ಕು.ಸ.ಮಧುಸೂದನ ರಂಗೇನಹಳ್ಳಿ
ಕಾಂಗ್ರೆಸ್ ಮತ್ತು ಜನತಾದಳದ ಮೈತ್ರಿಯ ದೆಸೆಯಿಂದ ಹಳೆಯ ಮೈಸೂರು ಭಾಗದಲ್ಲಿ ಬಾಜಪ ಬೇರೂರಲು ಸುವರ್ಣಾವಕಾಶವೊಂದು ಸೃಷ್ಠಿಯಾಗಿದೆಯೇ? ಹೌದೆನ್ನುತ್ತಾರೆ, ಹಳೆ ಮೈಸೂರು ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು! ಅವರುಗಳ ಈ ಭಯ ಅಕಾರಣವೇನಲ್ಲ.
ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಮೂರು ಸಂಸತ್ ಸ್ಥಾನಗಳ ಮತ್ತು ಎರಡು ವಿದಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೈತ್ರಿಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಸ್ಪಷ್ಟವಾಗಿದೆ. ರಾಮನಗರ ವಿದಾನಸಭಾ ಕ್ಷೇತ್ರದಲ್ಲಿ ಜನತಾದಳವು (ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿ, ಮಾಜಿ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ!) ಮಂಡ್ಯಮತ್ತು ಶಿವಮೊಗ್ಗ ಸಂಸತ್ ಕ್ಷೇತ್ರಗಳಲ್ಲಿ ಬಹುತೇಕ ಜನತಾದಳದ ಅಭ್ಯರ್ಥಿಗಳೇ ಕಣಕ್ಕಿಳಿಯಲಿರುವುದು ಖಚಿತವಾಗಿದೆ. ಅದರಲ್ಲೂ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಇದುವರೆಗು ಕಾಂಗ್ರೆಸ್ ಮತ್ತು ಜನತಾದಳಗಳೇ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು ಬಾಜಪ ಯಾವತ್ತಿಗೂ ಮೂರನೇ ಸ್ಥಾನದಲ್ಲಿರುತ್ತಿತ್ತು. ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಬಾಜಪದ ನಡುವೆ ಹೋರಾಟವಿರುತ್ತಿದ್ದರೂ ಜನತಾದಳಕ್ಕೂ ಇಲ್ಲಿ ಬೇರು ಮಟ್ಟಿನ ಕಾರ್ಯಕರ್ತರುಗಳ ಪಡೆ ಇದೆ ಎನ್ನಬಹುದು.