Aug 26, 2015

ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?

TS Vivekananda
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.

ಕಳೆದ ವಾರದ ಮನವಿಯಂತೆ ನೀವು ಅಶುತೋಷ್ ಗೌರೀಕರ್‌ರ ಮಹತ್ವದ ಚಿತ್ರಗಳಾದ ಲಗಾನ್ ಮತ್ತು ಸ್ವದೇಶ್ ಚಿತ್ರಗಳನ್ನು ನೋಡಿದ್ದರೆ ಈ ನಮ್ಮ ಚರ್ಚೆ ಸ್ವದೇಶ್ ಚಿತ್ರದ ನಾಯಕ ಮೋಹನ್ ಭಾರ್ಗವನ ಗ್ರಾಮೀಣಾಭಿವೃದ್ದಿ ಕಲ್ಪನೆಯಷ್ಟೇ ಸಲೀಸಾಗಿರುತ್ತದೆ. ಇಲ್ಲದಿದ್ದರೂ ಆತಂಕವೇನಿಲ್ಲ ನೀವು ಡಾ. ರಾಜ್‌ರ ಬಂಗಾರದ ಮನುಷ್ಯ ಸಿನೆಮಾ ನೋಡಿದ್ದರೂ ಸಾಕು. ಅದರ ಶಾರುಖ್ ಖಾನ್ ವಿಸ್ತರಣೆ ಈ ಸ್ವದೇಶ್. ಬಹುಶಃ ೫೦-೬೦ರ ದಶಕದಲ್ಲಿ ಮಂಡಿಸಬಹುದಾಗಿದ್ದ ಮೇಲ್ನೋಟದ ಹಳ್ಳಿಗಳ ಅಭಿವೃದ್ಧಿಯ ಹುಮ್ಮಸ್ಸನ್ನು ಹುಟ್ಟಿಸುವ ‘ಉಪ್ಪರಿಗೆ ದೃಷ್ಟಿಕೋನ’ದ ಸೆಲ್ಯುಲಾಯ್ಡ್ ರೂಪ.

ಈ ಜಗತ್ತಿನ ಪ್ರತಿಯೊಂದು ಜೀವಿಯೂ ಗ್ರಹಿಸುವುದು ತನ್ನ ನೆಲೆಯಿಂದ. ಕೆಲವರು ಕೆಳಗೆ ನಿಂತು ಮೇಲಕ್ಕೆ ನೋಡುತ್ತಾರೆ. ಬಹುತೇಕರು ಮೇಲಿನಿಂದ ಕೆಳಕ್ಕೆ ನೋಡುತ್ತಾರೆ. ಎತ್ತರದ ಕಟ್ಟಡದ ಮೇಲೆ ನಿಂತು ಮಾರುತಿ ಕಾರನ್ನು ನೋಡಿ, ಅದು ಬೆಂಝ್ ಕಾರಿನಷ್ಟು ಉದ್ದಕ್ಕೆ ಕಾಣುತ್ತದೆ. ಬೆಂಝ್ ಏರ್ ಬಸ್ಸಿನಷ್ಟು ದೊಡ್ಡದಾಗಿ. ಹಾಗೇ ಒಂದು ಗುಡಿಸಲುಗಳ ಸಮೂಹವನ್ನು ನೋಡಿ..., ಎಷ್ಟು ಕಲಾತ್ಮಕವಾಗಿ ಕಾಣುತ್ತವೆಂದರೆ, ಇದರಿಂದಲೇ ಅನೇಕ ‘ಉಪ್ಪರಿಗೆ ಕಲಾವಿದರು’ ಸ್ಫೂರ್ತಿವಂತರಾಗಿ ಅನೇಕ ಅಭಿಜಾತ ಕಲಾಕೃತಿಗಳನ್ನು ರಚಿಸಿ ಧನ್ಯರಾಗಿದ್ದಾರೆ. ವಿಮಾನದಲ್ಲಿ ಕುಳಿತು ರಾಗಿ, ಬತ್ತ, ಜೋಳದ ಹೊಲಗಳನ್ನು ಕಂಡು ವಿಶ್ವದ ವಿಸ್ಮಯಗಳಲ್ಲಿ ಒಂದನ್ನು ಕಂಡಷ್ಟು ಮೂಕ ವಿಸ್ಮಿತರಾಗಿದ್ದಾರೆ.

