ಮೇ 21, 2019

ಹಳೆ ಕುದುರೆ -ಹೊಸ ದೊರೆ

ಕು.ಸ.ಮಧುಸೂದನ ರಂಗೇನಹಳ್ಳಿ

ಉರಿಯುವ ಹಗಲು
ಗಡಿಯಾರಗಳ ಮುಳ್ಳುಗಳು ತೆವಳುತಿವೆ
ಎಷ್ಟು ಕತ್ತಿಗಳ ತಿವಿತ
ರಕ್ತ ಸ್ರಾವವಿರದೆ ಕೊಲ್ಲುವ ಹೊಸ ಮಾರ್ಗ
ಅನ್ವೇಷಿಸಿದ ಕೀರ್ತಿ ಪತಾಕೆ ಹೊತ್ತ
ಹಳೇ ಕುದುರೆಗಳ ಮೇಲಿನ ಹೊಸ ದೊರೆ
ಊರ ತುಂಬಾ ಭಯದ ಕಂಪನಗಳು
ನಿಟ್ಟುಸಿರನ್ನೂ ಬಿಗಿ ಹಿಡಿದು
ಬಿಲ ಸೇರಿಕೊಂಡ ಹುಳುಗಳು
ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ದೂಳಿನಬ್ಬರಕೆ
ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ
ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು ಸ್ವತ: ರಕ್ಕಸರಂತೆ
ಪರಾಕ್ರಮ ಮೆರೆಯ ತೊಡಗಿದರು
ಹಾಗೆ ಧಗಧಗಿಸಿ ಉರಿದೊಂದು ಸಂಜೆ
ಬರಬಹುದಾದ ಬಿರು ಮಳೆಗೆ ಕಾದ
ಜನ ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು
ಹುಯ್ಯೋ ಹುಯ್ಯೋ ಮಳೆರಾಯ!

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಪುಟ್ಟ ಹುಡುಗಿಯ ಬಿಟ್ಟುಬಿಡಿ!

ಪಲ್ಲವಿ ದಿವ್ಯಾ
ಆ ಪುಟ್ಟ ಹುಡುಗಿಯ ರೆಕ್ಕೆಗಳ ಕತ್ತರಿಸದಿರಿ
ಆ ಪುಟ್ಟ ಹುಡುಗಿಯ ಕಣ್ಣುಗಳಿಗೆ ಪಟ್ಟಿ ಕಟ್ಟದಿರಿ.

ಆ ಪುಟ್ಟ ಹುಡುಗಿಯ ನಾಲಿಗೆಗೆ ಲಗಾಮು ಹಾಕದಿರಿ
ಆ ಪುಟ್ಟ ಹುಡುಗಿಯ ಕಾಲುಗಳಿಗೆ ಬೇಡಿ ಹಾಕದಿರಿ.

ಅವಳೊಂದು ಹೂವಿನ ಹಾಗೆಂದು ವರ್ಣಿಸಿ
ನಿಯಮಾವಳಿಗಳ ಮುಳ್ಳುಗಳ ಕಾವಲಿಗಿಡದಿರಿ.

ಅವಳ ಬದುಕು ಅವಳದು
ನಡೆಯುತ್ತಲೊ ಓಡುತ್ತಲೊ ಹಾರುತ್ತಲೊ ಅವಳ ಗಮ್ಯವನವಳು
ತಲುಪಿಕೊಳ್ಳಲಿ
ತಡೆಯೊಡ್ಡದಿರಿ.

ಆ ಪುಟ್ಟ ಹುಡುಗಿಯ ಮುನ್ನಡೆಸುವ ಯಜಮಾನಿಕೆ ತೋರದಿರಿ
ಆ ಪುಟ್ಟ ಹುಡುಗಿ ಬೇಡುತ್ತಿಹಳು ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ

