ಡಾ. ಅಶೋಕ್. ಕೆ. ಆರ್.
ಜಾತಿ ವ್ಯವಸ್ಥೆಯ ಬಗ್ಗೆ ವರ್ಗ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆವಾಗವಾಗ ಒಂದೊಂದು ಚಿತ್ರ ಬಂದಿದೆಯಾದರೂ ಭೂರಹಿತ ಕಾರ್ಮಿಕರನ್ನೇ ಮುಖ್ಯಭೂಮಿಯಲ್ಲಿರಿಸಿಕೊಂಡು ಬಂದ ಚಿತ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೆಂದು ಹೇಳಬಹುದು. ಜಾತಿ ವರ್ಗ ವ್ಯವಸ್ಥೆಯ ಕುರಿತಾದ ಚಿತ್ರಗಳಲ್ಲಿ ಕೆಲವೊಂದು ವಾಸ್ತವಿಕತೆಯನ್ನು ನಮ್ಮ ಕಣ್ಣ ಮುಂದೆ ಇರಿಸುತ್ತಾದರೂ ವಾಸ್ತವಿಕತೆಯನ್ನು ತಲುಪಿಸುವ ನಿಟ್ಟಿನಲ್ಲಿ ಅದನ್ನು ವೈಭವೀಕರಿಸುವ ಕೆಲಸ ಮಾಡುತ್ತವೆ, ನಾಯಕ ಪಾತ್ರದ ಒಳಿತನ್ನು ಋಜುವಾತುಪಡಿಸುವುದಕ್ಕೆ ಪ್ರತಿನಾಯಕರ ರಕ್ತದಲ್ಲೇ ಕೆಟ್ಟತನವಿದೆಯೆನ್ನುವಂಶವನ್ನು ಒತ್ತಿ ಒತ್ತಿ ಹೇಳುವ ಕ್ರಮವನ್ನೇ ಬಹಳಷ್ಟು ಸಿನಿಮಾಗಳು ಅಳವಡಿಸಿಕೊಂಡಿರುತ್ತವೆ. ಈ ಚಿತ್ರಗಳ ಇನ್ನೊಂದು ದೌರ್ಬಲ್ಯ (ಅದನ್ನು ಈ ಚಿತ್ರಗಳ ಶಕ್ತಿಯೆಂದೂ ಕರೆಯಬಹುದು!) ಅತಿ ಭಾವುಕತೆ. ನಿಜ ಜೀವನದಲ್ಲಿ ಕಂಡುಬರದಷ್ಟು ಭಾವುಕತೆಯನ್ನು ಚಿತ್ರಗಳಲ್ಲಿ ತುಂಬಿಬಿಡಲಾಗುತ್ತದೆ. ಅತಿ ಭಾವುಕತೆ ಅತಿ ವಾಸ್ತವತೆಯ ಕ್ರಮದಿಂದೊರತಾಗಿ ನಿಂತು, ಅತಿ ಎನ್ನುವಷ್ಟು ಒಳ್ಳೆಯ ನಾಯಕ, ಅತಿ ಎನ್ನಿಸುವಷ್ಟು ಕೆಟ್ಟ ವಿಲನ್ನು ಎಂಬ ಕ್ರಮದಿಂದಲೂ ಹೊರತಾಗಿದ್ದು ದೀರ್ಘಕಾಲದವರೆಗೆ ಕಾಡುವಂತಹ ದೃಶ್ಯಕಾವ್ಯವೇ ‘ಮೇರ್ಕು ತೊಡರ್ಚಿ ಮಲೈ’ (ಅರ್ಥಾತ್ ಪಶ್ಚಿಮ ಘಟ್ಟ).
ಲೆನಿನ್ ಭಾರತಿ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ವಿಜಯ್ ಸೇತುಪತಿ. ಸ್ವತಃ ಉತ್ತಮ ನಟನಾದರೂ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಚಿಕ್ಕ ಪಾತ್ರದಲ್ಲಾದರೂ ವಿಜಯ್ ಸೇತುಪತಿ ನಟಿಸಿದ್ದರೆ ಇಂತಹುದೊಂದು ಚಿತ್ರ ಹೆಚ್ಚು ಜನರನ್ನು ತಲುಪುತ್ತಿತ್ತು ಎನ್ನುವುದು ಸತ್ಯ. ಚಿತ್ರದ ನಾಯಕ ರಂಗಸ್ವಾಮಿ. ಭೂರಹಿತ ಕಾರ್ಮಿಕ. ತಮಿಳುನಾಡು ಕೇರಳ ಗಡಿಪ್ರದೇಶದ ಘಟ್ಟ ಪ್ರದೇಶದಲ್ಲಿ ಆತನ ವಾಸ. ಏಲಕ್ಕಿ ಕಾಯಿಯ ಮೂಟೆಯನ್ನು ಹೆಗಲ ಮೇಲೊತ್ತು ಘಟ್ಟದಿಂದ ಮಾರುಕಟ್ಟೆಗೆ ಸಾಗಿಸುವ ಕೆಲಸ ಆತನದು. ಘಟ್ಟ ಪ್ರದೇಶವನ್ನು ಹೊಸತಾಗಿ ದಾಟುವವರಿಗೆ ದಾರಿಯಾಗುತ್ತಾನೆ, ಆಸರೆಯಾಗುತ್ತಾನೆ. ಎಲ್ಲರ ಮೆಚ್ಚಿನ ವ್ಯಕ್ತಿ ರಂಗಸ್ವಾಮಿ ತನ್ನೂರಿನ ಮನೆಯಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಾನೆ. ಇಂತಿಪ್ಪ ರಂಗಸ್ವಾಮಿಗೆ ಒಂದು ತುಂಡು ಭೂಮಿಯನ್ನು ಖರೀದಿಸಬೇಕೆಂಬುದೇ ಜೀವನದ ಗುರಿ. ಯಾವುದೇ ದುಶ್ಚಟಗಳಿಲ್ಲದ ರಂಗಸ್ವಾಮಿ ಕೂಡಿಹಾಕಿದ್ದ ಹಣದಿಂದ ಇನ್ನೇನು ಭೂಮಿ ಖರೀದಿಸಿಯೇಬಿಟ್ಟ ಎನ್ನುವಾಗ ಭೂಮಿಯ ಒಡೆಯರ ಕೌಟುಂಬಿಕ ಜಗಳದಿಂದ ಆಸೆಗೆ ಕಲ್ಲು ಬೀಳುತ್ತದೆ. ಮತ್ತೆ ಏಲಕ್ಕಿ ಮೂಟೆಯನ್ನು ಘಟ್ಟದಿಂದಿಳಿಸುವ ಕೆಲಸಕ್ಕೆ ರಂಗಸ್ವಾಮಿ ಮುಂದಾಗುತ್ತಾನೆ.