ಮೋಹನ್ ಭಾರ್ಗವ ಅಮೆರಿಕೆಯ ಮಹೋನ್ನತ ಅಂತರಿಕ್ಷ ಸಂಸ್ಥೆಯಾದ ನಾಸಾದಲ್ಲಿ ಒಬ್ಬ ವಿಜ್ಞಾನಿ. ಇವನು ಅಮೆರಿಕನ್ನರಿಗಿಂತ ಹೆಚ್ಚು ಬ್ರಿಲಿಯಂಟ್. ಇವನಿಗೆ ಹಿಂದಿಲ್ಲ ಮುಂದಿಲ್ಲ. ಮೀನ್ಸ್... ಇವನೊಬ್ಬ ಅನಾಥ. ಬಹುಶಃ ವಾರಾನ್ನ ತಿಂದು ಓದಿದ್ದರೂ ಇರಬಹುದು. ಇವನು ಅಷ್ಟು ಕಷ್ಟಪಟ್ಟು ಓದಿ, ತನ್ನ ಪ್ರತಿಭೆಯ ಮೂಲಕವೇ ನಾಸಾ ತಲುಪಿದವನು. ಇವನಿಗೆ ಸ್ವದೇಶದಲ್ಲಿ ಇರುವ ಏಕೈಕ ಸಂಬಂಧವೆಂದರೆ ಇವನನ್ನು ಸಾಕಿದ ಒಬ್ಬ ತಾಯಿ. ನಿಜಾರ್ಥದಲ್ಲಿ ಈಕೆ ಒಬ್ಬ ಆಯಾ. ಆಕೆಯೊಂದಿಗೆ ಇವನ ಸಂಬಂಧ- ನೆನಪುಗಳು ಅತ್ಯಂತ ಗಾಢವಾದವು. ಈಕೆಯನ್ನು ನೋಡುವುದು ಒಂದು ಹಂಬಲವಾಗಿ, ಕೊನೆಗೆ ಗೀಳಾಗಿ ಅವನು ತಾನು ಒಪ್ಪಿಕೊಂಡಿದ್ದ ಯೋಜನೆಯ ಪ್ರಕಾರ ಅತ್ತ ಉಪಗ್ರಹವನ್ನು ಆಕಾಶಕ್ಕೆ ಹಾರಿಸಿ ಇತ್ತ ಭಾರತಕ್ಕೆ ವಿಮಾನ ಏರುತ್ತಾನೆ. ಈತ ನಗರಕ್ಕೆ ಬಂದಾಗ ಆ ಅಮ್ಮ ಗುಜರಾತಿನ ಯಾವುದೋ ಒಂದು ಹಳ್ಳಿಯಲ್ಲಿರುವುದಾಗಿ ತಿಳಿಯುತ್ತದೆ. ಇದನ್ನು ಈತನಿಗೆ ಹೇಳಿದವಳು ಒಬ್ಬ ಹುಡುಗಿ. 

ಈತ ಆಧುನಿಕ ಸೌಲಭ್ಯಗಳಿಂದ ಇಡಿಕಿರಿದಿದ್ದ ಒಂದು ಕಾರವಾನನ್ನು ಬಾಡಿಗೆ ಪಡೆದು ಆ ಹಳ್ಳಿಗೆ ಬರುತ್ತಾನೆ. ಯಥಾರೀತಿ ಅಲ್ಲಿನ ಅನಕ್ಷರತೆ, ಅಸ್ಪೃಶ್ಯತೆ, ಮೂಲಭೂತ ಸೌಕರ್ಯಗಳ ಕೊರತೆ, ಬಡತನ ಇದಕ್ಕೆಲ್ಲಾ ಕಾರಣವಾದ ಅಜ್ಞಾನ ಇವನನ್ನು ಕಾಡುತ್ತವೆ. ಈತ ತನ್ನ ದೇಶಕ್ಕಾಗಿ ಮರುಗಲು ಆರಂಭಿಸುತ್ತಾನೆ. ಮೊದಲು ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತದೆ. ಕೇರಿ ಕೇರಿ-ಮನೆಮನೆಗೆ ಹೋಗಿ ಮಕ್ಕಳನ್ನು ಕಳಿಸುವಂತೆ ಕೇಳುತ್ತಾನೆ. ಅನೇಕರು ಅನೇಕ ಕಾರಣ ಹೇಳುತ್ತಾರೆ. ಆದರೆ ಕೆಲವರು ತಮ್ಮ ಅಸ್ಪೃಶ್ಯತೆಯ ಕಾರಣ ನಾವು ಮಕ್ಕಳನ್ನು ಶಾಲೆಗೆ ಕಳಿಸಲಾಗದು ಎಂದು ಹೇಳುತ್ತಾರೆ. ಕೊನೆಗೂ ಅವರೆಲ್ಲಾ ಶಾಲೆಗೆ ಬರುವಂತೆ ಮಾಡುತ್ತಾನೆ. ಈ ನಡುವೆ ಹಳ್ಳಿಯ ಮುಖಂಡರು ಇವನ ಕಾರ್ಯಕ್ಕೆ ಕ್ರಿಯಾಲೋಪ ಎತ್ತುತ್ತಾರೆ. ಅಸ್ಪೃಶ್ಯರನ್ನು ಸ್ಪೃಶ್ಯರ ನಡುವೆ ಕೂಡಿಸಿ ಅಕ್ಷರ ಕಲಿಸುವುದನ್ನು ವಿರೋಧಿಸುತ್ತಾರೆ. ಈ ನಡುವೆ ಊರಿನ ಮುಖಂಡರು ಇವನನ್ನು ಒಂದು ಪ್ರಶ್ನೆ ಕೇಳುತ್ತಾರೆ. ನೀನು ಯಾವ ಜಾತಿಯವನು?
ಪುಸ್ತಕ ಬಿಡುಗಡೆ ಸಮಾರಂಭದ ವಿವರ
ಇಲ್ಲಿನವರೆಗೂ ಸಿನೆಮಾ ಓಕೆ. ಹೆಸರಿನ ಮೂಲಕ ಜಾತಿಯನ್ನು ಗುರುತಿಸಲಾಗದ ಜನಕ್ಕೆ ಅದರಲ್ಲೂ ಆ ಪಾತ್ರ ಮಾಡಿರುವ ವ್ಯಕ್ತಿ ಶಾರುಖ್ ಖಾನ್ ಆದ್ದರಿಂದ ಈ ದೇಶದ ಜನ ಸಾಮಾನ್ಯ ಎಲ್ಲೂ ತಪ್ಪು ಭಾವಿಸುವ ಸಂದರ್ಭ ಬಂದಿರುವುದಿಲ್ಲ. ಆದರೆ ಈ ಭಾರ್ಗವ ಉತ್ತರಿಸುತ್ತಾನೆ. ನಾನು ಬ್ರಾಹ್ಮಣ!!. ಈ ಭಾರ್ಗವ ಅವರ ಅಜ್ಞಾನ, ಅಸ್ಪೃಶ್ಯತೆಯ ಆಚರಣೆಯ ಬಗ್ಗೆ ಕಿಡಿಗಾರುತ್ತಾನೆ. ಭಾಷಣ ಮಾಡುತ್ತಾನೆ. ಅಂತೂ ಊರವರಿಗೆ ಜ್ಞಾನೋದಯ ವಾಗುವಂತೆ ಮಾಡುತ್ತಾನೆ. 