ಮೇ 18, 2019

ಅವಿಸ್ಮರಣೀಯ ಅರುಣಾಚಲ ಅದರ ಚಿತ್ರ -ವಿಚಿತ್ರ ಇತಿಹಾಸ: ಪುಸ್ತಕ ವಿಮರ್ಶೆ

ನಂದಕುಮಾರ್. ಕೆ. ಎನ್
ಅರುಣಾಚಲ ಪ್ರದೇಶ ಈಗ ಭಾರತದ ಅಂಗವನ್ನಾಗಿಯೇ ನೋಡಲಾಗುತ್ತಿದೆ. ಆದರೆ ಚೀನ ಅದನ್ನು ಈಗಲೂ ಮಾನ್ಯ ಮಾಡಿಲ್ಲ. ಅದರ ಬಗ್ಗೆ ವಿವಾದಗಳು ಈಗಲೂ ಭಾರತ, ಚೀನ ನಡುವೆ ಇವೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿಸುವ ಪ್ರಕ್ರಿಯೆಗಳು ಬ್ರಿಟೀಷ್ ಭಾರತದಲ್ಲೇ ಶುರುವಾಗಿದ್ದವು. ಆದರೆ ಅದಕ್ಕೆ ಅಲ್ಲಿನ ಸ್ಥಳೀಯ ಸ್ವಯಂಮಾಡಳಿತ ಗಣ ವ್ಯವಸ್ಥೆಯ ಬುಡಕಟ್ಟು ಗುಂಪುಗಳು ಪ್ರಬಲವಾದ ಪ್ರತಿರೋಧ ಒಡ್ಡಿದ್ದವು. ಅವರು ಅನುಮತಿಸದೇ ಅವರ ಪ್ರದೇಶದೊಳಕ್ಕೆ ಯಾರೂ ಹೋಗುವಂತಿರಲಿಲ್ಲ. ಹೋದವರು ಜೀವಂತವಾಗಿ ವಾಪಾಸು ಬರಲಾಗುತ್ತಿರಲಿಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬ ಆ ಪ್ರದೇಶವನ್ನು ಗ್ರಹಿಸಿ ಬ್ರಿಟೀಷ್ ಭಾರತದ ಭಾಗವಾಗಿಸಿಕೊಳ್ಳುವ ಇರಾದೆಯಿಂದ ಯಾವುದೇ ಅನುಮತಿ ಇಲ್ಲದೇ ಅಲ್ಲಿಗೆ ತೆರಳಿ ಸಾವಿಗೀಡಾಗಿದ್ದು ಬ್ರಿಟೀಷ್ ಆಡಳಿತವನ್ನು ಕೆರಳಿಸಿತ್ತು. ಆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಗಳು ಅಲ್ಲಿಂದ ಚುರುಕುಗೊಂಡವು ಎಂದು ಹೇಳಬಹುದು. ಅಲ್ಲಿ ಸ್ವಾಯತ್ತ ಗಣ ವ್ಯವಸ್ಥೆಯಿರುವ ಬುಡಕಟ್ಟುಗಳು ಸ್ವಯಂಪೂರ್ಣವಾಗಿ ಜೀವನ ಕಟ್ಟಿಕೊಂಡಿದ್ದರೂ ಆ ಪ್ರದೇಶದ ಮೇಲೆ ಚೀನ ಹಾಗೂ ಟಿಬೆಟ್ ನ ಹಿತಾಸಕ್ತಿಗಳೂ ಇದ್ದವು. ಟಿಬೆಟ್ ನಂತರ ಚೀನಾದ ಪ್ರದೇಶವಾಯಿತು. ಇದರ ಮಧ್ಯೆ ಆ ಪ್ರದೇಶದ ಬುಡಕಟ್ಟು ಜನರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡಲಿಲ್ಲ. ಹಾಗಾಗಿ ಆ ಸಮುದಾಯಗಳಲ್ಲಿ ಹಲವು ಈಗಲೂ ಭಾರತವನ್ನೂ ಅಂಗೀಕರಿಸಲಾಗದಂತಹ ಸ್ಥಿತಿಯಲ್ಲಿಯೇ ಇವೆ.

