ಕು.ಸ. ಮಧುಸೂದನ ರಂಗೇನಹಳ್ಳಿ
ನಾವೆಷ್ಟೇ ಮಾತಾಡಿದರೂ ಕೆಲವೊಮ್ಮೆ ನಮ್ಮ ಸಂವಿದಾನದ ಆಶಯಗಳನ್ನು ನಾವು ಈಡೇರಿಸಲೇ ಆಗದಂತಹ ಪರಿಸ್ಥಿತಿ ಬಂದೊದಗಿಬಿಡುತ್ತದೆ. ಪ್ರಜಾಪ್ರಭುತ್ವದ ಅಡಿಗಲ್ಲುಗಳೆಂದು ನಾವು ಕೊಂಡಾಡುವ ಚುನಾವಣೆಗಳು ಮತ್ತು ಅದರಲ್ಲಿ ಬಹುಮತ ಪಡೆಯುವ ಪಕ್ಷಗಳು ಅಧಿಕಾರ ಪಡೆಯಬೇಕೆನ್ನುವ ನಮ್ಮ ಆಶಯಗಳು ಕೆಲವೊಮ್ಮೆ ತಲೆಕೆಳಗಾಗಿ ಬಿಡುತ್ತವೆ. ಮತ್ತೆ ಕಾನೂನಿನ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಕೆಲವೊಂದು ಹೆಜ್ಜೆಗಳನ್ನಿಟ್ಟು ಪ್ರಜಾಸತ್ತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದನ್ನು ನಾನು ನಮ್ಮ ಅಸಹಾಯಕತೆಯೆಂದೇ ಬಾವಿಸುತ್ತೇನೆಯೇ ಹೊರತು ಇದು ಸರಿಯೊ-ತಪ್ಪೊ ಎಂದು ತೀರ್ಪು ನೀಡಲು ಹೋಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊನ್ನೆ ಹೊರಬಿದ್ದ ಕರ್ನಾಟಕ ರಾಜ್ಯದ ವಿದಾನಸಭಾ ಚುನಾವಣೆಗಳ ಪಲಿತಾಂಶಗಳನ್ನು ನಂತರ ನಡೆದ ಸರಕಾರ ರಚನೆಯ ಸರ್ಕಸ್ಸುಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಬೇಕಾಗುತ್ತದೆ:
ಪಲಿತಾಂಶ ಹೀಗಿತ್ತು: ಒಟ್ಟು 224 ಕ್ಷೇತ್ರಗಳ ಪೈಕಿ ಚುನಾವಣೆ ನಡೆದು ಪಲಿತಾಂಶ ಹೊರಬಿದ್ದಿದ್ದು 222 ಕ್ಷೇತ್ರಗಳಲ್ಲಿ ಮಾತ್ರ. ಇದರಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಹೀಗಿವೆ. ಬಾಜಪ-104, ಕಾಂಗ್ರೇಸ್-78, ಜನತಾದಳ-37, ಬಹುಜನ ಪಕ್ಷ-01, ಪಕ್ಷೇತರ-02. ಸರಕಾರ ರಚಿಸಲು ಬೇಕಿದ್ದ ಸಂಖ್ಯೆ- 112.