Dr Ashok K R
ಅಭಿವೃದ್ಧಿಯ
ಹೆಸರಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ‘ಅಭಿವೃದ್ಧಿ’ಯ
ಪಥದಿಂದ ಪಕ್ಕಕ್ಕೆ ಸರಿದು ತನ್ನ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್ ಮತ್ತದರ ಪರಿವಾರದ ಇತರ
ಸಂಸ್ಥೆಗಳ ತಾಳಕ್ಕೆ ಕುಣಿಯಲು ಸಿದ್ಧತೆಗಳು ನಡೆಯುತ್ತಿವೆಯಾ? ಇಂತಹುದೊಂದು ಅನುಮಾನಕ್ಕೆ
ಕಾರಣವಾಗುವ ಅನೇಕ ಬಿಡಿ ಬಿಡಿ ಘಟನೆಗಳು ಒಂದಾದ ಮೇಲೊಂದರಂತೆ ನಡೆಯುತ್ತಿರುವುದು ಕಾಕತಾಳೀಯವಲ್ಲ.
ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ, ಕ್ರಿಸ್ ಮಸ್ ದಿನದ ರಜಾ
ವಿವಾದ, ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವನ್ನಾಗಿಸುವ ಹೇಳಿಕೆಗಳು, ಉತ್ತರಪ್ರದೇಶದಲ್ಲಿ
ಠುಸ್ಸೆಂದ ಲವ್ ಜೆಹಾದ್ ವಿವಾದ ಮತ್ತೀಗ ಪರಿವಾರದ ವಿವಿಧ ಅಂಗಸಂಸ್ಥೆಗಳು ನಡೆಸುತ್ತಿರುವ ‘ಘರ್
ವಾಪಸಿ’ ಎಂಬ ಮರುಮತಾಂತರದ ವಿವಾದಗಳೆಲ್ಲವೂ ಬಿಜೆಪಿಯೆಂದರೆ ಧರ್ಮಧಾರಿತ ರಾಜಕಾರಣ
ಮಾಡುವುದಕ್ಕಷ್ಟೇ ಸರಿ ಎಂಬ ಆರೋಪಕ್ಕೆ ಪೂರಕವಾಗಿಯೇ ಇವೆ. ‘ಘರ್ ವಾಪಸಿ’ ಎಂಬ ಕಾರ್ಯಕ್ರಮ
ಮುಂಚೆಯೂ ಅಲ್ಲಲ್ಲಿ ನಡೆದಿತ್ತು, ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಹುಮತದ ಸರಕಾರವಿರುವಾಗ
ಅದಕ್ಕೆ ಮತ್ತಷ್ಟು ರಂಗು ಬಂದಿದೆ. ಒಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ
ಗುರಿಯಾಗಿದ್ದ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತ್ತೊಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ
ಆರೋಪಕ್ಕೆ ಗುರಿಯಾಗುವ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಹೊರತುಪಡಿಸಿದರೆ ಹೆಚ್ಚೇನೂ
ವ್ಯತ್ಯಾಸಗಳು ಗೋಚರಿಸುತ್ತಿಲ್ಲ.