ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ನೋಡಿದರೆ ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನ ನಡೆದ ನಂತರದ ಸಮೀಕ್ಷೆಗಳು ಛತ್ತೀಸ ಗಢ್ ರಾಜ್ಯದಲ್ಲಿ ಬಾಜಪ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳ ಬಗ್ಗೆಯೇ ಹೇಳಿದ್ದವು. ಆದರೆ ಎಲ್ಲ ಭವಿಷ್ಯಗಳನ್ನು ಸುಳ್ಳು ಮಾಡುವಂತೆ ಕಾಂಗ್ರೆಸ್ ಇಲ್ಲಿ ಭರ್ಜರಿಯಾಗಿ ಗೆದ್ದು ಬಾಜಪಕ್ಕೆ ಹೀನಾಯ ಸೋಲನ್ನು ಕರುಣಿಸಿದೆ. ಮದ್ಯಪ್ರದೇಶ ಮತ್ತು ರಾಜಾಸ್ಥಾನಕ್ಕೆ ಹೋಲಿಸಿದಲ್ಲಿ ಇಲ್ಲಿ ಬಾಜಪದ ಸೋಲು ಅನಿರೀಕ್ಷಿತ ಮತ್ತು ಅಗಾಧವಾದದ್ದು. ಆದರೆ ಈ ರಾಜ್ಯದ ಪಲಿತಾಂಶಗಳು ಎಲ್ಲ ಪಕ್ಷಗಳಿಗೂ ಒಂದು ಪಾಠವಾಗಿದೆ.
2013ರ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಾಜಪ 49 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದ್ದರೆ, ಕಾಂಗ್ರೆಸ್ 39ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದಿದ್ದರೆ ಬಾಜಪ ಕೇವಲ 16 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ. ಮತಗಳಿಕೆಯ ಪ್ರಮಾಣದಲ್ಲಿ ಎರಡೂ ಪಕ್ಷಗಳ ನಡುವೆ ಶೇಕಡಾ 12 ರಷ್ಟು ವ್ಯತ್ಯಾವಿದೆ. ಇಷ್ಟು ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸಬಹುದೆಂದು ಸ್ವತ: ಕಾಂಗ್ರೆಸ್ಸಿನವರೆ ನಿರೀಕ್ಷಿಸಿರಲಿಲ್ಲವೆಂಬುದು ನಿಜ. ಯಾಕೆಂದರೆ ಕಳೆದ ಹದಿನೈದು ವರ್ಷಗಳಿದ ಆಡಳಿತ ನಡೆಸುತ್ತಿದ್ದ ಬಾಜಪವನ್ನು, ಬಲಾಡ್ಯ ಮುಖ್ಯಮಂತ್ರಿ ಶ್ರೀ ರಮಣ್ ಸಿಂಗ್ ಅವರನ್ನು ಸೋಲಿಸಲು ಕಾಂಗ್ರೆಸ್ಸಿನಲ್ಲಿ ಸ್ಥಳೀಯವಾಗಿ ಬಲಿಷ್ಠ ನಾಯಕರು ಇರಲಿಲ್ಲ. ಶ್ರೀ ಅಜಿತ್ ಜೋಗಿಯವರು ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷವೊಂದನ್ನು ಕಟ್ಟಿದ ನಂತರವಂತು ಕಾಂಗ್ರೆಸ್ ಕಷ್ಟದಲ್ಲಿತ್ತು. ಕಾಂಗ್ರೆಸ್ಸಿನ ಮತಗಳನ್ನು ಅಜಿತ್ ಜೋಗಿಯವರು ಕಸಿದುಕೊಳ್ಳುವ ಮೂಲಕ ಬಾಜಪಕ್ಕೆ ಚತ್ತೀಸಗಡ್ ಸುಲಭದ ತುತ್ತಾಗುತ್ತದೆಯೆಂದು ಬಹಳ ಜನ ಹೇಳಿದ್ದರು. ಆದರೆ ಜೋಗಿಯವರ ಮ್ಯಾಜಿಕ್ ನಡೆಯಲೇ ಇಲ್ಲ. ಬಾಜಪದ ಸುದೀರ್ಘ ಆಳ್ವಿಕೆಯಿಂದ ಬೇಸರಗೊಂಡಿದ್ದ ಮತದಾರರು ಜಿಗುಪ್ಸೆಗೊಂಡಂತೆ ಕಾಂಗ್ರೆಸ್ಸಿಗೆ ಮೂರನೇ ಎರಡರಷ್ಟು ಬಹುಮತ ದೊರಕಿಸಿಕೊಟ್ಟುಬಿಟ್ಟರು. ಹಾಗಿದ್ದರೆ ಇಂತಹದೊಂದು ದೊಡ್ಡ ಬದಲಾವಣೆಯ ಹಿಂದೆ ಇರಬಹುದಾದ ನೈಜ ಕಾರಣಗಳನ್ನು ಹುಡುಕುತ್ತ ಹೋದರೆ ಬೇರೆ ಕಡೆಯಲ್ಲಿನ ಕಾರಣಗಳ ಜೊತೆ ಇಲ್ಲಿಯದೇ ಆದ ಎರಡು ದೊಡ್ಡ ಸ್ಥಳೀಯ ಕಾರಣಗಳೂ ಇವೆಯೆಂಬುದನ್ನು ನೋಡಬಹುದು.