ನಿಜಕ್ಕೂ ಇದೊಂದು ಆದರ್ಶ. ಒಬ್ಬ ಬ್ರಾಹ್ಮಣನೇ ಬಂದು ಅಸ್ಪೃಶ್ಯತೆಯನ್ನು ವಿರೋಧಿಸಿ ಮಾತನಾಡುವುದು, ಅವರನ್ನೂ ಮುಖ್ಯವಾಹಿನಿ ಎಂದು ಇದೇ ಸ್ಪೃಶ್ಯರು ಹೇಳುವಂಥ ಜೀವನಧಾರೆಗೆ ಆಹ್ವಾನಿಸುವುದು... ಎಲ್ಲವೂ ಅಮೋಘಾದ್ಭುತವಾಗಿ ಕಾಣುತ್ತವೆ. ಆದರೆ ಇಡಿಯಾಗಿ ಭಾರತದ ವರ್ಣಾಶ್ರಮ ಧರ್ಮದ ಇತಿಹಾಸವನ್ನು ನೋಡಿದರೆ ಈ ಚಿತ್ರದ ಆದರ್ಶ ಸಹ ಅದರ ವಿಸ್ತರಣೆಯಾಗಿ ಕಾಣುತ್ತದೆ. ನಿಜವಾದ ಸತ್ಯು, ನಿಜವಾದ ಗೌರೀಕರ್ ಬಿಚ್ಚಿಕೊಳ್ಳುವುದು ಇಲ್ಲೇ!! ಇದನ್ನೇನು ಅವರು ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ ಎಂದರೂ....!? ಇದೇ ಮೋಹನ ಭಾರ್ಗವನ ಜಾಗದಲ್ಲಿ ಒಬ್ಬ ಆದಿವಾಸಿ, ಒಬ್ಬ ದಲಿತ, ಒಬ್ಬ ಅಗಸ, ಒಬ್ಬ ಹಜಾಮ, ಒಬ್ಬ ಮೇದ, ಒಬ್ಬ ಲಂಬಾಣಿ... ಇವರೇ ಏಕೆ ಅದೇ ಚಿತ್ರದ ನಿಜ ನಾಯಕ ಶಾರುಖ್ ಖಾನನಂಥಾ ಒಬ್ಬ ಮುಸ್ಲೀಂ, ಒಬ್ಬ ಕ್ರಿಶ್ಚಿಯನ್‌ನನ್ನು ಏಕೆ ಈ ಮನಸ್ಸುಗಳು ಕಲ್ಪಿಸಿಕೊಳ್ಳುವುದಿಲ್ಲ? ಆ ಭಾರ್ಗವ ಮಾಡಿದ ಕೆಲಸವನ್ನು, ತೋರಿದ ದೇಶಪ್ರೇಮವನ್ನು ಒಬ್ಬ ದಲಿತ ಯಾ ಮುಸ್ಲಿಮನಲ್ಲಿ ಕಾಣಲು ಇವರಿಗೆ ಏಕೆ ಸಾಧ್ಯವಾಗುವುದಿಲ್ಲ? ಆ ಚಿತ್ರದ ನಾಯಕ ಸ್ವತಃ ಒಬ್ಬ ಮುಸ್ಲೀಂ ಆಗಿದ್ದಾಗ ಸಹ!! 

ಇರಲಿ..., ಯಾರನ್ನೂ ದೂಷಿಸುವುದಾಗಲೀ, ಕಟಕಟೆಯಲ್ಲಿ ನಿಲ್ಲಿಸುವುದಾಗಲೀ ಇಲ್ಲಿನ ಉದ್ದೇಶವಲ್ಲ. ಬದಲಾಗಿ ಹೇಗೆ ‘ಉಪ್ಪರಿಗೆ ದೃಷ್ಟಿಕೋನ’ವೊಂದು ತನ್ನ ಗ್ರಹಿಕೆಯ ಮಿತಿಯಲ್ಲಿಯೇ ಇಡೀ ಜನ ಮಾನಸದ ಹೃದಯಗಳಲ್ಲಿ ತಪ್ಪುಗಳನ್ನು ತುಂಬುತ್ತದೆ ಎಂಬುದನ್ನು ಕಂಡುಕೊಳ್ಳಲು ಅಥವಾ... ಲಗಾನ್ ಚಿತ್ರದಲ್ಲಿ ‘ಕಚರಾ’ ನನ್ನು ಸಿಕ್ಸರ್‌ನಿಂದ ವಂಚಿಸುತ್ತದೆ ಎಂದು ಹೇಳಲು.

