ಜುಲೈ 17, 2014

ಜನಪ್ರಿಯವೂ ಅಲ್ಲ ಜನಪರವೂ ಅಲ್ಲ

ಹಿಂದಿನ ಸರಕಾರಕ್ಕಿಂತ ಹೊಸತನ್ನೇನಾದರೂ ನೀಡಿದ್ದೇವೆಯೇ?
ಡಾ.ಅಶೋಕ್.ಕೆ.ಆರ್.
ಅಭಿವೃದ್ಧಿಯ ಮಾನದಂಡಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವಂತೆ ಸರಕಾರಗಳು ಘೋಷಣೆಯ ರೂಪದಲ್ಲಿ ಪ್ರಸ್ತುತಪಡಿಸುವ ಆಯವ್ಯಯಗಳೂ ಕೂಡ ಬದಲಾಗುತ್ತಿವೆ. ಆದರೀ ಬದಲಾವಣೆಗಳಲ್ಲಿ ಎಷ್ಟು ನಿಜಕ್ಕೂ ಜನಪರ – ಪರಿಸರಪರ ಎಂಬುದು ಪ್ರಶ್ನಾರ್ಹ. ಲೋಕಸಭಾ ಚುನಾವಣೆಗೂ ಮುನ್ನ ಕೆಲವೇ ತಿಂಗಳುಗಳಿಗಾಗಿ ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರಕಾರ ಆಯವ್ಯಯ ಮಂಡಿಸಿತ್ತು. ತರುವಾಯ ನಡೆದ ಚುನಾವಣೆಯಲ್ಲಿ ಮೂವತ್ತು ವರುಷಗಳ ನಂತರ ಏಕಪಕ್ಷ ಬಹುಮತ ಪಡೆದು ಮೋದಿ ನೇತೃತ್ವದ ಸರಕಾರ ರಚನೆಯಾಯಿತು. ಕಳೆದು ಹಲವು ವರುಷಗಳಿಂದ ಹಳಿತಪ್ಪಿದ್ದ ಆರ್ಥಿಕತೆ, ಜಾಗತಿಕ ಮತ್ತು ರಾಜಕೀಯ ನಿರ್ಧಾರಗಳಿಂದಾಗಿ ಹೆಚ್ಚುತ್ತಲೇ ಸಾಗಿದ ಮತ್ತು ಸಾಗುತ್ತಿರುವ ಅವಶ್ಯ ವಸ್ತುಗಳ ಬೆಲೆ ಏರಿಕೆ, ಮುಕ್ತ ಮಾರುಕಟ್ಟೆ ನೀತಿಗಳನ್ನು ಒಪ್ಪಿಕೊಂಡ ಮೇಲೆ ದೂರದ ದೇಶವೊಂದರಲ್ಲಿ ನಡೆಯುವ ಸಣ್ಣ – ದೊಡ್ಡ ಘಟನೆಗಳೂ ಕೂಡ ದೇಶದ ಅರ್ಥ ವ್ಯವಸ್ಥೆಯನ್ನು ಅಲುಗಾಡಿಸುವ ಪರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಹೊಸದಾಗಿ ಆಯ್ಕೆಯಾದ ಸರಕಾರಕ್ಕೆ. ಇನ್ನು ಕೆಲವು ತಿಂಗಳುಗಳಿಗಾಗಿ ಆಯವ್ಯಯವನ್ನು ರೂಪಿಸಬೇಕಾದ ಜವಾಬುದಾರಿಯನ್ನು ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಯಶಸ್ವಿಯಾಗಿ ನಿಭಾಯಿಸಿತೇ? ಉತ್ತರ ಸುಲಭವಲ್ಲ.

ಫೆಬ್ರ 22, 2014

ವಿಶೇಷಗಳಿಲ್ಲದ ನಿರಾಸದಾಯಕವೂ ಅಲ್ಲದ ಕರ್ನಾಟಕ ಬಜೆಟ್.

ಡಾ ಅಶೋಕ್ ಕೆ ಆರ್

            ಮತ್ತೊಂದು ಬಜೆಟ್ಟಿನ ಸಮಯ. ಕಳೆದ ವರುಷ ಚುನಾಯಿತವಾದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಮತ್ತೊಂದು ಬಜೆಟ್ ಮಂಡಿಸಿದೆ. ದಾಖಲೆಯ ಒಂಭತ್ತನೆಯ ಬಾರಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 2014 – 2015ರ ಸಾಲಿನ ಬಜೆಟ್ಟಿನ ಮೇಲೆ ಯಾರಿಗೂ ಅತಿಯಾದ ನಿರೀಕ್ಷೆಗಳೇನಿರಲಿಲ್ಲ. ಇದು ಲೋಕಸಭಾ ಚುನಾವಣೆ ಇರುವ ವರುಷವಾದ್ದರಿಂದ ತೆರಿಗೆಯನ್ನು ಮತ್ತಷ್ಟು ಹೊರೆಯಾಗಿಸುವ ಸಾಧ್ಯತೆ ಕಡಿಮೆಯೆಂಬುದು ಎಲ್ಲರ ಭಾವನೆಯಾಗಿತ್ತು. ಒಂದಷ್ಟು ತೆರಿಗೆ ಕಡಿತ ಮಾಡಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಮತ ಹೆಚ್ಚಿಸಿಕೊಳ್ಳಬಹುದೆಂಬ ಭಾವನೆಯೂ ಇತ್ತು. ಇಡೀ ದೇಶದ ಆರ್ಥಿಕತೆಯೇ ಒಂದಷ್ಟು ಕುಂಟುತ್ತ ತೆವಳುತ್ತ ಸಾಗುತ್ತಿರುವಾಗ ಕರ್ನಾಟಕ ಬಜೆಟ್ಟಿನಲ್ಲಿ ದೂರದೃಷ್ಟಿಯ ಬೃಹತ್ ವ್ಯಾಪ್ತಿಯ ಯೋಜನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು. ಆದರೂ ಉತ್ತಮ ಹಣಕಾಸು ಸಚಿವರಾಗಿ ಹೆಸರು ಮಾಡಿರುವ ಸಿದ್ಧರಾಮಯ್ಯ ಆರ್ಥಿಕ ಶಿಸ್ತನ್ನು ತಂದು ಒಂದಷ್ಟು ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಬಹುದೇನೋ ಎಂಬುದು ಕೆಲವರ ನಿರೀಕ್ಷೆಯಾಗಿತ್ತು. ಅತ್ತ ಪರಿಪೂರ್ಣವೂ ಅಲ್ಲದ ಇತ್ತ ಚುನಾವಣೆಯನ್ನಷ್ಟೇ ಗುರಿಯಾಗಿಸಿಕೊಂಡು ತಯಾರಿಸಿರದ ಆಯವ್ಯಯವನ್ನು ಸಿದ್ಧರಾಮಯ್ಯನವರು ಮಂಡಿಸಿದ್ದಾರೆ. ಒಂದಷ್ಟು ಉತ್ತಮ ಯೋಜನೆಗಳು ಇರುವುದಾದರೂ ಸಿದ್ಧರಾಮಯ್ಯನವರಿಂದ ಮತ್ತಷ್ಟು ಮಗದಷ್ಟು ನಿರೀಕ್ಷೆ ಮಾಡಿದ್ದರೆ ತಪ್ಪಲ್ಲ.