ಜುಲೈ 5, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 6: ಕೊಮ್ಮಘಟ್ಟ ಕೆರೆ - 3

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಕೆರೆಯ ಬಳಿ ಹೆಚ್ಚು ಸಮಯ ಕಳೆಯಬೇಕಿತ್ತು. ಸಂಜೆ ಮನೆಗೆ ಬರೋದು ತಡವಾಗ್ತದೆ ಎಂದು ಹೇಳಿಯೇ ಹೊರಟಿದ್ದೆ. ಸೂರ್ಯಾಸ್ತದ ಜೊತೆ ಹೆಜ್ಜಾರ್ಲೆಯ ಫೋಟೋ ತೆಗೆಯಬೇಕೆಂಬ ಆಸೆ. ಕೆರೆಯಲ್ಲಿ ಹೆಜ್ಜಾರ್ಲೆಗಳ ಸಂಖೈ ಹೆಚ್ಚಾಗಿತ್ತು. ಮರದ ಮೇಲಿದ್ದಷ್ಟೇ ಪಕ್ಷಿಗಳು ನೀರಿನಲ್ಲೂ ಇದ್ದವು.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಕೆರೆಯ ಉತ್ತರಭಾಗದಲ್ಲಿದ್ದ ಮತ್ತೊಂದು ಮರದ ಮೇಲೂ ಒಂದೆರಡು ಹೆಜ್ಜಾರ್ಲೆಗಳು ಕಂಡವು. ಆ ಮರದಲ್ಲಿ ಈ ಮುಂಚೆ ಬೆಳ್ಳಕ್ಕಿಗಳು ಹಾಗು ಒಂದೆರಡು ಬೂದು ಬಕಗಳಷ್ಟೇ ಕಾಣಿಸಿದ್ದವು. ಚಲುಕದ ಬಾತುಗಳ ಸಂಖೈ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಅನಿಸಿತು. ಅವುಗಳಿನ್ನೂ ಕ್ಯಾಮೆರಾದ ಲೆನ್ಸಿಗೆ ಸಿಲುಕದಷ್ಟು ದೂರದಲ್ಲಿಯೇ ಇದ್ದವು. ಅರ್ಧ ತಲೆಯನ್ನು ನೀರಿನಲ್ಲಿ ಮುಳುಗಿಸಿ ಸಲಿಕೆ ಆಕಾರದ ಕೊಕ್ಕನ್ನು ತೆರೆದು ಆಹಾರದ ಹುಡುಕಾಟದಲ್ಲಿ ಇರುತ್ತಿದ್ದವು. ಗಂಡು ಪಕ್ಷಿಯ ಹಸಿರು - ಹಳದಿ ಬಣ್ಣದ ಕಣ್ಣಿನ ಪ್ರತಿಬಿಂಬ ಚೆಂದವಾಗಿ ಕಾಣಿಸುತ್ತಿತ್ತು.