ಅಕ್ಟೋ 14, 2015

ಯಾಕೆ ಕಾಡುತಿದೆ ಸುಮ್ಮನೆ ನನ್ನನು: ಪುಸ್ತಕ ಬಿಡುಗಡೆ.

ಅವಧಿ ವೆಬ್ ಪತ್ರಿಕೆಯಲ್ಲಿ ಪ್ರಕಟವಾದ ಸಂಧ್ಯಾ ರಾಣಿಯವರ ಆಯ್ದ ಬರಹಗಳ ಸಂಗ್ರಹ "ಯಾಕೆ ಕಾಡುತಿದೆ ಸುಮ್ಮನೆ ನನ್ನನು" ಇದೇ ಭಾನುವಾರ (18, ಅಕ್ಟೋಬರ್) ಬಿಡುಗಡೆಗೊಳ್ಳಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹತ್ತು ಘಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಪಲ್ಲವ ಪ್ರಕಾಶನದಿಂದ ಪ್ರಕಟಿತವಾಗಿದೆ.

ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡುಗಳು? ಚಂದ್ರಶೇಖರ್ ಐಜೂರ್

ಚಂದ್ರಶೇಖರ್ ಐಜೂರ್.
ತುಂಬಾ ದಿನಗಳಿಂದ ನನ್ನೊಳಗೆ ಅವಿತು ಕೂತು ಮಿದುಳು ಸೇರಿ ತೂತು ಕೊರೆಯುತ್ತಿದ್ದ ಒಂದೆರಡು ಮಾತುಗಳನ್ನು ಈಗ ಹೇಳಬೇಕಿದೆ.

ದಲಿತರ ಬಗ್ಗೆ, ದಲಿತರ ಹೃದಯವಂತಿಕೆಯ ಬಗ್ಗೆ ಎರಡು ಮಾತು ಹೇಳಬೇಕಿದೆ:
ದಲಿತ ಸಂಘರ್ಷ ಸಮಿತಿ ಆಯೋಜಿಸುವ ಅಧ್ಯಯನ ಶಿಬಿರವನ್ನು ಜಿ.ಕೆ.ಗೋವಿಂದರಾವ್ ಉದ್ಘಾಟಿಸುತ್ತಾರೆ; ಬಹುಜನ ವಿದ್ಯಾರ್ಥಿ ಸಂಘದ ಅನೇಕ ಕಾರ್ಯಕ್ರಮಗಳ ಜೊತೆ ದಿನೇಶ್ ಅಮಿನ್ ಮಟ್ಟು, ಡಾ.ಸಿ.ಎಸ್.ದ್ವಾರಕಾನಾಥ್ ಹೆಜ್ಜೆ ಹಾಕುತ್ತಾರೆ; ಮೇಲ್ಜಾತಿಯ ಸತೀಶ್ ಚಂದ್ರ ಮಿಶ್ರಾ ಇವತ್ತಿನ ಬಿ.ಎಸ್.ಪಿ. ಜನರಲ್ ಸೆಕ್ರೆಟರಿ; ಕುರುಬ ಸಮುದಾಯದ ಕಾಂಚ ಐಲಯ್ಯನವರಿಲ್ಲದ ದಲಿತಪರ ಹೋರಾಟಗಳನ್ನು ಆಂಧ್ರ ಪ್ರದೇಶದಲ್ಲಿ ಕಾಣಲು ಸಾಧ್ಯವೇ ಇಲ್ಲ; ಸಂತ ಕಬೀರ್ ಮತ್ತು ಜ್ಯೋತಿಬಾ ಫುಲೆ ಅಂಬೇಡ್ಕರರ ಮಾನಸ ಗುರುಗಳು; ದ್ರಾವಿಡ ಸಮುದಾಯದ ಪೆರಿಯಾರ್, ಶೂದ್ರ ದೊರೆ ಶಾಹು ಮಹಾರಾಜ್, ಯಾದವ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಬ್ರಾಹ್ಮಣ ಸಮುದಾಯದ ಕುದ್ಮುಲ್ ರಂಗರಾವ್ ಇವತ್ತಿಗೂ ದಲಿತರ ಪ್ರಾತಃಸ್ಮರಣೀಯರು…

ಆದರೆ…

ಈ ಹಿಂದುಳಿದ, ಒಕ್ಕಲಿಗ, ಲಿಂಗಾಯತ… ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಶೂದ್ರರ ಸಾರ್ವಜನಿಕ (ಸಾಹಿತ್ಯಕ, ಸಾಂಸ್ಕೃತಿಕ, ಸಾಮುದಾಯಿಕ, ರಾಜಕೀಯ) ವೇದಿಕೆಗಳಲ್ಲಿ ಮಾತ್ರ ಇವತ್ತಿಗೂ ದಲಿತರ ಪ್ರವೇಶ ನಿಷಿದ್ಧ. ಯಾಕಿಂಥ ದುಸ್ಥಿತಿಗೆ ಈ ಶೂದ್ರರು ತಲುಪಿದ್ದಾರೆ? ಇದು ಬ್ರಾಹ್ಮಣ್ಯದ ಇನ್ನೊಂದು ವರಸೆಯೇ ಅಲ್ಲವೇ?

ಒಕ್ಕಲಿಗರ ಸಂಘದಲ್ಲಿ ಒಕ್ಕಲಿಗನೇ ಶ್ರೇಷ್ಠ 
ಲಿಂಗಾಯತರ ಸಂಘದಲ್ಲಿ ಲಿಂಗಾಯತನೇ ಶ್ರೇಷ್ಠ 
ಕುರುಬರ ಸಂಘದಲ್ಲಿ ಕುರುಬನೇ ಶ್ರೇಷ್ಠ

ಕಡೆಗೆ ಈ ವಿಶ್ವಬ್ಯಾಂಕ್ನೋರೇನಾದ್ರೂ ‘ವಿಶ್ವ ಸುಂದರಿ’ ಸ್ಪರ್ಧೆ ನಡೆಸಿ ಅಂಥ ಇವರುಗಳ ಕೈಗೆ ಒಂದಿಷ್ಟು ಇಡುಗಂಟೇನಾದ್ರೂ ಕೊಟ್ರೆ… ಒಂದು ಕ್ಷಣವೂ, ಒಂದು ನಯಾ ಪೈಸೆಯೂ ವೇಸ್ಟಾಗದಂತೆ ತಮ್ಮತಮ್ಮ ಜಾತಿಯೊಳಗೆಯೇ ‘ಸುಂದ್ರಿ’ಯೊಬ್ಬಳನ್ನು ಆಯ್ಕೆಮಾಡಿ ಇವಳೇ ಜಗತ್ತಿನ ಏಕಮಾತ್ರ ‘ವಿಶ್ವಸುಂದರಿ’ ಎಂದು ಹೇಳಿ ಈ ಶೂದ್ರರು ಬೀಗಬಲ್ಲರು.

ಕರ್ನಾಟಕದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳ್ಯಾವುವು ಕೈಯೆತ್ತಿ ಅಂದ್ರೆ ಕ್ಷಣಕೂಡ ತಡಮಾಡದೆ ಕೈಯೆತ್ತುವುದು ಶೂದ್ರ ಜಾತಿಗಳೇ. ಹಾಗೇ, ಕರ್ನಾಟಕದಲ್ಲಿ ಸಾಮಾಜಿಕವಾಗಿ ಬಲಿಷ್ಠ ಜಾತಿಗಳ್ಯಾವುವು ಕೈಯೆತ್ತಿ ಅಂದ್ರೆ ಒಂದೇ ಒಂದು ಸೆಕೆಂಡ್ ಕೂಡ ತಡಮಾಡದೆ ಕೈಯೆತ್ತುವುದು ಇದೇ ಶೂದ್ರ ಜಾತಿಗಳು.

ಇಂಥ ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡ್ ಗಳು. ಇಂಥ ಶೂದ್ರರಿಂದಲೇ ಅಲ್ಲವೇ ಬ್ರಾಹ್ಮಣ್ಯ ಉಸಿರಾಡುತ್ತಿರುವುದು? ಕರ್ನಾಟಕದಲ್ಲಿ ಇವತ್ತು ಕೋಮುಶಕ್ತಿಗಳು ಇಷ್ಟೊಂದು ಕೊಬ್ಬಲು ಲಿಂಗಾಯತರು ನೇರ ಕಾರಣ. ಅವರ ಸೊಂಟದ ಲಿಂಗ ಬ್ರಾಹ್ಮಣ್ಯದ ಜನಿವಾರದೊಳಗೆ ಬಿಗಿಯಾಗಿ ಬಿಗಿದುಕೊಂಡಿದೆ.

ಕರ್ನಾಟಕದಲ್ಲಿ ಕೋಮುವಾದ ಇನ್ನಷ್ಟು ಕೊಬ್ಬಬಹುದೇ ಹೊರತು ಶೂದ್ರರು ಬದಲಾಗುವುದಿಲ್ಲ. ಅವರು ಬದಲಾಗುವರು ಎಂಬ ನಂಬಿಕೆ ನನ್ನಲ್ಲಿ ಸಾಸಿವೆ ಕಾಳಿನಷ್ಟು ಇಲ್ಲ.
(ಚಂದ್ರಶೇಖರ್ ಐಜೂರರ ಫೇಸ್ ಬುಕ್ ಪುಟದಿಂದ ಹೆಕ್ಕಿ ತಂದದ್ದು)

ಅಕ್ಟೋ 11, 2015

ಒಗ್ಗಟ್ಟಿನಲ್ಲಿ ಬಲವಿದೆ!

ant raft south carolina
ದಕ್ಷಿಣ ಕೆರೋಲೀನಾದಲ್ಲಿ ಒಂದೇ ಸಮನೆ ಸುರಿದ ಮಳೆಗೆ ಪ್ರವಾಹ ಪರಿಸ್ಥಿತಿ. ಪ್ರವಾಹವೆಂದರೆ ಮನುಷ್ಯನನ್ನೂ ಸೇರಿಸಿ ಸಕಲ ಪಕ್ಷಿ – ಪ್ರಾಣಿ ಸಂಕುಲಕ್ಕೂ ಭಯವೇ. ಈ ಭಯದಿಂದ ಇರುವೆಗಳೂ ಹೊರತಲ್ಲ. ಪ್ರವಾಹಕ್ಕೆ ಸಿಲುಕಿದ ಮನುಷ್ಯನನ್ನೇನೋ ಇತರರು ದೋಣಿಗಳ ಮೂಲಕ, ಹೆಲಿಕಾಪ್ಟರಿನ ಮೂಲಕ ಬಚಾವು ಮಾಡಿಬಿಡುತ್ತಾರೆ. ಕೆಂಪು ಇರುವೆಗಳು ಈ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಬಗೆ ಸ್ಪೂರ್ತಿಯಾಗುವಂತಹುದು.
ಇರುವೆ ನೀರಿನಲ್ಲಿ ಬಿದ್ದಾಗ ಸ್ವಲ್ಪ ಮಟ್ಟಿಗೆ ತೇಲಿ ಸ್ವಲ್ಪ ಮಟ್ಟಿಗೆ ಈಜಬಲ್ಲದು. ಈ ತೇಲುವಿಕೆ ಈಜುವಿಕೆಯೆಲ್ಲ ಸ್ವಲ್ಪ ಹೊತ್ತು ನಡೆದು ಇರುವೆ ಮುಳುಗಿ ಬಿಡುತ್ತದೆ. ಒಂಟಿಯಾಗಿ ಮುಳುಗಿಹೋಗುವುದನ್ನು ತಪ್ಪಿಸಲು ಸಾವಿರಾರು ಇರುವೆಗಳ ಸೈನ್ಯ ಒಂದೂವರೆ ನಿಮಿಷದ ಒಳಗೆ ಒಬ್ಬರಿಗೊಬ್ಬರು ಅಂಟಿಕೊಂಡು ತೆಪ್ಪ ನಿರ್ಮಿಸಿ ಪ್ರವಾಹದಲ್ಲಿ ಮುಳುಗುವುದರಿಂದ ಬಚಾವಾಗಿವೆ. ಈ ರೀತಿ ತೆಪ್ಪ ನಿರ್ಮಿಸಿಕೊಂಡರೆ ವಾರಗಟ್ಟಲೆ ತೇಲಿಕೊಂಡೇ ಇರುವಷ್ಟು ಚೈತನ್ಯ ಇರುವೆಗಳಿಗೆ ದಕ್ಕುತ್ತದೆಯಂತೆ.
ವೀಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
ಒಂಟಿಯಾಗಿದ್ದರೆ ಶೀಘ್ರ ಸಾವು; ಜೊತೆಯಲ್ಲಿದ್ದರೆ ಪ್ರವಾಹವನ್ನೇ ಎದುರಿಸಬಹುದು ಎಂಬ ಪಾಠ ಕಲಿಸಿಕೊಟ್ಟಿವೆ ಈ ಕೆಂಪು ಇರುವೆಗಳು.

ಅಕ್ಟೋ 10, 2015

ನಾವೇಕೆ ಪ್ರಶಸ್ತಿಗಳನ್ನು ಹಿಂದಿರುಗಿಸಿದೆವು? - ಅಶೋಕ್ ವಾಜಪೇಯಿ

ಅಶೋಕ್ ವಾಜಪೇಯಿ.
ಮೂಲ ಲೇಖನ: ದಿ ಹಿಂದೂ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.
ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ ನಾಲ್ಕು ತಲೆಮಾರಿಗೆ ಸೇರಿದ ನಾವು ನಾಲ್ವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸಿದೆವು. ನಾವು ಒಂಟಿಯಾಗುಳಿದಿಲ್ಲ; ಇತರೆ ಭಾಷೆಗಳ ಅನೇಕರು, ಉಳಿದ ಕಲಾ ಪ್ರಕಾರದವರು ನಮ್ಮಷ್ಟೇ ಕ್ರುದ್ಧರಾಗಿದ್ದಾರೆ, ಕೋಪಗೊಂಡಿದ್ದಾರೆ ಮತ್ತು ಭೀತರಾಗಿದ್ದಾರೆ. ನಮ್ಮದೇ ಆದ ರಾಜಕೀಯ ದೃಷ್ಟಿಕೋನಗಳಿರುವುದು ಹೌದಾದರೂ ನಾವ್ಯಾರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಆದರೆ ಭಾರತದ ರಾಜಕೀಯ ಸಾಗುತ್ತಿರುವ ಹಾದಿಯ ಬಗ್ಗೆ ನಮಗೆ ಚಿಂತೆಯಾಗುತ್ತಿದೆ. ವೈಚಾರಿಕ ಚಿಂತನೆ ಮತ್ತು ಮೌಲ್ಯಗಳು, ಪ್ರತಿಭಟನೆಗಳು, ಪರಸ್ಪರ ನಂಬುಗೆಗಳೆಲ್ಲದರ ಮೇಲೆ ದಿನದ ಲೆಕ್ಕದಲ್ಲಿ ಹಲ್ಲೆಯಾಗುತ್ತಿದೆ. ಎಲ್ಲಾ ರೀತಿಯ ಹಿಂಸಾಕೃತ್ಯಗಳು ಹೆಚ್ಚುತ್ತಿವೆ. ಅದಕ್ಕೆ ಧರ್ಮ ಮತ್ತು ಕೋಮುವಾದ, ಕೊಳ್ಳುಬಾಕತನ ಮತ್ತು ಜಾಗತೀಕರಣ, ಜಾತಿ ಮತ್ತು ಸಂಸ್ಕೃತಿ, ಸಾಮಾಜಿಕ ಮತ್ತು ವೈಯಕ್ತಿಕ – ಹೀಗೆ ಎಲ್ಲವೂ ಹಿಂಸೆಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ನಿಷೇಧ, ಅನುಮಾನ, ಭಾವನೆಗಳನ್ನು ಘಾಸಿಗೊಳಿಸುವ ಕೆಲಸವನ್ನು ಶಕ್ತಿ ಕೇಂದ್ರಗಳು ಕಾನೂನಿನ ಬಗ್ಗೆ ಕೊಂಚವೂ ಭಯವಿಲ್ಲದೆ ಮಾಡುತ್ತಿವೆ. ಪ್ರಜಾಪ್ರಭುತ್ವ ನೀಡುವ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬುಗೆ, ವೈಯಕ್ತಿಕತೆಯನ್ನು ಕೀಳಾಗಿ ಕಂಡು ಅದರಲ್ಲಿ ವಿನಾಕಾರಣ ತಲೆತೂರಿಸುವವರ ಸಂಖೈ ಹೆಚ್ಚುತ್ತಿದೆ.

