ಚೇತನ ತೀರ್ಥಹಳ್ಳಿ.
ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.
ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!
ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.
ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.
ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್‍ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.
ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.
ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.
ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.
ಅವಳಿಗೆ ಖಾಲಿಯಾಗುವುದೆಂದರೆ ಭಯ.