Oct 12, 2014

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ ಪುಸ್ತಕ ಬಿಡುಗಡೆ ಸಮಾರಂಭ

jim corbet kannada book
ದೀಪ ಬೆಳಗಿದ ನಾರಾಯಣಗೌಡರು
Dr Ashok K R


ಡಾ ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಲ್ಲವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಡಾ.ಎನ್ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” ಪುಸ್ತಕ ಶನಿವಾರ (10/10/2014) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪಲ್ಲವ ಪ್ರಕಾಶನದ ಡಾ ವೆಂಕಟೇಶ್, ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಡಾ. ನಲ್ಲೂರು ಪ್ರಸಾದ್, ಪ್ರೊ. ಹಂಪನಾ, ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್, ಡಾ. ಎನ್. ಜಗದೀಶ್ ಕೊಪ್ಪ, ವಿಜಯ ಕರ್ನಾಟಕದ ಪತ್ರಕರ್ತ ಮತ್ತು ಕವಿ ಎಸ್. ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
Also Read

hingyake
ಕರವೇಯ ನಾರಾಯಣಗೌಡರು ಪುಸ್ತಕ ಸಿಕ್ಕಿದ್ದೇ ಈಗಾದ್ದರಿಂದ ಪುಸ್ತಕದ ಬಗ್ಗೆ ಮಾತನಾಡುವುದು ಕಷ್ಟ. ತಮ್ಮ ವೇದಿಕೆಯ ವತಿಯಿಂದ ರಾಜ್ಯದ ಇಪ್ಪತ್ತು ಮೂರು ಸಾವಿರ ಶಾಲೆಗಳ ಗೃಂಥಾಲಯಗಳಿಗೆ ಪುಸ್ತಕಗಳನ್ನು ನೀಡುತ್ತಿದ್ದು ಜಗದೀಶ್ ಕೊಪ್ಪರವರ ಪುಸ್ತಕವನ್ನು ಅದರಲ್ಲಿ ಸೇರಿಸಲಾಗುತ್ತದೆ ಎಂದರು. ಕರವೇಯ ಗಂಗಾ ಪ್ರಕಾಶನದಿಂದ ಈಗಾಗಲೇ ಐವತ್ತು ಪುಸ್ತಕಗಳನ್ನು ಹೊರತಂದಿದ್ದು ಮುಂದಿನ ವರುಷ ಇನ್ನೂ ಐವತ್ತು ಪುಸ್ತಕಗಳನ್ನು ಹೊರತರುವ ಯೋಜನೆಯಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ಡಾ. ನಲ್ಲೂರು ಪ್ರಸಾದ್ ನಾರಾಯಣಗೌಡರು ಕವಿಯೂ ಹೌದು ಎಂದು ಬಹುತೇಕರಿಗೆ ತಿಳಿಯದ ವಿಷಯವನ್ನು