ಹೊಸ ರೀತಿಯ ರಾಜಕೀಯ ಬೂಟಾಟಿಕೆ ಕೇಂದ್ರದಲ್ಲಿ ನೆಲೆ ಕಾಣುತ್ತಿದೆ. ಸ್ವಾತಂತ್ರ್ಯ, ಜಾತ್ಯತೀತತೆ, ಸಹನೆಯ ಬಗ್ಗೆ ಸಂವಿಧಾನಾತ್ಮಕವಾಗಿ ಸರಿಯಾದ ಹೇಳಿಕೆಗಳನ್ನು ನೀಡುತ್ತ ಸಂವಿಧಾನ ಮತ್ತು ಕಾನೂನನ್ನು ಮುರಿದು ವರ್ತಿಸುವವರ ಬಗ್ಗೆ ಸಂಪೂರ್ಣ ಮೌನದಿಂದಿರುವ ಪ್ರವೃತ್ತಿ ಕಾಣುತ್ತಿದೆ. ಸ್ವತಂತ್ರವಾಗಿ ಜೀವಿಸುವುದಕ್ಕೆ ನಾಗರೀಕರನಿಗಿಂದು ಹಕ್ಕಿಲ್ಲ. ಅವರು ಅನುಮತಿ ಕೊಟ್ಟರೆ ನೀವು ಜೀವಿಸಬಹುದು, ಅವರು ಒಪ್ಪಿದರೆ ನೀವು ಸ್ವತಂತ್ರವಾಗಿರಬಹುದು.

ಇವೆಲ್ಲವನ್ನೂ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಭಾರತೀಯ ಪರಂಪರೆಗೆ ಇದಕ್ಕಿಂತ ದೊಡ್ಡ ಹಾನಿ ಅಥವಾ ಅನುಮಾನ ಮತ್ತೊಂದಿರಲಾರದು. ಪ್ರಪಂಚದ ಅತಿ ಪುರಾತನ ಪರಂಪರೆಯಲ್ಲೊಂದಾಗಿರುವ ಇದು ನಾಗರೀಕ ಭಾರತಕ್ಕೆ ಸೇರಿದೆ. ಬಹುಶಃ ಪ್ರಪಂಚದ ಅತಿ ದೊಡ್ಡ ಪರಂಪರೆ ಇದು. ಭಾಷೆ, ಧರ್ಮ, ವೇಷಭೂಷಣ, ಆಚಾರ ವಿಚಾರ, ಆಹಾರ, ಕಲೆ ಇನ್ನೂ ಇತ್ಯಾದಿ ಇತ್ಯಾದಿಗಳೆಲ್ಲದರಲ್ಲೂ ಇಲ್ಲಿ ಬಹುತ್ವವಿದೆ. ಭಾರತದಲ್ಯಾವುದೂ ಏಕತ್ವವಾಗಿ ಉಳಿದಿಲ್ಲ. ಎಲ್ಲವೂ ಬಹುತ್ವವಾಗಿ ಪರಿವರ್ತನೆಯಾಗಿಬಿಡುತ್ತದೆ ಅಥವಾ ಬಹುತ್ವದ ಭಾಗವಾಗುತ್ತದೆ. ದೇವರಾಗಲಿ, ಭಾಷೆಯಾಗಲಿ, ತತ್ವಜ್ಞಾನವಾಗಲೀ, ಭಕ್ತಿ ಪೂಜೆಯಾಗಲೀ, ನಂಬಿಕೆ – ಮೌಲ್ಯಗಳಾಗಲೀ ಇಲ್ಲಿ ಏಕತ್ವವನ್ನು ಉಳಿಸಿಕೊಂಡಿಲ್ಲ, ಕಾಲ ಸರಿದಂತೆ ಬಹುತ್ವವನ್ನು ಆಲಂಗಿಸಿಕೊಂಡಿವೆ. ಈ ಬಹುತ್ವವನ್ನು ವಿರೋಧಿಸುವ, ಅದನ್ನು ಏಕವಾಗಿ ಪರಿವರ್ತಿಸಿದರೆ  ಸಮಾಜವನ್ನು ನಿಯಂತ್ರಿಸುವುದು ಸುಲಭ ಎಂದು ನಂಬುವ ಶಕ್ತಿಗಳು ಯಾವಾಗಲೂ ನಮ್ಮ ನಡುವೆ ಇದ್ದೇ ಇವೆ. ಚರ್ಚೆ, ಅಸಮ್ಮತಿ, ವಾದ ವಿವಾದ, ಪರಿಶೀಲನೆ, ಹೊಸ ಅನ್ವೇಷಣೆಯಲ್ಲವೂ ನಮ್ಮ ಪರಂಪರೆಯ ಭಾಗ. ಭಾರತೀಯರು ಚರ್ಚೆಗೆ, ಅಸಮ್ಮತಿಗೆ, ಅಸಹನೆಗೆ ಯಾವತ್ತೂ ಭಯಪಟ್ಟವರಲ್ಲ.

ನೈತಿಕತೆಯನ್ನು ಮೀರಿದಾಗ ದೇವರನ್ನೂ ಪ್ರಶ್ನಿಸಿ ಶಿಕ್ಷಿಸಲಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲೂ ಭಾರತೀಯ ಸಾಹಿತ್ಯ ಹೆಚ್ಚಾಗಿ ಪ್ರಭುತ್ವದ ವಿರುದ್ಧವೇ ನಿಂತಿದೆ. ಎಮರ್ಜೆನ್ಸಿ, ಸಿಖ್ ದಂಗೆ, ಬಾಬರಿ ಮಸೀದಿಯ ಧ್ವಂಸ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಆದಿವಾಸಿ ಪ್ರದೇಶಗಳಲ್ಲಿ ನಕ್ಸಲ್ ಮತ್ತು ಸರಕಾರೀ ಹಿಂಸಾಚಾರ, ಗುಜರಾತ್ ಹಿಂಸಾಚಾರಗಳೆಲ್ಲವೂ ಬರಹಗಾರರನ್ನು, ಕಲಾವಿದರನ್ನು ಪ್ರಭುತ್ವದ ವಿರುದ್ಧ ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ; ಸಾಮಾಜಿಕ ಚೌಕಟ್ಟಿಗೆ, ಕೋಮುಸಾಮರಸ್ಯಕ್ಕೆ, ಕ್ರಿಯಾಶೀಲ ಬದುಕಿಗೆ ಆಗಿರುವ ಹಾನಿಯನ್ನು ಖಂಡಿಸುವಂತೆ ಮಾಡಿದೆ. ಪ್ರತಿಭಟನೆಗಿಳಿದು ಖಂಡಿಸದಿರುವುದು ಕರ್ತವ್ಯವನ್ನು ಮರೆತಂತೆ. ಒಳ್ಳೆಯದಕ್ಕೋ ಕೆಟ್ಟದಕ್ಕೋ ಈ ಕ್ರಿಯಾಶೀಲ ಸಮುದಾಯವನ್ನು ಸಮಾಜದ ಆತ್ಮಸಾಕ್ಷಿಯನ್ನು ಕಾಪಿಡುವರೆಂದು ನಂಬಿದ್ದೇವೆ. ನಮ್ಮಲ್ಲಿ ಕೆಲವರು ಶಕ್ತಿಕೇಂದ್ರ ಎದುರಿಗೆ ಸತ್ಯವನ್ನೇ ನುಡಿಯುವ ಉನ್ನತ ಪರಂಪರೆಗೆ ಅಂಟಿಕೊಂಡಿದ್ದೇವೆ. ಮತ್ತು ಆ ಕಾರಣಕ್ಕಾಗಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸುತ್ತಿದ್ದೇವೆ. ಸ್ವಾತಂತ್ರ್ಯಹರಣ ಹೆಚ್ಚುತ್ತಿದೆ ಎಂದು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಈ ಪ್ರತಿಭಟನೆ; ಬರಹಗಾರರಾದ, ಕಲಾವಿದರಾದ, ಪ್ರಗತಿಪರರಾದ ನಾವು ಇದರ ಬಗ್ಗೆ ಚಿಂತಿತರಾಗಿದ್ದೇವೆ.

ಅಕ್ಟೋ 9, 2015

ಡಿಜಿಟಲೀಕರಣ ಒಳ್ಳೆಯದು …. ಆದರೀ ಪ್ರಚಾರವಲ್ಲ…..

digital india
Dr Ashok K R
ದಶಕದ ಹಿಂದೆ ಮೊಬೈಲ್ ಫೋನೆಂದರೆ ನೋಕಿಯಾ ಎಂದೇ ಜನಜನಿತ. ನೋಕಿಯಾ ಫೋನಿನ ತಯಾರಕರ ಹೆಸರು ನಮಗ್ಯಾರಿಗಾದರೂ ಗೊತ್ತಿದೆಯಾ? ವಾಕ್ಮನ್ ತಯಾರಿಸುವಲ್ಲಿ, ಸಂಗೀತ ಕೇಳುವ ಸಾಧನಗಳನ್ನು ತಯಾರಿಸುವಲ್ಲಿ ಸೋನಿ ಕಂಪನಿ ಅಗ್ರಗಣ್ಯ, ಅದರ ನಿರ್ಮಾತೃವಿನ ಹೆಸರು ಎಷ್ಟು ಜನಕ್ಕೆ ಗೊತ್ತಿದೆ? ಇತ್ತೀಚೆಗೆ ದೇಶದಲ್ಲಿ ಸದ್ದು ಮಾಡುತ್ತಿರುವುದು ಶಿಯೋಮಿ ಮೊಬೈಲು ಫೋನುಗಳು, ಅದನ್ನು ತಯಾರಿಸಿದವರ್ಯಾರು? ಸ್ಮಾರ್ಟ್ ಫೋನುಗಳ ಬೆಲೆಯನ್ನು ಭಾರತದಲ್ಲಿ ತುಂಬ ಕಡಿಮೆ ದರಕ್ಕೆ ಸಿಗುವಂತೆ ಮಾಡಿದ್ದು ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಂಪನಿಗಳು. ಅದರ ಮಾಲೀಕರ್ಯಾರು? ಮೇಲಿನ ಬಹುತೇಕ ಪ್ರಶ್ನೆಗೆ ನಿಮ್ಮ ಉತ್ತರ ‘ಗೊತ್ತಿಲ್ಲ’ ಎಂದೇ ಅಲ್ಲವೇ. ನನಗೂ ಗೊತ್ತಿಲ್ಲ ಬಿಡಿ. ಫೇಸ್ ಬುಕ್ಕಿನ ಸಂಸ್ಥಾಪಕನ್ಯಾರು? ಮೈಕ್ರೊಸಾಫ್ಟಿನ ಒಡೆಯನ್ಯಾರು? ಆ್ಯಪಲ್ ಕಂಡುಹಿಡಿದಿದ್ದ್ಯಾರು? ಗೂಗಲ್ಲಿನ ಈಗಿನ ಸಿಇಒ ಹೆಸರೇನು? ಮಾರ್ಕ್ ಝುಕರ್ ಬರ್ಗ್, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಸತ್ಯ ನಾದೆಲ್ಲ….. ನಿಯಮಿತವಾಗಿ ಪತ್ರಿಕೆ ಓದುವವರಾದರೆ ನಿಮಗೂ ಈ ನಾಲ್ಕೂ ಹೆಸರುಗಳು ಗೊತ್ತಿರುತ್ತವೆ. ಇವುಗಳಷ್ಟೇ ಜನಪ್ರಿಯ ಬ್ರ್ಯಾಂಡುಗಳಾದ ನೋಕಿಯಾ, ಸೋನಿ, ಶಿಯೋಮಿಯ ಹೆಸರು ಪತ್ರಿಕೆಗಳಲ್ಲಿ ಮುಳುಗಿ ಹೋಗುವವರಿಗೂ ತಿಳಿಯುವುದಿಲ್ಲ ಆದರೆ ಫೇಸ್ ಬುಕ್, ಮೈಕ್ರೋಸಾಫ್ಟ್, ಆ್ಯಪಲ್ಲಿನ ವಿಷಯದಲ್ಲಿ ಪತ್ರಿಕೆ ಮೇಲೆ ಕಣ್ಣಾಡಿಸುವವರಿಗೂ ತಿಳಿದಿರುತ್ತದೆ. ಕಾರಣವೇನಿರಬಹುದು? ನಿಮಗೆ ಹೆಸರು ಗೊತ್ತಿರುವ ಅಷ್ಟೂ ಕಂಪನಿಗಳು ಅಮೆರಿಕಾ ಮೂಲದ್ದಾದರೆ ನೋಕಿಯಾ ಫಿನ್ ಲ್ಯಾಂಡಿನದು, ಸೋನಿ ಜಪಾನಿನದು, ಶಿಯೋಮಿ ಚೀನಾದ್ದು ಮತ್ತು ಮೈಕ್ರೋಮ್ಯಾಕ್ಸ್ , ಕಾರ್ಬನ್ ಬಿಡಿ ಅವು ನಮ್ಮದೇ ಭಾರತದ್ದು. ಫೇಸ್ ಬುಕ್, ಮೈಕ್ರೋಸಾಫ್ಟ್, ಆ್ಯಪಲ್ಲುಗಳೆಲ್ಲವೂ ಶ್ರೇಷ್ಟವಾಗಿವೆ ಎನ್ನುವುದು ಎಷ್ಟು ಸತ್ಯವೋ ಸೋನಿ, ನೋಕಿಯಾ ಕೂಡ ಅಷ್ಟೇ ಶ್ರೇಷ್ಟ ಗುಣಮುಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದ್ದವಲ್ಲವೇ? ಒಂದು ದೇಶದ ಕಂಪನಿಗಳ ನಿರ್ಮಾತೃಗಳ ಹೆಸರುಗಳೇ ಎಲ್ಲರ ಬಾಯಲ್ಲಿ ನಲಿಯುವಂತೆ ಮಾಡಲು ಆ ಕಂಪನಿಗಳ ಮಾರ್ಕೆಟಿಂಗ್ ಜಾಣ್ಮೆ ಎಷ್ಟು ಕಾರಣವೋ ಅಮೆರಿಕಾದ ಉಗುಳೂ ಶ್ರೇಷ್ಟ ಎಂಬಂತೆ ವರದಿ ಮಾಡುವ ಮಾಧ್ಯಮಗಳೂ ಕಾರಣ. ಅಮೆರಿಕಾದ ಈ ಲಾಬಿಗೆ ಪೂರಕವಾಗಿ ಬಹುದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯೂ ವರ್ತಿಸುತ್ತಾರೆಂದರೆ ಅದು ನಮ್ಮ ದೇಶದ ಅಭಿವೃದ್ಧಿ ಮಾದರಿಯ ದುರಂತ.

