Oct 21, 2014

ಚೌಕಟ್ಟು ಮೀರಿದ ಬದುಕಿನ ಬಿಳಿ ಸಾಹೇಬನ ಕಥನ



jim corbet
ಬಿಳಿ ಸಾಹೇಬನ ಭಾರತ
Dr Ashok K R
ಇತಿಹಾಸ ನಿರ್ಮಿಸಿ ಬದುಕಿದವರನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವುದಕ್ಕೆ ಆ ವ್ಯಕ್ತಿಯ ಬದುಕಿನ ಬಗ್ಗೆ ಪುಸ್ತಕ ಬರೆಯುವವರು ಎಷ್ಟು ಕಾರಣರೋ ಕೆಲವೊಮ್ಮೆ ಚೌಕಟ್ಟಿನೊಳಗಡೆಯೇ ಸೇರಿ ಹೋಗುವ ವ್ಯಕ್ತಿಯ ವ್ಯಕ್ತಿತ್ವವೂ ಕಾರಣ. ನಮ್ಮ ಇಷ್ಟಾನಿಷ್ಟಗಳ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇತಿಹಾಸದಿಂದ ತೆಗೆದುಕೊಳ್ಳುವುದು ಸಂಪೂರ್ಣ ತಪ್ಪೇನೂ ಅಲ್ಲ! ಇದರಿಂದಾಗುವ ಅನಾನುಕೂಲವೆಂದರೆ ವ್ಯಕ್ತಿಯ ನೈಜ ವ್ಯಕ್ತಿತ್ವ ಅರಿಯದೆ ಹೋಗುವುದು. ಕನ್ನಡದ ಮಟ್ಟಿಗೆ ಚೌಕಟ್ಟಿನೊಳಗಡೆ ಬಂಧಿಯಾಗಿಬಿಟ್ಟಿದ್ದ ‘ಜಿಮ್ ಕಾರ್ಬೆಟ್ ನ’ ವ್ಯಕ್ತಿತ್ವವನ್ನು ಬಿಡುಗಡೆಗೊಳಿಸಿದ ಕೀರ್ತಿ ಡಾ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ” ಪುಸ್ತಕದ್ದು.
Also Read

ಜಿಮ್ ಕಾರ್ಬೆಟ್ ಎಂಬ ಹೆಸರು ಕೇಳಿದಾಕ್ಷಣ ಕೋವಿ ಹಿಡಿದ ಮಹಾನ್ ಶೂರ ಬೇಟೆಗಾರ ಎಂಬ ಚಿತ್ರಣವಷ್ಟೇ ಬರುವುದಕ್ಕೆ ಆತನ ಬೇಟೆಯ ಬಗೆಗಿನ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಂಡು ಹೆಚ್ಚು ಪ್ರಚಾರ – ಪ್ರಸಾರವಾಗಿದ್ದು ಕಾರಣ. ಒಬ್ಬ ಬೇಟೆಗಾರನಿಗೂ ವೈಯಕ್ತಿಕ ಜೀವನವಿತ್ತು, ಬೇಟೆ (ಆರಂಭಿಕ ಕೆಲವು ವರುಷಗಳ ನಂತರ ಕಾರ್ಬೆಟ್ ಬೇಟೆಯಾಡುತ್ತಿದ್ದುದು ನರಭಕ್ಷಕ ಪ್ರಾಣಿಗಳನ್ನು ಮಾತ್ರ) ಆತನ ಬದುಕಿನ ಹವ್ಯಾಸದ ಒಂದು ಭಾಗವಷ್ಟೇ ಎಂಬ ಯೋಚನೆ ಓದುಗರಲ್ಲಿ ಸುಳಿಯುವುದು ಕಡಿಮೆಯೇ. ಬೇಟೆಯ ರೋಚಕತೆಯ ಕಥಾನಕದಲ್ಲಿ ಮುಳುಗಿಹೋದ ಓದುಗನಿಗೆ ಬೇಟೆಗಾರನ ಮನಸ್ಥಿತಿ ಬೇಕಾಗಿಯೂ ಇಲ್ಲ. ಅಂತಹ ಅತ್ಯದ್ಭುತ ಬೇಟೆಗಾರನ ವೈಯಕ್ತಿಕ ಜೀವನ ಮತ್ತು ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ಈ ಪುಸ್ತಕವನ್ನು ‘ರುದ್ರಪ್ರಯಾಗದ ನರಭಕ್ಷಕ ಚಿರತೆ’ಯನ್ನು ಓದಿದವರೆಲ್ಲರೂ ಗಮನಿಸಬೇಕು. ದಶಕಗಳ ಹಿಂದೆ ಪಿ.ಲಂಕೇಶ್ ತಿಳಿಸಿಹೇಳಿದ ಜಿಮ್ ಕಾರ್ಬೆಟ್ಟಿನ ಬದುಕನ್ನು ಬಹಳಷ್ಟು ಓದು – ತಿರುಗಾಟದ ನಂತರ ಜಗದೀಶ್ ಕೊಪ್ಪರವರು ಅಕ್ಷರರೂಪಕ್ಕಿಳಿಸಿದ್ದು ನಾಲ್ಕು ವರುಷಗಳ ಹಿಂದೆ. ‘ವರ್ತಮಾನ’ದಲ್ಲಿ ಸರಣಿ ಲೇಖನವಾಗಿ ಬಂದ ಬರಹ ಈಗ ಪಲ್ಲವ ಪ್ರಕಾಶನದ ಮುಖಾಂತರ ಪುಸ್ತಕವಾಗಿ ಮುದ್ರಣಗೊಂಡಿದೆ.
ಜಿಮ್ ಕಾರ್ಬೆಟ್ ಹುಟ್ಟಿ ಬೆಳೆದದ್ದೆಲ್ಲ ಭಾರತದಲ್ಲಿ. ಆಂಗ್ಲರ ಆಡಳಿತಾವಧಿಯಲ್ಲಿ ಇತರರಂತೆ ಆಂಗ್ಲರ ನಡುವೆಯೇ ಬಾಳಿ ಬದುಕಿ ಭಾರತದಲ್ಲಿದ್ದರೂ ಬ್ರಿಟೀಷನಂತೆಯೇ ಜೀವಿಸುವ ಪದ್ಧತಿಯನ್ನು ತೊಡೆದು ಭಾರತೀಯರ ನಡುವೆ ಬೆರೆತು ಹೆಚ್ಚುಕಡಿಮೆ ಭಾರತೀಯನಾಗಿಯೇ ಬದುಕಿದವನು ಜಿಮ್ ಕಾರ್ಬೆಟ್. ರೈಲ್ವೆ ಹಳಿ ಕಟ್ಟುವ ಕೆಲಸದಿಂದ ಹಿಡಿದು ಯುದ್ಧಗಳಲ್ಲಿ ಭಾಗವಹಿಸುವ ಕೆಲಸದ ತನಕ ಎಲ್ಲವನ್ನೂ ನಿಷ್ಟೆಯಿಂದ ಮೇಲಧಿಕಾರಿಗಳು ಮೆಚ್ಚುವಂತೆ ಮತ್ತು ತನ್ನ ಕೈಕೆಳಗೆ ಕೆಲಸ ಮಾಡುವ ಜನರು ಪ್ರೀತಿಸುವಂತೆ ಆರಾಧಿಸುವಂತೆ ಕಾರ್ಯ ನಿರ್ವಹಿಸುತ್ತಿದ್ದ ಜಿಮ್ ಕಾರ್ಬೆಟ್ಟಿಗೆ ಆತ್ಮತೃಪ್ತಿ ಸಿಗುತ್ತಿದ್ದುದು ಮಾತ್ರ ಪ್ರಕೃತಿಯೊಡಗಿನ ಒಡನಾಟದಲ್ಲಿ. ಪ್ರಕೃತಿಯೆಡೆಗಿನ ಭಾವನೆಗಳು ಬದಲಾಗುವುದಕ್ಕೆ ಕೂಡ ರೈಲ್ವೆ ಹಳಿಗಾಗಿ ಮರಗಳನ್ನು ಕಡಿಸುತ್ತಿದ್ದಾಗ ಆದ ಅನುಭವಗಳು ಕಾರಣ. ಒಂದು ಮರ ಕಡಿದಾಕ್ಷಣ ಅದರಲ್ಲಿದ್ದ ಪಕ್ಷಿಗಳ ಗೂಡು ಹಾಳಾಗಿ ಮೊಟ್ಟೆಗಳು ಒಡೆದು ಗೂಡುಡುಕಿ ಬಂದ ಪೋಷಕ ಪಕ್ಷಿಗಳ ಆರ್ತನಾದವನ್ನೆಲ್ಲ ಗಮನಿಸಿದ ಕಾರ್ಬೆಟ್ಟಿಗೆ ಪ್ರಕೃತಿಯೆಂಬುದು ಮನುಷ್ಯನ ಮೋಜಿಗಾಗಿ ಸೃಷ್ಟಿಯಾದದ್ದಲ್ಲ ಎಂಬುದು ಮನವರಿಕೆಯಾಯಿತು. ಈ ಎಲ್ಲ ಅನುಭವಗಳ ಕಾರಣದಿಂದಲೇ ಅದ್ಭುತ ಬೇಟೆಗಾರನಾಗಿ ಪ್ರಸಿದ್ಧನಾಗಿದ್ದ ಜಿಮ್ ನಂತರದ ದಿನಗಳಲ್ಲಿ ಬಂದೂಕಿಗೆ ವಿರಾಮ ಕೊಟ್ಟು ಕ್ಯಾಮೆರಾದ ಮುಖಾಂತರ ಪ್ರಾಣಿ ಪಕ್ಷಿಗಳನ್ನು ಶೂಟ್ ಮಾಡಿ ಪರಿಸರವಾದಿಯಾಗಿ ಬೆಳೆದದ್ದು.
ಪುಸ್ತಕದ ಆರಂಭಿಕ ಅಧ್ಯಾಯಗಳು ಜಿಮ್ ಕಾರ್ಬೆಟ್ಟಿನ ಬಾಲ್ಯವನ್ನು ವಿವರಿಸಿದರೆ ನಂತರದ ಪುಟಗಳಲ್ಲಿ ಆತ ಸೌಂದರ್ಯದ ಖನಿಯಾಗಿದ್ದ ನೈನಿತಾಲಿನ ಪರಿಸರವನ್ನು ತೊರೆದು ದೇಶದ ವಿವಿದೆಡೆ ಕೆಲಸಕ್ಕಾಗಿ ವಲಸೆ ಹೋದ ಸಂಗತಿಗಳಿವೆ. ಸಹೋದ್ಯೋಗಿಗಳ ಮತ್ತು ಕೆಲಸಗಾರರ ಬಗ್ಗೆ ಜಿಮ್ ಕಾರ್ಬೆಟ್ ತೋರುತ್ತಿದ್ದ ಪ್ರೀತ್ಯಾದರಗಳ ಬಗ್ಗೆ ಬಹಳಷ್ಟು ವಿವರಗಳಿವೆ. ತನ್ನ ಸಂಬಳದ ಹಣವನ್ನೆಲ್ಲ ಕೆಲಸಗಾರರಿಗೆ ನೀಡಿ ಒಂದು ರೊಟ್ಟಿಗೆ ತನ್ನ ಊಟವನ್ನು ಸೀಮಿತಗೊಳಿಸಿಕೊಂಡ ಸಂದರ್ಭಗಳೂ ಉಂಟು. ಓದುಗನಿಗೆ ಜಿಮ್ ಕಾರ್ಬೆಟ್ಟಿನ ಮಾನವೀಯ ಮುಖವನ್ನು ಪರಿಚಯಿಸುವ ನಿಟ್ಟಿನಲ್ಲಿ ಲೇಖಕರು ಅವಶ್ಯಕತೆಗಿಂತಲೂ ಹೆಚ್ಚು ಹೊಗಳಿಬಿಟ್ಟಿದ್ದಾರಾ ಎಂಬ ಅನುಮಾನ ಸುಳಿದು ಹೋಗದೇ ಇರದು. ಒಬ್ಬ ವ್ಯಕ್ತಿಯಲ್ಲಿ ಇಷ್ಟೊಂದು ಔದಾರ್ಯದ ಮಾನವೀಯತೆ ಮನೆಮಾಡಿಕೊಂಡಿರಬಹುದು ಎಂಬುದು ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಕಾಣುವುದು ಅಸಾಧ್ಯವಾಗಿರುವುದು ಕೂಡ ಈ ಅನುಮಾನ ಸುಳಿಯಲು ಕಾರಣವಿರಬಹುದು. ನೈನಿತಾಲಿನ ಪುರಸಭೆಯ ಅಧ್ಯಕ್ಷ ಸ್ಥಾನ ಅಲಂಕರಿಸಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಒಳಚರಂಡಿ ವ್ಯವಸ್ಥೆಯನ್ನು ಮಾಡಿಸಿದ್ದು ಜಿಮ್ ಕಾರ್ಬೆಟ್! ಆ ಮೂಲಕ ನೈನಿತಾಲಿನ ಸರೋವರದ ಶುದ್ಧತೆಯನ್ನು ಕಾಪಿಡಲು ಸಹಾಯ ಮಾಡಿದ.
Related article
ಬೇಟೆಯ ಬಗೆಗಿನ ಪ್ರಸ್ತಾಪವಿಲ್ಲದೆ ಜಿಮ್ ಕಾರ್ಬೆಟ್ಟಿನ ಪುಸ್ತಕ ಮುಗಿಯಲು ಹೇಗೆ ಸಾಧ್ಯ! ರುದ್ರಪ್ರಯಾಗದ ನರಭಕ್ಷಕ ಚಿರತೆಗೂ ಒಂದು ಅಧ್ಯಾಯ ಮೀಸಲಾಗಿದೆ. ಬೇಟೆಯ ರೋಚಕತೆಯ ಜೊತೆಜೊತೆಗೇ ಅದರ ಸುತ್ತಲಿನ ಕಥಾನಕಗಳ ಬಗ್ಗೆ ಆಪ್ತ ದಾಟಿಯ ವಿವರಗಳಿವೆ. ಅವಿವಾಹಿತನಾಗಿದ್ದ ತನ್ನ ತಂಗಿ ಮ್ಯಾಗಿಯ ಜೊತೆ ಬದುಕುತ್ತಿದ್ದ ಜಿಮ್ ಕಾರ್ಬೆಟ್ ಕ್ಷೋಬೆಗೊಳಗಾಗುವುದು ಭಾರತದ ಸ್ವಾತಂತ್ರ್ಯದ ಸಂಭ್ರಮ ಹತ್ತಿರವಾಗುತ್ತಿದ್ದಾಗ. ಭಾರತದಲ್ಲೇ ಹುಟ್ಟಿ ಬೆಳೆದು ಭಾರತೀಯನಾಗಿ ಹೋಗಿದ್ದ ಜಿಮ್ ಕಾರ್ಬೆಟ್ ತನ್ನ ಹುಟ್ಟಿನ ಕಾರಣದಿಂದಾಗಿ ಬಿಳಿ ಸಾಹೇಬನಾಗಿಬಿಟ್ಟಿದ್ದ. “ಈ ನನ್ನ ಭಾರತದಲ್ಲಿ ಬಡತನವಿದೆ ನಿಜ. ಆದರೆ ಬಡವರಲ್ಲಿ ಹೃದಯ ಶ್ರೀಮಂತಿಕೆಯೂ ಇದೆ ಎಂಬುದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತುಪಡಿಸಲಿ?” ಎಂದು ಹೇಳುತ್ತಿದ್ದ ಜಿಮ್ ಬಿಳಿಯರ ಜಗತ್ತಿಗೆ ಸಾಬೀತುಪಡಿಸುವ ಅವಕಾಶವನ್ನು ಕಳೆದುಕೊಂಡಿದ್ದು ಸ್ವಾತಂತ್ರ್ಯದ ಸಂಭ್ರಮದಲ್ಲಿ. ಭಾರತ ಸ್ವಾತಂತ್ರ್ಯ ಪಡೆದುಕೊಳ್ಳುತ್ತಿದ್ದಂತೆ ದೇಶದಲ್ಲಿರುವ ಆಂಗ್ಲರ ಮೇಲೆ ಎಲ್ಲೆಡೆಯೂ ದಾಳಿಗಳಾರಂಭವಾಗುತ್ತದೆ. ಆದ್ದರಿಂದ ದೇಶ ತೊರೆಯುವ ನಿರ್ಧಾರ ಮಾಡುವ ಆಂಗ್ಲರು ತಮ್ಮ ಆಸ್ತಿ ಪಾಸ್ತಿಗಳನ್ನು ಸಿಕ್ಕಷ್ಟು ದುಡ್ಡಿಗೆ ಮಾರಿ ದೇಶ ಬಿಡುತ್ತಾರೆ. ಜಿಮ್ ಕಾರ್ಬೆಟ್ ದೇಶ ತೊರೆಯದಿದ್ದರೂ ಬಹುಶಃ ಆತನನ್ನು ಪ್ರೀತಿಸಿದ ಚೋಟಿ ಹಲ್ದವಾನಿಯ ಜನರೇ ಅವನನ್ನು ಕಾಪಾಡುತ್ತಿದ್ದರೇನೋ? ತನ್ನ ತಾಯಿಯ ಮೊದಲ ಪತಿ 1857ರ ಮೊದಲ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಹತನಾಗಿದ್ದನು. ಆಗ ಬ್ರಿಟೀಷರ ಮೇಲೆ ನಡೆದ ಹಲ್ಲೆಗಳನ್ನು ತಾಯಿಯ ವಿವರಣೆಗಳಿಂದ ತಿಳಿದಿದ್ದ ಜಿಮ್ ಕಾರ್ಬೆಟ್ಟಿಗೆ ಭಾರತೀಯರ ಜೊತೆ ಎಷ್ಟೇ ಒಡನಾಡಿದರೂ ಸಂಪೂರ್ಣ ನಂಬುಗೆ ಮೂಡಲಿಲ್ಲವೆಂದೇ ಹೇಳಬಹುದು. ಭಾರತದಲ್ಲಿ ಆಂಗ್ಲರಂತೆ ಬದುಕಿ ದೇಶತೊರೆದವರಿಗೆ ಕಾಡದ ಭಾರತ ಭಾರತೀಯನಂತೆ ಬದುಕಿದ ಜಿಮ್ ಕಾರ್ಬೆಟ್ಟಿಗೆ ಕೀನ್ಯಾಕ್ಕೆ ವಲಸೆ ಹೋದ ಮೇಲೂ ಕಾಡಲಾರಂಭಿಸಿತು. ದೇಶ ವಿಭಜನೆಯ ಕಾರಣದಿಂದ ಗಡಿಯ ಅತ್ತಿತ್ತಲಿನ ಜನರು ಅನುಭವಿಸಿದ ಕ್ಷೋಬೆಗೂ ಜಿಮ್ ಕಾರ್ಬೆಟ್ಟಿನಂತಹ ಬ್ರಿಟೀಷರಿಗೆ ದೇಶ ತೊರೆಯುವಾಗ ಉಂಟಾದ ಕ್ಷೋಬೆಗೂ ತುಂಬಾ ವ್ಯತ್ಯಾಸಗಳೇನೂ ಇರಲಾರದು.
“ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” – ಡಾ ಎನ್ ಜಗದೀಶ್ ಕೊಪ್ಪ.
ಪಲ್ಲವ ಪ್ರಕಾಶನ.
ಬೆಲೆ - 120

No comments:

Post a Comment