ಬಹುಶಃ ಇದು ಎಲ್ಲರಿಗೂ ಗೊತ್ತಿರುವ ಚಿತ್ರ. ತೆರಿಗೆಯಿಂದ ರಿಯಾಯತಿ ಪಡೆಯಲು ಒಂದು ಹಳ್ಳಿಯ ಜನ ಒಟ್ಟಾಗಿ ಒಂದು ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದನ್ನು ಹೇಳುವ ಕತೆ. ಈ ಸಿನೆಮಾದ ವಿಶೇಷವೆಂದರೆ ಇಲ್ಲಿನ ಹೋರಾಟದಲ್ಲಿ ಸೈನ್ಯಗಳಿಲ್ಲ, ಮದ್ದುಗುಂಡುಗಳಿಲ್ಲ, ಸಾವು ನೋವುಗಳಿಲ್ಲ ಇರುವುದೆಲ್ಲಾ ಬರೀ ಮರದ ಬ್ಯಾಟು ಮತ್ತು ಚರ್ಮದ ಚೆಂಡು. ಶ್ರೇಷ್ಟತೆಯ ತೆವಲು ಹತ್ತಿದ ದುಡುಕು ಸ್ವಭಾವದ ಒಬ್ಬ ಕಮ್ಯಾಂಡರನ ಕಾರಣದಿಂದ ತಮಗೆ ಗೊತ್ತಿಲ್ಲದ, ಸಾಮ್ರಾಜ್ಯಶಾಹಿ ಹಿರಿಮೆಯ ಆಟವಾದ ಕ್ರಿಕೆಟ್ಟನ್ನು ಒಂದು ನುರಿತ ತಂಡದ ಮೇಲೆ ಹಳ್ಳಿಗರು ಆಡಬೇಕಾಗಿ ಬಂದ ಸಂದರ್ಭವನ್ನು ಹೇಳುವ ಕತೆ.

ಸಿನೆಮಾದ ಕತೆ ಸರಳವಾಗಿದೆ. ಮಂಡನೆ ಮನೋಹರವಾಗಿದೆ. ಸ್ಕ್ರೀನ್ ಪ್ಲೇ, ಕ್ಯಾಮೆರಾ, ಸಂಗೀತ, ನಿರ್ದೇಶನ ಎಲ್ಲಾ ಚೆನ್ನಾಗಿದೆ. ಅದಕ್ಕಾಗಿಯೇ ಈ ಚಿತ್ರ ಆಸ್ಕರ್ ಮಟ್ಟಕ್ಕೆ ಹೋಗಿದ್ದು. ಅನಕ್ಷರಸ್ಥರ ಗುಂಪೊಂದು ತಮ್ಮ ಉಳಿವಿನ ದಾರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮ್ರಾಜ್ಯಶಾಹಿ ಮನಸ್ಥಿತಿಯ ವಿರುದ್ದ ಹೋರಾಡುವ ಪಣ ತೊಟ್ಟು, ಅದನ್ನು ಗೆಲ್ಲುವುದನ್ನು ಸಾಂಕೇತಿಕವಾಗಿ ಇದು ಹೇಳುತ್ತದೆ. ಈ ಚಿತ್ರಕ್ಕೆ ಆಸ್ಕರ್‌ನಲ್ಲಿ ಎದುರಾಗಿದ್ದು ಇಡೀ ಮನುಕುಲದ ಇಂದಿನ ದುರಂತವನ್ನು ಲಗಾನ್‌ಗಿಂತಲೂ ಸರಳವಾದ ಘಟನೆಯೊಂದರ ಮೂಲಕ ನಿರೂಪಿಸುತ್ತಾ ಸಾಗುವ ಚಿತ್ರ ‘ನೋ ಮ್ಯಾನ್ಸ್ ಲ್ಯಾಂಡ್’. ಲಗಾನ್ ಈ ಚಿತ್ರದ ಮಂದೆ ಸೋಲಲು ಅನೇಕ ಕಾರಣಗಳಿದ್ದವು. ಸ್ವತಃ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಅಮೀರ್‌ಖಾನ್ ಇದನ್ನು ಒಪ್ಪಿಕೊಂಡಿದ್ದರು.

ಆದರೆ ಈ ಚಿತ್ರಕ್ಕೆ ಆಸ್ಕರ್ ನಿರೀಕ್ಷಿಸಿದ್ದ ಜನ ಗಮನಿಸದೇ ಹೋದ ಒಂದು ಮುಖ್ಯವಾದ ಸಂಗತಿ ಇತ್ತು. ನನಗನ್ನಿಸಿದಂತೆ ಈ ಸಂಗತಿಯನ್ನು ಆಸ್ಕರ್ ಜ್ಯೂರಿಗಳು ಖಂಡಿತ ಗಮನಿಸಿರುತ್ತಾರೆ. ಇಲ್ಲದಿದ್ದರೆ ಅವರು ನೋಮ್ಯಾನ್ಸ್ ಲ್ಯಾಂಡಿನ ಮಹತ್ವವನ್ನೂ ಸಹ ಗುರುತಿಸಲಾಗುತ್ತಿರಲಿಲ್ಲ. ಒಂದು ಪಕ್ಷ ಲಗಾನ್ ಈ ಸಂಗತಿಯಲ್ಲಿ ಒಂದಿಷ್ಟು ಉದಾತ್ತವಾಗಿದ್ದರೆ.....! ಇಂದಿನ ಜಾಗತಿಕ ಸಂದರ್ಭದಲ್ಲಿ ಅದು ನೋಮ್ಯಾನ್ಸ್ ಲ್ಯಾಂಡಿನ ಉದ್ದೇಶದಷ್ಟೇ ಉದಾತ್ತವಾಗುತ್ತಿತ್ತು. ಭಾರತದ ಸಂದರ್ಭದಲ್ಲಂತೂ ಬಹುದೊಡ್ಡ ಸಂದೇಶವನ್ನು ನೀಡುತ್ತಿತ್ತು. 

