ಕು.ಸ.ಮಧುಸೂದನ್
ಇದೇ ತಿಂಗಳ 16ನೇ ಮತ್ತು 21ನೇ ತಾರೀಖಿನಂದು ಮಹಾರಾಷ್ಟ್ರದ 10ಮುನ್ಸಿಪಲ್ ಕೌನ್ಸಿಲ್ಲುಗಳಿಗೆ, 283 ಪಂಚಾಯತ್ ಸಮಿತಿಗಳಿಗೆ, 26 ಜಿಲ್ಲಾ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದರಲ್ಲಿ ಬಹು ಪ್ರಮುಖವಾದದ್ದು ಮುಂಬೈ ನಗರದ ಆಡಳಿತದ ಹೊಣೆ ಇರುವ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆಗಳಾಗಿವೆ. ಇದಕ್ಕೆ ಕಾರಣಗಳೂ ಇವೆ:
ಮುಂಬೈ ಇಂಡಿಯಾದ ವಾಣಿಜ್ಯ ನಗರಿಯಾಗಿದ್ದು ಈ ನಗರದ ಆಡಳಿತ ಹಿಡಿಯುವುದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿರುತ್ತದೆ. ದೇಶದ ಹಲವಾರು ಪುಟ್ಟ ರಾಜ್ಯಗಳ ಬಜೆಟ್ಟಿಗಿಂತ ಈ ನಗರ ಪಾಲಿಕೆಯ ಬಜೆಟ್ ದೊಡ್ಡದಿದ್ದು ವಾರ್ಷಿಕವಾಗಿ ಲಕ್ಷಾಂತರ ಕೋಟಿಗಳ ಆಯವ್ಯಯ ಮಂಡನೆಯಾಗುತ್ತಿದೆ. ಇವೆಲ್ಲವನ್ನೂ ಮೀರಿ ಮುಂಬೈ ನಗರದಲ್ಲಿ ದೇಶದ ಎಲ್ಲಾ ಭಾಗಗಳ ಜನರು ವಾಸವಾಗಿದ್ದು, ಒಂದು ಮಿನಿ ಇಂಡಿಯಾ ಎನ್ನಬಹುದಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ನೂರಾರು ಉದ್ಯಮಗಳು ಇಲ್ಲವೆ. ಹೀಗಾಗಿ ಮಹಾರಾಷ್ಟ್ರದ ಪೌರ ಚುನಾವಣೆಗಳಲ್ಲಿ ಮುಂಬೈ ನಗರ ಪಾಲಿಕೆಯ ಚುನಾವಣೆಗಳಿಗೆ ವಿಶೇಷ ಮಹತ್ವ ಇದೆ.