ಪ್ರಧಾನಿಯಾದ ಎರಡು ವರುಷದೊಳಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಅಮೆರಿಕಾಕ್ಕೆ ಕಾಲಿಟ್ಟಿದ್ದಾರೆ. ಮೊದಲ ಭೇಟಿ ಅಬ್ಬರದಲ್ಲೇ ಕಳೆದುಹೋಗಿತ್ತು. ಈ ಬಾರಿಯ ಭೇಟಿ ವ್ಯವಹಾರಕ್ಕೆ ಎಂದು ಪ್ರಚಾರವಾಗಿತ್ತು. ಸಿಲಿಕಾನ್ ವ್ಯಾಲಿಯಲ್ಲಿ ನಮ್ಮ ದೇಶದ ಪ್ರಧಾನಿ ಅನೇಕ ಕಂಪನಿಗಳ ಸಿ.ಇ.ಒಗಳ ಜೊತೆಗೆ ಕುಳಿತು ಚರ್ಚಿಸಿದರು. ಬನ್ನಿ. ನಮ್ಮ ದೇಶಕ್ಕೆ ದುಡ್ಡು ತಗಂಡು ಬನ್ನಿ, ನಿಮಗೆ ಬೇಕಾದ ಸೌಲತ್ತುಗಳನ್ನೆಲ್ಲ ನಾವು ಕೊಡುತ್ತೇವೆ. ಮೇಕ್ ಇನ್ ಇಂಡಿಯಾ ಎಂದು ನಗೆಯಾಡಿದರು. ಮೋದಿಯವರ ಗೆಲುವಿನಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹಳ. ಅಂತಹ ಸಾಮಾಜಿಕ ಜಾಲತಾಣಗಳ ಪೈಕಿ ಫೇಸ್ ಬುಕ್ ಪ್ರಮುಖವಾದುದು. ಫೇಸ್ ಬುಕ್ಕಿನ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗರನ್ನು ಭೇಟಿಯಾಗಿ ಅಪ್ಪಿಕೊಂಡರು ನಮ್ಮ ಪ್ರಧಾನಿ. ಇಡೀ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಿಕೊಡಿ ಎಂದು ಫೇಸ್ ಬುಕ್ ಮತ್ತು ಗೂಗಲ್ಲಿಗೆ ಕೇಳಿಕೊಂಡರು ನಮ್ಮ ಪ್ರಧಾನಿ. ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ಕೊಡುವಂತೆ ಮಾರ್ಕ್ ಝುಕರ್ ಬರ್ಗ್ ಫೇಸಬುಕ್ಕಿನ ತಮ್ಮ ಪ್ರೊಫೈಲ್ ಚಿತ್ರಕ್ಕೆ ಭಾರತ ದೇಶದ ಧ್ವಜವನ್ನು ವಿಲೀನಗೊಳಿಸಿದರು! ಆ ರೀತಿ ವಿಲೀನಗೊಳಿಸುವುದಕ್ಕೆ ಒಂದು ಆ್ಯಪನ್ನು ತಯಾರಿಸಿ ಲಕ್ಷಾಂತರ ಭಾರತೀಯರು ತಮ್ಮ ಪ್ರೊಫೈಲ್ ಚಿತ್ರ ಬದಲಿಸಲು ‘ನೆರವಾದರು’. ವಿದೇಶಿಗನೊಬ್ಬನಿಗೆ ಭಾರತದ ‘ಅಭಿವೃದ್ಧಿ’ಯ ಬಗ್ಗೆ ಎಷ್ಟೊಂದು ಪ್ರೀತಿ! Support Digital India ಅಭಿಯಾನಕ್ಕೆ ವಿರುದ್ಧವಾಗಿ ಮಾತನಾಡಿದವರು ದೇಶದ್ರೋಹಿಗಳಲ್ಲದೇ ಮತ್ತೇನು?!

ಡಿಜಿಟಲ್ ಇಂಡಿಯಾ 2014ರಲ್ಲಿ ಶುರುವಾಯಿತೇ?

ನಮ್ಮ ಪ್ರಚಾರ ಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೀವು ಯಾವ ಕಾರಣಕ್ಕಾಗಿಯಾದರೂ ಟೀಕಿಸಬಹುದು ಆದರೆ ಅವರ ಮಾರ್ಕೆಟಿಂಗ್ ಬುದ್ಧಿಯನ್ನು ಮಾತ್ರ ಹೊಗಳದೇ ಇರಲಾಗದು. ಯಾವ ವಿಷಯಕ್ಕೆ ಹೇಗೆ ಪ್ರಚಾರ ಪಡೆದುಕೊಳ್ಳಬೇಕೆಂದು ಅವರಿಗಿಂತ ಚೆನ್ನಾಗಿ ಅರಿತವರು ಮತ್ತೊಬ್ಬರು ಸದ್ಯದಲ್ಲಿ ಕಾಣಿಸುತ್ತಿಲ್ಲ. ಒಂದು ಕೆಲಸ ಮಾಡಿ ಹತ್ತು ಕೆಲಸದ ಪ್ರಚಾರ ಪಡೆದುಕೊಳ್ಳುವುದು ಅವರಿಗೆ ನೀರು ಕುಡಿದಷ್ಟೇ ಸಲೀಸು! ಇದರ ಅರಿವಾಗಿದ್ದು ಈ ಸರಕಾರದಿಂದ ಅತಿ ಹೆಚ್ಚು ಪ್ರಚಾರ ಪಡೆದ ಕೆಲವು ಯೋಜನೆಗಳ ಅಸಲಿಯತ್ತನ್ನು ಗಮನಿಸಿದಾಗ. ತಿಂಗಳುಗಳ ಹಿಂದೆ ಸರಕಾರದ ವತಿಯಿಂದ ರಾಷ್ಟ್ರೀಯ ಬ್ಯಾಂಕುಗಳಲ್ಲಿ ವಿಮಾ ಯೋಜನೆ ಜಾರಿಗೊಂಡಿತು. 12 ರುಪಾಯಿಯ ಅಪಘಾತ ವಿಮೆ, 330 ರುಪಾಯಿಯ ಸಾಮಾನ್ಯ ವಿಮೆ. ಎರಡೂ ಅತ್ಯುತ್ತಮ ಯೋಜನೆಗಳೇ. ಸಾಮಾನ್ಯ ವಿಮೆಯ ನೀತಿ ನಿಯಮಗಳು ಇನ್ನೂ ಅಷ್ಟು ಸ್ಪಷ್ಟವಾಗಿ ಅರಿವಾಗುವುದಿಲ್ಲವಾದರೂ ಇರುವುದರಲ್ಲಿ ಜನರಿಗೆ ಉಪಯುಕ್ತವಾಗುವ ವಿಮೆಗಳು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದರ ಜೊತೆಜೊತೆಗೆ ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲೊಂದು ಪಿಂಚಣಿ ಯೋಜನೆಯನ್ನು ಘೋಷಿಸಲಾಯಿತು. ಈ ಪಿಂಚಣಿ ಯೋಜನೆ ತೆರಿಗೆ ಕಟ್ಟದ ಅಸಂಘಟಿತ ವಲಯಕ್ಕೆ ಅನುಕೂಲಕರವೆಂದು ಪರಿಚಯಿಸಲಾಯಿತು. ಇತ್ತೀಚೆಗೆ ನನಗೆ ಅಂಟಿಕೊಂಡಿರುವ ಒಂದು ‘ಜಾಡ್ಯ’ವೆಂದರೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಏನೇ ಸುದ್ದಿ ಬಂದಿದ್ದರೂ ಅದರ ಮೂಲ ಲೇಖನವನ್ನು ಹುಡುಕಿ ಪೂರ್ತಿಯಾಗಿ ಓದುವುದು. ವೆಬ್ ಸೈಟಿನಲ್ಲಿ ಆ ಪಿಂಚಣಿ ಯೋಜನೆಯ ವಿವರಗಳನ್ನು ಸರಕಾರೀ ವೆಬ್ ಸೈಟಿನಲ್ಲೇ ನೋಡಿದೆ. ವಿವರಗಳನ್ನೆಲ್ಲಾ ಸರಿಯಾಗಿ ಓದಿಕೊಂಡ ನಂತರ ತಿಳಿದಿದ್ದು ಇದು ಹಿಂದಿನ ಸರಕಾರವೇ ಜಾರಿ ಮಾಡಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಯ ಚೂರುಪಾರು ತಿದ್ದುಪಡಿಯಾದ ಯೋಜನೆಯೆಂದು! ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಾಕಿದಂತೆಯೇ ಈ ಸರಕಾರದ ಅನೇಕ ಕಾರ್ಯಗಳಿವೆ ಎಂದರದು ಉತ್ಪ್ರೇಕ್ಷೆಯ ಮಾತಲ್ಲ.

‘ಡಿಜಿಟಲ್ ಇಂಡಿಯಾ’ ಎನ್ನುವುದು ಯಾವಾಗ ಪ್ರಾರಂಭವಾಯಿತು? ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರವಾ? ಖಂಡಿತ ಅಲ್ಲ. ಇಪತ್ತು ವರುಷಗಳ ಹಿಂದೆ ಒಂದು ಲ್ಯಾಂಡ್ ಲೈನ್ ಫೋನ್ ಬೇಕೆನ್ನಿಸಿದರೆ ಬಿ.ಎಸ್.ಎನ್.ಎಲ್ ಗೆ ಅರ್ಜಿ ಹಾಕಿ ವರುಷಗಟ್ಟಲೇ ಕಾಯಬೇಕಿತ್ತು. ಕ್ರಮೇಣ ಲ್ಯಾಂಡ್ ಲೈನ್ ಫೋನುಗಳು ವೇಗ ಪಡೆದುಕೊಂಡಿತು. ಹದಿನೈದು ವರುಷಗಳ ಹಿಂದೆ ಮೊಬೈಲೆಂಬುದು ದುಬಾರಿ ವಸ್ತುವಾಗಿತ್ತು. ಮೊಬೈಲ್ ಕೊಂಡುಕೊಳ್ಳುವುದಕ್ಕೆ ಹಣ ವೆಚ್ಚ ಮಾಡುವುದರ ಜೊತೆಜೊತೆಗೆ ಒಳಬರುವ – ಹೊರಹೋಗುವ ಕರೆಗಳಿಗೆಲ್ಲ ಹೆಚ್ಚೆಚ್ಚು ಹಣ ತೆರಬೇಕಿತ್ತು. ಐದೇ ವರ್ಷದ ಅಂತರದಲ್ಲಿ ಒಳಬರುವ ಕರೆಗಳು ಉಚಿತವಾಗಿ, ಹೊರಹೋಗುವ ಕರೆಗಳ ವೆಚ್ಚ ವಿಪರೀತವಾಗಿ ತಗ್ಗಿದ ಪರಿಣಾಮ ಎಲ್ಲರ ಕೈಯಲ್ಲೂ ಮೊಬೈಲು ರಿಂಗಣಿಸಲಾರಂಭಿಸಿತು. ಇನ್ನೈದು ವರುಷಗಳಲ್ಲಿ ಮಾಮೂಲಿ ಫೋನುಗಳ ಜಾಗವನ್ನು ಸ್ಮಾರ್ಟ್ ಫೋನುಗಳು ಆಕ್ರಮಿಸಿಕೊಂಡುಬಿಟ್ಟವು. ದರಕಡಿತದ ಜೊತೆಜೊತೆಗೆ ಅತಿ ಕಡಿಮೆ ದುಡ್ಡಿನಲ್ಲಿ ಅಂತರ್ಜಾಲ ಸಿಗಲಾರಂಭಿಸಿದ್ದು ಕೂಡ ಸ್ಮಾರ್ಟ್ ಫೋನುಗಳ ಸಂಖೈ ಹೆಚ್ಚಲು ಕಾರಣವಾಗಿದೆ. ಕಳೆದ ಹದಿನೈದು ಇಪ್ಪತ್ತು ವರುಷಗಳಿಂದ ನಿರಂತರವಾಗಿ ನಡೆಯುತ್ತಿರುವ ತಂತ್ರಜ್ಞಾನದ ಬೆಳವಣಿಗೆಯ ‘ಪ್ರಕ್ರಿಯೆ’ಯಿದು. ನೆನಪಿರಲಿ ಇದು ಅಭಿವೃದ್ಧಿಯಲ್ಲ, ಪ್ರಕ್ರಿಯೆಯಷ್ಟೇ. ಲ್ಯಾಂಡ್ ಲೈನ್ ಫೋನುಗಳು ಬಂದಿದ್ದು, ಮೊಬೈಲುಗಳು ಕಡಿಮೆ ಬೆಲೆಗೆ ದಕ್ಕಲಾರಂಭಿಸಿದ್ದು, ಸ್ಮಾರ್ಟ್ ಫೋನುಗಳ ಯುಗ ಪ್ರಾರಂಭವಾಗಿದ್ದು ಯಾರ ಯಾರ ಆಡಳಿತಾವಧಿಯಲ್ಲಿ ಎಂದೇನಾದರೂ ನಿಮಗೆ ನೆನಪಿದೆಯಾ? I support Digital India ಎಂದು ಬೊಬ್ಬೆ ಹೊಡೆದವರಿಗೂ ಅದರ ನೆನಪಿರಲಿಕ್ಕಿಲ್ಲ. ಯಾಕೆ ನೆನಪಿಲ್ಲವೆಂದರೆ ನಮಗಾಗಲೀ ಆಡಳಿತದಲ್ಲಿರುವವರಿಗಾಗಲೀ ತಂತ್ರಜ್ಞಾನದ ಬೆಳವಣಿಗೆ ‘ಅಭಿವೃದ್ಧಿಯ ಮಾಪಕ’ ಎಂಬ ಭ್ರಮೆಗಳಿರಲಿಲ್ಲ. ಆ ಭ್ರಮೆಯನ್ನು ಜನರಲ್ಲಿ ತುಂಬಲು ಕಳೆದಲವು ವರುಷಗಳಿಂದ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿದ್ದಾರೆ, ಮತ್ತದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದಾರೆ. ಆದರೀ ಪ್ರಚಾರ, ಯಶಸ್ಸಿನಿಂದ ದೇಶಕ್ಕೆ ನಿಜಕ್ಕೂ ಉಪಯೋಗವಾಗುತ್ತದೆಯಾ?