ಅಲ್ಲಿ ಏನಾಗುತ್ತದೆ ಎಂದರೆ.....,

ತೆರಿಗೆ ನೆಪವಾಗಿ ಆರಂಭವಾಗುವ ಈ ವಿವಾದ ಬ್ರಿಟಿಷ್ ಕಮ್ಯಾಂಡನೊಬ್ಬನ ಹಠಮಾರಿ ನಡೆವಳಿಕೆಯ ಮೂಲಕ ಒಂದು ಮೂರ್ತರೂಪ ಪಡೆಯುತ್ತದೆ. ಭುವನ್ ಎಂಬ ಸ್ಥಳೀಯ ಯುವಕ ಒಂದೆರಡು ಸಾರಿ ಈ ಕಮ್ಯಾಂಡರನಿಗೆ ಕಿರಿಕಿರಿಯಾಗುವಂತೆ ಮಾಡಿರುತ್ತಾನೆ. ಇವನನ್ನೇ ಗುರಿಯಾಗಿಟ್ಟುಕೊಂಡು ಕ್ರಿಕೆಟ್‌ನಲ್ಲಿ ನಮ್ಮನ್ನು ಸೋಲಿಸಿದರೆ ನೀವು ಸಧ್ಯಕ್ಕೆ ರಿಯಾಯತಿ ಕೇಳಲು ಬಂದಿರುವ ತೆರಿಗೆಯಲ್ಲಿ ಒಂದಲ್ಲ, ಎರಡಲ್ಲ ಮೂರು ವರ್ಷ ರಿಯಾಯತಿ ಕೊಡುವುದಾಗಿ ಆ ಸಿಡುಕು ಮೂತಿಯ ಕಮ್ಯಾಂಡರ್ ಷರತ್ತು ಹಾಕುತ್ತಾನೆ. ಮೀನಮೇಷ ಎಣಿಸಿ ಅಂತೂ ಭುವನ್ ಅವನ ಪಂಥಾಹ್ವಾನವನ್ನು ಅಂಗೀಕರಿಸುತ್ತಾನೆ. ಊರವರ ಸಹಕಾರದ ನಡುವೆಯೂ ಭುವನನ ತಂಡಕಟ್ಟುವ ಪ್ರಯತ್ನ ಸಾಗುತ್ತಿರುತ್ತದೆ. ಈ ನಡುವೆ ಆ ಕಮ್ಯಾಂಡರನ ತಂಗಿಯೇ ಇವರಿಗೆ ಸಹಾಯಮಾಡಲು ಬರುತ್ತಾಳೆ. ಇಲ್ಲಿ ಈ ಭುವನನಿಗೆ ಈಗಾಗಲೇ ಇದ್ದ ಒಬ್ಬ ಪ್ರಿಯತಮೆಯ ಜೊತೆಗೆ ಈ ಕೆಂಪು ಹುಡುಗಿಯೂ ಕೂಡಿಕೊಳ್ಳುವ ಕಾರಣದಿಂದ ತ್ರಿಕೋನ ಪ್ರೇಮ ಆರಂಭವಾಗುವುದರೊಂದಿಗೆ ಚಿತ್ರಕ್ಕೊಂದು ಹೊಸ ಓಘ ಸೃಷ್ಟಿಯಾಗುತ್ತದೆ. 

ಭುವನ ಒಬ್ಬೊಬ್ಬರದೇ ಮನಒಲಿಸಿ, ಪ್ರಚೋದಿಸಿ ತಂಡ ನಿರ್ಮಾದಲ್ಲಿ ತೊಡಗಿದ್ದಾಗ ಈ ಕೆಂಪು ಹುಡುಗಿಯ ಆಗಮನದಿಂದ ಊರವರಿಗೆ ಹೊಸ ಹುಮ್ಮಸ್ಸು ಬಂದು, ತಂಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿರುತ್ತದೆ. ಈಗ ಪ್ರಾಕ್ಟೀಸ್ ನಡೆದಿರುತ್ತದೆ. ಒಬ್ಬ ಬ್ಯಾಟ್ ಮಾಡುತ್ತಾನೆ. ಚೆಂಡು ದೂರದ ಮೂಲೆಯಲ್ಲಿ ಕುಳಿತಿದ್ದ ಒಬ್ಬನ ಮುಂದೆ ಬೀಳುತ್ತದೆ. ಭುವನ ಚೆಂಡನ್ನು ಎಸೆಯುವಂತೆ ಹೇಳುತ್ತಾನೆ. ಅವನು ಹಿಂಜರಿಯುತ್ತಾನೆ. ಕೊನೆಗೆ ಎಸೆಯುತ್ತಾನೆ. ಭುವನ್ ಚಕಿತನಾಗಿ ‘ಕಚರಾ ಬಾ ಇಲ್ಲಿ, ಇನ್ನೊಮ್ಮೆ ಚೆಂಡು ಎಸಿ’ ಎನ್ನುತ್ತಾನೆ. ಕಚರಾ ಗಾಬರಿಯಾಗುತ್ತಾನೆ. ಆಗ ಭುವನನೇ ಅವನ್ನು ಕರೆತಂದು ಫೀಲ್ಡಿನ ಮಧ್ಯೆ ನಿಲ್ಲಿಸಿ ‘ಇವನದು ಸ್ಪಿನ್ ಬೌಲಿಂಗ್, ನೋಡಿ ಹೇಗೆ ಬಾಲು ಸುತ್ತಿ ತಿರುಗಿ ಪುಟಿಯುತ್ತದೆ!!’ ಎಂದು ಎಲ್ಲರಿಗೂ ಹೇಳುತ್ತಾನೆ. 

