ನಮ್ಮಜ್ಜ ದನ ಕಾಯುತ್ತಿದ್ದರಂತೆ ಗೋವು ದೇವರೆಂದಲ್ಲ ಅವರಜ್ಜ ಮಾಡಿದ ಕುಲುವಾಡಿಕೆಯಿಂದ ನಮ್ಮಜ್ಜನ ಅಜ್ಜನೂ ಅವರಜ್ಜಂದಿರು ದನ ಕಾಯುತ್ತಿದ್ದರಂತೆ ಇದು ನಮ್ಮಜ್ಜಂದಿರ ಇತಿಹಾಸ
ನಮ್ಮಜ್ಜಿ ಸಗಣಿ ಬಾಚುತ್ತಿದ್ದಳಂತೆ ಗೋವಿನ ಸಗಣಿ ಪವಿತ್ರ ಎಂದಲ್ಲ ಅವರಜ್ಜಿ ಸಗಣಿ ಬಾಚಿದ ನೆನಪಾಗಿ ಎರಡು ರೊಟ್ಟಿ, ಹಿಡಿ ಅನ್ನಕ್ಕಾಗಿ
ನನ್ನಪ್ಪನೂ ದನ ಕಾಯುತ್ತಿದ್ದಾನೆ ಅವರಪ್ಪನ ಕುಲುವಾಡಿಕೆಯಿಂದ ಸತ್ತ ಗೋವಿನ ತೊಗಲ ಪಾಲಿಗಾಗಿ ತಮಟೆಗೆ ಕಟ್ಟಿ ಜೋರು ಬಡಿಯಲೆಂದು
ನನಗೆ ಗೋವು ಎಂದು ಪವಿತ್ರ ಎನಿಸಲಿಲ್ಲ ಕಾರಣ ಅದಕ್ಕೆ ನನ್ನ ಜಾತಿ ತಿಳಿಯಲೇ ಇಲ್ಲ ಕೊರಬಾಡಿಗೂ ಪವಿತ್ರತೆ ಅಂಟಿಲಿಲ್ಲ ನನ್ನವ್ವ, ನ್ನನಜ್ಜ, ನನ್ನಪ್ಪ ನಂಚಿ ತಿಂದರು ಆದರೂ ಗೋವಿನ ಶಾಪ ತಟ್ಟಲಿಲ್ಲ...!
ಗೋವಿನೊಟ್ಟಿಗೆ ಬಾಲ್ಯ ಕಳೆದೆ ನನ್ನಪ್ಪನ ಮಾಡಿದ ಕುಲುವಾಡಿಕೆ ನೆನಪಿಗೆ ಆದರೀಗ ಗೋವು ಪವಿತ್ರವಾಗಿದೆ ಕೆಲವರ ದೇವರಾಗಿದೆ, ತೊಗಲು ಸಿಗುತ್ತಿಲ್ಲ, ತಮಟೆ ಸದ್ದೂ ಕೇಳಿಸುತ್ತಿಲ್ಲ ನನ್ನ ಕೇರಿಯ ಜನರೂ ಗೋವಿನಂತಾಗಿದ್ದಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