ಮೊಬೈಲು, ಅಂತರ್ಜಾಲ, ಸಾಮಾಜಿಕ ಜಾಲತಾಣಗಳಿಂದ ಅಗಾಧವೆನ್ನಿಸುವಷ್ಟು ಉಪಯೋಗಗಳಿವೆ. ದೂರದ ಗೆಳೆಯರನ್ನು ಹತ್ತಿರವಾಗಿಸುತ್ತೆ, ನಮ್ಮ ಭಾವನೆಗಳನ್ನು ಪರಿಚಯವೇ ಇಲ್ಲದವರೊಡನೆ, ಗೆಳೆಯರೊಡನೆ ಹಂಚಿಕೊಳ್ಳಲು ನೆರವಾಗುತ್ತದೆ, ಒಂದು ಅಭಿಪ್ರಾಯ ರೂಪಿಸಲು, ಮಧ್ಯಪ್ರಾಚ್ಯದ ದೇಶಗಳಲ್ಲಿ ಕ್ರಾಂತಿಯನ್ನೇ ಪ್ರಾರಂಭಿಸಲು ಕೂಡ ಈ ತಂತ್ರಜ್ಞಾನಗಳು ನೆರವಾಗಿವೆ. ಅದರಲ್ಲಿ ಎರಡು ಮಾತಿಲ್ಲ. ಇದರ ಜೊತೆಜೊತೆಗೆ ಒಂದು ಭ್ರಮಾ ಲೋಕವನ್ನು ಸೃಷ್ಟಿಸಿ ನೈಜ ಪ್ರಪಂಚದಿಂದ ವಿಮುಖರನ್ನಾಗಿಸುವುದರಲ್ಲಿಯೂ ಇವುಗಳ ಪಾತ್ರ ದೊಡ್ಡದಾಗುತ್ತಲೇ ಇದೆ. ತಂತ್ರಜ್ಞಾನವನ್ನು ನಾವು ಉಪಯೋಗಿಸಬೇಕೆ ಹೊರತು ತಂತ್ರಜ್ಞಾನ ನಮ್ಮನ್ನು ಉಪಯೋಗಿಸುವಂತೆ ಮಾಡಬಾರದಲ್ಲವೇ? ಡಿಜಿಟಲ್ ಇಂಡಿಯಾ ಅವಶ್ಯಕ, ದಿನನಿತ್ಯದ ಅನೇಕ ಕೆಲಸಗಳನ್ನು ಸಲೀಸಾಗುವಂತೆ ಮಾಡುತ್ತದೆ. ಯಾವ ಪ್ರಚಾರವೂ ಇಲ್ಲದೆ ನಮ್ಮ ಬ್ಯಾಂಕುಗಳು, ಅನೇಕ ಕಛೇರಿಗಳು ಸಂಪೂರ್ಣ ಕಂಪ್ಯೂಟರ್ ಮಯವಾಗಿಬಿಟ್ಟಿರುವುದು ಸುಳ್ಳಲ್ಲವಲ್ಲ. ಈ ಸೌಲಭ್ಯ ದೇಶದ ಎಲ್ಲಾ ಪ್ರಜೆಗಳಿಗೂ ತಲುಪಿದರೆ ಅದು ಸಂತಸದ ಸಂಗತಿಯೇ. ಸಲೀಸಾಗುವಂತೆ ಮಾಡುವುದಕ್ಕೆ ನಮ್ಮ ದೇಶದ ಪ್ರಧಾನ ಮಂತ್ರಿ ವಿದೇಶಿ ಕಂಪನಿಗಳ ಸಿ.ಇ.ಒಗಳ ಜೊತೆ ಹಲ್ಲುಕಿರಿಯುತ್ತ ಮಾತನಾಡುವ ಅವಶ್ಯಕತೆ ಇದೆಯೇ? ಡಿಜಿಟಲ್ ಇಂಡಿಯಾದ ಅತಿ ಪ್ರಚಾರದ ವಿರುದ್ಧ ಮಾತನಾಡಿದರೆ, ಇಲ್ಲಿನ ಸಮಸ್ಯೆಗಳನ್ನು ಮೊದಲು ಸರಿಮಾಡಿ ಅಂದರೆ ‘ನೋಡಿ ನೋಡಿ ನೀವು ಇದನ್ನು ಹೇಳೋದಕ್ಕೂ ಫೇಸ್ ಬುಕ್ಕೇ ಬೇಕಾಯಿತು. ಗೂಗಲ್ಲೇ ಬೇಕಾಯಿತು’ ಎಂದು ಹೇಳುವ ತಂತ್ರಜ್ಞಾನದ ಕುರುಡು ಭಕ್ತರಿದ್ದಾರೆ. ಇವೆಲ್ಲವೂ ನಮ್ಮ ಅಭಿವ್ಯಕ್ತಿಗೆ ಒಂದು ಮಾಧ್ಯಮವಷ್ಟೇ, ಈ ಮಾಧ್ಯಮವಿಲ್ಲದಿದ್ದರೆ ಬೇರೆ ಮಾಧ್ಯಮದ ಮೂಲಕ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎನ್ನುವುದನ್ನವರು ಮರೆತೇ ಬಿಡುತ್ತಾರೆ. ಫೇಸ್ ಬುಕ್ ಬರುವುದಕ್ಕೆ ಮುಂಚೆ ಆರ್ಕುಟ್ ಉಪಯೋಗಿಸುತ್ತಿದ್ದೋ. ಅದಕ್ಕೂ ಮುಂಚೆ ಪತ್ರಿಕೆಗಳ ‘ನಿಮ್ಮ ಅಂಕಣ’ ‘ವಾಚಕರ ವಾಣಿ’ಗೆ ಪತ್ರ ಬರೆಯುತ್ತಿದ್ದೋ, ಫೇಸ್ ಬುಕ್ ಮುಚ್ಚಿ ಹೋದರೆ ಮತ್ತೊಂದು ಮಾಧ್ಯಮದ ಮೂಲಕ ಅಭಿವ್ಯಕ್ತಿ ವ್ಯಕ್ತಪಡಿಸುತ್ತೇವೆ ಎನ್ನುವುದನ್ನವರು ಮರೆತೇ ಬಿಡುತ್ತಾರೆ! ಒಂದು ಕಡೆಯಿಂದ ಮತ್ತೊಂದೆಡೆಗೆ ನಮ್ಮನ್ನು ಶೀಘ್ರವಾಗಿ ಹೋಗುವಂತೆ ಅನುಕೂಲ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ ಕಾರು, ಬೈಕು, ಬಸ್ಸುಗಳನ್ನು ತಲೆ ಮೇಲೆ ಹೊತ್ತಿಕೊಳ್ಳಲಾದೀತೆ? ನಮ್ಮ ಪ್ರಧಾನ ಮಂತ್ರಿಯವರು ಮಾಡುತ್ತಿರುವುದು ಅದೇ ಕೆಲಸ ಎನ್ನುವುದು ವಿಪರ್ಯಾಸದ ಸಂಗತಿ. ಮಾಹಿತಿ ತಂತ್ರಜ್ಞಾನ ಖಾತೆಯ ಮಂತ್ರಿಯೊಬ್ಬ ಮಾಡಬೇಕಾದ ಕೆಲಸವನ್ನು ಪ್ರಧಾನಿ ಮಾಡುವುದು ಅವಶ್ಯಕವೇ?

ಹೋಗ್ಲಿ ಬಿಡಿ. ನಮ್ಮ ಪ್ರಧಾನ ಮಂತ್ರಿಯವರದು ವಿಪರೀತ ಉತ್ಸಾಹದ ಪ್ರಕೃತಿ, ಎಲ್ಲಾ ಕೆಲಸವನ್ನೂ ಅಚ್ಚುಕಟ್ಟಾಗಿ ತಾನು ಮಾತ್ರ ಮಾಡಬಲ್ಲೆ ಎಂಬ ನಂಬಿಕೆ ಅವರದು ಎಂದು ಸದ್ಯಕ್ಕೆ ಅಂದುಕೊಳ್ಳೋಣ. ‘ನಮ್ಮ ದೇಶದ ಯುವಕರು ಆ್ಯಂಡ್ರಾಯ್ಡ್, ಐಒಎಸ್, ವಿಂಡೋಸ್ ಮೊಬೈಲುಗಳಲ್ಲಿ ಯಾವುದನ್ನು ಖರೀದಿಸಬೇಕು ಎಂಬುದರ ಬಗ್ಗೆಯೇ ಹೆಚ್ಚು ಚರ್ಚಿಸುತ್ತಾರೆ’ ಎಂದು ಆಡಿಕೊಂಡು ಹೊಗಳಿದ್ದನ್ನೋ ಹೊಗಳಿ ಆಡಿಕೊಂಡಿದ್ದನ್ನೋ ಮರೆತೇ ಬಿಡೋಣ. ಡಿಜಿಟಲ್ ಇಂಡಿಯಾ ಎಂಬ ಯೋಜನೆಗೆ ಗೂಗಲ್, ಫೇಸ್ ಬುಕ್ ಹೇಗೆ ಸಹಕಾರ ಕೊಡುತ್ತವೆ ಎಂದು ನೋಡಿದರೆ ನಿರಾಶೆಯಲ್ಲ, ಭಯವಾಗುತ್ತದೆ. ಮೈಕ್ರೋಸಾಫ್ಟ್ ಅಂತರ್ಜಾಲದ ಲೆಕ್ಕದಲ್ಲಿ ಅಷ್ಟು ಪ್ರಚಲಿತವಲ್ಲವಾದ್ದರಿಂದ ಸದ್ಯಕ್ಕೆ ಅದನ್ನು ಮರೆಯಬಹುದು. ಗೂಗಲ್ ಭಾರತದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಕೊಡುವುದಾಗಿ ಭರವಸೆ ಕೊಟ್ಟಿದೆ. ಫೇಸ್ ಬುಕ್ ಮೂಲೆಮೂಲೆಯಲ್ಲಿರುವ ವ್ಯಕ್ತಿಗೂ ಉಚಿತ ಅಂತರ್ಜಾಲ ಸೌಲಭ್ಯ ಸಿಕ್ಕಿ ಅವನ ಜೀವನ ಸಂತಸಮಯವಾಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಹೇಳುತ್ತದೆ. ಎಷ್ಟು ಕರ್ಣಾನಂದಕರವಾಗಿದೆಯಲ್ಲವೇ? ಹೀಗೆ ಉಚಿತವಾಗಿ ನೀಡುವ ಭರವಸೆ ಕೊಡುತ್ತಿರುವ ಗೂಗಲ್ ಮತ್ತು ಫೇಸ್ ಬುಕ್ ಸಮಾಜ ಸೇವಾ ಸಂಸ್ಥೆಗಳೂ ಅಲ್ಲ, ನಮ್ಮನ್ನಾಳುತ್ತಿರುವ ಸರಕಾರಗಳೂ ಅಲ್ಲ. ಅವರಿಗೆ ವ್ಯವಹಾರಿಕವಾಗಿ ಲಾಭವಿಲ್ಲದೇ ಯಾಕೆ ಈ ರೀತಿ ಉಚಿತ ಉಚಿತ ಎಂದು ಬೊಬ್ಬೆ ಹೊಡೆಯುತ್ತಿವೆ ಎಂದು ಯೋಚಿಸಬೇಕಲ್ಲವೇ? ಕೊನೇ ಪಕ್ಷ ನಮ್ಮ ಪ್ರಧಾನಿಯಾದರೂ ಯೋಚಿಸಬೇಕಿತ್ತಲ್ಲವೇ?

ಉಚಿತ ಅಂತರ್ಜಾಲದ ಹಿಂದಿನ ಸತ್ಯವೇನು?

ಈ ಫೇಸ್ ಬುಕ್ ಮತ್ತು ಗೂಗಲ್ಲುಗಳು ಹೇಗೆ ನಾವು ದಿನನಿತ್ಯ ಉಪಯೋಗಿಸುವ ಅಂತರ್ಜಾಲದ ಮಾಹಿತಿಯನ್ನು ಕಳ್ಳಗಣ್ಣಿನಿಂದ ನೋಡುತ್ತವೆ ಎನ್ನುವುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಅಂತರ್ಜಾಲದಲ್ಲಿ ನೀವು ಒಂದು ಮೊಬೈಲನ್ನೋ, ಸೆಕೆಂಡ್ ಹ್ಯಾಂಡ್ ಬೈಕನ್ನೋ ಕೊಂಡುಕೊಳ್ಳಲು ಗೂಗಲ್ಲಿನಲ್ಲಿ ಹುಡುಕಿರುತ್ತೀರಿ ಎಂದುಕೊಳ್ಳಿ. ಹುಡುಕಿ ಮುಗಿಸಿದ ನಂತರ ನೀವು ಫೇಸ್ ಬುಕ್ ತೆಗೆಯಿರಿ, ಜಿಮೇಲ್ ತೆರೆಯಿರಿ ಆ ಮೊಬೈಲು, ಬೈಕಿನ ಜಾಹೀರಾತುಗಳೇ ಕಾಣಿಸಿಕೊಳ್ಳುತ್ತವೆ. ಜಾಹೀರಾತುಗಳೇನು ತಪ್ಪಲ್ಲ. ಅದು ಆ ವಸ್ತು ಮಾರುವ ಕಂಪನಿಗೂ ಗೂಗಲ್ಲೂ ಫೇಸ್ ಬುಕ್ಕಿಗೂ ಅನಿವಾರ್ಯ. ಅದನ್ನು ಒಪ್ಪೋಣ. ಆದರೆ ಯಾವ ಜಾಹೀರಾತು ಮೊದಲು ಕಾಣಬೇಕೆಂದು ನಿರ್ಧರಿಸುವುದರಲ್ಲಿ ಅಂತರ್ಜಾಲವನ್ನು ಕೆಲವೇ ಕಂಪನಿಗಳ ಏಕಸ್ವಾಮ್ಯಕ್ಕೆ ಒಳಪಡಿಸುವುದರ ಅಪಾಯ ಕಾಣಿಸುತ್ತದೆ. ಉದಾಹರಣೆಗೆ ಒಂದು ಕಂಪನಿಯವರು ಹೆಚ್ಚು ದುಡ್ಡು ಕೊಟ್ಟರೆ ಅವರ ಜಾಹೀರಾತಷ್ಟೇ ಕಾಣಿಸುವಂತೆ, ಅವರ ವೆಬ್ ಪುಟವಷ್ಟೇ ಗೂಗಲ್ ಹುಡುಕಾಟದಲ್ಲಿ ಸಿಗುವಂತೆ ಮಾಡಿಬಿಡುವುದು ದೊಡ್ಡ ಕೆಲಸವಲ್ಲ. ಒಮ್ಮೆ ಇದು ನಡೆದುಹೋದರೆ ಜಾಹೀರಾತುಗಳಿಗೆ ಹೆಚ್ಚು ಹಣ ವೆಚ್ಚ ಮಾಡಿ ಕಳಪೆ ವಸ್ತುಗಳನ್ನು ನೀಡುವ ವೆಬ್ ಪುಟಗಳಿಗೇ ಜನರು ಶರಣಾಗಿಬಿಡಬೇಕಾದ ಪರಿಸ್ಥಿತಿ ಉಂಟಾಗಬಹುದು. ವಸ್ತುಗಳ ವಿಷಯ ಬಿಡಿ. ಇದೇ ಮಾದರಿಯಲ್ಲಿ ಸುದ್ದಿ – ಅಭಿಪ್ರಾಯಗಳನ್ನು ಜನರ ಮೇಲೆ ಹೇರಲಾಗುವುದಿಲ್ಲ ಎಂದು ಯಾರಾದರೂ ಪ್ರಮಾಣ ಮಾಡಿ ಹೇಳಬಲ್ಲರೇ? ಈಗಿರುವ ದೃಶ್ಯ, ಮುದ್ರಣ ಮಾಧ್ಯಮಗಳು ಪೇಯ್ಡ್ ನ್ಯೂಸ್ ಭೂತಕ್ಕೆ ಸಿಲುಕಿದಾಗ ಯಾವ ನಿರ್ಬಂಧವೂ ಇಲ್ಲದ ಅಂತರ್ಜಾಲ ನೈಜ ಸುದ್ದಿಗೆ ಅನುಕೂಲಕರ ಎಂದು ಭಾವಿಸಲಾಗಿತ್ತು. ನಿಧಾನಕ್ಕೆ ಅಂತರ್ಜಾಲ ಕೂಡ ಪೇಯ್ಡ್ ನ್ಯೂಸಿನ ಮತ್ತೊಂದು ರೂಪಕ್ಕೆ ಒಳಗಾಗುತ್ತಿರುವ ಪ್ರಕ್ರಿಯೆಯನ್ನು ನಾವಿಂದು ಕಾಣಬಹುದು. ಹಣ ಕೊಟ್ಟು ಅಂತರ್ಜಾಲವನ್ನು ಉಪಯೋಗಿಸುತ್ತಿರುವಾಗಲೇ ಗೂಗಲ್ ಫೇಸ್ ಬುಕ್ ಈ ರೀತಿ ನಡೆದುಕೊಳ್ಳುತ್ತದೆಯೆಂದರೆ ಇನ್ನೂ ಅವುಗಳಿಗೇ ವೈಫೈ ಜಾಲವನ್ನು ಉಚಿತವಾಗಿ ಜನರಿಗೆ ನೀಡುವಂತೆ ಮಾಡಿಬಿಟ್ಟರೆ ಅವರು ಎಷ್ಟೆಲ್ಲ ರೀತಿಯಲ್ಲಿ ನಮ್ಮನ್ನು ವಂಚಿಸಬಹುದು? ಕಂಪನಿಗಳಿಗೆ ಶರಣಾದ ಸರಕಾರಗಳು ಆ ಕಂಪನಿಗಳ ಉಚಿತ ಅಂತರ್ಜಾಲದ ಮುಖಾಂತರ ಹೇಗೆಲ್ಲ ನಮ್ಮನ್ನು ಮೂರ್ಖರನ್ನಾಗಿಸಬಹುದು? ಒಮ್ಮೆ ಅವಶ್ಯಕತೆ ಇದ್ದವರಿಗೆ ಇಲ್ಲದವರಿಗೆಲ್ಲ ಅಂತರ್ಜಾಲವನ್ನು ಚಟವಾಗಿಸಿಬಿಟ್ಟ ಮೇಲೂ ಉಚಿತವಾಗಿಯೇ ನೀಡುತ್ತಾರಾ? ಅನುಮಾನವೇ. ಏಳು ವರುಷಗಳ ಕೆಳಗೆ ಮೊಬೈಲುಗಳಲ್ಲಿ ಅನಿಯಮಿತ ಅಂತರ್ಜಾಲ 49ರುಪಾಯಿಗೆ ಸಿಗುತ್ತಿತ್ತು. ವೇಗ ಈಗಿನಷ್ಟಲ್ಲದಿದ್ದರೂ ತಕ್ಕಮಟ್ಟಿಗೆಯೇ ಇತ್ತು. ಈಗ 250 ರುಪಾಯಿಗೆ ಒಂದು ಜಿಬಿ ಮಾತ್ರ ಸಿಗುತ್ತಿದೆ. ಮೊಬೈಲುಗಳನ್ನು, ಅಂತರ್ಜಾಲವನ್ನು ಉಪಯೋಗಿಸುವವರ ಸಂಖೈ ಹೆಚ್ಚಾಗುತ್ತಿದ್ದಂತೆ ಬೆಲೆಯೂ ಕಡಿಮೆಯಾಗಬೇಕಿತ್ತಲ್ಲವೇ? ಆಗುತ್ತಿರುವುದು ಮಾತ್ರ ಸಂಪೂರ್ಣ ವಿರುದ್ಧವಾಗಿ.