ಮೇ 14, 2019

ಒಂದು ಬೊಗಸೆ ಪ್ರೀತಿ - 16

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

‘ಅಯ್ಯೋ ಹಂಗೆಲ್ಲ ಏನಿಲ್ಲಪ್ಪ. ರಜೆಯಲ್ಲಿ ಅಜ್ಜಿ ಮನೆಗೆ ಹೋಗಿಬಿಟ್ಟಿದ್ದೆ. ಅಲ್ಲಿ ಕಸಿನ್ಸ್ ಜೊತೆಯೆಲ್ಲ ಆಟ ಸುತ್ತಾಟ. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನಲ್ಲಿನ್ನೂ ಪುರುಷೋತ್ತಮನ ಬಗ್ಗೆ ಪ್ರೀತಿ ಪ್ರೇಮದ ಭಾವನೆಗಳು ಹುಟ್ಟಿರಲಿಲ್ಲವಲ್ಲ ಹಾಗಾಗಿ ಹೆಚ್ಚೇನು ಅವನ ನೆನಪಾಗಲಿಲ್ಲ. ಅವನು ಹೇಳಿದ್ದು ನೆನಪಾದಾಗಲೆಲ್ಲ ನನಗೆ ಅಶ್ವಿನಿಯನ್ನು ಹೇಗೆ ಎದುರಿಸುವುದು ಅವಳಿಗೆ ಹೇಗೆ ಹೇಳುವುದು ಎನ್ನುವುದೇ ಹೆಚ್ಚು ಕಾಡುತ್ತಿತ್ತು. ಅವಳಿಗೆ ಊಹಿಸಲು ಸಾಧ್ಯವಾಗಿದ್ದು ನನಗಾಗಲಿಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ರಜೆಯ ಮಜದ ನಡುವೆ ಅದನ್ನೆಲ್ಲ ಜಾಸ್ತಿ ಯೋಚಿಸಲೂ ಇಲ್ಲ ಬಿಡು. ರಜೆ ಮುಗಿಸಿ ಬಂದ ಮೇಲೆ ಮನೆಯ ಬಳಿಯೇ ಅಶ್ವಿನಿ ಸಿಕ್ಕಿದಳು. ಅವಳ ಮನೆಗೇ ಹರಟಲು ಹೋದೆವು. ಮನೆಯಲ್ಯಾರೂ ಇರಲಿಲ್ಲ. ಹಾಲಿನಲ್ಲಿ ಟಿವಿ ಹಾಕಿ ಕುಳಿತೆವು. ಅದೂ ಇದೂ ಮಾತನಾಡಲು ಪ್ರಾರಂಭಿಸಿದೆವು. ನಾನು ಮುಖಕ್ಕೆ ಮುಖ ಕೊಟ್ಟು ಮಾತನಾಡದೆ ಇದ್ದುದು ಅವಳ ಗಮನಕ್ಕೆ ಬಂತು. ಜನರ ಜೊತೆ ಹೆಚ್ಚು ಬೆರೆಯದೆ ಮೂರೊತ್ತೂ ಓದ್ತಾನೇ ಕೂರ್ತಿದ್ದ ಅವಳಿಗೆ ಬೇರೆಯವರ ನಡವಳಿಕೆಯಿಂದಾನೇ ಅರ್ಧ ವಿಷಯ ಗೊತ್ತಾಗಿಬಿಡುವುದಾದರೂ ಹೇಗೆ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. “ಏನಾಯ್ತೆ?” ಎಂದು ಕೇಳಿದಳು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮೇ 9, 2019

ಶಕ್ತಿ ನೀಡು!