ಅಷ್ಟರಲ್ಲಿ ಊರವರು ಈ ಕಚರನ ಸೇರ್ಪಡೆಯನ್ನು ವಿರೋಧಿಸುತ್ತಾರೆ. ಕಾರಣ ಅವನು ಅಸ್ಪೃಶ್ಯ ಎಂದು. ಆಗ ಭುವನ ಉದಾತ್ತ-ಧೀರೋದ್ಧಾತವಾದ ಒಂದು ಭಾಷಣ ಮಾಡುತ್ತಾನೆ. ಊರ ಜನ ಭುವನನ ಮಾನವೀಯ ಮಾತುಗಳನ್ನು ಒಪ್ಪುತ್ತಾರೆ. ಕಚರಾ ತಂಡಕ್ಕೆ ಸ್ಪಿನ್ ಬೌಲರ್ ಆಗಿ ಸೇರ್ಪಡೆಯಾಗುತ್ತಾನೆ. ಈತ ಒಬ್ಬ ಹೆಳವ. ಇವನ ಬಲಗೈ ಪೋಲಿಯೋ ಪೀಡಿತವಾದಂತೆ, ದುರ್ಬಲವಾಗಿ ಮುರುಟಿಕೊಂಡಿರುತ್ತದೆ. 

ಇಂದಿನ ಸ್ಪಿನ್ ಬೌಲರ್‌ಗಳ ಬಗೆಗಿನ ಪ್ರಚಾರವನ್ನು ಕಂಡ ಯಾರಾದರೂ ಒಂದು ಕ್ಷಣ ರೋಮಾಂಚನಗೊಳ್ಳುವ ಸಂದರ್ಭ ಇದು. ಸ್ಪಿನ್ ಬೌಲರ್ ಎಂದರೆ ಅಂತಾ ಶ್ರೇಷ್ಠ...., ಇಂಥಾ ಶ್ರೇಷ್ಠ..., ಅದೂ ಇದೂ... ಲೊಟ್ಟೆ ಲೊಸ್ಗ.... ಎಂದೆಲ್ಲಾ ನಮ್ಮ ಮಾಧ್ಯಮಗಳು ಚಕ್ಕೆ ಕಟ್ಟುತ್ತಿರುವ ಹೊತ್ತಿನಲ್ಲಿ ಒಬ್ಬ ಹೆಳವನನ್ನು ಸ್ಪಿನ್ ಬೌಲರ್ ಎಂದು ಹೇಳುವ ಮೂಲಕ ಸ್ಪಿನ್ ಬೌಲಿಂಗಿನ ಚಕ್ಕೆಗಳನ್ನೆಲ್ಲಾ ಕಿತ್ತು ಬಿಸಾಕಿ, ಅದನ್ನು ಲೇವಡಿ ಮಾಡಿ ಸ್ಪಿನ್ ಬೌಲ್ ಮಾಡುವವರು ಹೆಳವರು ಎಂಬ ಅರ್ಥ ಬರುವಂಥ ಇಂಥಾ ದೃಶ್ಯವೊಂದನ್ನು ಕಟ್ಟಿಕೊಡುವುದು ನಿರ್ದೇಶಕನ ಮೆಚ್ಯೂರಿಟಿಯನ್ನು ಹೇಳುತ್ತದೆ ಎಂದು ಭಾವಿಸುವ ಸಂದರ್ಭ ಅದು. ಒಂದು ಸರಳ ಮಾದರಿಯ ಮೂಲಕ ಒಂದು ಬಹುದೊಡ್ಡ ಭ್ರಮೆಯನ್ನು ಒಡೆದು ಬಿಸಾಕುವಂತಹ ಎದೆಗಾರಿಕೆ ಅದು. 

