![]() |
ದಿನೇಶ್ ಅಮೀನ್ |
Dr Ashok K R
ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದಾರೆ. ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದಾರೆ. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಎರಡು ಇಸ್ಲಾಂ ಅಸ್ತಿತ್ವದಲ್ಲಿದೆ, ಒಂದು ಅಲ್ಲಾ ಇಸ್ಲಾಂ ಮತ್ತೊಂದು ಮುಲ್ಲಾ ಇಸ್ಲಾಂ ಎಂದು ಹೇಳಿದ್ದರು. ಆಲ್ ಖೈದಾದ ಪತನದ ನಂತರ ಹುಟ್ಟಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೈತಾನರ ಇಸ್ಲಾಂ ಎಂಬ ಹೊಸ ಇಸ್ಲಾಮನ್ನು ಸೃಷ್ಟಿಸಿದೆಯಾ? ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮತ್ತದರ ಬೆಂಬಲಿಗರು ನಡೆಸುತ್ತಿರುವ ದುಷ್ಕೃತ್ಯಗಳು ಹೌದೆನ್ನುತ್ತಿವೆ. ಉಗ್ರರ ಈ ದುಷ್ಕೃತ್ಯ ‘ಅಭಿವ್ಯಕ್ತಿ ಸ್ವಾತಂತ್ರ್ಯದ’ ಬಗ್ಗೆ ಮತ್ತಷ್ಟು
ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಪೆರುಮಾಳ್ ಮುರುಗನ್ ಎಂಬ
ಕಾದಂಬರಿಕಾರ – ಲೇಖಕ ಹಿಂದೂ ಮೂಲಭೂತವಾದಿಗಳ ನಿರಂತರ ಕಿರುಕುಳದಿಂದ ನೊಂದು ನನ್ನೊಳಗಿನ ಲೇಖಕ
ಸತ್ತಿದ್ದಾನೆ ಎಂದು ಘೋಷಿಸಿದ್ದಾರೆ. ನಿಲುಮೆಯೆಂಬ ಫೇಸ್ ಬುಕ್ಕಿನ ಗುಂಪಿನಲ್ಲಿ ಅನೇಕ
ನೆಟ್ಟಿಗರು ಸತತವಾಗಿ ಅವಹೇಳನಕಾರಿ ಭಾಷೆಯನ್ನು ಬಳಸಿ ಟೀಕಿಸಿದ್ದರಿಂದ ಬೇಸರಗೊಂಡು ದಿನೇಶ್
ಅಮೀನ್ ಮಟ್ಟು ಐಟಿ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಹಿಂದೂವಾದದಿಂದ ಪ್ರಭಾವಿತರಾದವರು ಈ
ಅಶ್ಲೀಲ ಭಾಷೆಗೂ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ತಾವು ಕೊಡಲು ಪ್ರಯತ್ನಿಸುತ್ತಿರುವ
ದಿನಮಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಉಡಾಫೆಯ ಸ್ವೇಚ್ಛಾಚಾರದ ನಡುವಿನ ತೆಳುವಾದ
ಗೆರೆಯನ್ನು ಗುರುತಿಸುವ ಕೆಲಸ ಕಷ್ಟಕರವಾಗಿ ಪರಿಣಮಿಸುತ್ತಿದೆ.