ಅರುಹಿ ಅಚ್ಚರಿಗೊಳಪಡಿಸಿದರು. ಅವರ ಎಂಟು ಪುಸ್ತಕಗಳು ಪ್ರಕಟವಾಗಿವೆಯಂತೆ. ತಮ್ಮ ಶಿಷ್ಯನಾದ ಡಾ. ಎನ್ ಜಗದೀಶ್ ಕೊಪ್ಪರವರು ಓದಿನ ಮೇಲಿನ ಪ್ರೀತಿಯಿಂದ ಅನುಭವಿಸಿದ ಬವಣೆಯನ್ನು ವಿವರಿಸಿದ ಡಾ. ನಲ್ಲೂರು ಪ್ರಸಾದ್ ಹೇಗೆ ಜಿಮ್ ಕಾರ್ಬೆಟ್ ನ ಜೀವನಗಾಥೆ ಒಂದು ಅದ್ಭುತವೋ ಅದೇ ರೀತಿ ಜಗದೀಶ್ ಕೊಪ್ಪ ಬೆಳೆದ ರೀತಿಯೂ ಒಂದು ಅದ್ಭುತವೇ ಎಂದು ಹೇಳಿದರು. ಡಾ ಜಗದೀಶ್ ಕೊಪ್ಪರವರ ಹಿಂದಿನ ಕೃತಿಗಳಾದ ‘ಮರುಭೂಮಿಯ ಹೂ’ ಮತ್ತು ‘ಪುತ್ರಶೋಕ’ವನ್ನು ಪ್ರಸ್ತಾಪಿಸಿ ಆ ಪುಸ್ತಕಗಳು ನಮ್ಮನ್ನು ಆದ್ರಗೊಳಿಸಿದಂತೆ ಹೊಸತು ಸಂಗತಿಗಳನ್ನು ತಿಳಿಸಿದಂತೆ ಜಿಮ್ ಕಾರ್ಬೆಟ್ ಪುಸ್ತಕ ಕೂಡ ಮೆಚ್ಚುಗೆಯಾಗುತ್ತದೆ ಎಂದರು. ಅನುವಾದದ ಕೃತಿಗಳಿಗೂ ಕ್ಷೇತ್ರ ಕಾರ್ಯದ ಅಗತ್ಯತೆಯನ್ನು ಒತ್ತಿ ಹೇಳಿದರು.
Related Article
ಪುಸ್ತಕದ ಬಗ್ಗೆ ಮಾತನಾಡಿದ ಕುಮಾರ್ ಪುಸ್ತಕದ ಬಗ್ಗೆ ಮಾತನಾಡಿ ಕನ್ನಡದಲ್ಲಿ ಅಧ್ಯಯನದಿಂದ ಕೂಡಿದ ಕಥೆ ಕಾದಂಬರಿಯನ್ನೊರತುಪಡಿಸಿದ non fiction ಪುಸ್ತಕಗಳ ಅಭಾವವಿತ್ತು. ಜಗದೀಶ್ ಕೊಪ್ಪರವರು ತಮ್ಮ ಜೀವನದಿಗಳ ಸಾವಿನ ಕಥನ, ಬಿಳಿ ಸಾಹೇಬನ ಭಾರತದ ಮೂಲಕ ಅಭಾವವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಪುಸ್ತಕದಲ್ಲಿ ಜಿಮ್ ಕಾರ್ಬೆಟ್ಟಿನ ಮಾನವೀಯ ಮುಖದ ದರ್ಶನ, ಇಲ್ಲಿಯವರೆಗೆ ಒಬ್ಬ ಬೇಟೆಗಾರನಾಗಿಯಷ್ಟೇ ನಮಗೆ ಗುರುತಾಗಿದ್ದ ಜಿಮ್ ಕಾರ್ಬೆಟ್, ಒಬ್ಬ ಸಾಮಾಜಿಕ ಕಳಕಳಿಯಿರುವ, ಬಡವರಿಗಾಗಿ ನೊಂದವರಿಗಾಗಿ ತುಡಿಯುವ – ದುಡಿಯುವ ವ್ಯಕ್ತಿಯಾಗಿದ್ದ ರೀತಿಯನ್ನು ಕೊಪ್ಪರವರು ಬಿಚ್ಚಿಟ್ಟ ರೀತಿಯನ್ನು ವಿವರಿಸಿದರು. ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್ ಮಾತನಾಡಿ ಗೆಳೆಯ ಜಗದೀಶ್ ಕೊಪ್ಪರವರ ಸ್ವಾಭಿಮಾನವನ್ನು ಬಣ್ಣಿಸಿದರು. ಇತ್ತೀಚೆಗೆ ಉದಯ ವಾಹಿನಿಯಿಂದ ನಿವೃತ್ತರಾಗುವ ಸಂದರ್ಭ ಬಂದಾಗ ಕೊಪ್ಪರವರು ಮಗನಿಗೆ ಹೊರೆಯಾಗಬಾರದೆಂಬ ಕಾರಣದಿಂದ ರಾಜೀನಾಮೆ ಪತ್ರ ನೀಡಿದ ತಕ್ಷಣವೇ ಮತ್ತೊಂದು ಕೆಲಸ ಹುಡುಕಲು ಪ್ರಾರಂಭಿಸಿದ ರೀತಿಯನ್ನು ತಿಳಿಸಿದರು. ಉದಯ ವಾಹಿನಿಯೇ ಮತ್ತೆ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರಿಂದ ಹೊಸ ಕೆಲಸ ಹುಡುಕುವ ಪ್ರಮೇಯ ಅವರಿಗೆ ಬರಲಿಲ್ಲ ಎಂದು ತಿಳಿಸುತ್ತ ಮನೆಯವರು ಪ್ರಾಮಾಣಿಕರಾಗಿದ್ದಾರೆ ಸ್ವಾಭಿಮಾನಿಗಳಾಗಿದ್ದರೆ ಆ ಮನೆಯ ಸರಕಾರಿ ಕೆಲಸದಲ್ಲಿರುವವರು ಭ್ರಷ್ಟರಾಗುವ ಸಂಭವ ಕಡಿಮೆ ಎಂದರು.
jagadish koppa
ಡಾ. ಎನ್ ಜಗದೀಶ್ ಕೊಪ್ಪ ತಮ್ಮ ಮಾತುಗಳಲ್ಲಿ ಮಂಡ್ಯದ ಕೊಪ್ಪದಲ್ಲಿ ಕಳೆದ ತಮ್ಮ ಬಾಲ್ಯ, ಕಷ್ಟ, ಬೋಂಡಾ ಕಟ್ಟಲು ಬಳಸಿದ ಪೇಪರನ್ನು ಒರೆಸಿ ಓದುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಓದುವ ಸಲುವಾಗಿ ನಾನಾ ಕೆಲಸಗಳನ್ನು ಮಾಡುತ್ತ ಊರು ತೊರೆದದ್ದು, ನಲವತ್ತೆಂಟನೇ ವಯಸ್ಸಿಗೆ (ಬಹುತೇಕರು ಓದುವ ಹವ್ಯಾಸವನ್ನೇ ತೊರೆದ ವಯಸ್ಸದು) ಪಿ.ಎಚ್.ಡಿ ಮಾಡಿದ್ದನ್ನು ತಿಳಿಸಿದರು. ದಶಕದ ಹಿಂದೆ ಲಂಕೇಶರು ಜಿಮ್ ಕಾರ್ಬೆಟ್ ಕೇವಲ ಬೇಟೆಗಾರನಾಗಿರಲಿಲ್ಲ ಎಂದು ವಿವರಿಸಿದ್ದನ್ನು ನೆನಪಿಟ್ಟುಕೊಂಡು ಈ ಪುಸ್ತಕವನ್ನು ಬರೆದಿದ್ದಾರೆ. ತಮ್ಮ ಮುಂದಿನ ಪುಸ್ತಕಗಳಾದ ಸುಬ್ಬಲಕ್ಷ್ಮಿ ಮತ್ತದನ್ನು ಬರೆದು ಮುಗಿಸಿದ ನಂತರ ಬರೆಯಬೇಕಿರುವ ಮೋಹನದಾಸ ಕರಮಚಂದ ಗಾಂಧಿಯ ಜೀವನಕಥನದ ಬಗ್ಗೆ ಮಾತನಾಡಿದರು. ಗಾಂಧಿಯ ಮೊಮ್ಮಗನೊಬ್ಬ ಮೈಸೂರಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಎಂಬ ಅಚ್ಚರಿಯ ವಿಷಯ ತಿಳಿಸಿ ಇಂತಹ ಅನೇಕ ಅಚ್ಚರಿಗಳು ಆ ಪುಸ್ತಕದಲ್ಲಿರುತ್ತವೆ ಎಂದು ಪುಸ್ತಕದ ಬಗೆಗಿನ ನಿರೀಕ್ಷೆಗಳನ್ನು ಹೆಚ್ಚಿಸಿದರು.

No comments:

Post a Comment