![]() |
ಚಿತ್ರ ೧: ಗಂಡು ನವಿಲು |
ಡಾ. ಅಶೋಕ್. ಕೆ. ಆರ್.
ಭಾರತದ ರಾಷ್ಟ್ರಪಕ್ಷಿಯಾದ ನವಿಲೆಂದರೆ ಯಾರಿಗೆ ಇಷ್ಟವಿಲ್ಲ! ಅದರಲ್ಲೂ ರೆಕ್ಕೆ ಬಿಚ್ಚಿ ಕುಣಿಯುವ ಗಂಡು ನವಿಲೆಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಆಂಗ್ಲ ಹೆಸರು: Indian Peacock (ಇಂಡಿಯನ್ ಪಿಕಾಕ್), Peahen (ಪಿಹೆನ್)
ವೈಜ್ಞಾನಿಕ ಹೆಸರು: Pavo Cristatus (ಪಾವೋ ಕ್ರಿಸ್ಟೇಟಸ್)
ನವಿಲನ್ನು ಗುರುತುಹಿಡಿಯದವರು ಇಲ್ಲವೇ ಇಲ್ಲ ಅಲ್ಲವೇ! ಉದ್ದ ಪುಕ್ಕಗಳ ಬಾಲವನ್ನೊಂದಿರುವ ಗಂಡು ನವಿಲು ಆಕರ್ಷಣೀಯ. ಒರಟೊರಟಾದ ಧೃಡವಾದ ಕಾಲುಗಳು, ನೀಳವಾದ ಉದ್ದನೆಯ ನೀಲಿ ಬಣ್ಣದ ಕತ್ತು, ಕುಸುರಿ ಮಾಡಿದಂತಿರುವ ನೀಲಿ ಕಿರೀಟದ ಗುಚ್ಛ, ಕಣ್ಣಿನ ಮೇಲೆ ಕೆಳಗೆ ಬಿಳಿ ಪಟ್ಟಿಯಿದ್ದರೆ, ಕಣ್ಣಿನ ಸುತ್ತಲೂ ನೀಲಿ ಪಟ್ಟಿ. ಎದೆಯ ಭಾಗದಲ್ಲಿ ನೀಲಿ - ಹಸಿರು - ಕಂದು ಬಣ್ಣಗಳನ್ನು ಕಾಣಬಹುದು. ರೆಕ್ಕೆಯಲ್ಲಿ ಕಪ್ಪು ಬಿಳಿ ಬಣ್ಣಗಳ ಪಟ್ಟಿಗಳಿವೆ. ದೇಹಕ್ಕೆ ಬಾಲವಂಟಿರುವ ಜಾಗದಲ್ಲಿ ಹೊಳೆಯುವ ಹಸಿರು ಹೊಂಬಣ್ಣವಿದೆ. ಹೆಣ್ಣನ್ನಾಕರ್ಷಿಸುವ ಸಲುವಾಗಿ ಪುಕ್ಕ ಬಿಚ್ಚಿ ನರ್ತಿಸುತ್ತವೆ ಗಂಡು ನವಿಲುಗಳು. ಆಳೆತ್ತರದ ಈ ಪುಕ್ಕಗಳಲ್ಲಿ ಕಣ್ಣುಗಳಂತೆ ಕಾಣಿಸುವ ವರ್ಣ ಸಂಯೋಜನೆಯಿದೆ. ಗಾಢ ನೀಲಿ, ಆಕಾಶ ನೀಲಿ, ಬೂದು - ಕಂದು, ಹಸಿರು ಬಣ್ಣಗಳು ನಿರ್ದಿಷ್ಟ ಪ್ರಮಾಣದಲ್ಲಿದ್ದು ಕಣ್ಣಿನ ರೂಪ ನೀಡುತ್ತವೆ. ಈ ಕಣ್ಣುಗಳು ಕಣ್ಣೀರು ಹಾಕುವುದಿಲ್ಲ!