ಕು.ಸ.ಮಧುಸೂದನ ರಂಗೇನಹಳ್ಳಿ. 
ಹಿತವೆನಿಸುತ್ತಿದೆ ನಿನ್ನೀ ಮೆದು ಸ್ಪರ್ಶ
ಮೆಲು ಮಾತು
ಅಂತೂ ಬಂದೆಯಲ್ಲ ಮರಣಶಯ್ಯೆಯಡೆಗಾದರು
ಅದೇ ಸಂತಸ
ಷ್ಟು ಸನಿಹವಿದ್ದೀಯವೆಂದರೆ ದೂರದ ಪರಲೋಕವೂ ಇದೀಗ ಹತ್ತಿರವೆನಿಸುತ್ತಿದೆ
ಕ್ಷಮಿಸಿಬಿಡಿ ಹಳೆಯ ಮಾತುಗಳನ್ನೂ ಮುನಿಸುಗಳನ್ನೂ
ದಾಟಿದ ಮೇಲೂ ಹೊಳೆಯ ಅಂಬಿಗನ ನೆನಪೇಕೆ
ಏನೂ ಕೊಡಲಿಲ್ಲವೆಂಬ ಕೊರಗೇಕೆ ನಿನಗೆ
ಕೊಡುವುದು ಮುಖ್ಯ ಕೊಟ್ಟದ್ದೇನೆಂದಲ್ಲ
ಸುಖವೋ ದು:ಖವೊ
ಬೇಡಬಿಡು ಯಾಕೆ ವೃಥಾ ವಾದವಿವಾದ
ಹೋಗಿಬಿಡುವ ಸಮಯದಲ್ಲೇಕೆ ತೋರುವೆ ಇಷ್ಟೊಂದು ಪ್ರೀತಿಯ
ಸ್ವರ್ಗವೊ ನರಕವೊ
ನೀನಿರದೆಯೂಬದುಕಬಲ್ಲ ಶಕ್ತಿಯ ನೀಡು!
ಕು.ಸ.ಮಧುಸೂದನರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೇ 7, 2019

ಒಂದು ಬೊಗಸೆ ಪ್ರೀತಿ - 15

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕತೆ ಅರ್ಧಕ್ಕೆ ನಿಲ್ಲಿಸಿದ ಕಾರಣ ನಿದಿರೆ ಬರಲಿಲ್ಲ. ಎಷ್ಟು ಚೆಂದದ ದಿನಗಳಲ್ವ ಅವು. ಪೂರ್ತಿಯಾಗಿ ಹೇಳಿದರಷ್ಟೇ ನನಗೂ ಸಲೀಸು. ಇವನು ನೋಡಿದರೆ ನಿದ್ರೆ ಬರುತ್ತೆ ಅಂದುಬಿಟ್ಟ. ಅದೇನು ನಿಜವಾಗ್ಲೂ ನಿದ್ರೆ ಬಂದಿತ್ತೊ ಅಥವಾ ನಾನೇ ಜಾಸ್ತಿ ಹೇಳಿ ತಲೆ ತಿಂದೆನೋ? ಫೋನಿನಲ್ಲಿ ಹೇಗೆ ಗೊತ್ತಾಗುತ್ತೆ? ಏನೇ ಅಂದ್ರೂ ಸಾಗರ್ ಸುಳ್ಳೇಳೋ ಪೈಕಿ ಅಲ್ಲ. ಬೋರಾಗಿದ್ರೂ ನಿಜಾನೇ ಹೇಳ್ತಿದ್ದ. ನಾಳೆ ಹೇಳೋದಿಕ್ಕಾಗಲ್ಲ. ನಾಡಿದ್ದು ನೈಟ್ ಡ್ಯೂಟಿ ದಿನ ಬ್ಯುಸಿ ಇದ್ದರೆ ಮತ್ತೆ ಕಷ್ಟ. ಮತ್ಯಾವಾಗ ಹೇಳ್ತೀನೋ ಹೇಳೋದೇ ಇಲ್ವೋ ನೋಡೋಣ. ಮೊಬೈಲ್ ಗುಣುಗುಟ್ಟಿತು.

“ಯಾಕೋ ನಿದ್ರೆ ಬರ್ತಿಲ್ಲ ಕಣೇ. ಪೂರ್ತಿ ಇವತ್ತೇ ಕೇಳ್ಬೇಕು ಅನ್ನಿಸ್ತಿದೆ. ನೀನು ಮಲಗಿಬಿಟ್ಟೋ ಏನೋ. ಗುಡ್ ನೈಟ್” ಎಂದು ಸಾಗರ್ ಮೆಸೇಜು ಕಳುಹಿಸಿದ್ದ. ನನಗೆ ಅನಿಸಿದ್ದೇ ಇವನಿಗೂ ಅನ್ನಿಸಿದೆ. ಹತ್ತಿರದಲ್ಲಿದ್ದಿದ್ದರೆ ತಬ್ಬಿ ಮುದ್ದಾಡುವಷ್ಟು ಖುಷಿಯಾಯಿತು. ತಕ್ಷಣವೇ ಫೋನ್ ಮಾಡಿದೆ.

