ಹೋಗೋದೋ ಬೇಡ್ವೋ ಅಂದುಕೊಂಡೇ ಕಿತನಾಮಂಗಲದ ಕೆರೆಯ ಕಡೆಗೆ ಹೊರಟೆ. ಕಳೆದ ಬಾರಿ, ತಿಂಗಳಿಂದೆ ನೋಡಿಕೊಂಡು ಬರಲು ಹೋಗಿದ್ದಾಗ ಒಂದಷ್ಟು ಚಮಚದ ಕೊಕ್ಕುಗಳು (ಸ್ಪೂನ್ ಬಿಲ್) ಕಾಣಿಸಿದ್ದವು, ವರ್ಷಪೂರ್ತಿ ಇರುವ ಪಕ್ಷಿಗಳನ್ನು ಹೊರತುಪಡಿಸಿ. ಬಹಳಷ್ಟು ವರ್ಷಗಳಿಂದೆ ಇಲ್ಲಿ ನೂರಾರು ಸಂಖೈಯಲ್ಲಿ ಕರಿಕೊಕ್ಕಿನ ರೀವ (ಕಾಮನ್ ಟರ್ನ್)ಗಳನ್ನು ನೋಡಿದ್ದೆ. ಇನ್ನೊಮ್ಮೆ ನೀರು ಹೆಚ್ಚಿದ್ದ ಸಮಯದಲ್ಲಿ ನೂರಾರು ಸೂಜಿಬಾಲದ ಬಾತುಗಳನ್ನು ಕಂಡಿದ್ದೆ. ಆ ವರ್ಷ ಬಿಟ್ಟರೆ ಬೇರ್ಯಾವ ವರುಷವೂ ನಾ ಭೇಟಿ ಕೊಟ್ಟಾಗ ಅಷ್ಟು ಸಂಖ್ಯೆಯ ಸೂಜಿಬಾಲದ ಬಾತುಗಳು ಕಾಣಿಸಿರಲಿಲ್ಲ.
ಕಿತನಾಮಂಗಲ ಕೆರೆ ಬಹಳ ಅಂದರೆ ಬಹಳ ವಿಶಾಲವಾದುದು. ಆರೇಳು ವರ್ಷದಿಂದೀಚೆಗೆ ಒಂದೇ ಒಂದು ಬಾರಿ ಪೂರ್ತಿ ಕೆರೆ ತುಂಬಿದ್ದನ್ನು ನೋಡಿದ್ದೆ. ಇಲ್ಲವಾದರೆ ಹುಲ್ಲುಗಾವಲಿನಂತೆ ಕಾಣಿಸುತ್ತದೆ. ರಸ್ತೆಗೆ ಹೊಂದಿಕೊಂಡಂತೆ ಬಹಳಷ್ಟು ಒಣಗಿದ ಮರಗಳಿವೆ. ಒಂಥವಾ ದೆವ್ವದ ಸಿನಿಮಾದ ದೃಶ್ಯದಂತೆ ಗೋಚರವಾಗ್ತದೆ. ಜೆಸಿಬಿ ಬಳಸಿ ಕೆರೆಯ ಮಣ್ಣನ್ನು ಸುತ್ತಮುತ್ತಲಿನವರು ತೆಗೆದುಕೊಂಡು ಹೋಗಿರುವುದರಿಂದ ಬಹಳಷ್ಟು ಹಳ್ಳ ದಿಣ‌್ಣೆಗಳು ನಿರ್ಮಾಣವಾಗಿದೆ. ಮೆತ್ತಗಿನ ಮಣ್ಣಿನ ದಿಬ್ಬಗಳನ್ನು ಸಾಮಾನ್ಯ ಮಿಂಚುಳ್ಳಿ, ಕಳ್ಳಿಪೀರಗಳು ಗೂಡು ಕಟ್ಟಲು ಅಪರೂಪಕ್ಕೆ ಬಳಸಿಕೊಳ್ಳುತ್ತವೆ. ಈ ಸಲ ಹಸಿರು ಕಳ್ಳಿಪೀರಗಳು ಅಲ್ಲೊಂದು ಇಲ್ಲೊಂದು ಕಾಣಿಸಿದವಷ್ಟೇ.
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
