ಚೇತನ ತೀರ್ಥಹಳ್ಳಿ.
ಚಿನ್ಮಯಿ ಆ ಮೇಲ್ ಕಳಿಸಲೂ ಇಲ್ಲ, ಸಾಯಲೂ ಇಲ್ಲ. ಆ ಮೊದಲ ಡ್ರಾಫ್ಟ್‍ನಿಂದ ಈವರೆಗಿನ ಕೊನೆಯ ಡ್ರಾಫ್ಟ್’ವರೆಗೆ ಹತ್ತು ವರ್ಷಗಳು ಕಳೆದಿವೆ.
ಅದಕ್ಕೂ ಹಿಂದಿನದೆಲ್ಲ ಸೇರಿ, ಈ ಹದಿನೈದು ವರ್ಷಗಳ ಹರಿವಿನಲ್ಲಿ ಅವಳು ಈಜಿದ್ದೆಷ್ಟು, ಮುಳುಗಿದ್ದೆಷ್ಟು!
ಆಗಾಗ ಮನೆಗೆ ಬರುವ ತವರು ಅವಳ ತಲೆ ನೇವರಿಸಿ ಕಣ್ಣೀರಿಡುತ್ತದೆ. ಚಿನ್ಮಯಿಗೆ ಯಾಕೆಂದೇ ಅರ್ಥವಾಗೋದಿಲ್ಲ.
ಮಧ್ಯಾಹ್ನದಲ್ಲಿ ಬೆಳಕಿನ ಬಾಗಿಲಾಗುವ ಬಿಸಿಲು, ಹೊತ್ತು ಕಳೆದಂತೆ ಕರಗುವುದು ಅವಳಿಗೆ ಗೊತ್ತಿದೆ; ಮತ್ತೆ ಮರುದಿನ ಮೂಡುತ್ತದೆ ಅನ್ನೋದು ಕೂಡಾ.
ಒಂದೇ ಒಂದು ಜನ್ಮದಲ್ಲಿ ಹಲವು ಬದುಕು ಬಾಳುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ.
ವಾಸ್ತವದಲ್ಲಿ, ಅದು ಸಿಗುವಂಥದಲ್ಲ… ನಾವೇ ಕಂಡುಕೊಳ್ಳುವಂಥದ್ದು. ಹಲವು ಬದುಕುಗಳ ಅವಕಾಶ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಹಾಗಂತ ಚಿನ್ಮಯಿ ನಂಬಿಕೊಂಡಿದ್ದಾಳೆ. ಅದನ್ನು ಸಾವಧಾನವಾಗಿ ಸಾಕಾರ ಮಾಡಿಕೊಂಡಿದ್ದಾಳೆ ಕೂಡ.
ತಾನು ಏನಾಗಿದ್ದಾಳೋ ಆ ಬಗ್ಗೆ ಅವಳಿಗೆ ಖುಷಿ ಇದೆ. ಹಾಗಂತ ಅವಳು ಏನೋ ಆಗಿಬಿಟ್ಟಿದ್ದಾಳೆ ಎಂದಲ್ಲ. ಅವಳಿಗೆ ತಾನು ‘ಚಿನ್ಮಯಿ’ ಆಗಿರುವ ಬಗ್ಗೆ ನೆಮ್ಮದಿಯಿದೆ! ಹಾಗೆಂದೇ ಮನಮಂದಿಯ ದುಃಖ ಅವಳನ್ನು ಗಲಿಬಿಲಿಗೊಳಿಸುತ್ತದೆ. ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತೆ ಕೂಡಾ.