‘ಹಲೋ’

“ಹಲೋ… ನಿನಗೂ ನಿದ್ದೆ ಬಂದಿಲ್ವ?”

‘ಅರ್ಧ ಕೇಳಿಸ್ಕೊಂಡ ನಿನಗೇ ನಿದ್ದೆ ಬಂದಿಲ್ಲ. ಇನ್ನು ಅರ್ಧ ಹೇಳಿದ ನನಗೆ ಎಲ್ಲಿಂದ ಬರ್ಬೇಕು’

“ಸರಿ ಮುಂದುವರಿಸು”
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಖಾಲಿಯಾಗುತ್ತೇನೆ.

ಅನಿತಾ ಗೌಡ 
ಮೌನ ಪಾಳಿ ಮುಗಿಸಿ
ಮಾತಿಗೆಡೆ ಮಾಡಿಕೊಟ್ಟ ಗಳಿಗೆಯಲ್ಲಿ
ತೂತಾದಂತೆ ಆಕಾಶ ಮಾತುಗಳ ಮಳೆ

ಕಟ್ಟಿಕೊಂಡ ಗೋಡೆಗಳನೊಡೆದು
ಮುಚ್ಚಿಕೊಂಡ ಚಿಪ್ಪುಗಳ ತೆರೆದು
ನೆಲ ಮುಗಿಲುಗಳ ಕಿವಿಗಡಚಿಕ್ಕುವಂತ
ಶಬ್ದಗಳ ದೀಪಾವಳಿ
ಕೇಳಿದ್ದಕ್ಕೆ ಉತ್ತರ
ಮತ್ತದಕ್ಕೆ ಪ್ರತಿ ಪ್ರಶ್ನೆ

ಮೇ 1, 2019

ಇಂಡಿಯಾದ ಚುನಾವಣೆಗಳು: ಡಿಸ್ಕೌಂಟ್ ಸೇಲಿನ ಬಿಗ್ ಬಜಾರುಗಳು

ಕು.ಸ.ಮಧುಸೂದನ ರಂಗೇನಹಳ್ಳಿ
ಇವತ್ತು ಇಂಡಿಯಾದಲ್ಲಿನ ಸಾರ್ವತ್ರಿಕ ಚುನಾವಣೆಗಳು ತಮ್ಮ ಸಾಂಪ್ರದಾಯಿಕ ಮೌಲ್ಯ ಮತ್ತು ಮಹತ್ವವನ್ನು ಕಳೆದು ಕೊಳ್ಳುತ್ತಿವೆಯೆಂದರೆ ತಪ್ಪಾಗಲಾರದು. ಹಾಗೆಂದು ಕಳೆದ ಏಳು ದಶಕಗಳಲ್ಲಿ ನಡೆದ ಎಲ್ಲ ಚುನಾವಣೆಗಳ ಬಗ್ಗೆಯೂ ಈ ಮಾತು ಹೇಳಲಾಗದು. 

