ಡಾ. ಅಶೋಕ್. ಕೆ. ಆರ್.
'ರಾಜೀವನ ಜೊತೆ ಮೆಸೇಜ್ ಮಾಡಿದ್ದನ್ನು. ನಮ್ಮ ಮನೆಯವರನ್ನು ಒಪ್ಪಿಸು ಅಂತ ಕಾಲೆಳೆದಿದ್ದನ್ನು ಹೇಳಿದ್ದೆ ಅಲ್ವ'
“ಹು" ನನ್ನೆದೆಯ ಮೇಲೆ ಕೈಯಾಡಿಸುತ್ತಾ ಹೇಳಿದ ಸಾಗರ.
'ನಾ ಏನೋ ತಮಾಷೆಗೆ ಅನ್ನುವಂತೆ ಹೇಳಿದ್ದು. ಅವನೂ ತಮಾಷೆಯಾಗೇ ತಗೊಂಡಿರ್ತಾನೆ ಅಂತಂದುಕೊಂಡಿದ್ದೆ. ನನ್ನೆಣಿಕೆ ಸುಳ್ಳಾಗಿತ್ತು. ಸರೀ ಒಂದು ವಾರಕ್ಕೆ ಮತ್ತೊಮ್ಮೆ ಅವನಿಂದ ಮೆಸೇಜು ಬಂತು. ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿದ್ದೀನಿ. ಇದೇ ಭಾನುವಾರ ನಿಮ್ಮ ಮನೆಗೆ ಬರ್ತೇವೆ. ಇವತ್ತೋ ನಾಳೆಯೋ ನಮ್ಮಮ್ಮ ನಿಮ್ಮಮ್ಮನಿಗೆ ಫೋನ್ ಮಾಡಬಹುದು ಎಂದಿದ್ದ. ಅವತ್ತು ನನ್ನ ಮನಸ್ಸಲ್ಲಿ ಗೊಂದಲವಿತ್ತಾ, ಗಾಬರಿಯಿತ್ತಾ, ಸಂತಸವಿತ್ತಾ ಅಥವಾ ಇವೆಲ್ಲದರ ಮಿಶ್ರಭಾವವಿತ್ತಾ? ಒಂದೂ ನೆನಪಾಗ್ತಿಲ್ಲ ಈಗ. ಅವತ್ತೇ ಅವರಮ್ಮ ನಮ್ಮಮ್ಮನಿಗೆ ಫೋನ್ ಮಾಡಿದ್ದರು. ಅಪ್ಪ ಅಮ್ಮ ಈ ವಿಷಯವನ್ನು ಗುಟ್ಟು ಗುಟ್ಟಲ್ಲಿ ಚರ್ಚಿಸಿದ್ದು ನನ್ನರಿವಿಗೂ ಬಂದಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ "ನೋಡಮ್ಮ. ರಾಜೀವನ ಮನೆಯವರು ಫೋನ್ ಮಾಡಿದ್ರು. ಧರಣೀನ ನಮ್ಮ ರಾಜೀವನಿಗೆ ತೋರಿಸುತ್ತೀರಾ ಅಂತ. ಒಳ್ಳೆ ಮನೆತನ. ಆಸ್ತಿಗೆಲ್ಲ ಏನೂ ತೊಂದರೆ ಇಲ್ಲದ ಮನೆ. ಜೊತೆಗೆ ರಾಜೀವ ನಾವು ಕಂಡಂತೆ ಒಳ್ಳೆ ಹುಡುಗ. ಆದರೆ ಡಾಕ್ಟರಲ್ಲ. ಇಷ್ಟೆಲ್ಲ ತಲೇಲಿ ಯೋಚನೆ ಬಂದ್ರೂ ಹೆಣ್ಣು ತೋರಿಸೋದಿಲ್ಲ ಅಂತೇಳೋದಿಕ್ಕೆ ಮನಸ್ಸಾಗಲಿಲ್ಲ. ತೋರಿಸ್ತೀವಿ ಅಂತ ಹೇಳಿದ್ದೀವಿ. ಮುಂಚೆ ಬಂದ ಗಂಡುಗಳತ್ರ ನೀ ಕೆಟ್ಟದಾಗಿ ನಡ್ಕೊಂಡಿದ್ದಿದೆ....”
'ಇವಾಗೆಲ್ಲಿ ಹಂಗಿದ್ದೀನಿ?'
“ಹು. ಇತ್ತೀಚೆಗೆ ಹಂಗೆಲ್ಲ ಮಾಡಿಲ್ಲ ನೀನು. ಅಂದ್ರೂ ನೆನಪಿಸಬೇಕು ಅನ್ನಿಸಿತು. ಇಷ್ಟು ದಿನ ಬಂದಿದ್ದವರು ಅಪರಿಚಿತರು. ನೀ ಆಡಿದ್ದೆಲ್ಲ ನಡೀತು. ಇವರು ಪರಿಚಿತರು. ನೀ ಒಪ್ತೀಯೋ ಬಿಡ್ತೀಯೋ ನಂತರದ ಪ್ರಶ್ನೆ. ನಮಗಾಗಲೀ ಅವರಿಗಾಗಲೀ ಅವಮಾನವಾಗುವಂತೆ ಮಾತ್ರ ನಡೆದುಕೊಳ್ಳಬೇಡ" ಎಂದು ಬೇಡುವ ದನಿಯಲ್ಲಿ ಕೇಳಿಕೊಂಡರು. ಇವರಿಗೆ ನಾನು ರಾಜೀವ ಮಾತಾಡಿಕೊಂಡಿದ್ದರ ಅರಿವಿದ್ದಂತಿರಲಿಲ್ಲ. ರಾಜೀವನೂ ಅವರ ಮನೆಯಲ್ಲಿ ಹೇಳಿಲ್ಲವೋ ಏನೋ. ನಾನು ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಯಾವಾಗ ಬರ್ತಾರಂತೆ ಅಂತ ಕೇಳಿದೆ. ಭಾನುವಾರ ಅಂತ ತಿಳಿಸಿದರು.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.