Dr Ashok K R
ಅರವಿಂದ್
ಕೇಜ್ರಿವಾಲ್ ಎಂಬ ವ್ಯಕ್ತಿ ಅರಾಜಕತೆ ಸೃಷ್ಟಿಸಲಿಕ್ಕಷ್ಟೇ ಲಾಯಕ್ಕು. ಅರಾಜಕತೆ ಸೃಷ್ಟಿಸುವ
ಕೇಜ್ರಿವಾಲ್ ಕಾಡಿಗೆ ಹೋಗಿ ನಕ್ಸಲರ ಜೊತೆ ಸೇರಲಿ
ಎಂದು ನರೇಂದ್ರ ಮೋದಿ ಹೇಳುವುದರೊಂದಿಗೆ ದೆಹಲಿಯ ವಿಧಾನಸಭಾ ಚುನಾವಣೆ ರಂಗೇರಿತು. ಕಳೆದ ಬಾರಿಯ
ಚುನಾವಣೆಯಲ್ಲಿ ವಿಶ್ಲೇಷಕರು ಮತ್ತು ರಾಜಕಾರಣಿಗಳೆಲ್ಲ ಅಚ್ಚರಿ ಪಡುವಂತಹ ಗೆಲುವು ಕಂಡಿತ್ತು ಆಮ್
ಆದ್ಮಿ ಪಕ್ಷ. ಯು.ಪಿ.ಎ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟ ಕಟ್ಟಿದ
ಅಣ್ಣಾ ಹಜಾರೆ ನೇತೃತ್ವದ ತಂಡದ ಸದಸ್ಯರಲ್ಲೊಬ್ಬರಾದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ
ಕಟ್ಟಿ ರಾಜಕೀಯ ಆಖಾಡಕ್ಕಿಳಿದಾಗ ಸ್ವತಃ ಅಣ್ಣಾ ಹಜಾರೆ ಬೆಂಬಲ ನೀಡಲಿಲ್ಲ. ಭ್ರಷ್ಟಾಚಾರಿ ವಿರೋಧಿ
ಆಂದೋಲನದ ಅನೇಕರು ಬೆಂಬಲಿಸದಿದ್ದರೂ ಅರವಿಂದ್ ಕೇಜ್ರಿವಾಲ್ ರಾಜಕಾರಣಕ್ಕೆ ಧುಮುಕಿದಾಗ ನಕ್ಕವರೇ
ಹೆಚ್ಚು. ದೆಹಲಿಯನ್ನು ವಿಶೇಷ ಗಮನದಲ್ಲಿರಿಸಿಕೊಂಡು ಚುನಾವಣೆಗೆ ನಿಂತಾಗ ಬಿಜೆಪಿಗೆ ಒಂದೆಡೆ
ಖುಷಿಯೇ ಆಗಿತ್ತು. ಹತ್ತು ವರುಷದ ಕಾಂಗ್ರೆಸ್ಸಿನ ದುರಾಡಳಿತದಿಂದ ಬೇಸತ್ತಿದ್ದ ಮತದಾರ ಬಿಜೆಪಿಗೆ
ಬಹುಮತ ಕೊಡುತ್ತಾನೆ ಎಂಬ ನಂಬಿಕೆಯಿತ್ತು. ಬಿಜೆಪಿಯನ್ನು ವಿರೋಧಿಸುವ ಮತದಾರರ ಓಟು
ಕಾಂಗ್ರೆಸ್ಸಿಗೂ ಹೋಗದೆ ಆಮ್ ಆದ್ಮಿ ಪಕ್ಷಕ್ಕೆ ಬೀಳುತ್ತದೆ. ಎದುರಾಳಿಯ ಮತಗಳು ವಿಭಜನೆಯಾದರೆ
ಅದರಿಂದ ತನಗೇ ಗೆಲುವು ಖಂಡಿತ ಎಂಬ ಭಾವನೆಯಿತ್ತು. ಅವರ ನಂಬುಗೆ ಪೂರ್ಣ ನಿಜವಾಗಲಿಲ್ಲ. ಕಾಂಗ್ರೆಸ್ಸಿನ
ಓಟು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್
ಪಕ್ಷವನ್ನು ಎಂಟು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿತು. ಆದರೆ ಬಿಜೆಪಿಗೂ ಬಹುಮತ ದೊರಕಲಿಲ್ಲ.
ಮೂವತ್ತೆರಡು ಸ್ಥಾನಗಳನ್ನು ಗಳಿಸಲು ಯಶಸ್ವಿಯಾದ ಬಿಜೆಪಿ ಸರಳ ಬಹುಮತಕ್ಕೆ ನಾಲ್ಕು ಸ್ಥಾನಗಳಷ್ಟು
ಕೊರತೆಯನ್ನಭುವಿಸಿತು. ಎಲ್ಲರ ನಿರೀಕ್ಷೆಯನ್ನೂ ಮೀರಿ ಆಮ್ ಆದ್ಮಿ ಪಕ್ಷ 28 ಸ್ಥಾನಗಳಲ್ಲಿ
ಗೆಲುವು ಸಾಧಿಸಿತು. ಯಾರಿಗೂ ಬಹುಮತ ಸಿಗದ ಕಾರಣ ಸರಕಾರ ರಚನೆಗೊಂದಷ್ಟು ಕಸರತ್ತು ನಡೆದು
ಅಲ್ಲಿಯವರೆಗೂ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ಸಿನ ‘ಬಾ-ಹ್ಯ ಬೆಂಬಲ’ದೊಡನೆ ಅರವಿಂದ್
ಕೇಜ್ರಿವಾಲ್ ಮುಖ್ಯಮಂತ್ರಿಯಾದರು. ಜನಲೋಕಪಾಲ್ ಮಸೂದೆಯ ನೆಪದಿಂದ ಅರವಿಂದ್ ಕೇಜ್ರಿವಾಲ್
ನಲವತ್ತೊಂಬತ್ತು ದಿನಕ್ಕೆ ರಾಜೀನಾಮೆಯನ್ನೂ ನೀಡಿಬಿಟ್ಟರು! ರಾಜಕಾರಣದಲ್ಲಿ ಅದವರ ಮೊದಲ
ತಪ್ಪಾಯಿತು. ನಂತರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ
ಗೆಲುವು ಕಂಡಿತು. ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಯಶಸ್ಸು ಗಳಿಸಿತು. ಆದರೂ ದೆಹಲಿಯ
ಚುನಾವಣೆಯ ಬಗ್ಗೆ ಆತುರ ತೋರಲಿಲ್ಲ ಬಿಜೆಪಿ. ಆತುರ ತೋರದೆ ತಪ್ಪು ಮಾಡಿತಾ? ದೆಹಲಿ ಚುನಾವಣೆಯ
ಸುತ್ತಮುತ್ತಲಿನ ಬೆಳವಣಿಗೆಗಳು ತಪ್ಪು ಮಾಡಿತೆಂದೇ ಹೇಳುತ್ತಿವೆ. ಚುನಾವಣಾ ಫಲಿತಾಂಶ ಏನೇ
ಆಗಬಹುದು, ಸದ್ಯದ ಮಟ್ಟಿಗಂತೂ ಬಿಜೆಪಿಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ರಾಜಕೀಯವಲ್ಲದ
ರಾಜಕಾರಣ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆದ್ದುಬಿಟ್ಟಿದ್ದಾರೆ!