ಮೇಕ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎನ್ನುತ್ತಾ ಎಲ್ಲವನ್ನೂ ಮಾರಿಬಿಡಲು ಹವಣಿಸುವ ಈ ಸರ್ಕಾರಕ್ಕೆ ನಮ್ಮ ದೇಶದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡಲು ಒಂದು ಸಶಕ್ತ ಕಂಪನಿ ತನ್ನ ಅಧೀನದಲ್ಲೇ ಇರುವುದು ಕಾಣಿಸುವುದಿಲ್ಲವೇ? ಕೆಟ್ಟ ನಿರ್ವಹಣೆಯಿಂದ ಗ್ರಾಹಕರನ್ನು ಕಳೆದುಕೊಂಡಿರುವ ಬಿ.ಎಸ್.ಎನ್.ಎಲ್ಲಿಗೆ ಮರುಜೀವ ನೀಡುವ ಕೆಲಸವಾದರೆ ಈ ಖಾಸಗಿಯವರ ಹಾವಳಿ ಯಾಕೆ ಬೇಕು? ನಾವ್ಯಾಕೆ ಖಾಸಗಿ ಕಂಪನಿಗಳ ಸಿಮ್ಮುಗಳನ್ನು ಉಪಯೋಗಿಸಬೇಕು? ಸರಕಾರೀ ಉತ್ಪನ್ನವೆಂದರೆ ಕಳಪೆ, ಖಾಸಗಿಯದ್ದೆಂದರೆ ಶ್ರೇಷ್ಟ ಎಂಬ ಭ್ರಮೆಯನ್ನು ನೈಜವಾಗಿಸುವಲ್ಲಿ ನಮ್ಮ ಅಧಿಕಾರಿ ಶಾಹಿ, ರಾಜಕಾರಣಿಗಳ ಪಾತ್ರ ದೊಡ್ಡದು. ಅಂತಹ ಭ್ರಮೆಯನ್ನು ಕಡೆಗಣಿಸುವ ಕೆಲಸವನ್ನಾದರೂ ಭಾರತದ ಶಕ್ತಿಶಾಲಿ ಪ್ರಧಾನಿ ಮಾಡಬಹುದಿತ್ತಲ್ಲಾ? ದೇಶೀ ಅಧಿಕಾರಿಗಳ ಜೊತೆಗೆ ಚರ್ಚಿಸಿ ಇಲ್ಲೇ ಡಿಜಿಟಲ್ ಇಂಡಿಯಾ ರೂಪುಗೊಂಡುಬಿಟ್ಟರೆ ಫಾರಿನ್ ಸಿಇಓಗಳ ಜೊತೆ ದೇಶ ವಿದೇಶದ ಮಾಧ್ಯಮಗಳಲ್ಲಿ ಮಿಂಚುವ ಅವಕಾಶ ತಪ್ಪುತ್ತದೆಯೆನ್ನುವ ಕೊರಗಿರಬೇಕು. ಅಭಿವೃದ್ಧಿಗೂ ತಂತ್ರಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಅರಿಯದ ಪ್ರಧಾನಿಯೊಬ್ಬರು ತಂತ್ರಜ್ಞಾನವನ್ನೇ ಅಭಿವೃದ್ಧಿಗೆ ಸಮೀಕರಿಸುತ್ತಿರುವುದು ದೇಶದ ಮುಂದಿರುವ ಅಪಾಯದ ದಿನಗಳ ದಿಕ್ಸೂಚಿ ಎಂದರೆ ತಪ್ಪಲ್ಲ. ಮತ್ತು ಆ ಅಪಾಯದಿಂದ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ನನಗಾಗಲೀ ತಂತ್ರಜ್ಞಾನದ ಸಹಾಯದಿಂದ ಇದನ್ನು ಓದುತ್ತಿರುವ ನಿಮಗಾಗಲೀ ತೊಂದರೆಯಾಗುವುದಿಲ್ಲ ಮತ್ತು ಈ ದಿಕ್ಕುತಪ್ಪಿದ ಅಭಿವೃದ್ಧಿಯಿಂದ ತೊಂದರೆಗೊಳಗಾದವರ ಸುದ್ದಿಯೂ ನಮಗೆ ತಲುಪುವುದಿಲ್ಲ. ಕಾರಣ ತಂತ್ರಜ್ಞಾನ ಕೆಲವರ ಕಪಿಮುಷ್ಟಿಗೆ ಸಿಲುಕಿ ಏಕಸ್ವಾಮ್ಯಕ್ಕೆ ಒಳಪಡಲಿದೆ. “ಮೇಕ್ ಇನ್ ಇಂಡಿಯಾ ಅಲ್ಲ, ಮೇಕ್ ಇಂಡಿಯಾ ಎನ್ನುವುದು ನಮ್ಮ ಉದ್ದೇಶವಾಗಬೇಕು. ಚೀನಾ ದೇಶವೇನೂ ನಮ್ಮಲ್ಲಿ ಬನ್ನಿ ನಮ್ಮಲ್ಲಿ ಬನ್ನಿ ಎಂದು ಗೋಗರೆಯಲಿಲ್ಲ. ಚೀನಾವನ್ನು ಕಟ್ಟಿದರು, ವ್ಯಾಪಾರ ಮಾಡಬಯಸುವ ಕಂಪನಿಗಳು ಓಡೋಡಿ ಬಂದರು” ಎಂಬರ್ಥದ ಅರವಿಂದ್ ಕೇಜ್ರಿವಾಲರ ಮಾತುಗಳು ಇಲ್ಲಿ ಪ್ರಸ್ತುತ. PM ಪದದ ಅರ್ಥ Prime Minister ಎಂದಿದೆಯೇ ಹೊರತು Perfect Marketing ಎನ್ನುವುದಲ್ಲ ಎಂಬ ಸತ್ಯವನ್ನು ನಮ್ಮ ನರೇಂದ್ರ ಮೋದಿಯವರಿಗೆ ಮೊದಲು ಅರ್ಥ ಮಾಡಿಸಬೇಕಿದೆ.

ಅಕ್ಟೋ 6, 2015

ಎಲ್.ಇ.ಡಿ ಲೈಟ್ ಎಂಬ ಕಿವಿ ಮೇಲೆ ಹೂ!

ರಾಜ್ಯ ಸರಕಾರ ಕರ್ನಾಟಕದಲ್ಲಿರುವ 1.32 ಕೋಟಿ ಕುಟುಂಬಗಳಿಗೆ ಕಡಿಮೆ ದರದಲ್ಲಿ ಎಲ್.ಇ.ಡಿ ಬಲ್ಬುಗಳನ್ನು ಹಂಚಲು ಉದ್ದೇಶಿಸಿದೆ. ಇಂತಹ ಹೊಸ ಯೋಜನೆಗಳಿಗೆ 'ಪರಿಸರ'ಕ್ಕೆ ಪೂರಕ ಎಂಬ ಹೆಸರಿಟ್ಟುಬಿಟ್ಟರೆ ಸಾರ್ವಜನಿಕವಾಗಿ ಒಪ್ಪಿತವಾಗಿಬಿಡುತ್ತದೆಯೆನ್ನುವುದು 'ಆಳುವವರಿಗೆ' ತಿಳಿದುಬಿಟ್ಟಿದೆ. ಇಡೀ ಕರ್ನಾಟಕದ ತುಂಬೆಲ್ಲ ಎಲ್.ಇ.ಡಿ ಬಲ್ಬುಗಳು ಜಗಮಗಿಸಲು ಪ್ರಾರಂಭಿಸಿದರೆ ಒಟ್ಟು ಸಾವಿರ ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಿಬಿಡುತ್ತದೆ, ನೋಡಿ ನೋಡಿ ಎಷ್ಟೆಲ್ಲ ಪರಿಸರ ಉಳಿಸಿಬಿಡಬಹುದು ಎಂದು ಪತ್ರಿಕಾ ಹೇಳಿಕೆ ಕೊಡುತ್ತಿದ್ದಾರೆ. ನಿಜಕ್ಕೂ ಇದು ಪರಿಸರ ಪೂರಕ ಕೆಲಸವಾ ಅಥವಾ ಎಲ್.ಇ.ಡಿ ತಯಾರಕ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಯೋಜನೆಯಾ?
ಸದ್ಯಕ್ಕೆ ಎಲ್.ಇ.ಡಿ ಬಲ್ಬಿನ ಬೆಲೆ ಮುನ್ನೂರು ನಾನೂರು ರುಪಾಯಿಗಳಷ್ಟಿದೆ. ಕಂಪನಿಯ ಹೆಸರಿಲ್ಲದ ಬ್ರ್ಯಾಂಡುಗಳು ನೂರು ನೂರೈವತ್ತು ರುಪಾಯಿಗೆ ಸಿಗುತ್ತವಾದರೂ ಅವುಗಳ ಬಾಳಿಕೆಯ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಸರಕಾರ ಹೇಳುತ್ತಿರುವಂತೆ ಎಲ್.ಇ.ಡಿ ಬಲ್ಬುಗಳು ಹಳೆಯ ಇನ್ ಕ್ಯಾಂಡಿಸೆಂಟ್ ಮತ್ತು ಸಿ.ಎಫ್.ಎಲ್ ಬಲ್ಬುಗಳಿಗಿಂತ ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ ಎನ್ನುವುದು ಸತ್ಯ. ಈ ಎಲ್.ಇ.ಡಿ ಬಲ್ಬುಗಳು ಉಳಿದ ಬಲ್ಬುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆಯೆನ್ನುವುದು ಕೂಡ ಸತ್ಯ. ಒಂಭತ್ತು ವ್ಯಾಟಿನ ಎಲ್.ಇ.ಡಿ ಬಲ್ಬ್ ಇಪ್ಪತ್ತು ವ್ಯಾಟಿನ ಸಿ.ಎಫ್.ಎಲ್ ಬಲ್ಬಿಗೆ ಸಮ, ಅರವತ್ತು ವ್ಯಾಟಿನ ಇನ್ ಕ್ಯಾಂಡಿಸೆಂಟ್ ಬಲ್ಬಿಗೆ ಸಮ. ಇಷ್ಟೆಲ್ಲ ಪರಿಸರ ಸ್ನೇಹಿಯಾಗಿರುವ ಎಲ್.ಇ.ಡಿ ಬಲ್ಬನ್ನು ಎಲ್ಲರ ಮನೆಗೂ ಕೊಟ್ಟುಬಿಟ್ಟರೆ ಏನು ತಪ್ಪು ಎನ್ನುವ ಪ್ರಶ್ನೆ ಮೂಡದೇ ಇರದು.
ಸದ್ಯದ ಯೋಜನೆಯ ಪ್ರಕಾರ ಸರಕಾರ 6 ಕೋಟಿ ಬಲ್ಬುಗಳನ್ನು ರಿಯಾಯತಿ ದರದಲ್ಲಿ ಕೊಡಲು ಉದ್ದೇಶಿಸಿದೆ. ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಒಂದು ಬಲ್ಬಿಗೆ ನೂರು ರುಪಾಯಿ ನಿಗದಿಗೊಳಿಸುತ್ತದಂತೆ. ಅಲ್ಲಿಗೆ ಇದು ಒಟ್ಟು ಆರು ನೂರು ಕೋಟಿ ರುಪಾಯಿಗಳ ವ್ಯವಹಾರ. ಬೀದಿ ದೀಪಗಳನ್ನೆಲ್ಲ ಬದಲಿಸುತ್ತಾರಂತೆ. ಬೀದಿ ದೀಪಗಳಿಗೆ ಹೆಚ್ಚಿನ ಸಾಮರ್ಥ್ಯದ ಬಲ್ಬುಗಳು ಬೇಕಿರುವುದರಿಂದ ಅವುಗಳ ವೆಚ್ಚ ಮತ್ತಷ್ಟು ಹೆಚ್ಚಿದ್ದೀತು. ಒಂದು ಮನೆಗೆ ರಿಯಾಯತಿ ದರದಲ್ಲಿ ಗರಿಷ್ಟ ಹತ್ತು ಬಲ್ಬುಗಳನ್ನು ನೀಡುತ್ತಾರಂತೆ. ಆ ಲೆಕ್ಕದಲ್ಲಿ 1.32 ಕೋಟಿ ಮನೆಗಳು x 100 ಎಂದರೆ ಸಾವಿರದ ಮುನ್ನೂರ ಇಪ್ಪತ್ತು ಕೋಟಿ ಖರ್ಚಾಗುತ್ತದೆ.  ಇಷ್ಟೆಲ್ಲ ಖರ್ಚು ಮಾಡಿದ ನಂತರ ಉಳಿಯುವುದು ಸಾವಿರ ಮೆಗಾವ್ಯಾಟ್ ವಿದ್ಯುತ್.
ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ಮನೆಗಳಿಗೆ ಕೊಟ್ಟ ನಂತರ ಹಳೆಯ ಆರು ಕೋಟಿ ಬಲ್ಬುಗಳು ಕಸ ಸೇರುತ್ತದೆ. ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತದೆ? ದಿಡೀರ್ ಅಂತ ಎಸೆಯಲ್ಪಟ್ಟ ಆರು ಕೋಟಿ ಬಲ್ಬುಗಳು ಪರಿಸರಕ್ಕೆ ಯಾವ ರೀತಿಯಿಂದ ಪೂರಕ? ಈ ಆರು ಕೋಟಿ ಬಲ್ಬುಗಳನ್ನು ಮರುಉಪಯೋಗಿಸುವಂತೆ ಮಾಡುವ, ಈ ಬಲ್ಬು ಕಸವನ್ನು ನಿರ್ವಹಿಸುವ ಯಾವ ಯೋಚನೆಯನ್ನೂ ಮಾಡದೆ ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ರಿಯಾಯತಿ ದರದಲ್ಲಿ ನೀಡುವ ಹಿಂದಿನ ಮರ್ಮವೇನು? ಹೋಗಲಿ ಈ ಬಲ್ಬೆಂಬ ತಂತ್ರಜ್ಞಾನ ಎಲ್.ಇ.ಡಿ ಬಲ್ಬುಗಳೊಂದಿಗೆ ನಿಂತುಹೋಗುತ್ತದಾ? ನಿಮಗೆ ನೆನಪಿರಬೇಕು ನಾಲ್ಕೈದು ವರುಷಗಳ ಹಿಂದೆ ಸಿ.ಎಫ್.ಎಲ್ ಬಲ್ಬುಗಳ 'ಹವೆ' ಜೋರಾಗಿತ್ತು. ಸಿ.ಎಫ್.ಎಲ್ ಬಲ್ಬುಗಳು ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ, ಎಲ್ಲೆಲ್ಲೂ ಸಿ.ಎಫ್.ಎಲ್ ಬಲ್ಬುಗಳೇ ರಾರಾಜಿಸಬೇಕು ಎಂದು ಹೇಳಲಾಗುತ್ತಿತ್ತು. ಎಲ್ಲೆಡೆ ಸಿ.ಎಫ್.ಎಲ್ ಬಲ್ಬುಗಳು ರಾರಾಜಿಸುವುದಕ್ಕೆ ಮುಂಚೆಯೇ ಮತ್ತಷ್ಟು ಕಡಿಮೆ ವಿದ್ಯುತ್ ಉಪಯೋಗಿಸುವ ಎಲ್.ಇ.ಡಿ ಬಲ್ಬುಗಳು ಕಾಲಿಟ್ಟಿವೆ. ಇನ್ನೈದು ವರುಷಕ್ಕೆ ಇನ್ನಷ್ಟು ಉನ್ನತ ತಂತ್ಜಜ್ಞಾನದ ಬಲ್ಬುಗಳು ಬರುವುದಿಲ್ಲವೆಂದು ಏನು ಗ್ಯಾರಂಟಿ? ಮತ್ತಷ್ಟು ವಿದ್ಯುತ್ ಉಳಿಸುವ ಬಲ್ಬುಗಳು ಬಂದರೆ ಈ ಆರು ಕೋಟಿ ಎಲ್.ಇ.ಡಿ ಬಲ್ಬುಗಳನ್ನು ಏನು ಮಾಡಬೇಕು? ಮತ್ತಷ್ಟು ಕಸ ಸೇರಿಸಿ ಪರಿಸರಕ್ಕೆ ಪೂರಕ ಎಂಬ ಹಣೆಪಟ್ಟಿ ಕಟ್ಟಬೇಕಾ?
ಹೊಸದಾಗಿ ಮನೆ ಕಟ್ಟುವವರು ಎಲ್.ಇ.ಡಿ ಬಲ್ಬುಗಳನ್ನೇ ಹೆಚ್ಚು ಉಪಯೋಗಿಸುತ್ತಿದ್ದಾರೆ; ಮನೆಯಲ್ಲಿರುವ ಹಳೆಯ ಬಲ್ಬುಗಳು ಹಾಳಾದಾಗ ಅದರ ಜಾಗಕ್ಕೆ ಎಲ್.ಇ.ಡಿ ಬಲ್ಬುಗಳ ಬರಲಿ. ಹೆಚ್ಚು ವಿದ್ಯುತ್ ಬೇಡುವ ಹಳೆಯ ಬಲ್ಬುಗಳ ಉತ್ಪಾದನೆಯೇ ನಿಂತುಬಿಟ್ಟರೆ ಮತ್ತಷ್ಟು ಒಳ್ಳೆಯದು. ಹಳೆಯ ಬಲ್ಬು ಹಾಳಾಗುವಷ್ಟರಲ್ಲಿ ಹೊಸ ತಂತ್ರಜ್ಞಾನದ ಬಲ್ಬು ಬಂದರೆ ಜನರು ಅದನ್ನು ಉಪಯೋಗಿಸುವಂತಾಗಲಿ. ಅದು ಬಿಟ್ಟು ಆರು ಕೋಟಿ ಬಲ್ಬುಗಳನ್ನು ಹಂಚುವುದು ಪರಿಸರಕ್ಕೆ ಪೂರಕ ಎನ್ನುವುದೆಲ್ಲ ಒಪ್ಪುವಂತಹ ಮಾತಲ್ಲ. ಪರಿಸರಕ್ಕೆ ಇದರಿಂದ ಹಾನಿಯೇ ಹೆಚ್ಚು.

