು ಮತ್ತೊಂದು ಕಾರಣ. ‘ಮಹಾನಗರ ಪಾಲಿಕೆ’ಯ ವ್ಯಾಪ್ತಿಯಲ್ಲಿ ನಡೆಯುವ ‘ಅಭಿವೃದ್ಧಿ’ ಕೆಲಸಗಳನ್ನು ಇತರ ಬೋರ್ಡುಗಳಡಿಯಲ್ಲೂ ಮಾಡಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಶ್ಯಕತೆಯೇ ಇರಲಿಲ್ಲವಲ್ಲವೇ? ಇಷ್ಟಗಲವಿದ್ದ ಊರನ್ನು ಊರಗಲ ಮಾಡಿ ಒಂದು ಸರಕಾರ ತಪ್ಪು ಮಾಡಿದರೆ ‘ಇಲ್ಲಾರೀ ಇದ್ಯಾಕೋ ಸರಿ ಕಾಣ್ತಿಲ್ಲ’ ಎಂದು ಬಿ.ಬಿ.ಎಂ.ಪಿಯನ್ನೇ ಮೂರು ಭಾಗ ಮಾಡಲೊರಟು ಈಗಿನ ಸರಕಾರ ಮತ್ತೊಂದು ತಪ್ಪು ಮಾಡುತ್ತಿದೆ. ಆಗಿನ ಮತ್ತು ಈಗಿನ ಸರಕಾರ ಮತ್ತು ಮುಖ್ಯಮಂತ್ರಿಗಳು ಬೇರೆ ಬೇರೆಯಾದರೂ ಒಟ್ಟಿನಲ್ಲಿ ಇವರೆಲ್ಲರ ಆಡಳಿತ ನೀತಿ ತುಘಲಕ್ಕನ ತಿಕ್ಕಲುತನವನ್ನು ತೋರುತ್ತಿದೆಯಲ್ಲವೇ?

ಎಲ್ಲವೂ ಅಂತರ್ಜಾಲಮಯವಾಗಿರುವಾಗ ಬಿ.ಬಿ.ಎಂ.ಪಿಯನ್ನು ಒಂದಾಗಿಯೇ ಇಟ್ಟು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದು ಕಷ್ಟದ ಮಾತೇನಲ್ಲ. ವಿಭಜನೆಗೆ ಸರಕಾರ ಅಭಿವೃದ್ಧಿಗೆ ಪೂರಕವಾದ ನಿರ್ಧಾರವಿದು ಎಂಬ ಸಮರ್ಥನೆ ಕೊಟ್ಟುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ ಈ ವಿಭಜನೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆಯ ಮೊರೆ ಹೊಕ್ಕಿರುವುದು ಇದು ರಾಜಕೀಯ ಕಾರಣದ ವಿಭಜನೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ವಿಭಜನೆಯ ನೆಪದಲ್ಲಿ ಬಿ.ಬಿ.ಎಂ.ಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಲು ಸಾಧ್ಯವೇ ಎಂಬ ಯೋಚನೆ ಕೂಡ ಸರಕಾರಕ್ಕಿರುವಂತಿದೆ. ಮೂರು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮೂವರು ಮೇಯರ್ರುಗಳು, ಮತ್ತಷ್ಟು ಹುದ್ದೆಗಳು, ಮತ್ತಷ್ಟು ಹೊರೆ, ಆ ಮೂರು ಭಾಗಗಳಿಗೆ ಮತ್ತಷ್ಟು ಹಳ್ಳಿಗಳ ಸೇರ್ಪಡೆ, ನಂತರ ಮತ್ತೆ ಆ ಮೂರು ಭಾಗಗಳನ್ನು ಆರು ಭಾಗಗಳನ್ನಾಗಿ………. ಇವೆಲ್ಲ ಕೊನೆಗಾಣುವುದಾದರೂ ಯಾವಾಗ? ಬೆಂಗಳೂರಿನಲ್ಲೇ ಠಿಕಾಣಿ ಹಾಕಬಯಸುವ ಉದ್ದಿಮೆಗಳನ್ನು ಮತ್ತೊಂದು ನಗರದತ್ತ ಹೋಗುವಂತೆ ಮಾಡುವವರೆಗೂ ಈ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ.

ಸತ್ಯಕ್ಕೆ ಹತ್ತಿರವಾದ ಮತ್ತೊಂದು ಭಯವೆಂದರೆ ಈಗಾಗಲೇ ಸೊರಗಿರುವ ಬೆಂಗಳೂರಿನ ಕನ್ನಡ ಮತ್ತಷ್ಟು ನಿಶ್ಯಕ್ತವಾಗಿಬಿಡಬಹುದು. ಪರಭಾಷಿಕರನ್ನು ಬಿಡಿ ಕನ್ನಡಿಗ ಉದ್ಯಮಿಗಳನೇಕರು ಬೆಂಗಳೂರನ್ನು ಕೇಂದ್ರಾಡಳಿತ ಮಾಡಬೇಕೆಂದು ಆಗೀಗ ಮಾತನಾಡಿದ್ದಿದೆ. ಕರ್ನಾಟಕಕ್ಕೇ ಸೇರಿದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಬಹುಮತ ಸಿಕ್ಕಿದಾಗಲೆಲ್ಲ ಕನ್ನಡ, ಕರ್ನಾಟಕದ ವಿರುದ್ಧ ನಿರ್ಣಯ ಜಾರಿಗೊಳಿಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸಿ ಮುಂದಿನ ಸಲದ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಶಾಸಕರು, ಸಂಸದರು ಪಕ್ಷಾತೀತವಾಗಿ ಸುಮ್ಮಗಿದ್ದುಬಿಡುತ್ತಾರೆ! ಕಾರಣ ಮರಾಠಿ ಭಾಷಿಕರ ಮತಗಳು ತಮ್ಮ ಕೈತಪ್ಪಿ ಹೋದರೆ ಎಂಬ ಭಯ!. ಅನ್ಯಭಾಷಿಕರ ಸಂಖೈ ಹೆಚ್ಚುತ್ತಿರುವ ಬೆಂಗಳೂರನ್ನು ಈಗ ವಿಭಜಿಸಿದರೆ ಬೆಳಗಾವಿಯಲ್ಲಿ ನಡೆದದ್ದು ಬೆಂಗಳೂರಿನಲ್ಲಿ ನಡೆಯದೇ ಇದ್ದೀತೆ? ತಮಿಳು, ತೆಲುಗು, ಹಿಂದಿ ಭಾಷಿಕರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ಬೆಂಗಳೂರಿನ ಶಾಸಕ – ಸಂಸದರು ಮೌನವಾಗಿದ್ದುಬಿಟ್ಟರೆ ಕನ್ನಡದ ಗತಿಯೇನಾಗಬೇಕು? ಇವ್ಯಾವುದನ್ನೂ ಯೋಚಿಸದೆ ತತ್ ಕ್ಷಣದ ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ವಿಭಜಿಸುವ ನಿರ್ಧಾರವನ್ನು ಅತ್ಯಾತುರದಿಂದ ತೆಗೆದುಕೊಳ್ಳುತ್ತಿರುವ ಸಿದ್ಧರಾಮಯ್ಯ ಬೆಂಗಳೂರಿನ ಭವಿಷ್ಯದ ಭಾಷಾ ಕಲಹಕ್ಕೆ ಮುನ್ನುಡಿ ಬರೆಯುತ್ತಿದ್ದಾರಾ?