ಅಂತಿಮವಾಗಿ ತಂಡ ಸಿದ್ದವಾಗುತ್ತದೆ. ಮೂರು ದಿನಗಳ ಮ್ಯಾಚ್ ನಿರ್ಧಾರವಾಗುತ್ತದೆ. ಮೊದಲ ಒಂದೂವರೆ ದಿನ ಬ್ರಿಟಿಶ್ ತಂಡ ಬ್ಯಾಟ್ ಮಾಡುತ್ತದೆ. ಅಷ್ಟರಲ್ಲಿ ಗೌರವಾರ್ಹ ಮೊತ್ತವನ್ನು ಪೇರಿಸುತ್ತದೆ. ನಂತರದ ಬ್ಯಾಟಿಂಗ್ ಭುವನನ ತಂಡದ್ದು. ಹಾಗೂ ಹೀಗೂ ಈ ತಂಡ ಅಂತಿಮ ಹಂತಕ್ಕೆ ಬರುತ್ತದೆ. ಎಲ್ಲಾ ಆಟಗಾರರೂ ಪೆವಿಲಿಯನ್‌ಗೆ ಮರಳಿದ್ದಾರೆ. ನಾಯಕ ಭುವನ್ ಮಾತ್ರ ನಿನ್ನೆಯಿಂದಲೂ ಫೀಲ್ಡಿನಲ್ಲೇ ಉಳಿದಿದ್ದಾನೆ. ಕೊನೆಯ ಆಟಗಾರನಾಗಿ ಕಚರಾ ಬರುತ್ತಾನೆ. ಈಗ ಕೇವಲ ೧೧ ಬಾಲ್‌ಗಳಿವೆ, ೧೨ ರನ್ ಬೇಕು.

ಕೊನೆಗೆ ಒಂದೇ ಒಂದು ಬಾಲು ಉಳಿಯುತ್ತದೆ, ಬೇಕಿರುವುದು ೬ ರನ್. ನಾಯಕ ಆತಂಕದಿಂದ ಕಚರಾನ ಸಮೀಪಕ್ಕೆ ಬಂದು.... “ಕಚರಾ ಇದು ಕೊನೆಯ ಬಾಲು, ನಮಗೆ ೬ ರನ್ ಬೇಕು. ಈ ಬಾರಿ ನೀನು ಬಾಲು ಗಡಿಯಾಚೆಗೆ ಹೋಗುವಂತೆ ಹೊಡೆಯಲೇ ಬೇಕು. ಇಲ್ಲದಿದ್ದರೆ ಊರವರೆಲ್ಲಾ ಮೂರು ಪಟ್ಟು ತೆರಿಗೆ ಕೊಡಬೇಕಾಗುತ್ತದೆ. ಮೊದಲೇ ಬರಗಾಲ, ನಾವು ಎಲ್ಲಿಂದ ತರುವುದು. ಇದರ ಜೊತೆಗೆ ಸೋಲಿನ ಅಪಮಾನವನ್ನೂ ಸಹಿಸಬೇಕಾಗುತ್ತದೆ... ಏನಾದರೂ ಮಾಡು ಕಚರಾ.... ಏನಾದರೂ ಮಾಡು...." ಎಂದೆಲ್ಲಾ ಹೇಳುತ್ತಾನೆ.

ಕೊನೆಯ ಬಾಲು ಬರುತ್ತದೆ. ಕಚರಾ ಬ್ಯಾಟ್ ಬೀಸುತ್ತಾನೆ. ಬ್ಯಾಟು ಗಾಳಿಯಲ್ಲಿ ತೇಲಿ ಹಿಂತಿರುಗುತ್ತದೆ. ಬಾಲು ಎತ್ತ ಹೋಯಿತು? ಎಂದು ಇವರು ಗೊಂದಲಲ್ಲಿದ್ದಾಗಲೇ ಅವರು ವಿಜಯೋತ್ಸವ ಆಚರಿಸಲು ಆರಂಭಿಸುತ್ತಾರೆ. ನಾಯಕ ವಿಷಣ್ಣನಾಗುತ್ತಾನೆ. ಜನ ಗರಬಡಿದಂತಾಗುತ್ತಾರೆ. ಆದರೆ ಅಷ್ಟರಲ್ಲಿ ಒಂದು ಚಮತ್ಕಾರ ನಡೆಯುತ್ತದೆ. ಅಂಪೈರ್ ‘ನೋ ಬಾಲ್’ ಕೊಡುತ್ತಾನೆ. ಕ್ಯಾಮರಾ ಮತ್ತೆ ತಿರುಗಿದಾಗ ನಾಯಕ ಬ್ಯಾಟಿಂಗ್‌ನಲ್ಲಿರುತ್ತಾನೆ. ಬಾಲು ಬರುತ್ತದೆ. ನಾಯಕ ಘಟ್ಟಿಸುತ್ತಾನೆ. ಬಾಲು ದಿಗಂತದಲ್ಲಿ ಹಾರುತ್ತಿರುತ್ತದೆ. ಎದುರಾಳಿ ತಂಡದ ನಾಯಕ ಬಾಲನ್ನು ಕ್ಯಾಚ್ ಮಾಡುತ್ತಾನೆ. ಪರಿಸ್ಥಿತಿ ಗೊಂದಲದಲ್ಲಿದ್ದಾಗ ಅಂಪೈರ್ ತನ್ನ ನೊಟದಲ್ಲಿಯೇ ಅವನು ಬೌಂಡರಿಯ ಆಚೆ ಇರುವುದನ್ನು ಸೂಚಿಸುತ್ತಾನೆ. ಭುವನನ ತಂಡ ಗೆದ್ದಿರುತ್ತದೆ. ತೆರಿಗೆ ತಪ್ಪಿರುತ್ತದೆ.