ಅಕ್ಟೋ 1, 2015

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ...

mohammad akhlaq
ಈ ಲೇಖನದ ಹೆಡ್ಡಿಂಗು ಇವತ್ತಿನದಲ್ಲ. ಬರೋಬ್ಬರಿ ಮೂರು ವರುಷದ ಹಿಂದೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೀಫ್ ಫೆಸ್ಟಿವಲ್ ಎಂಬ ಊಟದ ಹಬ್ಬದ ಸಂದರ್ಭದಲ್ಲಿ ಆ ಫೆಸ್ಟಿವಲ್ಲಿನ ಪರವಾಗಿದ್ದ ಹುಡುಗನೊಬ್ಬನಿಗೆ ಹಬ್ಬವನ್ನು ವಿರೋಧಿಸುವವರು ಚೂರಿ ಹಾಕಿಬಿಟ್ಟಿದ್ದರು. ಆಗ ಬರೆದ ಲೇಖನ ಇವತ್ತು ಮತ್ತೆ ನೆನಪಾಗಿದ್ದು ಉತ್ತರಪ್ರದೇಶದ ದಾದ್ರಿಯ ಬಿಸಾರ ಎಂಬಲ್ಲಿ 'ಬೀಫ್' ತಿಂದರು ಎಂಬ ಅನುಮಾನದ ಮೇಲೆ ಒಂದಿಡೀ ಕುಟುಂಬವನ್ನು ಥಳಿಸಲಾಗಿದೆ. ಮನೆಯ ಹಿರಿಯ ಮೊಹಮದ್ ಅಕ್ಲಾಖನನ್ನು ಹೊಡೆದು ಬಡಿದು ಸಾಯಿಸಲಾಗಿದೆ. ಅವರ ಮಗ ಡ್ಯಾನಿಷ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಮೂರು ವರ್ಷದ ಕೆಳಗೆ ಚೂರಿ ಚುಚ್ಚುವವರೆಗಿದ್ದ ಮನಸ್ಥಿತಿ ಈಗ ಸಾಯಿಸಿಯೇಬಿಡುವಷ್ಟು ಹಾಳಾಗಿಬಿಟ್ಟಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವು ಹಿಂದೂ ಉಗ್ರರನ್ನು ಬಂಧಿಸಲಾಗಿದೆ. ಯಾವ ಉಗ್ರಗಾಮಿ ಸಂಘಟನೆಗೂ ಅಧಿಕೃತವಾಗಿ ಸೇರಿದವರಲ್ಲ ಎಂದು ಪೋಲೀಸರು ಹೇಳಿದ್ದಾರೆ.


ಒಂದು ಕರು ಕಾಣೆಯಾಗುತ್ತದೆ. ಅದರ ಮಾಂಸವನ್ನು ಮೊಹಮದ್ ಅಕ್ಲಾಖ್ ತೆಗೆದುಕೊಂಡು ಹೋಗುತ್ತಿದ್ದ'ನಂತೆ' ಎಂದು ಸುದ್ದಿಯಾಗುತ್ತದೆ. ಅವರ ಮನೆಯವರು ದನದ ಮಾಂಸವನ್ನು ತಿಂದ'ರಂತೆ' ಎಂದು ಸ್ಥಳೀಯ ದೇವಸ್ಥಾನದಲ್ಲಿ 'ಘೋಷಿಸಲಾಗುತ್ತದೆ'. ಧರ್ಮರಕ್ಷಣೆಯ ಹೊಣೆ ಹೊತ್ತ ಹಿಂದೂ ಉಗ್ರರು ಅಕ್ಲಾಖನ ಮನೆಗೆ ನುಗ್ಗಿ ಸಾಯುವವರೆಗೂ ಬಡಿಯುತ್ತಾರೆ. ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಪೋಲೀಸರು ಪರೀಕ್ಷೆಗೆ ಲ್ಯಾಬಿಗೆ ಕಳುಹಿಸುತ್ತಾರೆ! ಅಕ್ಲಾಖನ ಮಗಳು ಸಾಜ್ದಾಳ 'ಅದು ದನದ ಮಾಂಸವೇ ಅಲ್ಲ. ದನದ ಮಾಂಸ ಅಲ್ಲವೆಂದು ಲ್ಯಾಬ್ ರಿಪೋರ್ಟ್ ಹೇಳಿದರೆ ನನ್ನ ತಂದೆಯನ್ನು ವಾಪಸ್ಸು ಕೊಡುತ್ತಾರೆಯೇ?' ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಅದು ದನದ ಮಾಂಸವೋ ಮತ್ತೊಂದೋ ಮನೆಗೆ ನುಗ್ಗಿ ಸಾಯ ಬಡಿಯುವಂತಹ 'ಹಕ್ಕನ್ನು' ಈ ಉಗ್ರರಿಗೆ ನೀಡಿದ್ದಾದರೂ ಯಾರು? ಮೊಹಮದ್ ಅಕ್ಲಾಖ್ ಕರುವನ್ನು ಕದ್ದಿದ್ದೇ ಹೌದಾದರೆ ಅದನ್ನು ವಿಚಾರಿಸಲು ಪೋಲೀಸರಿಲ್ಲವೇ? ಏನು ಊಟ ಮಾಡಬೇಕೆಂದು ಆದೇಶಿಸಲು ಇವರ್ಯಾರು? ಇವತ್ತು ದನದ ಮಾಂಸದ ಹೆಸರಿನಲ್ಲಿ ಹಿಂದೂ ಉಗ್ರರು ಸಾಬರ ಮನೆಗೆ ನುಗ್ಗಿದ್ದಾರೆ, ಸಾಬರ ಮನೆಗೆ ತಾನೇ ಎಂದು ನಾವು ಸುಮ್ಮನಿರುತ್ತೀವಿ; ನಾಳೆ ಮಾಂಸ ತಿನ್ನುವ ಹಿಂದೂಗಳ ಮನೆಗೆ ನುಗ್ಗಿ ಬಡಿಯುತ್ತಾರೆ.... ಈಗ ಸುಮ್ಮನಿದ್ದವರು ಆಗ ಮಾತನಾಡುತ್ತೀವಾ?
ದನಕ್ಕಿರುವ ಬೆಲೆ ಮನುಷ್ಯನಿಗಿಲ್ಲವೇ? ಅಂದಹಾಗೆ ಬಿಹಾರ ಚುನಾವಣೆ ಹತ್ತಿರದಲ್ಲಿದೆ....

ಸೆಪ್ಟೆಂ 30, 2015

‘ವಿವೇಕ'ವಿಲ್ಲದ ಪರಿಸರವಾದದಲ್ಲಿ ಮನುಷ್ಯನ ಸ್ಥಾನವೆಲ್ಲಿ?

ts vivekananda
Dr Ashok K R
ಕಳೆದ ಏಪ್ರಿಲ್ಲಿನಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿದ್ದೆ. ವಾಪಸ್ಸಾಗುವಾಗ ರಸ್ತೆ ಬದಿಯಲ್ಲಿ ಸ್ಥಳೀಯರೊಬ್ಬರು ಚಕೋತ್ತಾ ಹಣ್ಣು ಮಾರುತ್ತ ಕುಳಿತಿದ್ದರು. ಎರಡು ಚಕೋತ್ತಾ ಹಣ್ಣು ಖರೀದಿಸಿ ಕೆ.ಗುಡಿಯಲ್ಲಿನ ಸಫಾರಿಯ ಬಗ್ಗೆ ವಿಚಾರಿಸುತ್ತಿದ್ದೆ. ಯಾವ್ಯಾವ ಟೈಮಲ್ಲಿ ಸಫಾರಿ ಇರುತ್ತೆ ಎಂದು ಕೇಳುತ್ತಿದ್ದೆ. ಹುಲಿ ಏನಾದ್ರೂ ಸಿಗುತ್ತಾ ಸಫಾರಿಯಲ್ಲಿ ಎಂದು ಕೇಳಿದಾಗ ‘ಈಗ ಬೇಸಿಗೆ ಅಲ್ವಾ ಸರ್. ನೀರು ಕಡಿಮೆ ಇರುತ್ತೆ. ನೀರಿರೋ ಜಾಗದಲ್ಲಿ ಉಪ್ಪು ಸವರಿರುತ್ತಾರೆ. ಉಪ್ಪು ಹುಡಿಕ್ಕೊಂಡು ಬಂದೇ ಬರ್ತಾವೆ’ ಎಂದವನು ಹೇಳಿದ. ಇದು ನಮ್ಮ ಎಕೋ ಟೂರಿಸಮ್ ಹೆಸರಿನ ಪರಿಸರವಾದದ ಪರಿ. ಹೆಚ್ಚಿನ ದುಡ್ಡು ಕೊಟ್ಟವರಿಗಷ್ಟೇ ಸಫಾರಿ ಸೌಲಭ್ಯ. ಸಫಾರಿಗೆ ಬಂದವರು ನಿರಾಶರಾಗಬಾರದು ಎಂಬ ಕಾರಣಕ್ಕೆ ಕೃತಕವಾಗಿ ಪ್ರಾಣಿಗಳನ್ನು ನೀರಿರುವ ಜಾಗಕ್ಕೆ ಕರೆಸುವ ವಿಧಾನ ಪರಿಸರಕ್ಕೆ ಪೂರಕವಾಗಿರಲು ಹೇಗೆ ಸಾಧ್ಯ? ಸರ್ಕಸ್ಸಿನಲ್ಲೂ ಪ್ರಾಣಿಗಳನ್ನು ಮನುಷ್ಯನ ಮನೋರಂಜನೆಗಾಗಿ ಉಪಯೋಗಿಸುತ್ತಾರೆ, ಇಲ್ಲೂ ಅದೇ ನಡೆಯುತ್ತೆ; ಅಲ್ಲದು ಹಿಂಸೆ ಎನ್ನಿಸಿಕೊಂಡರೆ ಇಲ್ಲಿ ಪರಿಸರ ಪ್ರವಾಸೋದ್ಯಮದ ಭಾಗವಾಗಿ ನಡೆಯುತ್ತದೆ. ಸಫಾರಿ ಹೋಗುವ ನಿರ್ಧಾರವನ್ನೇ ತ್ಯಜಿಸಿಬಿಟ್ಟೆ. ಈ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಪರಿಸರವಾದ ಎಲ್ಲೋ ಒಂದು ಕಡೆ ತಪ್ಪಾಗಿದೆಯಾ ಎನ್ನುವ ಅನುಮಾನ ಅವತ್ತು ಬಂತಾದರೂ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಯೋಚನೆಯೇನು ಬರಲಿಲ್ಲ. ಅವತ್ತು ನನ್ನಲ್ಲಿ ಮೊಳಕೆಯೊಡೆದ ಯೋಚನೆಗಳು ಬೆಳೆದು ಆ ಅಭಿಪ್ರಾಯಗಳಿಗೊಂದು ರೂಪ ದಕ್ಕಲಾರಂಭಿಸಿರುವುದು ಡಾ.ಟಿ.ಎಸ್.ವಿವೇಕಾನಂದರ ಬರಹಗಳ ಸಂಗ್ರಹಗಳಾದ ‘ಭೂಮಿಗೀತೆ’ ಮತ್ತು ‘ಜೀವಪಲ್ಲಟಗಳ ಆತ್ಮಕಥ’ ಕೃತಿಗಳನ್ನು ಓದಿದಾಗ. 

2004 – 2005ರಲ್ಲಿ ಪತ್ರಿಕೆಗಳಿಗೆ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವತ್ತಿನಷ್ಟೇ ಇವತ್ತಿಗೂ ಪ್ರಸ್ತುತವಾಗಿಸುವ ಅಂಶಗಳಿವೆ. ಎರಡೂ ಪುಸ್ತಕಗಳು ಪರಿಸರದ ಬಗ್ಗೆ ಮಾತನಾಡುತ್ತವೆ. ಮಾತನಾಡುತ್ತವೆ ಅನ್ನುವುದಕ್ಕಿಂತ ಅರಿವು ಮೂಡಿಸುತ್ತವೆ ಎನ್ನುವುದು ಸರಿ. ಪರಿಸರವೆಂದರೆ ಗಿಡ ಮರ ಪಕ್ಷಿ ಪ್ರಾಣಿ ಕಾಡು ನದಿ. ಅವುಗಳು ಕೆಡದಂತೆ, ಅಳಿದುಹೋಗದಂತೆ ಮಾಡುವುದೇ ಪರಿಸರವಾದ. ಒಂದು ಗಿಡ ನೆಟ್ಟು, ಹುಲಿ - ಆನೆ ಸಂರಕ್ಷಣೆಗೆ ಕರೆ ನೀಡಿ, ಕೆರೆ – ನದಿ ನೀರನ್ನು ಶುದ್ಧ ಮಾಡಲು ಕೋಟ್ಯಾಂತರ ಖರ್ಚು ಮಾಡುವುದು ನಾವು ದಿನನಿತ್ಯ ನೋಡುವ ಪರಿಸರವಾದ. ಇದ್ಯಾವುದೂ ಪರಿಸರವಾದವೇ ಅಲ್ಲ ಎಂದು ಸಾರಾಸಗಾಟಾಗಿ ವಿವೇಕಾನಂದರು ಸಿಟ್ಟಿನಿಂದ, ವ್ಯಂಗ್ಯದಿಂದ ಹೇಳಿದಾಗ ‘ಈ ಮನುಷ್ಯನಿಗೇನೂ ತಲೆ ಕೆಟ್ಟಿದೆಯಾ? ಇದು ಪರಿಸರವಾದವಲ್ಲದೇ ಹೋದರೆ ಇನ್ಯಾವುದು ಪರಿಸರವಾದ?’ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ಇವೆಲ್ಲವೂ ಯಾಕೆ ಪರಿಸರವಾದವಲ್ಲ ಎಂದವರು ವಿವರಿಸುತ್ತ ಸಾಗಿದಾಗ ಹೌದಲ್ವಾ? ನಮಗ್ಯಾಕೆ ಈ ಯೋಚನೆಯೇ ಬಂದಿರಲಿಲ್ಲ ಎಂದನ್ನಿಸಲಾರಂಭಿಸುತ್ತದೆ. ನಮ್ಮ ಎಲ್ಲಾ ಪರಿಸರವಾದದ ಹೋರಾಟಗಳಲ್ಲೇ ಮನುಷ್ಯನೇ ಕಾಣೆಯಾಗಿದ್ದಾನೆ ಎಂಬ ಸಂಗತಿ ಅರಿವಿಗೆ ಬರಲಾರಂಭಿಸುತ್ತದೆ. ಮನುಷ್ಯ ಕೂಡ ಪ್ರಕೃತಿಯ ಒಂದು ಭಾಗವೇ ಹೌದಲ್ಲವೇ? ಮನುಷ್ಯನನ್ನು ಮರೆತು ಯಾವ ಪರಿಸರದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ? ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳನ್ನು ‘ಅವರು ಪರಿಸರಕ್ಕೆ ಹಾನಿಕಾರಕ’ ಎಂಬ ನೆಪವೊಡ್ಡಿ ಕಾಡಿನಿಂದ ಹೊರಗಟ್ಟುವ ನಗರ ಕೇಂದ್ರಿತ ಸಮಾಜ ಹೆಚ್ಚು ಹಣ ನೀಡಿದವರಿಗೆ ಕಾಡಿಗೆ ಹೋಗಿ ‘ಮಜಾ’ ಮಾಡುವ ಅವಕಾಶ ನೀಡುವುದು ಯಾವ ರೀತಿಯಿಂದ ಪರಿಸರಕ್ಕೆ ಪೂರಕ?


bhoomigeethe
ಈ ರೀತಿಯ ಪ್ರಶ್ನೆಗಳನ್ನು, ಪರಿಸರವಾದದ ಗೊಂದಲಗಳನ್ನು ಪದಪುಂಜಗಳಿಂದ ಅಲಂಕರಿಸಿ ಓದುಗನನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನವಿಲ್ಲದಿರುವುದೇ ಈ ಪುಸ್ತಕಗಳ ಹಿರಿಮೆ. ಇಲ್ಲಿ ಕರಾರುವಾಕ್ ಅಂಕಿ ಸಂಖೈಗಳಿವೆ. “ಭಾರತದಲ್ಲಿ ಸಮಾಜ ವಾದ ಅಥವಾ ‘ಸಮತಾ ವಾದಗಳು’ ಬೇಕಾದರೆ ‘ವಾದ’ಗಳಾಗಿ ನಿಲ್ಲಬಹುದೇ ವಿನಯ ‘ಪರಿಸರ’ ಎಂದೂ ‘ವಾದ’ವಾಗಲು ಸಾಧ್ಯವಿಲ್ಲ. ಯಾವುದು ಆಚರಣೆ ಬರದಿದ್ದರೂ ಚಿಂತೆ ಇಲ್ಲವೋ ಅದು ‘ವಾದ’ ಆಗುತ್ತದೆ. ಇಂತಲ್ಲಿ ಪರಿಸರ ‘ವಾದ’ ಆಗಲು ಹೇಗೆ ಸಾಧ್ಯ? ಅದು ಆಚರಣೆಯಾಗಬೇಕಿತ್ತು” ಎಂದು ನೇರವಾಗಿ ಹೇಳುತ್ತಾರೆ (ಪರಿಸರವಾದ ಎಂಬ ಸಾಂಸ್ಕೃತಿಕ ರಾಜಕೀಯ). ಸಾಮಾನ್ಯವಾಗಿ ಪರಿಸರದ ವಿಷಯದ ಬಗ್ಗೆ ಚರ್ಚೆ ಮಾತು ಬರಹಗಳು ಸಾಗಿದಾಗ ಅಲ್ಲಿ ಜಾತಿ ಪ್ರವೇಶ ಪಡೆಯುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ವರ್ಗ ಬೇಧದ ಚರ್ಚೆಗಳೂ ಇರುವುದಿಲ್ಲ. ಇವೆರಡೂ ಪುಸ್ತಕಗಳು ಈ ಆಧುನಿಕ ಪರಿಸರವಾದ ಹೇಗೆ ಮೇಲ್ವರ್ಗದವರು - ಮೇಲ್ಜಾತಿಯವರು ಆದಿವಾಸಿಗಳ ಬದುಕುವ ನೆಲೆಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿವರಿಸುತ್ತದೆ. ಅಡುಗೆ ಮಾಡಲು ಸೌದೆ ಪುಳ್ಳೆ ಆರಿಸಿಕೊಳ್ಳುವ ಆದಿವಾಸಿ ಮಹಿಳೆ ಹೇಗೆ ತಾನೇ ಪರಿಸರಕ್ಕೆ ಅಪಾಯಕಾರಿ? ಈ ಆದಿವಾಸಿಗಳನ್ಯಾಕೆ ಕಾಡಿನಿಂದ ತೆರವು ಮಾಡಿಸಬೇಕು? ಈ ಆದಿವಾಸಿಗಳ ಮನೆಗಳಲ್ಲಿ ಬೆಲೆಬಾಳುವ ಮರಗಳ ಕುರ್ಚಿ ಮೇಜುಗಳಿವೆಯಾ? ಅವರ ಮನೆಯಲ್ಲಿ ಹುಲಿಯ ಚರ್ಮ, ಜಿಂಕೆಯ ಕೊಂಬುಗಳಿವೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಆದಿವಾಸಿಗಳು ಮರಮಟ್ಟು ಕಡಿಯುತ್ತಿದ್ದರೂ ಅವರಿಗಾಗಿ ಕಡಿಯುವುದಿಲ್ಲ, ನಗರವಾಸಿ ಮೇಲ್ಜಾತಿ – ಮೇಲ್ವರ್ಗದ ಜನರ ಶೋಕಿಗಾಗಿ ಪುಡಿಗಾಸಿಗಾಗಿ ಕಡಿದಿರುತ್ತಾರೆ ಎಂಬಂತಹ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯಲು ಸುಮ್ಮನೆ ನಮ್ಮ ಮನೆಯ ಬಾಗಿಲು – ಕಿಟಕಿ – ಕುರ್ಚಿ – ಮೇಜುಗಳ ಮೇಲೆ ಕಣ್ಣಾಡಿಸಿದರೆ ಸಾಕು. 

“ದೀಪದ ಕೆಳಗಿನ ಕತ್ತಲಿನಂತೆ ಸಂಪನ್ಮೂಲ ಪ್ರದೇಶದ ಜನ ಅಲ್ಲಿನ ಸಂಪನ್ಮೂಲಗಳಿಂದ ಹೊರತಳ್ಳಲ್ಪಡುತ್ತಾರೆ. ಯಾವುದೋ ಹೆಸರಿನಲ್ಲಿ, ಮತ್ಯಾರಿಗೋ ಇಲ್ಲಿನ ಸಂಪನ್ಮೂಲ ಬಿಸಾಕು ಬೆಲೆಗೆ ಮಾರಾಟವಾಗುತ್ತದೆ. ಸ್ಥಳೀಯರು ಪರಕೀಯರಾಗಿ, ಪರಕೀಯರು ಸ್ಥಳೀಯರನ್ನು ಆಳುವಂತಾಗುತ್ತದೆ” (ಸಗಣಿ ಮಾರಿದರೆ ಪರಿಸರ ವಿರೋಧಿ, ಸಾಫ್ಟ್ ವೇರ್ ಮಾರಿದರೆ) ಜೀವಪಲ್ಲಟಗಳ ಆತ್ಮಕಥನದಲ್ಲಿ ಪರಿಸರದ ಜೊತೆಜೊತೆಗೆ ಕರೆಂಟಿನ ಖಾಸಗೀಕರಣ, ಸಗಣಿ ಮಾರಾಟದ ಹಿಂದಿನ ಜಾತಿ ರಾಜಕೀಯ, ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು? ಎನ್ನುವಂತಹ ಸಾಂಸ್ಕೃತಿಕ ಪ್ರಶ್ನೆ, ಇಂಗ್ಲೀಷ್ ಕಲಿಕೆಯ ಬಗ್ಗೆ ಸುಳ್ಳನ್ನಾಡುವ ‘ಕನ್ನಡ’ ಕಂದಮ್ಮಗಳ ಬಗ್ಗೆಯೆಲ್ಲ ವಸ್ತುನಿಷ್ಟವಾಗಿ ಬರೆಯಲಾಗಿದೆ. “1983 – 1992ರವರೆಗೆ ಜಾರಿಯಲ್ಲಿದ್ದ ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಇವರು ಬೆಳೆಸಿದ ನೆಡುತೋಪು 417 ಚ.ಕಿಮೀ, ಇದಕ್ಕೆ ವಿಶ್ವಬ್ಯಾಂಕ್ ಮತ್ತು ಓಡಿಎ ಇಂದ ಪಡೆದ ಸಾಲ ರೂ 93 ಕೋಟಿ. ಸಾರ್ವಜನಿಕರಿಗೆ ಹಂಚಿದ ಸಸಿಗಳ ಮೊತ್ತ 50.75 ಕೋಟಿ. ಇದರಲ್ಲಿ 75 ಲಕ್ಷ ಸಸಿಗಳನ್ನು ಬಿಟ್ಟು ಬಿಟ್ಟರೂ…., ಹೆಕ್ಟೇರಿಗೆ 100 ಸಸಿಗಳಂತೆ ಈ ರಾಜ್ಯದ ನೆಲಕ್ಕೆ ನಾಟಿ ಮಾಡಿದ್ದರೂ ಕನಿಷ್ಟ 50 ಲಕ್ಷ ಚ.ಕಿಮೀ ಹೊಸ ಕಾಡು ಸೃಷ್ಟಿಯಾಗಿರಬೇಕಿತ್ತು. ಈ ಯೋಜನೆ ಆರಂಭವಾದ ಅವಧಿಯಿಂದ ಇಂದಿನವರೆಗೆ 20 ವರ್ಷಗಳು ಮುಗಿದಿರುವುದರಿಂದ ಬಹುದೊಡ್ಡ ಮರಗಳ ಕಾಡು ಕಣ್ಣಿಗೆ ಕಾಣಬೇಕಿತ್ತು” (ಅಲ್ಲಿ ಹುಲಿಗಳು ಕಾಣೆಯಾದರೆ ಇಲ್ಲಿ ಕಾಡುಗಳೇ ಕಾಣೆ) ಎನ್ನುವಂತಹ ವಿವರಗಳು ಹೇಗೆ ನಮ್ಮ ಪರಿಸರಪರ ಯೋಜನೆಗಳು ದುಡ್ಡು ಮಾಡುವ ದಂಧೆಗಳಾಗಿವೆ ಎನ್ನುವುದನ್ನು ತಿಳಿಸಿಕೊಡುತ್ತದೆ. ನೀರು ಕೂಡ ವ್ಯವಹಾರವಾಗಿಬಿಡುತ್ತಿರುವ ಅಪಾಯದ ಬಗ್ಗೆ 2004ರಲ್ಲಿ ಬರೆದಿದ್ದಾರೆ ವಿವೇಕಾನಂದ. ಇಂದು ಆ ವಾಸ್ತವವನ್ನು ನಾವು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಹಣವಿಲ್ಲದ ಕಾರಣಕ್ಕೆ ನೀರೂ ದಕ್ಕದ ಪರಿಸ್ಥಿತಿ ಕೊನೆಗೆ ಕಾಡುವುದು ಮೇಲ್ಜಾತಿ – ಮೇಲ್ವರ್ಗದವರಿಗಲ್ಲ ಎಂಬ ವಾಸ್ತವ ಪರಿಸರವಾದಕ್ಕೂ ಮತ್ತು ನಮ್ಮ ಜಾತಿ ವ್ಯವಸ್ಥೆಗೂ ಇರುವ ಸಂಬಂಧವನ್ನು ಅನಾವರಣಗೊಳಿಸುತ್ತದೆ. 