ಆದರೆ ತೊಂಭತ್ತರ ದಶಕದ ನಂತರದಲ್ಲಿ ನಡೆದ ಬಹುತೇಕ ಚುನಾವಣೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಒಂದು ಬೃಹತ್ ಸಂತೆಯ ಸ್ವರೂಪ ಪಡೆದುಕೊಂಡಿವೆ. ಬದಲಾದ ಆರ್ಥಿಕ ನೀತಿಯ ಫಲವಾಗಿ ಪ್ರವರ್ದಮಾನಕ್ಕೆ ಬಂದ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿತು. ಆಗ ನಾಯಿಕೊಡೆಗಳಂತೆ ಹುಟ್ಟಿಕೊಂಡ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳ ದೃಶ್ಯ ಮಾಧ್ಯಮಗಳು ನಮ್ಮ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಹೈಜಾಕ್ ಮಾಡಿಬಿಟ್ಟಿವೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ, ನಮ್ಮ ಸಮೂಹ ಮಾದ್ಯಮಗಳು (ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾದ್ಯಮಗಳು) ಇಡೀ ದೇಶವನ್ನು ಒಂದು ಮಾರುಕಟ್ಟೆಯನ್ನಾಗಿಸಿ (ನಗರದ ಬಾಷೆಯಲ್ಲಿ ಹೇಳುವುದಾದರೆ ಮಾಲ್ ಅನ್ನಾಗಿಸಿ) ಮತದಾರರನ್ನು ಗ್ರಾಹಕರನ್ನಾಗಿಸಿ, ರಾಜಕೀಯ ಪಕ್ಷಗಳು, ಮತ್ತವುಗಳ ನಾಯಕರುಗಳನ್ನು ಮಾರಾಟದ ಸರಕುಗಳನ್ನಾಗಿಸಿ ಬಿಟ್ಟಿವೆ. ಇದಕ್ಕೆ ಕಾರಣವೂ ಸ್ಪಷ್ಟ: ಮುಕ್ತ ಆರ್ಥಿಕ ನೀತಿಯ ನಂತರ ಪ್ರಾರಂಭವಾದ ಬಹುತೇಕ ಸುದ್ದಿವಾಹಿನಿಗಳು ಒಂದಲ್ಲಾ ಒಂದು ಕಾರ್ಪೋರೇಟ್-ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಂತಹ ಬಲಾಢ್ಯ ಶಕ್ತಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡುವ ರಾಜಕೀಯ ಪಕ್ಷಗಳ ಮತ್ತು ಅವುಗಳ ನಾಯಕರುಗಳನ್ನು ತಮ್ಮ ಮಾಧ್ಯಮಗಳ ಮೂಲಕ ಪ್ರಮೋಟ್ ಮಾಡುತ್ತ, ಚುನಾವಣೆಗಳನ್ನು, ಮತ್ತದರ ಪಲಿತಾಂಶಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬರುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿವೆ. ತಮಗೆ ಬೇಕಾದ ಪಕ್ಷಗಳು,ನಾಯಕರುಗಳನ್ನು ಬಣ್ಣಬಣ್ಣದ ಜಾಹಿರಾತುಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುತ್ತ ಮತದಾರರಿಗೆ ಮಾರುತ್ತಿದ್ದಾರೆ. ಇದರ ಕಾರ್ಯವೈಖರಿ ಹೀಗಿದೆ:

ಏಪ್ರಿ 30, 2019

ಒಂದು ಬೊಗಸೆ ಪ್ರೀತಿ - 14

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಮೊದಲ ಭೇಟಿ ಅಂತೆಲ್ಲ ಏನೂ ಇಲ್ಲ ಕಣೋ. ಅವನು ನಾನು ಒಂದೇ ಶಾಲೇಲಿ ಓದಿದ್ದು. ಬೇರೆ ಬೇರೆ ಸೆಕ್ಷನ್ ಇದ್ದೋ. ಮುಖ ಪರಿಚಯ ಇದ್ದೇ ಇತ್ತು’

“ಓ! ಲವ್ ಅಟ್ ಫಸ್ಟ್ ಸೈಟ್ ಅಲ್ಲ ಅನ್ನಪ್ಪ”

‘ಮೊದಲ ನೋಟಕ್ಕೇ ಪ್ರೇಮ ಹುಟ್ಟಿಸುವಷ್ಟೇನು ಚೆನ್ನಾಗಿಲ್ಲಪ್ಪ ನಾನು’

“ನೀನೆಷ್ಟು ಚೆನ್ನಾಗಿದ್ದೀಯ ಅಂತ ನನಗೂ ಗೊತ್ತು. ಕತೆ ಮುಂದುವರಿಸು. ನಾನು ಆ ಹ್ಞೂ ಅಂತ ಏನೂ ಹೇಳಲ್ಲ. ಸುಮ್ನೆ ಕೇಳ್ತಿರ್ತೀನಿ. ಹೇಳುವಂತವಳಾಗು ಧರಣಿ”

‘ಸರಿ ಗುರುಗಳೇ’ ಎಂದ್ಹೇಳಿ ಎಲ್ಲಿಂದ ಪ್ರಾರಂಭಿಸಿವುದೆಂದು ಯೋಚಿಸಿದೆ. ಪಿಯುಸಿಯ ದಿನಗಳಿಂದಲೇ ಪ್ರಾರಂಭಿಸಬೇಕಲ್ಲ ಎಂದುಕೊಂಡು ಹೇಳಲಾರಂಭಸಿದೆ.