ನಿರ್ದೇಶನ, ಕ್ಲೈಮ್ಯಾಕ್ಸ್ ಎಲ್ಲಾ ಸುಂದರವಾಗಿದೆ. ಸಿನೆಮಾದಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಕಥೆಯ ಒಂದು ಸಮಸ್ಯೆ ಹಾಗೇ ಉಳಿಯುತ್ತದೆ. ಕಚರಾನೇ ಸಿಕ್ಸರ್ ಹೊಡೆದಿದ್ದರೆ ಏನಾಗುತ್ತಿತ್ತು? ಅಲ್ಲಿಗೆ ನೋ ಬಾಲಿನ ನೆಪದಲ್ಲಿ ನಾಯಕನೇ ಏಕೆ ಬರಬೇಕಿತ್ತು? ನೋ ಬಾಲ್ ಕೊಟ್ಟ ಮೇಲೂ ಅದೇ ಬ್ಯಾಟ್ಸ್‌ಮನ್ ಮತ್ತೆ ಹೊಡೆಯಬಹುದಿತ್ತಲ್ಲವೇ? ಈ ಗೆಲುವಿನ ಅವಕಾಶವನ್ನು ಕಚರಾನಿಗೇಕೆ ಕೊಡಲಿಲ್ಲ? ಅವನು ಅಸ್ಪೃಶ್ಯನೆಂದೇ? ಅಥವಾ....

ನೋಡಿ..., ಇವರಿಗೆ ತಂಡದಲ್ಲಿ ಸ್ಥಳ ಕೊಟ್ಟೆವು, ಊರಿಗಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟೆವು. ಜಾತೀಯತೆಯನ್ನೆಲ್ಲಾ ಮರೆತು, ಸ್ಪೃಶ್ಯ-ಅಸ್ಪೃಶ್ಯಗಳನ್ನೆಲ್ಲಾ ಬದಿಗಿಟ್ಟು ಆಟದಲ್ಲಿ ಒಂದಾಗಿ ದುಡಿದೆವು. ಆದರೆ ನಿಜವಾದ ಪ್ರತಿಭೆ ತೋರುವಂತ ಅವಕಾಶ ಸಿಕ್ಕಿದಾಗ ಅವರು ಅಸಮರ್ಥರಾದರು. ಅವರಿಗೆ ಅಂಥಾ ಇಚ್ಛಾಶಕ್ತಿ-ಸಾಮರ್ಥ್ಯಗಳಿಲ್ಲ ಎಂದು ಈ ಜಗತ್ತಿಗೆ ಸಾರ್ವತ್ರಿಕ ಸಂದೇಶ ಕೊಡಲೆಂದೇ? 

ಈ ‘ಉಪ್ಪರಿಗೆ ದೃಷ್ಟಿಕೋನ’ ಹೇಳಿದ್ದು, ಅನಿಸಿದ್ದು, ಗ್ರಹಿಸಿದ್ದು ಮಾತ್ರ ಕಲೆಯಾಗುವುದಾದರೆ.....! ಜಾಗತಿಕವಾದ ಮಾನವೀಯ ಮೌಲ್ಯ, ಉದಾತ್ತತೆಯ ಅರ್ಥವೇನು? ಇವನ್ನು ಹೊರತು ಪಡಿಸಿದ ಕಲೆ ಸುಂದರವಾಗಿದ್ದ ಮಾತ್ರಕ್ಕೆ ಕಲೆಯಾಗಬಲ್ಲದೇ. ಬಹುಶಃ ಆಸ್ಕರ್ ಜ್ಯೂರಿಗಳು ಕಲೆಯನ್ನು ಮಾನವೀಯ ಮೌಲ್ಯದಡಿಯಲ್ಲಿ ವಿಮರ್ಶಿಸುತ್ತಾರೆ ಎನಿಸುತ್ತದೆ. ಹಾಗಾಗಿಯೇ ಲಗಾನ್ ಸೋತಿತು, ನೋಮ್ಯಾನ್ಸ್ ಲ್ಯಾಂಡ್ ಗೆದ್ದಿತು ಅನಿಸುತ್ತದೆ.

ಇದು ಕಲೆಯ ಬಗ್ಗೆ ಮಾತನಾಡುವ ಎಲ್ಲರಿಗೂ ಅರ್ಥವಾಗಬೇಕು. ಅಶುತೋಷ್ ಗೌರೀಕರ್‌ಗೆ, ಇವರ ಯಶಸ್ವೀ ನಟರಾದ ಅಮೀರ್ ಖಾನ್ ಮತ್ತು ಶಾರುಖ್ ಖಾನ್‌ಗೆ. ಹೀಗಾಗಿಯೇ ಎಂ.ಎಸ್. ಸತ್ಯು ಮನಸ್ಸಿಗೆ ಬಂದಂತೆ ಮಾತನಾಡಿದಾಗ ಅದಕ್ಕೆ ಬೇರೊಂದು ಪ್ರಭಾವಳಿ ಸೃಷ್ಠಿಯಾಗುವುದು. ಮಾನವಂತರಾದರೆ ಇದನ್ನು ಸತ್ಯು ಸಹ ಅರಿಯಬೇಕು ಜೊತೆಗೆ ಇವರನ್ನು ಸಮರ್ಥಿಸುತ್ತಿರುವ ಮತ್ತು ವಿರೋಧಿಸುತ್ತಿರುವ ಜನಕ್ಕೆ ಸಹ.

No comments:

Post a Comment