ನೀರು ಕಾಡು ಪರಿಸರದ ಬಗೆಗಿನ ಮಾತುಗಳೆಲ್ಲವೂ ಸರಿಯೇ, ಆದರಾ ಯೋಚನೆ – ಯೋಜನೆಗಳು ಮನುಷ್ಯನನ್ನು ಹೊರತುಪಡಿಸಿದ್ದಾದರೆ ಅದು ಶೋಷಿತ ವರ್ಗಕ್ಕೂ ಅಪಾಯಕಾರಿ, ಪರಿಸರಕ್ಕೂ ಅಪಾಯಕಾರಿ. ಈ ಎರಡೂ ಪುಸ್ತಕಗಳನ್ನು ಓದಿ ಮುಗಿಸುವ ಸಂದರ್ಭದಲ್ಲಿ ಎರಡು ವರದಿಗಳನ್ನು ಪತ್ರಿಕೆಗಳಲ್ಲಿ ಓದಿದೆ. ಒಂದು ಮಂಗಳ ಗ್ರಹದಲ್ಲಿ ನೀರಿರುವ ಅಂಶ ಪತ್ತೆಯಾಗಿದೆಯೆಂಬ ವರದಿ. ಇರುವ ಭೂಮಿಯ ನೀರನ್ನೇ ನೆಟ್ಟಗೆ ಉಪಯೋಗಿಸಲಾಗದೆ, ಖಾಸಗಿಯವರ ಕೈಗೆ ಒಪ್ಪಿಸಿ ಕುಲಗೆಡಿಸಿರುವ ನಮ್ಮ ಮುಂದಿನ ಯೋಜನೆ ಮಂಗಳದ ಅಂಗಳದಲ್ಲಿರುವ ನೀರನ್ನು ಖಾಸಗೀಕರಣಗೊಳಿಸುವುದೇ? ಇನ್ನೊಂದು ವರದಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಲ್ಲಿ, ಇಕ್ಕೆಲದಲ್ಲಿ ಕೋಟ್ಯಾಂತರ ಮರ ನೆಡುವ ‘ಪರಿಸರವಾದಿ’ ಯೋಜನೆ. ಊರಗಲದ ರಸ್ತೆಗಳನ್ನು ಕಟ್ಟಿದ್ದೇ ನಗರವಾಸಿಗಳ ಅನುಕೂಲಕ್ಕಾಗಿ, ಆ ನಗರವಾಸಿಗಳು ಓಡಾಡಲು ತಂಪಾಗಿರಲೆಂದು ಮರಗಳನ್ನು ಬೆಳೆಸಲು ಯೋಚಿಸುವ ಸರಕಾರ, ಎಂತಹ ಅದ್ಭುತ ಯೋಜನೆ ಎಂದು ಹೊಗಳುವ ನಾವು….. ಕೊನೆಗೆ ಆ ಕೋಟ್ಯಾಂತರ ಮರಗಳಲ್ಲಿ ಉಳಿಯುವ ಮರಗಳೆಷ್ಟು? ಕೋಟ್ಯಾಂತರ ರುಪಾಯಿಯ ವ್ಯವಹಾರದಿಂದ ಲಾಭವ್ಯಾರಿಗೆ? ಈ ಎರಡೂ ಪುಸ್ತಕಗಳನ್ನು ಓದದಿದ್ದರೆ ಪರಿಸರಕ್ಕೇ ಲಾಭವಲ್ಲವೇ ಎಂದು ಸರಳವಾಗಿ ಉತ್ತರಿಸಿಬಿಡುತ್ತಿದ್ದೆ. ಈಗ ಸಾಧ್ಯವಾಗುವುದಿಲ್ಲ; ಪುಸ್ತಕ ನೀಡಿದ ಹೊಸ ಹೊಸ ಹೊಳಹುಗಳು ಪರಿಸರ ಪ್ರಜ್ಞೆ ಎಂಬುದನ್ನು ಮತ್ತೆ ಅ ಆ ಇ ಈ ಯಿಂದ ಕಲಿಯುವಂತೆ ಪ್ರೇರೇಪಿಸಿದೆ. ಗಿಡ ನೆಡುವ ಪರಿಸರ ಪ್ರೇಮಿ ನೀವಾಗಿದ್ದಲ್ಲಿ ತಪ್ಪದೇ ಈ ಎರಡೂ ಪುಸ್ತಕಗಳನ್ನು ಓದಿ.

ಪ್ರಕಾಶಕರು:
ತೇಜಸ್ವಿ ಪ್ರಕಾಶನ, ಬೆಂಗಳೂರು.
ಭೂಮಿಗೀತೆ – ಬೆಲೆ: 250/-
ಜೀವಪಲ್ಲಟಗಳ ಆತ್ಮಕಥನ – ಬೆಲೆ: 150
ಪ್ರತಿಗಳಿಗಾಗಿ ಸಂಪರ್ಕಿಸಿ: 
ಬಾಲು – 9986833515
ಶೇಖರ್ ಬಾಬು - 9845353868

ಸೆಪ್ಟೆಂ 28, 2015

ಲೈಕು ಕಮೆಂಟು ಶೇರು....

Dr Ashok K R
ತಂತ್ರಜ್ಞಾನದಲ್ಲಿ ಎಲ್ಲವೂ ಸಲೀಸು!
ಲೈಕು ಕಮೆಂಟು ಶೇರು

ದೇಶಪ್ರೇಮಿಯಾಗುವುದು ಎಷ್ಟೊತ್ತಿನ ಕೆಲಸ?
ಮೂರು ಬಣ್ಣ ಬಳ್ಕಂಡು
ಒಂದು ಸೆಲ್ಫಿ ತಗಂಡು
ಫೋಟೋ ಹಾಕಿದರಾಯಿತು....
ಲೈಕು ಕಮೆಂಟು ಶೇರು.


ಧರ್ಮರಕ್ಷಣೆಯಂತೂ ಬಲು ಸುಲಭ
ಅನ್ಯ ಧರ್ಮ ದ್ವೇಷಿಸುವ 
ಎರಡು ಬರಹ ಸಾಕು
ಫೋಟೋ ಹಾಕಿದರಾಯಿತು....
ಲೈಕು ಕಮೆಂಟು ಶೇರು.

ಪ್ರತಿಭಟಿಸಲು ಬಿಸಿಲು ಮಳೆ 
ಚಳಿಯಲ್ಲಿ ನಿಲ್ಲುವ ಅಗತ್ಯವೇನಿಲ್ಲ
ಪಿಟಿಷನ್ನಿಗೆ ಸಹಿ ಹಾಕಿ
ಲಿಂಕ್ ಹಾಕಿದರಾಯಿತು....
ಲೈಕು ಕಮೆಂಟು ಶೇರು.

ಅಲ್ಯಾರೋ ಮಲೆಕುಡಿಯನ
ಕೈ ಕತ್ತರಿಸಿದರು ಇಲ್ಯಾರೋ
ದಲಿತರನ್ನು ಹೊರಗಿಟ್ಟರು ಮತ್ತೆಲ್ಲೋ
ತಮಟೆ ಬಾರಿಸದವರಿಗೆ 
ದಬದಬನೆ ಬಡಿದರು 
ಇವುಗಳ ಮಧ್ಯೆ ನಂದೆಲ್ಲಿಡ್ಲಿ ಅಂತ ರೈತನ ಆತ್ಮಹತ್ಯೆ 
ಅವರ ಬೆಂಬಲಕ್ಕೆ ಅಬಿರುದ್ದಿ ವಿರೋಧಿಗಳ ಅರಚಾಟ.... ಇಸ್ಕಿ ಮಾಕೀ.

ದೇಶದ ಏಳ್ಗೆಗೆ ರಕ್ತವಿರಲಿ
ಬೆವರು ಹರಿಸುವುದೂ ಬೇಡ
Supportdigitalindiaದ ಮೇಲೆ ಕ್ಲಿಕ್ಕಿಸಿ
ಚಿತ್ರ ಬದಲಿಸಿದರಾಯಿತು....
ಲೈಕು ಕಮೆಂಟು ಶೇರು.

ಈ ಸಂಭ್ರಮದ ಸಂಕಟದ
ನಡುವೆ ತೋಚಿದ್ದು ಗೀಚಿ
ಗೀಚಿದ್ದನ್ನು ತಿದ್ದಿ ತೀಡುವ
ನನ್ನಂತೋರ ತುಮುಲಗಳಿಗೂ....
ಲೈಕು ಕಮೆಂಟು ಶೇರು.

ಸಾಂದರ್ಭಿಕ ಚಿತ್ರ: ಅಂತರ್ಜಾಲ.

ಸೆಪ್ಟೆಂ 22, 2015

ಡಿಜಿಟಲ್ ಇಂಡಿಯಾದ ಮೇಲೆ ಸರ್ಕಾರದ ಕಳ್ಳಗಣ್ಣು?!

vijaykarnataka
ಬೆಳಿಗ್ಗೆ ಬೆಳಿಗ್ಗೆ ಸುದ್ದಿಗಳನ್ನು ಓದುವವರ, ಅದರಲ್ಲೂ ಯುವಜನತೆಯ ಎದೆಬಡಿತ ಒಂದರೆಕ್ಷಣ ನಿಂತುಬಿಟ್ಟಿರಲಿಕ್ಕೂ ಸಾಕು! ವಾಟ್ಸ್ ಅಪ್ ಮೆಸೇಜುಗಳನ್ನು 90 ದಿನಗಳವರೆಗೆ ಡಿಲೀಟ್ ಮಾಡುವುದು ಹೊಸ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂಬ ಅಂಶ ದಿಕ್ಕೆಟ್ಟವರೆಷ್ಟು ಮಂದಿಯೋ. ಗೆಳತಿಗೋ ಗೆಳೆಯನಿಗೋ ಮೆಸೇಜು ಕಳಿಸಿ ಆ ಕಡೆಯಿಂದ ಬಂದ ರಿಪ್ಲೈ ಓದಿಕೊಂಡು ಮನೆಯವರ ಕಣ್ಣಿಗೆ ಬಿದ್ದುಗಿದ್ದು ಬಿಟ್ಟೀತು ಎಂಬ ಆತಂಕದಿಂದ ಪಟಕ್ಕಂತ ಮೆಸೇಜು ಡಿಲೀಟು ಮಾಡುವವರ ಪೈಕಿ ನೀವೂ ಒಬ್ಬರಾಗಿದ್ದರೆ ಈ ವರದಿಯನ್ನು ತಪ್ಪದೇ ಓದಿ! 
"National Encryption Policy" ಎಂಬ ಹೊಸ ಕಾನೂನನ್ನು ಕೇಂದ್ರದ ಐಟಿ ಇಲಾಖೆ ಜಾರಿಗೆ ತರಲುದ್ದೇಶಿಸಿದೆ. ಇದರನ್ವಯ ಗುಂಪಿನಲ್ಲಿ ಮೆಸೇಜು ಕಳುಹಿಸಲು ಉಪಯೋಗಿಸುವ ತಂತ್ರಾಂಶಗಳನ್ನು (ಉದಾ: ವಾಟ್ಸ್ ಅಪ್, ಲೈನ್, ಹೈಕ್, ಟಿಲಿಗ್ರಾಮ್ ಇತ್ಯಾದೆ) ಸರಕಾರದ ಕಾನೂನಿನಡಿ ನೋಂದಣಿಗೊಳಿಸಬೇಕು. ಮತ್ತು ಈ ತಂತ್ರಾಂಶವನ್ನುಪಯೋಗಿಸುವವರು ಮೆಸೇಜು ಕಳುಹಿಸಿದ ದಿನದಿಂದ ತೊಂಭತ್ತು ದಿನಗಳವರೆಗೆ ಆ ಮೆಸೇಜನ್ನು ಅಳಿಸಿ ಹಾಕುವಂತಿಲ್ಲ. ಕಾನೂನಿನ ಸಂರಕ್ಷಕರು ಮೆಸೇಜುಗಳನ್ನು ಪರಿಶೀಲಿಸಲು ಕೇಳಿಕೊಂಡಾಗ ಒಂದು ವೇಳೆ ನೀವು ಮೆಸೇಜು ಅಳಿಸಿಬಿಟ್ಟಿದ್ದರೆ ಅದು ಅಪರಾಧವಾಗಿಬಿಡುತ್ತದೆ! ಈ ತಂತ್ರಾಂಶಗಳಿಗಷ್ಟೇ ಅಲ್ಲದೆ ಅನೇಕ ವೆಬ್ ಪುಟಗಳ ಮಾಹಿತಿಗಳು, ಈಮೇಲುಗಳನ್ನು ಕೂಡ ಈ ಕಾಯ್ದೆಯಡಿ ತರುವ ಉದ್ದೇಶವಿದೆಯಂತೆ. ಡಿಜಿಟಲ್ ಇಂಡಿಯಾದ ಹೆಸರಿನಲ್ಲಿ ಇಡೀ ಭಾರತವನ್ನೇ ತಂತ್ರಜ್ಞಾನಕ್ಕೆ ತೆರೆಯುವ ಆಸಕ್ತಿ ತೋರಿಸುತ್ತ ಇದೇನಿದು ಕಳ್ಳಗಣ್ಣು?!
ಸದ್ಯಕ್ಕೆ ನಿರಾಳವಾಗಿರಬಹುದು!
ಆಧುನಿಕ ತಂತ್ರಾಂಶಗಳಲ್ಲಿ ಸುರಕ್ಷತೆ ಹೆಚ್ಚು. ಆ ಸುರಕ್ಷತೆಯನ್ನು ಮೀರಿ ಹಳೆಯ ಸಂದೇಶಗಳನ್ನು ಹೊರತೆಗೆಯುವುದು ಪೋಲೀಸರಿಗೆ ಕಷ್ಟವಾಗುತ್ತದೆಂಬ ಕಾರಣಕ್ಕೆ ಈ ರೀತಿಯ ಕಾನೂನು ಜಾರಿಯಾಗುತ್ತಿದೆಯಂತೆ. ಬಹುಶಃ ಇಂತಹ ಎಲ್ಲಾ ಕಾಯ್ದೆ ಕಾನೂನು ಜಾರಿಗೆ ತರುವುದಕ್ಕೆ 'ದೇಶದ ಸಂರಕ್ಷಣೆಯ' ಹೆಸರನ್ನು ಉಪಯೋಗಿಸುತ್ತಾರೆ. ಇದಕ್ಕೂ ಅದೇ ಹೆಸರನ್ನು ಉಪಯೋಗಿಸುತ್ತಾರ ತಿಳಿದಿಲ್ಲ. ಈ ಕಾನೂನಿನ್ನೂ ಶೈಶಾವಸ್ಥೆಯಲ್ಲಿದೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. akrishnan@deity.gov.in ಮಿಂಚಂಚೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಈಗಾಗಲೇ ಐಟಿ ಇಲಾಖೆಗೆ ಈ ಸಂಬಂಧವಾಗಿ ಅನೇಕ ದೂರುಗಳು ತಲುಪಿರಬಹುದು. ಕಳ್ಳಗಣ್ಣನ್ನು ವಿರೋಧಿಸುವವರ ಸಂಖೈ ಹೆಚ್ಚಿರಬಹುದು. ಆ ಕಾರಣದಿಂದ ಐಟಿ ಇಲಾಖೆಯ ವೆಬ್ ಪುಟದಲ್ಲಿ ಈ ಸಂದೇಹಗಳನ್ನು ನಿವಾರಿಸುವ ಸಲುವಾಗಿ ವಾಟ್ಸ್ ಅಪ್ ಮುಂತಾದ ತಂತ್ರಾಂಶಗಳನ್ನು, ಪಾಸ್ ವರ್ಡ್ ಆಧಾರಿತ ಸೇವೆಗಳನ್ನು ಸದ್ಯಕ್ಕೆ ಈ ವಿಧೇಯಕದಿಂದ ಹೊರಗಿಡುವ ತೀರ್ಮಾನವನ್ನು ಮಾಡುವುದಾಗಿ ತಿಳಿಸಿದೆ. ಮಾಡಿಯೇ ತೀರುತ್ತದೆಂದು ಹೇಳುವಂತಿಲ್ಲ.
ನೀವು ಒಂದು ಮಿಂಚಂಚೆ ಕಳುಹಿಸಿ: (ಕೆಳಗಿನದನ್ನು ಕಾಪಿ ಮಾಡಿ ಕಳುಹಿಸಿದರೂ ನಡೆದೀತು):
I, Citizen of India strongly oppose the National Encryption Policy in its current form which clearly intrudes my privacy. The policy appears to be misused by the government agencies to disturb my personal life, to track my day to day activities and even it will be used to track my e-commerce activities. Being a citizen it is my right to have some private life without being monitored by the government agencies. 
I kindly request you to revert back the National Encryption Policy. Digital India should not be equated to Monitor India.