‘ಪುರುಷೋತ್ತಮ್ ನಾನು ಒಂದೇ ಶಾಲೇಲಿ ಇದ್ದಿದ್ದು. ಆಗ್ಲೇ ಹೇಳಿದ್ನಲ್ಲ ಬೇರೆ ಬೇರೆ ಸೆಕ್ಷನ್ ಅಂತ. ಅವನ ಗೆಳೆಯನೊಬ್ಬನಿದ್ದ ಅಶೋಕ್ ಅಂತ. ಅವನು ನಮ್ಮ ತಂದೆ ಸ್ನೇಹಿತನ ಮಗ. ಅವಾಗಿವಾಗ ಅಪ್ಪ ಅಮ್ಮನ ಜೊತೆ ಮನೆಗೆ ಬರ್ತಿದ್ದರಿಂದ ಹಾಯ್ ಹೇಗಿದ್ದೀಯ ಅನ್ನುವಷ್ಟು ಪರಿಚಯ. ಶಾಲೆ ಮುಗೀತು. ಕಾಲೇಜು ಸೇರಿದೊ. ಕಾಲೇಜಿನಲ್ಲೂ ಪುರುಷೋತ್ತಮನದು ಬೇರೆ ಸೆಕ್ಷನ್. ಅಶೋಕ್ ಕೂಡ ಅವನದೇ ಸೆಕ್ಷನ್. ಮೊದಲ ವರುಷದ ಪಿಯುಸಿ ಇನ್ನೇನು ಮುಗಿಯುತ್ತಿದ್ದ ಸಮಯ. ನಿನಗೇ ಗೊತ್ತಲ್ಲ, ಮೊದಲ ವರ್ಷ ಓದೋದೆಲ್ಲ ಕಡಿಮೆ ಇರುತ್ತೆ. ಯೂನಿಫಾರ್ಮಿನ ಶಾಲೆಯಿಂದ ಕಲರ್ ಕಲರ್ ಬಟ್ಟೆ ಹಾಕಿಕೊಂಡು ಖುಷಿ ಪಡೋ ಪಿಯುಸಿಗೆ ಸೇರಿದಾಗ ಓದುವ ಮನಸ್ಸೇ ಇರಲ್ಲ. ಈಗ ಬಿಡು ಪಿಯುಸಿಗೂ ಯೂನಿಫಾರ್ಮ್ ಮಾಡಿಬಿಟ್ಟಿದ್ದಾರೆ ಸುಮಾರು ಕಡೆ. ಪರೀಕ್ಷೆ ಹತ್ತಿರವಾದಾಗ ಭಯವಾಗಲು ಶುರುವಾಯಿತು. ಓದಿರೋದು ಇಷ್ಟೇ ಇಷ್ಟು. ಸಿಲಬಸ್ ನೋಡಿದ್ರೆ ಅಷ್ಟೊಂದಿದೆ. ಹತ್ತನೇ ಕ್ಲಾಸಲ್ಲಿ ತೊಂಭತ್ತು ಪರ್ಸೆಂಟ್ ತಗಂಡು ಈಗ ಡುಮ್ಕಿ ಹೊಡ್ದುಬಿಡ್ತೀನೇನೋ ಅಂತ ಭಯ ಆಗೋಯ್ತು. ಇನ್ನು ದೊಡ್ಡ ದೊಡ್ಡ ಪುಸ್ತಕ ಓದುವಷ್ಟಂತೂ ಸಮಯವಿಲ್ಲ. ಗೈಡುಗಳನ್ನು ತೆರೆದು ನೋಡಿದರೂ ಭಯವಾಗುತ್ತಿತ್ತು. ಸೀನಿಯರ್ಸ್ ಹತ್ತಿರ ಸಹಪಾಠಿಗಳತ್ರ ಒಂದಷ್ಟು ನೋಟ್ಸುಗಳಿತ್ತು. ಅದನ್ನೇ ಝೆರಾಕ್ಸ್ ಮಾಡಿಸಿಕೊಳ್ಳೋಣ ಅಂತ ಕಾಲೇಜಿನ ಎದುರುಗಡೆ ಬ್ಯಾಕ್ ಟು ಬ್ಯಾಕ್ ಮೂವತ್ತು ಪೈಸೆಗೆ ಸೀಮೆಎಣ್ಣೆ ಝೆರಾಕ್ಸ್ ಮಾಡಿಕೊಡುತ್ತಿದ್ದ ಅಂಗಡಿಗೆ ಹೋಗಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಒಂದೂ ಮೂವತ್ತಾಗಿತ್ತು. ಕಾಲೇಜಿನವರೆಲ್ಲ ಹೊರಟುಹೋಗಿದ್ದರು. ಅಂಗಡಿಯ ಬಳಿ ಕೂಡ ಹೆಚ್ಚು ಜನರಿರಲಿಲ್ಲ. ಝೆರಾಕ್ಸ್ ಮಾಡಲು ಕೊಟ್ಟು ಅಲ್ಲೇ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದೆ. ಮಧ್ಯೆ ಮಧ್ಯೆ ಹ್ಞೂ ಅನ್ನೋ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಏಪ್ರಿ 28, 2019

ಚುನಾವಣಾ ನೀತಿಸಂಹಿತೆ ಎಂಬ ಪ್ರಹಸನ

ಕು.ಸ.ಮಧುಸೂದನರಂಗೇನಹಳ್ಳಿ
ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ.

ಇಲ್ಲಿನ ಮತದಾರರ ಸಂಖ್ಯೆ ತೊಂಭತ್ತು ಕೋಟಿ.ಇಪ್ಪತ್ತು ಲಕ್ಷ ಮತಯಂತ್ರಗಳು. ಒಂದೂಕಾಲು ಕೋಟಿಗೂ ಅಧಿಕ ಮತಗಟ್ಟೆಯನ್ನು ನಿರ್ವಹಿಸುವ ಸಿಬ್ಬಂದಿಗಳು, ಎರಡೂವರೆ ಕೋಟಿಗೂ ಅಧಿಕ ಭದ್ರತಾ ಸಿಬ್ಬಂದಿ. ಅಧಿಕೃತವಾಗಿ ಇಷ್ಟಲ್ಲದೆ ಚುನಾವಣೆಗಳಿಗೆ ಪರೋಕ್ಷವಾಗಿ ನೆರವಾಗುವ ಮೂರು ಕೋಟಿ ಇತರೇ ನೌಕರರು. ಇಷ್ಟು ದೊಡ್ಡ ಮಟ್ಟದ ಚುನಾವಣಾ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಇದುವರೆಗು ಬಹುತೇಕ ಚುನಾವಣೆಗಳು ಶಾಂತಿಯುತವಾಗಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಚುನಾವಣೆಗಳನ್ನು ಹೊರತು ಪಡಿಸಿದರೆ) ನಡೆದಿದ್ದು ತಮ್ಮ ವಿಸ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ.

ಅದರೆ ಈ ಬಾರಿ ನಡೆದ ಇದುವರೆಗಿನ ಮೂರು ಹಂತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿ ಬಿಟ್ಟಿದೆ. ತಾನೆ ವಿಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿಯೆಂಬ ಅನುಮಾನ ತಲೆದೋರುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾದಂತ ದತ್ತ ಅಧಿಕಾರವನ್ನು ಹೊಂದಿರುವ ಆಯೋಗ ಯಾಕೊ ಈ ಅಧಿಕಾರವನ್ನು ಉಪಯೋಗಿಸಿಕೊಳ್ಳುವಲ್ಲಿ ಆಸಕ್ತಿಯನ್ನೇನು ತೋರುತ್ತಿಲ್ಲ. ಚುನಾವಣಾ ಆಯೋಗದ ಈ ಕ್ರಿಯಾಹೀನತೆಯನ್ನು ಕಂಡ ಸುಪ್ರೀಂ ಕೋರ್ಟ ಮದ್ಯಪ್ರವೇಶಿಸಿ ನೀತಿಸಂಹಿತೆ ಉಲ್ಲಂಘಿಸಿದವರ ವಿರುದ್ದಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಸೂಚನೆ ನೀಡಬೇಕಾಗಿ ಬಂದಿತು.